ಭಾನುವಾರ, ಡಿಸೆಂಬರ್ 18, 2011

ಸುಕ್ರಣ್ಣನ ಜಕ್ಕಣಿ!

- ಶ್ರೀಧರ.ಡಿ.ಎಸ್


"ಶಿವಮೊಗ್ಗ ಜಿಲ್ಲೆಯ ಹೊಸ್ನಗ್ರು ತಾಲೂಕಿನ ನಿಟ್ಟೂರ ಪೋಶ್ಟಿಗೆ ಸೇರಿದ ಹಬ್ಬಿಗಿ ಗ್ರಾಮದ ದರೀಮನಿ ಅನತ ಭಟರಲಿ ಕೆಲಸು ಮಾಡುವ ಗುರುವ ಸೇರೂಗಾರ್ರು ಕಂಡು ಸುಕ್ರ ಸೇರೂಗಾರ್ರಿಗೆ ಕೊಡತಕ್ಕದ್ದು!" ಈ ವಿಳಾಸವನ್ನು ಹೊತ್ತ ಅಂತರ್ದೇಶಿಯನ್ನು ಅಂಚೆಯ ಅಣ್ಣ ನಾನು ಕಲಿಯುತ್ತಿದ್ದ ಶಾಲೆಗೆ ತಂದು ನನ್ನ ಕೈಗೆ ಕೊಟ್ಟುಬಿಡುತ್ತಿದ್ದ. ನನ್ನ ಊರಾದ ಮಲೆನಾಡಿನ ದರೇಮನೆಗೆ ಒಂದು ಪತ್ರಕ್ಕಾಗಿ ಇನ್ನೂ ಮೂರು ಕಿ.ಮೀ. ನಡೆಯುವುದನ್ನು ತಪ್ಪಿಸಲು ಈ ಉಪಾಯ. ಈ ವಿಳಾಸವನ್ನು ಕೆಲವು ಬಾರಿ  ’ಸ್ಟಾಂಪ್’ ಮೇಲೂ ಬರೆಯುತ್ತಿದ್ದುದರಿಂದ ಬೀಳುತ್ತಿದ್ದ ’ಡ್ಯೂ’ವನ್ನೂ ಅವನೇ ತುಂಬಿಬಿಡುತ್ತಿದ್ದ. ಈ ವಿಳಾಸದ ಸುಕ್ರ ಸೇರೂಗಾರ್ರು ಯಾನೆ ಸುಕ್ರಣ್ಣನ ಕತೆಯೇ ನಾನೀಗ ಹೇಳ ಹೊರಟಿದ್ದು.

ಸುಕ್ರಣ್ಣ ನಮ್ಮೂರಿಗೆ ವರ್ಷಂಪ್ರತಿ ಒಂದು ತಂಡದೊಂದಿಗೆ ಬಂದು ತೋಟದ ಕೆಲಸ ಮಾಡಿ ಮಳೆಗಾಲಕ್ಕೆ ಕುಂದಾಪುರದ ಕಡೆಯ ತನ್ನೂರಿಗೆ ವಾಪಾಸುಗುತ್ತಿದ್ದ ಸೇರೂಗಾರ ಅಥವಾ ಮೇಸ್ತ್ರಿ. ಹೊಸ ಪರಿಭಾಷೆಯಲ್ಲಿ ಕಂತ್ರಾಟುದಾರ! ಕುಳ್ಳಗಿನ ಸಣಕಲು ಶರೀರದ ಈತ ವಾಚಾಳಿ. ಅಕ್ಷರಾಭ್ಯಾಸ ಅಷ್ಟಕಷ್ಟೆ. ನಾಲಗೆಯ ಬಲದಿಂದ ಅದು ಹೇಗೋ ಎಂಟು-ಹತ್ತು ಜನರನ್ನು ಕರೆತರುತ್ತಿದ್ದ. ಮೊದಮೊದಲು ಸರಿಯಾಗಿಯೇ ಇದು ಸಾಗಿತ್ತು. ಮತ್ತೆ ಮತ್ತೆ ಈ ವರ್ಷ ಬಂದವರು ಮರುವರ್ಷ ಬರುತ್ತಿರಲಿಲ್ಲ. ಕಾರಣ ಸಂಬಳ ಸರಿಯಾಗಿ ಕೊಡುತ್ತಿರಲಿಲ್ಲ. ಈ ವರ್ಷದ ಕೆಲಸವನ್ನು ಮುಂದಿನ ವರ್ಷ ಮುಗಿಸಿಕೊಡುತ್ತಿದ್ದ. ಆದರೆ ಮುಂದಿನ ವರ್ಷದ್ದನ್ನು ಈ ವರ್ಷವೇ ಮುಂಗಡ ಪಡೆಯುತ್ತಿದ್ದ. ಕಾರಣ ಆತನಿಗೆ ಸುತ್ತಿಕೊಂಡ ಕುಡಿತದ ಚಟ. ಈ ಕುಡಿತದ ದಾಸನಾಗಿ ಸುಕ್ರು ಸೇರೂಗಾರ್ರು... ಬರೀ ’ಸುಕ್ರ’ನಾದ ಕತೆಗೂ ಒಂದು ಹಿನ್ನೆಲೆ ಇದೆ.

ಮಲೆನಾಡಿಗೆ ತೋಟದ ಕೆಲಸಕ್ಕೆ ತಂಡದಲ್ಲಿ ಬರುವ ಕೆಲಸಗಾರರು ಹೆಚ್ಚು ಪಾಲು ಗಂಡಾಳುಗಳೇ. ಹೆಣ್ಣಾಳುಗಳೇ ಮಾಡಬೇಕಾದ ಕಡಿಮೆ ಸಂಬಳದ ಕೆಲಸವೂ  ಇರುವುದರಿಂದ ಈ ಗಂಡಾಳುಗಳ ಹೆಂಡತಿಯರು ಅಕ್ಕ-ತಂಗಿಯರು ಬರುವ ಕ್ರಮ ಇತ್ತು. ಆಗ ಸುಕ್ರಣ್ಣನ ಪ್ರಾಯದ ಕಾಲ. ಮದುವೆಯಾಗಿದ್ದರೂ ಸಂಸಾರ ಊರಲ್ಲೇ ಬಿಟ್ಟಿದ್ದ. ಸೇರೂಗಾರಿಕೆಯ ಗತ್ತು - ಶೋಕಿ ಎಲ್ಲಾ ಇತ್ತು. ಕೈಗೆ ಉಂಗುರ, ಕಾಲಿಗೆ ಬೂಟು, ಕಿಸೆಯಲ್ಲೊಂದು ಪೆನ್ನು- ಪುಸ್ತಕ (ಅದರಲ್ಲಿ ಬರೆದದ್ದು ಕಾಣೆ!) ಇವುಗಳಿಂದ ಸದಾ ಅಲಂಕೃತನಾಗಿರುತ್ತಿದ್ದ! ಅದು ಹೇಗೋ ಆ ವರ್ಷ ತನ್ನ ನಾಲಿಗೆಯ ಚಮತ್ಕಾರದಿಂದ ’ರುಕ್ಕು’ ಎಂಬ ನೋಡಲು ತಕ್ಕ ಮಟ್ಟಿಗೆ ಚೆನ್ನಾಗಿರುವ ಹೆಂಗುಸೊಬ್ಬಳನ್ನು ಕರೆತಂದಿದ್ದ. ಸಂಸಾರ ಊರಲ್ಲೇ ಬಿಡಲಿಕ್ಕೆ ಕಾರಣವೇ ಈ ರುಕ್ಕು ಯಾನೆ ರುಕ್ಮಿಣಿ. ಆಕೆ ಕೆಲಸಗಾರ್ತಿಯಾಗಿ ಬಂದರೂ ಯಜಮಾನಿಯಂತೆಯೇ ಇರುತ್ತಿದ್ದಳು. ಸ್ವಲ್ಪ ದಿನ ಸುಕ್ರಣ್ಣನೊಂದಿಗೆ ಚೆನ್ನಾಗಿಯೇ ಇದ್ದಳು. ಈ ವರ್ಷದ ತಂಡದಲ್ಲಿ ’ಗಣಪ’ ಎಂಬ ದೃಢಕಾಯದ ಯುವಕ ಕೆಲಸಗಾರನಾಗಿದ್ದ. ಈತ ಸುಕ್ರನಿಗಿಂತಲೂ ಹೆಚ್ಚು ವಾಚಾಳಿ. ಆದ್ದರಿಂದಲೇ ಆತನಿಗೆ ’ಪಟಾಕಿ ಗಣಪ’ ಎಂಬ ಹೆಸರೂ ಇತ್ತು. ಈತನ ಪಟಾಕಿ ರುಕ್ಕುವಿಗೆ ಅಪ್ಯಾಯಮಾನವಾಗತೊಡಗಿತು. ಗಣಪನ ಪಟಾಕಿಯೂ ರುಕ್ಕುವನ್ನೇ ಸುತ್ತತೊಡಗಿತು. ಗಣಪನ ಕೆಲಸ ಎಲ್ಲೋ ಅಲ್ಲೇ ಈಕೆಯೂ ಕೆಲಸಕ್ಕೆ ಹೋಗತೊಡಗಿದಳು. ಒಂದು ದಿನ ಬೆಳಿಗ್ಗೆ ಎದ್ದು ನೋಡಿದರೆ ಗಣಪ ರುಕ್ಕು ಇಬ್ಬರೂ ನಾಪತ್ತೆ! ಆಗ ನೋಡಬೇಕಿತ್ತು. ಸುಕ್ರಣ್ಣನ ಅವತಾರ! ಕೈಯ ಉಂಗುರ, ಪೆಟ್ಟಿಗೆಯ ಹಣ ಎಲ್ಲಾ ಹೋಯಿತು ಎಂದು ಅಬ್ಬರಿಸುತ್ತಿದ್ದ. ಗಣಪ-ರುಕ್ಕು ಇನ್ನೊಂದು ಊರಿಗೆ ಹೋಗಿ ಅಲ್ಲಿ ಇನ್ನೊಂದು ಬಿಡಾರ ಹೂಡಿ ಕೆಲಸಗಾರರಾಗಿ ಮುಂದುವರಿದಿದ್ದು ಸುಕ್ರಣ್ಣನಿಗೆ ಇನ್ನೂ ಉರಿದುಹೋಯಿತು. ಅಲ್ಲಿಗೂ ಹೋಗಿ ಗಲಾಟೆ ಮಾಡಿದರೆ... ರುಕ್ಕು ನೀನೇನು ಕಟ್ಟಿಕೊಂಡ ಗಂಡನಾ? ಎಂದು ತಿವಿದು ಬಿಟ್ಟಳಂತೆ. ಬರುವಾಗಲೇ ಗಡಂಗಿಗೆ ಹೋಗಿ ಸ್ವಲ್ಪ ಹಾಕಿ ಬಂದ. ಊರಿನಿಂದ ಸಂಸಾರ ಕರೆಸಿಕೊಂಡು ವಿರಹತಾಪ ಮರೆಯಲು ಪ್ರಯತ್ನಿಸಿದ. ವಿರಹ ಮರೆಯಬೇಕೆಂದು ಮತ್ತೆ ಮತ್ತೆ ಕುಡಿಯತೊಡಗಿದ. ಕುಡಿದಾಗ ಗಣಪನ ಮೇಲೆ ಎಲ್ಲಿಲ್ಲದ ದ್ವೇಷ ಉರಿ ಉರಿ ಹಾಯತೊಡಗಿತು.

 ಕುಡಿತವನ್ನು ಹಾಗೆ ಕರೆಯುವುದಕ್ಕಿಂತ ’ಸ್ನಾನ’ ಎನ್ನುವುದೇ ಸೂಕ್ತ. ಕುಡಿದು ತೊನೆದಾಡುತ್ತಾ, ದೋಣಿಯನ್ನು ದಾಟಿ ಅದು ಹೇಗೆ ಬಿಡಾರ ಸೇರುತ್ತಾನೋ ದೇವರಿಗೇ ಗೊತ್ತು. ರುಕ್ಕುವಿನ ಮೇಲಿನ ಮೋಹ ಕುಡಿದಾಗ ಹೆಂಡತಿಯ ಮೇಲಿನ ದ್ವೇಷವೂ ಆಗಿ ಬದಲಾಗತೊಡಗಿತು. ಈತ ಆಕೆಯನ್ನು ಬಡಿಯುವುದು, ಅದನ್ನು ಅನುಭವಿಸುವುದು ಆಕೆಯ ಕರ್ಮವಾಗತೊಡಗಿತು. ಉಪದ್ರ ತೀರಾ ಹೆಚ್ಚಾದಾಗ ಆಕೆ ನಾನು ಊರಿಗೆ ಹೋತೆ’ ಎಂದು ಹೊರಟು ನಿಲ್ಲುತ್ತಿದ್ದಳು. ಅಮಲು ಇಳಿದಾಗ ಈ ಹುಂಬ ಹೆಂಡತಿಯ ಕಾಲು ಹಿಡಿದು ಗೋಳೋ ಎಂದು ಅತ್ತು ಬಿಡುತ್ತಿದ್ದ! ಮತ್ತೆ ಅದೇ ಭಯೋತ್ಪಾದಕ ಕೃತ್ಯ. ಗಣಪನ ಮೇಲಿನ ಕ್ರೋಧ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗ ತೊಡಗಿತು. "ಆ ನಾಯಿ ನನ್ನ ಅನ್ನ ತಿಂದು ನಂಗೇ ದ್ರೋಹ ಮಾಡುದಾ?" ಎಂದು ಹಲುಬುತ್ತಿದ್ದ. ಗಡಂಗಿನಲ್ಲಿ ಸರೀಕರೊಂದಿಗೆ ಸೇರಿದಾಗ ’ಅವ ಸಿಕ್ಲಿ ಕೊಂದ್ ಬಿಡ್ತೆ’ ಎಂದು ಅಬ್ಬರಿಸುತ್ತಿದ್ದ. ಇವನಂತೆಯೇ ಇತರರೂ ತಮ್ಮ ತಮ್ಮ ಪೂರ್ವ ದ್ವೇಷದ ಕತೆಗಳನ್ನು ಸಾಭಿನಯವಾಗಿ ನಿರೂಪಿಸುತ್ತಿದ್ದರು. "ಆ ಮೇಷ್ಟ್ರು... ಪಾಟ....ಪಾಟ..... ಮಾಡ್ತ ನಮ್ಮನಿ ಗಂಡಿಗೆ ದನ ಬಡ್ಡಾಂಗ್ ಬಡಿದ..." ಇದು ಕುಪ್ಪಣ್ಣನ ಕೊರಿಯಗ್ರಫಿ!ಎಂತ ಹೇಳ್ತೆ ಮಾರಾಯ... ನಮ್ಮ ಒಡೇರ್ ಮಗ್ಳು... ಪ್ಯಾಟೀಲಿ ಓದ್ತಿತ್ತಲೆ... ಅಲ್ಲೇ ಯಾರ್ನೋ ಮದೀ ಮಾಡ್ಕಂಡಿತ್ತಂಬ್ರು... ಇದು ತಿಪ್ಪಣ್ಣ ತಂದ ತಾಜಾ ಸುದ್ದಿ. ಹೀಗೆ ತಾಳ ತಂತಿ ಇಲ್ಲದ ಅನೇಕ ಅಮೂಲ್ಯ ವಿಚಾರಗಳ ಮೇಲೆ ತತ್ವ ಜಿಜ್ಞಾಸೆ ನಡೆಯುತ್ತಿತ್ತು!

   ಈ ಕೋಲಾಹಲದ ನಡುವೆ ಚಿಕ್ಕಯ್ಯ ಸೇರೂಗಾರ್ರು. ಸುಕ್ರ ಸೇರೂಗಾರ್ರಿಗೆ ಅಮೂಲ್ಯವಾದ ವಿಚಾರವನ್ನು ಅರುಹುವಂಥವರಾದರು. ಇಬ್ಬರೂ ಯಕ್ಷಗಾನ ಬಯಲಾಟವನ್ನು ತಪ್ಪದೇ ನೋಡುವವರು. ಚಿಕ್ಕಯ್ಯ ಸಣ್ಣ ಪುಟ್ಟ ಅರ್ಥವನ್ನು ಹೇಳಿದವ. ಕುಡಿದಾಗ ಯಾರೂ ಇಲ್ಲದಿದ್ದರೂ ಒಡ್ಡೋಲಗ ಕೊಡುವವ...!"ಎಲವೋ ಸುಕ್ರ ಸೇರೂಗಾರನೆ..... ನಿನ್ನ ಆಜನ್ಮ ಶತ್ರುವಾದ ಗಣಪನೆಂಬುವವನು... ನಿನ್ನ ರುಕ್ಮಿಣಿಯನ್ನು ಅಪಹರಿಸಿದ ಶಿಶುಪಾಲನು. ನಿನ್ನೆ ಆ ಮೈಲಿಕಲ್ಲಿಗೆ ಒರಗಿ ಕುಳಿತು ಬೀಡಿ ಎಳೆಯುವಂಥನಾದನು. ’ನೀನು ಹೀಗೆ ಮಾಡಿದ್ದು ಸರಿಯಾ? ಎಂದರೆ ನಿನ್ನ ಸುಕ್ರ-ನರಪೇತಲ ಅವನು ಏನು ಕಡಿಯುತ್ತಾನೆ...! ಎಂದು ಸಸಾರವಾಗಿ ಮಾತಾಡಿದ ಮಾರಾಯ" ಎಂದು ಊದಿದ. ಸುಕ್ರನಿಗೆ ಏರದೆ ಇದ್ದೀತೆ? "ಎಲವೆಲವೋ ಗಣಪ.. ನನ್ನ ರುಕ್ಕುವಿನ ಮಂಡೆ ಹಾಳು ಮಾಡಿದ ಠೊಣಪ! ನಾನು ಸತ್ತರೂ ನಿನ್ನನ್ನು ಬಿಡ್ತಿಲ್ಲೆ" ಎಂದು ಗಹಿಗಹಿಸುತ್ತಾ ಗಡಂಗಿನಿಂದ ರಭಸವಾಗಿ ಹೊರಟ! ಆ ರಭಸಕ್ಕೆ ಅಲ್ಲೇ ಬೀಳಬೇಕಿತ್ತು ಸಾವರಿಸಿಕೊಂಡು ಮುಂದೆ ನಡೆದ. ತೂರಾಡುತ್ತಾ ಬಿಡಾರಕ್ಕೆ ಹೊರಟವನಿಗೆ ಮೈಲಿಕಲ್ಲು ನೆನಪಾಯಿತು. ’ನಿನ್ನೆ ಅದೇ ಮೈಲಿಕಲ್ಲಿನ ಹತ್ತಿರವಲ್ಲವಾ ಬೀಡಿ ಸೇದುತ್ತಿದ್ದುದು. ಅವ ಬೀಡಿ ಸೇದಿದರೆ ನಾನು ಸಿಗರೇಟ್ ಸೇದ್ತೆ" ಎಂದು ಜಿದ್ದಿಗೆ ಬಿದ್ದು - ಕುಡಿದುಳಿದ ಹಣದಲ್ಲಿ ಸಿಗರೇಟುಕೊಂಡು ಬೆಂಕಿ ಹಚ್ಚಿ ಎಡಗೈಯ್ಯ ಎರಡು ಬೆರಳುಗಳ ನಡುವೆ ತೂರಿಸಿಹಿಡಿದು ರಾಜಠೀವಿಯಿಂದ ಮುನ್ನಡೆದ. ’ನಿನ್ನೆ ಅಲ್ಲಿದ್ದ ಗಣಪ ಇಂದೂ ಇರಬಹುದು. ಇವತ್ತು ಶಿಶುಪಾಲ ವಧೆ ಆಗಲೇಬೇಕು. ನನ್ನ ರುಕ್ಮಿಣಿ ಸಿಗಲೇಬೇಕು’ ಎಂಬ ಉಮೇದಿ ತಡೆದುಕೊಳ್ಳಲು ಅಸಾಧ್ಯವಾದಷ್ಟೂ ಏರಿ ’ಏ ಶಿಶುಪಾಲ ಎತ್ ಹೋತೆ ಕಾಂತೆ’ ಎನ್ನುತ್ತಾ ದಾರಿಯ ಬದಿಯಲ್ಲಿ ಬಿದ್ದಿದ್ದ ಕೊತ್ತಳಿಗೆಯ ತುಂಡನ್ನು ಕೈಗೆತ್ತಿಕೊಂಡ!

