ಗುರುವಾರ, ಏಪ್ರಿಲ್ 17, 2008

ಸರಕಾರದ ಕೆಲಸ, ದೇವರ ಕೆಲಸ.

ಪೋಸ್ಟಾಫೀಸಿಗೆ ಹೋಗಿದ್ದೆ. ಹಿಂದಿನ ದಿನ ರಿಜಿಸ್ಟರ್ ಪೋಸ್ಟ್ ಬಂದಿತ್ತು, ನಾನು ಮನೆಯಲ್ಲಿರಲಿಲ್ಲ. ಒಂದು ಹರಕು ಚೀಟಿಯಲ್ಲಿ ಪೋಸ್ಟ್ ಮ್ಯಾನ್ ಸುಬ್ರಮಣ್ಯಂ ( ಆ ಚೀಟೀಲೇ ಇತ್ತು ಅವನ ಹೆಸರು) ಏನೋ ಬರೆದು ಕೊಟ್ಟು ಹೋಗಿದ್ದ, ಇಂತಿಂತಾ ಪೋಸ್ಟಾಫೀಸಿಗೆ ಬಂದು ಕಲೆಕ್ಟ್ ಮಾಡಿಕೋಬೇಕು ಅಂತ. ಬೆಳಿಗ್ಗೆ ಆಫೀಸಿಗೆ ಹೊರಟವನು ಹೋದೆ ಅಲ್ಲಿಗೆ.

ಗಂಟು ಮುಖದ ಹೆಂಗಸು ಬಾಗಿಲಲ್ಲೇ ಕೂತಿದ್ದಳು."ಸುಬ್ರಮಣ್ಯಂ ಬೇಕಿತ್ತು, ರಿಜಿಸ್ಟರ್ ಪೋ.." ಮಾತು ಮುಗಿಯುವುದರೊಳಗೆ ಆಕೆ ಕೈ ಮೇಲೆತ್ತಿದ್ದಳು.ಅಂಪೈರು ಔಟು ಕೊಡುವ ಹಾಗೆ. ಅರ್ಥವಾಗಲಿಲ್ಲ. "ಮೇಡಮ್, ಸುಬ್ರಮಣ್ಯಂ ಅವರಿದಾರ?" ಅವಳು ತನ್ನ ಬರೆಯುವ ಕೆಲಸ ಮುಂದುವರೆಸುತ್ತ ಕೈ ಮತ್ತೊಮ್ಮೆ ಮೇಲೆತ್ತಿದಳು, ಈ ಬಾರಿಪುಣ್ಯಕ್ಕೆ ಮಾತಾಡಿದಳು. - ಮೇಲಿರ್ತಾರೆ ಹೋಗ್ರೀ.. ನಾನು ಮೇಲೆ ಹೋಗುವ ದಾರಿ ಹಿಡಿದೆ. ಮೇಲೊಂದು ಕುರುಕ್ಷೇತ್ರ. ಒಂದಿಷ್ಟು ಜನ ಪತ್ರಗಳ ಕಟ್ಟನ್ನ ಇತ್ತಿಂದತ್ತ, ಅತ್ತಿಂದಿತ್ತ ಎಸೆಯುತ್ತ ಕೂತಿದ್ದರು.

"ಸಾರ್, ಸುಬ್ರಮಣ್ಯಂ ಅವ್ರು ಇದಾರಾ.."

