ಮಂಗಳವಾರ, ಮೇ 26, 2009

ಮಳೆಗೆಜ್ಜೆ ಹುಡುಗಿ..

ಮಳೆಗೆಜ್ಜೆ ಹುಡುಗಿ ನಿನ್ನ ಕಣ್ಣಿನಂಚಿಗಿತ್ತ ಮುತ್ತು
ಕಾಲನುರುಳ ಹೇಗೋ ತಪ್ಪಿ, ಕಾವ್ಯವಾಗಿ ಉಳಿದಿದೆ
ಬಿಸಿಲಮಚ್ಚಿನಲ್ಲಿ ನಿಂತು, ಇರುಳತಾರೆ ತೋರಿಸುತ್ತ
ಹಾಗೇ ಹೊಂಚಿ ಕೊಟ್ಟ ಮುತ್ತು, ಚುಕ್ಕಿಯಾಗೇ ಹೊಳೆದಿದೆ

ಅಂದು ಏನೋ ತಪ್ಪಿನಿಂದ,ನಿನ್ನ ಮುನಿಸು ಮೇರೆ ಮೀರಿ
ಕೈಯ ಹಿಡಿದು ಕ್ಷಮೆಯ ಕೋರಿ, ಕರೆದೆ ಮನೆಯ ನೆತ್ತಿಗೆ
ಸಿಟ್ಟದಿನ್ನು ಮೊಗದಲಿರಲು, ಮೆಟ್ಟಿಲೇರಿ ನನಗು ಮೊದಲು
ನೋಡುತಿದ್ದೆ ಕ್ಷಿತಿಜದಾಚೆ ನಾನು ಬರುವ ಹೊತ್ತಿಗೆ

ನಲ್ಲೆ ಮುಖವು ಕಳೆಗುಂದಿದೆ,ಚಂದ್ರ ಬೇರೆ ಬಾನೊಳಿಲ್ಲ
ಕತ್ತಲಿಹುದು ಎಲ್ಲ ಕಡೆಗು,ನನ್ನ ದಿಗಿಲು ಹೆಚ್ಚಲು
ಮೆಲ್ಲ ಬಂದು ನಿನ್ನ ಬಳಿಗೆ,ಭುಜದ ಮೇಲೆ ಕತ್ತನಿರಿಸಿ
ಸೊಂಟ ಬಳಸಿ ನಿಂತುಕೊಂಡೆ,ದಿವ್ಯಮೌನ ಸುತ್ತಲೂ.

ಬಾನ ತುಂಬ ಕೋಟಿಚುಕ್ಕಿ,ಮೆಲ್ಲ ನಿನ್ನ ಕೈಯನೆತ್ತಿ
ಕಾಣದ ರಂಗೋಲಿ ಬಿಡಿಸಿ,ಮತ್ತೂ ಸನಿಹಕೆಳೆದೆನು
ಕಣ್ಣಹನಿಯು ಕೈಗೆ ತಾಕೆ,ಬೊಗಸೆ ತುಂಬ ಮೊಗವ ತುಂಬಿ
ಪುಟ್ಟಮುತ್ತ ನಯನಕೊತ್ತಿ ಅಲ್ಲೇ ಕರಗಿ ಹೋದೆನು

ಹೀಗಿದೊಂದು ಮಧುರ ಸ್ಪರ್ಶ ಸಮಯದೊಳಗೆ ಕಳೆದರೂ
ಮತ್ತೆ ತಿರುಗಿ ಬರುವುದುಂಟು ವರ್ತಮಾನದೊಳಗಡೆ
ಅಂಥದಿವಸ ಏಕೋ ನನ್ನ ಬಿಸಿಲುಮಚ್ಚು ಕರೆದರೆ

ದೂರತಾರೆ ಮಿನುಗು ಕಂಡು ಎದೆಯ ತಾನ ನಿಲುಗಡೆ.