 "ಕರದ ಗದೆಯಂ ಪೆಗಲೊಳಾಂತಾ ಸುಯೋಧನಂ...." ಎಂದು ಹಾಡಿಕೊಳ್ಳುತ್ತಾ, ಹೆಣದ ಪರ್ವತಗಳನ್ನು ಏರಿಳಿಯುವುದನ್ನು ಅಭಿನಯಿಸುತ್ತಾ, ಹೆಗಲ ಮೇಲೆ ಕೊತ್ತಳಿಗೆಯ ಗದೆಯನ್ನು ಏರಿಸಿ ಮೈಲಿಕಲ್ಲೆಂಬ ವೈಶಂಪಾಯನ ಸರೋವರದತ್ತ ಮುನ್ನಡೆದ. ಬೆಳದಿಂಗಳ ರಾತ್ರಿಯಲ್ಲಿ ಬಿಳಿ ವಸ್ತ್ರವನ್ನುಟ್ಟು ಗಣಪ ಕಂಗೊಳಿಸುತ್ತಿದ್ದಾನೆ! "ನನ್ನ ರುಕ್ಕುವನ್ನು ಅಪಹರಿಸಿ ಈಗ ಶೃಂಗಾರ ರಾವಣನಾಗಿದ್ದಾನೆ. ಕಳ್ಳ! ಇವತ್ತೊಂದು ಸಂಪೂರ್ಣ ಕುರುಕ್ಷೇತ್ರ ನಡೆದು ಬಿಡಲಿ ಎಂದು ಕಾಳಗಕ್ಕೆ ಸಿದ್ಧನಾದವನಂತೆ ಎದೆಯನ್ನು ಮುಂದುಮಾಡಿ, ಕಾಲನ್ನು ಅಗಲಿಸಿ ಅಸಡಾ ಬಸಡಾ ನಡೆಯುತ್ತಾ "ಏ ಗಣಪಾsss" ಎಂದು ಅಬ್ಬರಿಸಿದ! ಮೈಲಿಕಲ್ಲಿನ ಬಳಿಯಲ್ಲಿದ್ದು ಏನೋ ಕೆಲಸದಲ್ಲಿ ನಿರತವಾಗಿದ್ದ ಕಂತ್ರಿನಾಯಿ ಓಡಿಹೋಯಿತು. ಗಣಪನೂ ಯುದ್ಧಕ್ಕೆ ಸಿದ್ಧನಾದನೆಂದು ಬಗೆದು ತಾನೇ ಮೊದಲು ಧಾಳಿ ಮಾಡಬೇಕೆಂದು ಕ್ಷಣಾರ್ಧದಲ್ಲಿ ತೀರ್ಮಾನಿಸಿ ಧಾಪ್ ಧಾಪ್ ಎಂದು ಬಾರಿಸತೊಡಗಿದ. ಗಣಪನ ಮೇಲಿನ ದ್ವೇಷ, ರುಕ್ಕುವಿನ ಮೇಲಿನ ಮೋಹ, ಭಗ್ನ ಪ್ರಣಯಿಯ ಸಂತಾಪ ಎಲ್ಲಾ ಸೇರಿ ಭೀಕರ ಉಗ್ರವಾದಿಯಾಗಿ ಬಿಟ್ಟ. ಕೊತ್ತಳಿಗೆ ಪುಡಿ ಪುಡಿಯಾದರೂ ಕೋಪ ಇಳಿಯಲಿಲ್ಲ. ಇಷ್ಟು ಹೊಡೆದರೂ ಗಣಪನ ಪ್ರತಿರೋಧವಿಲ್ಲ! ಸತ್ತು ಬೀಳುವುದೂ ಇಲ್ಲ. ಇವನ್ಯಾವನೋ ಮಾಯಾವಿ ರಾಕ್ಷಸನಿರಬಹುದೋ ಎಂಬ ಸಂದೇಹ ಬಂದುಹೋಯಿತು. ಕೈಯಲ್ಲುಳಿದ ಕೊತ್ತಳಿಗೆಯ ಕೊನೆಯ ತುಂಡನ್ನೆತ್ತಿ ಸಂಪೂರ್ಣ ಶಕ್ತಿ ಹಾಕಿ! ಸಾಯಿ....ನಾಯಿ ಎಂದು ಬಡಿದ ರಭಸಕ್ಕೆ ಆಯತಪ್ಪಿ ಪಕ್ಕದ ಚರಂಡಿಗೆ ಬಿದ್ದ. ಬಿದ್ದಲ್ಲಿಯೇ ಕೈಕಾಲು ಬಡಿಯುತ್ತಾ "ಶಿವ ಶಿವಾಸುರಸಮರದೊಳು ಕೈಸೋತೆನಲ್ಲೋ " ಎಂದು ಪದವನ್ನೂ ಒರಲುತ್ತಿದ್ದ. ಇವನ ಹಾಗೆ ರಾತ್ರಿ ಪಾಳಿ ಮುಗಿಸಿ ಬಂದವರು ಎಬ್ಬಿಸಿ ಬಿಡಾರ ತಲುಪಿಸಿದರು. ಮೈಲಿಕಲ್ಲಿನ ಗಣಪ ನಗುತ್ತಿದ್ದ!

ಮತ್ತೊಂದು ದಿನ ಸುಕ್ರಣ್ಣನ ದನಿ ನಮ್ಮ ಅನಂತಣ್ಣಯ್ಯ ಇಪ್ಪತ್ತು ಕೆ.ಜಿ. ಅಕ್ಕಿಯನ್ನು ಮಿಲ್ಲಿನಲ್ಲಿ ಹಿಟ್ಟು ಮಾಡಿಸಿ ತಾ ಎಂದು ಸ್ವಲ್ಪ ಜಾಸ್ತಿಯಾಗಿಯೇ ದುಡ್ಡು ಕೊಟ್ಟು ಪೇಟೆಗೆ ಕಳಿಸಿದ್ದರು. ಪೇಟೆಗೇನೋ ಸರಿಯಾಗಿಯೇ ಹೋದ (ಬೆಳಿಗ್ಗೆ) ಹಿಟ್ಟನ್ನೂ ಮಾಡಿಸಿದ. ದನಿಗಳು ದುಡ್ಡು ಸ್ವಲ್ಪ ಹೆಚ್ಚು ಕೊಟ್ಟಿದ್ದರಲ್ಲ, ಸ್ವಲ್ಪ ಕುಡಿದುಬರುವ ಎಂದು ಗಡಂಗಿಗೂ  ಹೋದ. ಬರುವಾಗ ಇಡೀ ಕಿಸೆ ಖಾಲಿ! ಲೋಡಾದ ಸುಕ್ರ ’ಅನಂತ್ ಭಟ್ರು ಕೊಡ್ತ್ರ್’ ಎಂದು ಹಿಟ್ಟಿನ ಚೀಲದೊಂದಿಗೆ ವಾಪಾಸು ಹೊರಟ. ಮರುದಿನ ದನಿಗಳ ಮನೆಯಲ್ಲಿ ಏನೋ ವಿಶೇಷ. ಮಿಲ್ಲಿನಿಂದ ಹಿಟ್ಟು ಬರುತ್ತದೆ ಎಂದು ಯಜಮಾನಮ್ಮ ಕಾಯುತ್ತಿದ್ದಾರೆ. ಸಂಜೆಯಾದರೂ ಸುಕ್ರನ ಪತ್ತೆ ಇಲ್ಲ. ಅನುಮಾನ ಬಂದ ಅಮ್ಮ ಸುಕ್ರನ ಬಿಡಾರಕ್ಕೆ ಹೋಗಿ ಅವನ ಹೆಂಡತಿಯಲ್ಲಿ ವಿಚಾರಿಸಿದರೆ, ಆಕೆಗೆ ಏನೂ ತಿಳಿಯದು. ಅವರು ಆಗಲೇ ಬಂದು ಮಲಗಿದ್ದಾರೆ ಎಂದಳು. ಮತ್ತೆ ಹಿಟ್ಟೆಲ್ಲಿ? ಎಂದರೆ ಅದೂ ಗೊತ್ತಿಲ್ಲ. ಕೂಡಲೇ ಅವನನ್ನು ಎಬ್ಬಿಸಿ ಕಳಿಸು ಎಂದು ಆಜ್ಞೆ ಮಾಡಿ ಮನೆಗೆ ಬಂದರು. ಈಗ  ಕುಡಿದದ್ದು ತಕ್ಕಮಟ್ಟಿಗೆ ಇಳಿದಿತ್ತು. ಹಿಟ್ಟು ತಂದಿಲ್ಲ. ಅಮ್ಮ ಯಜಮಾನರಿಗಿಂತ ಬಾರೀ ಜೋರು. ಅವರ ಬಾಯಿಯ ಮುಂದೆ ಏನೂ ಮಾಡಲಾಗುದು. ಅಕ್ಕಿ ಹಿಟ್ಟು ಇಲ್ಲ.. ತಪ್ಪಿಸಿಕೊಳ್ಳುವಂತಿಲ್ಲ. ಕೂಡಲೇ ಹೊಸ ಉಪಾಯ ಹೊಳೆಯಿತು. ಮಲಗಿದವನು ಜಿಗಿದು ಕುಳಿತು "ಹೂಂ....ಹೂಂ..." ಎಂದು ಹೂಂಕರಿಸತೊಡಗಿದ. "ಹಡಬೆ, ಏನು ಬೊಗಳೊದು... ನಿನ್ನ ಕೊಂದ್ ಬಿಡ್ತೆ... ಹೂಂ..." ಎಂದು ಅಬ್ಬರಿಸಿ ಪಕ್ಕದಲ್ಲೇ ಇದ್ದ. ಅಡಿಕೆ ದಬ್ಬೆ ಕೈಗೆತ್ತಿಕೊಂಡ.

ಈ ರಾಕ್ಷಸ ಕೊಂದೇ ಬಿಡುತ್ತಾನೆಂದು ಭಾವಿಸಿದ ಆಕೆ ಒಂದೇ ಓಟಕ್ಕೆ ದನಿಗಳ ಮನೆಯ ಜಗಲಿಗೇ ಬಂದಳು! ಏನು ಎಂತ ಕೇಳುವುದರೊಳಗೆ ಅಡಿಕೆ ಚೀಲದ ಹಿಂದೆ ಅಡಗಿದಳು. ಈ ರಾಕ್ಷಸ ಬಂದವನೇ ಅಡಗುತ್ತೀಯಾ ನಿನ್ನನ್ನು ಕೊಂದುಬಿಡುತ್ತೇನೆ ಎನ್ನುತ್ತಾ ಅಡಿಕೆ ಚೀಲಕ್ಕೆ ಬಡಿಯತೊಡಗಿದ. ಅಡಿಕೆ ಚೀಲ ಪುಡಿಯಾಗಿ ಅಡಿಕೆಯೆಲ್ಲಾ ಚೆಲ್ಲಾಪಿಲ್ಲಿ! ಅದರ ಮೇಲೆ ಇವನ ಭರತನಾಟ್ಯ ನಿಲ್ಲಲಾರದೆ ಕೆಳಕ್ಕೆ ಬಿದ್ದು ಮತ್ತೆ ಎದ್ದ.  ಮೊದಲೇ ಹಿಟ್ಟು ತಾರದ್ದಕ್ಕೆ ಕೆಂಡಾಮಂಡಲವಾಗಿದ್ದ ಯಜಮಾನಿ ಕೋಪದಿಂದ ಕುದಿದು ಹೊರಬಂದರೆ ಯಜಮಾನರು ಕಂಗಾಲಾಗಿದ್ದಾರೆ. ಸುಕ್ರನ ಭರತನಾಟ್ಯ, ಬ್ರೇಕ್ ಡ್ಯಾನ್ಸ್ ಯಕ್ಷಗಾನ ಎಲ್ಲ ಪ್ರಾರಂಭವಾಗಿದೆ. ’ಏ ಸುಕ್ರಾ’ ಎಂದು ಅಬ್ಬರಿಸಿದರು. ’ಹೂಂ... ನಾನು ಸುಕ್ರ ಅಲ್ಲ... ಅವನಣ್ಣ ಶಂಕ್ರಾss... ಎಂದು ಮತ್ತೆ ಅಬ್ಬರಿಸತೊಡಗಿದ. ಶಂಕ್ರನಾಗಲಿ ಅವರಪ್ಪನಾಗಲಿ ನಮ್ಮ ಜಗಲಿಯಲ್ಲೇನು ಕೆಲಸ ? ಎಂದವರೇ ಸೀದಾಹೋಗಿ ಕೈಯ್ಯ ದಬ್ಬೆಯನ್ನು ಕಿತ್ತುಕೊಂಡು, ದರದರ ಅಂಗಳಕ್ಕೆ ಎಳೆದು ತಂದು ಅಲ್ಲಿಯೇ ಇದ್ದ ಒಂದು ಕೊಡ ನೀರನ್ನು ತಲೆಗೆ ಸುರಿದುಬಿಟ್ಟರು! ಅಡಿಕೆ ದಬ್ಬೆಯನ್ನು ಕೈಗೆತ್ತಿಕೊಂಡು ಯಾರು? ಶಂಕ್ರನಾ? ಇನ್ನೊಂದು ಸಾರಿ ಬೊಗಳು’ ಎಂದು ಅಬ್ಬರಿಸಿದ್ದೇ ’ಶಂಕ್ರ’ ಮತ್ತೆ ಶುಕ್ರನೇ ಆಗಿಬಿಟ್ಟ! ’ಅಯ್ಯಯ್ಯೋss ಅಮ್ಮ ತಪ್ಪಾಯಿತಮ್ಮ.... ಅದು... ನನ್ನ ಅಣ್ಣನ್ ಜಕ್ಣಿ ಅದೇ ನಂಗ್ ವದ್ಬಿಡ್ತು, ಹಿಟ್ಟೀನ್ ಚೀಲ ತಂದೀದೆ. ಎಲ್ಲೋಹ್ತು ಗೊತ್ತಿಲ್ಲೆ’ ಎಂದು ಹಲುಬತೊಡಗಿದ. ಎಂದೋ ಸತ್ತು ಹೋದ ಇವನಣ್ಣನ ಪ್ರೇತಕ್ಕೆ ನಮ್ಮ ಅಕ್ಕಿ ಚೀಲ ಯಾಕೆ ಬೇಕು ಎಂಬುದು ಆ ಸಾವಿತ್ರಮ್ಮನಿಗೆ ತಿಳಿಯದಾಯಿತು! ಇವನದ್ದೇನು ನಾಟಕವೋ? ಸತ್ಯವೋ? ಎಂದು ಭೂತಪ್ರೇತಗಳ ಮೇಲೆ ನಂಬುಗೆ ಇದ್ದ ಅವರು ಅಯೋಮಯರಾದರು! ಹಾಗಿದ್ದರೆ ಆ ಜಕ್ಣಿ ಈಗೆಲ್ಲಿ ಹೋಯಿತು ಸುಕ್ರಣ್ಣನ ದುರಾದೃಷ್ಟವೇ ಬಂದಂತೆ ಅನಂತಭಟ್ಟರ ಭಾವ ಹರಿಭಟ್ಟರು ಅಂದೇ ಬಂದರು. ಸುಕ್ರಣ್ಣನ ಅವಾಂತರವನ್ನು ದಾರಿಯಲ್ಲೇ ಕೇಳಿ ಬಂದಿದ್ದ ಅವರು ಅಣ್ಣನ ಜಕ್ಣಿಯ ಕತೆಯನ್ನು ನಂಬಿಸ ಹೊರಟ ಸುಕ್ರಣ್ಣನ ಉಪಾಯಕ್ಕೆ  ಕಲ್ಲು ಹಾಕಿದರು.

ಬಂದವರೇ ಕಾಲೂ ತೊಳೆಯದೆ ’ಏ ಸುಕ್ರಾ’ ಎಂದು ಕರೆದರು. ಹಿಟ್ಟಿನ ಚೀಲದ ಕತೆ ಏನಾಯಿತು? ಎಂದರು. ಸುಕ್ರ ಅಪರಾಧಿಯ ಭಂಗಿಯಲ್ಲಿ ಮತ್ತೆ ಜಕ್ಣಿ ಕತೆ ಶುರು ಮಾಡಿದ. ’ಮುಚ್ಚು ಬಾಯಿ ಮಳ್ಳ’ ಎಂದು ಅವರು ಜೋರು ಮಾಡಿದಾಗ ಸುಕ್ರ ಮೂಲೆಯಲ್ಲಿ ಕುಳಿತುಬಿಟ್ಟ. ಈ ಸುಕ್ರ ಏನು ಮಾಡಿದ್ದಾನೆ ಗೊತ್ತೇ? ಎಂದು ಉರಿಯುತ್ತಲೇ ಕತೆ ಹೇಳಿದರು.

ಪೇಟೆಯಿಂದ ಬರುವಾಗ ಹೊಳೆಯ ಕಡುವನ್ನು ದಾಟಲಿಕ್ಕಿದೆ. ಹೊಳೆ ಬಾಗಿಲಿಗೆ ಬರುವುದಕ್ಕೆ ಮೊದಲು ಒಂದು ಫರ್ಲಾಂಗು ಇಳಿಜಾರು ರಸ್ತೆ, ಪೇಟೆಯಿಂದ ಒಂದು ಮೈಲು ರಸ್ತೆಯಲ್ಲಿ ಇಪ್ಪತ್ತು ಕೆ.ಜಿ. ಹಿಟ್ಟನ್ನು ತೂರಾಡುತ್ತಲೇ ಹೇಗೋ ಹೊತ್ತು ತಂದ. ಮುಂದೆ ಏನೂ ಮಾಡಲಾರೆ ಅನ್ನುವಾಗಲೇ ಆಯತಪ್ಪಿ ಬಿದ್ದುಬಿಟ್ಟ. ಹೀಗೆ ಬೀಳಲು ತಲೆಯ ಮೇಲಿನ ಹಿಟ್ಟಿನ ಚೀಲವೇ ಕಾರಣವಷ್ಟೇ? ಚೀಲದ ಮೇಲೆ ಎಲ್ಲಿಲ್ಲದ ಕೋಪ ಬಂತು. ಇವನನ್ನು ಕಂಡರಾಗದ ಇವನಣ್ಣ ಶಂಕ್ರ ಸತ್ತು ಈ ಜಕ್ಣಿಯಾಗಿದ್ದಾನೆ! ಅವನು ಈ ಚೀಲವನ್ನು ಹೊಕ್ಕಿರಬೇಕು. ಇಲ್ಲವಾದರೆ ಐವತ್ತು ಕೆ.ಜಿ. ಹೊರುವ ತನಗೆ ಇಪ್ಪತ್ತು ಕೆ.ಜಿ. ಹೊರಲಿಕ್ಕೆ ಆಗದು ಎಂದರೇನು? ಆದ್ದರಿಂದ ಅಣ್ಣನ ಜಕ್ಣಿಯೇ ಇದರೊಳಗೆ ಅವೇಶವಾಗಿದೆ. ’ಅಮಲುದಾರ’ ಸುಕ್ರನಿಗೆ ತಕ್ಷಣ ಹೊಳೆದ ಈ ವಿಚಾರದಿಂದ ಹಿಟ್ಟನ್ನು ಸಾಗಿಸುವುದೆಂತು ಎಂಬುದು ಪ್ರಶ್ನೆಯಾಯಿತು. ಹಿಟ್ಟುಕೊಂಡು ಹೋಗದಿದ್ದರೆ ದನಿಗಳು ಬೈಯ್ಯುತ್ತಾರೆ. ಕೊಂಡುಹೋಗಲು ಅಣ್ಣನ ಜಕ್ಣಿ ಬಿಡಲಾರದು. ಸರಿ ಎಂದು ಉಪಾಯ ಮಾಡಿದ. ಪಕ್ಕದ ಪೊದೆಯಲ್ಲಿದ್ದ ಬಳ್ಳಿ ತಂದು ಹಿಟ್ಟಿನ ಚೀಲದ ಜುಟ್ಟಿಗೆ ಕಟ್ಟಿದ. ನಾಯಿ ಮರಿಯನ್ನು ಎಳೆದ ಹಾಗೆ ಎಳೆಯುತ್ತಾ ’ಬತ್ತ್ಯ’.... ’ಇಲ್ಯ’ ಎಂದು ಬಯ್ಯುತ್ತಾ ಮುಂದೆ ಸಾಗಿದ. ಬಟ್ಟೆಯ ಚೀಲ, ಕಲ್ಲುದಾರಿ ಎಳೆದ ಹಾಗೆ ಬಂತು. ಚೀಲ ಹರಿದು ಹಿಟ್ಟು ಸುರಿಯತೊಡಗಿತು. ಹಿಂದೆ ನೋಡದೆ ಮುಂದೆ ಮುಂದೆ ಸುಕ್ರಣ್ಣನ ಜಕ್ಣಿಯ ಚೀಲ ಹಿಂದೆ! ಹಿಟ್ಟು ಕಡಿಮೆಯಾಗುತ್ತಾ ಬಂದ ಹಾಗೆ ಜಕ್ಣಿಯ ತೂಕ ಕಡಿಮೆಯಾಗುತ್ತಾ ಬಂತು! ಒಂದು ಫರ್ಲಾಂಗ್ ಗುಡ್ಡೆ ರಸ್ತೆಗೂ ರಂಗೋಲಿಯ  ವೈಭವ! ದೋಣಿ ಈಚೆ ದಡಕ್ಕೆ ಬಂದು ವಾಪಾಸಾಗುತ್ತಿದೆ. ಹಿಟ್ಟಿನ ಬಗ್ಗೆ ಯೋಚಿಸಲು ಪುರುಸೋತ್ತಿಲ್ಲ. ’ಹೋಯ್...... ಸೀನಾ... ನಾ ಬತ್ತೆ’ ಎಂದು ಸುಕ್ರ ಬೊಬ್ಬಿಟ್ಟ. ದೋಣಿ ಶೀನ ಕುಡುಕನನ್ನು ಹತ್ತಿಸಿಕೊಳ್ಳಲು ಹಿಂಜರಿದು. ’ಇನ್ನೊಂದು ಸಾರಿ ಬಂದಾಗ ಬಾ ಎಂದು ಹೊರಟೇಬಿಟ್ಟ. ’ಹೋಯ್ ನೀನ್ ಕರ್ಕೊಂಡ್ ಹೋಗ್ದಿದ್ರೆ ಹೊಳೆ ಹಾರಿ ಈಜ್ಕಂಬತ್ತೆ ಕಾಂತ್ಯ’ ಎಂದು ಹೊಳೆಗೆ ಇಳಿಯಲಿಕ್ಕೇ ಸಿದ್ಧನಾಗಿಬಿಟ್ಟ! ಐವತ್ತು-ಅರವತ್ತು ಅಡಿ ಆಳದ, ಅರ್ಧ ಫರ್ಲಾಂಗ್ ಅಗಲದ ಲಿಂಗನಮಕ್ಕಿಹಿನ್ನೀರಿನ ಹೊಳೆ ಅದು. ಈ  ಈಜುಬಾರದ ಕುಡುಕ ಹಾರಿದರೆ ಹೆಣವಾಗುತ್ತಾನೆ! ಶೀನಣ್ಣ ಉಪಾಯ ಕಾಣದೆ, ಈಜುವುದು ಬೇಡ ಮಾರಾಯ ಬಾ ಎಂದು ಹೇಗೋ ದೋಣಿ ಹತ್ತಿಸಿಕೊಂಡು ಈಚೆ ದಡಕ್ಕೆ ತಂದುಬಿಟ್ಟ. ದೋಣಿ ದಾಟಿದ್ದಕ್ಕೆ ದುಡ್ಡು ಕೊಡದೆ ’ಅಣ್ಣ ಸುಯೋಧನ ಲಾಲಿಸು ನಿನ್ನ ಪುಣ್ಯಫಲೋದಯ...’ ಎಂದು ಹಾಡಿಕೊಳ್ಳುತ್ತಾ ಹಿಟ್ಟಿನ ಚೀಲವನ್ನು ಬೀಸಾಡಿ ನಡೆದೇ ಬಿಟ್ಟ. ಇದು ಹರಿಭಟ್ಟರು ಸಂಗ್ರಹಿಸಿದ ಕಥೆ. ಅಮಲೇನೋ ಇಳಿದಿತ್ತು. ಅಮ್ಮನನ್ನು ನಂಬಿಸಲಿಕ್ಕಾಗಿ  ಮತ್ತೆ ಅಣ್ಣನ ಜಕ್ಣಿಯ ಆವೇಶಭರಿಸಿ ಅಡಿಕೆಚೀಲ ಪುಡಿಮಾಡಿದ್ದ.

