ಗುರುವಾರ, ಮೇ 17, 2007

ಮರುಳು ಮಾಡುವವರು.. .

(ಹಳೆಯ ಬರಹ, ಬ್ಲಾಗಿಗೆ ಹಾಕಲು ಮರೆತು ಹೋಗಿತ್ತು. ದಟ್ಸ್ ಕನ್ನಡದಲ್ಲಿ ತಿಂಗಳ ಹಿಂದೆ ಪ್ರಕಟವಾಗಿತ್ತು.)

ಮೂರ್ನಾಲ್ಕು ವರ್ಷಗಳ ಹಿಂದೆ ನಡೆದ ಕಥೆ. ನಾನು ನಮ್ಮ ಪಕ್ಕದ ಮನೆ ಶಂಕರ ಭಟ್ಟರ ಜೊತೆಗೆ ಎಲ್ಲಿಗೋ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಸತ್ಯನಾರಾಯಣ ಕತೆಯೋ ಯಾವುದೋ ಒಂದು. ಮಾಡೋಕೆ ಏನೂ ಕೆಲಸವಿಲ್ಲದೆ, ಅಲ್ಲೊಂದು ಕಟ್ಟೆಯ ಮೇಲೆ ಕೂತು ಹಳೇ ಪೇಪರ್ ಚೂರನ್ನ ಓದುತ್ತಿದ್ದೆ. ಅಷ್ಟರಲ್ಲಿ ಆ ಪುಣ್ಯ್ಯಾತ್ಮ ಬಂದ ಅಲ್ಲಿಗೆ.

"ಏನು ಹೆಸರು?" - ಶ್ರೀನಿಧಿ.
"ಏನು ಮಾಡ್ತಾ ಇದ್ದೀಯಾ?"- ಪೇಪರ್ ಓದುತ್ತಿದ್ದೇನೆ.
"ಈ ಸಣ್ಣ ಚೀಟೀನಾ"- ಹುಂ.

ನನಗವರ ಬಳಿ ಮಾತಾಡಲು ಇಷ್ಟವಿರಲಿಲ್ಲ. ಆ ವ್ಯಕ್ತಿ ಸುತ್ತ ಮುತ್ತಲ ಊರಿನಲ್ಲಿ,ಊರಿನ ಪೋಲೀಸ್ ಸ್ಟೇಷನಿನಲ್ಲಿ "ದೊಡ್ಡ ಮಾಂತ್ರಿಕ" ಅಂತ ಹೆಸರಾದವ್ರು. ನನಗೆ ಅಂತವರನ್ನ ಕಂಡರೆ ಮೊದಲೇ ಆಗದು, ಈಗ ನೋಡಿದರೆ ಪಕ್ಕಕ್ಕೇ ವಕ್ಕರಿಸಿದ್ದಾನೆ.
"ಎಲ್ಲಿ ಓದೋದು"- ಕಾಲೇಜಲ್ಲಿ.
"ಅಪ್ಪ ಏನ್ ಮಾಡ್ತಾರೆ"- ನಿಮಗ್ಯಾಕೆ?
"ದೊಡ್ದವ್ರ ಬಳಿ ಹೀಂಗೆ ಮಾತಾಡ್ಬಾರ್ದು, ನಾನ್ಯಾರು ಅಂತ ಗೊತ್ತಾ?"- ಗೊತ್ತು.
"ಆದ್ರೂ ಹೀಂಗೆ ಮಾತಾಡ್ತೀಯಾ?"- ಹೌದು.

ಒಮ್ಮೆ ಹೋದರೆ ಸಾಕಿತ್ತು, ಆದರೆ ಅವನಿಗೆ ಹೊತ್ತು ಹೋಗುತ್ತಿರಲಿಲ್ಲ ಅಂತ ಕಾಣುತ್ತದೆ. "ನಿನ್ನ ವಾಚಿರುವ ಕೈಯನ್ನು ನನ್ನ ಎದುರಿಗೆ ಹಿಡಿ, ನನ್ನ ಶಕ್ತಿ ಏನು ಅಂತ ತೋರಿಸ್ತೇನೆ ನಿಂಗೆ"ಸುಮ್ಮನೇ ಕೈ ಮುಂದೆ ಹಿಡಿದೆ."ನನ್ನ ಕಣ್ಣನ್ನೇ ನೋಡು"ಅಸಹ್ಯ, ಇನ್ನೇನು ಕಳಚಿ ಕೆಳಗೆ ಬೀಳುವ ತರ ಇದೆ, ಕಣ್ಣುಗಳು..ನನ್ನ ವಾಚಿನ ಮೇಲೆ ತನ್ನ ಬಲ ಕೈಯನ್ನು ಹಿಡಿದು ಹೇಳಿದ,"ನಿನ್ನ ವಾಚಿನ ಸಮಯವನ್ನು ಸ್ತಂಭಿಸುತ್ತೇನೆ ನಾನೀಗ, ನೋಡ್ತಾ ಇರು"ನಾನೇನು ಮಾತಾಡಲಿಲ್ಲ, ಸುಮ್ನೆ ನೋಡ್ತಾ ಕೂತೆ.ಎರಡು ನಿಮಿಷ ಗೊಣ ಗೊಣ ಗೊಣ ಅಂತ ಮಂತ್ರ ಪಠಣ ಆಯ್ತು.

