ಶುಕ್ರವಾರ, ಮೇ 11, 2007

ಯಾರದೋ ಅಜ್ಜ ಅಜ್ಜಿಗೆ ಹುಷಾರಿಲ್ಲದಿರುವುದೂ, ನಮಗೆ ಪ್ರಾಣ ಸಂಕಟವೂ!

ಮತ್ತೆ ಯಥಾ ಪ್ರಕಾರ ಇದು ಕಾರಣಗಳ ಬಗ್ಗೆ ಬರೆಯುತ್ತಿರುವ ಬರಹ.:)

ಈ ಅಜ್ಜ ಅಜ್ಜಿಗೆ ಹುಶಾರಿಲ್ಲದ ನೆವಗಳನ್ನ ಮನುಷ್ಯ ಜಾತಿಯವರು ಬಳಸುವ ಬಗ್ಗೆ ನಾನೂ ಬಹಳ ಓದಿದ್ದೆ, ನಕ್ಕೂ ಇದ್ದೆ. ನನ್ ಮಗಂದು ನನ್ ಕಾಲ್ ಬುಡಕ್ಕೇ ಇದು ಬರತ್ತೆ ಅಂತ ನಂಗೇನ್ ಗೊತ್ತಿತ್ತು?! ಈ HR ಕೆಲ್ಸ ಶುರು ಮಾಡಿದ್ ಮೇಲಂತೂ ತರಹೇವಾರಿ ಕಾರಣಗಳನ್ನ ಕೇಳಿ ಕೇಳಿ ಸಾಕಾಗಿ ಹೋಗಿ, ಜ್ವರ, ತಲೆನೋವು, ಆಕ್ಸಿಡೆಂಟಾಗುವುದು ಎಂಬ ಜನ ಸಾಮಾನ್ಯರಿಗೆ ವಿಶೇಷ ಅರ್ಥ ಹೊಂದಿರುವ ಪದಗಳೆಲ್ಲ ನನ್ನ ನಿಘಂಟಿನಲ್ಲಿ ಅರ್ಥ ಕಳೆದುಕೊಂಡಿವೆ.

ಆಕ್ಸಿಡೆಂಟ್ ಬಗ್ಗೆ ಬರೆದಿದ್ದೆನಲ್ಲ, ಅದು ಕಾರಣ ನಂಬರ್ ಒಂದಾದರೆ, ಈ ಅಜ್ಜ ಅಜ್ಜಿಯರನ್ನ ಸಾಯಿಸುವುದು ಮತ್ತು ಹಾಸಿಗೆ ಹಿಡಿಸುವುದಕ್ಕೆ ಎರಡನೇ ಸ್ಥಾನ, ನಮ್ಮ HR ಪ್ರಪಂಚದಲ್ಲಿ. ಹೇಗೆ ಈ ಪ್ರಹಸನ ನಡೆಯುತ್ತದೆ ಅನ್ನುವುದು ನಿಮ್ಮ ಅವಗಾಹನೆಗೆ.

ಒಬ್ಬ ಮಹಾಶಯ ಸಂದರ್ಶನಕ್ಕೆ ಹಾಜರಾಗುತ್ತಾನೆ, ಪರವಾಗಿಲ್ಲ ಈ ಪುಣ್ಯಾತ್ಮ ಅಂತ ಈ ಟೆಕ್ನಿಕಲ್ ಪ್ಯಾನಲ್ ನಿರ್ಧರಿಸಿದ ಮೇಲೆ ನಾವು HR ಗಳು ಹಳ್ಳಕ್ಕೆ ಬಿದ್ದು, ಅವನಿಗೆ ಆಫರು ಲೆಟರು ಕೊಡುತ್ತೇವೆ. "ನೋಡಪ್ಪಾ ನಿನಗೆ ನಾವು ಕೆಲಸ ಕೊಡುವಾ ಅಂತ ಮಾಡಿದ್ದೇವೆ, ಇಷ್ಟಿಷ್ಟು ಸಂಬಳ ಕೊಡುವ ವಿಚಾರ ಇದೆ, ಹೇಗೆ ನಿಂಗೆ ಆಗಬಹುದೋ?, ಯಾವಾಗ ಸೇರ್ತೀಯಾ ಕೆಲಸಕ್ಕೆ" ಇತ್ಯಾದಿ ಮಣ್ಣಾಂಗಟ್ಟಿ ವಿಷ್ಯಗಳು ಅವನಿಗೆ ಕೊಡೋ ಲೆಟರೊಳಗಿರುತ್ತದೆ.

