ಮಂಗಳವಾರ, ಸೆಪ್ಟೆಂಬರ್ 19, 2006

ಸಾವೊಂದರ ಕುರಿತು...

ಸಂಜೆ ತಂಗಿಗೆ ಫೋನಿಸಿದ್ದೆ,ಆಫೀಸಿನಲ್ಲಿ ಬೋರ್ ಹೊಡೀತಾ ಇತ್ತು..ಅದೂ ಇದೂ ಕೊರೆದ ಮೇಲೆ ಅವಳೊಂದು ಘಟನೆ ಹೇಳಿದಳು,ಅದನ್ನ ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ.
ಇವತ್ತು ಬೆಳಗ್ಗೆ ಕಾಲೇಜಿಗೆ ಹೊರಟ ತಂಗಿ ಶ್ರೀಕಲಾ ಗೆ,ಬಸ್ಸಲ್ಲಿ ಪರಿಚಿತರೊಬ್ಬರು ಸಿಕ್ಕರು. ದಿನಾ ಕಾಣುವ ಮುಖ,ಉಭಯಕುಶಲೋಪರಿಯ ಮಾತಿನಂತೆ, "ಹೇಗಿದ್ದೀರಿ, ಮನೇಲೆಲ್ಲಾ ಆರಾಮ" ಅಂದಿದ್ದಕ್ಕೆ, "ಹಮ್, ಎಲ್ಲಾ ಆರಾಮ, ನನ್ನ ತಂದೆ ನಿನ್ನೆ ತೀರಿಕೊಂಡರು " ಅಂತ ತಣ್ಣಗೆ ಉತ್ತರ ಬಂತು! ಇವಳಿಗೆ ಎದೆ ಧಸಕ್ ಅಂತು! ನಿನ್ನೆ ತಾನೆ ತಂದೆಯನ್ನ ಕಳೆದುಕೊಂಡ ಆಸಾಮಿ ಹೇಗಿರಬೇಕಿತ್ತು! ಆತ ಎಂದಿನಂತೆ ಕೈಲೊಂದು ವಿಜಯ ಕರ್ನಾಟಕ ಹಿಡಿದುಕೊಂಡು ಆರಾಮಾಗೆ ಕೂತಿದ್ದರು, ಮುಖದ ಮೇಲೆ ನೋವಿನ ಸಣ್ಣ ಗೆರೆಯೂ ಇಲ್ಲದೆ."ಹೇಗೆ?" ಅಂದಿದ್ದಕ್ಕೆ, "ಲೊ ಬಿ.ಪಿ, ನಾಲ್ಕು ದಿನ ಆಸ್ಪತ್ರೆಲಿ ಇದ್ರು, ನಿನ್ನೆ... " ಅಂತಂದು,ಪೇಪರಿನ ಅರ್ಧ ಓದಿ ಮುಗಿದ ಲೇಖನದೊಳಗೆ ಮುಳುಗಿದರು.
ಸ್ವಲ್ಪ ಹೊತ್ತಿನ ನಂತರ ಮಾಮೂಲಿನಂತೆ ಮಾತಿಗೆ ತೊಡಗಿ ಇವಳ ಓದು,ಅಪ್ಪ-ಅಮ್ಮ,ಮನೆ,ದನ-ಕರು ಇತ್ಯಾದಿ ಸಕಲ ಚರಾಚರ ವಸ್ತು ವಿಷಯಗಳ ಬಗ್ಗೆ ವಿಚಾರಿಸಿದರು!ಈಕೆಗೋ ತಲೆಯ ತುಂಬ ಅವರ ತಂದೆಯ ಸಾವೇ ನರ್ತಿಸುತ್ತಿದೆ!ಆ ಮನುಷ್ಯನೋ,ತೀರಿದ್ದು ಯಾರೋ ಏನೋ ಎಂಬಂತೆ ಸುಮ್ಮಗಿದ್ದಾರೆ! ಬಸ್ಸಿಳಿದು ಕಾಲೇಜಿಗೆ ಹೋಗಿ, ಎಕ್ಸಾಮು ಹಾಲಿನಲ್ಲಿ ಕೂತರೂ ಇದೇ ಯೊಚನೆ ಕಾಡುತ್ತಿತ್ತಂತೆ!
ಅದೂ ಅವರು ಸತ್ತಿದ್ದು ಹಿಂದಿನ ದಿನವಷ್ಟೆ.ಈ ಭಾವನೆ,ನಗರದ ಮಧ್ಯ ವಾಸಿಸುವ ಯಾವನೋ ದುಡ್ಡೇ ದೇವರು ಅಂತ ಬದುಕುವ ವ್ಯಕ್ತಿಯದಾಗಿದ್ದರೆ,ಇಷ್ಟೊಂದು ಆಲೋಚನೆ ಮಾಡುತ್ತಿರಲಿಲ್ಲವೇನೋ ಅವಳು.ಮಧ್ಯಮ ವರ್ಗದ , ಹಳ್ಳಿಯಲ್ಲಿ ಬದುಕುವ ವ್ಯಕ್ತಿಯೊಬ್ಬ ಸಾವನ್ನ ಅಷ್ಟು ಸುಲಭವಾಗಿ ಸ್ವೀಕರಿಸಿ ಸರಳವಾಗಿ ಇರುವುದನ್ನ ತಂಗಿ ನೋಡಿಲ್ಲ. ನಾಲ್ಕಾರು ದಿನ ಶೋಕಾಚರಣೆ,ಅಪರ ಕರ್ಮಗಳು ಇತ್ಯಾದಿಗಳು ಪ್ರತಿ ಮನೆಯಲ್ಲೂ ನಡೆಯಲೇ ಬೇಕಾದವು.ಹತ್ತು- ಹದಿನೈದು ದಿನ ಆಚೀಚಿನ ಮನೆಯವರು ಸಹಿತ ಅದೇ ಗುಂಗಿನಲ್ಲಿರುತ್ತಾರೆ.ಅವರು ಕೂಡ ಏನೂ ಸಂತಸದ ಕಾರ್ಯಗಳನ್ನ ನಡೆಸದೆ,ನಿಧನರಾದವರ ಮನೆಯ ದು:ಖದಲ್ಲಿ ಪಾಲ್ಗೊಳ್ಳುವುದು, ಅಲಿಖಿತ ನಿಯಮ.
ಯಾಕಾಗಿ ಆ ಮನುಷ್ಯ ಅಷ್ಟು ಆರಾಮಾಗಿದ್ದಿರಬಹುದು?, ತಂದೆಯ ಸಾವು ಮೊದಲೇ ಖಚಿತವಾಗಿ,ಸಾವಿನ ನೋವಿಗೆ ಮೊದಲೆ ಸಿಧ್ಧವಾಗಿದ್ದನೆ?ಅಪ್ಪ -ಮಗನ ನಡುವಿನ ಸಂಬಂಧ ಹಳಸಿತ್ತೆ?, ಎದೆಲ್ಲಿರುವ ದು:ಖದ ಕೊಳ ಇನ್ನು ಒಡೆದಿರಲಿಲ್ಲವೆ?, ಅಥವಾ, ಮೊಗದ ಮೇಲೆ ನಿರ್ಲಿಪ್ತತೆಯ ಲೇಪವಿತ್ತೆ? ತಮ್ಮ ನೋವನ್ನ "marketing" ಮಾಡಿ "symapathy" ಪಡೆಯಲು ಹಂಬಲಿಸುವವರಿರುವ ಈ ಕಾಲದಲ್ಲಿ,ಈತ ಭಿನ್ನವಾಗಿ ಯೋಚಿಸುವವನೆ?!

