ಮಂಗಳವಾರ, ಫೆಬ್ರವರಿ 13, 2007

ಈ ಪ್ರೀತಿ ಒಂಥರಾ. . .




ಪ್ರೀತಿ.. ಈ ಪದವೇ ಒಂದು ಸಮ್ಮೋಹಿನಿ, ಅಲ್ವಾ?! ಜಗತ್ತಲ್ಲಿ ಪ್ರಾಯಶ: ಅತ್ಯಂತ ಹೆಚ್ಚು ಚರ್ಚೆಗೊಳಗಾಗುವ, ಮತ್ತು ಇಷ್ಟೊಂದು ಚರ್ಚೆ ಮಾಡಿದ್ರೂ ಯಾರಿಗೂ ಸರಿಯಾಗಿ ಅರ್ಥ ಆಗದ ವಿಷ್ಯ ಅಂದ್ರೆ ಈ ಪ್ರೇಮ ನೋಡ್ರಿ! ಪ್ರತಿ ಒಬ್ಬರ ಬಳಿಯೂ, ಒಂದೊಂದು ತೆರನಾದ ಅಭಿಪ್ರಾಯ ಇದೆ, ಪ್ರೀತಿ,ಪ್ರೇಮದ ಬಗ್ಗೆ. ನಾನು ಏನು ಹೇಳ್ತೀನೋ, ಅದರ ಸಂಪೂರ್ಣ ವಿರುದ್ಧ ಇರಬಹುದು, ನಿಮ್ಮ ಕೋನ. ಪ್ರೀತಿ ಅನ್ನುವ ಈ ಚೇತೋಹಾರಿ ಭಾವ ಇದೆಯಲ್ಲ, ಇದು ಎಲ್ಲರ ಹೃದಯದಲ್ಲೂ ದೀಪ ಬೆಳಗಲೂ ಬಹುದು, ಅಥವ ಕಿಚ್ಚು ಹತ್ತಿಸಲೂಬಹುದು. ಅವರವರ ಭಾವಕ್ಕೆ, ಅವರವರ ಭಕುತಿಗೆ!...

ಬದುಕಿನ ಹಾದಿಯಲ್ಲಿ ಎಲ್ಲರೂ ಒಮ್ಮೆಯಾದರೂ ಪ್ರೀತಿಯ ಸಾಂಗತ್ಯವನ್ನ ಬಯಸಿರುತ್ತಾರೆ, ಬಯಸುತ್ತಾರೆ, ಎಂತವರೇ ಆಗಲಿ.. ಬಾಳ ಪಯಣದ ಪ್ರಯಾಣದಲ್ಲಿ ಸ್ನೇಹಿತರೆಂಬ ಪಯಣಿಗರು ಇದ್ದರೂ, ಕೊನೆ ತನಕ ಜೊತೆ ನೀಡುವ ಸಂಗಾತಿ ಇರಬೇಕೆಂಬ ಆಸೆ ತಪ್ಪಲ್ಲ, ಅಲ್ಲವೇ? ನಮ್ಮ ಏಳು ಬೀಳುಗಳಲ್ಲಿ ಪ್ರೀತಿ ಪಾತ್ರರು ಜೊತೆಗಿದ್ದಾಗ ಆಗುವ ಸಂತಸವೇ ಬೇರೆಯ ತೆರನಾದ್ದು. ಪ್ರೇಮಿಸೋ ಜೀವ, ಬೆನ್ನ ಮೇಲೊಮ್ಮೆ ಕೈಯಿಟ್ಟು ಹಣೆಗೊಂದು ಹೂ ಮುತ್ತು ಕೊಟ್ಟರೆ, ಅದಕ್ಕಿಂತ ಬೇರೆಯ ಸಾಂತ್ವನ ಬೇಕೆ?!


