ಗುರುವಾರ, ಏಪ್ರಿಲ್ 13, 2017

ಕಿರುತೆರೆಯ ಕಲ್ಯಾಣೋತ್ಸವ


ಇಂದು ಕಿರುತೆರೆಯ ಧಾರಾವಾಹಿಗಳು ಸಿನಿಮಾ ಜಗತ್ತಿಗೇ ಸ್ಪರ್ಧೆಯನ್ನು ಒಡ್ಡಿರುವುದು ಸುಸ್ಪಷ್ಟಕೆಲ ಸೀರಿಯಲ್ ಗಳು ಜನಪ್ರಿಯತೆಯಲ್ಲಿ ಚಲನಚಿತ್ರಗಳನ್ನೇ ಮೀರಿಸಿರುವುದೂ ಸುಳ್ಳಲ್ಲನಿತ್ಯದ ಕ್ಲೀಷೆಗಳಲ್ಲೇ ಇನ್ನೂ ಸುತ್ತುತ್ತಿರುವ ಆಪಾದನೆ ಇದ್ದರೂ ಕೂಡಅಪಾರ ಜನಸ್ತೋಮ –ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಧಾರಾವಾಹಿಗಳ ವೀಕ್ಷಣೆಯಲ್ಲಿ ತೊಡಗಿರುವುದಂತೂ ಸತ್ಯಚಾನಲ್ ಗಳ ರೇಟಿಂಗ್ ಗಳನ್ನು ಗಮನಿಸಿದಾಗ ಇದಂತೂ ಅರಿವಾಗುತ್ತದೆಕಳೆದೊಂದು ದಶಕದಲ್ಲಿ ಸೀರಿಯಲ್ಲುಗಳ ನಿರ್ಮಾಣದಲ್ಲಿ ಗಣನೀಯ ಏರಿಕೆಯಾಗಿದೆ.ಗುಣಮಟ್ಟದಲ್ಲೂ ಕೂಡ ಬಹಳ ಸುಧಾರಣೆಯಾಗಿದೆನಿತ್ಯ ಸುಮಾರು ಐವತ್ತಕ್ಕೂ ಹೆಚ್ಚಿನ ಧಾರಾವಾಹಿಗಳ ಪ್ರಸಾರ ಕನ್ನಡದಲ್ಲಾಗುತ್ತಿದೆಸಿನಿಮಾಗಳಂತೆಯೇ ಇಲ್ಲೂ ಅದ್ದೂರಿ ಸನ್ನಿವೇಶಗಳ ಚಿತ್ರೀಕರಣವಾಗುತ್ತಿದೆಅದರಲ್ಲೂ ಮದುವೆಯ ಚಿತ್ರಣವಿದ್ದರಂತೂ ಕೇಳುವುದೇ ಬೇಡಐಷಾರಾಮಿ ಕಲ್ಯಾಣ ಮಹೋತ್ಸವಗಳು ಇಂದು ಸೀರಿಯಲ್ ಗಳಲ್ಲಿ ಹಾಸುಹೊಕ್ಕಾಗಿ ಹೋಗಿವೆ!

ಸೀರಿಯಲ್ ಮದುವೆ-ಸಂಭ್ರಮಕ್ಕೆ ಕೊನೆಯಿಲ್ಲ!
ನೀವು ನೋಡಿರಬಹುದಾದ ಚಲನಚಿತ್ರಗಳಲ್ಲಿ ಬಹುಶಃ ತೊಂಬತ್ತಕ್ಕೂ ಹೆಚ್ಚು ಪ್ರತಿಶತ ಚಿತ್ರಗಳು ಮದುವೆಗಳಿಂದಲೇ ಮುಗಿದುಶುಭಂ ಕಾಣಿಸಿಕೊಳ್ಳುತ್ತವೆಹೀರೋ ಹೀರೋಯಿನ್ನುಗಳು ಏನೇನೋ ಕಷ್ಟಪಟ್ಟು ಕೊಟ್ಟಕೊನೆಗೆ ತಾಳಿ ಕಟ್ಟುವುದರ ಮೂಲಕ ಸಿನಿಮಾ ಅಂತ್ಯವಾಗುತ್ತದೆಆದರೆ ಧಾರಾವಾಹಿ ಜಗತ್ತಿನಲ್ಲಿ ಎಲ್ಲ ಶುರುವಾಗುವುದೇ ಮದುವೆಯಿಂದಸೇರೊದ್ದ ಹೀರೋಯಿನ್ನು ಅತ್ತೆ ಮನೆಗೆ ಬರುತ್ತಲೇ ನಮ್ಮ ಕಥೆ ಆರಂಭಸಾವಿಲ್ಲದ ಮನೆಯಿಂದ ಸಾಸಿವೆಯನ್ನಾದರೂ ತರಬಹುದು ಆದರೆ ಮದುವೆಯಿಲ್ಲದ ಸೀರಿಯಲ್ ಹುಡುಕಲು ಸಾಧ್ಯವಿಲ್ಲ.ಅದೂ ಕಳೆದ ಮೂರು ನಾಲ್ಕು ವರ್ಷಗಳ್ ಈಚೆಗಂತೂ ಅದ್ದೂರಿ ವಿವಾಹವಿಲ್ಲದ ಸೀರಿಯಲ್ಲೇ ಇಲ್ಲ ಎನ್ನಬಹುದೇನೋಧಾರಾವಾಹಿಗಳಲ್ಲಿನ ಮದುವೆಗಳಲ್ಲಿನ ಅಬ್ಬರದ ಸಂಭ್ರಮವನ್ನು ನೋಡದೇ ಇರುವ ವೀಕ್ಷಕರೇ ಇಲ್ಲ ಅನ್ನಿಸುತ್ತದೆಹೀಗಾಗಿಯೇ ಚಳಿಯೇ ಇರಲಿ ಮಳೆಯೇ ಬರಲಿಆಷಾಢವೋ-ಅಧಿಕಮಾಸವೋ ತಿಂಗಳಲ್ಲಿ ಒಂದೆರಡು ಮದುವೆಯಾದರೂ ಕಿರುತೆರೆಯಲ್ಲಿ ಪಕ್ಕಾ!



