ಮಂಗಳವಾರ, ಸೆಪ್ಟೆಂಬರ್ 25, 2012

ನಾಗಂದಿಗೆಯೆಂಬ ಗೋಡೆ ಮೇಲಿನ ಖಜಾನೆ
ನಮ್ಮ ಮನೆಯೆದುರಿನ ದೊಡ್ಡದಾದ ಗೊಡ್ಡುಮಾವಿನ ಮರವೊಂದು ನಾಲ್ಕಾರು ತೆಂಗಿನಮರಗಳಿಗೆ ತೊಂದರೆ ಕೊಡುತ್ತಿತ್ತು. ಮಾವಿನ ಮರದಲ್ಲಿ ಕಾಯೂ ಬರುತ್ತಿರಲಿಲ್ಲ, ತೆಂಗಿನ ಮರಗಳಿಗೆ ಬೆಳೆಯಲೂ ಬಿಡುತ್ತಿರಲಿಲ್ಲ. ಅಪ್ಪ ಮರ ಕಡಿಸಬೇಕು ಅಂತ ಕೆಲ ವರ್ಷಗಳಿಂದ ಹೇಳುತ್ತ ಬಂದಿದ್ದರೂ, ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ವರ್ಷ ಮಾತ್ರ ಅಮ್ಮ ಪಟ್ಟು ಹಿಡಿದು ಕೂತುಬಿಟ್ಟಳು, ಮರ ಕಡಿಸೋದೇ ಸೈ ಅಂತ. ಏನಕ್ಕೆ ಎಂದು ಕೇಳಿದರೆ ತನಗೇನೋ ಹೊಸ ಐಡಿಯಾ ಬಂದಿರುವುದಾಗಿಯೂ, ಅದನ್ನು ಮರ ಕಡಿಸಿದ ಮೇಲೆಯೇ ಹೇಳುತ್ತೇನೆ ಎಂತಲೂ ಅಂದಳು.

ಅಪ್ಪ ಊರೆಲ್ಲ ತಿರುಗಿ ಮರ ಕಡಿಯೋಕೆ ಜನ ಗೊತ್ತು ಮಾಡಿದರು. ಎಲ್ಲ ಸೇರಿ ಎರಡಾಳು ಸುತ್ತಳತೆಯ ಮರವನ್ನು ಕಡಿದು ಹಾಕಿದ ಮೇಲೆ ಬಂದ ಅಮ್ಮ ಅದನ್ನೊಮ್ಮೆ ಪರಾಂಬರಿಸಿ ತಲೆಯಾಡಿಸಿದಳು. ಆವತ್ತೇ ನಾರಾಯಣಾಚಾರಿಯನ್ನು ಕರೆಸಿ, ಅವನಿಗೆ ಅದನ್ನ ಅದೆಷ್ಟೋ ಉದ್ದಗಲಕ್ಕೆ ಹಲಗೆ ಮಾಡಬೇಕು ಎಂದೆಲ್ಲ ಆರ್ಡರು ಕೊಟ್ಟಳು. ಮನೆ ಸುತ್ತ ಓಡಾಡುವವರೆಲ್ಲ ಬೆಂಚು ಮಾಡಿಸ್ತೀರಾ ಮಾಷ್ಟ್ರೇ, ಏನಕ್ಕೆ ಹಲಗೆಗಳು ಎಂದು ವಿಚಾರಿಸಿಕೊಂಡರು. ಊಹೂಂ, ಅಮ್ಮ ಗುಟ್ಟು ಬಿಡಲಿಲ್ಲ.