ಮೂರು ನಾಲ್ಕು ಸುತ್ತು ಇಂಟರ್ವ್ಯೂ ಮುಗಿವುವ ೧೫ ದಿನಗಳ ವರೆಗೆ ಈ ಮನುಷ್ಯ ಅತ್ಯಂತ ವಿಧೇಯ. ದಿನಕ್ಕೆರಡು ಫೋನು, ಗುಡ್ ಮಾರ್ನಿಂಗು ವಿಷ್ ಮೈಲು, ಆಹಾ! . ಈ ಯಡವಟ್ಟು ರಿಕ್ವೈರುಮೆಂಟುಗಳಿಗೆ ಜನ ಹುಡುಕೋದೆ ಕಷ್ಟ, ನಮಗೂ ಖುಶಿಯೇ, ಇವನೊಬ್ಬ ಸೇರುತ್ತಾನಲ್ಲ ಕಂಪನೀನ ಅಂತ. ಆದರೇನು ಮಾಡುತ್ತೀರಿ?, ಆಫರು ಲೆಟರು ಸಿಕ್ಕಿದ ಮಾರನೇ ದಿನವೇ ಗಿರಾಕಿ ನಾಟ್ ರೀಚೆಬಲ್! ನಾವು ದಿನಾ ಹೊತ್ತಿಂದ ಹೊತ್ತಿಗೆ ಅವನ ಫೋನೊಳಗೆ ಹಿಡಿಯಲು ಒದ್ದಾಡಿ ಸಾಯಬೇಕು. ಅಂತೂ ಒಂದು ದಿನ ಫೋನಿಗೆ ಸಿಗುತ್ತದೆ ಪ್ರಾಣಿ.

ನಾವು ಮಾತಾಡುವ ಮೊದಲೇ ಬರುತ್ತದೆ ಉತ್ತರ.
"sorry sir, my grand pa is not well you know?" ನಮಗೆ ಹೇಗೆ ಗೊತ್ತಿರಬೇಕು?!

"its ok, when can join Mr... "

"ಇಲ್ಲ ಸಾರ್ ನಂಗೆ ಈಗಲೇ ಹೇಳೋಕೆ ಆಗಲ್ಲ, ನಮ್ಮಜ್ಜನ ಪರಿಸ್ಥಿತಿ criticalಉ, ಹೇಳೋಕೆ ಆಗಲ್ಲ, ಇವತ್ತು ನಾಳೇ ಅನ್ನೋ ಹಾಗಿದೆ, ನಾನೊಬ್ಬನೇ ಮೊಮ್ಮಗ you know?"

ಅಲ್ಲಿಗೆ ಅವನ ಹಣೆಬರಹ ತಿಳಿದಂತೆ. ನಿಜವಾಗಿ ಏನಾಗಿರತ್ತೆ ಅಂತೀರಾ?
ಆ ಪುಣ್ಯಾತ್ಮ ನಮ್ಮ ಕಂಪನಿಯ ಆಫರು ಲೆಟರು ಹಿಡಕೊಂಡು ಮತ್ತೆ ಒಂದು ಇಪ್ಪತ್ತು ಇಂಟರ್ವ್ಯೂ ಅಟೆಂಡು ಮಾಡಿ,
"ನೋಡಿ ನಂಗೆ ಇವರು ಇಷ್ಟು ಕೊಡುತ್ತಾರಂತೆ ಸಂಬಳಾನ, ನೀವೆಷ್ಟು ಕೊಡುತ್ತೀರಿ ಅಂತ ಚೌಕಾಸಿ ಶುರು ಮಾಡಿರುತ್ತಾನೆ. ಎಲ್ಲೋ ಕೆಲಸವೂ ಗಿಟ್ಟಿರುತ್ತದೆ.