ಯಾರಿಗೂ ನನ್ನ ಮಾತೇ ಕೇಳಲಿಲ್ಲ, ಸಿಕ್ಕ ಸಿಕ್ಕ ಚೀಲಕ್ಕೆ ಪತ್ರಗಳನ್ನ ಗುರಿಯಿಟ್ಟು ಎಸೆಯುವುದರಲ್ಲೇ ತಲ್ಲೀನರು. ಮತ್ತೊಮ್ಮೆ ಗಟ್ಟಿಯಾಗಿ ಕೇಳಿದೆ. ಒಬ್ಬಾತ ತಣ್ಣಗೆ, ನನ್ನ ಮುಖವನ್ನೂ ನೋಡದೇ, ಕೆಳಗಿರ್ತಾರೆ ಹೋಗಿ ಅಂದ. "ಇಲ್ಲಾ ಸಾರ್, ಅಲ್ಲಿಂದಲೇ ಬಂದೆ" ಅಂದೆ. ಕೆಳಗಿರ್ತಾರೆ ಹೋಗೀ ಅಂತು ಇನ್ನೊಂದು ಶರೀರ, ಮತ್ತೊಮ್ಮೆ. ನಾನು ಮತ್ತೆ ಕೆಳಗಿಳಿದೆ.

ಈ ಬಾರಿ ಗಂಟು ಮೇಡಮ್ ನ ಮಾತಾಡ್ಸೋಕೆ ಧೈರ್ಯ ಸಾಲಲಿಲ್ಲ. ಎದ್ದು ಬಾರಿಸಿದರೆ ಅನ್ನುವ ಅಳುಕು. ಪಕ್ಕದಲ್ಲಿದ್ದ ಮತ್ತೊಬ್ಬ ಪುಣ್ಯಾತ್ಮರನ್ನ ಕೇಳಿದೆ."ಸುಬ್ರಮಣ್ಯಂ.." ಅನ್ನುತಿದ್ದ ಹಾಗೆ, ಅವ್ರು ಹೇಳಿಲ್ವೇನ್ರೀ- ಮೇಲಿರ್ತಾರೆ...ಹೋಗಿ.

ಮತ್ತೆ ಮೇಲೆ- ಅಲ್ಲಿಯಾತ ಹೆಚ್ಚೂ ಕಡಿಮೆ ಕಿರುಚಿಯೇ ಬೆಟ್ಟ. ಹೋಗುತ್ತಿಯೋ ಇಲ್ಲವೋ ಕೆಳಗಡೆಗೆ ಅನ್ನುವ ಹಾಗೆ. ಅವನು ಕಿರುಚಿದ್ದು ನೋಡಿ ಆ ರೂಮುಲ್ಲಿ ಅವರು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಏನಾದರೂ ಕಾಗದ ಪತ್ರಗಳ ವಿಲೇವಾರಿ ಮಾಡುತ್ತಿದ್ದಾರೋ ಅನ್ನುವ ಅನುಮಾನ ಬಂತು. ಮತ್ತೆ ಕೆಳಗೆ. ಹುಚ್ಚು ಹಿಡಿಯುವ ಸಾಧ್ಯತೆಗಳು ಕಾಣಿಸಿಕೊಳ್ಳುತ್ತಿದ್ದವು. ಈ ಬಾರಿ ಕೆಳಗಿನ ಮೇಡಮ್, ಅವ್ರು ಕಾಪಿಗ್ ಹೋಗಿದಾರೆ ಅನ್ಸತ್ತೆ.. ಅನ್ನುವ ರಾಗ ಎತ್ತಿದರು.

ಕಾದೆ. ಹತ್ತು ನಿಮಿಷ. ಕಾಲ ನಿಂತೇ ಹೋದ ಅನುಭವ. ಮತ್ತೆ ಅಲ್ಲಿದ್ದೊಬ್ಬ ಪುಣ್ಯಾತ್ಮ ಬಳಿ ಕೇಳಿದರೆ, ಮೈ ಪರಚಿಕೊಳ್ಳುವುದೊಂದು ಬಾಕಿ. ಈಗಷ್ಟೇ ಬಂದ್ರಲ್ಲ..ಮೇಲೆ ಹೋದ್ರು ನೋಡಿ. ಓಡಿದೆ ಮೇಲೆ. ಯಾವನೋ ಅಡ್ಡ ಬಂದ. ಜಸ್ಟ್ ಮಿಸ್ಸು. ಬಿದ್ದೇ ಹೋಗ್ತಿದ್ದ. ಮೇಲೆ ಇದ್ದವರಿಂದ ಐಸಿನಂತ ಉತ್ತರ ಬಂತು, ಈಗಷ್ಟೇ ಕೆಳಗೆ ಹೋದ್ರು ನೋಡಿ, ಅವರೇ ಸುಬ್ರಮಣ್ಯಂ!

