ಮಂಗಳವಾರ, ಡಿಸೆಂಬರ್ 21, 2010

ಸ್ಪರ್ಶ

ಪಾರಿಜಾತದ ಹೂವು ಕೈಯ ಸವರಿದ ಹಾಗೆ
ಜಂಗುಳಿಯ ಮಧ್ಯದೊಳಗೊಂದು ಸ್ಪರ್ಶ
ಯಾವುದೋ ಮೆಲುಕೆಲ್ಲ ಆ ಬೆರಳ ತುದಿಯಿಂದ
ತೆರೆದುಕೊಂಡಂದದಲಿ ನೆನಪ ವರ್ಷ

ಹಳೆಯ ಮಂಜೂಷೆಯಾ ಕಳೆದ ಕೀಲಿಯ ಕೈಯ
ಸಟ್ಟನೇ ಕೊಟ್ಟು ಹೋದಂತೆ ಯಾರೋ
ಕತ್ತಲಲಿ ಕಾಣದೆಯೆ ಕಳೆದು ಹೋಗುವ ಹೊತ್ತು
ತಿರುವಿನಲಿ ಕಂಡಂತೆ ಉರಿವ ಸೊಡರು

ಆಪ್ತ ಜೀವವೊಂದು ಹಿಂದೆ ಇಹವ ಮರೆವ ಸಮಯದಲ್ಲಿ
ಕೈಯನ್ನೊಮ್ಮೆ ಹಿಡಿದು, ಕಣ್ಣ ಮುಚ್ಚಿಕೊಂಡಿತು
ಯಾಕೋ ಇಂದು ಅಂಥದೊಂದು ಸೋಕು ತಾಕಿ
ನಡೆವ ದಾರಿಯೊಳಗೆ ಮನವು ಹೂತುಕೊಂಡಿತು

ಯಾರದೋ ನಡೆಯೊಂದು ಅವರ ತಿಳಿವಿಗೆ ಬರದೆ
ನನ್ನ ಪಥವ ಬದಲು ಮಾಡಿ ಹೊರಟುಬಿಟ್ಟಿತು
ಮರೆಯುತಿದ್ದ ಸ್ಮೃತಿಗೆ ಮತ್ತೆ ಜೀವ ಕೊಟ್ಟು ಮೆಲ್ಲ
ಜನರ ಸಂತೆಯೊಳಗೆ ಸ್ಪರ್ಶ ಕರಗಿ ಹೋಯಿತು..

ಮಂಗಳವಾರ, ಡಿಸೆಂಬರ್ 07, 2010

ಪ್ರಣತಿಯಿಂದ ಪ್ರಬಂಧ ಸ್ಪರ್ಧೆ



ಸಾಹಿತ್ಯ, ಸಂಸ್ಕೃತಿ, ಪ್ರಕೃತಿ -ಅಂಶಗಳನ್ನು ಧ್ಯೇಯವಾಗಿಸಿಕೊಂಡಿರುವ ನಮ್ಮ ಸಂಸ್ಥೆ ‘ಪ್ರಣತಿ’ಯಿಂದ, ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದೇವೆ. ವಿದ್ಯಾರ್ಥಿಗಳು ‘ಪ್ರಕೃತಿ ನಿಯಮ ಮತ್ತು ಮನುಷ್ಯ ಜೀವನ’ ಎಂಬ ವಿಷಯದ ಮೇಲೆ ೨೦೦೦ ಪದಗಳಿಗೆ ಮೀರದಂತೆ ಪ್ರಬಂಧವನ್ನು ಸ್ಫುಟವಾದ ಕೈಬರಹದಲ್ಲಿ ಅಥವಾ ಡಿ.ಟಿ.ಪಿ. ಮಾಡಿ ಕಳುಹಿಸಬಹುದು. ಪ್ರಬಂಧದ ಜೊತೆ ನಿಮ್ಮ ಕಾಲೇಜ್ ಐಡೆಂಟಿಟಿ ಕಾರ್ಡ್‌ನ ಪ್ರತಿ ಇರಿಸುವುದು ಕಡ್ಡಾಯ. ಸಂಪಾದಕ ಮಂಡಲಿ ಮತ್ತು ವಿಷಯ ತಜ್ಞರು ಆಯ್ದ ಪ್ರಬಂಧಕ್ಕೆ ಸೂಕ್ತ ಬಹುಮಾನ ನೀಡಲಾಗುತ್ತದೆ. ಪ್ರಬಂಧವನ್ನು ಈ ವಿಳಾಸಕ್ಕೆ ಕಳುಹಿಸಬಹುದು ಅಥವಾ ಇ-ಮೇಲ್ ಮಾಡಬಹುದು. ಕೊನೆಯ ದಿನಾಂಕ: ೩೦ ಡಿಸೆಂಬರ್ ೨೦೧೦. ವಿಳಾಸ: ಪ್ರಣತಿ, ನಂ. ೪೪೮/ಎ, ೮ನೇ ಮೇನ್, ೭ನೇ ಕ್ರಾಸ್, ತ.ರಾ.ಸು. ರಸ್ತೆ, ಹನುಮಂತನಗರ, ಬೆಂಗಳೂರು - ೫೬೦ ೦೧೯. ಇ-ಮೇಲ್: prabandha@pranati.in. ಯಾವುದೇ ಮಾಹಿತಿಗೆ: ೯೬೧೧೪೫೮೬೯೮ / ೯೯೮೦೦೨೨೫೪೮.

ನೀವು ಕಾಲೇಜು ವಿದ್ಯಾರ್ಥಿಯಾಗಿದ್ದರೆ ನೀವೇ ಭಾಗವಹಿಸಿ. ಇಲ್ಲವೇ, ನಿಮ್ಮ ಪರಿಚಿತ ವಿದ್ಯಾರ್ಥಿಗಳಿಗೆ ತಿಳಿಸಿ. ;)

ಮಂಗಳವಾರ, ಅಕ್ಟೋಬರ್ 19, 2010

ಬದುಕೆಂಬ ರಂಗೋಲಿ

ಉಷೆಯೆದ್ದು ನಸುಕಿನಲಿ,
ಮಂಜಿನಲಿ ಮುಖ ತೊಳೆದು
ಭ್ರೂ ಮಧ್ಯದಲಿ ರವಿಯ ಸಿಂಧೂರವಿಟ್ಟು
ಬಣ್ಣದಾ ಬಟ್ಟಲನು ಕೈಗಳಲಿ ಹಿಡಿದು
ನಗುಮೊಗದಿ ಬಂದಿಹಳು ಜಗದ ಹೆಬ್ಬಾಗಿಲಿಗೆ
ಚಿತ್ತ ಭಿತ್ತಿಯ ಮೇಲೆ ಚಿತ್ತಾರವಿಡಲು

ಎಳೆದಂತೆ ಆಕೃತಿಯು
ಜೀವಿಗಳೆ ಚುಕ್ಕಿಗಳು, ಅನುರಾಗದೆಳೆ ಎಳೆಯು
ನೂರಾರು ಚುಕ್ಕೆಗಳ ಮಧ್ಯೆ ಹೊಳಪಿನ ಚುಕ್ಕಿ
ಸೊಗಸಾಗಿ ರಚಿಸುವಳು ಚುಕ್ಕೆಗಳ ಬಳ ಬಳನೆ
ಎಳೆಯಾಯ್ತು ಚಿತ್ತಾರ ಬಂಧಾನುಬಂಧ

ಚಿತ್ರ ಮುಗಿದರೂ ಮತ್ತೆ,
ಹೊರಗೆ ಕೆಲ ಚುಕ್ಕಿಗಳು
ಸುತ್ತಿ ಎಳೆಯುತ ಬಂಧ ಬರೆವ ಸಡಗರದಲ್ಲಿ
ಇಟ್ಟ ಚುಕ್ಕೆಯ ಇವಳು ಮರೆತಿಹಳೋ ಎಂತೋ ?
ಇಟ್ಟು ಚುಕ್ಕಿಯ, ಮತ್ತೆ ಬಿಟ್ಟಿದ್ದು ಏಕೋ ?
ಚಿತ್ರವಾಗದ ಚುಕ್ಕಿ ಇಟ್ಟಿದ್ದು ಹೇಗೋ ?