ಪ್ರೀತಿ ಅಂದರೆ ಮನಸುಗಳ ಮಿಲನ. ಪ್ರೀತಿ ಬಿಡದೆ ಕಾಡುವ ಮಗುವಿನ ಹಾಗೆ. ಪ್ರೇಮದ ಕಾರಂಜಿಯ ನೀರು ಎಂದಿಗೂ ಚಿಮ್ಮುತ್ತಲೇ ಇರುತ್ತದೆ. ಪ್ರೇಮಕ್ಕೆ ಯಾವುದೇ ರೂಪವಿಲ್ಲ, ಅದು ನೀರಿನ ಹಾಗೆ. ಹಾಕಿದ ಪಾತ್ರೆಯ ರೂಪವನ್ನೇ ಪಡೆಯುತ್ತದೆ ! ಪ್ರೀತಿ ಆಕಸ್ಮಿಕ, ಕ್ಷಣ ಮಾತ್ರದ ದೃಷ್ಟಿ ಮಿಲನ, ಜೀವನದ ಗತಿಯನ್ನೇ ಬದಲು ಮಾಡಿಬಿಡಬಹುದು!. ಪ್ರೀತಿ ಪರಿಶುದ್ಧ, ದಟ್ಟ ಕಾಡಿನ ಹಸಿರು ಗಿಡದ ಮೇಲಿನ ಇಬ್ಬನಿಯ ಹಾಗೆ.

ಪ್ರೀತಿ ಸೋನೆಮಳೆಯ ಹಾಗೆ, ಬಿಡದೆ ಸುರಿಯುತ್ತಲೇ ಇರಬೇಕು ತುಂತುರು ತುಂತುರಾಗಿ. ದಿನಗಳ ಒಳಗೆ ಪ್ರೀತಿಯನ್ನ ಬಂಧಿಸೋದಕ್ಕಿಂತಾ ದೊಡ್ಡ ಮೂರ್ಖತನ ಬೇರೊಂದಿದೆಯಾ?!ದಿನಾ ಪ್ರೀತಿ ಮಾಡ್ರೀ! ಸುಮ್ ಸುಮ್ನೆ ಯಾಕೆ ಅದ್ಕೆ ಒಂದು ದಿನ ಅಂತ ಇಟ್ಕೊಂಡು ಆಚರಣೆ ಮಾಡಿ ಅದರ ಪವಿತ್ರತೆನ ಹಾಳ್ ಮಾಡ್ತೀರ?! ಪಾಪಾ, ಈ ವಿದೇಶಿಗರಿಗೆ ಯಾವಾಗ ನೋಡಿದ್ರೂ ಸಿಕ್ಕಾಪಟ್ಟೆ ಕೆಲ್ಸ! ಅವರಿಗೆ , ಎಲ್ಲದಕ್ಕೂ ಒಂದು ದಿನ ಬೇಕು. ಅಪ್ಪಂದ್ರ ದಿನ, ಅಮ್ಮಂದ್ರ ದಿನ, ಅಜ್ಜಂದ್ರ ದಿನ .. ಹೀಗೇ! ಪ್ರೀತಿಗೂ ಒಂದು ದಿನವನ್ನ ನಿಗದಿ ಪದಿಸಿ ಬಿಟ್ಟಿದಾರೆ ಅದಕ್ಕಾಗೇನೆ. ಏನ್ ಮಾಡ್ತೀರಾ ಹೇಳಿ! ನಾವೂ ಅದ್ನ ಹಾಗೆ ಶಿರಸಾ ವಹಿ ಪಾಲಸ್ತಾ ಬಂದ್ ಬಿಟ್ಟಿದೀವಿ.