ಮೂರು ದಿನಗಳ ಪರಿಶ್ರಮದ ನಂತರ ಹಲಗೆಗಳು ಸಿದ್ದವಾದವು. ಅವುಗಳನ್ನ ಆಮೇಲೆ ಒಂದಿಷ್ಟು ದಿನ ಪಕ್ಕದ ಮನೆ ಶಂಕರ ಭಟ್ಟರ ಕೆರೆಯಲ್ಲಿ ಮುಳುಗಿಸಿಡಲಾಯಿತು. ಅವು ಮನೆಗೆ ಬಂದಮೇಲೆ ಅಮ್ಮ ಬಾಯಿಬಿಟ್ಟಳು. ನಾಗಂದಿಗೆ ಮಾಡಿಸಬೇಕು ಅಂತ! ನಾಗಂದಿಗೆ ಎಂದರೆ ಗೋಡೆಯೊಳಗೆ ತೂರಿಸಿರೋ ಎರಡು ಗಟ್ಟಿಯಾದ ಮರದ ತುಂಡುಗಳ ಆಧಾರದ ಮೇಲೆ ನಿಂತಿರುವ ಅಗಲವಾದ, ದಪ್ಪಗಿನ ಮರದ ಹಲಗೆ.  ಅಯ್ಯೋ, ಅಷ್ಟಕ್ಕೆ ಇಷ್ಟೆಲ್ಲ ಕಷ್ಟ ಪಡಬೇಕಿತ್ತೇನೇ , ಸಿಮೆಂಟಿನದೇ ಮಾಡಿಸಿಕೊಡುತ್ತಿದ್ದೆ ಮಾರಾಯ್ತೀ ಅಂತ ಅಪ್ಪ ಅಂದರೆ, ಛೇಛೇ, ನಾಗಂದಿಗೆ ನಾಗಂದಿಗೆಯೇ, ಅದು ಹಲಗೆಯದ್ದೇ ಆಗಬೇಕು ಅಂತಂದ ಅಮ್ಮ, ಕೆಲಸದವರಿಗೆ ಅದನ್ನ ಜೋಡಿಸುವುದು ಹೇಗೆ ಎನ್ನುವ ನಿರ್ದೇಶನ ನೀಡಲು ಹೊರಟಳು.

ಬಾಲ್ಯವನ್ನು ಪಕ್ಕಾ ಮಲೆನಾಡಿನ ಮನೆಯಲ್ಲಿ ಕಳೆದಿದ್ದ ಅಮ್ಮ,  ನಾಗಂದಿಗೆ ಮಾಡಿಸಿಕೊಂಡು ಸಂಭ್ರಮಪಟ್ಟಿದ್ದಳು. ಮಲೆನಾಡಿನಲ್ಲಂತೂ ಒಳಮನೆಗಳ ಅವಿಭಾಜ್ಯ ಅಂಗವೇ ಆಗಿಹೋಗಿರುವ ನಾಗಂದಿಗೆ ಇಲ್ಲದಿರುವ ಮನೆಗಳೇ ಅಪರೂಪ. ಮನೆಯ ಹೆಚ್ಚಿನ ಎಲ್ಲ ಕೋಣೆಗಳಲ್ಲೂ ನಾಗಂದಿಗೆ ಇದ್ದೇ ಇರುತ್ತದೆ. ನಾಗಂದಿಗೆಯನ್ನ ಕಚ್ಚಲಿಗೆ ಎಂತಲೂ ಕರೆಯುತ್ತಾರೆ. ನಾಗಂದಿಗೆ ಇರುವ ಜಾಗಕ್ಕೆ ತಕ್ಕ ಹಾಗೆ ಅದಕ್ಕೆ ಪ್ರಾಧಾನ್ಯ. ದೇವರ ಮನೆಯಲ್ಲಿರುವ ಕಚ್ಚಲಿಗೆಯ ಮೇಲೆ ಹಿತ್ತಾಳೆ ಪಾತ್ರೆಗಳು, ದರ್ಭೆ ಕಟ್ಟು, ಆರತಿ ತಟ್ಟೆಗಳಿದ್ದರೆ, ಪಡಸಾಲೆಯ ನಾಗಂದಿಗೆ ಮೇಲೆ ಹಳೆಯ ಪಂಚಾಂಗಗಳಿಗೆ ಜಾಗ. ಗಟ್ಟಿ ಗೋಡೆಗಳಿರುವ ನೆಲ ಅಂತಸ್ತಿನಲ್ಲಿ ಮಜಬೂತು ದಪ್ಪದ ಕಚ್ಚಲಿಗೆಗಳಿದ್ದರೆ, ಮೇಲಿನ ಅಂತಸ್ತುಗಳಲ್ಲಿ ತೆಳು ಮರದ ಹಗೂರ ಹಲಗೆ. ಅಲ್ಲೆಲ್ಲ ನಿಮಗೆ ಕಾಣುವುದು, ಧೂಳು ಹಿಡಿದ ಪ್ರಾಚೀನ ನೆನಪುಗಳನ್ನು ಹೊತ್ತ, ಒಂದು ಕಾಲದಲ್ಲಿ ಯಥಾಸಾಧ್ಯ ಮೆರೆದಿರಬಹುದಾದ ಒಡೆದ ಭರಣಿ, ಸಿದ್ದೆ ಕೊಳಗಗಳು, ಕಿತ್ತು ಹೋದ ಮದುವೆ ಬಾಸಿಂಗಗಳು, ಗಾಜೊಡೆದ ಲಾಟೀನು, ಹಳೇ ಪುಸ್ತಕಗಳು.
