ಸೋಮವಾರ, ಸೆಪ್ಟೆಂಬರ್ 27, 2010

ತ್ರೀ- ಡಿ ಹನಿಗಳು

ಬತ್ತಿದ್ದ ತೊರೆಯೊಳಗೆ
ಅವಳು ಕಾಲಿಟ್ಟ ಕೂಡಲೇ
ಎಲ್ಲಿಂದಲೋ ಬಂದ ನೀರು
ಗೆಜ್ಜೆ ತೋಯಿಸಿತು,ಅವರ್ಯಾರೋ
ಹೊಟ್ಟೆಕಿಚ್ಚಿಗೆ ಅಲ್ಲೆಲ್ಲೋ ಮಳೆಯಾಯಿತು
ಅಂದರು.

ಇನ್ನೂ ಯಾಕೆ ಮಳೆ ಬಂದಿಲ್ಲ ಅಂತ
ತುಂಟ ಅಣಬೆಯೊಂದು
ಮಣ್ಣಿಂದ ಹೊರ ಬಂದು ಇಣುಕೋ
ಹೊತ್ತಿಗೆ ಹನಿಯೊಂದು
ಅದರ
ನೆತ್ತಿ ಮೊಟಕಿತು!

ದಣಪೆಯಾಚೆಗೆ
ಕಾದು ನಿಂತಿದ್ದ ಎಳೆಕಿರಣ
ಅಮ್ಮ ಎದ್ದು ಅಡುಗೆಮನೆಗೆ
ಹೋದ ಕೂಡಲೇ,
ಮೆಲ್ಲನೆ ಒಳಬಂದು
ಎಲ್ಲರನ್ನ ಎಬ್ಬಿಸಿತು.

ಬುಧವಾರ, ಸೆಪ್ಟೆಂಬರ್ 01, 2010

ಅಪ್ಪ

ಸೆಕೆಂಡ್ ಪೀಯೂಸಿ, ಕನ್ನಡ ಕ್ಲಾಸು. ಅವತ್ತು ನೆಕ್ಸ್ಟ್ ಪಿರಿಯಡ್ಡು ಪೊಲಿಟಿಕಲ್ ಸೈನ್ಸು- ನಂದು ನೋಟ್ಸೇನೋ ಬರೆದಾಗಿರಲಿಲ್ಲ ಅಂತ ಏನೋ ಗೀಚುತ್ತಿದ್ದೆ. ಸರ್ರು ನೋಡಿದರು- ಏನದು ಅಂತ ದನಿ ಎತ್ತರಿಸಿಯೇ ಕೇಳಿದರು, ನಾನು ಸರ್, ಪೊ ಪೊ ಪೊಲಿಟಿಕಲ್ ಸೈನ್ಸ್ ನೋಟ್ಸು ಸಾರ್ ಅಂದೆ.. ಅದನ್ನ ಯಾಕೋ ನನ್ನ ಕ್ಲಾಸಲ್ಲಿ ಬರಿತಿದೀಯಾ
ಸಾರ್, ಮನೇಲಿ ತುಂಬ ಕೆಲ್ಸ ಸಾರ್ ಅಪ್ಪ ಬರಿಯೋಕೆ ಬಿಡ್ಲಿಲ್ಲ

ಕ್ಲಾಸು ಇಡೀ ಜೋರಾಗಿ ನಕ್ಕಿತು. ನಾನೂ ನಕ್ಕೆ- ಸರ್ರೂ ನಕ್ಕರು.

ಹೌದೌದು, ಮನೇಲಿ ಭಾರೀ ಕೆಲ್ಸ ಮಾಡ್ತೀಯಾ ನೋಡು ನೀನು ಅಂತಂದು ನೋಟ್ಸು ಎತ್ತಿಟ್ಟಿಕೊಂಡು ನಗುತ್ತಲೇ ಪಾಠ ಮುಂದುವರಿಸಿದರು.