    ಅಂತೂ ಭಟ್ಟರ ಮನೆಯ ಕಾರ್ಯಕ್ರಮಕ್ಕೆ ಅಕ್ಕಿ ಹಿಟ್ಟು ಇಲ್ಲವಾಯಿತು. ’ನಿನ್ನ ಅಣ್ಣನ ಜಕ್ಣಿ ಸುದ್ದಿ ತೆಗೆದರೆ ನಿನ್ನನ್ನೇ ಜಕ್ಣಿ ಮಾಡುತ್ತೇನೆ’ ಎಂದು ಹರಿಭಟ್ಟರು ಅಬ್ಬರಿಸಿದಾಗ ಹೆದರಿ ಕಂಗಾಲಾದ ಸುಕ್ರ ಬಿಡಾರಕ್ಕೆ ಓಡಿದ. ಯಜಮಾನರಿಗೆ ಹಿಡಿದದ್ದು ಜಕ್ಣಿಯಲ್ಲ ಎಂಬುದು ಗಟ್ಟಿಯಾದ ಮೇಲೆ ಸುಕ್ರನ ಹೆಂಡತಿಯೂ ಧೈರ್ಯವಾಗಿ ಬಿಡಾರ ಸೇರಿದಳು. ಆ ಊರಿಗೆ ಸುಕ್ರನ ಕೆಲಸದ ವರ್ಷ ಅದೇ ಕೊನೆ. ಮತ್ತೆ ಆತನಾಗಲೀ, ಅವನ ಜಕ್ಣಿಯದ್ದಾಗಲೀ ಸುದ್ದಿ ಕೇಳಿಬರಲಿಲ್ಲ.

(ಅರ್ಥ : ಜಕ್ಣಿ= ಸತ್ತ ನಂತರದ ಸ್ಥಿತಿ, ಪ್ರೇತತ್ವಕ್ಕೆ ಕುಂದ ಕನ್ನಡದ ಶಬ್ದ)


ಮುಂದಿನ ತಿಂಗಳು ಬಿಡುಗಡೆಗೊಳ್ಳಲಿರುವ ಬಸ್ಸು ಜಟಕಾ ಬಂಡಿ ನಗೆಬರಹಗಳ ಸಂಕಲನದ ಆಯ್ದ ಬರಹ

ಬುಧವಾರ, ನವೆಂಬರ್ 30, 2011

ಚಲನ-ಚಿತ್ರ

ಇಪ್ಪತ್ತಡಿಗೂ ಮೀರಿ ನಿಂತ
ನಾಯಕನ ಕಟೌಟಿನಲ್ಲಿ
ಮೂಗು ಕೊಂಚ ಊನ
ಸಾಲಿನ ಕೊನೆಯಲ್ಲಿ ನಿಂತವಗೆ
ಟಿಕೇಟು ಸಿಗುವುದು ಅನುಮಾನ
ವಾಗಿ ಪದಪದ ಚಡಪಡಿಕೆ

ಕಣ್ಣ ಕನಸುಗಳಿಗೆ ದಾರಿ ತೋರುವ
ಕೌಂಟರಿನ ಹಿಂದೆ ಕೂತ
ಮುಖಕ್ಕೆ ಸುಮ್ಮನೆ ಬಿಗುಮಾನ
ಒಳಬಿಡುವ ಗೇಟ್ ಕೀಪರನಿಗೂ
ಬಾಡಿಗೆಯ ದರ್ಪ
ಮಾಡಿದಂತೆ ಏನೋ ಉಪಕಾರ
“ಹೋಗಿ ಹೋಗಿ”..

ಸಾಗಿದೆ ಸಿನಿಮಾ, ಮರೆಸಿ ಎಲ್ಲರ
ಎಲ್ಲವನೂ
ಅಲ್ಲಲ್ಲಿ ಒಳಗಿಳಿಸಿ ಖುಷಿಯ ಬಿಂಬ
ಜತೆಗೆ ಕೊಂಚ ನೋವನ್ನೂ

ಇಂಟರ್ವಲ್ ನಲ್ಲಿ ಎದ್ದು ಬಂದ ಹೋಟೇಲು
ಮಾಣಿಯ ನಡಿಗೆಯಲ್ಲಿ
ನಾಯಕನ ಚೈತನ್ಯ
ಶೌಚಾಲಯದ ಮೂಲೆಯ ಹೊಗೆಸುರುಳಿಗಳಲ್ಲಿ
ಕನಸು ರಿಂಗಣ

ಶುಭಂ ಕಾಣುವ ಮೊದಲೇ ಹೊರಟಿದ್ದಾರೆ
ಮಂದಿ, ಕೊನೆಯ ಸೀನಿಗಿಂತ ಮುಖ್ಯ
ಟ್ರಾಫಿಕ್ಕು ಇರದ ರಸ್ತೆ,ಸಾಗಿದರೆ
ಆರಾಮಾಗಿ ದಾರಿ ತುಂಬ
ಚಿತ್ರದ ಮೆಲುಕು

ಇಲ್ಲೀಗ ಚಿತ್ರಮಂದಿರ ಖಾಲಿ
ಮೇಲೆಲ್ಲೋ ಉರುಳಿಬಿದ್ದ ಕೋಕ್
ಬಾಟಲಿ ಸದ್ದು ಗಾಂಧಿಕ್ಲಾಸಲ್ಲಿ
ಅನುರಣನ

ಜಾಡಮಾಲಿ ಹೆಂಗಸಿಗೆ ಕಂಡಿದೆ
ಯಾರೋ ಬಿಟ್ಟು ಹೋದ ಪಾಪ್ ಕಾರ್ನು
ಕಟ್ಟಿಕೊಳ್ಳಬೇಕಿದೆ ಅದನ್ನ ಸೆರಗೊಳಗೆ
ಮಂದಿ ಬರುವ ಮುನ್ನ
ಗುಡಿಸಲು ಬಾಕಿ ಇದೆ ಇನ್ನೂ ಎರಡು ಸಾಲು

ಇನ್ನೇನು ಕೆಲವೇ ಕ್ಷಣಗಳಲ್ಲಿ ಮುಂದಿನ ದೇಖಾವೆ..


ಭಾನುವಾರ, ಜೂನ್ 26, 2011

ಮರಳಿ ಬಾರೋ ಗೋಕುಲಕ್ಕೆ..

ಚೆಲ್ವ ಸಖನೇ,

ಕಾಲ ಕೆಳಗೆ ಹರಿಯುತ್ತಿರುವ ಯಮುನೆ. ಅದಕ್ಕೆ ತಾಕಿಕೊಂಡಿರುವ ಗೋಪುರದ ಕೆಳಗಿರುವ ಪಾಚಿ ಕಟ್ಟಿದ ಪಾವಟಿಗೆಗಳ ಮೇಲೆ ಕುಳಿತು ನಿನಗೆ ಈ ಓಲೆ ಬರೆಯುತ್ತಿದ್ದೇನೆ. ನಿತ್ಯ ಸುಮ್ಮಗೆ ಕೂತು ನದಿಯ ಪಾತ್ರಕ್ಕೆ ಕಲ್ಲೆಸೆವ ನನಗೆ ಈ ಕಲ್ಲಹಾಸುಗಳು ಬಲು ಪ್ರಿಯ. ನೀನು ಇಲ್ಲೇ ಇದ್ದ ಕಾಲದಲ್ಲಿ ನಿನಗೂ ಕೂಡ. ಎಷ್ಟು ದಿನ ಇಲ್ಲಿ ನಾನು ನಿನ್ನ ಭುಜಕ್ಕೊರಗಿ ಕೂತು ನದಿಯ ನೋಡುತ್ತ ಕೂತಿಲ್ಲ ಹೇಳು? ಆದರೀಗ ನೀನಿರುವ ಮಹಲುಗಳ ನಗರಿಯಲ್ಲಿ ನದಿಯಿದೆಯೋ, ಇಲ್ಲವೋ.. ಇದ್ದರೂ ನಿನಗೆ ಸಮಯವೆಲ್ಲಿದ್ದೀತು? ಸುಮ್ಮಗೆ ಕೂತು ಹರಿವ ನೀರು ನೋಡುವಷ್ಟೆಲ್ಲ ಹೊತ್ತು ನಿನಗಿದ್ದರೆ ಜಗದೋದ್ಧಾರಕನಾಗುವುದು ಹೇಗೆ?

ಗೋಕುಲದ ಮಣ್ಣನ್ನ ದಾಟಿ, ಪ್ರಪಂಚಕ್ಕೆ ಕಣ್ಣು ಕೊಡಲು ಹೊರಟ ಉದಾತ್ತ ಮನುಷ್ಯ ನೀನು. ಪುಣ್ಯಾತ್ಮ. ನನ್ನ ಗೆಳತಿಯರು ಕೆಲ ಕಾಲ ನೀನು ಬರುತ್ತೀಯಾ ಎಂದು ಸಮಾಧಾನದ ಮಾತುಗಳನ್ನ ಹೇಳುತ್ತಿದ್ದರು. ನೀನು ಯಾವಾಗ ನಿನ್ನುಸಿರಾದ ಕೊಳಲನ್ನೂ ಇಲ್ಲೇ ಬಿಟ್ಟು ನಡೆದೆಯೋ, ಅಂದೇ ನನಗೆ ತಿಳಿದಿತ್ತು ಮತ್ತೆ ನೀನು ಬರುವುದಿಲ್ಲ ಎಂದು. ಆದರೆ ಹೃದಯ ಮನಸಿನ ಮಾತು ಕೇಳಲಿಲ್ಲ. ಅದಕ್ಕೆ ಧನ್ಯವಾದ ಹೇಳಬೇಕು ನಾನು. ಅದರ ಪ್ರತಿ ತುಡಿತದಲ್ಲೂ ನಿನ್ನ ನೆನಪುಗಳು ಮರುಕಳಿಸಿ, ನನ್ನನ್ನು ಇಲ್ಲಿವರೆಗೆ ಜೀವದಿಂದಿರುವಂತೆ ಮಾಡಿದೆ.

ಅಲ್ಲವಯ್ಯ, ಒಮ್ಮೆಗಾದರೂ ನನ್ನನ್ನು ನೋಡಬೇಕು ಅಂತ ಅನ್ನಿಸಲಿಲ್ಲವಾ ನಿನಗೆ? ಮನೋಕೋಶದಲ್ಲಿ ಬರೀ ನಿನ್ನ ಬಿಂಬಗಳನ್ನೇ ತುಂಬಿಕೊಂಡು ಬದುಕಿದ್ದ ನನ್ನನ್ನ ಒಂದು ಸಲವಾದರೂ ಹಿಂದಿರುಗಿ ಬಂದು ಕಾಣಬೇಕು ಎಂದು ಅಂದುಕೊಳ್ಳಲೇ ಇಲ್ಲವಾ ಇಲ್ಲಿಯ ತನಕ? ನಿನಗೆ ಹಾಗೆಲ್ಲ ಕಂಡರೂ, ಪಾಪ ಕಾರ್ಯದೊತ್ತಡ, ದೊಡ್ಡ ಜನರ ಸಹವಾಸ ಅಂತೆಲ್ಲ ಅಂದುಕೊಂಡು ಬಹಳ ಕಾಲ ಸಮಾಧಾನ ತಂದುಕೊಂಡೆ ನಾನು.

ಆದರೆ ಅದೆಲ್ಲ ಸುಳ್ಳು ಅಂತ ಗೊತ್ತಾಗುತ್ತ ಹೋಯಿತು ಬಿಡು. ಸಾಲುಸಾಲಾಗಿ ಬಹಳ ಹುಡುಗಿಯರನ್ನ ನೀನು ಮದುವೆಯಾದೆ ಅಂತ ಸುದ್ದಿ ಬಂತು ನನಗೆ. ಹಾಂ, ಇದೊಂದು ತಿಳಕೋ, ನೀನು ಕೋಟಿ ಹುಡುಗಿರನ್ನ ವರಿಸಿದರೂ ಹೊಟ್ಟೆಕಿಚ್ಚಿಲ್ಲ. ಆದರೆ ನನ್ನ ಜೊತೆಗಿದ್ದ ಭಾವನಾತ್ಮಕ ಜಗದ ಸಂಬಂಧವನ್ನು ನೀನು ಕಡಿದುಕೊಂಡೆಯಲ್ಲ,ಅದನ್ನ ಸಹಿಸುವುದು ಸ್ವಲ್ಪ ಕಷ್ಟ. ಹಿಂದೆ ನನಗೆ ಬೇಸರವಾದಾಗಲೆಲ್ಲ ನೀನು ಧುತ್ತೆಂದು ಪಕ್ಕದಲ್ಲಿ ಹಾಜರಾಗುತ್ತಿದ್ದೆ.ಸಂತೈಸುತ್ತಿದ್ದೆ. ಅದೆಲ್ಲೆ ಇಲ್ಲಿದ್ದಾಗಲಷ್ಟೆ. ನೀನು ಹೋದ ಮೇಲೆ ಕಾಡೊಳಗೆ ಹೋಗಿ ಭೋರೆಂದು ಅತ್ತರೂ, ದಿನವಿಡೀ ಊಟ ಬಿಟ್ಟಿದ್ದರೂ,ಏನು ಮಾಡಿದರೂ ನಿನ್ನ ಸುಳಿವಿಲ್ಲ.

ನಾನು ನಿನ್ನನ್ನು ಇಷ್ಟಪಡುವ ಮೊದಲು ನಿನ್ನ ಕೊಳಲ ದನಿಯನ್ನು ಇಷ್ಟಪಟ್ಟಿದ್ದೆ. ನೀನಿಲ್ಲದ ನೀರವ ರಾತ್ರಿಗಳಲ್ಲಿ ಪಕ್ಕದ ಬಿದಿರು ತೋಪಿನಿಂದ ಹಾಯ್ದು ಬರುವ ಗಾಳಿಯಲ್ಲಿ ಕೂಡ ಮುರುಳಿಯ ನಾದ ಕೇಳಿದಂತಾಗಿ ಅದೆಷ್ಟು ಬಾರಿ ಮನೆಯಿಂದ ಹೊರಗೋಡಿ ಬಂದಿದ್ದೇನೋ ನಾನು. ನಿನಗೆ ಇದನ್ನೆಲ್ಲ ಹೇಳಿ ಪ್ರಯೋಜನವಿಲ್ಲ. ಸುಮ್ಮಗೆ ನಗುತ್ತೀಯೇನೋ, ಇದನ್ನೆಲ್ಲ ನೋಡಿ. ನನ್ನ ಕರ್ಮ. ಬರೆಯದಿದ್ದರೆ ಒಳಗಿನ ಒಡಲ ಬೆಂಕಿ ನನ್ನನ್ನೇ ದಹಿಸಿಯಾತು.

ನಿನ್ನ ಮಹಿಮೆಯನ್ನು ಕೊಂಡಾಡುವ, ನಿನ್ನ ಲೀಲೆಗಳನ್ನು ಸ್ತುತಿಸುವ ಜನ ನಮ್ಮಲ್ಲೂ ಬಹಳವಿದ್ದಾರೆ. ಅವರನ್ನೆಲ್ಲ ಹುಲಿ ಹಿಡಿಯ. ಅದ್ಯಾರಿಗೋ ಸೀರೆ ಕೊಟ್ಟೆಯಂತೆ, ಇನ್ಯಾವುದೋ ಪುಂಡನನ್ನ ಕೊಂದೆಯಂತೆ. ಅಂಥದ್ದನ್ನೆಲ್ಲ ಇಲ್ಲಿದ್ದಾಗಲೂ ಮಾಡಿದ್ದೆ ನೀನು. ಆವಾಗ ಸುದ್ದಿಯಾಗಿರಲಿಲ್ಲವೇನೋ ಅದು. ಒಮ್ಮೆ ದೊಡ್ಡ ಮನುಷ್ಯ ಅಂತಾದರೆ ಸಾಕು, ಎಲ್ಲದರೂ ದೈವತ್ವ ಹುಡುಕುತ್ತಾರೆ ಮಂದಿ.

ನೀನಾಗಿ ಬಂದು ನನ್ನನ್ನ ನೋಡುವ ತನಕ ನಿನ್ನನ್ನ ಮಾತನಾಡಿಸಬಾರದು ಅಂದುಕೊಂಡವಳು ನಾನು. ಆದರೆ ನಿನ್ನ ಹೊಸ ಸಾಹಸದ ಸುದ್ದಿಯೊಂದು ಕಿವಿಗೆ ಬಿದ್ದು ಚಡಪಡಿಕೆ ಶುರುವಾಗಿದೆ. ಅದೇನೋ ಯುದ್ಧವಂತೆ, ನೀನು ಪಾಂಡವರ ಕಡೆಯಂತೆ.ಅರ್ಜುನನ ಸಾರಥಿಯಂತೆ.ಸುಡುಗಾಡು.ನಮ್ಮಲ್ಲಿಂದಲೂ ಒಂದಿಷ್ಟು ಜನ ಬಡಿಗೆ ಬಿಲ್ಲು ಬಾಣ ತೆಗೆದುಕೊಂಡು ಹೊರಟಿದ್ದಾರೆ.ನಾನು ಮೊದಲಿಗೆ ನಂಬಲಿಲ್ಲ. ಆದರೆ ನಿನ್ನ ಹುಚ್ಚುತನವನ್ನು ತಳ್ಳಿ ಹಾಕುವ ಹಾಗೂ ಇಲ್ಲ. ಮೊದಲೇ ಹುಂಬ ನೀನು. ಅವರ್ಯಾರೋ ಯುದ್ಧ ಮಾಡಿಕೊಂಡು ಸಾಯ ಹೊರಟರೆ ನಿನಗೇನು ಕಷ್ಟ? ಸಂಧಾನ ಮಾಡಲು ಯತ್ನಿಸಿದ್ದೆಯಂತಲ್ಲ? ನಿನ್ನ ಪ್ರಯತ್ನ ನೀನು ಮಾಡಿದ್ದೆ. ಸಾಕಾಗಿತ್ತು.

ಇಷ್ಟಕ್ಕೂ ಯುದ್ಧರಂಗವೇನು ಸಾಮಾನ್ಯವಾಗಿರುವುದಿಲ್ಲ. ಗೋಕುಲದಲ್ಲಿ ಹಳೇ ಮುದಿ ಹೆಂಗಸರ ಕಣ್ಣು ತಪ್ಪಿಸಿ ಬೆಣ್ಣೆ ಕದ್ದ ಹಾಗಲ್ಲ ಅದು. ಸಾವಿರ ಸಾವಿರ ಸಂಖ್ಯೆಯಲ್ಲಿ ಕಾದಾಡುವ ಸೈನಿಕರ ಮಧ್ಯ ಗೊಲ್ಲ ನಿನಗೇನು ಕೆಲಸ? ಹೊತ್ತಿಗೆ ಸರಿಯಾಗಿ ತುತ್ತು ಕೂಡ ದಕ್ಕಲಾರದು ಅಲ್ಲಿ. ಅಷ್ಟಕ್ಕೂ ಆ ರಾಜಮಕ್ಕಳಿಗೆ ರಥಕ್ಕೆ ನೂರು ಸಾರಥಿಯರು ಸಿಕ್ಕಾರು ಬಿಡು. ಹೇಳು ಅವರಿಗೆ. ಇಷ್ಟು ದಿನದ ಕೆಲಸದೊತ್ತಡ ಸಾಕಾಗಿದೆ, ಒಮ್ಮೆ ಗೋಕುಲಕ್ಕೆ ಹೋಗಿ ಬರುತ್ತೇನೆ ಅಂತ. ನನ್ನ ಹೆಸರು ಹೇಳು. ಗೆಳತಿಯಿದ್ದಾಳೆ ಅನ್ನು. ಬೇಡ ಅನ್ನುವುದಿಲ್ಲ ಯಾರೂ.