ಹೊರಗುಳಿದರೇನಾಯ್ತು
ಕಣ್ಣೆದುರು ಮಿಂಚುತಿದೆ
ಚಿತ್ತಾರಕೇಂದ್ರದೊಳು ನಿಂತ ಹೊಳೆ ಚುಕ್ಕೆ
ಎಳೆಗಳಾ ಬಂಧದಲಿ ನಗುವ ಬಿಂದು
ಹೆಬ್ಬಾಗಿಲಲಿ ನಿಂತು ಶುಭವ ಹಾರೈಸಿದರೆ
ತುಂಬು ಮನಸಿನ ಹರಕೆ ಕೇಳೀತು ಒಳಗೆ !


-ಭಾರತಿ ಹೆಗಡೆ, ಸಿದ್ದಾಪುರ
(ನಿಮ್ಮ ಅನಿಸಿಕೆಗಳನ್ನು ನನ್ನ ಅತ್ತೆಗೆ ತಲುಪಿಸಲಾಗುವುದು)

ಸೋಮವಾರ, ಸೆಪ್ಟೆಂಬರ್ 27, 2010

ತ್ರೀ- ಡಿ ಹನಿಗಳು

ಬತ್ತಿದ್ದ ತೊರೆಯೊಳಗೆ
ಅವಳು ಕಾಲಿಟ್ಟ ಕೂಡಲೇ
ಎಲ್ಲಿಂದಲೋ ಬಂದ ನೀರು
ಗೆಜ್ಜೆ ತೋಯಿಸಿತು,ಅವರ್ಯಾರೋ
ಹೊಟ್ಟೆಕಿಚ್ಚಿಗೆ ಅಲ್ಲೆಲ್ಲೋ ಮಳೆಯಾಯಿತು
ಅಂದರು.

ಇನ್ನೂ ಯಾಕೆ ಮಳೆ ಬಂದಿಲ್ಲ ಅಂತ
ತುಂಟ ಅಣಬೆಯೊಂದು
ಮಣ್ಣಿಂದ ಹೊರ ಬಂದು ಇಣುಕೋ
ಹೊತ್ತಿಗೆ ಹನಿಯೊಂದು
ಅದರ
ನೆತ್ತಿ ಮೊಟಕಿತು!

ದಣಪೆಯಾಚೆಗೆ
ಕಾದು ನಿಂತಿದ್ದ ಎಳೆಕಿರಣ
ಅಮ್ಮ ಎದ್ದು ಅಡುಗೆಮನೆಗೆ
ಹೋದ ಕೂಡಲೇ,
ಮೆಲ್ಲನೆ ಒಳಬಂದು
ಎಲ್ಲರನ್ನ ಎಬ್ಬಿಸಿತು.

ಬುಧವಾರ, ಸೆಪ್ಟೆಂಬರ್ 01, 2010

ಅಪ್ಪ

ಸೆಕೆಂಡ್ ಪೀಯೂಸಿ, ಕನ್ನಡ ಕ್ಲಾಸು. ಅವತ್ತು ನೆಕ್ಸ್ಟ್ ಪಿರಿಯಡ್ಡು ಪೊಲಿಟಿಕಲ್ ಸೈನ್ಸು- ನಂದು ನೋಟ್ಸೇನೋ ಬರೆದಾಗಿರಲಿಲ್ಲ ಅಂತ ಏನೋ ಗೀಚುತ್ತಿದ್ದೆ. ಸರ್ರು ನೋಡಿದರು- ಏನದು ಅಂತ ದನಿ ಎತ್ತರಿಸಿಯೇ ಕೇಳಿದರು, ನಾನು ಸರ್, ಪೊ ಪೊ ಪೊಲಿಟಿಕಲ್ ಸೈನ್ಸ್ ನೋಟ್ಸು ಸಾರ್ ಅಂದೆ.. ಅದನ್ನ ಯಾಕೋ ನನ್ನ ಕ್ಲಾಸಲ್ಲಿ ಬರಿತಿದೀಯಾ
ಸಾರ್, ಮನೇಲಿ ತುಂಬ ಕೆಲ್ಸ ಸಾರ್ ಅಪ್ಪ ಬರಿಯೋಕೆ ಬಿಡ್ಲಿಲ್ಲ

ಕ್ಲಾಸು ಇಡೀ ಜೋರಾಗಿ ನಕ್ಕಿತು. ನಾನೂ ನಕ್ಕೆ- ಸರ್ರೂ ನಕ್ಕರು.

ಹೌದೌದು, ಮನೇಲಿ ಭಾರೀ ಕೆಲ್ಸ ಮಾಡ್ತೀಯಾ ನೋಡು ನೀನು ಅಂತಂದು ನೋಟ್ಸು ಎತ್ತಿಟ್ಟಿಕೊಂಡು ನಗುತ್ತಲೇ ಪಾಠ ಮುಂದುವರಿಸಿದರು.

++++

ನಂಗೆ ನನ್ನ ಅಪ್ಪನೇ ಪಿಯುಸಿಯಲ್ಲಿ ಕನ್ನಡ ಅಧ್ಯಾಪಕ .ರಾಮಾಯಣ ದರ್ಶನಂ, ಯಯಾತಿ, ದೇವರ ಹೆಣ, ಶವದ ಮನೆ ಯಂತಹ ಪಾಠಗಳನ್ನ, ಕುಮಾರ ವ್ಯಾಸ , ಲಕ್ಷ್ಮೀಶ, ರಾಘವಾಂಕ ರ ಷಟ್ಪದಿಗಳನ್ನು ತರಗತಿಯಲ್ಲಿ ಕಥೆ- ಉಪಕಥೆಗಳ ಸಮೇತರಾಗಿ ವಿವರಿಸುವಾಗ ಅದನ್ನ ಎರಡೂ ಕಿವಿದೆರೆದು ಕೇಳುವ ಭಾಗ್ಯ ನನ್ನದಾಗಿತ್ತು. ಅಪ್ಪ ಭೀಮನನ್ನು ವರ್ಣಿಸುವಾಗ ಭೀಮನಾಗಿಯೂ, ಕೃಷ್ಣನ ಮಾತು ಬಂದರೆ ಅದೇ ಶೃತಿಯಲ್ಲಿಯೂ ಸುಲಲಿತವಾಗಿ ಪಾಠ ಮಾಡ್ತಿದ್ದ. ಯಕ್ಷಗಾನ ದ ಹಿನ್ನೆಲೆ ಅಪ್ಪನಿಗೆ ಸಹಾಯ ಮಾಡಿತ್ತು. ಅಪ್ಪನ ಕ್ಲಾಸಲ್ಲಿ ಉಳಿದ ಕ್ಲಾಸಲ್ಲಿ ಆಗುವ ಹಾಗೆ ಗಲಾಟೆಯೂ ಆಗ್ತಿರ್ಲಿಲ್ಲ. ಯಾಕಂದ್ರೆ ಅಪ್ಪ ಮಾತಿಗೊಂದು ಕಥೆ ಹೇ ಗಮ್ಮತ್ತು ಮಾಡ್ತಿದ್ದರಾದ್ದರಿಂದ, ಯಾವ ಮಕ್ಕಳಿಗೂ ಅವರನ್ನ ಎದುರು ಹಾಕಿಕೊಳ್ಳುವ ಇಚ್ಛೆ ಇರಲೂ ಇಲ್ಲ. ಅಪ್ಪ ಯಾರಿಗಾದರೂ ದನಿ ಎತ್ತಿ ಬೈದಿದ್ದು ಕೂಡ ನಾನು ನೋಡಲಿಲ್ಲ.