ಅದ್ದೂರಿತನಕ್ಕೆ ಸರಿಸಾಟಿಯಿಲ್ಲ
ವೀಕ್ಷಕರ ಬಯಕೆಯೋಚಾನಲುಗಳ ನಿರ್ಧಾರವೋಹೆಚ್ಚು ಮಂದಿಯನ್ನ ಧಾರಾವಾಹಿಗಳ ಕಡೆಗೆ ಸೆಳೆಯುವ ಯತ್ನವೋಅದ್ದೂರಿ ಕಲ್ಯಾಣಗಳೀಗ ಟೀವಿಯಲ್ಲಿ ಸಾಮಾನ್ಯವಾಗಿ ಹೋಗಿದೆದೇವಸ್ಥಾನದಲ್ಲಿ ನಾಯಕ ನಾಯಕಿಗೆ ತಾಳಿ ಕಟ್ಟುವ ಕಾಲ ಮುಗಿದಿದೆಸಾಲು ಸಾಲು ರೆಸಾರ್ಟುಗಳೀಗ ಧಾರಾವಾಹಿಗಾಗಿ ಮದುವೆಗಾಗಿಯೇ ಬುಕ್ಕಿಂಗ್ ಆಗುತ್ತಿವೆಮಧ್ಯಮ ವರ್ಗದ ವ್ಯಥೆಯೋಶ್ರೀಮಂತರ ಕಥೆಯೋಮದುವೆಗಳು ಮಾತ್ರ ಸಂಭ್ರಮೋಪೇತವಾಗಿ ನಡೆಯಬೇಕೆಂಬ ಅಲಿಖಿತ ನಿಯಮ ಜಾರಿಗೆ ಬಂದು ಬಿಟ್ಟಿದೆಎರಡು ಮೂರು ಕುಟುಂಬಗಳ ನಡುವೆ -ಒಂದಲ್ಲ ಎರಡೆರಡು ಮದುವೆನೂರಾರು ಮಂದಿ ಸಹನಟರುಫಳಫಳ ರೇಷ್ಮೆಸೀರೆ ಕೋಟು ಬೂಟುಗಳ ಓಡಾಟಇವೆಲ್ಲ ನೀವು ನಿತ್ಯ ನೋಡುವ ಪ್ರಹಸನದ ಭಾಗವಾಗಿ ಹೋಗಿದೆಝಗಮಗ ಜೀವಕಳೆಯ ಮಂದಿ ತೆರೆಯ ಮೇಲೆ ಓಡಾಡುತ್ತಿದ್ದರೆ ಮನೆಮನೆಗಳ ವೀಕ್ಷಕರ ಮುಖವೂ ಬೆಳಗುತ್ತಿದೆಮದುವೆಯ ಸೀನುಗಳಿದ್ದರೆ ಖಂಡಿತಕ್ಕೂ ಅದಕ್ಕೆ ಹೆಚ್ಚಿನ ಟೀಆರ್ಪಿ ಬರುತ್ತದೆ ಎನ್ನುವುದು ಚಾನಲ್ಲುಗಳ ಒಳಗೆ ಕೂತ ಎಲ್ಲರಿಗೂ ಗೊತ್ತಿರುವ ಸತ್ಯ!

ಶಾಸ್ತ್ರ ಸಂಪ್ರದಾಯಗಳಿಗೆ ಮರು ಜೀವ!
ನಿಮ್ಮ ಮನೆಗಳ ಮದುವೆಗಳಲ್ಲಿ ನೀವು ಅದೆಷ್ಟು ಶಾಸ್ತ್ರಗಳನ್ನು ಪಾಲಿಸುತ್ತೀರೋ ಇಲ್ಲವೋನಾವು ಸೀರಿಯಲ್ ಮಂದಿ ಮಾತ್ರ ಇವುಗಳ ಬಗ್ಗೆ ಅಪಾರ ಕಾಳಜಿ ವಹಿಸುತ್ತೇವೆಬಳೆಪೂಜೆಯಿಂದ ಮೊದಲುಗೊಂಡು ಸಕಲೆಂಟು ಶಾಸ್ತ್ರಗಳನ್ನೂ ಹುಡುಕಿ ಅದನ್ನ ತೆರೆಯಮೇಲೆ ತರುವುದರ ಬಗ್ಗೆ ಗಮನ ಹರಿಸುವುದರಲ್ಲಿ ಯಾವ ಅನುಮಾನವೂ ಇಲ್ಲಗಂಡಿಗೂ ಹೆಣ್ಣಿಗೂ ಮದುವೆಗೆ ಮೊದಲುನಂತರಅದೇನೇ ಸಂಪ್ರದಾಯಗಳಿರಲಿ ಎಲ್ಲವನ್ನೂ ಅಚ್ಚುಕಟ್ಟಾಗಿ ನೆರವೇರಿಸುವುದರಲ್ಲಿ ಸಿದ್ಧಹಸ್ತರುಪುರೋಹಿತರುಗಳಿಗೇ ಶಾಸ್ತ್ರ ಮರೆತರೂನಿರ್ದೇಶಕನಿಗೆ ಮರೆಯಲಾರದುನಾನೇ ಧಾರಾವಾಹಿಯೊಂದನ್ನು ಬರೆಯುವ ಸಂದರ್ಭದಲ್ಲಿ ಒಂದಿಷ್ಟು ಗ್ರಂಥಗಳುಗೂಗಲ್ಲು ಎಲ್ಲದರ ಸಹಾಯ ಪಡೆದು ಒಂದಾದ ಮೇಲೊಂದುಮದ್ವೆಗಳಲ್ಲಿ ಯಾವ ಯಾವ ಸಂಪ್ರದಾಯಗಳಿವೆ ಎಂದು ಅಭ್ಯಾಸ ಮಾಡಿದ್ದೆಹಾಂಇನ್ನೊಂದು ಮುಖ್ಯ ವಿಷಯನಾವು ವಸುದೈವ ಕುಟುಂಬಕಂ ಎಂಬ ಸೂಕ್ತಿಯಲ್ಲಿ ವಿಶ್ವಾಸ ಹೊಂದಿದವರು.ಹೀಗಾಗಿ ಉತ್ತರ ಭಾರತದ ಯಾವುದೋ ಒಂದು ಶಾಸ್ತ್ರ ಮಲೆನಾಡಿನ ಮದುವೆಯೊಳಗೆ ಸಣ್ಣದಾಗಿ ತೂರಿಕೊಳ್ಳಬಹುದುಶೈವರ ಮದುವೆಗೆ ದೃಶ್ಯ ಮಾಧ್ಯಮಕ್ಕೆ ಸುಂದರವಾಗಿ ಕಾಣಬಹುದಾದ ಮಾಧ್ವರದೊಂದು ಆಚರಣೆ ಸೇರಿಕೊಂಡಿರಬಹುದುನಮ್ಮನ್ನ ಮನ್ನಿಸಿರಿ!