ಪ್ರೇಮಿಗಳ ದಿನದ ತನ್ನ ಅರ್ಥನೇ ಕಳದ್ಕೋತಾ ಇದೆ ಈಗ. ಪ್ರೀತಿನ ವ್ಯಕ್ತ ವಡಿಸುವ ದುಬಾರಿ ವಿಧಾನಗಳಿಗೆ ಎಡೆ ಮಾಡಿ ಕೊಟ್ಟಿದೆ ಈ ಆಚರಣೆ. ಹೆಚ್ಚು ಬೆಲೆ ಬಾಳುವ ಕಾಣಿಕೆ ಕೊಡುವಾತ ನಿಜವಾದ ಪ್ರೇಮಿ! ನಾಲ್ಕು ಜನರೆದುರು, ಐ ಲವ್ ಯೂ ಅಂತ ಕಿರಿಚೋನು ಬಹಳ ಗಟ್ಟಿಗ!.. ಪ್ರೇಮವನ್ನ ಹೊರ ಪ್ರಪಂಚಕ್ಕೆ ತೋರಿಸಿಕೊಂಡು ಮಾಡೂವುದು ಒಂದು ಫ್ಯಾಷನ್ನಾಗಿ ಬಿಟ್ಟಿದೆ. ರೇಡಿಯೋ ಚಾನಲ್ಲುಗಳಲ್ಲಿ , ಟಿ.ವಿಗಳಲ್ಲಿ "ಇಂತವಳನ್ನ ಇಷ್ಟಿಷ್ಟು ವರ್ಷಗಳಿಂದ ಹೀಗೀಗೆ ಪ್ರೇಮಿಸುತ್ತಿದ್ದೇನೆ" ಅಂತ ಹೇಳಿಕೊಳ್ಳೋದು ದೊಡ್ದ ಸಾಧನೆ!

ಪ್ರೀತಿಯೂ ಕೂಡಾ ಈ ವ್ಯಾಪಾರೀ ಯುಗದಲ್ಲಿ ಹಣ ಗಳಿಸುವ ಮಾಧ್ಯಮ ಆಗಿಬಿಟ್ಟಿದೆ. ಬೆಸ್ಟ್ ಕಪಲ್ಸದೂ ಇದೂ ಅಂತ ಸ್ಪರ್ಧೆಗಳು ಶುರು ಆಗಿರುತ್ತವೆ, ಈಗಾಗಲೇ! ನಿಜಕ್ಕೂ ಪ್ರೀತಿ ಮಾಡೋರಿಗೆ ಇದೆಲ್ಲದರ ಅವಶ್ಯಕತೆ ಇದೆಯಾ?! ನಿಮ್ಮ ಒಲುಮೆಯ ಜೀವ ನಿಮಗೆ ಬೆಸ್ಟ್ ಆಗಿದ್ದರೆ ಸಾಕು, ಅದನ್ನ ಜಗತ್ತಿಗೆ ತಿಳಿಸುವ ತೋರಿಕೆ ಏಕೆ ಬೇಕು?.. ಪ್ರೀತಿಯನ್ನ ಹೊರ ಜಗತ್ತಿಗೆ ತೆರೆದಿಟ್ಟಷ್ಟೂ, ಅದರ ಬೆಲೆ ಕಡಿಮೆ ಆಗುತ್ತ ಹೋಗುತ್ತದೆ, ಅಲ್ಲವೆ? ನಮ್ಮ ಸೆಲೆಬ್ರಿಟಿಗಳು ಪ್ರೀತೀನ ಮಾಧ್ಯಮಗಳ ಬಾಯಿಗೆ ಬೇಕಂತಲೇ ಕೊಟ್ಟು ಸುಮ್ಮಗೆ ಕೂರುತ್ತಾರೆ!.

ಪ್ರೇಮಿಗಳ ದಿನ ತನ್ನ ಮೂಲ ನೆಲೆಯಿಂದ ಹೊರ ಬಂದು ಏನೇನೋ ಆಗಿ ಬಹು ಕಾಲವೇ ಆಗಿ ಬಿಟ್ಟಿದೆ! ಫಾದರ್ ವ್ಯಾಲಂಟೈನ್ ಯಾರಿಗೂ ನೆನಪಿಲ್ಲ ಈಗ. ಆತನ ತ್ಯಾಗ ಎಲ್ಲೋ ಮಾಯವಾಗೇ ಹೋಗಿದೆ. ಆತನ ಮಾತುಗಳು ಅರ್ಥ ಕಳೆದುಕೊಂದು ಬಿಟ್ಟಿವೆ, ಹೆಸರು ಮಾತ್ರಾ ಹಾಗೇ ಉಳಿದಿದೆ!.