ನೀನು ಕೂಡ ಇಂತಹ ಅವಕಾಶಕ್ಕೆ ಕಾಯುವ ಜಾತಿಯವನೇ ಅನ್ನುವುದೂ ಗೊತ್ತು ನನಗೆ. ಊರಿನ ಗಂಡಸರೆಲ್ಲ ಅಲ್ಲಿ ಯುದ್ಧದಲ್ಲೇ ಇರುತ್ತಾರೆ. ಇಲ್ಲಿ ಇಡೀ ಗೋಕುಲಕ್ಕೆ ನೀನೊಬ್ಬನೇ ಆಗ. ಜೊತೆಗೆ ನಾನು. ನೀನು ಬಂದರೆ ಇಲ್ಲಿಗೊಂದು ಹೊಸ ಕಳೆ ಬರುತ್ತದೆ. ನಿನ್ನ ಹೆಜ್ಜೆಯ ಸ್ಪರ್ಶವಾದರೆ ಇಲ್ಲಿನ ಮಣ್ಣಿಗೆ ಹೊಸ ಗಂಧ ಬರುತ್ತದೆ. ನೀನು ಹೋದ ಮೇಲೆ ತರಗೆಲೆ ತುಂಬಿಕೊಂಡಿರುವ ಅರಳಿ ಕಟ್ಟೆಗೆ ಮತ್ತೆ ಯೌವನ ಬರುತ್ತದೆ . ನಾವೆಲ್ಲ ಕರೆಯುವ ಹಾಲಿಗೆ ಮತ್ತದೇ ಹಳೆಯ ಘಮ ಬರುತ್ತದೆ. ಊರ ಮಧ್ಯದ ಅಶೋಕ ವೃಕ್ಷ ಮತ್ತೆ ಹೂವು ಬಿಡುತ್ತದೆ. ನಮ್ಮ ಮೋದದ ದಿನಗಳನ್ನ ಒಮ್ಮೆ ನೆನಪು ಮಾಡಿಕೊಡಲಾದರೂ ಬಾ. ಇನ್ನೊಮ್ಮೆ ಹೇಳುತ್ತೇನೆ, ನನಗೇ ಅಂತಲ್ಲದಿದ್ದರೂ ಇವಕ್ಕಾಗಿಯಾದರೂ ಬಾರೋ ಮಾಧವಾ.

ಹಾಂ, ನನಗಾಗಿಯೂ ನೀನು ಬರಲೇಬೇಕು.ನಾನು ನಿನಗೆ ಮತ್ತೆ ಯಮುನೆಯನ್ನು ತೋರಿಸಬೇಕು. ಅಲ್ಲಿನ ಸುಳಿಯೊಳಗೆ ನಾನು ಮತ್ತೊಮ್ಮೆ ಸಿಲುಕಬೇಕು, ನೀನು ಈಜಿ ಬಂದು ನನ್ನನ್ನ ಬದುಕಿಸಿ, ಸುಳ್ಳೇ ಪಳ್ಳೇ ಬೈದು, ಕಣ್ಣಲ್ಲಿ ಕಣ್ಣನ್ನಿಟ್ಟು ನೋಡಬೇಕು. ನನ್ನ ಬೆನ್ನಿಗೊರಗಿ ಕುಳಿತು, ಸಂಜೆ ನೇಸರ ಮುಳುಗುತ್ತಿರುವಾಗ ಯಾವುದೋ ಒಂದು ಹೊಸ ರಾಗವನ್ನ ನಿನ್ನ ಕೊಳಲಲ್ಲಿ ನುಡಿಸಬೇಕು. ನಮ್ಮಿಬ್ಬರನ್ನ ನೋಡಿ, ಇತರ ಗೋಪಿಕೆಯರಿಗೆ ಹೊಟ್ಟೆಕಿಚ್ಚಾಗ ಬೇಕು.

ಯಾವತ್ತು ಕೂಡ ನಿನ್ನಲ್ಲಿ ಏನನ್ನೂ ಬೇಡದ ನಾನು, ಮೊದಲ ಬಾರಿಗೆ ಕೇಳಿಕೊಳ್ಳುತ್ತಿದ್ದೇನೆ, ಮರಳಿ ಬಾ ಗೋಕುಲಕ್ಕೆ. ಯುದ್ಧದ ಕ್ಷುದ್ರ ರಣಾಂಗಣ, ನಿನ್ನಂತಹ ಮೃದು ಮನಸ್ಸಿನವನಿಗಲ್ಲ. ಅಲ್ಲಿ ಕತ್ತಿಗಳು ಖಣಗುಡೋ ಹೊತ್ತಲ್ಲಿ ನೀನು ನನ್ನ ಗೆಜ್ಜೆಗಳ ಘಳಿರು ನಾದದಲ್ಲಿ ಕಳೆದು ಹೋಗುವಿಯಂತೆ, ಬಾರೋ.

ನೀನು ಬರುವ ತನಕವೂ ಕಾಯುತ್ತಲೇ ಇರುವ,

ನಿನ್ನ ರಾಧೆ.


(ಕನ್ನಡ ಪ್ರಭ ಪ್ರೇಮಪತ್ರ ಸ್ವರ್ಧೆಗೆ ಕಳಿಸಿದ್ದೆ-ಆಯ್ಕೆಯಾಗಿಲ್ಲ)

ಸೋಮವಾರ, ಮೇ 16, 2011

ಫಲಕ ಪ್ರಪಂಚ

ಕತ್ತಲ ನಾಭಿಯನ್ನು ಸೀಳಿಕೊಂಡು ಸಾಗುತ್ತಿರುವ ಬಸ್ಸು, ಮಧ್ಯ ರಾತ್ರಿಯಲ್ಲೋ, ಬೆಳಗಿನ ಜಾವದಲ್ಲೋ ಎಲ್ಲೋ ಗಕ್ಕನೆ ನಿಲ್ಲುತ್ತದೆ. ಜಾಗೃತ ನಿದ್ರಾವಸ್ಥೆಯ ಆ ಸಂದರ್ಭದಲ್ಲಿ ನಾನು ಮಾಡುವ ಮೊದಲ ಕೆಲಸ ಕಿಟಿಕಿಯಾಚೆಗಿನ ಲೋಕದೊಳಕ್ಕೆ ಕಣ್ಣು ಕೀಲಿಸಿ, ಅದ್ಯಾವ ಊರೆಂದು ನೋಡುವುದು. ಗಮ್ಯಕ್ಕಿನ್ನೂ ಎಷ್ಟು ದೂರ ಎಂದರಿತುಕೊಳ್ಳುವ ಬಯಕೆಗೆ ಸಹಕರಿಸೋದು ಹೊರಗೆ ನೇತುಕೊಂಡಿರುವ ಬ್ಯಾಂಕಿನದೋ, ಹೊಟೇಲಿನದೋ, ಮತಾöವುದರದೋ ಫ‌ಲಕ. ಬಸ್ಸಿನ ಇಂಡಿಕೇಟರಿನ ಮಿಣಮಿಣ ಬೆಳಕಿನಲ್ಲಿ ಕಾಣುವ, ಕೆಂಪೋ ಕಪ್ಪೋ ಹಳದಿಯದೋ ಬೋರ್ಡಿನ ಕೆಳಭಾಗದಲ್ಲಿ ಪುಟ್ಟಗೆ ಬರೆದುಕೊಂಡಿರುವ ಆ ಊರಿನ ಹೆಸರು ನನ್ನ ಮುಂದಿನ ದೂರವನ್ನು ನೆನಪಿಸಿ-ಸಂದರ್ಭಕ್ಕೆ ತಕ್ಕ ಹಾಗೆ ಪ್ರಯಾಣವನ್ನು ಸಹ್ಯವಾಗೋ, ತಲೆಬಿಸಿ ಆಗುವ ಹಾಗೋ ಮಾಡುತ್ತದೆ.

ಕೆಲಬಾರಿ ಹಾಗೆ ಬಸ್ಸು ನಿಂತಾಗ ಬೋರ್ಡಿನಲ್ಲಿ ಊರಿನ ಹೆಸರೇ ಕಾಣುವುದಿಲ್ಲ. ಬರೀ ರಾಘವೇಂದ್ರ ಹೊಟೇಲೋ, ಮಹಾಲಕ್ಷ್ಮಿ ಸಾರಿ ಸೆಂಟರೋ ಮಾತ್ರ ಇದ್ದು ನನ್ನ ಕಿರಿಕಿರಿ ಹೆಚ್ಚು ಮಾಡುತ್ತವೆ. ಬಸ್ಸಿನ ಬೆಳಕಿನ ಪರಿಧಿಯ ಆಚೆಗೆಲ್ಲೋ ಇರುವ ಅಂಗಡಿಯ ಫ‌ಲಕದ ಮೇಲೆ ಇರುವ ಹೆಸರು ನೋಡಲು ನಿದ್ದೆಗಣ್ಣಿನಲ್ಲಿ ಅನಿವಾರ್ಯವಾಗಿ ಕೆಳಗಿಳಿಯಬೇಕು. ಊರ ಹೆಸರು ಇಲ್ಲದೇ ಇದ್ದ ಮೇಲೆ ಆ ಬೋರ್ಡಿದ್ದು ಏನು ಪ್ರಯೋಜನ?

ಬೋರ್ಡುಗಳು ಅಂದಮೇಲೆ ಅವಕ್ಕೊಂದಿಷ್ಟು ಮಾನದಂಡಗಳು ಇದ್ದೇ ಇರುತ್ತವೆ... ಅವು ಯಾವುದರ ದ್ದಾದರೂ ಆಗಿರಲಿ. ವೈನ್‌ಶಾಪಿನಿಂದ ತೊಡಗಿ ದೇವಸ್ಥಾನದ ವರೆಗೂ. ಮಧ್ಯದಲ್ಲಿ ಸಂಬಂಧಪಟ್ಟ ಪ್ರಾಪರ್ಟಿಯ ಹೆಸರು, ಕೆಳಗೆ ಅದಿರುವ ಊರು ರಸ್ತೆ ಕ್ರಾಸು ವಿವರ ಮತ್ತೆ ಅಲ್ಲೇ ಬಲಧ್ದೋ ಎಡಧ್ದೋ ಮೂಲೆಯಲ್ಲಿ ಶುರುವಾದ ವರ್ಷ ಇತ್ಯಾದಿ. ಈ ಸ್ಥಾಪನೆಯ ವರ್ಷ ಹಲವು ದುಕಾನುಗಳ ಪ್ರತಿಷ್ಠೆಯ ಪ್ರತೀಕವೂ ಹೌದು. ಹಳೆಯದಾದ ಹಾಗೆ ನಂಬಿಕೆ ಹೆಚ್ಚು. ನಂಬಿಕೆ ಹೆಚ್ಚಾದ ಹಾಗೆ, ವ್ಯಾಪಾರ ಹೆಚ್ಚು. ಇನ್ನು ಕೆಲ ಅಂಗಡಿ ಬೋರ್ಡುಗಳ ಮೇಲೆ ಪ್ರೊಪರೈಟರು ಹೆಸರೂ ಇರುತ್ತದೆ. ಇನ್ನು ಆ ಬೋರ್ಡು ತಯಾರಿಸಿದವನ ವಿವರವೂ ಪುಟ್ಟದಾಗಿ ಅಲ್ಲೇ ಲಭ್ಯ.

ನಮ್ಮೂರು ಕರಾವಳಿಯ ಬೆಲ್ಟಿನಲ್ಲಿರೋದು. ಇಲ್ಲಿನ ಎಲ್ಲ ಅಂಗಡಿಗಳೂ, ಬ್ಯಾಂಕುಗಳೂ, ಶಾಲೆಗಳೂ, ಡಾಕ್ಟ್ರ ಶಾಪುಗಳೂ, ನಾನು ನೋಡಿದಾವಾಗಿನಿಂದಲೂ ತಗಡಿನ ಬೋರ್ಡುಗಳನ್ನೇ ಹೊತ್ತುಕೊಂಡಿದ್ದವು. ಇವೆಲ್ಲ ಮಳೆಗಾಲದಲ್ಲಿ ರಪರಪಾಂತ ಹೊಡೆಯುವ ಮಳೆಯ ಪೆಟ್ಟಿಗೆ ಕಂಗಾಲಾಗಿ, ಅಕ್ಟೋಬರು ಬರುವ ಹೊತ್ತಿಗೆ ಬಿರುದು ಬಾವಲಿ ಅಲಂಕಾರಗಳನ್ನೆಲ್ಲ ಕಳೆದುಕೊಂಡು ತುಕ್ಕುಹಿಡಿದು ಹ್ಯಾಪು ಹ್ಯಾಪಾಗಿ ನಿಂತಿರುತ್ತಿದ್ದವು. ಪೈಂಟರ್‌ ಚಂದ್ರಕಾಂತನಿಗೆ ಆವಾಗ ಭರ್ಜರಿ ಕೆಲಸ. ಅವನು ಅವಕ್ಕೆಲ್ಲ ಮತ್ತೆ ಬಣ್ಣ ಬಳಿದು, ಎಲ್ಲ ಬೋರ್ಡುಗಳ ಎಡಗಡೆ ಮೂಲೆಯಲ್ಲಿ ತನ್ನ ಹೆಸರು ಬರೆದು, ಲ್ಯಾಂಡ್ಲೆ„ನು ನಂಬರು ಬರೆದಿಡುತ್ತಿದ್ದ. ಈಗಲೂ ಹುಡುಕಿದರೆ ಸಿಗಬಹುದೇನೋ. ಆದರೆ ಲ್ಯಾಂಡ್‌ ಲೈನು ಕೆಲಸ ಮಾಡೊದು ಅನುಮಾನ.

ನಮ್ಮೂರಿನ ಚಪ್ಪಲಂಗಡಿ ಹುಸೇನು, ಮೊತ್ತಮೊದಲ ಬಾರಿಗೆ ಈ ತಗಡಿನ ಬೋರ್ಡಿನ ಹಂಗು ತೊರೆದಿದ್ದ. ನಾನಾಗ ಹೈಸ್ಕೂಲಿಗೆ ಕಾಲಿಟ್ಟಿದ್ದೆ ಅನ್ನಿಸತ್ತೆ. ಒಂದು ಸಂಜೆ ಹೊತ್ತಿಗೆ ಅವನ ಅಂಗಡಿ ಹೊರಗೆ ಜನರ ಗುಂಪು.ನಾನೂ ಕುತೂಹಲದಿಂದ ಹೋಗಿ ಇಣುಕಿದರೆ ಅಲ್ಲಿ ಕುಳಿತಿತ್ತು, ಜೈ ಹಿಂದ್‌ ಫ‌ೂಟ್‌ ವೇರ್‌ ಅನ್ನುವು ಕೆಂಪು-ಬಿಳಿ ಬಣ್ಣದ ಫ‌ಲಕ. ಮುದ್ದುಮುದ್ದಾಗಿ ಸ್ಟಿಕ್ಕರ್‌ ಕಟ್ಟಿಂಗ್‌ ಮಾಡಿಸಿಕೊಂಡ ಬೋರ್ಡು. ಆತ ಅದನ್ನ ಮಂಗಳೂರಿನಿಂದ ಮಾಡಿಸಿಕೊಂಡು ತಂದ ಬಗೆಯನ್ನು ಅಲ್ಲಿ ನೆರೆದಿದ್ದ ಮಹಾ ಜನಗಳಿಗೆ ವಿವರಿಸುತ್ತಿದ್ದ. ಬೋರ್ಡಿನೊಳಗೆ ಲೈಟು ಕಲಕ್ಷನ್‌ ಕೊಟ್ಟರೆ ರಾತ್ರಿ ಪೂರಾ ಹೆಸರು ಕಾಣಿಸುತ್ತದೆಯೆಂದ ಅವನಿಗೆ ಅಲ್ಲೇ ಇದ್ದ ಬೀಡದಂಗಡಿ ದಾಸಪ್ಪಣ್ಣ, "ಹೋಗಾ ಮಾರಾಯಾ, ನಮ್ಮ ಇಡೀ ಪೇಟೆಯೇ ರಾತ್ರಿ ಎಂಟಕ್ಕೆ ಬಂದಾಗುತ್ತದೆ, ಆಮೇಲೆ ನಿನ್ನ ಬೋರ್ಡು ನೋಡಿ ಎಂತ ಪಂಜುರ್ಲಿ ದೈವ ಬರ್ತದನ ಮಧ್ಯರಾತ್ರಿಯಲ್ಲಿ ಸ್ಲಿಪ್ಪರು ತಗೊಳ್ಳಲಿಕ್ಕೆ' ಅಂತ ಛೇಡಿಸಿದ್ದ. ಅವನಂಗಡಿ ಬೋರ್ಡಿಗೆ ಕೆಲದಿನ ಎಲ್ಲರೂ ಪಂಜುರ್ಲಿ ಬೋರ್ಡು ಅಂತಲೇ ಕರೀತಿದ್ದರು.

ಆಮೇಲಾಮೇಲೆ ನಮ್ಮ ಊರಿನ ಎಲ್ಲ ಬೋರ್ಡುಗಳೂ ಹಾಗೆಯೇ ಬದಲಾಗಿದ್ದವು. ಸ್ಟಿಕ್ಕರ್‌ ಬೋರ್ಡುಗಳಲ್ಲಿ ಮಾರ್ಪಾಟೂ ಆದವು. ಕಟ್ಟಿಂಗ್‌ ಶಾಪಿನ ರಾಮಣ್ಣ ಶಾರುಖ್‌ ಖಾನ್‌ನ ಫೋಟೋವನ್ನ ತನ್ನ ಫ‌ಲಕಕ್ಕೆ ಹಾಕಿಸಿಕೊಂಡರೆ, ಜ್ಯೋತಿ ಗಿಫ್ಟ್ ಸೆಂಟರ್‌ ಹೆಸರಿನ ಪಕ್ಕ ಐಶ್ವರ್ಯಾ ರೈ ನಗುತ್ತಿದ್ದಳು. ಇವರೆಲ್ಲ ನಮ್ಮ ದೇಶದ ಅದೆಷ್ಟು ಇಂತಹ ಬೋರ್ಡುಗಳಲ್ಲಿ ನಗುತ್ತ ನಿಂತು, ಯಾರು ಯಾರಿಗೆ ಹೇಗೆಲ್ಲ ಲಾಭ ಮಾಡಿಕೊಡುತ್ತಿದ್ದಾರೋ ಏನೋ.

ಬರೀ ಬೋರ್ಡಿನಿಂದಲೇ ಲಾಭ ಮಾಡಿಕೊಳ್ಳುವುದನ್ನು ನಾನು ಸರಿಯಾಗಿ ಗಮನಿಸಿದ್ದು$ಮಾತ್ರ ಬೆಂಗಳೂರಿಗೆ ಬಂದ ಮೇಲೆಯೇ. ಒಂದು ಅಂಗಡಿಗೆ ಒಂದಕ್ಕಿಂತ ಹೆಚ್ಚು ಬೋರ್ಡುಗಳಿರಬಹುದು ಅಂತ ಗೊತ್ತಾಗಿದ್ದೂ ಇಲ್ಲಿಯೇ. ಒಂದರಲ್ಲಿ ಅಂಗಡಿ ಹೆಸರು, ಮತ್ತೂಂದರಲ್ಲಿ ಅಲ್ಲಿನ ಆಫ‌ರುಗಳ ವಿವರಣೆ.
ರಿಯಾಯಿತಿ ದರದಲ್ಲಿ ಮಾರಾಟ, ಕೇವಲ ಕೆಲವೇ ದಿನ ಎಂಬ ಶಾಶ್ವತವಾದ ಟೆಂಪರರಿ ಬೋರ್ಡುಗಳನ್ನ ಇಲ್ಲಿ ಬೇಕಷ್ಟು ಕಂಡಿದ್ದೇನೆ, ನೀವುಗಳೂ ಕಂಡಿರುತ್ತೀರಿ. ಅಮೋಘ ಆಫ‌ರುಗಳ ಆಸೆ ಹುಟ್ಟಿಸಿ, ಬನಿಯನ್ನು ಕೊಳ್ಳೋಕೆ ಬಂದವರು ಅರ್ಧ ಅಂಗಡಿ ಖರೀದಿಸಿ ಹೋಗುವಂತೆ ಮಾಡಲು ಇವುಗಳೇ ಕಾರಣ. ಹೀಗೆ, ಇಲ್ಲಿನ ಫ‌ಲಕಗಳಿಗೆ ಬರಿಯ ಗುರುತು ಹೇಳುವುದಕ್ಕಿಂತ ಗುರುತರವಾದ ಜವಾಬ್ದಾರಿ ಇದೆ.