ನೀನು ಓದುತ್ತಿದ್ದಾಗಿನ ಎರಡು ವರ್ಷ ನಾನು ಅತ್ಯಂತ ಕಷ್ಟದ ಕನ್ನಡ ಪ್ರಶ್ನೆ ಪತ್ರಿಕೆಗಳನ್ನು ಸಿದ್ದ ಪಡಿಸ್ತಾ ಇದ್ದೆ ಅಂತ ಅಪ್ಪ ಆಮೇಲೆ ನಂಗೆ ಹೇಳಿದ್ರು. ಯಾಕೆ ಅಂದ್ರೆ- ನಾನು ಹೈಸ್ಕೂಲಲ್ಲಿ ಇದ್ದಾಗಿನಿಂದ ಅಪ್ಪ ಬೇರೆ ಮಕ್ಕಳ ಪತ್ರಿಕೆ ತಿದ್ದುವುದನ್ನು ನೋಡೀ ನೋಡೀ ನಂಗೆ ಪ್ರಶ್ನೆ- ಉತ್ತರ ಎರಡೂ ಬಾಯಿಪಾಠ ಆಗಿ ಹೋಗಿದ್ದವು.

ನಾನು ಓದುತ್ತಿದ್ದ ಎರಡು ವರ್ಷವೂ ಅಪ್ಪ ನಂಗೆ ಒಂದೇ ಒಂದು ಕಿರು ಪರೀಕ್ಷೆಯ ಪ್ರಶ್ನೆ ಕೂಡ ಹೀಗಿರಬಹುದು ಅಂತ ಹೇಳಲಿಲ್ಲ. ನನ್ನ ಉತ್ತರ ಪತ್ರಿಕೆಯನ್ನು ನನ್ನೆದುರು ಒಂದೇ ಸಲ ಕೂಡ ತಿದ್ದಲಿಲ್ಲ. ಹಾಗಂತ ನಾನೇನು ತಪ್ಪು ಮಾಡಿದೆ ಅಂತ ಆಮೇಲೆ ಹೇಳುವುದನ್ನೂ ಮರೆಯಲಿಲ್ಲ. ನಾನು ತರಗತಿಯಲ್ಲಿ ಒಂದೇ ಸಲ ಕೂಡ ಕನ್ನಡದಲ್ಲಿ ಅತೀ ಹೆಚ್ಚು ಅಂಕ ಗಳಿಸಲಿಲ್ಲ!

++++

ಅಪ್ಪ, ತನ್ನ ೩೦ ವರ್ಷಗಳ ಸುದೀರ್ಘ ಸೇವೆಯಿಂದ ನಿನ್ನೆ ನಿವೃತ್ತನಾದ. ನಾನೂ ಹೆಂಡತಿ ಸಮೇತನಾಗಿ , ಅಮ್ಮನ ಜೊತೆ ನಾನು ಓದಿದ ಶಾಲೆಗೆ ಮತ್ತೆ ಹೋದೆ. ಅಪ್ಪನ ಬಗ್ಗೆ ಹಲವರು ಮಾತಾಡಿದ್ರು, ಅಪ್ಪನೂ ತನ್ನ ಮೂವತ್ತು ವರ್ಷಗಳ ಅನುಭವದ ಬಗ್ಗೆ ಮಾತಾಡಿದ. ಭಾವುಕ ಅಪ್ಪಂಗೆ ಎಲ್ಲಾದ್ರೂ ಅಳು ಬರತ್ತೇನೋ ಅಂತ ಸಣ್ಣಗೆ ಹೆದ್ರಿಕೆ ಇತ್ತು- ಆದ್ರೆ ಹಾಗೇನೂ ಆಗಲಿಲ್ಲ.
ಮಕ್ಕಳು- ಅಪ್ಪನ ಹಿತೈಷಿಗಳೆಲ್ಲ ಬಂದು ಹಾರದ ಮೇಲೆ ಹಾರ ಹಾಕುವಾಗ ಅಪ್ಪ ಕಳೆದುಹೋದವನಚಿತೆ ಕಂಡ.

ಅಪ್ಪನಿಗೆ ಹಾರೈಸಿದ ಶಾಲೆಯ ಸಂಚಾಲಕರು,

May you always have work for your hands to do.
May your pockets hold always a coin or two.
May the sun shine bright on your windowpane.
May the rainbow be certain to follow each rain.
May the hand of a friend always be near you.
And may God fill your heart with gladness to cheer you.

ಅನ್ನೋ ಐರಿಶ್ ಕವನದ ಮೂಲಕ ಅಪ್ಪನ್ನ ಹಾರೈಸುವಾಗ, ನಂಗೆ ಅಪ್ಪ ಕಾಣಿಸಲಿಲ್ಲ.

+++
ಊರಲ್ಲಿ ಜೋರು ಮಳೆ, ನಾಲ್ಕು ದಿನ ಮಳೆ ನೋಡುತ್ತ ಕಳೆದು, ಅಪ್ಪನಿಗೆ ಶುಭ ಹಾರೈಸಿ ಬಂದದ್ದಾಯಿತು.


ಅಂದ ಹಾಗೆ, ಬ್ಲಾಗಿಗೆ ಇವತ್ತು ನಾಲ್ಕು ವರ್ಷ ತುಂಬಿತು. ನನ್ನನ್ನು ಪ್ರೋತ್ಸಾಹಿಸಿದ ಎಲ್ಲರಿಗು ಧನ್ಯವಾದಗಳು.

ಮಂಗಳವಾರ, ಆಗಸ್ಟ್ 24, 2010

ದಾಂಪತ್ಯ ಗೀತೆಗಳು-1

ನಾನು ಇವಳಿಗೂ ಮೊದಲು
ಮನೆಗೆ ಬಂದು, ಕಾಪಿಗೀಪಿ ಮಾಡಿ
ಅಚ್ಚರಿ ಮೂಡಿಸೋಣವೆಂದು, ಇಂದು ಬರೋದು ಲೇಟು
ಅಂತ ಗಿಲೀಟು ಮೆಸೇಜು ಮಾಡಿ
ಬೈಕು ಪಕ್ಕದ ರೋಡಲ್ಲಿಟ್ಟು,
ಮನೆಗೆ ಬಂದರೆ
ತೆರೆದ ಬಾಗಿಲು ನಗುತ್ತಿತ್ತು,
ಮತ್ತೆ ಎದುರಿಗೆ ಇವಳು.