ಅಂತೂ ಆ ಪುಣ್ಯಾತ್ಮನ್ನ ಹಿಡಿದೆ. ಆ ಸಾವ್ಕಾರ್ರು ಮತ್ತೆ ಹತ್ತು ನಿಮಿಷ ನನ್ನ ರಿಜಿಸ್ಟರ್ ಪೋಸ್ಟ್ ಹುಡುಕಿ, ಕಾಣಿಸ್ತಿಲ್ಲ ಸಾರ್, ಮಧ್ಯಾಹ್ನ ಬನ್ನಿ ಅಂದ್ರು.

ಇಲ್ಲಣ್ಣಾ ದಮ್ಮಯ್ಯ ಅಂತೆಲ್ಲ ಹೇಳಿ ಹುಡುಕ್ಸಿ, ಅದ್ನ ಕೈಲ್ ಹಿಡ್ಕೊಂಡು ಹೊರಡಬೇಕಿದ್ರೆ... ಉಫ್..

*******

ಶಾಸಕರ ಭವನಕ್ಕೆ ಯಾರದೋ ಸಂದರ್ಶನ ಮಾಡೋಕೆ ಹೋಗಬೇಕಿತ್ತು. ಆ ಮಾಜಿ ಎಂ.ಎಲ್.ಎ ಅಲ್ಲಿರುವ ಮೂರು ಬಿಲ್ಡಿಂಗ್ ಗಳಲ್ಲಿ ಎಲ್ಲಿರುತ್ತಾರೆ ಅಂತ ಗೊತ್ತಿರಲಿಲ್ಲ. ಸುಮ್ನೆ ಬ್ಲೈಂಡಾಗಿ ಒಂದು ಕಟ್ಟಡಕ್ಕೆ ನುಗ್ಗಿದೆ. ಒಬ್ಬ ಪೋಲೀಸು ಪೇದೆ ಬಾಗಿಲಲ್ಲೇ ಕೂತಿದ್ದ.

"..... ಅವರು ಇಲ್ಲಿ ಇರ್ತಾರ"

ನಿಮ್ಮ ಹೆಸರು? -ಶ್ರೀನಿಧಿ

ಎಲ್ಲಿಂದ ಬಂದಿದೀರಿ?- ಹೆಸರು ಹೇಳಿದೆ.

ಯಾಕೆ?- ಅವರ ಸಂದರ್ಶನ ಮಾಡಬೇಕಿತ್ತು.

ನಿಮ್ಮ ಹೆಸರು ಈ ರಿಜಿಸ್ಟರಲ್ಲಿ ಬರೀರಿ- ಬರೆದೆ.

ವಿಳಾಸನೂ ಬರೀರಿ,ಹಾಂ, ಹಾಗೆ.. - ಅದ್ನೂ ಬರೆದೆ.

ಪೂರ್ತಿ ಬರೀರಿ ಸಾರ್, ವಿದ್ ಪಿನ್ ಕೋಡ್.- ಓಕೆ, ಅದ್ನೂ..

ಯಾರನ್ನ ಮೀಟಾಗಕ್ ಬಂದಿದ್ದೊ ಅಂತ್ಲೂ ಬರೀರಿ- ಹುಂ..

ಯಾಕೆ, ಏನು, ಏತ್ತ ಎಲ್ಲದ್ನೂ ಬರೀರಿ- ಬರ್ದೆ.

"ಎಲ್ಲದೂ ಆಯ್ತಾ?- ಕೇಳಿದೆ. ಆಯ್ತು ಸಾರ್.

"ಅವ್ರು ಇಲ್ಲೇ ಇರ್ತಾರ, ಇದೇ ಬಿಲ್ಡಿಂಗಲ್ಲಿ?"