ದೇವರಕೋಣೆಗಳಲ್ಲಿನ ನಾಗಂದಿಗೆಗಳನ್ನ, ಹಿಂದೆಲ್ಲ ಆಭರಣಗಳನ್ನ ಇಡಲು ಬಳಸಲಾಗುತ್ತಿತ್ತಂತೆ. ಪವಿತ್ರ ಸ್ಥಳ, ಹೊರಗಿನಿಂದ ಬಂದವರಾರೂ ಕಾಲಿಡಲಾಗದ ಜಾಗ, ಹಾಗಾಗಿ ನಾಗಂದಿಗೆಗಳ ಮೇಲಿನ ಹಿತ್ತಾಳೆ ತಾಮ್ರದ ಪಾತ್ರೆಗಳು, ಆಭರಣವಿಡುವ ಮಂಜೂಷೆಗಳಾಗಿದ್ದವು.

ಇನ್ನು ನೀವು ಇವತ್ತಿಗೂ ಮಲೆನಾಡಿನ ಯಾವುದೇ ಮನೆಯ ಮೊದಲ ಅಂತಸ್ತು ಅಥವಾ ಮೆತ್ತನ್ನ ಹತ್ತಿನೋಡಿ, ಅಲ್ಲಿನ ನಾಗಂದಿಗೆಗಳ ಮೇಲೆ ಒಂದಿಷ್ಟು ಪುಸ್ತಕಗಳು ಇದ್ದೇ ಸಿದ್ದ. ನಾನು ಹೈಸ್ಕೂಲು ಓದುತ್ತಿದ್ದಾಗ ಅಜ್ಜನ ಮನೆಗೆ ಹೋದರೆ, ಪಕ್ಕದ ಮನೆಯ ಸುಬ್ಬಜ್ಜನದೋ, ರಾಜಕ್ಕಯ್ಯನ ಮೆತ್ತಿಯನ್ನು ಹತ್ತಿ ಪ್ರತಿಷ್ಠಾಪನೆಗೊಂಡೆ ಅಂತಲೇ ಅರ್ಥ. ಊಟ ತಿಂಡಿ ಏನೂ ಬೇಡ. ಅಲ್ಲಿರುವ ಮುರುಕು ನಾಗಂದಿಗೆಗಳ ಮೇಲಿನ ಪುಸ್ತಕಗಳಿಂದಲೇ ನಾನು ನನ್ನ ಓದಿನ ಚಟವನ್ನ ಹೆಚ್ಚಿಸಿಕೊಂಡಿದ್ದು. ಬಿ.ವಿ.ಅನಂತರಾಮ್, ಕಾಕೋಳು ರಾಮಯ್ಯ ರಿಂದ ಹಿಡಿದು ಎಸ್.ಎಲ್.ಭೈರಪ್ಪರವರೆಗೂ ಹೆಚ್ಚಿನ ಬರಹಗಾರರ ಗೀಳು ಹಚ್ಚಿಕೊಂಡಿದ್ದು ಸಣ್ಣಗೆ ಬೆಳಕು ಬೀಳುತ್ತಿರುವ, ಕಂಬಳಿ ಹಾಸಿದ ಮೆತ್ತಿನ ಮೇಲಿನ ಕೋಣೆಗಳಲ್ಲೇ. ವಿಚಿತ್ರವೆಂದರೆ ಅಲ್ಲಿ, ಇಡೀ ಮನೆ ತುಂಬಾ ಓಡಾಡಿದರೂ ಒಂದೂ ಪುಸ್ತಕ ಕಾಣದು. ಮನೆಮಂದಿಗ್ಯಾರಿಗೂ ಓದಿನ ಹುಚ್ಚೂ ಹೆಚ್ಚಿಲ್ಲ. ಹುಡುಗು ಪ್ರಾಯದಲ್ಲೋದಿ ಬಿಟ್ಟ ಪುಸ್ತಕಗಳಿಗೆಲ್ಲ, ಮೆತ್ತಿನ ನಾಗಂದಿಗೆಯೇ ಈಗ ಆಶ್ರಯ ತಾಣ.

