ಬುಧವಾರ, ನವೆಂಬರ್ 30, 2011

ಚಲನ-ಚಿತ್ರ

ಇಪ್ಪತ್ತಡಿಗೂ ಮೀರಿ ನಿಂತ
ನಾಯಕನ ಕಟೌಟಿನಲ್ಲಿ
ಮೂಗು ಕೊಂಚ ಊನ
ಸಾಲಿನ ಕೊನೆಯಲ್ಲಿ ನಿಂತವಗೆ
ಟಿಕೇಟು ಸಿಗುವುದು ಅನುಮಾನ
ವಾಗಿ ಪದಪದ ಚಡಪಡಿಕೆ

ಕಣ್ಣ ಕನಸುಗಳಿಗೆ ದಾರಿ ತೋರುವ
ಕೌಂಟರಿನ ಹಿಂದೆ ಕೂತ
ಮುಖಕ್ಕೆ ಸುಮ್ಮನೆ ಬಿಗುಮಾನ
ಒಳಬಿಡುವ ಗೇಟ್ ಕೀಪರನಿಗೂ
ಬಾಡಿಗೆಯ ದರ್ಪ
ಮಾಡಿದಂತೆ ಏನೋ ಉಪಕಾರ
“ಹೋಗಿ ಹೋಗಿ”..

ಸಾಗಿದೆ ಸಿನಿಮಾ, ಮರೆಸಿ ಎಲ್ಲರ
ಎಲ್ಲವನೂ
ಅಲ್ಲಲ್ಲಿ ಒಳಗಿಳಿಸಿ ಖುಷಿಯ ಬಿಂಬ
ಜತೆಗೆ ಕೊಂಚ ನೋವನ್ನೂ

ಇಂಟರ್ವಲ್ ನಲ್ಲಿ ಎದ್ದು ಬಂದ ಹೋಟೇಲು
ಮಾಣಿಯ ನಡಿಗೆಯಲ್ಲಿ
ನಾಯಕನ ಚೈತನ್ಯ
ಶೌಚಾಲಯದ ಮೂಲೆಯ ಹೊಗೆಸುರುಳಿಗಳಲ್ಲಿ
ಕನಸು ರಿಂಗಣ

ಶುಭಂ ಕಾಣುವ ಮೊದಲೇ ಹೊರಟಿದ್ದಾರೆ
ಮಂದಿ, ಕೊನೆಯ ಸೀನಿಗಿಂತ ಮುಖ್ಯ
ಟ್ರಾಫಿಕ್ಕು ಇರದ ರಸ್ತೆ,ಸಾಗಿದರೆ
ಆರಾಮಾಗಿ ದಾರಿ ತುಂಬ
ಚಿತ್ರದ ಮೆಲುಕು

ಇಲ್ಲೀಗ ಚಿತ್ರಮಂದಿರ ಖಾಲಿ
ಮೇಲೆಲ್ಲೋ ಉರುಳಿಬಿದ್ದ ಕೋಕ್
ಬಾಟಲಿ ಸದ್ದು ಗಾಂಧಿಕ್ಲಾಸಲ್ಲಿ
ಅನುರಣನ

ಜಾಡಮಾಲಿ ಹೆಂಗಸಿಗೆ ಕಂಡಿದೆ
ಯಾರೋ ಬಿಟ್ಟು ಹೋದ ಪಾಪ್ ಕಾರ್ನು
ಕಟ್ಟಿಕೊಳ್ಳಬೇಕಿದೆ ಅದನ್ನ ಸೆರಗೊಳಗೆ
ಮಂದಿ ಬರುವ ಮುನ್ನ
ಗುಡಿಸಲು ಬಾಕಿ ಇದೆ ಇನ್ನೂ ಎರಡು ಸಾಲು

ಇನ್ನೇನು ಕೆಲವೇ ಕ್ಷಣಗಳಲ್ಲಿ ಮುಂದಿನ ದೇಖಾವೆ..