ಹಮ್, ಈಗ ಇನ್ನು ನಾನು ಹೀಗೆಲ್ಲ ಹೇಳೋದ್ರಿಂದ, ಆಚರಣೆ ಏನ್ ಕಡ್ಮೆ ಆಗಲ್ಲ, ನಿಂತೂ ಹೋಗಲ್ಲ.. ಸುಮ್ ಸುಮ್ನೆ ಬುದ್ಧಿ ಹೇಳೋದ್ ಯಾಕೆ?..

ಆದ್ರೆ, ಪ್ರೇಮಿಗಳಾ ದಿನಾನ , ಸ್ವಲ್ಪ ಅರ್ಥಪೂರ್ಣವಾಗಿ ಆಚರಣೆ ಮಾಡೋಕೆ ನೋಡಿ. ದುಬಾರಿ ಗಿಫ್ಟುಗಳನ್ನೆಲ್ಲಾ ಕೊಡಲೇ ಬೇಕಾ? ಪ್ರೀತ್ಸೋ ಹೃದಯಕ್ಕೆ ಲಂಚ ಬೇಕಾಗಲ್ಲ ಅಂತ ಅನ್ಸತ್ತೆ! ಅರ್ಚೀಸು ಗ್ಯಾಲರಿಯ ಬೆಲೆಬಾಳುವ ಗ್ರೀಟಿಂಗ್ ಕಾರ್ಡಿಗಿಂತಾ, ಒಂದು ಪುಟ್ಟ ನವಿಲುಗರಿ ಮನಸ್ಸನ್ನ ಅರಳಿಸಬಲ್ಲದು, ಯಾವುದೋ ಪಬ್‌ನಲ್ಲಿ ಕುಣಿಯುವುದಕ್ಕಿಂತಾ, ಮರದ ನೆರಳಿನ ಕೆಳಗಿನ ಪಿಸುಮಾತು ಪ್ರೀತಿಪಾತ್ರರನ್ನ ಅರ್ಥ ಮಾಡಿಕೊಳ್ಳಲು ಸಹಕರಿಸಬಹುದು. ನರಸಿಂಹ ಸ್ವಾಮಿಯವರ ಗೀತೆಗಳದೋ, ಲಕ್ಷ್ಮಣರಾಯರ ಪ್ರೇಮ ಕವಿತೆಗಳ ಸಿ.ಡಿ ಯೋ, ದುಬಾರಿ ಶಾಪಿಂಗುಗಳಿಗಿಂತ ಬೆಲೆಬಾಳಬಹುದು! ಪ್ರೀತಿ ಬಗ್ಗೆ ಯಾರಾದ್ರೂ ಬರ್ದಿರೋ ಸೊಗಸಾದ ಪುಸ್ತಕ ಕೊಟ್ಟು ನೋಡಿ, ಅದು ನೀವು ಕೊಡೋ ಸುಗಂಧ ದ್ರವ್ಯಗಳಿಗಿಂತ ಹೆಚ್ಚು ಕಾಲ ಇರುತ್ತದೆ!

ಈ ಪ್ರೇಮದ ದಿನದ ಸಂಜೆ ನಿಮ್ಮ ನಲುಮೆಯ ಜೀವದ ಜೊತೆ, ಭುಜ ಆನಿಸಿ ಸುಮ್ಮನೆ ಕುಳಿತು ಮೌನದಲ್ಲೇ ಮಾತಾಡಿ. ನಿಮ್ಮ ಪ್ರೀತಿಯ ಜೀವ, ಬಾಳ ಮುಸ್ಸಂಜೆಯವರೆಗೂ ನಿಮ್ಮ ಜೊತೆ ಹೀಗೇ ಪಕ್ಕದಲ್ಲೇ ಇರಲಿ ಅಂತ ಆಶಿಸುತ್ತೇನೆ. . .





6 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಅಮ್ಮ..........
ಸಕ್ಕತ್ತಾಗಿ ಬರೆದಿರುವೆ.....
ತು೦ಬ ಚೆನ್ನಾಗಿದೆ..