ಓ ಅಲ್ಲಿ ರಿಸೆಪ್ಶನ್ ಕೌಂಟರ್ ಇದೆ, ಅಲ್ ಹೋಗಿ ಕೇಳಿ- ಹೇಳ್ತಾರೆ!!!

ಸರಕಾರದ ಕೆಲಸ, ದೇವರ ಕೆಲಸ.

12 ಕಾಮೆಂಟ್‌ಗಳು:

ಅಮರ ಹೇಳಿದರು...

ಪೊಸ್ಟ್ ಆಫೀಸ್ ಹೊಗೋನು ಜೊತೆಲೆ .... ಕ್ಯಾಮರಾ ಮ್ಯಾನ್ ಅನ್ನು ಕರ್ಕಂಡು ಹೊಗಿದ್ರೆ .... ಮಸ್ತ್ ಫೋಸ್ ಕೊಟ್ಟು ಬೇಗ ನಿನ್ನ ಕೆಲ್ಸ ಮಾಡಿರೋರು :) ..... ಇಲ್ಲ ಅಂದಿದ್ದರು ಜಾಗ್ರುತಿ ಕಾರ್ಯಕ್ರಮಕ್ಕೆ ಆಹಾರವಾದರು ಆಗ್ತಿತ್ತು... ಅಲ್ವ???

Srikanth - ಶ್ರೀಕಾಂತ ಹೇಳಿದರು...

ಯಾವ ಸರಕಾರಿ ಆಫೀಸಿಗೆ ಹೋದ್ರೂ ಇದೇ ಗೋಳು. ಎಲ್ಲಾ ರಾಜಕಾರಣಿಗಳಿಗೆ ನಮ್ಮ ಮತ ಬೇಕು. ಆದರೆ ಚುನಾವಣೆ ಗೆದ್ದವರಿಗೆ ಸರಕಾರದ ವ್ಯವಸ್ಥೆಯ ಬಗ್ಗೆ ಅಸಡ್ಡೆಯೇ ತಾವನುಸರಿಸಬೇಕಾದ ಮತ ಆಗಿಬಿಡತ್ತೆ! ಮಂತ್ರಿಗಳು, ಸಚಿವರು ಸುಮ್ಮನೆ ಕೂತಿರುವಾಗ ಸಾಧಾರಣ ಸರಕಾರಿ ನೌಕರರು ತಾವೇನು ಕಮ್ಮಿ ಅಂತಾರೆ. ಅವರಲ್ಲೂ ಬಂದುಬಿಡತ್ತೆ ಅಸಡ್ಡೆ!

ಕೊನೆಗೆ ನರಳುವರು ಪ್ರಜೆಗಳು! ಈ ವ್ಯವಸ್ಥೆ ಸಧ್ಯಕ್ಕಂತೂ ಸರಿ ಹೋಗುವಂತೆ ಕಾಣುತ್ತಿಲ್ಲ! ಪ್ರತಿದಿನ ಇನ್ನಷ್ಟು ಕೆಡುತ್ತಿದೆ ಅಷ್ಟೇ. ಕಾಲಾಯ ತಸ್ಮೈ ನಮಃ!

Sree ಹೇಳಿದರು...

ಹೆ ಹೆ! ’ದೇವರ ಕೆಲ್ಸ’ಕ್ಕೆ ಹೊಸ ತಲೆಮಾರಿಗೆ ಜಾಗ ಇಲ್ಲ, ಹಳಬರಿಗೆ ಉತ್ಸಾಹ ಇಲ್ಲ.. ಇದು ಸದ್ಯಕ್ಕೆ ರಿಪೇರಿಯಾಗೋ ಹಾಗೆ ಕಾಣೊಲ್ಲ! ತೀರಾ ಕೆಟ್ಟುಕಿತ್ತುಬರೋವರ್ಗೆ ಹಿಂಗೇ ಇರತ್ತೇನೋ ಅನ್ನಿಸುತ್ತೆ!! ಇತ್ತೀಚೆಗಷ್ಟೆ ಸಂಗೀತಪರೀಕ್ಷೆಗಳ ವಿಶ್ಯಕ್ಕೆ ನಾನೂ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಹಿಂಗೇ ನದಿ-ದಡ ಆಟ ಆಡ್ಕೊಂಡ್ ಬಂದೆ!:))

ಯಜ್ಞೇಶ್ (yajnesh) ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಯಜ್ಞೇಶ್ (yajnesh) ಹೇಳಿದರು...