ಏನೋ ತಿಳಿಯುತ್ತಿಲ್ಲ, ಆತನ ಮುಖದ ಗೆರೆಗಳನ್ನ ಅರ್ಥ ಮಾಡಿಕೊಳ್ಳಲು ನಾನು ಅಲ್ಲಿರಲಿಲ್ಲ.

2 ಕಾಮೆಂಟ್‌ಗಳು:

bhadra ಹೇಳಿದರು...

ಆ ಮನುಷ್ಯ ಯಾರೋ ಸ್ಥಿತ ಪ್ರಜ್ಞ ಇರಬೇಕು ಎನ್ನಿಸುತ್ತದೆ. ಎತ್ತಿ ಆಡಿಸಿದ ತಂದೆಯ ಬಗ್ಗೆ ಹತ್ತು ಹದಿನೈದು ದಿನಗಳಾದರೂ ಸಂತಾಪ ಇರೋದಿಲ್ವೇ? ಅಥವಾ ಕಟುಕನಾದ ತಂದೆಯಾಗಿದ್ದರೇ?

ಮಾನವ ಸಂಬಂಧ ಹೀಗೂ ಇರುವುದೇ? (ನನ್ನ ತಲೆಯೊಳಗೊಂದು ಹುಳು ಬಿಟ್ಬಿಟ್ರಿ)

ಶ್ರೀನಿಧಿ.ಡಿ.ಎಸ್ ಹೇಳಿದರು...

ನನಗೂ ಹುಳ ಕೊರೀತಾ ಇತ್ತು, ಅದ್ಕೆ ಇಲ್ಲಿ ಬರೆದು, ಸ್ವಲ್ಪ ಸಮಾಧಾನ ಮಡ್ಕೊಂಡೆ!