ಅನಾಮಧೇಯ ಹೇಳಿದರು...

Very Meaningfull....... why dont u write a article about "RadhaKrishna"...... dont u think their love is immortal which people will remember & cherish for ever.

Anveshi ಹೇಳಿದರು...

ಪ್ರೇಮಿಗಳ ದಿನದ ಸಂಭ್ರಮದ ಆಚರಣೆ ಸಂದರ್ಭ ಹಣ, ಗಿಫ್ಟು, ಪಾರ್ಟಿ, ಕುಣಿತ ಎಂಬಿತ್ಯಾದಿಗಳಲ್ಲಿ ಪ್ರೀತಿ ಪ್ರೇಮ ಕೊಚ್ಚಿ ಹೋಗಿದ್ದು ಸತ್ಯ. ಅದನ್ನು ಅನ್ವೇಷಿಸುವುದಾದರೂ ಎಲ್ಲಿ?:(

ಎಷ್ಟು ಹುಡುಕಾಡಿದ್ರೂ ಸಿಕ್ತಾ ಇಲ್ವಲ್ಲ...ಸತ್ಯವನ್ನೇ ಹೆಕ್ಕಿ ಹೆಕ್ಕಿ ಬರ್ದಿದ್ದೀರಿ.

ರಾಧಾಕೃಷ್ಣ ಆನೆಗುಂಡಿ. ಹೇಳಿದರು...

ಈ ಪ್ರೀತಿ ಒಂಥರಾ ಕಚಗುಳಿ....

ಖಂಡಿತಾ ನಮ್ಮತನವೇ ಕಳೆದುಕೊಳ್ಳುತ್ತಿರುವ ದಿನದಲ್ಲಿ ಪ್ರೀತಿ ಉಳಿದುಕೊಳ್ಳುವುದಾದರೂ ಹೇಗೆ.

ಪ್ರೀತಿಯನ್ನೂ ಸಾಕುವಿದಕ್ಕೆ ಒಂದು ಕಲೆ ಇದೆ ಅಲ್ವಾ
ರಾಧಾ ಆನೆಗುಂಡಿ
http://radhakanasupreethi.blogspot.com

VENU VINOD ಹೇಳಿದರು...

Shreenidhiyavare,

nimma putadalli EnO doSHa irabeku. kEvla dots mAtra kaNuTTide

ಅನಾಮಧೇಯ ಹೇಳಿದರು...

ಹು ಶ್ರೀ ಈ ಪ್ರೀತಿ ಒಂಥರಾ ಕಚಗುಳಿನೆ.
ಪ್ರೇಮಿಗಳ ದಿನ ಆಗಿ ತುಂಬಾ ದಿನಾ ಆಗಿ ಹೋತು.
ಅವತ್ತು ನಮ್ಮ ಹಾಸ್ಟೆಲ್ ಹುಡುಗೀಯರ ಸಂಬ್ರಮ ನೋಡಕಾಗಿತ್ತು.ಹೊಸ ಹೊಸ ಡ್ರೆಸ್ ಹಕ್ಕೆಂಡು ಹೆಂಗೆ ಹೋಕ್ತಿದ್ದ ಅಂದ್ರೆ ನೋಡಕೆ ಎರೆಡು ಕಣ್ಣು ಸಾಕಗಿತ್ತಿಲ್ಲೆ. ನಂಗೆ ಅನ್ನಿಸ್ತು ಇವರ ಸಂಬ್ರಮ ಯಾಕೆ ಇ ಒಂದು ದಿನಕ್ಕೆ ಮಾತ್ರ ಮೀಸಲು ಇಟ್ಟಿದ್ದ? ಆ ಸಂಬ್ರಮನಾ ಯಾಕೆ ಅವರು ವರ್ಷದ ಎಲ್ಲಾ ದಿನಗಳಲ್ಲು ಆಚರಿಸಕೆ ಆಗದಿಲ್ಲೆ? ಉತ್ತರ ಗೊತ್ತಿಲ್ಲೆ. ಅನುಭವ ಸಾಲದು.