ಹಾಡು ನೃತ್ಯಗಳ ಮಹಾನಂದ
ರೆಸಾರ್ಟ್ ಮದುವೆ ಎಂದಾದ ಮೇಲೆ ಮುಗಿದೇ ಹೋಯಿತುಆ ಧಾರಾವಾಹಿಯಲ್ಲಿನ ಮದುವೆಗೆ ಸೆಲೆಬ್ರಿಟಿ ಬರೋದು ಖಂಡಿತಅವರು ಬಂದ ಮೇಲೆ ನಾಲ್ಕು ಹೆಜ್ಜೆ ಡ್ಯಾನ್ಸು ಖಾಯಂಸೀರಿಯಲ್ಲಿ ನಾಯಕನಿಗೋ ನಾಯಕಿಗೋ ನಮ್ಮ ಸಿನಿಮಾ ಹೀರೋ ಫ್ರೆಂಡುಅವನ ಜೊತೆಗೆ ಬರುವ ದಂಡು ಒಂದು ಹಾಡೋನೃತ್ಯಕ್ಕೋ ಸೇರಿಕೊಳ್ಳದಿದ್ದರೆ ಯಾವ ಮಜವೂ ಇರಲಾರದುಲಾಜಿಕ್ಕಿನ ಕಥೆ ಬಿಡಿಇದು ಮ್ಯಾಜಿಕ್ಕಿನ ವಿಷಯಕನ್ನಡ ಧಾರಾವಾಹಿಗಳ ಮದುವೆಗಳಲ್ಲಿ ಹೆಚ್ಚಿನೆಲ್ಲ ಸೆಲೆಬ್ರಿಟಿ ಬಂದು ಹೆಜ್ಜೆ ಹಾಕಿ ಹೋಗಿದ್ದಾರೆಹಿಂದಿಯಲ್ಲಿ ಶಾರುಕ್ ಸಲ್ಮಾನ್ ಹೃತಿಕ್ ಕೂಡ ಇಂಥ ವಿವಾಹಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದರೆಸೀರಿಯಲ್ ಮದುವೆಗಳ ಜನಪ್ರಿಯತೆ ಯಾವ ಮಟ್ಟಕ್ಕಿರಬಹುದು ಯೋಚಿಸಿ ನೋಡಿತಮ್ಮ ಸಿನಿಮಾಗಳನ್ನು ಪ್ರಮೋಟ್ ಮಾಡಿಕೊಳ್ಳಲು ಜನಪ್ರಿಯ ಧಾರಾವಾಹಿಯೊಂದರ ಮದುವೆಯ ವೇದಿಕೆಗಿಂತ ಉತ್ತಮ ಜಾಗ ಯಾವುದಿದೆ ಹೇಳಿ?ಹೀಗಾಗಿಯೇ ಒಂದಿಡೀ ದಿನ ಅಭ್ಯಾಸ ಮಾಡಿ ನಂತರ ಶ್ರದ್ಧಾ ಭಕ್ತಿಗಳಿಂದ ನಟನಟಿಯರು ಈ ಮದುವೆಯ ನೃತ್ಯ ವಿಶೇಷಗಳಲ್ಲಿ ಪಾಲ್ಗೊಳ್ಳುತ್ತಾರೆಇದು ಮನೆಯಲ್ಲೇ ಕೂತು ಮದುವೆ ನೋಡುವ ಮಂದಿಗೆ ಮೃಷ್ಟಾನ್ನ ಭೋಜನವೇ ಸರಿ.

ತೆರೆಯ ಹಿಂದಿನ ಶ್ರಮ
ಆದರೆ ಇಷ್ಟೆಲ್ಲವನ್ನ ಕಟ್ಟಿಕೊಡುವುದಕ್ಕೆ ತಂತ್ರಜ್ಞರ ಬಳಗ ಹಗಲು ರಾತ್ರಿಯೆನ್ನದೆ ಶ್ರಮಿಸಬೇಕುಎರಡು ಮೂರು ದಿನಗಳೊಳಾಗಿ ಹತ್ತೈವತ್ತು ದೃಶ್ಯಗಳನ್ನ ಶೂಟ್ ಮಾಡಬೇಕುನಾನೇ ಇಂತಹ ೨-೩ ಮದುವೆಗಳ ಚಿತ್ರೀಕರಣದಲ್ಲಿ ಪಾಲ್ಗೊಂಡ ಅನುಭವ ಇರುವುದರಿಂದ ಹೇಳುತ್ತಿದ್ದೇನೆಖಂಡಿತಕ್ಕೂ ಇದು ಸುಲಭವಲ್ಲದಪ್ಪನೆಯ ರೇಷ್ಮೆ ಸೀರೆಯಲ್ಲಿ ಪ್ರಖರ ಬೆಳಕಿನಲ್ಲಿ ಬೆಳಗ್ಗಿಂದ ಸಂಜೆಯವರೆಗೆ ನಗುಮೊಗ ಹೊತ್ತು ಕೂತ ನಾಯಕಿಯ ಬೆವರ ಸಂಕಟ ತೆರೆಯ ಮೇಲೆ ಕಾಣುವುದಿಲ್ಲಅಲ್ಲಲ್ಲೇ ಸೀನು ಬರೆವ ಸಂಭಾಷಣೆಕಾರಸೊಂಟ ಬಿದ್ದು ಹೋಗುವಂತೆ ಓಡಾಡುವ ಸೆಟ್ ಹುಡುಗರುಕಲಾ ನಿರ್ದೇಶಕಛಾಯಾಗ್ರಾಹಕ ತೆರೆಯ ಮೇಲೆ ಕಾಣಿಸುವುದೇ ಇಲ್ಲಇವರೆಲ್ಲರ ತೆರೆಮರೆಯ ಒದ್ದಾಟದಿಂದಲೇ ತೆರೆ ಮೇಲೆ ಸೊಗಸು ಹೆಚ್ಚುತ್ತಿರುತ್ತದೆ.