ಇವತ್ತು ಲೇಟಾಗತ್ತೆ ಕಣೇ ಅಂದು
ರಾತ್ರಿ ಒಂಬತ್ತಕ್ಕೆ ಬಂದರೆ, ಇವಳ
ಮುಖದಲಿ ಬೇಸರ
ಮೊನ್ನೆ ಹೇಳಿದಂತೆ ಸುಳ್ಳು ಹೇಳಿದ್ದೆ
ಅಂದುಕೊಂಡೆ,
ಯಾಕೆ ಬೇಗ ಬರಲಿಲ್ಲ
ಅನ್ನುವ ಅಮಾಯಕ ಪ್ರಶ್ನೆಗೆ ನನ್ನಲಿಲ್ಲ
ಉತ್ತರ.

ಅದೇನೋ, ನನ್ನ ಮೇಲೆ ಸಿಟ್ಟು ಮಾಡಿಕೊಂಡು
ಮಾತಾಡಿಸಿದರೂ ಆಡದೇ,
ಮಂಚದ ಮೇಲೆ ಕೂತು,
ಏನೋ ವೀಡಿಯೋ ನೋಡಿ ಮೆಲ್ಲಗೆ ನಗುತ್ತಿದ್ದಳು,
ಮೆಲ್ಲ ಹೋಗಿ ಇಣುಕಿದರೆ,
ಅಲ್ಲಿ ನಾನು ತಾಳಿ ಕಟ್ಟುತ್ತಿದ್ದೆ!

ಮಂಗಳವಾರ, ಜೂನ್ 22, 2010

ರಾವಣ್: ಹತ್ತೇ ಸಾಲಿನ ವಿಮರ್ಶೆ

ರಾವಣ್ ನೋಡಿದೆ. ಕಥೆ ಚೆನ್ನಾಗಿಲ್ಲ. ಜಾಳು ಜಾಳಾಗಿ ಬೋರು ಬರಿಸುತ್ತದೆ.. ಅಭಿಷೇಕ್ ನಟಿಸಲು ಕಷ್ಟ ಪಟ್ಟಿದ್ದರೆ, ಐಶ್ವರ್ಯ ಇಷ್ಟಪಟ್ಟಿದ್ದಾರೆ. ಗೋವಿಂದ ಅಭಿನಯ ಖುಷಿ ಕೊಡುತ್ತದೆ, ವಿಕ್ರಮ್ ಸಾಧಾರಣ.

ಆದರೆ, ಛಾಯಾಗ್ರಹಣ ಸೂಪರ್.. ಡಿಸ್ಕವರಿ ಡಾಕ್ಯುಮೆಂಟರಿ ಥರ ಕಾಣೋ ಹಲವು ಸೀನ್ ಗಳು ಸಿನಿಮಾದಲ್ಲಿದೆ. ಒಳ್ಳೊಳ್ಳೆ ಜಾಗದಲ್ಲಿ ಚಿತ್ರೀಕರಣ ನಡೆಸಿದ್ದಾರೆ. ಹಾಡುಗಳು, ಹಿನ್ನೆಲೆ ಸಂಗೀತ ಚೆನ್ನಾಗಿದೆ.

ಒಟ್ಟಾರೆ ಐದಕ್ಕೆ ಎರಡು ಸ್ಟಾರ್ ಕೊಡಬೌದು.

ಗುರುವಾರ, ಜೂನ್ 17, 2010

ಲವ್ವರ್


ಕಾಂಡಿಮೆಂಟ್ಸು ಅಂಗಡಿಯೊಂದಕ್ಕೆ ಹೋಗಿದ್ದೆ, ಅಂಗಡಿ ಹುಡುಗ ಫೋನಲ್ಲಿ ಮಾತಾಡ್ತಾ ನಿಂತಿದ್ದ...
ನನಗೆ ಬೇಕಾದ್ದನ್ನ ಆರ್ಡರ್ ಮಾಡಿದೆ, ಫೋನಲ್ಲಿ ಮಾತಾಡ್ತಾನೇ ತೆಗೆದು ಕೊಟ್ಟ.ದುಡ್ಡು ಕೊಡಲು ಹೊರಟೆ, ಕೈ ಸನ್ನೆ ಮಾಡಿ, ನಿಲ್ಲಿಸಿಕೊಂಡು, ಫೋನ್ ಸಂಭಾಷಣೆ ಮುಂದುವರಿಸಿದ.

" ಇಲ್ಲ ಇಲ್ಲ, ಲವ್ವರ್ ಇಲ್ಲ"
"..."
"ನಿಜ್ವಾಗ್ಲೂ ಇಲ್ಲ"
"..."
"ನಿಮ್ ಹತ್ರ ಯಾಕ್ರೀ ಸುಳ್ ಹೇಳ್ಲಿ ನಾನು, ಲವ್ವರ್ ಇಲ್ಲ ಕಣ್ರೀ.."
"..."
" ಲವ್ವರ್ ಇದ್ರೆ ಸುಮ್ನಿರ್ತಿದ್ನಾ ನಾನು"
"..."
ನಾನು ಸುಮ್ನೇ ಇದ್ದೆ..
"ನೀವು ನಮ್ಮ ಖಾಯಂ ಕಸ್ಟಮರ್ ಸಾರ್, ನನ್ ಹತ್ರ ಲವ್ವರ್ ಇದ್ರೆ ಹೇಳ್ದೇ ಮೋಸ ಮಾಡ್ತೀನಾ?"
"..."
ಅಯ್ಯ! ಇದೊಳ್ಳೆ ಕತೆನಲಪಾ ಅಂತ ನಾನು..

ಆ ಕಡೆ ಪಾರ್ಟಿ ಏನೋ ಸುಮಾರು ಕೊರೀತು.. ಈ ಹುಡ್ಗ ಈ ಬಾರಿ ಸ್ವಲ್ಪ ಜೋರಾಗೇ,
"ಲವ್ವರ್ ಇದ್ರೆ ನೀವ್ ತಗಂಬುಡಿ ಸಾರ್, ನಾನೂ ನೋಡ್ತೀನಿ" ಅಂದ.
ನಂಗೆ ಇವನ ಲವ್ವರ್ ಪುರಾಣ ಕಟ್ಟಿಕೊಂಡು ಆಗಬೇಕಾದ್ದು ಏನೂ ಇರಲಿಲ್ಲ. ದುಡ್ಡು ಎಷ್ಟಾಯ್ತು ಅಂತ ಸನ್ನೆ ಮಾಡಿದೆ..
ಕೈಲಿದ್ದ ನೋಟು ಇಸಕೊಂಡು , ಚಿಲ್ಲರೆ ಹುಡುಕುತ್ತ ಮತ್ತೆ ಶುರು ಮಾಡಿದ.
"ನೋಡಿ, ನಾನು ಯಾವಗ್ಲೂ ನಿಮ್ಗೆ ನನ್ ಕಡೆಯಿಂದ ಲವ್ವರ್ ಕೊಡ್ತೀನಿ ಅಲ್ವಾ, ಈ ಸಲ ಅಡ್ಜಸ್ಟ್ ಮಾಡ್ಕಳಿ ಸಾರ್"
ನನಗೆ ತಲೆಯೆಲ್ಲ ಒಂದು ಸಲ ಗಿರ್ರಂತು! ಇಷ್ಟೊಂದು ಪಬ್ಲಿಕ್ಕಾಗಿ, ಹೀಂಗೆಲ್ಲ ಮಾತಾಡದ!ಇದ್ಯಾಕೋ ಸಾವಾಸ ಅಲ್ಲಾಂತ, ಚಿಲ್ಲರೆ ತಗಂಡು ಹಂಗೆ ಮೆಲ್ಲಗೆ ಹೊರಟೆ..
ಹುಡುಗ ಹೇಳ್ತಾ ಇದ್ದ, ವಿ ಆರ್ ಎಲ್ ನಲ್ ಅಂತೂ ಖಂಡಿತ ಇಲ್ಲ ಸಾರ್, ಬೇರೆದ್ರಲ್ಲಿ ಲವ್ವರ್ ಇದ್ಯಾ ಟ್ರೈ ಮಾಡ್ತೀನಿ !!