"ಈಗ ನೋಡು, ನಿನ್ನ ಗಡಿಯಾರ ನಡೆಯುವುದನ್ನ ನಿಲ್ಲಿಸಿದೆ!" ಅಂತಂದು ಕೈ ತೆಗೆದರು.ಗಡಿಯಾರಕ್ಕೆ ಏನೆಂದರೆ ಏನೂ ಆಗಿರಲಿಲ್ಲ! ತನ್ನ ಪಾಡಿಗೆ ತಾನು ನಡೆಯುತ್ತಿತ್ತು! ಟಿಕ್ ಟಿಕ್ ಟಿಕ್... ಅವನನ್ನ ನೋಡಿ ನಕ್ಕೆ, ಮುಖ ಭಂಗ ಆಯಿತೇನೋ, ತಡಿ ಒಂದು ನಿಮಿಷ, ಮತ್ತೊಮ್ಮೆ ಹಿಡಿ ಅಂದ."ಒಂದು ನಿಮಿಷ ಅಲ್ಲಾ, ದಿನಾ ಇಡಿ ಕಾವು ಕೊಟ್ಟರೂ ನನ್ನ ಗಡಿಯಾರ ತಿರುಗುವುದನ್ನ ನಿಲ್ಲಿಸಲ್ಲ, ಯಾಕೆಂದರೆ, ನಿಮ್ಮ ಕೈಲಿರೋ ಉಂಗುರದ ಅಯಸ್ಕಾಂತದ ಬಲದಿಂದ , ತಿರುಗೋದನ್ನ ನಿಲ್ಲಿಸೋಕೆ ಇದರೊಳಗಿರೋದು ಕಬ್ಬಿಣದ ಮುಳ್ಳಲ್ಲ! ಪ್ಲಾಸ್ಟಿಕ್ಕಿದ್ದು" ಅಂತಂದು, ಅಲ್ಲಿಂದೆದ್ದು ಬಂದೆ.

ಸ್ವಲ್ಪ ದೂರ ಹೋಗಿ ಹಿಂದೆ ನೋಡಿದರೆ ಮತ್ಯಾರ ಬಳಿಯೋ "ನಿನ್ನ ವಾಚು ಹಿಡಿ" ಅನ್ನುತ್ತಿದ್ದ... ನನಗೆ ವಾಕರಿಕೆ ಬರುವಂತಾಯಿತು.

ಅದೇ ವ್ಯಕ್ತಿಯನ್ನ ಮತ್ತೊಮ್ಮೆ ನೋಡುವ- ಆತನ ಅತಿರೇಕಗಳನ್ನ ಗಮನಿಸುವ ಅವಕಾಶ ಸಿಕ್ಕಿತು ವರುಷದ ನಂತರ. ನಮ್ಮ ಊರಲ್ಲಿ ನಾಗಮಂಡಲ. ಲಕ್ಷಗಟ್ಟಲೆ ಖರ್ಚು ಮಾಡಿ ನಾಗಗಳನ್ನ ಸಂಪ್ರೀತಿ (?) ಮಾಡುವ ಕಾರ್ಯಕ್ರಮ. ಅಲ್ಲಿನ ಪೂಜಾವರ್ಗದ ಅರ್ಚಕರೊಬ್ಬರ ಬಳಿ ಇದ್ದ ೫೦,೦೦೦ ರೂಪಾಯಿಗಳನ್ನ ಆ ಗಡಿಬಿಡಿ ಗೊಂದಲದಲ್ಲಿ ಯಾರೋ ಕದ್ದಿದ್ದರು. ಊರ ಹಿರಿಯರಾದ ಈ ಮಹಾನುಭಾವರೂ ಅಲ್ಲಿಯೇ ಇದ್ದರು. ವಿಷಯ ಗೊತ್ತಾಗಿ ಬಂದು ಆ ಅಳುತ್ತಿದ್ದ ಅರ್ಚಕರಿಗೆ ಸಮಾಧಾನ ಮಾಡಿ, ಎಲ್ಲಿ, ಒಂದು ತೆಂಗಿನಕಾಯಿ ಕೊಡಿ ಅಂದರು. ನೆರೆದ ಜನರೆಲ್ಲ ಭಕ್ತಿ ಭಾವದಿಂದ, ಕಣ್ಬಿಟ್ಟುಕೊಂಡು ನೋಡುತ್ತಿದ್ದರು. ತೆಂಗಿನ ಕಾಯಿ ಕೈಯಲ್ಲಿ ಹಿಡಿದು, ಸುತ್ತೆಲ್ಲ ದುರುಗುಟ್ಟಿ ನೋಡಿ - ಮಂತ್ರ ಪಠಣ.