ಇನ್ನೆಷ್ಟು ದಿನ ಹೀಗೆ?
ಆದರೀಗ ವೀಕ್ಷಕ ವರ್ಗಕ್ಕೂ ಏಕತಾನತೆ ಕಾಡಲಾರಂಭಿಸಿದೆಒಂದೇ ಬಗೆಯ ಮದುವೆಗಳುಅದದೇ ಹಾಡು ನೃತ್ಯಗಳು ಬೋರಾಗಲಾರಂಭಿಸಿದೆನೈಜತೆಯಿಂದ ದೂರವೇನೋ ಅನ್ನಿಸುವ ದೃಶ್ಯಾವಳಿಗಳುಅವವೇ ಮಸಲತ್ತುಗಳು,ಮದುವೆ ನಿಲ್ಲಿಸಲು ಯಾವುದೋ ಪಾತ್ರ ಮಾಡುವ ಕಸರತ್ತುಗಳು ಆಕಳಿಕೆ ತರಿಸುತ್ತಿವೆಅದ್ದೂರಿತನವನ್ನು ಮೀರಿದ ಕಂಟೆಂಟ್ ಅನ್ನು ಜನರೀಗ ಬಯಸುತ್ತಿದ್ದಾರೆಯಾವುದೋ ಒಂದು ಧಾರಾವಾಹಿ ಈ ಸಿದ್ಧಸೂತ್ರವನ್ನು ಬದಿಗೊತ್ತಿ ಹೊಸ ದಾರಿಯನ್ನು ಹಿಡಿಯಬಹುದುಅಲ್ಲಿಯವರೆಗೆ ಸಶೇಷಹಾಂಹೇಳೋದು ಮರೆತೆಟೀವಿ ಮದುವೆಯೊಂದಕ್ಕೆ ಇತ್ತೀಚೆಗೆ ಪತ್ರಿಕೆಯಲ್ಲಿ ಅಕ್ಷತೆಯ ಸ್ಯಾಷೆ ಹಂಚಿದ್ದರು ಮೊನ್ನೆ ಮೊನ್ನೆ ತಾನೇನಂಗಂತೂ ಆ ಐಡಿಯಾ ಇಷ್ಟವಾಯಿತುಯಾರಿಗೆ ಗೊತ್ತುನಾಳೆ ನಿಮ್ಮ ಮನೆಗೇ ನುಗ್ಗಿ ಮದುವೆ ಶೂಟಿಂಗ್ ನಡೆದರೂ ಅಶ್ಚರ್ಯವಿಲ್ಲಕಾದು ನೋಡೋಣ

ಶುಕ್ರವಾರ, ಏಪ್ರಿಲ್ 07, 2017

ಹಿಮಾಲಯದ ಮರುಭೂಮಿ- ನುಬ್ರಾ ಕಣಿವೆ


ಮೈಕೊರೆಯುವ ಮೈನಸ್ ಹತ್ತು ಡಿಗ್ರಿಯ ಚಳಿ.  ಕತ್ತೆತ್ತಿ ನೋಡಿದರೆ, ಸುತ್ತಲೂ ಹಿಮದ ಸೀರೆ ಹೊದ್ದು ಮಲಗಿರುವ ಬಿಳಿಬಿಳಿ ಪರ್ವತ ಶ್ರೇಣಿಗಳು, ಮಂಜು ಕರಗಿ ಝುಳು ಹರಿಯುತ್ತಿರುವ ಸಣ್ಣ ತೊರೆಗಳು...  ಆದರೆ, ಕಾಲ ಕೆಳಗೆ ಮಾತ್ರ ಮರಳು. ಎತ್ತ ನೋಡಿದರೂ, ಮರಳ ದಿಣ್ಣೆಗಳು, ಓಡಾಡುತ್ತಿರುವ ಒಂಟೆಗಳು.. ಜೋರು ಬೀಸುವ ಗಾಳಿಗೆ ಮರಳೂ ಮೇಲೆದ್ದು  ಮುಸುಕುವ ಉಸುಕ ಬಿರುಗಾಳಿ! ಅರೆರೆ. ಎತ್ತಣ ಹಿಮಪರ್ವತ, ಎತ್ತಣ ಮರುಳ ದಿಣ್ಣೆ ಎಂದು ಯೋಚಿಸುತ್ತಿದ್ದೀರಾ? ಹೌದು. ಇಂತಹದೊಂದು ಸೋಜಿಗದ ಜಾಗ ನಮ್ಮ ಭಾರತದಲ್ಲಿಯೇ ಇದೆ ಎಂದರೆ ಅಚ್ಚರಿಯಾದೀತು. ಸ್ವರ್ಗಸದೃಶವಾದ ಈ ತಾಣ, ನುಬ್ರಾ ಕಣಿವೆ. ಮೈನವಿರೇಳಿಸುವ ಅದ್ಭುತ ಪ್ರಾಕೃತಿಕ ಸೌಂದರ್ಯವನ್ನು ಒಡಲಲ್ಲಿ ತುಂಬಿಕೊಂಡಿರುವ ಲಢಾಕ್ ಪ್ರಾಂತ್ಯದಲ್ಲಿದೆ ಈ ನುಬ್ರಾ ವ್ಯಾಲಿ.