ಆದರೆ ಅಡುಗೆಮನೆಯಲ್ಲಿರುವ, ಮತ್ತು ಅಡುಗೆಗೆ ಸಂಬಂಧಿಸಿದ ವಸ್ತುಗಳನ್ನ ಹೊತ್ತುಕೊಳ್ಳುವ ನಾಗಂದಿಗೆಯಿದೆಯಲ್ಲ, ಅವು ಉಳಿದೆಲ್ಲವುಗಳ ರಾಜ. ನಾಗಂದಿಗೆಗಳು ಅಪರೂಪದ ಖಾದ್ಯಗಳು, ಕಾದಿರಿಸಬೇಕಾದ ಬೆಲ್ಲ ಉಪ್ಪಿನಕಾಯಿಯಂತಹ ಪದಾರ್ಥಗಳ ಖಜಾನೆ. ಕೈಗೆ ಸಿಕ್ಕಿದರೂ ಸಿಗದಂತಹ ಎತ್ತರದಲ್ಲಿರುವ ನಾಗಂದಿಗೆ ಅಥವಾ ಕಚ್ಚಲಿಗೆ- ಕಚ್ಚು ಹಲಗೆ, ಜತನದಿಂದ ಕಾದಿಟ್ಟುಕೊಳ್ಳಬೇಕಾದ ವಸ್ತುಗಳಿಗೆ ಹೇಳಿ ಮಾಡಿಸಿದ ಜಾಗ. ನೆಲದ ಮೇಲಿಟ್ಟರೆ ಹುಳಿ ಬರುವ ಜೋನಿ ಬೆಲ್ಲ, ನಾಗಂದಿಗೆಯ ಮೇಲಿದ್ದರೆ ವರುಷ ಕಳೆದರೂ ರುಚಿ ಕಳೆದುಕೊಳ್ಳದು. ಇನ್ನು ಮಿಡಿ ಉಪ್ಪಿನಕಾಯಿಯಯನ್ನು ಕಚ್ಚಲಿಗೆಯ ಮೇಲೆ ಇಡದಿದ್ದರೆ ಹೇಗೆ? ಭರಣಿಯ ಕತ್ತಲಲ್ಲಿ ಘಮಗುಡುತ್ತಿರುವ ಅಪ್ಪೆಮಿಡಿಗೆ ನಾಗಂದಿಗೆಯೇ ಆಶ್ರಯತಾಣ. ಊಟಕ್ಕೆ ಕೂತಾಗಲಂತೂ ಉಪ್ಪಿನಕಾಯಿ ಮುಗಿದುಹೋಗಿದೆ, ನಾಗಂದಿಗೆ ಮೇಲಿರೋ ಉಪ್ಪಿನಕಾಯಿ ಇಳಿಸಬೇಕಿತ್ತಲ್ಲ ಎಂದು ಹೆಂಗಸರು ತಿಂಗಳಲ್ಲಿ ಒಮ್ಮೆಯಾದರೂ ಹೇಳುವುದು ಸಂಪ್ರದಾಯ!