ಗಂಭೀರ ಮುಖಮುದ್ರೆ ಹೊತ್ತು, ಆ ತೆಂಗಿನ ಕಾಯನ್ನ ಅಲ್ಲೆ ಒಂದು ನಾಗನ ಕಲ್ಲಿನ ಬಳಿ ಇಟ್ಟು,ಹಮ್, ದುಡ್ಡು ಕದ್ದವನು ಇಲ್ಲೇ ಇದ್ದಾನೆ, ಇನ್ನು ಗಂಟೆಯೊಳಗಾಗಿ ಅದನ್ನ ತಂದಿಡದಿದ್ದರೆ, ರಕ್ತ ಕಾರಿ ಸಾಯುವುದು ಖಂಡಿತಾ ಅಂತ ಘೋಷಿಸಿದ.ಜನರೆಲ್ಲ ಇನ್ನೇನು ದುಡ್ಡು ಯಾರಾದರೋ ತಂದಿಟ್ಟು ಕಾಲಿಗೆ ಬೀಳುತ್ತಾರೋ ಅನ್ನುವ ಕುತೂಹಲದಲ್ಲಿ ನೋಡುತ್ತಿದ್ದರು. ಉಹೂಂ , ಯಾರೂ ಬರಲಿಲ್ಲ! ಗಂಟೆ, ೨ ಗಂಟೆ.. ಯಾರೂ ರಕ್ತ ಕಕ್ಕಲೂ ಇಲ್ಲ!ಮತ್ತೆ ಅಲ್ಲಿಗೆ ಬಂದ ಆತ, ಚಿಂತಿಸಬೇಡಿ, ನಿಮ್ಮ ದುಡ್ಡು ನಿಮಗೆ ಸಿಗುತ್ತದೆ. ಆತ ರಕ್ತ ಕಾರಿ ಸಾಯುವುದಂತೂ ಖಂಡಿತ ಅಂತಂದು ಅಲ್ಲಿಂದ ಜಾಗ ಖಾಲಿ ಮಾಡಿದ!

ನನಗೆ ತಿಳಿದ ಹಾಗೆ ಮುಂದೊಂದಷ್ಟು ದಿನ ಯಾವ ಪೇಪರಿನಲ್ಲೂ ಯಾರೂ ರಕ್ತ ಕಾರಿ ಸತ್ತಿದ್ದು ಬರಲಿಲ್ಲ, ಭಟ್ಟರಿಗೆ ದುಡ್ಡು ಸಿಗಲೂ ಇಲ್ಲ! ಯಾರಿಗೂ ಈ ಘಟನೆಯ ನೆನಪೂ ಇಲ್ಲ!

ಇವತ್ತು ಆ ಪುಣ್ಯಾತ್ಮನ ಮಗ, ದೊಡ್ಡ ಮದುವೆ ನಡೆಸಿ ಬಂದಿದ್ದಾರೆ, ಮುಂಬಯಿಯಲ್ಲಿ. ಅವರು ಇದೇ ತೆರನಾದ ವ್ಯವಹಾರಗಳನ್ನ ಸ್ವಲ್ಪ ಮೇಲ್ದರ್ಜೆಯಲ್ಲಿ ಮಾಡುತ್ತಾರೆ.ಸಿನಿಮಾ ನಟರು, ಬ್ಯುಸಿನೆಸ್ ಕುಳಗಳು ಇವರ ಲೆವೆಲ್ಲಿಗೆ. ಅಪ್ಪ ಊರಲ್ಲಿ ರಾಜಕಾರಣಿಗಳ ಹೋಮ ಹವನ ನಡೆಸುತ್ತಾ, ಪತ್ರಿಕೆಗಳಿಗೆ ಜ್ಯೋತಿಷ್ಯದ ಅಂಕಣ ಬರೆಯುತ್ತಾ ಹಾಯಾಗಿದ್ದಾರೆ. ಊರ ಜನ ಅವರನ್ನ ಅದೇ ಭಯ ಮಿಶ್ರಿತ ಭಾವದಿಂದ ನೋಡುತ್ತಾರೆ.

