ಶುಕ್ರವಾರ, ಫೆಬ್ರವರಿ 01, 2008

ಒಂದು ಬೆಳಕಿನ ಕಥೆ.

ನಡೆದ ಘಟನೆಯೊಂದರ ಬರಹ ರೂಪ...

ಐದಾರು ಜನ ಗೆಳೆಯರು, ಭದ್ರಾವತಿಗೆ ಹೋಗಿದ್ದರು. ಸ್ನೇಹಿತನೊಬ್ಬನ ಮದುವೆಯ ಸಲುವಾಗಿ. ವಾಪಾಸು ಬರುತ್ತಾ ಬೆಂಗಳೂರಿಗೆ ರೈಲು ಪ್ರಯಾಣ. ಬೀರೂರು ಜಂಕ್ಷನಿನಲ್ಲಿ ಯಾವುದೂ ವೇಗದೂತಕ್ಕೆ ದಾರಿ ಬಿಟ್ಟುಕೊಡುವ ಸಲುವಾಗಿ ಇವರಿದ್ದ ರೈಲು ನಿಂತಿತು. ಐದತ್ತು ನಿಮಿಷಗಳಾದರೂ ರೈಲು ಬರದ್ದನ್ನು ಕಂಡು ಇವರ ಠೋಳಿ ಮೆಲ್ಲನೆ ಕೆಳಗಿಳಿಯಿತು. ಸ್ವಲ್ಪ ಹೊತ್ತು ಅತ್ತಿತ್ತ ತಿರುಗಾಡಿಯಾಯಿತು. ಏನು ಮಾಡಲೂ ತೋಚುತ್ತಿರಲಿಲ್ಲ. ಅಷ್ಟರಲ್ಲಿ ಗುಂಪಿನಲ್ಲಿನ ಒಬ್ಬಾತನಿಗೆ ಪ್ಲಾಟ್ ಫಾರಂನ ಕೊನೆಯಲ್ಲಿ, ಸ್ವಲ್ಪ ದೂರದಲ್ಲಿ ನೇರಳೆ ಮರವೊಂದು ಕಂಡಿತು. ಮರು ಮಾತಿಲ್ಲದೇ ಎಲ್ಲರೂ ಅತ್ತ ಹೊರಟರು.

ಆ ಮರ ರೈಲ್ವೇ ಸ್ಟೇಶನ್ನಿಗೆ ಒತ್ತಿಕೊಂಡಂತ್ತಿದ್ದ ಮನೆಯೊಂದರ ಬೇಲಿಯೊಳಗಿತ್ತು. ಆ ಮನೆಯೆದುರೇ ಹದಿನೈದು - ಹದಿನಾರರ ವಯಸ್ಸಿನ ಹುಡುಗಿಯೊಬ್ಬಳು ಹರಕು ಟೇಬಲೊಂದರ ಮೇಲೆ, ಗಾಜಿನ ಡಬ್ಬವೊಂದರಲ್ಲಿ ನೇರಳೆ ಹಣ್ಣುಗಳನ್ನು ಇಟ್ಟುಕೊಂಡು ಕೂತಿದ್ದಳು. ಪಕ್ಕದಲ್ಲೊಂದು ಅಳೆಯುವ ಪುಟ್ಟ ಡಬ್ಬ. ಇವರು ಹೋಗಿ ನೇರಳೆ ಹಣ್ಣು ಬೇಕು ಅಂದಿದ್ದೇ, ಡಬ್ಬದಲ್ಲಿದ್ದ ಹಣ್ಣುಗಳನ್ನು ಅಳೆದು ಕೊಡಲು ರೆಡಿಯಾದಳು. ಆದರೆ ಈ ಪಟಾಲಂಗೋ, ಬಾಟಲಿಯ ಬಾಡಿದ ಹಣ್ಣುಗಳಿಗಿಂತ ಮರದಲ್ಲಿ ಜೋತಾಡುತ್ತಿರುವ ರಸಭರಿತ ಹಣ್ಣುಗಳ ಮೇಲೆಯೇ ಕಣ್ಣು. ಮರ ಹತ್ತಿಕೊಂಡು ಕೊಯ್ದುಕೊಳ್ಳುತ್ತೇವೆ ಅಂದಿದ್ದಕ್ಕ ಆಕೆ, ಇಲ್ಲ, "ಅಪ್ಪ ಅಮ್ಮ ಬೈತಾರೆ, ಎಷ್ಟು ಬೇಕಿದ್ದರೂ ಇಲ್ಲಿಯೇ ಕೊಂಡುಕೊಳ್ಳಿ, ನಿಮ್ಮ ದಮ್ಮಯ್ಯ, ಮರ ಹತ್ತಿ ಹಾಳು ಮಾಡಬೇಡಿ" ಅಂತ ಬೇಡಿಕೊಂಡಳು.