ಹಿಂದೆಲ್ಲ ಆರುತಿಂಗಳಿಗೋ ವರ್ಷಕ್ಕೊಮ್ಮೆ ಪೇಟೆಯ ಕಡೆಗೆ ಹೋಗಿ, ದವಸಧಾನ್ಯಗಳನ್ನು ತರುವುದು ವಾಡಿಕೆ. ಒಮ್ಮೆ ಗಾಡಿ ಕಟ್ಟಿ ಹೋಗಿ ಬಂದುಬಿಟ್ಟರೆ, ಮತ್ತೆ ಹೋಗುವುದು ಮಾಸಗಳ ನಂತರ. ಪೇಟೆಯಿಂದ ತಂದ ದೊಡ್ಡ ಗಾತ್ರದ ಗೋಣಿಚೀಲಗಳೆಲ್ಲ ಕೋಣೆ ಸೇರುವ ಮುನ್ನ, ನಾಗಂದಿಗೆ ಮೇಲಿರುವ ಪಾತ್ರೆಗಳಿಗೆ ಕಾಳು ಕಡಿಗಳು ಸೇರುತ್ತಿದ್ದವು. ಹೆಚ್ಚಾಗಿ, ಅಡುಗೆ ಮನೆಗೆ ತಾಗಿಕೊಂಡಿರುವ ಒಳಮನೆಯಲ್ಲೇ ಮುಖ್ಯ ನಾಗಂದಿಗೆ ಇರುವುದು. ದೇವರ ಪೀಠದೆದುರು ಮಿನುಗುವ ಮಿಣುಕು ನಂದಾದೀಪದ ಬೆಳಕು ಬಿಟ್ಟರೆ ಇನ್ಯಾವ ಬೆಳಕೂ ಕೋಣೆಗೆ ಸುಲಭಕ್ಕೆ ನುಗ್ಗಲಾರದು. ಹೀಗಾಗಿ ವರ್ಷವಿಡೀ ನಾಗಂದಿಗೆ ಮೇಲಿರುವ ಡಬ್ಬಗಳಿಗೆ ಬಾಣಂತಿ ಮರ್ಯಾದೆ.

ನಾಗಂದಿಗೆ ಹೆಡ್ಡಾಫೀಸಾದರೆ, ಅಡುಗೆ ಮನೆಯಲ್ಲಿರುವ ಕೈಯಟ್ಟಲು-ಬ್ರಾಂಚು. ನಿತ್ಯವೂ ನಾಗಂದಿಗೆಗಳ ಮೇಲಿರುವ ಯಮತೂಕದ ಡಬ್ಬಿಗಳನ್ನು ಇಳಿಸಲು ಹೆಂಗಸರಿಗೆ ಕಷ್ಟ. ಗಂಡಸರನ್ನ ನಿತ್ಯ ಕರೆದರೆ ಅದೂ ಕಷ್ಟ. ದಿನಾ ಇದೇ ಗೋಳು ಎಂದು ಬೈಸಿಕೊಳ್ಳುವ ಬದಲಿಗೆ ಕೈಯಟ್ಟಲಿನ ಪುಟ್ಟ ಪಾತ್ರೆಗಳಿಗೆ ಒಂದಿಷ್ಟು ದಿನಸಿ ತುಂಬಿಕೊಂಡರೆ ಚಿಂತೆಯಿಲ್ಲ. ಹೀಗಾಗಿ ಅಟ್ಟಲು, ಅಂದರೆ ಅಡುಗೆಗೆ ಬೇಕಾದ ವಸ್ತುಗಳೆಲ್ಲ ನಾಗಂದಿಗೆಯ ಮಿನಿಯೇಚರ್ ವರ್ಶನ್ ನಲ್ಲಿ ಲಭ್ಯವಿರುತ್ತವೆ. ನಾಗಂದಿಗೆಯ ಮಾಯಾಲೋಕದಿಂದ ಸದಾ ವಂಚಿತರಾಗೇ ಇರುವ ಮಕ್ಕಳಿಗೆ, ಕೈಯಟ್ಟಲು ಎಂಬುದು ಸತ್ಯದರ್ಶನವಾಗುವ ಸ್ಥಳ. ಯಾರೋ ಒಬ್ಬ ಪೋರನಿಗೆ ಕಂಡಿದ್ದ ಲಾಡಿನುಂಡೆಯ ಬಿಸ್ಕೀಟು ಡಬ್ಬಿ, ಸತ್ಯವೇ ಹೌದಾಗಿತ್ತು ಎಂದು ಗೊತ್ತಾಗೋದು ಅಮ್ಮ ಕೈಯಟ್ಟಲಿಂದ ತೆಗೆದು ಲಾಡು ಬಡಿಸಿದಾಗಲೇ.