ಜವಾಬ್ದಾರಿ ಇಲ್ಲದ ಬೋರ್ಡುಗಳಿಂದ ಗಲಾಟೆ ಆಗಿದ್ದೂ ಉಂಟು. ದೇವರ ಹೆಸರಿಟ್ಟ ಬಾರು ವೈನ್‌ ಶಾಪುಗಳ ಬಗ್ಗೆ ನಮ್ಮಲ್ಲೆಲ್ಲ ದೊಂಬಿ ಆಗಿದ್ದೂ ಇದೆ. ಆದರೆ ಈಗೀಗ ಅದನ್ನೆಲ್ಲ ಜನ ಎಷ್ಟು ಆರಾಮಾಗಿ ತಗೊಂಡಿದ್ದಾರೆಂದರೆ, ಅಂದು ಗಲಾಟೆಯಲ್ಲಿ ಬೆಂಕಿ ಹಚ್ಚಿದ ವ್ಯಕ್ತಿಯೇ ಇಂದು ಶ್ರೀ... ಬಾರ್‌ನ ಒಡೆಯ.
ಅವನಪ್ಪ$ಈಗ ಬಾರ್‌ ಇರೋ ಜಾಗದಲ್ಲಿ 20-30 ವರ್ಷಗಳಿಂದ ದೇವಪ್ಪಣ್ಣ ಅಂಡ್‌ ಸನ್ಸ್‌ ಅನ್ನೋ ಹೆಸರಿನ ದಿನಸಿ ಅಂಗಡಿ ನಡೆಸುತ್ತಿದ್ದರು. ಮಗರಾಯ ಒಂದು ರೌಂಡ್‌ ಬೊಂಬಾಯಿಯೆಲ್ಲ ತಿರುಗಿ ದುಡ್ಡು ಮಾಡಿಕೊಂಡು ಬಂದ. ಅಪ್ಪನಿಗೆ ವಯಸೂÕ ಆಗಿತ್ತು. ದಿನಸಿ ಅಂಗಡಿ ಕೆಡವಿದ ಮಗ ಇಷ್ಟದೇವರ ಹೆಸರಲ್ಲಿ ಬಾರು ಮಾಡಿಕೊಂಡು ಆರಾಮಾಗಿದ್ದಾನೆ. ಪೇಟೆಯ ಮಧ್ಯದಲ್ಲಿ ನೊರೆ ತುಂಬಿದ ಬಿಯರ್‌ ಮಗ್‌ ಹಿಡಿದ ಸುಂದರಿ ನಿಂತಿದ್ದಾಳೆ,ಫ‌ಲಕದೊಳಗೆ.

ಮೊದಲೆಲ್ಲ ಬೇಕರಿಯ ಫ್ರಿಡಿjನೊಳಗೆ, ಬಟ್ಟೆಯಂಗಡಿಯ ಕಪಾಟಿನೊಳಗೆ, ಆರಾಮಾಗಿ ಕೂತಿರುತ್ತಿದ್ದ ಕೂಲ್‌ ಡ್ರಿಂಕು, ಚಡ್ಡಿ ಬನೀನುಗಳು ಬೋರ್ಡಿಗೇ ಬಂದು ಕೂತಿವೆ. ಬರೀ ದುರ್ಗಾ ಕೂಲ್‌ ಡ್ರಿಂಕ್ಸ್‌ ಅಂದ್ರೆ ಸಾಲದು ಈಗ! ಆ ಬೋರ್ಡಲ್ಲಿ ಯಾವುದೋ ಬಹುರಾಷ್ಟ್ರೀಯ ಕಂಪನಿಯ ಬ್ರಾಂಡಿನ, ಐಸ್‌ ಬಕೇಟಿನಲ್ಲಿಟ್ಟ ಬಾಟಲಿಂದ ಕಪ್ಪೋ, ಆರೆಂಜೋ ಬಣ್ಣದ ನೀರು ಹಾರುತ್ತಿರಬೇಕು- ಸದಾ ಕಾಲ. ಅವರ ಕಂಪನಿಯ ಜಾಹೀರಾತಿನ ಕೆಳಗೆ ಪುಟ್ಟದಾಗಿ, ಕೆಟ್ಟ ಕನ್ನಡದಲ್ಲಿ ಬರೆದ ಶಾಪ್‌ನ ಹೆಸರು ಕಂಡರೆ ಪುಣ್ಯ. ಅಂದು ಹುಸೇನಂಗೆ ಬೈದಿದ್ದ ದಾಸಪ್ಪಣ್ಣನೂ ಈಗ ತನ್ನ ಬೀಡಾ ಅಂಗಡಿಯ ಮೇಲೆ, ದೊಡ್ಡದೊಂದು ಸಿಗರೇಟು ಕಂಪನಿಯ ಬೋರ್ಡು ಹಾಕಿಕೊಂಡು ಬೀಡಾ ಶಾಪ್‌ ಹೆಸರನ್ನು ಕೆಳಗೆ ಸಣ್ಣಕೆ ಬರೆಸಿಕೊಂಡಿದ್ದಾರೆ. ದಸ್‌ ಪಾನ್‌ ಶಾಪೇ ಅಂತ. ದಾಸ್‌ ಹೋಗಿ ದಸ್‌ ಆಗಿ, ಅಂಗಡಿ ಶಾಪೇಯಾಗಿ ಒಟ್ಟಾರೆ ಕನ್ನಡಕ್ಕೇ ಶಾಪ ತಟ್ಟಿದಂತೆ ಕಾಣುತ್ತದೆ. ಅವರ ಹೆಸರಿನ ಕತ್ತು ಹಿಸುಕಿದ್ದನ್ನು ಹೇಳಲು ಹೋದರೆ ಆ ಸಿಗರೇಟು ಜಾಹೀರಾತಿನಿಂದಾಗಿ ತನಗೆ ಆದ ಲಾಭವನ್ನು ನನಗೆ ವಿವರಿಸಿ ನನ್ನ ಹೆಸುÅ ಎಲ್ಲರಿಗು ಗೊತ್ತುಂಟು ಮಾರ್ರೆà, ಅಷ್ಟಕ್ಕೂ ಜನ ನನ್ನ ಅಂಗಡಿ ಬೋರ್ಡು ನೋಡಿ ಬರುದಿಲ್ಲ. ನಾನು ಕೊಡೊ ಬೀಡದ ರುಚಿಗೆ ಬರುದು. ಬೋರ್ಡಿನಲ್ಲಿ ಎಂತ ಸಂಕಪಾಶಾಣ ಬರೆದಾದ್ರೂ ಸಾಯ್ಲಿ ಅವ್ರು ಎಂದು ಬಾಯಿ ಮುಚ್ಚಿಸಿದ್ದರು.

ಆದರೆ, ಬೆಂಗಳೂರಿನ ತುಂಬ ತುಂಬಿರುವ ಲಕ್ಷಗಟ್ಟಲೆ ಬೋರ್ಡುಗಳ ಕೋಟಿಗಟ್ಟಲೆ ತಪ್ಪುಗಳನ್ನು ನೋಡಿದ ಮೇಲೆ, ದಾಸಪ್ಪಣ್ಣ ಹೇಳಿದ್ದು ಸತ್ಯ ಅನ್ನಿಸಿದ್ದಂತೂ ಹೌದು. ಅತಿ ಕೆಟ್ಟ ಕನ್ನಡದಲ್ಲಿ, ತಮಗೆ ಬೇಕಾದಲ್ಲಿ ಮಹಾಪ್ರಾಣ ಅಲ್ಪಪ್ರಾಣ ಒತ್ತಕ್ಷರಗಳನ್ನು ತುಂಬಿಕೊಂಡು ಕನ್ನಡವನ್ನು ನಿಧಾನ ಕೊಲ್ಲುತ್ತಿವೆ, ಇಲ್ಲಿನ ಫ‌ಲಕ ಸಾಮ್ರಾಜ್ಯ. ಅದರ ಬಗ್ಗೆ ಬರೆಯೋಕೆ, ಮತ್ತೂಂದೇ ಪ್ರಬಂಧ ಬೇಕು. ಈಗೀಗ ಈ ಮೇಲ್‌ಗ‌ಳಲ್ಲಿ ಕೂಡ ಸ್ಪೆಲ್ಲಿಂಗು ಮಿಸ್ಟೇಕು ಹೊತ್ತಿರುವ, ಚಿತ್ರ ವಿಚಿತ್ರ ಅಸಂಬಂದ್ಧ ಬೋರ್ಡು ಬರಹಗಳ ಫಾರ್ವರ್ಡುಗಳೂ ಬರುತ್ತವೆ. ಅವುಗಳಲ್ಲಿ ಚೀನಾ, ಜಪಾನಿಂದ ಹಿಡಿದು ಅಮೆರಿಕದ ಅಪಸವ್ಯಗಳೂ ತುಂಬಿರುವುದರಿಂದ ನಮ್ಮಲ್ಲಿ ಮಾತ್ರ ಹೀಗಲ್ಲವಲ್ಲ ಅಂದುಕೊಂಡು ಸಮಾಧಾನ ಪಟ್ಟುಕೊಳ್ಳುವಂತಾಗಿದೆ. ಗೆಳತಿಯೊಬ್ಬಳು ಇದಕ್ಕಾಗೇ ಬ್ಲಾಗೊಂದನ್ನೂ ನಡೆಸುತ್ತಿದ್ದಾಳೆ!

ನಾನು, ನನ್ನ ಗೆಳೆಯ ಹರ್ಷ ಒಂದು ದಿನ ಫ್ಲೆಕ್ಸ್‌ ಫ‌ಲಕಗಳನ್ನ ತಯಾರು ಮಾಡುವ ಅಂಗಡಿಯ ಎದುರೇ ಹಾದು ಹೋಗುತ್ತಿದೆವು. ಹರ್ಷನ ಗಮನ ಆ ಅಂಗಡಿಯ ಬೋರ್ಡಿನ ಕಡೆ ಹೋಗಿ, ಅದನ್ನ ನನಗೆ ತೋರಿಸಿ ನಕ್ಕ. ಪಲಕ ಪ್ರಪಂಚ ಎಂಬ ನಾಮಧೇಯ ಹೊತ್ತು ನಿಂತಿತ್ತು ಆ ಶಾಪ್‌. ಉತ್ತರಕರ್ನಾಟಕದ ಕಡೆ, ಪಲಕ ಅಂದ್ರೆ ರವಿಕೆ ಅಂತ ಅರ್ಥ. ತನ್ನ ಅಂಗಡಿಯ ಫ್ಲೆಕ್ಸನ್ನೇ ತಪ್ಪು$ಬರಕೊಂಡೊನು, ಉಳಿದೋರಿಗೇನು ಮಾಡಿ ಕೊಟ್ಟಾನು!

ಹೊಸ ತಂತ್ರಜಾnನ ಬಂದ ಹಾಗೆ ಬೋರ್ಡುಗಳ ಸೊಗಸು ಕೂಡ ಬದಲಾಗಿದೆ. ಒಳಗೆಲ್ಲ ಪಕಪಕ ಲೈಟು ಕುಣಿಯುವ, ಬದಲಾಗುವ ಬಣ್ಣದ, ವರ್ಣಮಯ ಫ‌ಲಕಗಳು ಅಡಿಗೊಂದಾಗಿವೆ. ಬ್ರಿಗೇಡು ಎಂಜಿ ರೋಡಿರಲಿ, ಬೆಂಗಳೂರಿನಾಚೆಗಿನ ಪುಟ್ಟ ಪಟ್ಟಣಗಳೂ, ಕೊನೆಕೊನೆಗೆ ರಾಮೋಹಳ್ಳಿ, ಸೋಮನಹಳ್ಳಿಗಳು ಕೂಡ ಇಂತಹ ಟ್ರೆಂಡೀ ಬೋರ್ಡುಗಳನ್ನ ತುಂಬಿಕೊಂಡು ಲಕಲಕಿಸುತ್ತಿವೆ. ಸಿದ್ದರಾಮ ಅಂಡ್‌ ಸನ್ಸ್‌ ಪ್ರಾವಿಷನಲ್‌ ಸ್ಟೋರ್‌ಗಳು, ಎಸ್‌ ಅಂಡ್‌ ಎಸ್‌ ಸೂಪರ್‌ ಬಜಾರ್‌ಗಳಾಗಿ ಬದಲಾಗಿ ಹೊಸ ರೂಪ ತೊಟ್ಟಿವೆ. ಈಗ ತಾನೇ ದಿನಸಿಯಂಗಡಿಗೆ ಕಾಯಕಲ್ಪ$ ಮಾಡಿದ ಯಜಮಾನನಿಗೆ ನೆತ್ತಿಯ ಫ‌ಲಕದಲ್ಲಿ ಮಿನುಗುತ್ತಿರುವ ಬಲ್ಪಿನ ಬೆಳಕು, ಉಜ್ವಲ ಭವಿಷ್ಯದ ಪ್ರತೀಕವಾಗಿ ಕಾಣುತ್ತದೆ.

ಇತ್ತೀಚಿಗೆ ಊರಿಗೆ ಹೋಗಿದ್ದೆ. ಊರಿನಲ್ಲಿ ಬಸ್ಸಿಳಿದ ಸಂತಸದಲ್ಲೇ ಹೆಜ್ಜೆ ಹಾಕುತ್ತ ಸುತ್ತಮುತ್ತ ಕಣ್ಣಾಡಿಸಿದೆ. ನೋಡಿದರೆ, ಏನೆಲ್ಲ ಬದಲಾದರೂ, ವರುಷಗಟ್ಟಲೆಯಿಂದ ಎಂಥದೂ ಬದಲಾವಣೆಯಿಲ್ಲದೆ ಹಾಗು ಹಾಗೇ ಇದ್ದ ನನ್ನ ನೆಚ್ಚಿನ ಟೈಲರಂಗಡಿಯ ಬೋರ್ಡು ಬದಲಾಗಿತ್ತು. ಕಾರ್ತಿಕ್‌ ಟೈಲರ್‌ ಎಂಬ ಅತ್ಯಂತ ಸರಳ ನಾಮಧೇಯದೊಂದಿಗೆ, ಬಸ್ಟ್ಯಾಂಡಿನ ಪಕ್ಕದಲ್ಲಿದ್ದ ಪುಟ್ಟ ಟೆನ್‌ ಬೈ ಟೆನ್‌ ಜಾಗದಲ್ಲಿ ಆ ಅಂಗಡಿ ನನಗೆ ಬುದ್ಧಿ ತಿಳಿದಾಗಿನಿಂದಲೂ ಇತ್ತು. ವರುಷಗಟ್ಟಲೆಯ ಧೂಳು ತಿಂದ ಪುಟ್ಟದೊಂದು ಮರದ ಬೋರ್ಡಲ್ಲಿ ಢಾಳು ನೀಲಿಯಲ್ಲಿ ಬರೆದ ಕಾರ್ತಿಕ್‌ ಟೈಲರ್‌ ಎಂಬ ಸೊಟ್ಟ ಅಕ್ಷರಗಳು ಯಾರಿಗಾದರೂ ಕಂಡೇ ಕಾಣುತ್ತಿತ್ತು. ಆ ಬೋರ್ಡಿನ ಬದಲು ಅಲ್ಲೀಗ, ಕಾರ್ತಿಕ್‌ ಮೆನ್ಸ್‌ ವೇರ್‌, ಸ್ಪೆಷಲಿಸ್ಟ್ಸ್ ಇನ್‌ ಸೂಟ್ಸ್‌... ಇತ್ಯಾದಿ ಇತ್ಯಾದಿ ಇಂಗ್ಲೀಷ್‌ ವಿಶೇಷಣಗಳನ್ನೆಲ್ಲ ಆರೋಪಿಸಿಕೊಂಡ ಫ‌ಳ ಫ‌ಳಿಸೋ ಫ್ಲೆಕ್ಸ್‌ ಫ‌ಲಕ ಎದ್ದು ನಿಂತಿತ್ತು.

ಸಂಜೆ ತಿರುಗಿ ಪೇಟೆ ಕಡೆ ಬಂದಾಗ ಕೇಳಿದರೆ ಅಲ್ಲಿನ ಟೈಲರ್‌ ಸಂಜೀವಣ್ಣ ಅತ್ಯಂತ ಸರಳವಾಗಿ, "ಕಾಲ ಬದಲಾಗಿದೆ ಮಾರ್ರೆ. ಗಿರಾಕಿ ಬೇಕೂಂದ್ರೆ ಹೀಗೆಲ್ಲ ಮಾಡ್ಬೇಕು ನಾನು. ಒಳಗೆ ಗೋಳಿಸೊಪ್ಪಿದ್ರೂ ತೊಂದ್ರೆಯಿಲ್ಲ, ಹೊರಗೆ ಶೃಂಗಾರ ಬೇಕಲ್ಲ... ನಿಮೆªàನಾದ್ರೂ ಬಟ್ಟೆ ಉಂಟೂ ಹೊಲೀಲಿಕ್ಕೆ? ಮೊದಲೆಲ್ಲ ಯುನಿಫಾರ್ಮಿನಿಂದ ಹಿಡಿದು ನಿಮ್ಮ ಎಲ್ಲ ಶರಟು -ಪ್ಯಾಂಟು ಹೊಲಿದುಕೊಟ್ಟಿದ್ದೆ. ಈಗೆಲ್ಲ ಬಿಡಿ, ನೀವು ಆ ಬೆಂಗಳೂರಿನ ದೊಡ್ಡ ದೊಡ್ಡ ಹೆಸರಿರೋ ಶೋ ರೂಮಿನಲ್ಲಿ ರೆಡಿಮೇಡ್‌ ಶರ್ಟು ಪ್ಯಾಂಟು ಒಂದಕ್ಕೆರಡು ಕೊಟ್ಟು ತಗೊಳ್ಳುದೇನೋ ಅಲ್ವಾ?' ಅಂದರು. ಸಂಜೀವಣ್ಣನ ಅಂಗಡಿಯ ಬೋರ್ಡು ಬದಲಾಗಿದ್ದಕ್ಕೂ, ನಾನು ಬದಲಾಗಿದ್ದಕ್ಕೂ ಎಷ್ಟು ಸಂಬಂಧ ಇದೆ ಅಂತ ಯೋಚಿಸುತ್ತ ಮನೆ ಕಡೆ ಹೊರಟೆ.

ದಾರಿಯಲ್ಲಿ ಬಸ್ಸು ನಿಲ್ಲದ ಶಿಥಿಲ ಬಸ್‌ಸ್ಟ್ಯಾಂಡಿನ ಮೇಲಿದ್ದ ಮರದ ಹಳೆಯ ಫ‌ಲಕದ ಪಕ್ಕ , ಅಲ್ಲೇ ಹುಟ್ಟಿದ್ದ ಎಳೆಯ ಅರಳಿ ಗಿಡವೊಂದು ಸಂಜೆ ಸೂರ್ಯನ ಬಿಸಿಲಿಗೆ ಮೈಕಾಯಿಸಿಕೊಳ್ಳುತ್ತಿತ್ತು.

ಸೋಮವಾರ, ಮೇ 09, 2011

ಮದುವೆ ಕರೆಯ

ಅಖಂಡ ಇಪ್ಪತ್ತಾರು ವರ್ಷಗಳ ಕಾಲ ಬ್ರಹ್ಮಚಾರಿಯಾಗಿದ್ದ ನಾನು, ಇಪ್ಪತ್ತೇಳಕ್ಕೆ ಕಾಲಿಡುತ್ತಿದ್ದ ಹಾಗೆ ಮದುವೆಯಾಗಬೇಕಾಯಿತು. ಮೆಚ್ಚಿ ಮಾಡಿದ ಪ್ರೀತಿ, ಹೆತ್ತವರೊತ್ತಾಯ ಇದಕ್ಕೆ ಕಾರಣವಾದವು. ಒಪ್ಪಿಗೆ ಕೊಟ್ಟಿದ್ದೇ ತಡ, ಗಾಣಕ್ಕೆ ಸಿಕ್ಕ ಕಬ್ಬಿನಂತಾಯಿತು ನನ್ನ ಗತಿ. ಏನಕ್ಕೂ ನನ್ನನ್ನು ಕೇಳಲು ಹೋಗದೇ ಮನೆಮಂದಿ ವಿವಾಹದ ಕೆಲಸಗಳನ್ನು ಶುರುಮಾಡಿಕೊಂಡಿದ್ದರು. ನನಗೆ ಒಂದೆಡೆ ಹೊಸ ಜೀವನ ಆರಂಭವಾಗುವ ಖುಷಿ, ಇನ್ನೊಂದೆಡೆ ಕಣ್ಣೆದುರು ಜವಾಬ್ದಾರಿಗಳ ಬೆಟ್ಟ.

ನಾನು ಭಾವೀ ಪತ್ನಿ ಜೊತೆಗೂಡಿ ಮದುವೆಯಾಗಿ ಪಳಗಿರುವ ಸ್ನೇಹಿತರುಗಳ ಬಳಿ, ವಿವಾಹದ ಹಿಂದೆ-ಮುಂದೆ ಮಾಡಿಕೊಳ್ಳಬೇಕಾದ ತಯಾರಿಗಳ ಬಗ್ಗೆ ಕೋಚಿಂಗ್ ಕ್ಲಾಸುಗಳನ್ನು ತೆಗೆದುಕೊಂಡೆ. ಮನೆ-ಅಡ್ವಾನ್ಸು, ಚಿನ್ನ-ಬಟ್ಟೆ ಖರೀದಿಗಳ ಸಲಹೆ ನೀಡಿದ ನಂತರ ಎಲ್ಲ ಹೇಳಿದ್ದು ಒಂದೇ ಮಾತು, ಮದುವೆಗೆ ಕರಿಯೋದು ಇದೆ ನೋಡು, ಅದು ಅತ್ಯಂತ ಮುಖ್ಯ ವಿಚಾರ. ಎಲ್ಲರ ಅನುಭವಕ್ಕೂ ಜನ್ಯವಾಗಿದ್ದಿದ್ದು ಏನೆಂದರೆ ಏನೇ ಹೆಸರು ಬರೆದುಕೊಂಡರೂ, ಎಕ್ಸೆಲ್ ಶೀಟಲ್ಲಿ ಹೆಸರು ಟೈಪಿಸಿ ಪ್ರಿಂಟ್ ಔಟ್ ತೆಗೆದಿಟ್ಟುಕೊಂಡರೂ, ಹತ್ತಿರದ ಗೆಳೆಯನಿಗೋ, ಎಲ್ಲೋ ಇರುವ ಅತ್ತೆಯ ತಮ್ಮನ ಮಗನಿಗೋ ಕರೆಯೋಲೆ ತಲುಪಿರುವುದಿಲ್ಲ. ಅವರೋ ಅದಕ್ಕಾಗೇ ಯುಗಪರ್ಯಂತರ ಕಾದಿದ್ದು ಮುಂದೆಲ್ಲೋ ಸಿಕ್ಕಾಗ ನೀನು ಬಿಡಪ್ಪ ದೊಡ್ಡ ಮನುಷ್ಯ- ನಮ್ಮಂತಹ ಬಡಪಾಯಿಗಳು ಎಲ್ಲಿ ನೆನಪಿರುತ್ತಾರೆ. ನಮ್ಮನ್ನೆಲ್ಲಕರೀಬೇಕು ಅಂತಿಲ್ಲ ಬಿಡು, ನೀವು ದಂಪತಿ ಚೆನ್ನಾಗಿದ್ದೀರೋ, ಅಷ್ಟು ಸಾಕು ಎಂದು ಸಾರ್ವಜನಿಕವಾಗಿ ಹಾರೈಸಿ ಸೇಡು ತೀರಿಸಿಕೊಳ್ಳುತ್ತಾರೆ.