ಅವರಲ್ಲೊಬ್ಬ ಆಕೆಯನ್ನು ಮೆಲ್ಲನೆ ಸಮಾಧಾನಿಸತೊಡಗಿದ. "ನೋಡು, ಏನೂ ಚಿಂತಿಸಬೇಡ, ನಿಂಗೆ ತೊಂದರೆ ಕೊಡಲ್ಲ, ನಾವು ಹಣ್ಣು ಕೊಯ್ದುಕೊಂಡರೆ ಅದಕ್ಕೆ ದುಡ್ಡು ಕೊಡುತ್ತೇವೆ,ಮೋಸ ಮಾಡುವುದಿಲ್ಲ".. ಆಕೆ "ಅಲ್ಲ.. ಅಲ್ಲ.. "ಅನ್ನುವಷ್ಟರಲ್ಲಿ ಒಂದಿಬ್ಬರು ಬೇಲಿ ಹಾರಿ ಮರ ಹತ್ತಿಯಾಗಿತ್ತು. ಇಷ್ಟೊಂದು ಜನರ ಮುಂದೆ ಆಕೆ ಏನು ಮಾಡಲು ಸಾಧ್ಯ?, ಅಳುಮೋರೆ ಹಾಕಿಕೊಂಡು ಮರವನ್ನೇ ನೋಡುತ್ತ ನಿಂತಳು.

ಅಷ್ಟು ಹೊತ್ತಿಗೆ ಮತ್ತೊಬ್ಬ ಆಕೆಯನ್ನು ಮಾತಿಗೆಳೆದ. ಶಾಲೆಗೆ ಹೋಗುತ್ತೀಯಾ, ಏನು ಓದುತ್ತಿದ್ದೀ, ಯಾಕೆ ಈ ಹಣ್ಣುಮಾರುವ ಕೆಲಸ ಇತ್ಯಾದಿ ಇತ್ಯಾದಿ. ಆಕೆ ಒಂದು ಕಣ್ಣನ್ನ ಮರದತ್ತಲೇ ಇರಿಸಿ ಉತ್ತರಿಸುತ್ತಿದ್ದಳು. ನಾನು ಫಸ್ಟ್ ಪೀಯುಸಿ ಮುಗಿಸಿದ್ದೇನೆ, ಈ ಸಲ ಸೆಕೆಂಡ್ ಪೀಯುಸಿ, ಫೀಸ್ ಕಟ್ಟೋಕೆ ಮೂರುವರೆ ಸಾವಿರ ಬೇಕು, ಹಾಗಾಗಿ ಈ ಕೆಲ್ಸ. . ಎಷ್ಟು ದುಡ್ ಆಗತ್ತಮ್ಮಾ ನಿಂಗೆ ಇದ್ನ ಮಾರೋದ್ರಿಂದ ಅಂತ ಕೇಳಿದ್ದಕ್ಕೆ ಏನೋ ನೂರೋ ಇನ್ನೂರೋ ಆಗಿದೆ, ಆದಷ್ಟು ಆಗ್ಲಿ ಅಂತ ಮಾಡ್ತಾ ಇದೀನಿ ಅಂದ್ಲು ಅವಳು.