ಅವನು ಈ ಬ್ಯುಸಿನೆಸ್ಸು ಮಾಡ್ತಾನೆ ಅಂತ ನಂಗೆ ಹೇಗೆ ಗೊತ್ತಾಗಬೇಕು!

ಸೋಮವಾರ, ಫೆಬ್ರವರಿ 15, 2010

ದರ್ಶನ ಭಾಗ್ಯ!

(ಹಿಂದೆ ಎಚ್.ಆರ್ ಆಗಿದ್ದಾಗಿನ ಅನುಭವಗಳನ್ನು ಬರೀತಿದ್ದೆ. ಮಾಧ್ಯಮ ಜಗತ್ತಿಗೆ ಬಂದು ಎರಡು ಎರಡೂವರೆ ವರ್ಷಗಳಾದರೂ ಹೆಚ್ಚಿಗೆ ಏನೂ ಬರೆದಿಲ್ಲ- ಇಲ್ಲಿನ ಅನುಭವಗಳ ಬಗ್ಗೆ. ಇನ್ನು ಬರೆಯಲಾಗುವುದು:)


ನನ್ನ ಅಣ್ಣ ಉಡುಪೀಲಿರ್ತಾರೆ. ಅವ್ರ ದೂರದ ಸಂಬಂಧಿಯೊಬ್ಬರ ಮಗ ಏನೋ ಬೆಂಗಳೂರಲ್ಲಿ ಸರಿಯಾದ ಕೆಲ್ಸ ಇಲ್ದೇ ಅಲೀತಿದಾನೆ ಅಂತ ನನ್ನ ಹತ್ರ ಒಂದಿನ ಫೋನ್ ಮಾಡಿದೋರು ಹೇಳಿದ್ರು. ಮನೆ ಕಡೆಗೂ ಕಷ್ಟ, ಎನಾರೂ ಕೆಲ್ಸ ಇದ್ರೆ ನೋಡೋ ಅಂದ್ರು. ಅವನನ್ನು ನಾನೂ ಯಾವ್ದೋ ಮದುವೆಲೆಲ್ಲೋ ನೋಡಿದ್ದೆ ಹಿಂದೊಮ್ಮೆ. ಅದೇನೋ ಇರಲಾರದೇ.. ಅಂತಾರಲ್ಲ, ಹಾಂಗೆ ನಾನು, ಹೌದಾ ಅವ್ನಿಗೆ ನನ್ನ ನಂಬರ್ರು ಕೊಡಿ, ಮಾತಾಡ್ತೀನಿ ಅಂದೆ.

ನಾಲ್ಕಾರು ದಿನ ಕಳೀತು. ನಾನು ವಿಶ್ಯ ಮರ್ತೇ ಬಿಟ್ಟಿದ್ದೆ. ಆಫೀಸಲ್ಲಿ ಕೂತಿದ್ದೆ. ರಿಸೆಪ್ಶನ್ ಫೋನ್ ಮಾಡಿ ಉಲಿದಳು- ನಿಮ್ಮನ್ನು ಹುಡ್ಕೊಂಡು ಯಾರೋ ಬಂದಿದಾರೆ, ಇಲ್ಲೇ ಕೂತಿದಾರೆ ಬನ್ನಿ ಅಂತ. ಪುಣ್ಯಕ್ಕೆ ಎಲ್ಲೂ ಹೊರ್ಗೆ ಹೋಗ್ದೇ ಆಫೀಸಲ್ಲೇ ಇದ್ದೆ. ಹೋಗಿ ನೋಡಿದ್ರೆ, ಅದೇ ನನ್ನ ಅಣ್ಣನ ಸಂಬಂಧೀ ಹುಡುಗ. ಫೋನೂ ಗೀನೂ ಏನೂ ಮಾಡ್ದೇ ಧಿಮ್ ರಂಗ ಅಂತ ಬಂದಿದ್ದ.

ನಮ್ ಆಫೀಸೆಲ್ಲ ಒಂದ್ ಸಲ ತೋರ್ಸಿ, ಕ್ಯಾಂಟೀನಿಗೆ ಕರ್ಕೊಂಡು ಹೋದೆ. ಜ್ಯೂಸ್ ಗೆ ಹೇಳಿ, ಅವನ್ ಹತ್ರ ಏನ್ ಮಾಡ್ಕೊಂಡ್ ಇದೀಯಾ, ಏನ್ ಕತೆ -ವಿಚಾರ್ಸ್ತಾ ಇದ್ದೆ. ಅಷ್ಟ್ ಹೊತ್ತಿಗೆ, ನಮ್ಮಲಿನ ಸ್ಟುಡಿಯೋಗೆ ಶೂಟಿಂಗ್ ಗೆ ಅಂತ ಬಂದಿದ್ದ ನಟ ರಮೇಶ್ ಅರವಿಂದ್ ಹಾಗೇ ಯಾರ್ ಜೊತೆಗೋ ಮಾತಾಡ್ತಾ ಕ್ಯಾಂಟೀನ್ ಗೆ ಬಂದ್ರು. ಈ ಪುಣ್ಯಾತ್ಮ ಯಾರೋ ರಾಷ್ಟ್ರಗೀತೆ ಹಾಡಿದ್ ಕೇಳಿದ ಹಾಗೆ ಎದ್ದು ನಿಂತು ಬಿಡೋದಾ! ಏನಾಯ್ತೋ, ಕೂತ್ಗೊಳಪ್ಪಾ ಅಂತ ಎಳೆದು ಕೂರ್ಸಿದೆ. ಆ ಕಡೆ ಟೇಬಲಿನ ಯಾರೋ ಸಣ್ಣಗೆ ನಕ್ಕಿದ್ದು ಕೇಳ್ಸಿತು.