ಯಾವ ಸರಕಾರಿ ಆಫೀಸಿಗೆ ಹೋದ್ರೂ ಸೇಮ್ ಕಥೆಗಳೇ ಸಾರ್.....

ನಂಗೂ ಒಂದು ರಿಜಿಸ್ಟರ್ ಪೋಸ್ಟ್ ಬಂದಿತ್ತು. ಮನೇಲಿ ಕೊಡದೇ ಅವರ ಹತ್ರ ಪೋಸ್ಟ್ ಆಫೀಸಿಗೆ ಬರ್ಲಿಕ್ಕೆ ಹೇಳಿ ಅಂತ ಆ ಪೋಸ್ಟ್ ಮ್ಯಾನ್ ಮಹೋದಯ ಹೇಳಿದ್ರು. ನಾನು ಮರುದಿನ ಆಫೀಸಿಗೆ ಹೊಗೊವಾಗ ಅಲ್ಲಿಗೆ ಹೋದೆ. ಆ ಮಹೋದಯನ ಹೆಸ್ರು ಬೇರೆ ಗೊತ್ತಿರ್ಲಿಲ್ಲ. ಅಂತೂ ಇಂತೂ ಅವ್ರನ್ನ ಹಿಡಿದೆ. ನನ್ನ ವೇಷ ಮತ್ತು ಕಾರಲ್ಲಿ ಬಂದಿದ್ದನ್ನ ಆತ ಗಮನಿಸಿ..ಸಾರ್ ಹೊರಗಡೆ ಬನ್ನಿ..ಕೊಡ್ತೀನಿ ಅಂದ.. ನಂಗೆ ವಿಶ್ಯ ಗೊತ್ತಾಯ್ತು..ಸಾಹೇಬ್ರು ದುಡ್ಡಿಗಾಗಿ ನಾಟಕ ಆಡ್ತಾಯಿದಾರೆ ಅಂತ. ಎಲ್ಲ ಸೈನ್ ಹಾಕಿ ಆದ್ರೂ ಆ ಪ್ರಜೆ ಕೈಲೇ ಇತ್ತು ಲೆಟ್ಟರ್ರು. ನಾನು ಕಿತ್ಗೊಂಡೆ. "ಸಾರ್... ಲೆಟ್ರನ್ನ ಒಂದ್ಸಲ ಒಡೆದು ನೋಡಿ. ಬೇರೆ ಯಾವ್ದಾದ್ರು ಲೆಟ್ರು ಬಂದಿರ್ಬೇಕು ಅಂತ ಹೇಳೊದೇ"!!!.. ಬೇರೆಯವರ ಲೆಟ್ರು ನಂಗೆ ಹೇಗೆ ಬರತ್ತೆ ಸ್ವಾಮಿ ಅಂದೆ. ಅದ್ಕೆ ಮಾತೇ ಇಲ್ಲ..ಹಲ್ಲು ಕಿರ್ಕೊಂಡು ನಿತ್ಗೊಂಡ. ಮುಖಕ್ಕೆ ನಾಲ್ಕು ಬಿಡೋಣ ಅನಿಸ್ತು.. ಸುಮ್ಮನೇ ಮಾತಾಡದೇ ದುಡ್ಡು ಕೊಡದೇ ವಾಪಸ್ ಬಂದೆ.