ಸ್ವಲ್ಪ ಹೊತ್ತಿಗೆ ಬೇಕಷ್ಟು ಹಣ್ಣುಗಳನ್ನು ತಿಂದು ಕೈ ಬಾಯಿ ನೇರಳೆ ಮಾಡಿಕೊಂಡ ಗೆಳೆಯರು ಅವಳ ಬಳಿ ಬಂದರು. ಮರ ಅರ್ಧ ಖಾಲಿಯಾಗಿತ್ತು. ದುಡ್ದೆಷ್ಟು ಕೊಡಬೇಕಮ್ಮಾ ಅಂದ ಒಬ್ಬ. ಇವಳಿಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ಮರವೋ ಅರ್ಧ ಖಾಲಿ. "ನೋಡಿ ಸಾರ್. . ನೀವೇ ಕೊಡಿ" ಅಂದಳು ಅವಳು, ಬೇರೇನೂ ತೋಚದೆ!

ಅವಳು ಅವರನ್ನು ನೋಡುತ್ತಿದ್ದ ಹಾಗೆ ಅವರಲ್ಲೊಬ್ಬ ಪಟಪಟನೆ ದುಡ್ಡು ಕಲೆಕ್ಟ್ ಮಾಡಿದ. ಆಕೆಯ ಬಳಿ ಬಂದು ಆ ದುಡ್ಡನ್ನ ಕೈಗಿಟ್ಟ. ನೂರರ ನೋಟುಗಳು. ಮೂರುವರೆ ಸಾವಿರ ರೂಪಾಯಿಗಳು. "ತಗೋ,ನಿನ್ನ ಫೀಸಿಗೆ ".

ಅವಳು ಅಕ್ಷರಶಃ ದಿಗ್ಭ್ರಾಂತಳಾಗಿದ್ದಳು. ಮಾತು ನಿಂತೇ ಹೋದಂತಾಗಿತ್ತು. ಅವಳಿಗೆ ಏನನ್ನೂ ಮಾತನಾಡಲು ಬಿಡದ ಇವರುಗಳು "ಇಟ್ಕೋ , ಚೆನ್ನಾಗಿ ಓದು, ಸುಮ್ಮನೇ ಈ ಬಿಸಿಲಲ್ಲಿ ಕೂತು ನೇರಳೇ ಹಣ್ಣು ಮಾರುವ ಕೆಲಸ ಬೇಡ" ಅಂದರು. ಆಕೆ ಏನೋ ಹೇಳಲು ಬಾಯೆತ್ತುವ ಹೊತ್ತಿಗೆ ಜೋರು ಸದ್ದು ಮಾಡುತ್ತಾ ರೈಲು ಹಾದು ಹೋಯಿತು.

ಎಲ್ಲರೂ ಲಗುಬಗೆಯಲ್ಲಿ ತಮ್ಮ ರೈಲಿನತ್ತ ಹೊರಟರು. ಆಕೆ ರೈಲು ಹೋಗುವವರೆಗೂ ಅಲ್ಲಿನ ಕಂಬವೊಂದಕ್ಕೆ ಒರಗಿ ನಿಂತು ಇವರನ್ನೇ ನೋಡುತ್ತ ನಿಂತಿದ್ದಳು, ಎತ್ತಿದ ಕೈ ಮತ್ತು ತುಂಬಿದ ಕಣ್ಣಿನೊಂದಿಗೆ.

17 ಕಾಮೆಂಟ್‌ಗಳು:

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ಶ್ರೀನಿಧಿಯವರೆ...
ಯಾರೋ ಸರಳವಾದ ಮಾತಿನಲ್ಲಿ ಈ ಕತೆ ಹೇಳಿದಂತೆ ಅನಿಸಿತು. ಆ ಐವರಿಗೆ ಇನ್ನಷ್ಟು ಒಳ್ಳೆಯದಾಗಲಿ. ಹುಡುಗಿಯು ಭವಿಷ್ಯದ ಏಣಿಗೆ ಮೆಟ್ಟಿಲೊಂದನ್ನು ಕಟ್ಟಿಕೊಟ್ಟವರ ಬಗ್ಗೆ ಕೇಳಿ ಮನದುಂಬಿ ಬಂತು.

ಅನಾಮಧೇಯ ಹೇಳಿದರು...

Hi Shrinidhi,

I got to hear this story from one of ur friends. After he finished, I decided to keep aside some money every month and donate the same to needy people. This story has really motivated me to do so. Thanks a lot for sharing the same.