++++

ನಂಗೆ ನನ್ನ ಅಪ್ಪನೇ ಪಿಯುಸಿಯಲ್ಲಿ ಕನ್ನಡ ಅಧ್ಯಾಪಕ .ರಾಮಾಯಣ ದರ್ಶನಂ, ಯಯಾತಿ, ದೇವರ ಹೆಣ, ಶವದ ಮನೆ ಯಂತಹ ಪಾಠಗಳನ್ನ, ಕುಮಾರ ವ್ಯಾಸ , ಲಕ್ಷ್ಮೀಶ, ರಾಘವಾಂಕ ರ ಷಟ್ಪದಿಗಳನ್ನು ತರಗತಿಯಲ್ಲಿ ಕಥೆ- ಉಪಕಥೆಗಳ ಸಮೇತರಾಗಿ ವಿವರಿಸುವಾಗ ಅದನ್ನ ಎರಡೂ ಕಿವಿದೆರೆದು ಕೇಳುವ ಭಾಗ್ಯ ನನ್ನದಾಗಿತ್ತು. ಅಪ್ಪ ಭೀಮನನ್ನು ವರ್ಣಿಸುವಾಗ ಭೀಮನಾಗಿಯೂ, ಕೃಷ್ಣನ ಮಾತು ಬಂದರೆ ಅದೇ ಶೃತಿಯಲ್ಲಿಯೂ ಸುಲಲಿತವಾಗಿ ಪಾಠ ಮಾಡ್ತಿದ್ದ. ಯಕ್ಷಗಾನ ದ ಹಿನ್ನೆಲೆ ಅಪ್ಪನಿಗೆ ಸಹಾಯ ಮಾಡಿತ್ತು. ಅಪ್ಪನ ಕ್ಲಾಸಲ್ಲಿ ಉಳಿದ ಕ್ಲಾಸಲ್ಲಿ ಆಗುವ ಹಾಗೆ ಗಲಾಟೆಯೂ ಆಗ್ತಿರ್ಲಿಲ್ಲ. ಯಾಕಂದ್ರೆ ಅಪ್ಪ ಮಾತಿಗೊಂದು ಕಥೆ ಹೇ ಗಮ್ಮತ್ತು ಮಾಡ್ತಿದ್ದರಾದ್ದರಿಂದ, ಯಾವ ಮಕ್ಕಳಿಗೂ ಅವರನ್ನ ಎದುರು ಹಾಕಿಕೊಳ್ಳುವ ಇಚ್ಛೆ ಇರಲೂ ಇಲ್ಲ. ಅಪ್ಪ ಯಾರಿಗಾದರೂ ದನಿ ಎತ್ತಿ ಬೈದಿದ್ದು ಕೂಡ ನಾನು ನೋಡಲಿಲ್ಲ.

ನೀನು ಓದುತ್ತಿದ್ದಾಗಿನ ಎರಡು ವರ್ಷ ನಾನು ಅತ್ಯಂತ ಕಷ್ಟದ ಕನ್ನಡ ಪ್ರಶ್ನೆ ಪತ್ರಿಕೆಗಳನ್ನು ಸಿದ್ದ ಪಡಿಸ್ತಾ ಇದ್ದೆ ಅಂತ ಅಪ್ಪ ಆಮೇಲೆ ನಂಗೆ ಹೇಳಿದ್ರು. ಯಾಕೆ ಅಂದ್ರೆ- ನಾನು ಹೈಸ್ಕೂಲಲ್ಲಿ ಇದ್ದಾಗಿನಿಂದ ಅಪ್ಪ ಬೇರೆ ಮಕ್ಕಳ ಪತ್ರಿಕೆ ತಿದ್ದುವುದನ್ನು ನೋಡೀ ನೋಡೀ ನಂಗೆ ಪ್ರಶ್ನೆ- ಉತ್ತರ ಎರಡೂ ಬಾಯಿಪಾಠ ಆಗಿ ಹೋಗಿದ್ದವು.