ನಾಗಂದಿಗೆಯಿಂದ ಮಕ್ಕಳನ್ನ ದೂರವಿಡಲು ಮುಖ್ಯ ಕಾರಣ, ಅಲ್ಲಿನ ತೂಕದ ಪಾತ್ರೆ ಡಬ್ಬಗಳು. ಸ್ಟೂಲು ಹತ್ತಿ, ಸರ್ಕಸ್ಸು ಮಾಡಿ ಬೆಲ್ಲದ ಡಬ್ಬವೋ, ತಿಂಡಿಯ ಪಾತ್ರೆಗೋ ಕೈ ಹಾಕಿದ ಮಕ್ಕಳಿಗೆ ಬಡಿಗೆ ಬಿತ್ತೆಂದೇ ಲೆಕ್ಕ. ಏಕೆಂದರೆ ಯಮಭಾರದ ಪಾತ್ರೆಗಳೇನಾದರೂ ಕೆಳಕ್ಕೆ ಬಿದ್ದರೆ, ಅದರ ಕೆಳಗಿದ್ದಾತನ ಕಥೆ ಹರೋಹರ. ಹೀಗಾಗಿ ಮಕ್ಕಳು ನಾಗಂದಿಗೆಯ ಸುದ್ದಿಗೆ ಬರುವ ಹಾಗೇ ಇಲ್ಲ.

ಕರಾವಳಿಯ ಪುಟ್ಟ ಬಾಡಿಗೆ ಮನೆಗಳಲ್ಲಿ ಬಾಲ್ಯ ಕಳೆದ ನನಗೆ ಅಮ್ಮ ಕೇಳಿದ ವಸ್ತು ತೆಕ್ಕೊಡುತ್ತಿದ್ದಳು. ತಿಂಡಿ ಪೊಟ್ಟಣಗಳು ಕೈಗೇ ಸಿಗುತ್ತಿತ್ತು. ಆದರೆ ಬೇಸಿಗೆಯ ರಜದಲ್ಲಿ ಊರಿಗೆ ಹೋದರೆ, ಅಲ್ಲಿನ ಪರಿಸ್ಥಿತಿ ಬೇರೆ ಇರುತ್ತಿತ್ತು. ಕೂಡು ಕುಟುಂಬದಲ್ಲಿ ಜತೆಗೆ ಬೆಳೆಯುತ್ತಿರುವ ನನ್ನ ವಾರಿಗೆಯ ಹುಡುಗರಿಗೆ ನಾಗಂದಿಗೆಯ ಮೇಲಿನ ತಿಂಡಿಯ ಡಬ್ಬ ಗಗನ ಕುಸುಮ. ಸಿಕ್ಕ ಸಿಕ್ಕ ಹಾಗೆಲ್ಲ ಅವು ಸಿಗುವ ಪ್ರಶ್ನೆಯೇ ಇಲ್ಲ. ಅಮ್ಮನೋ ಅಜ್ಜಿಯೋ ತೆಕ್ಕೊಟ್ಟರೆ ಉಂಟು, ಇಲ್ಲದಿದ್ದರೆ ಇಲ್ಲ. ಆದರೆ ಬಾಡಿಗೆ ಮನೆಗಳಿಂದ ಸ್ವಂತ ಮನೆಗೆ ಹೋದಮೇಲೆ, ನಮ್ಮ ಮನೆಯಲ್ಲೂ ನಾಗಂದಿಗೆ ನಿರ್ಮಾಣವಾಯಿತು. ಅದಕ್ಕೆ ದಕ್ಕಬೇಕಾದ ಮರ್ಯಾದೆಯೂ ದಕ್ಕಿತು ಅನ್ನಿ.