Rgds
Praveen

Parisarapremi ಹೇಳಿದರು...

ಆ ಹುಡುಗರಿಗೆ ಒಳ್ಳೇದಾಗಲಿ. ಆ ಹುಡುಗಿಯು ಚೆನ್ನಾಗಿ ಓದುವಂತಾಗಲಿ. ಎಲ್ಲರಿಗೂ ಆಲ್ ದಿ ಬೆಸ್ಟ್.

Lakshmi Shashidhar Chaitanya ಹೇಳಿದರು...

ಹುಡುಗಿಗೆ ಸಹಾಯ ಮಾಡಲು ಮನಸ್ಸು ಮಾಡಿದ ಆ ಐವರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಹುಡುಗಿಗೂ, ಈ ಐವರಿಗೂ ಒಳ್ಳೆಯದಾಗಲಿ.

Avani ಹೇಳಿದರು...

hey,

Its really inspiring to donate really needy people in the society …………..really good narration keep it up

Regards ,

Shetty

ರಂಜನಾ ಹೆಗ್ಡೆ ಹೇಳಿದರು...

ಶ್ರೀ,
ತುಂಬಾ ಚನ್ನಾಗಿ ಇದೆ. ನಾವು ಎಷ್ಟೋ ದುಡ್ಡು ಸುಮ್ ಸುಮ್ನೆ ಖರ್ಚು ಮಾಡಿರುತ್ತೇವೆ ಹಿಂಗೆ ಎನೋ ಸ್ವಲ್ಪ ಯಾರಿಗೋ ಸಹಾಯ ಮಾಡಿದ್ರೆ ಚನ್ನಾಗಿ ಇರುತ್ತೆ ಅಲ್ವಾ? ಆ ಹುಡುಗರು ಯಾವಾಗ್ಲು ಖುಷಿಯಾಗಿರಲಿ

Unknown ಹೇಳಿದರು...

Hi Shrinidhi,

Read ur article.... good to know that such people still exist in today's society.. BTW you could have revealed the names of those five people....

Seema S. Hegde ಹೇಳಿದರು...

ಶ್ರೀನಿಧಿ,
ಒಳ್ಳೆಯ ಘಟನೆ, ಕಥೆಯ ರೂಪದಲ್ಲಿ ಚೆನ್ನಾಗಿ ಬಂದಿದೆ.
ಆ ಹುಡುಗರಿಗೆ ಹಾಗೆಯೇ ನೇರಳೆ ಹಣ್ಣು ಮಾರುವ ಹುಡುಗಿಗೂ ಒಳ್ಳೆಯದಾಗಲಿ ಎಂದು ಹಾರೈಸುತ್ತಾ...

ಸಿಂಧು sindhu ಹೇಳಿದರು...

ನಿಧಿ,

ಬರಹ ಮತ್ತು ಆಶಯ ಎರಡೂ ತುಂಬ ಚೆನಾಗಿದ್ದು. ಒಳ್ಳೆಯ ಪ್ರೇರೇಪಣೆ. ಒಳ್ಳೆಯ ಕೆಲಸ ಮಾಡಿದಷ್ಟೇ ಪುಣ್ಯ, ಆ ಒಳ್ಳೆಯ ಕೆಲಸವನ್ನು ಸೌಜನ್ಯಶೀಲತೆಯಿಂದ ಹಂಚುವುದರಿಂದಲೂ ಬರುತ್ತದೆ. ಇನ್ನೂ ನಾಲ್ಕಾರು ಜನರನ್ನು ಒಳ್ಳೆಯ ಕೆಲಸ ಮಾಡಲು ಪ್ರೇರೇಪಿಸುತ್ತದೆ.

ಅವಳ ಓದಿಗೆ ಪೂರಕವಾಗಿ ನಡೆದುಕೊಂಡ ಈ ಹುಡುಗರೆಲ್ಲರ ಸದ್ಗುಣ ಓದಿ ಖುಷಿಯಾಗಿದೆ. ಬೆಳಕಿನ ಧಾರೆಯಲ್ಲಿ ತೋಯ್ದ ಅನುಭವ.