ನಾನು ಓದುತ್ತಿದ್ದ ಎರಡು ವರ್ಷವೂ ಅಪ್ಪ ನಂಗೆ ಒಂದೇ ಒಂದು ಕಿರು ಪರೀಕ್ಷೆಯ ಪ್ರಶ್ನೆ ಕೂಡ ಹೀಗಿರಬಹುದು ಅಂತ ಹೇಳಲಿಲ್ಲ. ನನ್ನ ಉತ್ತರ ಪತ್ರಿಕೆಯನ್ನು ನನ್ನೆದುರು ಒಂದೇ ಸಲ ಕೂಡ ತಿದ್ದಲಿಲ್ಲ. ಹಾಗಂತ ನಾನೇನು ತಪ್ಪು ಮಾಡಿದೆ ಅಂತ ಆಮೇಲೆ ಹೇಳುವುದನ್ನೂ ಮರೆಯಲಿಲ್ಲ. ನಾನು ತರಗತಿಯಲ್ಲಿ ಒಂದೇ ಸಲ ಕೂಡ ಕನ್ನಡದಲ್ಲಿ ಅತೀ ಹೆಚ್ಚು ಅಂಕ ಗಳಿಸಲಿಲ್ಲ!

++++

ಅಪ್ಪ, ತನ್ನ ೩೦ ವರ್ಷಗಳ ಸುದೀರ್ಘ ಸೇವೆಯಿಂದ ನಿನ್ನೆ ನಿವೃತ್ತನಾದ. ನಾನೂ ಹೆಂಡತಿ ಸಮೇತನಾಗಿ , ಅಮ್ಮನ ಜೊತೆ ನಾನು ಓದಿದ ಶಾಲೆಗೆ ಮತ್ತೆ ಹೋದೆ. ಅಪ್ಪನ ಬಗ್ಗೆ ಹಲವರು ಮಾತಾಡಿದ್ರು, ಅಪ್ಪನೂ ತನ್ನ ಮೂವತ್ತು ವರ್ಷಗಳ ಅನುಭವದ ಬಗ್ಗೆ ಮಾತಾಡಿದ. ಭಾವುಕ ಅಪ್ಪಂಗೆ ಎಲ್ಲಾದ್ರೂ ಅಳು ಬರತ್ತೇನೋ ಅಂತ ಸಣ್ಣಗೆ ಹೆದ್ರಿಕೆ ಇತ್ತು- ಆದ್ರೆ ಹಾಗೇನೂ ಆಗಲಿಲ್ಲ.
ಮಕ್ಕಳು- ಅಪ್ಪನ ಹಿತೈಷಿಗಳೆಲ್ಲ ಬಂದು ಹಾರದ ಮೇಲೆ ಹಾರ ಹಾಕುವಾಗ ಅಪ್ಪ ಕಳೆದುಹೋದವನಚಿತೆ ಕಂಡ.

ಅಪ್ಪನಿಗೆ ಹಾರೈಸಿದ ಶಾಲೆಯ ಸಂಚಾಲಕರು,

May you always have work for your hands to do.
May your pockets hold always a coin or two.
May the sun shine bright on your windowpane.
May the rainbow be certain to follow each rain.
May the hand of a friend always be near you.
And may God fill your heart with gladness to cheer you.

ಅನ್ನೋ ಐರಿಶ್ ಕವನದ ಮೂಲಕ ಅಪ್ಪನ್ನ ಹಾರೈಸುವಾಗ, ನಂಗೆ ಅಪ್ಪ ಕಾಣಿಸಲಿಲ್ಲ.

+++
ಊರಲ್ಲಿ ಜೋರು ಮಳೆ, ನಾಲ್ಕು ದಿನ ಮಳೆ ನೋಡುತ್ತ ಕಳೆದು, ಅಪ್ಪನಿಗೆ ಶುಭ ಹಾರೈಸಿ ಬಂದದ್ದಾಯಿತು.


ಅಂದ ಹಾಗೆ, ಬ್ಲಾಗಿಗೆ ಇವತ್ತು ನಾಲ್ಕು ವರ್ಷ ತುಂಬಿತು. ನನ್ನನ್ನು ಪ್ರೋತ್ಸಾಹಿಸಿದ ಎಲ್ಲರಿಗು ಧನ್ಯವಾದಗಳು.