ಜಮ್ಮ ಕಾಶ್ಮೀರವನ್ನು ಹಾದುಹೋಗುವ ಹಿಮಾಲಯ ಪರ್ವತ ಶ್ರೇಣಿಯು, ಅಲ್ಲಿನ ಪ್ರಕೃತಿಸಿರಿಗೆ ವರದಾನವನ್ನೇ ನೀಡಿದೆ. ನಿಸ್ಸಂಶಯವಾಗಿಯೂ ನಮ್ಮ ದೇಶದ ಭೇಟಿ ನೀಡಲೇಬೇಕಾದ ಪ್ರವಾಸೀತಾಣಗಳಲ್ಲಿ ಕಾಶ್ಮೀರ ಕಣಿವೆಯೂ ಒಂದು. ಕಾಶ್ಮೀರದ ಲಢಾಕ್, ಪ್ರಾಯಶಃ ಬಹುಸಂಖ್ಯೆಯ ಪ್ರವಾಸಿಗಳು  ಬಂದು ಹೋಗುವ ಜಿಲ್ಲೆಯೂ ಹೌದು. ಲೇಹ್ ನಗರ, ವಿವಿಧ ಬೌದ್ಧಮಂದಿರಗಳು ಪ್ಯಾಂಗಾಂಗ್ ಸರೋವರ, ಖರ್ದುಂಗ್ಲಾ ಪಾಸ್ ಇಲ್ಲಿನ ಜನಮನ ಸೆಳೆಯುವ ತಾಣಗಳು. ಈ ಎಲ್ಲ ಗೌಜಿಗದ್ದಲಗಳಿಂದ ದೂರವಾಗಿ, ಲೇಹ್ ನಗರದಿಂದ ಉತ್ತರಕ್ಕೆ ಸುಮಾರ ನೂರೈವತ್ತು ಕಿಲೋಮೀಟರ್ ದೂರದಲ್ಲಿ ಇರುವ ವಿಸ್ಮಯಕಾರೀ ಕಣಿವೆಯೇ ನುಬ್ರಾ. ಕೂಗಳತೆಯ ದೂರದಲ್ಲಿ ಪಾಕಿಸ್ತಾನ ಮತ್ತು ಚೀನಾ ಎರಡರ ಗಡಿಗಳನ್ನೂ ಹೊಂದಿರುವ-ಭದ್ರತೆಯ ದೃಷ್ಟಿಯಿಂದ ಭಾರತದ ಆಯಕಟ್ಟಿನ ಜಾಗದಲ್ಲಿರುವ ಈ ಕಣಿವೆ- ಈ ಕಾರಣಕ್ಕಾಗಿಯೇ ಪ್ರವಾಸಿಗರ ವಲಯದಲ್ಲಿ ತುಂಬ ಪ್ರಸಿದ್ಧವಾಗಿಲ್ಲ.  ಸಿಯಾಚಿನ್ ಗ್ಲೇಸಿಯರ್ ಗೆ ಈ ನುಬ್ರಾ ಕಣಿವೆಯಿಂದ ಮೂವತ್ತೇ ಕಿಲೋಮೀಟರು ದೂರ!


ಲಡಾಕ್ ಮತ್ತು ಕಾರಾಕೊರಂ ಎಂಬ ಪ್ರಸಿದ್ಧ ಹಿಮಾಲಯ ಪರ್ವತಶ್ರೇಣಿಯನ್ನು  ಸಿಯಾಚಿನ್ ಮತ್ತು ಶ್ಯೋಕ್ ಎಂಬೆರಡು ನದಿಗಳು ಬೇರ್ಪಡಿಸುವ ಪ್ರಕ್ರಿಯೆಯಲ್ಲಿ ಉಂಟಾಗಿರುವ ಕಣಿವೆ ಪ್ರದೇಶ, ನುಬ್ರಾ. ಶ್ಯೋಕ್, ಸಿಂಧೂ ನದಿಯ ಉಪನದಿ. ಟಿಬೆಟಿಯನ್ ಪ್ರಸ್ಥಭೂಮಿಯ ಗುಣಲಕ್ಷಣದಂತೆ,ಕೊರೆವ ಮರುಭೂಮಿಯಾಗಿ ನುಬ್ರಾ ರೂಪುಗೊಂಡಿದೆ. ಅತಿಯಾದ ಶೀತದ ಕಾರಣದಿಂದಾಗಿ ಇಲ್ಲಿ ಯಾವುದೇ ಗಿಡ-ಮರಗಳು ವಿಫುಲವಾಗಿ ಬೆಳೆಯಲಾರವು. ಮಳೆಯೂ ಇಲ್ಲಿ ವಿರಳ. ಹೀಗಾಗಿಯೇ ಉಸುಕಿನ ದಿಣ್ಣೆಗಳು ಕಿಲೋಮೀಟರುಗಟ್ಟಲೆ ಚಾಚಿಕೊಂಡಿವೆ. ಅಚ್ಚರಿಯೆಂದರೆ, ಮರಳುಗಾಡಿನಲ್ಲಿರುವಂತೆ ಒಂಟೆಗಳೂ ಇಲ್ಲಿವೆ! ಎರಡು ಡುಬ್ಬಗಳ ಒಂಟೆಗಳು ಕುರುಚಲು ಪೊದೆಗಳ ಬಳಿ ಮೇಯುತ್ತ ನಿಂತಿರುವ ದೃಶ್ಯವನ್ನೂ ನೋಡಬಹುದು. ನೆನಪಿಡಿ- ಈ ರೀತಿಯ ಎರಡು ದಿಬ್ಬದ ಒಂಟೆಗಳು ಇಲ್ಲಿ ಬಿಟ್ಟರೆ, ಇರುವುದು ಆಸ್ಟ್ರೇಲಿಯಾದಲ್ಲಿ ಮಾತ್ರ! ನದಿಗಳು ಹರಿದು ಉಂಟಾಗಿರುವ ವಿಶಾಲ ಬಯಲು, ಉದ್ದಕ್ಕೆ ಚಾಚಿರುವ ಹಿಮಾವೃತ ಬೆಟ್ಟಗಳು ಈ ಕಣಿವೆಗೊಂದು ದಿವ್ಯ ಸೌಂದರ್ಯವನ್ನು ನೀಡಿದೆ.