ನಾನು ಮತ್ತೆ ಅವನ ಕೆಲ್ಸದ ಬಗ್ಗೆ ವಿಚಾರ್ಸ್ತೀನಿ, ಊಹೂಂ, ಈ ಯಪ್ಪಂಗೆ ಅದೆಲ್ಲ ತಲೆಗೇ ಹೋಗ್ತಿಲ್ಲ. ಅಣ್ಣಾ, ನಿಮ್ಮಲ್ಲಿಗೆ ಎಲ್ಲಾ ಫಿಲಂ ಸ್ಟಾರ್ಸ್ ಬರ್ತಾರಾ?- ಹೂಂ ಕಣೋ ಬರ್ತಾರೆ ಅಂದೆ. ನೀ ನೋಡಿದೀಯಾ ಅವ್ರನ್ನ?- ಹೌದು. ಏನ್ ಚಾನ್ಸಣ್ಣಾ ನಿಂದೂ.. ಮಸ್ತ್ ಅಂತ ಉಸ್ರೆಳ್ಕೊಂಡ.

ಆಮೇಲಿಂದ ೫ ನಿಮಿಷ ಆತನಿಗೆ ನಮ್ಮಲ್ಲಿ ಯಾರ್ಯಾರು ಬರ್ತಾರೆ, ಯಾಕ್ ಬರ್ತಾರೆ ಇತ್ಯಾದಿಯೆಲ್ಲ ವಿವರಿಸ್ಬೇಕಾಯ್ತು. ಹಾಗೇ ಮಾತಾಡ್ತಾ ದರ್ಶನ್ ಬಂದಿದ್ದ ಸುದ್ದಿ ಹೇಳಿದ ಕೂಡ್ಲೇ ಈ ಹುಡುಗ, ಹಾಂ! ಅಂತ ದೊಡ್ಡದಾಗಿ ಬಾಯಿಬಿಟ್ಟ. ತಾನು ದರ್ಶನ್ ದೊಡ್ಡ ಫ್ಯಾನ್ ಅಂತಲೂ, ಆತನ ಯಾವುದೇ ಚಿತ್ರಗಳನ್ನ ನೋಡದೇ ಬಿಟ್ಟಿಲ್ಲ - ಮೆಜೆಸ್ಟಿಕ್, ಕರಿಯ ಅಂತೆಲ್ಲ ಆತ ನಟಿಸಿದ ಎಲ್ಲ ಚಿತ್ರಗಳ ಹೆಸರು ಪಟ ಪಟ ವರದಿಯೊಪ್ಪಿಸಿದ.

ನಾನು ಸುಮ್ಮನೇ ಕೂತು ಜ್ಯೂಸ್ ಕುಡೀತಿದ್ದೆ. "ಒಂದೇ ಒಂದು ಫಿಲಂ ಬಿಟ್ಟಿಲ್ಲ ಅಣ್ಣಂದು. ಫಸ್ಟ್ ಡೇ, ಫಸ್ಟ್ ಶೋ. ಪಕ್ಕಾ. ಆವತ್ತೇ ನಾಲಕ್ ಸಲ ನೋಡಿದ್ದೂ ಇದೆ ಮತ್ತೆ. ಕರಿಯ ಫಿಲಂ ೨೪ ಸಲ, ಮತ್ತಿನ್ಯಾವ್ದೋ ೧೭, ಮತ್ತಿನ್ಯಾವ್ದೋ ೧೪ ಅಂತ ಉದ್ದಕ್ಕೆ ಪಟ್ಟಿ ತೆಗ್ದ.

ಅಲ್ವೋ, ಕೆಲ್ಸ ಮಾಡೋ ಕಂಪ್ನಿನೋರು ಅಷ್ಟೆಲ್ಲ ರಜೆ ಕೊಡ್ತಾರೇನೋ, ದುಡ್ ಎಲ್ಲಿಂದ ಬರತ್ತೋ ಅಂದಿದ್ದಕ್ಕೆ "ಅಣ್ಣನ್ ಫಿಲಂ ನೋಡೋಕ್ ಬಿಡ್ದೇ ಇರೋ ಕಂಪ್ನಿ ಕೆಲ್ಸ ಯಾಕಣ್ಣಾ ಬೇಕು, ಬಿಟ್ ಬಿಡ್ತೀನಿ ಅಷ್ಟೇ, ಆಗ್ಲೇ ಎರಡ್ ಕಂಪ್ನೀ ಲಿ ಅದ್ಕೇ ಗಲಾಟೆ ಮಾಡಿ ಬಿಟ್ಟಿದೀನಿ ಜಾಬ್ ನ ಅಂದ. ನಾನು ಒಟ್ಟು ಎಷ್ಟ್ ಕಂಪ್ನಿಲಿ ಕೆಲ್ಸ ಮಾಡಿದೀಯಾ ಅನ್ನೋ ಪ್ರಶ್ನೆ ಕೇಳುವ ಸಾಹಸ ಮಾಡಲಿಲ್ಲ.. ಈತ ನೆಲೆ ಯಾಕೆ ಕಂಡುಕೊಂಡಿಲ್ಲ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿತ್ತು.

"ಅಣ್ಣಾ, ಒಂದು ಹೆಲ್ಪ್ ಮಾಡಣ್ಣ, ನಿಮ್ ಕಂಪ್ನೀಲೇ ಏನಾರೂ ಕೆಲ್ಸ -ಸೆಕ್ಯುರಿಟೀ ಗಾರ್ಡ್ ಆದ್ರೂ ಪರ್ವಾಗಿಲ್ಲ- ಇದ್ರೆ ಕೊಡ್ಸ್ ಬಿಡು. ದರ್ಶನ್ ಬಂದಾಗ ಒಂದ್ ಸಲ ತಬ್ಗೊಂಡು, ಶೇಕ್ ಹ್ಯಾಂಡ್ ಕೊಟ್ಟು ಕಣ್ ತುಂಬ ನೋಡ್ಕಂಬಿಡ್ತೀನಿ. ಪ್ಲೀಸ್"
ನಮ್ಮಲ್ಲಿ ದರ್ಶನ್ ಫಿಲಂ ರಿಲೀಸ್ ಆಗಿದ್ ದಿನ ರಜೆ ಕೊಡ್ದಿದ್ರೆ?
"ಹೇ, ಅದ್ ಹೆಂಗಾರಾ ಹೋಗದೇ"

ಖಂಡಿತ ಕೆಲ್ಸ ಇದ್ರೆ ಕೊಡಸ್ತೀನಪಾ ಅಂತಂದು ಹೊರಡಿಸಿದೆ. ಹೊರಡೋ ಮುಂಚೆ, "ನೆಕ್ಸ್ಟ್ ಟೈಮ್ ದರ್ಶನ್ ಬರೋವಾಗ ಹೇಳು ಬಂದೋಗ್ತೀನಿ"ಅಂದ. ಆಯ್ತಪಾ ದೊರೇ ಅಂತಂದು ಕಳಿಸಿದೆ.

ಸೆಕ್ಯುರಿಟಿ ಗಾರ್ಡೇ ದರ್ಶನ್ ಮೈ ಮೇಲೆ ಬೀಳೋಕೆ ಹೋಗೋ ದೃಶ್ಯ ಕಲ್ಪಿಸಿಕೊಂಡು , ನಗು ಬಂತು.

ಮಂಗಳವಾರ, ಜನವರಿ 19, 2010

ಬಿದಿರಿನ ಉಸಿರಿಗೆ..