ಹೇಗೋ ಜೀವನ ಎಲ್ಲಾ ಕಷ್ಟಪಟ್ಟು ಗಳಿಸಿರುವ ಮರ್ಯಾದೆಯನ್ನು ಖಂಡಿತ ಹಾಳು ಮಾಡಿಕೊಳ್ಳಬಾರದು ಎಂದು ನಿಶ್ಚಯಿಸಿ, ಅದನ್ನ ಉಳಿಸಿಕೊಳ್ಳೋಕೆ ಹತ್ತು ರೂಪಾಯಿ ಕೊಟ್ಟು ನೋಟ್ ಬುಕ್ಕೊಂದನ್ನು ಖರೀದಿಸಿದೆ. ಯಾವುದಕ್ಕೂ ವಿಘ್ನ ಬರದಿರಲಿ ಎಂದು ಮೊದಲಿಗೊಂದು ಓಂ ಬರೆದು ಸಮಸ್ತ ಗೆಳೆಯರ, ಸಂಬಂಧಿಗಳ ಹೆಸರು ಬರೆಯಲು ಆರಂಭಿಸಿದೆ. ಹತ್ತಿರದ ಗೆಳೆಯರು, ಈಗಿನ ಆಫೀಸು, ಹಳೇ ಆಫೀಸು ಮತ್ತು ಮತ್ತೂ ಹಳೆಯ ಆಫೀಸಿನ ಕೊಲೀಗುಗಳು, ಕಾಲೇಜು, ಪದವಿ,ಪಿಯೂಸಿ,ಹೈಸ್ಕೂಲು ಸಹಪಾಠಿಗಳು, ಅಪ್ಪನ ಕಡೆಯ ನೆಂಟರು, ಅಜ್ಜನ ಮನೆ ಹಾಯ್ಸಾಲು ಎಲ್ಲ ಬರೆದು ಮುಗಿಸಿದೆ.

ದೂರದಿಂದ ನೋಡಿದರೆ ರಾಮಜಪ ಬರೆದಂತಿದ್ದ ಹಾಳೆಗಳನ್ನು ಮಗುಚುತ್ತಿದ್ದಂತೆ ಅರಿವಾಗಿ ಹೋಯಿತು, ಈ ಜನ್ಮದಲ್ಲಿ ನನ್ನ ಮರ್ಯಾದೆ ಕೆಡೋದು ತಪ್ಪಿದ್ದಲ್ಲ ಅಂತ. ಅಲ್ಲಿ ಬರೆದಿದ್ದ ಭೂಮಂಡಲದ ಅರೆವಾಸಿ ನಿವಾಸಿಗಳನ್ನು ಕರೆಯುವುದಕ್ಕೇ ಏನಿಲ್ಲವೆಂದರೂ, ನಾಕಾರು ತಿಂಗಳಾದರೂ ಬೇಕಿತ್ತು. ಅಲ್ಲಿಯವರೆಗೆ ಮಾನದ ಬಗ್ಗೆ ವಿಚಾರ ನಡೆಸಿದ್ದ ಮನಸ್ಸು ಈ ಲಿಸ್ಟು ಕಂಡದ್ದೇ ಅದನ್ನೆಲ್ಲ ಕ್ಷಣಾರ್ಧದಲ್ಲಿ ತಳ್ಳಿ ಹಾಕಿತು. ಯಾರೋ ಏನೋ ಹೇಳ್ತಾರೆ ಅಂತೆಲ್ಲ ತಲೆಕೆಡಿಸಿಕೊಳ್ಳೋದು ತಪ್ಪೂ, ನಿನ್ನ ಲೈಫು ನಿನ್ನದು, ನಿನ್ನ ಹತ್ತಿರದ ಬಳಗವನ್ನಾದರೂ ನೆಟ್ಟಗೆ ಕರಿ. ನಿನ್ನ ಮರ್ಯಾದೆಯನ್ನು ಅವರು ರಕ್ಷಿಸುತ್ತಾರೆ ಅಂತ ಬುದ್ಧಿ ಹೇಳಿತು.

ಪುಸ್ತಕದಲ್ಲಿ ತುಂಬಿ ಹೋಗಿದ್ದ ಸಾವಿರಾರು ಹೆಸರುಗಳಲ್ಲಿ ಆಪ್ತರು, ಅನಿವಾರ್ಯರು, ಸಂಬಂಧಿಕರು ಎಂಬೆಲ್ಲ ಕ್ಲಿಷ್ಟಕರ ಸುತ್ತುಗಳನ್ನು ದಾಟಿ ಕೊನೆಯ ಹಂತಕ್ಕೆ ಬಂದ ಅದೃಷ್ಟಶಾಲಿಗಳಿಗೆ ಮಾತ್ರ ಮದುವೆಯ ಕರೆಯೋಲೆ ನೀಡಲಾಗುವುದು ಎಂದು ನಿರ್ಧರಿಸಿದೆ. ಈ ಮಧ್ಯ ಆರ್ಕುಟ್, ಫೇಸ್ ಬುಕ್ ಮತ್ತು ಜೀ ಮೇಲ್ ಕಾಂಟಾಕ್ಟುಗಳಿಂದ ಹಲವಷ್ಟು ಹೆಸರುಗಳಿಗೆ ವೈಲ್ಡ್ ಕಾರ್ಡ್ ಎಂಟ್ರಿ ದೊರಕಿತು.
ಬಡಬಡನೆ ಮದುವೆ ಕಾರ್ಡು ಅಚ್ಚು ಹಾಕಿಸಿ, ಕರ್ಮಕ್ಷೇತ್ರ ಬೆಂಗಳೂರಿನ ಬಂಧುಗಳು ಮತ್ತು ಸ್ನೇಹಿತರನ್ನು ಡೇ ಎಂಡುಗಳಲ್ಲಿ, ವೀಕೆಂಡುಗಳಲ್ಲಿ ಕರೆದಿದ್ದಾಯ್ತು. ಉಳಿದೆಲ್ಲರಿಗೆಲ್ಲ ಈ ಮೇಲ್ ಇದ್ದೇ ಇತ್ತು. ಕರೆಯೋಲೆ ಸ್ಕ್ಯಾನು ಮಾಡಿ , ಕಾಂಟಾಕ್ಟುಗಳನ್ನ ಹೆಕ್ಕಿ ತುಂಬಿ ಸೆಂಡ್ ಬಟನೊತ್ತಿದ್ದರೆ, ಅಮೇರಿಕದಲ್ಲಿದ್ದವರಿಗೂ ಕರೆದಾಯ್ತು, ಅರಕಲಗೂಡೂ ಮುಗಿದಾಯ್ತು! ಎಲ್ಲ ಆರಾಮಾಗಿ ನಡೀತಿದೆ ಎನ್ನುವಾಗ ಅಪ್ಪ ಫೋನಾಯಿಸಿ, ಮಗನೇ ಊರಿನ ಕಡೆ ಕರಿಯೋಕೆ ಹೋಗಬೇಕಲ್ಲಪ್ಪ, ಯಾವಾಗ ಬರುತ್ತೀಯಾ ಎಂದರು. ನಗರ ಜೀವನದ ಗೊಂದಲ ಗಲಿಬಿಲಿಗಳಲ್ಲಿ ಕಳೆದೇ ಹೋಗಿದ್ದ ನನಗೆ ಜ್ಞಾನೋದಯವಾಯಿತು.

ಮದುವೆಗೆಂದು ಹಾಕಿದ್ದ ರಜೆಯನ್ನು ಇನ್ನೊಂದೆರಡು ದಿನಗಳಷ್ಟು ವಿಸ್ತರಿಸಿ, ಮನೆಗೆ ಬಂದೆ. ಒಂದು ದಿನ ಶುಭ ಸಮಯ ನೋಡಿ ನಮ್ಮ ಮದ್ವೆ ಕರ್ಯದ ಕಾರ್ಯಕ್ರಮ ಆರಂಭವಾಯಿತು. ನಾಲ್ಕು ಮೂಲೆಗೂ ಅರಶಿನ ಕುಂಕುಮ ಹಚ್ಚಿಕೊಂಡಿರೋ ವಿವಾಹದ ಕರೆಯೋಲೆಗಳು ಮತ್ತು ಅಕ್ಷತೆ ತುಂಬಿರುವ ಪುಟ್ಟ ಬೆಳ್ಳಿ ಬೋಗುಣಿ ಸಮೇತ ಹೊರಟಿದ್ದೂ ಆಯಿತು.

ನನ್ನ ಭಾವ ಕೋಶದ ಭಿತ್ತಿಯಲ್ಲಿ ಹೊಸ ಚಿತ್ತಾರಗಳನ್ನು ಮೂಡಿಸಿದ ಪ್ರಯಾಣ ಅದು.ನನ್ನಪ್ಪನಿಗೆ ಅವರು ಓದುವ ಕಾಲದಲ್ಲಿ ಸಹಾಯ ಮಾಡಿದ್ದ ಯಾರೋ ಅಜ್ಜ, ಅಮ್ಮನಿಗೆ ಕಷ್ಟಕಾಲದಲ್ಲಿ ಆಶ್ರಯವಿತ್ತ ಇನ್ನಾರೋ ಹಿತೈಷಿ, ಮಗುವಾಗಿದ್ದಾಗ ಸತ್ತೇ ಹೋಗುವಂತಾಗಿದ್ದ ನನ್ನನ್ನು ಅದೇನೋ ಔಷಧಿ ಕೊಟ್ಟು ಬದುಕಿಸಿದ ಅಜ್ಜಿ, ಇವರನ್ನೆಲ್ಲ ಮದುವೆಗೆ ಕರೆಯುವ ನೆಪದಲ್ಲಿ ಭೇಟಿ ಮಾಡಿದ ಹಾಗಾಯಿತು. ನನ್ನ ನೋಟ್ ಬುಕ್ಕಿನ ಹಾಳೆಗಳಲ್ಲಿ ಬರೆದಿಟ್ಟ ಹೆಸರುಗಳ ಪರಿಧಿಯನ್ನು ಮೀರಿದ, ಆದರೂ ಯಾವುದೋ ಸಂಬಂಧದ ಮಾಯಾತಂತುಗಳ ಮೂಲಕ ನಾನು ನಾನಾಗಿರಲು ಕಾರಣರಾದ ಈ ಜೀವಗಳನ್ನು ಕಂಡ ಸಂತಸ, ಅನಿರ್ವಚನೀಯ.

ಮರೆತ ಪರಿಚಯಗಳನ್ನು ನವೀಕರಿಸಿಕೊಳ್ಳುವ ಈ ವಿಶೇಷ ತಿರುಗಾಟದಲ್ಲಿ ಅಚಾನಕ್ಕಾಗಿ ಗುವ ಆಹ್ಲಾದಗಳಂತೆ, ಅನಿವಾರ್ಯವಾಗಿ ಎದುರಿಸಲೇ ಬೇಕಾಗಿರುವ ಗ್ರಹಚಾರಗಳೂ ಇವೆ. ಹಳ್ಳಿಮನೆಗಳಲ್ಲಿ ಯಾವ ಹೊತ್ತಿಗೆ ಹೋದರೂ ಮನೆಗೊಬ್ಬರಾದರೂ ಇದ್ದೇ ಇರುತ್ತಾರೆ. ನಗರ ಸಂಪ್ರದಾಯದ ನೀವು ಮನೆಯಲ್ಲೇ ಇದ್ದೀರೋ, ನಾನು ಸಂಜೆ ಆರೂಕಾಲಿಗೆ ಸರಿಯಾಗಿ ಬರುತ್ತೇನೆ ಎಂಬಿತ್ಯಾದಿ ಔಪಚಾರಿಕ ನುಡಿಗಳಲ್ಲಿ ಬೇಕಾಗುವುದಿಲ್ಲ. ಹೀಗಾಗಿ, ನಾವು ದಾರಿಯಲ್ಲಿ ಸಿಕ್ಕ ಮನೆಗೆ ಸರಕ್ಕನೆ ನುಗ್ಗುತ್ತಿದ್ದೆವು.

ತಗೋ! ಮದುಮಗ ಹೆತ್ತವರ ಸಮೇತನಾಗಿ ಮದ್ವೆ ಕರ್ಯಕ್ ಬಂದಿದ್ದು ಗೊತ್ತಾದ್ ಕೂಡಲೇ ಮನೆಜನಕ್ಕೆ ಸಣ್ಣಕೆ ದಯ್ಯ ಮೆಟ್ಟಿಕೊಳ್ಳುತ್ತಿತ್ತು. ಮನೆತುಂಬ ಓಡಾಡೋ ಹೆಂಗಸರು ಕೂ ಹೊಡೆದು ತೋಟದಲ್ಲಿದ್ದ ಯಜಮಾನರನ್ನ ಕರೆದರೆ, ಅವರು ಬರೋದರೊಳಗೆ ಇತರರು ಮೆಲ್ಲಗೆ ಬಂದು ಜಗಲಿಯಲ್ಲಿ ಜಮಾಯಿಸುತ್ತಿದ್ದರು. ಅಪ್ಪ ಅಮ್ಮ ಅವರ ಬಳಿ ದಶಕಗಳ ಹಿಂದಿನ ರಸವಾರ್ತೆಗಳನ್ನು ಮಾತನಾಡಿದ ಮೇಲೆ ಶುರುವಾಗುವುದು ನನ್ನ ಮರ್ಯಾದೆ ಹರಾಜು ಕಾರ್ಯಕ್ರಮ.

ಕೆಲವರು ಅಯ್ಯೋ ನೀನು ಗಳಗಂಟೆ ಬಿಟ್ಕಂಡಿದ್ದಾಗ ನೋಡಿದಿದ್ನಲೋ ಅಂದರೆ, ಇನ್ನುಳಿದವರು ನಾನು ಸಣ್ಣವನಿದ್ದಾಗ ಅಲ್ಲಿಗೆ ಬಂದವನು ಹೇಗೆ ಅವರ ಮನೆ ಹಾಲಿನ ಪಾತ್ರೆಗೆ ಉಚ್ಚೆ ಹೊಯ್ದಿದ್ದೆ, ಹೇಗೆ ಯಾರದೋ ಸೀರೆ ಎಳೆದಿದ್ದೆ, ಅನ್ನದ ಪಾತ್ರೆಗೆ ಬೂದಿ ತುಂಬಿ ಮತ್ತೆ ಅಡುಗೆ ಮಾಡಿಸಿದ್ದೆ ಅನ್ನೋದನ್ನೆಲ್ಲ ಸಾಭಿನಯವಾಗಿ ಹೇಳುತ್ತಿದ್ದರು. ನಾನು ಅವರ ಅಂದಿನ ಅನ್ನಕ್ಕೆ ಕಲ್ಲು ಹಾಕಿದ್ದಕ್ಕೆ ಇಂದು ಸಂಕಟಪಡುತ್ತ ಕೂತಿದ್ದರೆ, ಅಪ್ಪ ಅಮ್ಮಂದಿರು ಅವರ ಜೊತೆಗೇ ನಕ್ಕು ನನ್ನ ಯಾತನೆ ಹೆಚ್ಚು ಮಾಡುತ್ತಿದ್ದರು.

ಆಮೇಲೆ, ತಿಂಡಿ-ತೀರ್ಥ, ಪಾನಕ ಪನಿವಾರಾದಿ ರಿವಾಜುಗಳು. ನಾವು ಕರೆಯೋಕೆ ಹೋದ ಮೊದಲ ಮನೆಯಲ್ಲಿ, ಛೇ, ನಿಂಗ ಬರದು ಮೊದಲೇ ಹೇಳಿದ್ರೆ ಎಂತಾರೂ ಮಾಡ್ಲಾಗಿತ್ತು, ಅರ್ಜೆಂಟಿಗೆ ಶೀರಾ ಮಾಡ್ಕ್ಯ ಬತ್ತಿ ಅಂತಂದ ಮನೆಯೊಡತಿ ರುಚಿಕರ ಗೋಧಿರವೆ ಶಿರಾ ಯಾನೇ ಕೇಸರೀಬಾತನ್ನು ಮಾಡಿ ತಂದಿಟ್ಟಳು. ನಾನೂ ಚೆನ್ನಾಗೇ ತಿಂದೆ. ಪಕ್ಕದಲ್ಲಿದ್ದ ಅಪ್ಪ ಸ್ವಲ್ಪ ತಿಂದರೆ ಸಾಕಿತ್ತೇನೋ ಅಂತ ಗಂಭೀರವಾಗಿ ಹೇಳಿದರು.

ಅಪ್ಪನ ಮಾತಿನರ್ಥ ತಿಳಿಯೋಕೆ, ಮುಂದಿನ ಮನೆಗೆ ಹೋಗಬೇಕಾಯಿತು. ಅಲ್ಲಿ ಉಭಯಕುಶಲೋಪರಿ ಸಾಂಪ್ರತದ ಕೆಲ ಸೀನುಗಳ ನಂತರ ಅರ್ಜೆಂಟಿಗೆ ಶೀರಾ.. ಡೈಲಾಗು ರಿಪೀಟಾಯಿತು. ಅಲ್ಲಿಗೇ ಮುಗಿಯದ ಈ ರಣಭೀಕರ ಅರ್ಜೆಂಟಿಗೆ ಶೀರಾ.. ಅಂದು ನಾವು ಹೋದ ಎಲ್ಲ ಮನೆಗಳಲ್ಲೂ ಮುಂದುವರಿಯಿತು. ನಾನು ಮದುಮಗನಾಗಿರುವುದರಿಂದ, ಸಿಹಿ ತಿನ್ನದೇ ಹೋಗಬಾರದು ಅನ್ನುವ ಕಟ್ಟಪ್ಪಣೆ ಬೇರೆ. ಶೀರಾ ಸಹವಾಸದಿಂದ ರೋಸಿ ಹೋಗಿ, ಸಂಜೆ ಹೊತ್ತಿಗಂತೂ ರವೆ ಹುರಿಯೋ ಘಮಕ್ಕೇ ಹೊಟ್ಟೆಯೆಲ್ಲ ಕಲಸಿ, ವಾಂತಿ ಬರುವ ಹಾಗಾಗಿ ಹೋಗಿತ್ತು.

ಎರಡನೇ ದಿನ ಸಂಜೆಯ ಹೊತ್ತಿಗೆ ಹತ್ತೈವತ್ತು ಮನೆಗಳ ಶೀರಾ, ಖಾರಾ, ಉಪ್ಪಿಟ್ಟು,ಚಿಪ್ಸು ಮತ್ತು ಅಸಂಖ್ಯ ಕಾಪಿ-ಚಹಾ- ಕಷಾಯ ಇತ್ಯಾದಿ ದ್ರವಾಹಾರಗಳನ್ನ ಕುಡಿದ ಹೊಟ್ಟೆ ಪುಟ್ಟಮೋರಿಯಾಗಿತ್ತು. ಆವತ್ತು ಸಂಜೆ ನಮ್ಮ ಮೂಲಮನೆಗೆ ಬಂದು, ದೇವರಿಗೆ ಕಾಯಿ ಇಡೋದು ಇತ್ಯಾದಿ ಕಾರ್ಯಕ್ರಮಗಳನ್ನೆಲ್ಲ ಮುಗಿಸಿ ಕಾಲು ಕಾಚಿ ಕೂತಾಗ ಅಂತೂ ದೊಡ್ಡ ಕೆಲಸ ಮುಗಿದ ಸಮಾಧಾನ.