ನುಬ್ರಾ ಕಣಿವೆಗೆ ಐತಿಹಾಸಿಕ ಮಹತ್ವ ಕೂಡ ಇದೆ. ಪುರಾತನ ಭಾರತದ ಪ್ರಸಿದ್ಧ ’ಸಿಲ್ಕ್ ರೂಟ್’ ಅನ್ನುವ ದಾರಿ ನುಬ್ರಾ ಕಣಿವೆಯನ್ನೇ ಹಾದು ಹೋಗುತ್ತಿತ್ತು. ಸಾಂಬಾರ ಪದಾರ್ಥ ಮತ್ತು ರೇಷ್ಮೆ ಬಟ್ಟೆಗಾಗಿ ಭರತಖಂಡಕ್ಕೆ ಬರುವ ಹೊರಗಿನ ವ್ಯಾಪರಸ್ಥರು ದುರ್ಗಮವಾದ ಈ ಕಣಿವೆಯನ್ನೇ ಹಾದು ಭಾರತಕ್ಕೆ ಬರಬೇಕಿತ್ತು. ಸುಮಾರು ೧೯೫೦ನೇ ಇಸವಿಯವರೆಗೂ ಚೀನಾದಿಂದ ಇಲ್ಲಿಗೆ- ಇಲ್ಲಿಂದ ಚೀನಾ ಕಡೆಗೆ ಜನರು ಕಾಲ್ನಡಿಗೆಯೇ ಹೋಗುತ್ತಿದ್ದರಂತೆ. ನಂತರ ರಾಜತಾಂತ್ರಿಕ ಕಾರಣಗಳಿಗೆ ಮತ್ತು ಭದ್ರತೆಯ ದೃಷ್ಟಿಯಿಂದಾಗಿ ಈ ಮಾರ್ಗವನ್ನು ಮುಚ್ಚಲಾಯಿತು.

ನುಬ್ರಾ ಕಣಿವೆ ಭಾರತದ ಅತ್ಯಂತ ಶೀತ ಪ್ರದೇಶಗಳಲ್ಲೊಂದಾಗಿದ್ದು, ಇಲ್ಲಿನ ಜನಸಂಖ್ಯೆಯೂ ವಿರಳ. ಅಲ್ಲೊಂದು ಇಲ್ಲೊಂದು ಹಳ್ಳಿಗಳಿವೆ. ದಿಸ್ಕಿತ್, ಹುಂಡುರ್, ಟುರ್ಟಕ್ ಮೊದಲಾದ ಊರುಗಳು ಅಲ್ಲಲ್ಲಿ ಸೋಮಾರಿಯಾಗಿ ಬಿದ್ದುಕೊಂಡಿವೆ. ಇಲ್ಲಿಗೆ ಬರುವ ಪ್ರವಾಸಿಗರೇ ಆದಾಯದ ಮೂಲ. ಹಿಮ ಕರಗಿ ಹರಿಯುವ ನೀರು ಇರುವುದರಿಂದ, ಅಲ್ಲಲ್ಲಿ ಬಾರ್ಲಿ, ಅಕ್ರೋಟು ಮೊದಲಾದವನ್ನು ಬೆಳೆಯುತ್ತಾರೆ. ಲಡಾಖ್ ನ ಉಳಿದ ಪ್ರಾಂತ್ಯಗಳಿಗೆ ಹೋಲಿಸಿದರೆ, ಕೃಷಿ ಚಟುವಟಿಕೆ ಇಲ್ಲೇ ಜಾಸ್ತಿ.
ನಾವೊಂದಿಷ್ಟು ಮಂದಿ ನುಬ್ರಾಕ್ಕೆ ಹೋಗಿದ್ದು ಫೆಬ್ರವರಿ ತಿಂಗಳ ಕೊರೆಯುವ ಚಳಿಯಲ್ಲಿ. ಲಢಾಕ್ ನ ಬೇರಾವುದೋ ಟ್ರೆಕ್ ಅನ್ನು ಅರ್ಧಕ್ಕೇ ಮೊಟಕುಗೊಳಿಸಬೇಕಾದ ಕಾರಣಕ್ಕಾಗಿ ಲೇಹ್ ಸುತ್ತಮುತ್ತ ಇರುವ ಒಂದಿಷ್ಟು ಜಾಗಗಳನ್ನ ನೋಡಲು ೩-೪ ದಿನಗಳ ಸಮಯ ಸಿಕ್ಕಿತ್ತು. ಈ ಹುಡುಕಾಟದ ಫಲವೇ ನುಬ್ರಾವ್ಯಾಲಿ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯಿತು.

 ಮಟಮಟ ಮಧ್ಯಾಹ್ನವೇ ಮೈನಸ್ ೧೦-೧೫ ಡಿಗ್ರಿಯ ಮೂಳೆಕೊರೆಯುವ ಚಳಿ. ಇಡೀ ನುಬ್ರಾಕ್ಕೆ ನಾವೊಂದು ಹತ್ತು ಜನ ಬಿಟ್ಟರೆ ಬೇರಾವ ಪ್ರವಾಸಿಗರೂ ಇಲ್ಲ. ಯಾವ ಗೆಸ್ಟ್ ಹೌಸ್ ಗಳಾಗಲೀ, ಹೋಟೇಲುಗಳಾಗಲೀ ಈ ಸಮಯದಲ್ಲಿ ತೆರೆದಿರುವುದಿಲ್ಲ. ರಾತ್ರಿ ಸುಮಾರು -೩೦ ಡಿಗ್ರಿಗಳವರೆಗೂ ತಾಪಮಾನ ಇಳಿಕೆಯಾಗುತ್ತದೆ. ಮನೆಗಳ, ಲಾಡ್ಜುಗಳ ನೆತ್ತಿಯ ಮೇಲಿನ ಟ್ಯಾಂಕಿನಲ್ಲಿರುವ ನೀರು ಕೂಡ ಮಂಜುಗಡ್ದೆಯಾಗಿ ಬಿಟ್ಟಿರುತ್ತದೆ! ಸಂಜೆ ಐದು ಗಂಟೆಯ ನಂತರ ಹೊರಗಡೆ ಓಡಾಡುವ ಯಾವ ಸಾಧ್ಯತೆಯೂ ಇಲ್ಲ. ನರಪಿಳ್ಳೆ ಕೂಡ ರಸ್ತೆಯಲ್ಲಿ ಇರುವುದಿಲ್ಲ. ಊರಮಂದಿಯೆಲ್ಲ ಮನೆಯೊಳಗೆ ಅಗ್ಗಿಷ್ಟಿಕೆಗಳನ್ನ ಹಾಕಿಕೊಂಡು ಕೂತಿರುತ್ತಾರೆ. ಆ ಚಳಿಯಲ್ಲೇ ಹುಂಡುರ್ ನ ಮರಳ ದಿಣ್ಣೆಗಳಲ್ಲಿ ಓಡಾಡಿ ಆಶ್ರಯ ಹುಡುಕಿಕೊಂಡು ಹೋದೆವು. ನಮ್ಮ ಟೆಂಪೋ ಟ್ರಾವೆಲರ್ ಡ್ರೈವರು ಅದೇ ಊರಿನವನಾದ ಕಾರಣಕ್ಕೆ ಗೆಸ್ಟ್ ಹೌಸೊಂದರ ಬಾಗಿಲು ತೆಗಿಸಿ, ಮಲಗುವ ವ್ಯವಸ್ಥೆ ಮಾಡಿಸಿಕೊಟ್ಟ. ನೋಡಿದರೆ, ಅಲ್ಲಿದ್ದಿದ್ದು ಒಬ್ಬ ಹೆಂಗಸು ಮಾತ್ರ. ಆಕೆ ಸಾಕ್ಷಾತ್ ಅನ್ನಪೂರ್ಣೆಯಂತೆ ನಮಗೆ ಬಿಸಿಬಿಸಿ ಫುಲ್ಕಾಗಳನ್ನ- ಅನ್ನ ದಾಲ್ ನ ಮಾಡಿ ಬಡಿಸಿದ್ದನ್ನು ನಾವೆಲ್ಲ ಎಂದಿಗೂ ಮರೆಯಲಾರೆವು! ಇಲ್ಲಿನ ಸ್ತ್ರೀಯರು ಬಹಳ ಕಷ್ಟ ಸಹಿಷ್ಣುಗಳಾಗಿದ್ದು ಗಂಡಸರಿಗಿಂತ ಹೆಚ್ಚಿನ ಕೆಲಸವನ್ನು ಅವರೇ ಮಾಡುತ್ತಾರೆ. ಹೆಚ್ಚಿನ ಹಳ್ಳಿಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಜಾಸ್ತಿ ಕಾಣಿಸುತ್ತಾರೆ!