ನಾಗಂದಿಗೆ ಮೇಲೆ ಅಮ್ಮ ಏನಾದರೂ ಕ್ಲೀನು ಮಾಡೋಕೆ ಹೋದರೆ ಅಪ್ಪ ಕಡಗ ಸಿಕ್ಕೀತು ನೋಡೇ, ಹುಷಾರು ಅಂತ ಆವಾಗಾವಾಗ ತಮಾಷೆ ಮಾಡುತ್ತಿದ್ದರು. ಒಮ್ಮೆ ಅಪ್ಪನ ಬಳಿ ಏನೀ ಕಡಗ ಸಿಗೋ ವಿಷ್ಯ ಎಂದೆ. ಆಗ ಅಪ್ಪ ಅದರ ಹಿಂದಿನ ಕಥೆಯೊಂದನ್ನ ಹೇಳಿದರು. ಅಪ್ಪನ ಅಜ್ಜನ ಮನೆ ಹೆಗ್ಗಳಮನೆ- ಸಾಗರ ತಾಲೂಕಿನ ಹನ್ನಾರ ಸೀಮೆಗೆ ಆಗಿನ ಕಾಲಕ್ಕೆ ಹೆಸರುವಾಸಿಯಾಗಿದ್ದ ದೊಡ್ಡ ಮನೆಯಂತೆ ಅಂದು. ನೂರಾರು ಅಂಕಣಗಳ ವಿಸ್ತಾರದ್ದು. ಒಂದು ದಿನ ಮನೆಯ ಹೆಂಗಸರು ಯಾರೋ ನಾಗಂದಿಗೆ ಮೇಲಿಂದ ಉಪ್ಪಿನಕಾಯಿ ಭರಣಿಯನ್ನೋ, ಇನ್ನೇನನ್ನೋ ಇಳಿಸಬೇಕಿದ್ದರೆ ಒಂದು ಮಸಿ ಹಿಡಿದ ದಪ್ಪಗಿನ ಕಡಗ ಟಣಾರ್ ಅಂತ ಕೆಳ ಬಿತ್ತು. ಅದೆಷ್ಟು ಕಪ್ಪಗಿತ್ತು ಎಂದರೆ, ಸಣ್ಣಪುಟ್ಟ ತೊಳೆಯುವಿಕೆಗೆಲ್ಲ ಅದರ ನಿಜ ಬಣ್ಣ ತಿಳಿಯಲೇ ಇಲ್ಲ. ಅಕ್ಕಚ್ಚಿನ ಬಾನಿಯಲ್ಲಿ ಎರಡು ದಿನ ಹಾಕಿಟ್ಟಮೇಲೆಯೇ ತಿಳಿದಿದ್ದು, ಅದು ಫಳಫಳ ಹೊಳೆಯುವ ಬಂಗಾರದ ಕಡಗ ಅಂತ! ಯಾರಿಟ್ಟಿದ್ದರೋ ಏನೋ. ಆಮೇಲೆ ಮನೆ ಪಾಲಾಗುವಾಗ ಕಡಗವೂ ಕರಗಿದ್ದು ಮಾತ್ರ ದುರಂತ ಕಥೆ.