ನಮ್ಮಲ್ಲಿ ಏನೂ ಬದಲಾಗುವುದಿಲ್ಲ, ಯಾವತ್ತಿಗೂ! ಅಂತನಿಸುತ್ತದೆ ನನಗೆ.

9 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಅನಾಮಧೇಯ ಹೇಳಿದರು...

ಶ್ರೀನಿಧಿಯವರೆ,
ನಿಜ ಜನ ಯಾವತ್ತು ಬದಲಾಗೊಲ್ಲ. ಈ ಹಳ್ಳಿಗಳಿಗಿಂತ ಈ ಪೇಟೆ ಜನಕ್ಕೆ ಇದರ ಖಯಾಲಿ ಜಾಸ್ತಿ ಅಂಟಿದ್ದು. ಮಾಟ ಮಂತ್ರ ಇವುಗಳಿಗೆ ಇಲ್ಲಿಯವರೆ ಬೇಗ ಮರುಳಾಗ್ತ.
ಹೇಳಬೇಕಾಗಿದ್ದನ್ನ ಉದಾಹರಣೆ ಯೊಂದಿಗೆ ಚನ್ನಾಗಿ ಹೇಳಿದ್ದಿ.

ವಿ.ರಾ.ಹೆ. ಹೇಳಿದರು...

live and lovely experience ಚೆನ್ನಾಗಿ ಹೇಳಿದಿಯ.

ಸ್ವಂತ ಬುದ್ಧಿ ಇಲ್ಲದೇ ಮರುಳಾಗೋ ಜನ ಇರೋ ತನಕ ಇಂಥ ವಂಚಕರು ಮೆರಿತಾನೆ ಇರ್ತಾರೆ.

ಇಂಥ ವಂಚಕರು ಮಾಡೋ ಮಂಗಾಟದಿಂದ ನಮ್ಮ ಅನೇಕ ಪುರಾತನ ಅದ್ಭುತ, ನಿಗೂಢ ವಿದ್ಯೆಗಳೂ ಕೂಡ ಗೇಲಿಗೊಳಗಾಗ್ತಾ ಇರೋದು ಖೇದಕರ.

ಅನಾಮಧೇಯ ಹೇಳಿದರು...

really...these things hurt deeply.
ನಮ್ಮ ತಂದೆ ಕೂಡ ಇಂತಹ ಅನುಭವಗಳನ್ನು ಹೇಳಿದ್ದರು.
but I belive...Things will change ನೀವು ಆ ಮಂತ್ರವಾದಿಯ ಮುಖಕ್ಕೆ ಮಂಗಳಾರತಿ ಎತ್ತಿದ ಹಂಗೆ ಮುಂದೆ ಎಲ್ಲರೂ ಮಾಡುತ್ತಾರೆ.

ಶ್ರೀನಿಧಿ.ಡಿ.ಎಸ್ ಹೇಳಿದರು...

ರಂಜನಾ,
ಹೌದು, ನೀ ಹೇಳಿದ್ದು ಸತ್ಯ. ಬೇಜಾರಾಗ್ತು ಅವರ ಮೌಢ್ಯ ನೋಡಿ.

ವಿಕಾಸ,
valid point! ಈ ಹುಚ್ಚಾಟಗಳಿಂದ ಬೇರೆ ಸತ್ಯದ ನೆಲೆಗಟ್ಟಿರುವ ವಿದ್ಯೆಗಳೂ ಬೆಲೆ ಕಳೆದುಕೊಳ್ಳುತ್ತಿವೆ.

ಮಲ್ನಾಡ್ ಹುಡ್ಗಿ,
ನೋಡೋಣ, ಆ ದಿನಗಳು ಬರಲಿ ಅಂತ ಹಾರಯಿಸೋನ.