ಅಪ್ಪನ ಹತ್ತಿರ ಮಾತಾಡಿ, ಕರೆಯಬೇಕಿದ್ದ ಎಲ್ಲರನ್ನೂ ಕರೆದಾಯಿತು ಅಂತ ನಿಕ್ಕೀ ಮಾಡಿಕೊಂಡೆ. ಹಾಗೇ ಮಾತನಾಡುತ್ತ ಅವರು, ಹೋಗೋದಿದ್ದರೆ ಸಣ್ಣಜ್ಜನ ಮನೆಗೊಂದು ಹೋಗಬಹುದಿತ್ತು ನೋಡು ಅಂದರು. ಅಲ್ಲೇ ಸ್ವಲ್ಪ ದೂರದಲ್ಲಿರೋ ಸಣ್ಣಜ್ಜನ ಮನೆ, ನನ್ನ ಬಾಲ್ಯದ ಬೇಸಿಗೆ ರಜೆಯ ಚೇತೋಹಾರಿ ಕ್ಷಣಗಳನ್ನ ಕಳೆದ ಜಾಗ. ಲಿಂಗನಮಕ್ಕಿ ಅಣೆಕಟ್ಟು ಬಂದಿದ್ದರಿಂದ ತಮ್ಮ ೬೦ ಅಂಕಣದ ಮನೆ ಕಳೆದುಕೊಂಡಿದ್ದ ನಮ್ಮ ದೂರದ ಸಂಬಂಧಿ ಸಣ್ಣಜ್ಜ, ಅದರ ಪುಟ್ಟದೊಂದು ಪ್ರತಿರೂಪದಂತಹ ಮನೆಯನ್ನು ಸರ್ಕಾರ ನೀಡಿದ್ದ ಜಾಗದಲ್ಲಿ ಕಟ್ಟಿಕೊಂಡಿದ್ದರು. ಅಲ್ಲಿನ ದೊಡ್ಡ ತೊಲೆಗಳು, ಕತ್ತಲ ಕೋಣೆಗಳು ನನ್ನಲ್ಲಿ ಅಚ್ಚರಿ ಮೂಡಿಸಿದ್ದವು.

ಅಪ್ಪ ಅಮ್ಮನನ್ನು ಮನೆಯಲ್ಲೇ ಬಿಟ್ಟು, ಸಂಜೆಗತ್ತಲಲ್ಲಿ ಹಳೆಯ ನೆನಪಿನ ಜಾಡಲ್ಲೇ ದಾರಿ ಹಿಡಿದು ಹೊರಟೆ. ಸಣ್ಣಜ್ಜನ ಮನೆ ತಲುಪಿ ಒಳನಡೆದರೆ, ಪಡಸಾಲೆ ಖಾಲಿ ಹೊಡೆಯುತ್ತಿತ್ತು. ಕರೆಂಟು ಹೋಗಿತ್ತು. ಒಳಗೆಲ್ಲೋ ಬೆಳಕು ಕಂಡು ನಡೆದೆ. ಅಲ್ಲಿ ವಯಸ್ಸಾದಾಕೆಯೊಬ್ಬರು ಕೂತಿದ್ದರು. ನನ್ನನ್ನ ನೋಡಿ, ಮೆಲ್ಲನೆದ್ದು ಮಬ್ಬು ಬೆಳಕಲ್ಲಿ ಗುರುತು ಹಿಡಿಯಲೆಂದು ಕಣ್ಣು ಕೀಲಿಸಿದರು. ನಾನೇನಾದರೂ ಹೇಳುವ ಮುನ್ನವೇ, ಸುರೇಂದ್ರಾ, ಅಂತೂ ಇವತ್ ಮನಿಗ್ ಬಂದ್ಯನೋ, ಮನೆ ನೆನ್ಪಾತನೋ, ಎಂತಕೋ ನಮ್ನೆಲ್ಲ ಬಿಟ್ಟಿಕ್ಕೆ ಹೋಗಿದ್ದೆ ಅಂತ ಭಾವುಕರಾಗಿ ಮಾತನಾಡುತ್ತ ನನ್ನ ಕತ್ತು ಗಲ್ಲಗಳನ್ನೆಲ್ಲ ಸವರಲು ಆರಂಭಿಸಿದರು. ನನ್ನನ್ನ ಮಾತಾಡೋಕೆ ಬಿಡದೇ, ಹ್ವಾಯ್, ಯಾರ್ ಬೈಂದ ನೋಡಿ ಇಲ್ಲಿ.. ಅಂತ ಕತ್ತಲಲ್ಲೇ ತಡಕಾಡುತ್ತ ಹಿಂದೆಲ್ಲೋ ನಡೆದರು. ಏನಾಗುತ್ತಿದೆ ಅಂತ ಅರ್ಥವಾಗದೇ ನಾನು ಕತ್ತಲಲ್ಲಿ ಕಳೆದುಹೋದವನಂತೆ ನಿಂತಿದ್ದೆ.

ನಿಂಗೆಲ್ಲೋ ಮಳ್ಳು ಅಂತ ಬಂದರು ಸಣ್ಣಜ್ಜ, ಆಕೆ ಅವರ ಹೆಂಡತಿ ಅನ್ನೋದು ತಿಳಿಯಿತು. ನನಗವರ ಗುರುತು ಸಿಕ್ಕಿರಲಿಲ್ಲ. ಸಣ್ಣಜ್ಜ ನನ್ನನ್ನ ನೋಡಿದವರೇ, ನೀ ಯಾರು ಅಂತ ತೆಳದ್ದಿಲ್ಲೆ ಅಂದರು. ನಾನು ಪ್ರವರಗಳನ್ನೆಲ್ಲ ಹೇಳಿದಮೇಲೆ, ಎಮ್ಮನೆ ಶ್ರೀಧರನ ಮಾಣಿಯನೋ ಅಂದು, ಬಾಗಿಲ ಹಿಂದೆ ಮುಸುಮುಸು ಅಳುತಿದ್ದ ಹೆಂಡತಿಯ ಕಿವಿಯಲ್ಲಿ ಇಂವ ಸುರೇಂದ್ರ ಅಲ್ದೇ, ಧರೇಮನೆ ಶ್ರೀಧರನ ಮಗ, ಮದ್ವೆ ಕರಿಯಲೆ ಬೈಂದ ಅಂತ ಗಟ್ಟಿಯಾಗಿ ಹೇಳಿದರು. ಆಕೆ ನನ್ನ ಮುಖವನ್ನು ಮತ್ತೊಮ್ಮೆ ನೋಡಿ, ಖಿನ್ನರಾಗಿ ಒಳನಡೆದರು.

ಆಮೇಲೆ ಸಣ್ಣಜ್ಜ ಹೇಳಿದ ಕಥೆಯೇನೆಂದರೆ, ಅವರ ಒಬ್ಬನೇ ಮಗ ಸುರೇಂದ್ರ ಇಪ್ಪತ್ತು ವರುಷಗಳ ಹಿಂದೆಯೇ ಮನೆ ಬಿಟ್ಟು ಬೆಂಗಳೂರಿಗೆ ಹೋದವನು ತಿರುಗಿ ಬಂದಿಲ್ಲ. ಅಲ್ಲೇ ಹುಡುಗಿ ಹುಡುಕಿಕೊಂಡು, ಮದುವೆಯಾಗಿ, ಮಕ್ಕಳೂ ಆಗಿ ಹಾಯಾಗಿದ್ದಾನೆ. ಅವರ ಮಗ ಮನೆ ಬಿಟ್ಟು ಹೋಗೋ ಹೊತ್ತಿಗೆ ನನ್ನ ಪ್ರಾಯದ ಯುವಕ. ಮಗ ಎಂದಾದರೂ ತಿರುಗಿ ಬರುತ್ತಾನೆಂದರು ನಂಬಿರೋ ಆ ಹೆಣ್ಣು ಹೃದಯಕ್ಕೆ, ಮುಸ್ಸಂಜೆ ಹೊತ್ತಿಗೆ ಬಂದ ನಾನು ಥಟ್ಟನೆ ಮಗನಂತೆಯೇ ಕಂಡಿದ್ದೆ.

ನಾನು ಮದುವೆ ಕರೆಯೋಲೆಯನ್ನ ಅವರ ಕೈಗಿತ್ತು ಬಂದು ಹಾರಯಿಸಿ ಎಂದೆ. ಸಣ್ಣಜ್ಜ, ಬೆಂಗಳೂರಲ್ಲಿಪ್ಪ ಮಗನೇ ತನ್ ಮದ್ವೆಗೆ ನಂಗಳನ್ನ ಕರಿಯಲ್ಲೆ. ನೀ ಬಂದು ನಮ್ಮ ನೆನಪು ಮಾಡ್ಕ್ಯಂಡು ಕರಿತಾ ಇದ್ದೆ ನೋಡು, ಅದೇ ಖುಷಿ ಅಂದರು. ಮಾತು ಭಾರವಾಗಿತ್ತು. ನನ್ನ ಮನಸ್ಸೂ. ಅವರ ಕಾಲಿಗೆ ನಮಸ್ಕರಿಸಿ ಹೊರಟೆ. ಅಷ್ಟು ಹೊತ್ತಿಗೆ ಅಜ್ಜಿ, ನನ್ನ ಮಳ್ ತನಕ್ಕೆ ಬೇಜಾರು ಮಾಡ್ಕ್ಯಳಡ ತಮ್ಮಾ, ಒಳಗ್ ಬಾರೋ, ಅಪರೂಪಕ್ಕೆ ನಮ್ಮನಿಗೆ ಬೈಂದೆ, ಗಡಿಬಿಡಿಲಿ ಶೀರಾ ಮಾಡಿದ್ದಿ. ಸೀ ತಿಂದ್ಕಂಡು ಹೋಗ್ಲಕ್ಕಡ ಬಾ ಎಂದು ಕರೆದರು.

ಮಂದ ಬೆಳಕಲ್ಲಿ ಅಂದು ತಿಂದ ಶೀರಾದ ರುಚಿಯನ್ನು ನಾನು ಇಂದಿಗೂ ಮರೆತಿಲ್ಲ.


ಕನ್ನಡ ಪ್ರಭ- ಅಂಕಿತ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಯುವ ವಿಭಾಗದಲ್ಲಿ ಬಹುಮಾನ ಪಡೆದ ಬರಹ. ನಿನ್ನೆಯ ಕನ್ನಡ ಪ್ರಭ ಸಾಪ್ತಾಹಿಕದಲ್ಲಿ ಪ್ರಕಟಿತ

ಭಾನುವಾರ, ಮೇ 01, 2011

ಜೀವಯಾನವೆಂದರೆ..

ಕಾಲು ಕಾಯುವ ಪಾದರಕ್ಷೆ
ತಿಳಿಸುತ್ತದೆ ನಡೆದು
ಬಂದ ದಾರಿ
ಬೇಡದ ಭೂತಕ್ಕೆ ಹೇಳಿ ವಿದಾಯ
ಓಡಿದರೆ ಕಾಣುವುದು
ವಿಸ್ತಾರ ಹೆದ್ದಾರಿ

ಜೀವನ ಮಿಠಾಯಿ ಡಬ್ಬ
ಸಿಕ್ಕೀತು ಒಂದಲ್ಲ ಒಂದು
ಸಿಹಿ,
ತೆರೆದರೆ ಮುಚ್ಚಳ

ಸುಮ್ಮನೆ ಸಂತೈಸಿದರೆ ಸಿಗುವ
ಶಾಂತಿಗೆ
ಉದ್ದೇಶವಿಲ್ಲದ ಸಹಾಯಕ್ಕೆ
ಸಿಡುಕಿನ ಮುಖಕ್ಕೆ ದೊರಕುವ
ಕಿರುನಗೆಯ ಉತ್ತರಕ್ಕೆ
ಇಲ್ಲ ಯಾವ ನಿಘಂಟಿನಲ್ಲೂ ಅರ್ಥ

ಕಲಿತುಕೊಳ್ಳುತ್ತ ಹೋದರೆ
ಒಂದರ ನಂತರ
ಮತ್ತೊಂದ
ಕಾಣುವುದು ಹೊಳೆವ ತಾರೆಗಳ
ಹೊಸ ಆಕಾಶ

ಜೀವಯಾನ, ಎಲ್ಲ ಸಿದ್ಧತೆಗಳ
ನಂತರದ ಪಯಣ
ಅಥವ, ಸುಮ್ಮಗೆ
ಬೀಸಿದ ಗಾಳಿಗೆ ಹಾರಿದ ಪುಕ್ಕ

ಕೊನೆಗುಳಿಯುವುದು ಮಾತ್ರ
ದಕ್ಕಿದ
ನೆಮ್ಮದಿಗಳ ಲೆಕ್ಕ

ಸೋಮವಾರ, ಫೆಬ್ರವರಿ 28, 2011

ದಿ ಕಿಂಗ್ಸ್ ಸ್ಪೀಚ್ : ಉಗ್ಗಿನ ರಾಜನ ಮಾತಿನ ಬಾಣ

ಭಾಷೆ: ಇಂಗ್ಲೀಷ್
ನಿರ್ದೇಶನ: ಟಾಮ್ ಹೂಪರ್
ನಟರು: ಕಾಲಿನ್ ಫರ್ತ್, ಜೆಫ್ರಿ ರಶ್


ಅಬ್ಬರದ ಅಂಶಗಳಿಲ್ಲದ , ಸರಳ ಮತ್ತು ನೇರ ಕಥೆ ಹೊಂದಿರುವ ಸಿನಿಮಾವೊಂದು ಹೇಗೆ ವೀಕ್ಷಕರ ಮನಸ್ಸನ್ನು ತಟ್ಟಬಹುದು ಎನ್ನುವುದಕ್ಕೆ, ಇತ್ತೀಚಿಗೆ ಬಿಡುಗಡೆಯಾಗಿರೋ, ದಿ ಕಿಂಗ್ಸ್ ಸ್ಪೀಚ್ ಉತ್ತಮ ಉದಾಹರಣೆ. ೧೯೩೦ ದಶಕದ ಇಂಗ್ಲೆಂಡ್ ನ ರಾಜ ಆರನೇ ಜಾರ್ಜ್ ಮತ್ತು ಆತನ ಉಗ್ಗಿನ ಸಮಸ್ಯೆ ಈ ಚಿತ್ರದ ಹಂದರ. ಇಂತಹ ವಸ್ತುವೊಂದನ್ನು ಇಟ್ಟುಕೊಂಡು ಚಿತ್ರವೊಂದನ್ನು ನಿರ್ಮಿಸಬಹುದು ಎನ್ನುವುದೇ ಮೊದಲ ಅಚ್ಚರಿ.

ಇಂಗ್ಲೆಂಡಿನ ಭವಿಷ್ಯ ಬರೆಯಬೇಕಿರುವ ಆರನೇ ಜಾರ್ಜ್ ಮತ್ತು ಆಸ್ಟ್ರೇಲಿಯನ್ ಮೂಲದ, ಮೊದಲ ನೋಟಕ್ಕೆ ಜೋಕರ್ ನಂತೆ ಕಾಣುವ ಸ್ಪೀಚ್ ಥೆರಪಿಸ್ಟ್ ಲೈನಲ್ ಲೋಗ್ ಮಧ್ಯದ ಸ್ನೇಹ ಈ ಚಿತ್ರದ ಮುಖ್ಯ ಎಳೆ.ಅಲ್ಬರ್ಟ್, ಇಂಗ್ಲೆಂಡ್ ನ ರಾಜ ಐದನೇ ಜಾರ್ಜ್ ನ ಎರಡನೇ ಮಗ. ಎಳವೆಯಿಂದಲೇ ಆತನ ವ್ಯಕ್ತಿತ್ವಕ್ಕೆ ಕೊಡಲಿ ಪೆಟ್ಟು ನೀಡಿರುವುದು, ಮಾತನಾಡುವಾಗ ಪದೇ ಪದೇ ಕಾಡುವ ಉಗ್ಗಿನ ಸಮಸ್ಯೆ. ಅದು ಆತನ ವೃದ್ಧ ಅಪ್ಪನಿಗೂ ಚಿಂತೆ. ಲೈನಲ್, ಜಾರ್ಜ್ ನ ಉಗ್ಗಿನ ಸಮಸ್ಯೆ ಪರಿಹರಿಸಲು ಆತನ ಹೆಂಡತಿ ( ಎಲ್ಲ ವಿಫಲ ಪ್ರಯತ್ನಗಳ ನಂತರ) ಹುಡುಕಿರೋ ಸ್ಪೀಚ್ ಥೆರಪಿಸ್ಟ್. ರಾಜ ಮನೆತನದ ವ್ಯಕ್ತಿಗೆ ತಾನು ಚಿಕಿತ್ಸೆ ನೀಡುತ್ತಿದ್ದೇನೆಂಬುದು ಗೊತ್ತಿದ್ದರೂ, ಆ ಬಗ್ಗೆ ಯಾವುದೇ ಹೆಮ್ಮೆಯಾಗಲೀ ಅಥವಾ ಅವರ ಬಗ್ಗೆ ವಿಶೇಷ ಗೌರವವನ್ನೂ ತೋರಿಸದ ವಿಚಿತ್ರ ಮನುಷ್ಯ. ಜಾರ್ಜ್ ಗೂ, ಲೈನಲ್ ತನ್ನ ಸಮಸ್ಯೆ ಪರಿಹರಿಸುವ ಬಗ್ಗೆ ಯಾವ್ ವಿಶ್ವಾಸವೂ ಇಲ್ಲ. ಸುಮ್ಮನೇ ಆತ ಮಾಡಿಸೋ ಅಸಂಬದ್ಧವೆನಿಸೋ ಮುಖದ ವ್ಯಾಯಾಮ ಮಾಡುತ್ತಿರುತ್ತಾನೆ, ಅಷ್ಟೆ.


ಹುಟ್ಟಿದಾಗಿನಿಂದ ರಾಜ ಮನೆತನದ ಸಿರಿಪಂಜರದೊಳಗೆ ಬೆಳೆದಿರುವ ಜಾರ್ಜ್ ಗೆ, ಜನಸಾಮಾನ್ಯರ ನಡುವೆ ಬೆರೆತು ಗೊತ್ತಿಲ್ಲ. ಲೈನಲ್ ಜೊತೆಗೆ ನಿಧಾನವಾಗಿ ಬೆಳವ ಸ್ನೇಹ, ಆತನಿಗೆ ಹೊಸ ಜಗತ್ತೊಂದನ್ನು ಪರಿಚಯಿಸುತ್ತದೆ. ಇಬ್ಬರ ನಡುವಿನ ಗೆಳೆತನದ ಬಂಧ ಗಟ್ಟಿಯಾಗುವ ಹೊತ್ತಿನಲ್ಲೇ ಸಂಭವಿಸೋ ಸಣ್ಣದೊಂದು ಜಗಳ ಇಬ್ಬರನ್ನೂ ಬೇರ್ಪಡಿಸುತ್ತದೆ.

ಉತ್ತಮ ನಾಯಕನಲ್ಲಿರಬೇಕಾದ ಹಲವು ಗುಣಗಳಿದ್ದರೂ, ಅಲ್ಬರ್ಟ್ ತಾನು ಎಂದೂ ರಾಜನಾಗುತ್ತೇನೆ ಅಂದುಕೊಂಡಿಲ್ಲ. ಆದರೆ ಒಂದು ವಿಚಿತ್ರ ಸನ್ನಿವೇಶದಲ್ಲಿ ರಾಜನ ಸ್ಥಾನಕ್ಕೆ ಏರಬೇಕಾಗಿ ಬರುವ ಅನಿವಾರ್ಯತೆ ಬಂದೊದಗುತ್ತದೆ. ಜೊತೆಗೆ ದೇಶದ ಎದುರು ಎರಡನೇ ಮಹಾಯುದ್ಧದ ರೂಪದಲ್ಲಿ ಹೊಸ ವಿಪತ್ತು ಬಂದೆರಗುತ್ತದೆ.

ಯುದ್ಧ ಇನ್ನೇನು ಆರಂಭವಾಗಲಿದೆ. ಅದಕ್ಕೂ ಮುನ್ನ ಕಿಂಗ್ ಜಾರ್ಜ್, ದೇಶದ ನಾಗರಿಕರನ್ನು ಉದ್ದೇಶಿಸಿ ಮಾತನಾಡಬೇಕಿದೆ, ಹಿಟ್ಲರ್ ನ ಹೆದರಿಕೆ ತುಂಬಿರೋ ಜನರಲ್ಲಿ ಆತ್ಮ ವಿಶ್ವಾಸ ತುಂಬಬೇಕಿದೆ. ಆದರೆ ಉಗ್ಗಿನ ತೊಂದರೆ ಅವನೊಳಗಿನ ವಿಶ್ವಾಸಕ್ಕೇ ಕುಂದು ತಂದಿದೆ. ಇನ್ನು ಜನರಲ್ಲಿ ಹೇಗೆ ಧೈರ್ಯ ತುಂಬಿಯಾನು? ಹಿಂದಿನ ಒಂದು ಕಹಿ ನೆನಪು, ಮನದಲ್ಲಿ ಹಾಗೇ ಇದೆ..
ಮುಂದೇನು ನಡೆಯುತ್ತದೆ ಅನ್ನೋದನ್ನ ನೀವು ಖುದ್ದು ವೀಕ್ಷಿಸಿದರೇ ಚೆನ್ನ.


ಒಂದು ತುಂಬ ಚಂದದ ಕಥೆಯನ್ನು, ಅಷ್ಟೇ ಸೊಗಸಾಗಿ ತೆರೆಯ ಮೇಲೆ ಕಟ್ಟಿಕೊಟ್ಟಿರೋದು ನಿರ್ದೇಶಕ ಟಾಮ್ ಹೂಪರ್ ಹೆಗ್ಗಳಿಕೆ. ಗಡಿಬಿಡಿಯಿಲ್ಲದೇ ನಿಧಾನವಾಗಿ ಸಾಗುವ ಚಿತ್ರ , ಯಾವುದೇ ಥ್ರಿಲ್ಲರ್ ಸಿನಿಮಾಗೂ ಕಡಿಮೆಯಿಲ್ಲದಂತೆ ಕೊನೆಕೊನೆಗೆ ವೀಕ್ಷಕರನ್ನು ಉಸಿರು ಬಿಗಿಹಿಡಿದುಕೊಳ್ಳುವಂತೆ ಮಾಡುತ್ತದೆ.