ಇತ್ತೀಚಿಗೆ ಗೆಳೆಯನೊಬ್ಬನ ಮನೆಗೆ ಹೋಗಿದ್ದಾಗ, ಸಾಂದರ್ಭಿಕವಾಗಿ ಕಡಗದ ಕಥೆ ಹೇಳಬೇಕಾಗಿ ಬಂತು. ಹೇಳಿದ್ದೇ ತಡ, ಮನೆಯ ಹಿರಿಯರೊಬ್ಬರು ತಮ್ಮಾ ನಾನು ಮೊಬೈಲ್ ಎಲ್ಲಿ ಬಿಟ್ಟಿದ್ದೆ ಅಂತ ಆವಾಗಿಂದ ಹುಡುಕ್ತಾ ಇದಿದ್ದಿ, ನೀನು ವಿಷ್ಯ ಹೇಳಿದ್ದಕ್ಕೆ ಅದನ್ನ ನಾನು ಒಳಗೆ ನಾಗಂದಿಗೆ ಮೇಲ್ ಇಟ್ಟಿದ್ದು ನೆನಪಾತು ನೋಡು ಅಂತಂದು ಎದ್ದು ಹೋದರು. ಕಾಡು ಮಧ್ಯದ ತಗ್ಗಿನಲ್ಲಿರುವ ಮನೆಯಲ್ಲಿ, ನಾಗಂದಿಗೆ ಮೇಲಿಟ್ಟರೆ ಮಾತ್ರ ಹೌದೋ ಅಲ್ಲವೋ ಎಂಬಂತೆ ಸಿಗ್ನಲ್ ಬರುತ್ತದಂತೆ, ಇಲ್ಲದೇ ಹೋದರೆ ನಾಸ್ತಿ. ಅವರೇ ಹೇಳಿದ ಮತ್ತೊಂದು ಸ್ವಾರಸ್ಯ ಎಂದರೆ, ಎಲ್ಲಿಟ್ಟರೂ ಗೊರಗುಟ್ಟುವ ರೇಡಿಯೋ,ನಾಗಂದಿಗೆ ಮೇಲಿಟ್ಟರೆ ಮಾತ್ರ ಸರಿಯಾಗಿ ಕೇಳಿಸುತ್ತದಂತೆ! ಅವರ ಮನೆಯಲ್ಲಿ ಮೊದಲು ಅರವತ್ತರ ದಶಕದಲ್ಲಿ ರೇಡಿಯೋ ತಂದಾಗಲೂ ಅದನ್ನು ನಾಗಂದಿಗೆಯ ಮೇಲೇ ಇಟ್ಟಿದ್ದರಂತೆ, ಮಕ್ಕಳ ಕೈಗೆ ಸಿಗಬಾರದು ಅಂತ. ಈಗ ಉದ್ದೇಶ ಬದಲಾಗಿದೆ, ಆದರೆ ರೇಡಿಯೋ ನಾಗಂದಿಗೆಯ ಮೇಲೇ ಇದೆ ಅಂತ ನಕ್ಕರು.

ಅಲ್ಲಿನ ನಾಗಂದಿಗೆ, ಇದ್ದಲ್ಲಿಂದಲೇ ಎಷ್ಟೆಲ್ಲ ಬದಲಾವಣೆಗಳನ್ನು ನೋಡಿರಬಹುದು ಎಂದು ಊಹಿಸಿಕೊಂಡು ಸೋಜಿಗಪಟ್ಟೆ ನಾನು. ಹಿರಿಯರು ಮುಂದುವರಿಸಿ, ಮಗ ಮನೆ ರಿನೋವೇಷನ್ ಮಾಡಬೇಕು ಅಂತಿದ್ದಾನೆ, ಅಲ್ಲಿಯವರೆಗಷ್ಟೇ ರೇಡಿಯೋಗೆ ಅಲ್ಲಿ ಜಾಗ, ಆಮೇಲೆ ಅಲ್ಲಿ ಅದೆಂತದೋ ವಾರ್ಡ್ ರೋಬ್ ಬರುತ್ತದೆ ಅಂತಿದಾನೆ, ರೇಡಿಯೋ ಜೊತೆಗೆ ನಾಗಂದಿಗೆನೂ ರಿಟೈರು ಅಂದರು.

ನಾಗಂದಿಗೆ ಎಲ್ಲ ಭಾರಗಳನ್ನ ಹೊತ್ತು ನಿಂತಿತ್ತು. ಅದಕ್ಕೆ ಪಲ್ಲಟದ ಪರಿವೆಯಿರಲಿಲ್ಲ.