ಮಂಗಳವಾರ, ಜನವರಿ 19, 2010

ಬಿದಿರಿನ ಉಸಿರಿಗೆ..

ಮಂದಮಾರುತದಿ ಬೆರೆತು ಕೇಳುತಿದೆ ಮಧುರ ಮುರುಳಿ ಗಾನ
ಹುಲ್ಲುಗಾವಲಿನ ಬಯಲೊಳಗೆಲ್ಲೋ, ಕೊಳಲು ಹಿಡಿದ ತರುಣ

ಅಲೆ ಅಲೆ ಅಲೆ ಅಲೆ ನಾದದ ಲೀಲೆ, ಹಬ್ಬಿದೆ ಸ್ವನ ಘಮ ಊರಿನ ಮೇಲೆ..
ಬಗೆ ಬಗೆ ಬಗೆ ಬಗೆ ವೇಣು ವಿನೋದ, ಜೀವದಿಂ ಜೀವಕೆ ನೂರ್ಬಗೆ ಮೋದ

ಬೆಳ್ಳಿಯ ಗಿಂಡಿಲಿ ಹಾಲನು ಕರೆಯುವ ಗೋಪಿಕೆಗದೆ ಸಂಸಾರ
ನಲ್ಲನ ಕಾಯುವ ಹುಡುಗಿಗೆ ಮನದಲಿ ಭೃಂಗದ ಸಂಚಾರ

ಮರದಡಿ ನೆಳಲಿನ ದನಗಾಹಿಗೆ ನೆಮ್ಮದಿಯಾ ತಾನ
ದೇವರೆದುರ ಮಂದಸ್ಮಿತ ವದನ, ಧ್ಯಾನದೊಳಗೆ ಲೀನ

ಬಾಲರಿಗೆ ನವನೀತ, ಸೋತವಗದು ಗೀತ
ಬೇಟದ ಪ್ರೇಮಿಗಳು ರಾಗಕೆ ಉನ್ಮತ್ತ

ಬಿದಿರಿನ ಉಸಿರಿಗೆ ಯಾವುದೋ ಲೀಲೆ,
ಭಾವಕೆ, ಭಕ್ತಿಗೆ ಪ್ರೇಮಕೆ ಮುಕ್ತಿಗೆ -ಎಲ್ಲಕೂ ತಾಯೇ..

ಭಾನುವಾರ, ಜನವರಿ 03, 2010

ಗದ್ದೆ ಬದುವೆಂಬ ಹಸಿರ ಲೋಕ..

ಮನೆಯಲ್ಲಿ ಗಣಹೋಮ. ಒಂದಿಷ್ಟು ಗರಿಕೆ ಬೇಕು. ಬೆಳಗಾತ ಅಪ್ಪ ದೂರ್ವೆ ಕೊಯ್ಯಿ ಅಂದಿದ್ದು ಬೇರೆ ಯಾವುದೋ ಕೆಲಸದ ಮಧ್ಯ, ಮರೆತೇ ಹೋಗಿದೆ. ಹೊರಗೋಡುವುದು, ಅಲ್ಲಿಗೇ. ಇನ್ನು, ಪೇಟೆಯಲ್ಲಿರುವ ಪರಿಚಯಸ್ಥರು ಯಾರೋ ಮನೆಗೆ ಬಂದಿದ್ದಾರೆ.ಅವರ ನಾಲ್ಕನೇ ಕ್ಲಾಸಿನ ಮಗನಿಗೆ ಓದು ತಲೆಗೆ ಹತ್ತುವುದಿಲ್ಲವಂತೆ, ಒಂದಿಷ್ಟು ಒಂದೆಲಗದೆಲೆ ಬೇಕಿದೆ. ಅಮ್ಮ ಮುಖ ನೋಡಿದರೆ, ಮತ್ತೆ ಅಲ್ಲಿಗೇ ಓಡಬೇಕು. ಎಲ್ಲಿಗೆ ಎಂದರೆ, ಗದ್ದೆ ಬದುವಿಗೆ.ಕಟ್ಟಪುಣಿಗೆ. ಯಾಕೆ ಎನ್ನುತ್ತೀರೋ, ಇವೆಲ್ಲ ಕೂಡಲೇ ಕೈಗೆ ದಕ್ಕುವುದು ಅಲ್ಲಿಯೇ.