Parisarapremi ಹೇಳಿದರು...

ಅಲ್ಲಾ, ವಾಚು ನಿಲ್ಲಿಸಿದ್ದನ್ನೇ ದೊಡ್ಡ ಸಾಧನೆಯೆಂದರೆ ರೈಲನ್ನೇ ಮಾಯ ಮಾಡಿದ ಪಿ.ಸಿ.ಸರ್ಕಾರನ ಶಕ್ತಿ ಇನ್ನೆಂಥದ್ದು? ಇರುವ ವಿದ್ಯೆಯನ್ನು ಹೇಗೆ ಬಳಸಿಕೊಳ್ಳುತ್ತೇವೋ ಅದು ಮುಖ್ಯ.. ಅದೇ ಟ್ರಿಕ್ಕುಗಳನ್ನು ಸ್ಟೇಜಿನ ಮೇಲೆ ಮಾಡಿ ಮಕ್ಕಳ ಮನರಂಜನೆ ಮಾಡಿದರೆ ಅದರ ಪುಣ್ಯ ಆದರೂ ಸಿಕ್ಕೀತು ಆತನಿಗೆ.. ಇಂಥಾ ಜನಕ್ಕೊಂದು ಧಿಕ್ಕಾರ!!

ಶ್ರೀನಿಧಿ.ಡಿ.ಎಸ್ ಹೇಳಿದರು...

ಅರುಣ್,
"ಇರುವ ವಿದ್ಯೆಯನ್ನು ಹೇಗೆ ಬಳಸಿಕೊಳ್ಳುತ್ತೇವೋ ಅದು ಮುಖ್ಯ" ಒಳ್ಳೆ ಮಾತು. ಸುಮ್ಮನೆ ತಮಗೆ ತಿಳಿದಿರುವ cheap tricksಗಳನ್ನ ಬಡಪಾಯಿಗಳನ್ನ ಮರುಳು ಮಾಡೋಕೆ ಬಳಸಿಕೊಳ್ಳುವುದನ್ನ ನೋಡಿದಾಗ ಮೈ ಉರಿಯುತ್ತದೆ.

ಅನಾಮಧೇಯ ಹೇಳಿದರು...

"ಮರುಳು ಮಾಡುವವರು.. ." ಇದರಲ್ಲಿ ಒಂದು ವೈಜಾನಿಕಕತೆಯ ಬಿಂಬ ಚೆನ್ನಗಿ ಮೂದಿ ಬಂದಿದೆ!

ಮೂಡನಂಬಿಕೆಯ ಜನರ ಕಂದಿಸಿಉವದರ ಜೊತೆಗೆ, ಕಂಡಿಸುವ ಹಿಂಜರಿಯಬ್ಡಿ ಅನ್ನೋ ಒಂದು ಯೋಚನೆ ಮಾತಲ್ಲಿ ಇಟ್ಟಿದ್ದಿರ?
ಬಹಳ ಅದನ್ನೆ ನಾನು ಇದರಲ್ಲಿ ಮೆಚ್ಚಿದ್ದು!!

ಹಚ್ಚೆವು ವೈಜಾನಿಕ ಯೊಚನೆಯ ಲಹರಿ ಜೀವನಕೆ ಬೇಕು ಇಂತ ಮಾತುಗಳ ಪಹರಿ!!

ಅನಾಮಧೇಯ ಹೇಳಿದರು...

"ಮರುಳು ಮಾಡುವವರು.. ." ಇದರಲ್ಲಿ ಒಂದು ವೈಜಾನಿಕಕತೆಯ ಬಿಂಬ ಚೆನ್ನಾಗಿ ಮೂಡಿ ಬಂದಿದೆ!

ಮೂಡನಂಬಿಕೆಯ ಜನರ ಖಂಡಿಸುವದರ ಜೊತೆಗೆ, ಖಂಡಿಸುವ ಹಿಂಜರಿಯಬಾರದು ಅನ್ನೋ ಒಂದು ಯೋಚನೆ ಮಾತಲ್ಲಿ ಇಟ್ಟೀದ್ದಿರ? ಅದು ನನಗೆ ಇದರಲ್ಲಿ ಮೆಚ್ಚಿಗೆಯಾಯ್ತು!!

ಹಚ್ಚೇವು ವೈಜಾನಿಕ ಯೊಚನೆಯ ಲಹರಿ ಜೀವನಕೆ ಬೇಕು ಇಂತ ಮಾತುಗಳ ಪಹರಿ!!