ಪ್ರೀತಿಯಿಂದ
ಸಿಂಧು

ತೇಜಸ್ವಿನಿ ಹೆಗಡೆ ಹೇಳಿದರು...

ಶ್ರೀನಿಧಿ ನಿಜಕ್ಕೂ ಆ ಐವರ ಸಹೃದಯತೆಯ ಮೆಚ್ಚಲೇ ಬೇಕು. ಇದು ನೀ ಕೇಳಿದ್ದಾ? ನಾ ಪ್ರಾರ್ಥಿಸುವೆ ಕಾಣದ ಆ ಹುಡುಗಿಯ ಉಜ್ವಲ ಭವಿಷ್ಯಕ್ಕಾಗಿ.

ಅನಾಮಧೇಯ ಹೇಳಿದರು...

namaste, tumba dinagaLa nantara tamma blog oduva avakasha sikkitu. kannanchalli neeru tumbittu "ಒಂದು ಬೆಳಕಿನ ಕಥೆ." odidaga. hats off!! to those five friends. tumba chennagi bardiddira.

Srikanth - ಶ್ರೀಕಾಂತ ಹೇಳಿದರು...

ಆಹಾ.. ಬೊಂಬಾಟ್ ಕಥೆ! ಆ ಹುಡುಗರಿಗೆ ಒಳ್ಳೆಯದಾಗಲಿ. ಹುಡುಗಿಯ ಓದೂ ಚೆನ್ನಾಗಿ ಸಾಗಲಿ!

ನಿಮ್ಮ ಬ್ಲಾಗಿನಲ್ಲಿ ಒಳ್ಳೆಯ ಕಥೆಗಳೂ ಹೀಗೇ ಬರುತ್ತಿರಲಿ...

ಅರುಣ್ ಹೇಳಿದರು...

srinidhi....

Ur way of narrating a story is very good.

click4nothing ಹೇಳಿದರು...

ತುಂಬಾ ಒಳ್ಳೇ ಕೆಲ್ಸ ಮಾಡಿದ್ದೀರ...... thnx.......

ಶ್ರೀನಿಧಿ.ಡಿ.ಎಸ್ ಹೇಳಿದರು...

ನನ್ನ ಸ್ನೇಹಿತ ರಾಘವೇಂದ್ರ ಹೆಗಡೆ ಹೇಳಿದ ಕಥೆ ಇದು. ಅವನೂ ಆ ಗುಂಪಿನೊಳಗೊಬ್ಬನಾಗಿದ್ದ. ನಮ್ಮಂತಹ ಎಷ್ಟೋ ಜನಕ್ಕೆ ಈ ಕಥೆ ಒಂದು ಹೊಸ ಹುರುಪು ಕೊಡಬಹುದು ಅನ್ನುವ ದೃಷ್ಟಿಯಿಂದ ಬರಹಕ್ಕೆ ಇಳಿಸಿದ್ದು ಈ ಘಟನೆಯನ್ನು. ನಿಮಗೂ ಇದನ್ನೋದಿ ಏನಾದರೂ ಹೊಸದನ್ನು ಮಾಡುವ ಕನಸು ಮೊಳೆತಿದ್ದರೆ ಅಷ್ಟರ ಮಟ್ಟಿಗೆ ಈ ಬರಹ ಸಾರ್ಥಕ.

ಅನಾಮಧೇಯ ಹೇಳಿದರು...

hmm marakke hathi nEralehannu thindu aakEya manasinali appa amma baiyO bhaya huttisi nanthra avlige sahAya hAstha chaachi sahAya mAdida thumbU hrudayagalige nanna vandanegaLu

Ake chennagi odhi avlige oLithe Aagali endhu Ashisthini.

Rohini Joshi ಹೇಳಿದರು...

ISToLLe kelsa mADida nimma snehitarige nanna hrutpoorvaka namanagaLu...avra yella kelasagaLu yashaswiyaagali:-)

Aa huDugiya aashayavu nenaverali..Chennaagi odi tanna bhavishyavanna roopisikoLLali.

Idannu kathe roopadalli prakaTisi namagella odalu koTTiddakke nimage dhanyavaadagaLu.