ಗದ್ದೆಯ ಹೊರಗಿನ ಮತ್ತು ಒಳಗಿನ ಜೀವಪ್ರಪಂಚವನ್ನು ಬೇರ್ಪಡಿಸುವ ಮಹತ್ತರ ಜವಾಬುದಾರಿ ಈ ಕಟ್ಟೋಣದ್ದು. ಗದ್ದೆಯೊಳಗೆ ಓಡಾಡಿ ಹುಳಹುಪ್ಪಟೆ ಹೆಕ್ಕುವ ಏಡಿಗೆ, ಈ ಗದ್ದೆಬದುವಿನಡಿಯ ಮಾಟೆಯೇ ಆಶ್ರಯ.ಈ ಮಾಟೆಗಳು, ಮೇಲ್ಗದ್ದೆ ಯಿಂದ ಕೆಳಗದ್ದೆಗೆ, ಅಕ್ಕ ಪಕ್ಕದ ಎರಡು ಸಮಾನಾಂತರ ಗದ್ದೆಗಳಿಗೆಲ್ಲ ನೀರು ಸಪ್ಲೈ ಮಾಡುವ ತೂಬುಗಳಾಗಿಯೂ ಕೆಲಸ ಮಾಡುತ್ತವೆ. ಎಲ್ಲಾದರೂ ಗದ್ದೆಬದುಗಳಲ್ಲಿ ನಡೆವಾಗ ಬೈಹುಲ್ಲು ಉಂಡೆಯೋ, ಸಣ್ಣ ಸಣ್ಣ ಕಲ್ಲುಗಳೋ ಕಂಡರೆ, ಅವುಗಳು ಈ ಮಾಟೆಗಳ ಮೂವೆಬಲ್ ಕ್ರೆಸ್ಟ್ ಗೇಟುಗಳು ಅಂಥರ್ಥ.

ಗದ್ದೆಬದುಗಳನ್ನು ಯಾವ ರೈತನೂ ಹಾಗೇ ಬಿಡುವುದಿಲ್ಲ. ನಾಟಿಗೂ ಮುನ್ನ ಕಟ್ಟಪುಣಿ ಸಮ ಮಾಡುವುದೇ ಒಂದು ದೊಡ್ಡ ಕೆಲಸ. ಬದುವಿನ ಒಳಮೈಯಲ್ಲಿ ಹಬ್ಬಿರುವ ಕಳೆಗಳನ್ನು ಗುದ್ದಲಿಯಿಂದ ನೀಟಾಗಿ ಕೆತ್ತಿ, ಚಂದ ಮಾಡಿ ಸಿಂಗರಿಸಲಾಗುತ್ತದೆ. ಗದ್ದೆಯಲ್ಲಿನ ಕೆಸರು ನೀರು ಈ ಬದುವಿಗೆ ತಾಕುತ್ತ, ತುಳುಕುತ್ತ ನಿಂತು ಪುಟ್ಟ ಕೆರೆಗಳನ್ನು ನೆನಪಿಸುತ್ತಿರುತ್ತವೆ.

ಮಳೆಗಾಲದ ಸಂಜೆಗಳಲ್ಲಿ, ನಾಟಿ ಮಾಡುತ್ತಿರುವ ಅರ್ಧ ನಾಟಿಯಾದ ಗದ್ದೆಗಳ ಬಳಿ ಸಂಜೆ ಹೊತ್ತು ಹೋಗಿ ನೋಡಿ. ಗದ್ದೆ ಹಾಳಿಗಳ ಮೇಲೆ, ಒಂದರ ಮೇಲೊಂದು ಪೇರಿಸಿಟ್ಟ ಭತ್ತದ ಸಸಿಗಳ ಕಟ್ಟುಗಳು ಅಲ್ಲಿ ಪವಡಿಸಿರುತ್ತವೆ. ಗದ್ದೆಯ ಕೆಸರೊಳಗೆ ಬೇರೂರುವ ಮುನ್ನ, ಅಲ್ಲಿ ಬೆಳತನಕದ ವಿಶ್ರಾಂತಿ ಅವಕ್ಕೆ. ನಾಟಿ ಮಾಡುವ ಹೆಂಗಸರು ಚಹಾ ಕುಡಿಯುತ್ತ ಹರಟುವುದೂ ಇಲ್ಲಿಯೇ.

ಗದ್ದೆಬದುಗಳಲ್ಲಿ ಬರೀ ಒಂದೆಲಗ ಒಂದೇ ಅಲ್ಲ, ಎಂಥೆಥದೋ ಗಿಡ-ಚಿಗುರುಗಳು ಸದಾ ಲಭ್ಯ.ನೀರು ಚೆನ್ನಾಗಿರುವಲ್ಲಿ ದರ್ಭೆ ಕೂಡ ಸಿಗುವುದಿದೆ. ಮನೆಯ ದನಕ್ಕೆ ಹುಲ್ಲು ಬೇಕೆಂದರೆ, ಕೊನೆಗೆ- ಬೇರೆಲ್ಲ ಮೂಲಗಳು ಮುಗಿದ ಮೇಲೆ, ಕಟ್ಟಪುಣಿಯೇ ಗತಿ.ಯಾವುದೇ ಊರಿನ ಗದ್ದೆಗಳನ್ನು ಅಕ್ಟೋಬರು ತಿಂಗಳು ನಂತರ ನೋಡಿ,ದನಗಳು ಹಸಿರಿನ ಪಸೆಯಷ್ಟೇ ಉಳಿದಿರುವ ಈ ಬದುಗಳನ್ನೇ ಹೆರೆಯುತ್ತ ನಿಂತಿರುವುದು ಕಾಣುತ್ತದೆ.