ಇಲ್ಲಿನ ಹೆಚ್ಚಿನ ಹಳ್ಳಿಗಳಲ್ಲಿ ಬೌದ್ಧರ ಮಾನೆಸ್ಟ್ರಿಗಳಿವೆ. ದಿಸ್ಕಿತ್ ನಲ್ಲಿ ಮೈತ್ರೇಯ ಬುದ್ಧನ ಮೂವತ್ತಮೂರು ಮೀಟರ್ ಎತ್ತರ ಸುಂದರ ಪ್ರತಿಮೆ ಇದೆ. ಶಾಂತಿಯ ಪ್ರತೀಕವಾಗಿರುವ ಮೈತ್ರೇಯ ಬುದ್ಧನ ಈ ಮೂರ್ತಿಯು, ಪಾಕಿಸ್ತಾನದ ಕಡೆಗೆ ಮುಖ ಮಾಡಿಕೊಂಡಿದೆ! ಹುಂಡುರ್ ನಲ್ಲಿ ಚಂಬಾ ಎಂಬ ಬೌದ್ಧ ಮಂದಿರವಿದೆ. ಪುಟಾಣಿ ಮಕ್ಕಳು ಕೆಂಪು ನಿಲುವಂಗಿಯನ್ನ ತೊಟ್ಟು ಓಡಾಡುವುದನ್ನು ನೋಡುವುದೇ ಒಂದು ಸೊಗಸು. ಸುಮುರ್ ಎಂಬಲ್ಲಿ ೧೮೫೦ ರಲ್ಲಿ ಕಟ್ಟಲ್ಪಟ್ಟ ಗೊಂಪಾ ಇದೆ. ಬೌದ್ಧ ಧರ್ಮೀಯರ ಗ್ರಂಥಗಳನ್ನು ಅಧ್ಯಯನ ಮಾಡುತ್ತ ಕೂತಿರುವ ಗುರುಗಳೂ..ಅವರುಗಳ ಶಿಷ್ಯರೂ ನಿಮಗಿಲ್ಲಿ ಕಾಣಸಿಗುತ್ತಾರೆ. ಹಾಗೇ ಇಲ್ಲಿಂದ ನುಬ್ರಾ ಕಣಿವೆಯ ನದಿಗುಂಟದ ಹಾದಿಯನ್ನು ಹಿಡಿದು ಮತ್ತೊಂದು ನೂರೈವತ್ತು ಕಿಲೋಮೀಟರು ಹೋದರೆ ಥ್ರೀ ಈಡಿಯಟ್ಸ್ ಚಿತ್ರದಿಂದಾಗಿ ಪ್ರಸಿದ್ಧವಾದ ಪ್ಯಾಂಗಾಂಗ್ ಲೇಕ್ ಸಿಗುತ್ತದೆ.

ಹಾಂ, ನೀವು ಇವುಗಳನ್ನ ಯಾವುದನ್ನೂ ನೋಡದೇ ಸುಮ್ಮನೇ ಇಲ್ಲಿನ ರಸ್ತೆಗಳಲ್ಲಿ ಅಲೆಯುತ್ತೀರಿ ಎಂದರೂ ಸೈಯೇ. ಯಾಕೆಂದರೆ ಲಢಾಕ್ ನ ಸತ್ವವಿರುವುದೇ ಉದ್ದೇಶವಿಲ್ಲದೇ ಮಾಡುವ ಅಲೆದಾಟದಲ್ಲಿ. ಏಕೆಂದರೆ ಇಲ್ಲೊಂದು ವಿಚಿತ್ರ ಅನುಭೂತಿಯಿದೆ. ಹೊರ ಜಗತ್ತಿನ ದೈನಿಕ ವ್ಯಾಕರಣಕ್ಕೆ ಹೊರತಾದ ಬದುಕಿದೆ. ಕಣ್ಣುಹಾಯಿಸಿದಷ್ಟು ಉದ್ದಕ್ಕೂ ಕಾಣುವ ಹಿಮಪರ್ವತ ಮಾಲೆ, ಬೀಸಿ ಬರುವ ಗಾಳಿಗೆ ಮೇಲೆದ್ದ ಮರಳು ಸೃಜಿಸಿದ ಧೂಳಿನ ಮಾಯಾಲೋಕ.. ನಿಮ್ಮನ್ನ ಮಂತ್ರಮುಗ್ಧರನ್ನಾಗಿಸುತ್ತದೆ. ದೈತ್ಯ ಪ್ರಕೃತಿಯೆದುರಿಗೆ ನಾವೆಷ್ಟು ಕುಬ್ಜ ಅನ್ನುವುದನ್ನು ಮರುನಿರೂಪಿಸುತ್ತದೆ. ಎಂದಾದರೊಂದು ದಿನ ಲೇಹ್ ಗೆ ಖಂಡಿತವಾಗಿಯೂ ಹೋಗಿ, ಅಲ್ಲಿಗೆ ಹೋದವರು ನುಬ್ರಾ ಕಣಿವೆಗೆ ಹೋಗುವುದನ್ನು ಮಾತ್ರ ಮರೆಯಬೇಡಿ!