ಮಂದಮಾರುತದಿ ಬೆರೆತು ಕೇಳುತಿದೆ ಮಧುರ ಮುರುಳಿ ಗಾನ
ಹುಲ್ಲುಗಾವಲಿನ ಬಯಲೊಳಗೆಲ್ಲೋ, ಕೊಳಲು ಹಿಡಿದ ತರುಣ

ಅಲೆ ಅಲೆ ಅಲೆ ಅಲೆ ನಾದದ ಲೀಲೆ, ಹಬ್ಬಿದೆ ಸ್ವನ ಘಮ ಊರಿನ ಮೇಲೆ..
ಬಗೆ ಬಗೆ ಬಗೆ ಬಗೆ ವೇಣು ವಿನೋದ, ಜೀವದಿಂ ಜೀವಕೆ ನೂರ್ಬಗೆ ಮೋದ

ಬೆಳ್ಳಿಯ ಗಿಂಡಿಲಿ ಹಾಲನು ಕರೆಯುವ ಗೋಪಿಕೆಗದೆ ಸಂಸಾರ
ನಲ್ಲನ ಕಾಯುವ ಹುಡುಗಿಗೆ ಮನದಲಿ ಭೃಂಗದ ಸಂಚಾರ

ಮರದಡಿ ನೆಳಲಿನ ದನಗಾಹಿಗೆ ನೆಮ್ಮದಿಯಾ ತಾನ
ದೇವರೆದುರ ಮಂದಸ್ಮಿತ ವದನ, ಧ್ಯಾನದೊಳಗೆ ಲೀನ

ಬಾಲರಿಗೆ ನವನೀತ, ಸೋತವಗದು ಗೀತ
ಬೇಟದ ಪ್ರೇಮಿಗಳು ರಾಗಕೆ ಉನ್ಮತ್ತ

ಬಿದಿರಿನ ಉಸಿರಿಗೆ ಯಾವುದೋ ಲೀಲೆ,
ಭಾವಕೆ, ಭಕ್ತಿಗೆ ಪ್ರೇಮಕೆ ಮುಕ್ತಿಗೆ -ಎಲ್ಲಕೂ ತಾಯೇ..

ಭಾನುವಾರ, ಜನವರಿ 03, 2010

ಗದ್ದೆ ಬದುವೆಂಬ ಹಸಿರ ಲೋಕ..

ಮನೆಯಲ್ಲಿ ಗಣಹೋಮ. ಒಂದಿಷ್ಟು ಗರಿಕೆ ಬೇಕು. ಬೆಳಗಾತ ಅಪ್ಪ ದೂರ್ವೆ ಕೊಯ್ಯಿ ಅಂದಿದ್ದು ಬೇರೆ ಯಾವುದೋ ಕೆಲಸದ ಮಧ್ಯ, ಮರೆತೇ ಹೋಗಿದೆ. ಹೊರಗೋಡುವುದು, ಅಲ್ಲಿಗೇ. ಇನ್ನು, ಪೇಟೆಯಲ್ಲಿರುವ ಪರಿಚಯಸ್ಥರು ಯಾರೋ ಮನೆಗೆ ಬಂದಿದ್ದಾರೆ.ಅವರ ನಾಲ್ಕನೇ ಕ್ಲಾಸಿನ ಮಗನಿಗೆ ಓದು ತಲೆಗೆ ಹತ್ತುವುದಿಲ್ಲವಂತೆ, ಒಂದಿಷ್ಟು ಒಂದೆಲಗದೆಲೆ ಬೇಕಿದೆ. ಅಮ್ಮ ಮುಖ ನೋಡಿದರೆ, ಮತ್ತೆ ಅಲ್ಲಿಗೇ ಓಡಬೇಕು. ಎಲ್ಲಿಗೆ ಎಂದರೆ, ಗದ್ದೆ ಬದುವಿಗೆ.ಕಟ್ಟಪುಣಿಗೆ. ಯಾಕೆ ಎನ್ನುತ್ತೀರೋ, ಇವೆಲ್ಲ ಕೂಡಲೇ ಕೈಗೆ ದಕ್ಕುವುದು ಅಲ್ಲಿಯೇ.

ಗದ್ದೆಯ ಹೊರಗಿನ ಮತ್ತು ಒಳಗಿನ ಜೀವಪ್ರಪಂಚವನ್ನು ಬೇರ್ಪಡಿಸುವ ಮಹತ್ತರ ಜವಾಬುದಾರಿ ಈ ಕಟ್ಟೋಣದ್ದು. ಗದ್ದೆಯೊಳಗೆ ಓಡಾಡಿ ಹುಳಹುಪ್ಪಟೆ ಹೆಕ್ಕುವ ಏಡಿಗೆ, ಈ ಗದ್ದೆಬದುವಿನಡಿಯ ಮಾಟೆಯೇ ಆಶ್ರಯ.ಈ ಮಾಟೆಗಳು, ಮೇಲ್ಗದ್ದೆ ಯಿಂದ ಕೆಳಗದ್ದೆಗೆ, ಅಕ್ಕ ಪಕ್ಕದ ಎರಡು ಸಮಾನಾಂತರ ಗದ್ದೆಗಳಿಗೆಲ್ಲ ನೀರು ಸಪ್ಲೈ ಮಾಡುವ ತೂಬುಗಳಾಗಿಯೂ ಕೆಲಸ ಮಾಡುತ್ತವೆ. ಎಲ್ಲಾದರೂ ಗದ್ದೆಬದುಗಳಲ್ಲಿ ನಡೆವಾಗ ಬೈಹುಲ್ಲು ಉಂಡೆಯೋ, ಸಣ್ಣ ಸಣ್ಣ ಕಲ್ಲುಗಳೋ ಕಂಡರೆ, ಅವುಗಳು ಈ ಮಾಟೆಗಳ ಮೂವೆಬಲ್ ಕ್ರೆಸ್ಟ್ ಗೇಟುಗಳು ಅಂಥರ್ಥ.

ಗದ್ದೆಬದುಗಳನ್ನು ಯಾವ ರೈತನೂ ಹಾಗೇ ಬಿಡುವುದಿಲ್ಲ. ನಾಟಿಗೂ ಮುನ್ನ ಕಟ್ಟಪುಣಿ ಸಮ ಮಾಡುವುದೇ ಒಂದು ದೊಡ್ಡ ಕೆಲಸ. ಬದುವಿನ ಒಳಮೈಯಲ್ಲಿ ಹಬ್ಬಿರುವ ಕಳೆಗಳನ್ನು ಗುದ್ದಲಿಯಿಂದ ನೀಟಾಗಿ ಕೆತ್ತಿ, ಚಂದ ಮಾಡಿ ಸಿಂಗರಿಸಲಾಗುತ್ತದೆ. ಗದ್ದೆಯಲ್ಲಿನ ಕೆಸರು ನೀರು ಈ ಬದುವಿಗೆ ತಾಕುತ್ತ, ತುಳುಕುತ್ತ ನಿಂತು ಪುಟ್ಟ ಕೆರೆಗಳನ್ನು ನೆನಪಿಸುತ್ತಿರುತ್ತವೆ.