ಯಾವ್ದೇ ಸರಕಾರಿ ಕೆಲ್ಸಕ್ಕೆ ಹೋದ್ರೂ ಒಂದೇ ರೀತಿ. ಯಾರಾದ್ರು ಮೇಲಾಧಿಕಾರಿಗಳು ಪರಿಚಯ ಇದ್ರೆ ಅಥವಾ ಕೈ ಬೆಚ್ಚಗೆ ಮಾಡಿದ್ರೆ ಅನುಕೂಲ ಅಷ್ಟೆ...ಇವೆರಡು ಇಲ್ದೇ ಇರೋರಿಗೆ ಈಗಿನ ಕಾಲದಲ್ಲಿ ಬದುಕೋದು ಬಹಳ ಕಷ್ಟ.

Parisarapremi ಹೇಳಿದರು...

ಆ ರಿಸೆಪ್ಷನ್ ಕೌಂಟರಿನಲ್ಲಿ ಏನೇನು ಡೀಟೇಲ್ಸ್ ಇಸ್ಕೊಂಡ್ರಪ್ಪಾ??

Annapoorna Daithota ಹೇಳಿದರು...

illi `jana tha' seveye janardhanana seve kanappa :)

VENU VINOD ಹೇಳಿದರು...

ದೇವದೂತರ ನಿಜರೂಪ ಕಂಡುಕೊಂಡಿದ್ದೀರಿ :)

ಸುಪ್ತದೀಪ್ತಿ suptadeepti ಹೇಳಿದರು...

ಹ್ಙೂಂ!! ಇಂಥ ದೇವರ ಕೆಲ್ಸದಲ್ಲಿ ತಲ್ಲೀನರಾದ ಪಂಚ-ಪಾತ್ರೆಗಳ ಗಣಗಣದೊಳಗೆ ನಾನೂ ಹಲವಾರು ಬಾರಿ ಸಿಕ್ಕಿಕೊಂಡಿದ್ದೇನೆ.
"ಕೆರೆ-ದಡ", "ಜೂಟಾಟ", "ಕ್ಯಾಚ್-ಕ್ಯಾಚ್", "ಆಕಾಶ-ಭೂಮಿ", "ನಿನ್ನ ಕೈಯಲ್ಲೆಷ್ಟು-ನನ್ನ ಕೈಯಲ್ಲೆಷ್ಟು"... ಎಲ್ಲ ಆಟವೂ ಆಡಿದ್ದಾಗಿದೆ. ಪ್ರಧಾನಿಗಳಿಗೆ ಪತ್ರ ಬರೆಯುವಲ್ಲಿಗೂ ಹೋಗಿದ್ದಾಗಿದೆ. ಪ್ರಯೋಜನ.... ಶೂನ್ಯದೊಳಗಿನ ಶೂನ್ಯ.

ರಾಧಾಕೃಷ್ಣ ಆನೆಗುಂಡಿ. ಹೇಳಿದರು...

ಅಂದ ಹಾಗೆ ರಿಜಿಸ್ಟರ್ post ಯಾರದ್ದು.?

venu ಹೇಳಿದರು...

Ee govt department galella haage...
Third class quality service...
Police stationu , income tax departmentu, sales tax officeu ,post officu, banku ella kade kantri nan makle thumbirodho. avra output baro jagadalli chilli powder hakbeku...

ಶ್ರೀನಿಧಿ.ಡಿ.ಎಸ್ ಹೇಳಿದರು...

ಪ್ರತಿಕ್ರಿಯಿಸಿದ ಸರ್ವರಿಗೂ ಧನ್ಯವಾದಗಳು. ನಿತ್ಯ ಇಂತಹ ಅನುಭವಗಳು ನಮಗೆಲ್ಲ ಆಗಿ ಆಗೀ ಇವನ್ನು ಸಹಿಸಿಕೊಳ್ಳುವ ಶಕ್ತಿ ಬಂದುಬಿಟ್ಟಿದೆ ಅನ್ನಿಸುತ್ತದೆ,

ಇದೆಲ್ಲ ಸರಿ ಆಗೋದೆ ಇಲ್ಲವಾ ಹಾಗಾದರೆ?:(