ಕಟಾವಾದ ನಂತರ, ಗದ್ದೆಗಳು ಮಕ್ಕಳ ಕ್ರಿಕೆಟ್ ಬಯಲಾಗುತ್ತವೆ. ಈ ಅಸಡಾ ಬಸಡಾ ಹಬ್ಬಿಕೊಂಡಿರುವ ಗದ್ದೆಗಳಲ್ಲಿ ಬೌಂಡರಿ ಗುರುತಿಸುವ ಸಮಸ್ಯೆಯಿಲ್ಲ. ಏಕೆಂದರೆ ಇದಿನಬ್ಬನ ಬದುವಿಗೆ ತಾಗಿದರೆ ಟೂಡಿ, ಶಂಕರಭಟ್ಟರ ಕಟ್ಟಪುಣಿಗೆ ಫೋರು. ಬೌಂಡರಿ ದಾಟಿತು- ದಾಟಿಲ್ಲ ಸಮಸ್ಯೆಯೇ ಇಲ್ಲ. ಬಾಲು ನಿಯತ್ತಾಗಿ ಬದುವಿಗೆ ತಾಗಿ ವಾಪಾಸು ಬಂದುಬಿಡುತ್ತದೆ. ಕೆಲಸಗಳೆಲ್ಲ ಮುಗಿದ ಸಂಜೆಗಳಲ್ಲಿ ಅಪರೂಪಕ್ಕೊಮ್ಮೆ ಮಕ್ಕಳ ಅಪ್ಪ ಅಮ್ಮಂದಿರೂ ಬದುಗಳಲ್ಲಿ ಕುಳಿತು ಹರಟೆಯಲ್ಲಿ ತೊಡಗಿ, ಆಟ ನೋಡುತ್ತಿರುತ್ತಾರೆ.

ಆದರೆ, ಈಗೀಗ ಈ ಬದುಗಳನ್ನು ಕೆತ್ತುವ ಕಾರ್ಯಕ್ಕೂ ಕುತ್ತು ಬರುತ್ತಿದೆ. ದಿನಕ್ಕಿನ್ನೂರು ಕೊಟ್ಟರೂ ಗದ್ದೆಹಾಳಿಯನ್ನು ಸರಿ ಮಾಡಿಕೊಡುವ ಮಂದಿ ಸಿಗುತ್ತಿಲ್ಲ. ಬೇಸಾಯ ಮಾಡುವುದೇ ದುಸ್ತರವಾಗಿರುವಾಗ, ಇನ್ನು ಗದ್ದೆಯ ಸುತ್ತಮುತ್ತ ಚಂದ ಮಾಡುವ ಕಾರ್ಯ ದೂರವೇ ಉಳಿಯಿತು. ನಮ್ಮೂರ ಗದ್ದೆಗಳೆಲ್ಲ ನಿಧನಿಧಾನವಾಗಿ ತೋಟಗಳಾಗಿ ಬದಲಾಗುತ್ತಿವೆ, ರಸ್ತೆ ಬದಿಯ ಗದ್ದೆಗಳು ಸೈಟುಗಳಾಗುತ್ತಿವೆ. ಎಕರೆಗಳ ಬದಲಿಗೆ ಅವಕ್ಕೀಗ ಸಿಕ್ಸ್ಟಿ-ಫೋರ್ಟಿಯಲ್ಲಿ ರೇಟು ಬಂದಿದೆ. ಹೊಲ ಸತ್ತಿದೆ, ಮುಳ್ಳಬೇಲಿ ಅವುಗಳನ್ನು ಸುತ್ತಿದೆ.

ಮನೆಯೆದುರಿನ ಖಾಲಿ ಗದ್ದೆಯ ಬದುವಿನಲ್ಲಿ ನಾಚಿಕೆ ಮುಳ್ಳು ಬೆಳೆದಿದೆ. ಮೊದಲಿನಂತೆ ಯಾರೂ ಈಗ ಗದ್ದೆ ಯಾಕೆ ಖಾಲಿ ಬಿಟ್ಟಿದ್ದೀರಿ ಅಂತೆಲ್ಲ ಕೇಳುವುದಿಲ್ಲ. ಉತ್ತರ ಎಲ್ಲರಿಗೂ ಗೊತ್ತಿದೆ. ಇನ್ನು,ಗದ್ದೆ ಬದುವಿನ ಕಿರು ಕಾಲುಹಾದಿಯಲ್ಲಿ ನಡೆದು ಹೋಗುವ ಪರಿಸ್ಥಿತಿ ಇಲ್ಲ, ಪಕ್ಕಕ್ಕೇ ಟಾರು ರಸ್ತೆ ಬಂದಿದೆ. ಆದರೂ, ಎಳೆ ಬೆಳಗಲ್ಲಿ ಈ ಬದುಗಳಲ್ಲೇ ಹುಲ್ಲತೆನೆಯೊಂದು ನಗುತ್ತ ನಿಂತು, ಇಲ್ಲ ಇನ್ನೂ ಎಲ್ಲ ಹಾಳಾಗಿಲ್ಲ ಎನ್ನುತ್ತದೆ. ಮನಕ್ಕೆ ಹಾಯೆನಿಸುತ್ತದೆ.

(03-01-10 ರ ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟಿತ)