ಥೋ! ಜೋರು ಮಳೆ ಸಡನ್ನಾಗಿ
ಶುರುವಾಯಿತು ಅಂತ,
ನಿಲ್ಲಿಸಿ ಬೈಕ,
ನಾನೂ ನಿಂತೆ ಅಂಗಡಿಯೊಂದರ ಪಕ್ಕ
ಸಿಡಿಮಿಡಿಗುಟ್ಟುತ್ತ,
ಅನಿರೀಕ್ಷಿತದ ಮೇಲೆ.
ಚುರುಗುಟ್ಟುವ ಹೊಟ್ಟೆ
ಅರೆಬರೆ ಒದ್ದೆ,
ಥೂ! ಅಂತೊಮ್ಮೆ ಸುರಿವ ಮಳೆಗೇ ಕ್ಯಾಕರಿಸಿ
ಹಳಿದುಕೊಳ್ಳುತ್ತ ನನ್ನ ಗ್ರಹಚಾರ
ನೋಡುತ್ತ ನಿಂತೆ ಖಾಲಿ ರಸ್ತೆ
ವಿರಳ ಸಂಚಾರ
ಪಕ್ಕದಲಿ ಅಜ್ಜಿ, ಮೊಮ್ಮಗ
ಇಬ್ಬರೂ ನಿರಾಳ
ಹುಡುಗ ನೀರ ಹರಿವಿಗೆ
ಮೆಲ್ಲನೆ,ಅಜ್ಜಿಗೆ ಕಾಣದ ಹಾಗೆ ಕಾಲದ್ದಿ
ರೋಮಾಂಚನಗೊಳ್ಳುತ್ತ
ಅಜ್ಜಿ, ಕಂಡರೂ ಕಾಣದ ಹಾಗೆ ಮಾಡುತ್ತ..
ಆ ಜಡಿಧಾರೆಯಲ್ಲೇ ರಸ್ತೆಯಲಿ
ಹೈಸ್ಕೂಲು ಹುಡುಗಿ, ಬಟ್ಟಲು ಗಣ್ಣಿನವಳು
ಚೂಡಿದಾರದ ವೇಲು ತಲೆಗೆ ಹೊದ್ದು
ಮಳೆಯ ನೋಡುತ್ತ
ಯಾವುದೋ ಹಾಡು ಗುನುಗುತ್ತ
ಪ್ರಸನ್ನವದನೆ, ಮಂದಗಮನೆ.
ರಸ್ತೆಯ ಆ ಬದಿಗೆ
ಗಿರಾಕಿಗಳಿಲ್ಲದ ಕಾಂಡಿಮೆಂಟ್ಸಿನವನು
ತನ್ನ ಕೈಯಾರೆ ಮಾಡಿದ
ಚಹವ ತಾನೆ ಹೀರುತ್ತ - ಹೊತ್ತು
ಬ್ರಹ್ಮಾನಂದ,
ರೇಡಿಯೋ ಕೇಳುತ್ತ ಮಳೆಗೆ ಮುಖ ಮಾಡಿದ್ದ.
ನನಗೆ ಯಾಕೋ ಅಲ್ಲಿ ನಿಲ್ಲಲೇ ಆಗದೆ
ಸಟಕ್ಕನೆ
ಬೈಕಿನೆಡೆಗೋಡಿ, ಕೀ ತಿರುವಿ
ಹಾಗೇ ನೆನೆಯುತ್ತಲೇ ಮನೆಗೆ
ಬರುವಷ್ಟರಲ್ಲಿ
ಮಳೆ ನಿಂತುಹೋಗಿತ್ತು.
8 ಕಾಮೆಂಟ್‌ಗಳು:
"ಪ್ರಸನ್ನವದನೆ, ಮಂದಗಮನೆ...
ತನ್ನ ಕೈಯಾರೆ ಮಾಡಿದ
ಚಹವ ತಾನೆ ಹೀರುತ್ತ -.."
ಸುಂದರ.. ಸುಂದರ..
ಗದ್ಯರೂಪದಿ 'ಸಡನ್ನಾಗಿ' ಶುರುವಾದ ಮಳೆ 'ವಿರಳ ಸಂಚಾರ' ದ ರಸ್ತೆಯೊಡನೆ ಕಾವ್ಯಗತಿ ಕಂಡುಗೊಂಡು 'ಚಹಾ' ಹೀರುವ 'ಬ್ರಹ್ಮಾನಂದ'ದ ಸ್ಥಿತಿಗೆ ತಲುಪಿ ಪ್ರಸನ್ನವದನೆ,ಮಂದಗಮನೆ ಅನ್ನುವ ಹೊತ್ತಿಗೆ ಸಾರ್ಥಕವಾಯಿತು!
ಚೆನ್ನಾಗಿದೆ
ಅನುಭವಿಸಬೇಕು ಎಲ್ಲವನ್ನೂ...
ಹುಂ..
ಗದ್ಯಕವನ ಚೊಲೋ ಇದ್ದು.
Chennagide :)
ನೀನು ಮಳೇಲಿ ಹೊರಗಡೆ ಹೋಗೋದು ಕಮ್ಮಿ ಮಾಡು.
ಮಳೇಲಿ ತೊಯ್ದ ಪೊಯಮ್ಮು
ತುಂಬಾ ಚೆನ್ನಾಗಿದೆಯೋ ಅಮ್ಮು.
ನೀ ನೋಡಿದ್ದೆಲ್ಲಾ ಬ್ಯೂಟಿಫುಲ್
ನೀ ಬರದದ್ದೆಲ್ಲಾ ವಂಡರ್‌ಫುಲ್
ಮಳೇಲಿ ತೊಯ್ದರು ನೀನು
ಪೊಯಮ್ ಆಗಿದೆ ಜೇನು!
ಜರ್ಕಿನ್ ಹಾಕೊಳ್ಳೋದನ್ನ ಅಭ್ಯಾಸ ಮಾಡ್ಕೊಳ್ಳಿ.
ಕಾಮೆಂಟ್ ಪೋಸ್ಟ್ ಮಾಡಿ