ಮತ್ತೆ ವಾರವೋ, ಹದಿನೈದು ದಿನವೋ ಬಿಟ್ಟು ಫೋನ್ ಮಾಡಿ ನೋಡಿದರೆ,
" i am not interested in your offer, already join " ......." ಕಂಪನಿ you know? "ಅನ್ನುತ್ತಾನೆ!

ನಾವು ಮತ್ತೆ ಹೊಸದಾಗಿ ಕುರಿಯಾಗಲು ಇನ್ಯಾರಿಗಾರೂ ಫೋನು ಮಾಡುತ್ತೇವೆ.

8 ಕಾಮೆಂಟ್‌ಗಳು:

Harsha Bhat ಹೇಳಿದರು...

serabekadre hingella nataka aadabekagatte saar. Ondu sarti join aadre namma juttu avara kainalli. Appraisals nayige hako biscuit tara iratte. Neenu iste bogalideeya adakke iste biscuit antare. adakke modale cahowkasi madodralli enu tappilla

ವಿ.ರಾ.ಹೆ. ಹೇಳಿದರು...

ಚೆನಾಗೇ ಬರ್ದಿದಿಯಾ.. ಆದ್ರೆ ವಿಷ್ಯ ಹೇಳ್ತಿನಿ ಕೇಳು, ಒಂದು ಕಂಪನಿ ಸೇರ್ಕಂಬೇಕಾದ್ರೆ ಎಲ್ಲಾ ನೋಡಿ ಸೇರ್ಕಬೇಕಾಗತ್ತೆ. ನೀವು ಆಫರ್ ಲೆಟರ್ ಕೊಟ್ರಿ ಅಂತ ಎಲ್ಲಿದ್ರೂ ಓಡಿ ಬಂದು ನಿಮ್ಮತ್ರ ಸೇರ್ಕಂಡ್ಬಿಡಕಾಗಲ್ಲ. ನಾವು ಏನೇನೋ ಎಲ್ಲಾ ನೋಡಿ, ವಿಶ್ಲೇಷಣೆ ಮಾಡಿ ಸೇರ್ಕಬೇಕು. ಇಲ್ಲಾಂದ್ರೆ ಆಮೇಲೆ ಅನುಭವಿಸೋರು ನಾವೇ ತಾನೆ. ನಿಮಗೇನು ಕುರಿಗಳನ್ನ ಹಿಡಿದು ಸೇರಿಸಿ ಬಿಡ್ತೀರಾ. ಆಮೇಲೆ ಕೆಲ್ಸ ಮಾಡೋರು ನಾವ್ ತಾನೆ.:-). ನೀವು ಹೆಂಗೆ 'ರೈಟ್ ಕ್ಯಾಂಡಿಡೇಟ್' ಹುಡುಕ್ತೀರೋ ಹಂಗೇ ನಾವು ನಮಗೆ 'ರೈಟ್ ಕಂಪನಿ' ಹುಡುಕ್ತೀವಿ. ಅದಕ್ಕೆ ನೀವು ಮಾಡೋ ಸಂದರ್ಶನ, ಕೋಡೋ ಆಫರ್ ಲೆಟರ್ರು, ಅಜ್ಜ ಅಜ್ಜಿ, ಡಾಕ್ಟ್ರು ಎಲ್ಲಾದರ ಸಹಾಯ ತಗೋತಿವಿ ಅಷ್ಟೆ :-). ಸೇರ್ಬೇಕಾದ್ರೆ ಚೌಕಾಸಿ ಮಾಡ್ಕತಿವಿ....

ಆದ್ರೂ ಏನ್ ಮಾಡಕ್ಕಾಗಲ್ಲ, ನಿಮ್ ಕೆಲ್ಸನೇ ಅದು... ನಮ್ ಕೆಲ್ಸನೇ ಇದು.... ಅದೇನೋ ಗಾದೇ ಹೇಳ್ತಾರಲ್ಲ... ಇರುವೆಗೆ ಇರುವೆ ಮೈ ಭಾರ,ಆನೆಗೆ ಆನೆ ಮೈ ಭಾರ .... ಹಂಗಷ್ಟೆ ಈ ಕಥೆ.

Shiv ಹೇಳಿದರು...