ಹೋಗುವುದು ಹೇಗೆ?
ದೆಹಲಿಯಿಂದ ಲೇಹ್ ಗೆ ವಿಮಾನದಲ್ಲಿ ಅಥವಾ ರಸ್ತೆಮಾರ್ಗವಾಗಿಯೂ ಪ್ರಯಾಣಿಸಬಹುದು. ಆದರೆ ಚಳಿಗಾಲದಲ್ಲಿ ಮನಾಲಿ-ಜಮ್ಮು ರಸ್ತೆಯಲ್ಲಿ ಸಂಚಾರ ನಿಷಿದ್ಧ. ಡಿಸೆಂಬರ್ ನಿಂದ ಮಾರ್ಚ್- ಕೇವಲ ವಿಮಾನದಲ್ಲಷ್ಟೇ ಲೇಹ್ ಗೆ ತಲುಪಬಹುದು. ಅಲ್ಲಿಂದ ಯಾವುದಾದರೂ ಕಾರ್/ಟೆಂಪೋ ಟ್ರಾವೆಲರ್ ನಲ್ಲಿ ನುಬ್ರಾಗೆ ಹೋಗಬಹುದು. ಲೇಹ್ ಪಟ್ಟಣದಿಂದ ನುಬ್ರಾಗೆ ೧೫೦ ಕಿಲೋಮೀಟರು, ಐದರಿಂದ ಆರುಗಂಟೆಗಳ ಪ್ರಯಾಣ. ಮೊದಲೇ ವಸತಿ ಸೌಕರ್ಯವನ್ನು ಕಾಯ್ದಿರಿಸಿಕೊಂಡು ಹೋಗುವುದು ಒಳಿತು.



ಖರ್ದುಂಗ್ಲಾ ಪಾಸ್
ನುಬ್ರಾ ಕಣಿವೆಗೆ ತೆರಳಬೇಕಿದ್ದರೆ ಜಗತ್ತಿನ ಅತ್ಯಂತ ಎತ್ತರದ ಮೋಟರೇಬಲ್ ಪಾಸ್ ಎಂದೇ ಪ್ರಸಿದ್ಧವಾಗಿರುವ ಖರ್ದುಂಗ್ಲಾ ಪಾಸ್ ಅನ್ನು ದಾಟಿಕೊಂಡು ಹೋಗಬೇಕು. ೧೮,೩೮೦ ಅಡಿಗಳೆತ್ತರದಲ್ಲಿರುವ ಖರ್ದುಂಗ್ಲಾದಲ್ಲೊಂದೆರಡು ಫೋಟೋ ಕ್ಲಿಕ್ಕಿಸಿಕೊಂಡು ಮತ್ತೆ ೮ ಸಾವಿರ ಅಡಿಗಳಷ್ಟು ಕೆಳಗಿಳಿದರೆ ವಿಸ್ತಾರವಾಗಿ ಚಾಚಿಕೊಂಡಿರುವ ನುಬ್ರಾ ಕಣಿವೆ ಕಾಣಿಸುತ್ತದೆ. ಖರ್ದುಂಗ್ಲಾದಲ್ಲಿ ಹಿಮಪಾತವಾಗಿದ್ದರೆ ರಸ್ತೆ ಮುಚ್ಚಿಕೊಂಡು ಮುಂದಿನ ಪ್ರಯಾಣ ಸಾಧ್ಯವಾಗದೇ ಹೋಗಬಹುದು. ಹೀಗಾಗಿ, ಖರ್ದುಂಗ್ಲಾದ ವಾತಾವರಣ ಹೇಗಿದೆ ಅನ್ನುವುದರ ಮೇಲೆ ನುಬ್ರಾ ನೋಟ ಸಾಧ್ಯ!

ಕಣ್ಣಳತೆ ದೂರದಲ್ಲೇ ಸಿಯಾಚಿನ್!
ನುಬ್ರಾ ವ್ಯಾಲಿಯಿಂದ ಸಿಯಾಚಿನ್ ದರ್ಶನ ಭಾಗ್ಯ ಸಿಗುತ್ತದೆ. ಸಿಯಾಚಿನ್ ನ ಬೇಸ್ ಕ್ಯಾಂಪ್ ಗೆ ನುಬ್ರಾ ಮೂಲಕವೇ ಸಾಗಿ ಹೋಗಬೇಕು. ಬೇಸ್ ಕ್ಯಾಂಪ್ ವರೆಗೆ ಮಾತ್ರ ಸಾರ್ವಜನಿಕರಿಗೆ ಪ್ರವೇಶ. ಅಲ್ಲಿಂದ ಮುಂದೆ ನಿಷೇಧಿತ ಪ್ರದೇಶ. ಮಿಲಿಟರಿ ಒಪ್ಪಿಗೆಯಿಲ್ಲದೇ ಮುಂದೆ ಸಾಗುವಂತಿಲ್ಲ. ಸಿಯಾಚಿನ್  ಬೇಸ್ ಕ್ಯಾಂಪ್ ಗೆ ಹೋಗುವ ಸೈನ್ಯದ ಟ್ರಕ್ ಗಳು ದಾರಿಯುದ್ಧಕ್ಕೂ ಅಲ್ಲಲ್ಲಿ ಕಾಣಸಿಗುತ್ತವೆ. ಬಿಳಿಯ ಸಮವಸ್ತ್ರ ತೊಟ್ಟ ಸೈನಿಕರೂ ಹಸನ್ಮುಖರಾಗಿ ಪ್ರವಾಸಿಗರನ್ನ ಮಾತನಾಡಿಸುತ್ತಾರೆ.