೨೦ ನೇ ಶತಮಾನದ ಮೊದಲಾರ್ಧದ ಇಂಗ್ಲೆಂಡ್, ಅಲ್ಲಿನ ವಾತಾವರಣ, ರಾಜ ಮನೆತನದ ಖಾಸಗೀ ವಲಯ, ಅಲ್ಲಿನ ರಾಜಕೀಯ ಗೋಜಲುಗಳು ಇತ್ಯಾದಿಗಳನ್ನು ದಿ ಕಿಂಗ್ಸ್ ಸ್ಪೀಚ್ ಸಮರ್ಥವಾಗಿ ಹಿಡಿದಿಟ್ಟಿದೆ. ಚಿತ್ರದ ಹಿನ್ನೆಲೆ ಸಂಗೀತ ಕೂಡ ಮನೋಜ್ಞವಾಗಿದ್ದು, ನೋಡುಗರ ಲಹರಿಯನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಮಕ್ಕಳಿಗೆ ಕಥೆ ಕೂಡ ಸರಿಯಾಗಿ ಹೇಳಲು ಬರದ ಗಂಭೀರ ಅಪ್ಪನಾಗಿ, ಬಿಬಿಸಿಯ ಮೈಕಿನೆದುರು ತೊದಲೋ ರಾಜನಾಗಿ, ನಟ ಕಾಲಿನ್ ಫರ್ತ್, ಆರನೇ ಜಾರ್ಜ್ ಪಾತ್ರದಲ್ಲಿ ಅಮೋಘ ಅಭಿನಯ ನೀಡಿದ್ದಾರೆ. ಇನ್ನು ಸ್ಪೀಚ್ ಥೆರಪಿಸ್ಟ್ ಆಗಿ ನಟಿಸಿರೋ ಜೆಫ್ರಿ ರಶ್ ನಟನೆ ಶ್ಲಾಘನೀಯ. ಅಂದ ಹಾಗೆ, ಆಗ ತಾನೇ ಕಂಡು ಹಿಡಿಯಲಾಗಿದ್ದ ರೇಡಿಯೋ , ಚಿತ್ರದ ಮತ್ತೊಂದು ಪ್ರಮುಖ ಪಾತ್ರ!
ಈ ಸಲದ ಆಸ್ಕರ್ ಪ್ರಶಸ್ತಿ ಘೋಷಣೆಯಾಗೋವಾಗ, ದಿ ಕಿಂಗ್ಸ್ ಸ್ಪೀಚ್ ಕೆಲವಷ್ಟಾದರೂ ಪ್ರಶಸ್ತಿಗಳನ್ನ ಬಾಚಿಕೊಳ್ಳುತ್ತದೆ ಅನ್ನೋದು ನನ್ನ ಅಭಿಪ್ರಾಯ. ಬೆಸ್ಟ್ ಆಫ್ ಲಕ್!

( ಕನ್ನಡ ಪ್ರಭದ ಹೋಂ ಥಿಯೇಟರ್ ನಲ್ಲಿ ನಿನ್ನೆ, ೨೭-೦೨-೨೦೧೧ ಕ್ಕೆ ಪ್ರಕಟಿತ)
ಇವತ್ತು ಕಿಂಗ್ಸ್ ಸ್ಪೀಚ್ ಚಿತ್ರಕ್ಕೆ ಉತ್ತಮ ಚಿತ್ರ, ಉತ್ತಮ ಡೈರೆಕ್ಟರ್ , ಉತ್ತಮ ನಟ, ಉತ್ತಮ ಸ್ಕ್ರೀನ್ ಪ್ಲೇ - ಒಟ್ಟು ನಾಲ್ಕು ಪ್ರಶಸ್ತಿಗಳು ಗಳು ಲಭ್ಯವಾಗಿದೆ.

ಮಂಗಳವಾರ, ಫೆಬ್ರವರಿ 15, 2011

ಅರ್ಧ ಸತ್ಯ

ಟೌನ್ ಹಾಲ್ ಎದುರು
ಬಸ್ಸಲ್ಲಿ ಕೂತವಳ
ಕಣ್ಣಲ್ಲಿ ಕಿತ್ತೂರು ಚೆನ್ನಮ್ಮನ ಖಡ್ಗ
ಬೆನ್ನಲ್ಲಿ
ಸುಟ್ಟ ಸಿಗರೇಟಿನ ಉರಿ

ಸಾವಿರ ವಾಹನಗಳ
ಕೈ ಸನ್ನೆಯಲ್ಲೇ
ನಿಲ್ಲಿಸುವ ಟ್ರಾಫಿಕ್ ಪೇದೆ;
ವರ್ಷ ನಾಲ್ಕಾಯ್ತು
ಪ್ರಮೋಷನ್ ಸಿಗದೆ

"ಇಲ್ಲಿ ಲಿಂಗ ಪತ್ತೆ ಮಾಡಲಾಗುವುದಿಲ್ಲ"
ಹೇಳುತ್ತಿದೆ ಆಸ್ಪತ್ರೆಯ ಫಲಕ
ಹಿತ್ತಲ ಕಸದ ರಾಶಿಯ
ಒಳಗೆ
ಬೆಳಕೇ ಕಾಣದ ಮೊಳಕೆ

ಎಲ್ಲ ಸಮಸ್ಯೆಗೆ
ಪರಿಹಾರ ಹೇಳುವ ಜ್ಯೋತಿಷಿಯ
ಮಗಳು
ಅಚಾನಕ್ಕು ಓಡಿ ಹೋಗಿದ್ದಾಳೆ
ಇಂದು ಜ್ಯೋತಿಷ್ಯಾಲಯ ಬಂದು.

ಬುಧವಾರ, ಫೆಬ್ರವರಿ 09, 2011

ಹೊಸಾ ಲವ್ಸ್ಟೋರಿ

ಹೊಳೇ ದಡದಾಗೆ ಬಾರ್ಜು ಇಲ್ಲ
ಮೊಬೈಲಿನಾಗೇ ಚಾರ್ಜು ಇಲ್ಲ
ಎಲ್ಲಿಗೋದ್ಲು ಹುಡುಗೀ
ಸಾಕಾಗೋಯ್ತು ಹುಡುಕೀ

ಬೀಡಿ ಕಾಸು ನಾಲ್ಕು ಉಳ್ಸಿ
ಬಾಡ್ಗೆ ಬೈಕಿಗ್ ಪೆಟ್ರೋಲ್ ತುಂಬ್ಸಿ
ಓಡೋಡೋಡೋಡ್ ಓಡಿ ಬಂದ್ರೆ
ಇದೇನ್ ಇಂಥ ತೊಂದ್ರೆ?

ಲಾಂಡ್ರಿ ಅಂಗ್ಡಿ ಲಕಪಕ ಶರಟು
ಜೀನ್ಸು ಪ್ಯಾಂಟು ಹಾಕ್ಕಂಡ್ ಹೊರಟು
ಏನೇನೇನೋ ಅಂದ್ಕಡ್ ಬಂದು
ಸಿಕ್ದಂಗಾಯ್ತು ಖಾಲಿ ಚಂಬು

ಕಾಲೇಜ್ ಬ್ಯಾಗು ಮಟ್ಟೀಲಿಟ್ಟು
ಓಡೋಗೋಣ ಊರುಬಿಟ್ಟು
ಅಂತೆಲ್ಲ ಅಂದವಳೇ ಇಲ್ಲ
ಸತ್ಯವಂತರ್ಗೆ ಕಾಲ್ವೇ ಅಲ್ಲ

ನಾಳಿಂದ್ ಮತ್ತೆ ಹೊಸಾದು ಹುಡ್ಕು
ಸಾವರ್ ರುಪಾಯ್ ಫೋನು ಕೊಡ್ಸು
ಕೆಲ್ಸ ಬಿಟ್ಟು ಕಾಲೇಜಿಗ್ ಓಡು
ಯಮಾಹ ಬೈಕಲ್ ವೀಲಿಂಗ್ ಮಾಡು

ಥತ್ತೇರೀಕಿ ಲೈಫೇ ಇಷ್ಟು
ಮನೇ ಹೆಂಡ್ತಿ ಪಾದ್ವೇ ಬೆಶ್ಟು!

ಶುಕ್ರವಾರ, ಫೆಬ್ರವರಿ 04, 2011

ಸಾಹಿತ್ಯ ಸಮ್ಮೇಳನ- ದಿನ-೧

ಸಾಹಿತ್ಯ ಸಮ್ಮೇಳನ ಆರಂಭಕ್ಕೆ ಕ್ಷಣಗಣನೆ ಆಗುತ್ತಿದ್ದ ಘಳಿಗೆಯಲ್ಲಿ, ಆಫೀಸಿಗೆ ಹೋಗುತ್ತಿದ್ದಾಗ ಕ್ಲಿಕ್ಕಿಸಿದ ಕೆಲ ಚಿತ್ರಗಳು.. ಮೆರವಣಿಗೆಗೆ ಸಿದ್ಧವಾಗುತ್ತಿದ್ದ ಸಾಂಸ್ಕೃತಿಕ ತಂಡಗಳು..
ಮುಂಡಾಸು ಸರಿಯಾಗಿ ಕಟ್ಟೋ..
ಎಲ್ಲಡೆ ಹಾರಾಡುತ್ತಿರುವ ಕನ್ನಡ ಧ್ವಜಗಳು..
ಬಾರಿಸು ಕನ್ನಡ ಡಿಡಿಂಮವ..
ಬಿಸಿಲಿಗೆ ಚಳಿ ಕಾಯಿಸಿಕೊಂಡು, ಸದ್ದು ಮಾಡಲು ಸಿದ್ಧ!
ನಾವ್ ರೆಡಿ!
ಹಲಗೆ ತಂಡ
ನಾವು ಬಂದೇವ..




ಅಂದ ಹಾಗೆ, ದಕ್ಷಿಣ ಬೆಂಗಳೂರಿಗೆ ಬರುತ್ತಿರೋ ಸಾಹಿತ್ಯ ಪ್ರೇಮಿಗಳಿಗೆ, ಒಳ್ಳೊಳ್ಳೇ ತಿಂಡಿ ತಿನಿಸುಗಳು ಇಲ್ಲೆಲ್ಲ ಸಿಗುತ್ತವೆ ನೋಡಿ.

ಸಿರಿಗನ್ನಡಂ ಗೆಲ್ಗೆ:)

ಬುಧವಾರ, ಫೆಬ್ರವರಿ 02, 2011

ಎರಡು ಘಟನೆಗಳು

ಸೋಶಿಯಲ್ ನೆಟ್ ವರ್ಕಿಂಗ್ ಸೈಟುಗಳಿಂದ ಉಪಕಾರವೆಷ್ಟಿದೆಯೋ, ತೊಂದರೆಗಳೂ ಅಷ್ಟೇ ಇದೆ ಅನ್ನೋದು ಕಾಲ ಕಾಲಕ್ಕೆ ಪ್ರೂವ್ ಆಗ್ತಾನೇ ಇವೆ. ಕೆಲವು ಬಾರಿ, ನಿರುಪದ್ರವೀ ಮಜಾ ಘಟನೆಗಳೂ ಆಗ್ತಿರ್ತವೆ.
ಎರಡು ತಿಂಗಳ ಹಿಂದೆ ಫೇಸ್ ಬುಕ್ ಗೆ ಲಾಗಿನ್ ಆಗಿದ್ದಾಗ ನಡೆದ ಘಟನೆ. ಸ್ನೇಹಿತೆಯೊಬ್ಬಳು ಪಿಂಗ್ ಮಾಡಿದಳು. ಕುಶಲೋಪರಿಗಳ ಮಧ್ಯೆ, ಮತ್ತೆ ನಿನ್ನ ಫಿಯಾನ್ಸಿ ಹೇಗಿದ್ದಾಳೆ ಅಂದ್ಳು. ಎಲಾ! ನಂಗೆ ಆಶ್ಚರ್ಯ. ನನ್ನ ಮದುವೆ ಆಗಿ ಆಗಲೇ ೬ ತಿಂಗಳಾಗಿದೆ, ಅಲ್ಲದೇ ಇವಳಿಗೂ ಮೇಲ್ ಮಾಡಿ, ಫೋನ್ ಕೂಡ ಮಾಡಿ ಕರೆದಿದ್ದೆ!
ಏನಮ್ಮಾ, ನನ್ನ ಮದುವೆ ಆಗಿ ೬ ತಿಂಗಳಾಯ್ತು, ನಿನ್ನನ್ನು ಮದುವೆಗೂ ಕರೆದಿದ್ದೆ ಅಷ್ಟೂ ನೆನಪಿಲ್ಲವಾ ಅಂದೆ.
ಅವಳು ಸಮಾಧಾನವಾಗಿ, ಅಲ್ಲಾ, ನೀನು ನಿನ್ನ ಎಂಗೇಜ್ ಮೆಂಟ್ ಫೋಟೋಸ್ ಫೇಸ್ ಬುಕ್ ಗೆ ಹಾಕಿದ್ದೆಯಲ್ಲ, ಅದನ್ನ ನೋಡಿದ್ದೆ. ಆದರೆ ಮದುವೆ ಫೋಟೋಸ್ ಇನ್ನೂ ಹಾಕಿಲ್ಲವಲ್ಲ, ಹಾಗಾಗಿ ನಿನ್ನ ಮದುವೆ ಮುಂದೆ ಹೋಗಿರಬೇಕು ಅಂದುಕೊಂಡೆ ಎಂದಳು!!
***
ಮೂರು ವರ್ಷಗಳ ಹಿಂದಿನ ವಿಷಯ.ಕನ್ನಡದ ಪ್ರಸಿದ್ಧ ಹಿರಿಯ ಪರ್ತಕರ್ತರೊಬ್ಬರು ನನ್ನ ಗೆಳೆಯನ ಸಂಬಂಧಿ. ಅವರ ಮನೆಯಲ್ಲೇನೋ ಧಾರ್ಮಿಕ ಕಾರ್ಯಕ್ರಮವಿದ್ದು, ಇವನನ್ನೂ ಅವರ ಪತ್ನಿ ಆಹ್ವಾನಿಸಿದ್ದರು. ಮಧ್ಯಾಹ್ನ ಅಲ್ಲಿಗೆ ಹೋಗಲಾಗದ ಈತ ಸಂಜೆ ಹೊತ್ತಿಗೆ ಅಲ್ಲಿಗೆ ಹೋಗಿದ್ದ.

ಮನೆಯವರೆಲ್ಲ ಏನೇನೋ ಕೆಲಸಗಳಲ್ಲಿ ಬ್ಯುಸಿ ಇದ್ದರಂತೆ, ಈತ ಅಲ್ಲೇ ಕುಳಿತಿದ್ದ ಆ ಪತ್ರಕರ್ತರ ಡಿಗ್ರೀ ಓದುತ್ತಿರುವ ಮಗಳನ್ನು ಸುಮ್ಮನೆ ಮಾತಿಗೆಳೆದ. ಅವಳೋ, ಚಾನಲ್ಲುಗಳನ್ನು ಬದಲಿಸುತ್ತ ಟೀವಿ ಕಡೆ ಮುಖ ಮಾಡಿದ್ದಳು. ಆಗತಾನೇ ಚುನಾವಣೆಯ ಬಿಸಿ ಏರುತ್ತಿತ್ತು, ಕರ್ನಾಟಕದಲ್ಲಿ.

ನ್ಯೂಸ್ ಚಾನಲೊಂದರಲ್ಲಿ ಮತದಾರರು ಅವರ ಜವಾಬ್ದಾರಿಗಳ ಕುರಿತು ಏನೋ ಶೋ ಬರುತ್ತಿದ್ದುದನ್ನ ನೋಡಿದ ಗೆಳೆಯ, ಅವಳ ಬಳಿ ಪ್ರಸ್ತುತ ರಾಜಕೀಯದ ಬಗ್ಗೆ ಅವಳ ಅಭಿಪ್ರಾಯ ಕೇಳಿದನಂತೆ. ಅದಕ್ಕೆ ಅವಳದ್ದು ಡೋಂಟ್ ಕೇರ್ ಅನ್ನೋ ತರಹದ ಅಸಡ್ದೆಯ ಉತ್ತರ. ಈ ಬಾರಿ ನೀನು ವೋಟ್ ಮಾಡ್ತೀಯಾ ಅಂದಿದ್ದಕ್ಕೆ ಉತ್ತರ ನೋ ವೇ.

ಟಿ ವಿ ಚಾನಲುಗಳಲ್ಲಿ ಆಗಾಗ ಕಾಣಿಸಿಕೊಂಡು, ರಾಜಕೀಯ, ಮತದಾರರು , ಪ್ರಜಾಪ್ರಭುತ್ವ ಅಂತೆಲ್ಲ ಪುಂಖಾನುಪುಂಖವಾಗಿ ಮಾತನಾಡೋ ಪತ್ರಕರ್ತರೊಬ್ಬರ ಮಗಳಿಂದ ಇಂತಹ ಉತ್ತರ ಬಂದಿದ್ದು ನೋಡಿ ಈತನಿಗೆ ಅಚ್ಚರಿ.

ಹೋಗಲಿ, ನಿನ್ನ ಬಳಿ ವೋಟರ್ ಐಡಿ ಆದ್ರೂ ಇದೆಯಾ, ಅಂದಿದ್ದಕ್ಕೆ, ಇಲ್ಲ ಇಲ್ಲ, ನಾನು ಅದೆಲ್ಲ ಇಟ್ಟುಕೊಂಡಿಲ್ಲ ಅನ್ನುವ ಉಡಾಫೆಯ ಉತ್ತರ.
ನೋಡು, ವೋಟರ್ ಐಡಿ ಮಾಡಿಸಿಕೋ, ಅದು ಬಹಳ ಮುಖ್ಯ.. ಅಂತೇನೋ ಹೇಳೋಕೆ ಇವನು ಹೊರಟರೆ,
ಓ, ನೀನು ಆಗಿಂದ ಈ ಸುದ್ದಿ ಮಾತಾಡ್ತಾ ಇರೋದು ಇದಕ್ಕಾಗಿಯೋ?, ನೋಡು ನಾನು ಅದನ್ನೆಲ್ಲ ಮಾಡಿಸಿಕೊಳ್ಳಲ್ಲ, ನನಗೆ ವೋಟರ್ ಐಡಿ ಮಾಡಿಸಿಕೊಡೋದೂ ಬೇಡ, ಅದಕ್ಕೆ ಕಮೀಷನ್ ಗಿಮೀಷನ್ ಅಂತ ನೀನು ದುಡ್ದು ಮಾಡ್ಕೊಳ್ಳೋದೂ ಬೇಡ ಅನ್ನಬೇಕೆ?!

ಆತ ಅವಳಿಗೆ ಮತ್ತೇನೂ ಹೇಳೋಕೂ ಹೋಗದೇ, ಎದುರಿದ್ದ ಟಿವಿ ನೋಡುತ್ತ ಕುಳಿತನಂತೆ. ಅವಳು ವೋಟರ್ ಐಡಿ ಕಾರ್ಡ್ ಅಂದ್ರೆ ಕ್ರೆಡಿಟ್ ಕಾರ್ಡ್ ತರಹದ್ದೇನೋ ಒಂದು ಅಂತ ಅಂದುಕೊಂಡಿದ್ದಳು, ಪಾಪ.

ಶುಕ್ರವಾರ, ಜನವರಿ 14, 2011

ಸಂಕ್ರಮಣದ ಹೊತ್ತು

ಆಫೀಸಿಂದ ಹೊರಟರೆ
ಅಚಾನಕ್ಕಾಗಿ ಮದುವೆ ಗೊತ್ತಾದ
ಹೆಣ್ಣಿನ ಹಾಗೆ
ರಸ್ತೆಗಳ ಚಹರೆಯೇ ಬದಲು.
ಫುಟ್ ಪಾತುಗಳ ಮೇಲೆ ಕಬ್ಬು,
ಹೂ ರಾಶಿ ..ಯಾರಿಗೆ ಏನು ಬೇಕೋ ಏನೋ
ಎಲ್ಲೆಡೆ ಚೌಕಾಸಿ

ಬೈಕು ಸರ್ವೀಸಿಗೆ ಬಿಡಲು
ಹೊತ್ತು,
ಅಥವ ಹೊಸದೆ ಕೊಂಡರೆ ಹೇಗೆ?
ಈ ಬಾರಿ
ಸ್ಯಾಲರಿ ಹೈಕಿಲ್ಲ
ಅಂತ ಸುದ್ದಿ

ಅಮ್ಮನ ಕಳಕಳಿಯ ಫೋನು
ನಾಳೆ ರಜೆ, ಹೊರಟು
ಬನ್ನಿ ಊರಿಗೆ
ಸಂಕ್ರಾಂತಿಗೆ
ಪಾಯಸ , ಹೋಳಿಗೆ ವಿಶೇಷ
ಇಲ್ಲಿಯವರೆಗೆ ಮನೆಯಲ್ಲಿ
ಅದನ್ನ ಹೀಗೆಲ್ಲ ಆಚರಿಸಿದ್ದು
ನೆನಪಿಲ್ಲ

ಮನೆಗೆ ಬಂದರೆ
ಹೆಂಡತಿಯ ಮನವಿ
ಇನ್ನಾದರೂ ಖರ್ಚು ಲೆಕ್ಕವಿಡು
ಅದೂ ಇದೂ ಅಂತ
ಉಡಾಯಿಸೋದು ಬಿಡು

ನಾಳೆ
ಗೆಳೆಯನೊಬ್ಬ ಹೊಸ ಬಾಡಿಗೆ ಮನೆಗೆ
ಹೊರಟಿದ್ದಾನೆ


ಇದು ಸಂಕ್ರಮಣದ ಹೊತ್ತು..