ಶ್ರೀನಿಧಿ,
ಚೆನ್ನಾಗಿದೀರೀ ನಿಮ್ಮ HR ಕತೆಗಳು :)

Annapoorna Daithota ಹೇಳಿದರು...

ಹ್‍ಮ್...... ಹೀಗಿದೆ ಕಥೆ !!
ವರ್ಷಗಟ್ಲೆ ಒಂದೇ ಕಂಪೆನಿಲಿ ಕೆಲ್ಸ ಮಾಡೋ ನನ್ನಂಥಾ ಅಲ್ಪತೃಪ್ತರಿಗೆ ಇದೆಲ್ಲಾ ಗೊತ್ತಿಲ್ಲ ಬಿಡಿ.... :)

ಅನಾಮಧೇಯ ಹೇಳಿದರು...

HR galu enu kammi illa yamirisoke....chennagi bakra madbiditira..CTC..anta ondu amount torisi,jothe ge variable pay..adu idu halu moolu ella heli...konege take home salary 60% iralla

ಶ್ರೀನಿಧಿ.ಡಿ.ಎಸ್ ಹೇಳಿದರು...

ಹರ್ಷ,

ಯಾಕೋ ಭಯಂಕರ ಗರಂ ಆಗಿ ಕಾಮೆಂಟು ಮಾಡಿದಂಗಿದೆ?!:) ನೀವು ಹೇಳೋದೂ ಸರಿನಪ್ಪಾ, ನಾವು ನನ್ನ ಆಂಗಲ್ ನಿಂದಾ ಹೇಳ್ದೆ ಅಷ್ಟೆ!:)

ವಿಕಾಸ,

ಇರುವೆಗೆ ಇರುವೆ ಮೈ ಭಾರ,ಆನೆಗೆ ಆನೆ ಮೈ ಭಾರ- ಹೌದೇ ಹೌದು ನೋಡು!!

ಶಿವ್,
ಥ್ಯಾಂಕ್ಸು ಕಣ್ರಿ!

ಅನ್ನಪೂರ್ಣ,
ಅದ್ಕೇ ಹೇಳೋದು ಪದೇ ಪದೇ ಕಂಪ್ನಿ ಚೇಂಗ್ ಮಾಡ್ತಾ ಇರ್ಬೇಕು ಅಂತ! ಹೇಳದ್ರೆ ಕೇಳಲ್ಲ ನೀವು.

Anonymous,
ವಿಕಾಸ್ ಅವರ ಕಾಮೆಂತನ್ನು ನೋಡಬೇಕಾಗಿ ವಿನಂತಿ- ಆನೆಗೆ ಆನೆಯ... :)

Parisarapremi ಹೇಳಿದರು...

ನನಗೆ ಇನ್ನೂ ನಾಟಕ ಆಡುವ ಸಂದರ್ಭ ಒದಗಿಲ್ಲ. ಅತಿ ಶೀಘ್ರದಲ್ಲೇ ಒದಗುತ್ತೇನೋ ಎಂಬ ಆತಂಕ..

[ವಿಕಾಸ್ ಹೆಗ್ಡೆ ಮತ್ತು ಶ್ರೀನಿಧಿ] ಗಾದೆಯನ್ನು ಸ್ವಲ್ಪ ಬದಲಿಸಿರೋ ಹಾಗಿದೆಯಲ್ಲಾ??? ;-)

Sandeepa ಹೇಳಿದರು...

ತಾನು ಸಂದರ್ಶನಕ್ಕೆ ಹೋದ ಎಲ್ಲಾ ಕಂಪನಿಯವರೂ ನನ್ನನ್ನು ಕೆಲಸಕ್ಕೆ ಆಹ್ವಾನಿಸಬೇಕೆಂದು ಒಬ್ಬ ಅಭ್ಯರ್ಥಿ ನಿರೀಕ್ಷಿಸುವುದು ಎಷ್ಟು ಅರ್ಥಹೀನವೋ, ತಮ್ಮಿಂದ offer letter ಪಡೆದವರೆಲ್ಲ ಕೆಲಸಕ್ಕೆ ಸೇರುತ್ತಾರೆಂದು ಕಂಪನಿಯವರು ಅಂದುಕೊಳ್ಳುವುದು ಅಷ್ಟೇ ಮೂರ್ಖತನ.