ಮಳೆಗಾಲದ ಸಂಜೆಗಳಲ್ಲಿ, ನಾಟಿ ಮಾಡುತ್ತಿರುವ ಅರ್ಧ ನಾಟಿಯಾದ ಗದ್ದೆಗಳ ಬಳಿ ಸಂಜೆ ಹೊತ್ತು ಹೋಗಿ ನೋಡಿ. ಗದ್ದೆ ಹಾಳಿಗಳ ಮೇಲೆ, ಒಂದರ ಮೇಲೊಂದು ಪೇರಿಸಿಟ್ಟ ಭತ್ತದ ಸಸಿಗಳ ಕಟ್ಟುಗಳು ಅಲ್ಲಿ ಪವಡಿಸಿರುತ್ತವೆ. ಗದ್ದೆಯ ಕೆಸರೊಳಗೆ ಬೇರೂರುವ ಮುನ್ನ, ಅಲ್ಲಿ ಬೆಳತನಕದ ವಿಶ್ರಾಂತಿ ಅವಕ್ಕೆ. ನಾಟಿ ಮಾಡುವ ಹೆಂಗಸರು ಚಹಾ ಕುಡಿಯುತ್ತ ಹರಟುವುದೂ ಇಲ್ಲಿಯೇ.

ಗದ್ದೆಬದುಗಳಲ್ಲಿ ಬರೀ ಒಂದೆಲಗ ಒಂದೇ ಅಲ್ಲ, ಎಂಥೆಥದೋ ಗಿಡ-ಚಿಗುರುಗಳು ಸದಾ ಲಭ್ಯ.ನೀರು ಚೆನ್ನಾಗಿರುವಲ್ಲಿ ದರ್ಭೆ ಕೂಡ ಸಿಗುವುದಿದೆ. ಮನೆಯ ದನಕ್ಕೆ ಹುಲ್ಲು ಬೇಕೆಂದರೆ, ಕೊನೆಗೆ- ಬೇರೆಲ್ಲ ಮೂಲಗಳು ಮುಗಿದ ಮೇಲೆ, ಕಟ್ಟಪುಣಿಯೇ ಗತಿ.ಯಾವುದೇ ಊರಿನ ಗದ್ದೆಗಳನ್ನು ಅಕ್ಟೋಬರು ತಿಂಗಳು ನಂತರ ನೋಡಿ,ದನಗಳು ಹಸಿರಿನ ಪಸೆಯಷ್ಟೇ ಉಳಿದಿರುವ ಈ ಬದುಗಳನ್ನೇ ಹೆರೆಯುತ್ತ ನಿಂತಿರುವುದು ಕಾಣುತ್ತದೆ.

ಕಟಾವಾದ ನಂತರ, ಗದ್ದೆಗಳು ಮಕ್ಕಳ ಕ್ರಿಕೆಟ್ ಬಯಲಾಗುತ್ತವೆ. ಈ ಅಸಡಾ ಬಸಡಾ ಹಬ್ಬಿಕೊಂಡಿರುವ ಗದ್ದೆಗಳಲ್ಲಿ ಬೌಂಡರಿ ಗುರುತಿಸುವ ಸಮಸ್ಯೆಯಿಲ್ಲ. ಏಕೆಂದರೆ ಇದಿನಬ್ಬನ ಬದುವಿಗೆ ತಾಗಿದರೆ ಟೂಡಿ, ಶಂಕರಭಟ್ಟರ ಕಟ್ಟಪುಣಿಗೆ ಫೋರು. ಬೌಂಡರಿ ದಾಟಿತು- ದಾಟಿಲ್ಲ ಸಮಸ್ಯೆಯೇ ಇಲ್ಲ. ಬಾಲು ನಿಯತ್ತಾಗಿ ಬದುವಿಗೆ ತಾಗಿ ವಾಪಾಸು ಬಂದುಬಿಡುತ್ತದೆ. ಕೆಲಸಗಳೆಲ್ಲ ಮುಗಿದ ಸಂಜೆಗಳಲ್ಲಿ ಅಪರೂಪಕ್ಕೊಮ್ಮೆ ಮಕ್ಕಳ ಅಪ್ಪ ಅಮ್ಮಂದಿರೂ ಬದುಗಳಲ್ಲಿ ಕುಳಿತು ಹರಟೆಯಲ್ಲಿ ತೊಡಗಿ, ಆಟ ನೋಡುತ್ತಿರುತ್ತಾರೆ.

ಆದರೆ, ಈಗೀಗ ಈ ಬದುಗಳನ್ನು ಕೆತ್ತುವ ಕಾರ್ಯಕ್ಕೂ ಕುತ್ತು ಬರುತ್ತಿದೆ. ದಿನಕ್ಕಿನ್ನೂರು ಕೊಟ್ಟರೂ ಗದ್ದೆಹಾಳಿಯನ್ನು ಸರಿ ಮಾಡಿಕೊಡುವ ಮಂದಿ ಸಿಗುತ್ತಿಲ್ಲ. ಬೇಸಾಯ ಮಾಡುವುದೇ ದುಸ್ತರವಾಗಿರುವಾಗ, ಇನ್ನು ಗದ್ದೆಯ ಸುತ್ತಮುತ್ತ ಚಂದ ಮಾಡುವ ಕಾರ್ಯ ದೂರವೇ ಉಳಿಯಿತು. ನಮ್ಮೂರ ಗದ್ದೆಗಳೆಲ್ಲ ನಿಧನಿಧಾನವಾಗಿ ತೋಟಗಳಾಗಿ ಬದಲಾಗುತ್ತಿವೆ, ರಸ್ತೆ ಬದಿಯ ಗದ್ದೆಗಳು ಸೈಟುಗಳಾಗುತ್ತಿವೆ. ಎಕರೆಗಳ ಬದಲಿಗೆ ಅವಕ್ಕೀಗ ಸಿಕ್ಸ್ಟಿ-ಫೋರ್ಟಿಯಲ್ಲಿ ರೇಟು ಬಂದಿದೆ. ಹೊಲ ಸತ್ತಿದೆ, ಮುಳ್ಳಬೇಲಿ ಅವುಗಳನ್ನು ಸುತ್ತಿದೆ.

ಮನೆಯೆದುರಿನ ಖಾಲಿ ಗದ್ದೆಯ ಬದುವಿನಲ್ಲಿ ನಾಚಿಕೆ ಮುಳ್ಳು ಬೆಳೆದಿದೆ. ಮೊದಲಿನಂತೆ ಯಾರೂ ಈಗ ಗದ್ದೆ ಯಾಕೆ ಖಾಲಿ ಬಿಟ್ಟಿದ್ದೀರಿ ಅಂತೆಲ್ಲ ಕೇಳುವುದಿಲ್ಲ. ಉತ್ತರ ಎಲ್ಲರಿಗೂ ಗೊತ್ತಿದೆ. ಇನ್ನು,ಗದ್ದೆ ಬದುವಿನ ಕಿರು ಕಾಲುಹಾದಿಯಲ್ಲಿ ನಡೆದು ಹೋಗುವ ಪರಿಸ್ಥಿತಿ ಇಲ್ಲ, ಪಕ್ಕಕ್ಕೇ ಟಾರು ರಸ್ತೆ ಬಂದಿದೆ. ಆದರೂ, ಎಳೆ ಬೆಳಗಲ್ಲಿ ಈ ಬದುಗಳಲ್ಲೇ ಹುಲ್ಲತೆನೆಯೊಂದು ನಗುತ್ತ ನಿಂತು, ಇಲ್ಲ ಇನ್ನೂ ಎಲ್ಲ ಹಾಳಾಗಿಲ್ಲ ಎನ್ನುತ್ತದೆ. ಮನಕ್ಕೆ ಹಾಯೆನಿಸುತ್ತದೆ.

(03-01-10 ರ ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟಿತ)