ಗುರುವಾರ, ಜನವರಿ 08, 2009

ಮೆಜೆಸ್ಟಿಕ್ ಮೋಸಗಳು...

ನಾನು ಬೆಂಗಳೂರಿಗೆ ಬಂದ ಆರಂಭದಲ್ಲಿ, ಮೆಜೆಸ್ಟಿಕ್ ನ ಸಮೀಪವೇ ಇರುವ ಗಾಂಧೀನಗರದಲ್ಲಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ನಿತ್ಯ ಮೆಜೆಸ್ಟಿಕ್ ಗೆ ಬೇಡವೆಂದರೂ ಹೋಗಲೇಬೇಕಿತ್ತು ಆ ಕಾಲದಲ್ಲಿ. ಬೆಳಗ್ಗೆ ಅಂತಿಲ್ಲ, ಸಂಜೆ ಅಂತಿಲ್ಲ, ಯಾವಾಗ ನೋಡಿದರೂ ಗಿಜಿಗಿಜಿ ಗುಡುತ್ತಲೇ ಇರುವ ಮೆಜೆಸ್ಟಿಕ್ ಗೆ ಕಾಲಿಡಲೇ ಮೊದಮೊದಲು ಹೆದರಿಕೆಯಾಗುತ್ತಿತ್ತು. ಬೆಂಗಳೂರಿಗೆ ಬಂದ ಕೂಡಲೇ ಮೆಜೆಸ್ಟಿಕ್ ಬಗ್ಗೆ ಒಂದಿಷ್ಟು ಜನ ಹೆದರಿಕೆ ಹುಟ್ಟಿಸಿಬಿಟ್ಟಿದ್ದರು- ಅದೊಂದು ಪಾಪಕೂಪವೇನೋ ಅನ್ನುವ ಹಾಗೆ. ದಿನವೂ ಮೆಜೆಸ್ಟಿಕ್ ಗೇ ಬಂದಿಳಿದು, ಗಾಂಧೀನಗರದವರೆಗೆ ಭುಜಕ್ಕೆ ಭುಜ ತಾಗುವ ಜಂಗುಳಿಯಲ್ಲೇ ನಡೆದು ಹೋಗುವ ಪರಿಸ್ಥಿತಿ ನನ್ನದು ಆಗ. ಮೊದಲೊಂದಿಷ್ಟು ಕಿರಿರಿಯಾದರೂ ನಂತರ ಒಗ್ಗಿಕೊಂಡೆ. ಅಲ್ಲಿನ ಕೆಲಸ ಆರು ತಿಂಗಳಿಗೇ ಬಿಟ್ಟಿದ್ದರಿಂದ ಮತ್ತೆ ಆ ಕಡೆ ತಲೆ ಹಾಕುವ ಕೆಲಸ ಬರಲಿಲ್ಲ ನನಗೆ.


ಇವತ್ತೂ ಊರಿಗೆ ಹೋಗಲು ಟಿಕೆಟ್ ಬುಕ್ ಮಾಡಿಲ್ಲದಿದ್ದರೆ ಮೆಜೆಸ್ಟಿಕ್ ನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣವೇ ಗತಿ. ಇಲ್ಲದೇ ಹೋದರೆ ಆ ಕಡೆ ಹೋಗುವುದು ಕಡಿಮೆ. ಇತ್ತೀಚಿಗೆ ಏನೋ ಕಾರಣಕ್ಕಾಗಿ ಒಂದೆರಡು ತಾಸು ಮೆಜೆಸ್ಟಿಕ್ ಅಲೆಯುವ ಪರಿಸ್ಥಿತಿ ಬಂತು. ಮತ್ತು, ಹಳೆಯ ಅನುಭವಗಳೆಲ್ಲ ಮತ್ತೆ ಒಂದು ರೌಂಡ್ ರಿಪೀಟಾಯಿತು. ಮೆಜೆಸ್ಟಿಕ್ ಇನ್ನೂ ಹಾಗೇ ಇದೆ, ಮತ್ತು ಇನ್ನು ಮುಂದೂ ಹಾಗೇ ಇರುತ್ತದೆ ಎನ್ನುವುದನ್ನು ನೆನಪಿಸಲೆಂಬಂತೆ. ನನಗಾದ ಅನುಭವಗಳೆಲ್ಲ ನಿಮ್ಮಲ್ಲಿ ಹೆಚ್ಚಿನವರಿಗೆ ಆಗಿಯೇ ಇರುತ್ತದೆ. .

೧. ಸಂಜೆ ಹೊತ್ತು, ಮೆಜೆಸ್ಟಿಕ್ಕಿನಲ್ಲಿ ನೀವು ಸ್ವಲ್ಪ ಠಾಕುಠೀಕಾಗಿ ಡ್ರೆಸ್ ಮಾಡಿಕೊಂಡು ನಿಮ್ಮ ಪಾಡಿಗೆ ನೀವು ಹೋಗುತ್ತಿದ್ದರೆ, ಸಟಕ್ಕನೆ ಒಬ್ಬಾತ ಬಂದು ನಿಮ್ಮನ್ನ ಸ್ವಲ್ಪಬದಿಗೆ ಕರೆಯುತ್ತಾನೆ- ಕತ್ತಲಿನ ಕಡೆಗೆ. ಮೆಲ್ಲನೆ ಅತ್ತ ಇತ್ತ ನೋಡುತ್ತಾ, ಯಾರೂ ತನ್ನನ್ನು ನೋಡುತ್ತಿಲ್ಲ ಅನ್ನುವುದನ್ನು ಖಚಿತ ಪಡಿಸಿಕೊಂಡು ಒಂದು ವೆಲ್ವೆಟ್ ಬಟ್ಟೆಯಲ್ಲಿ ಸುತ್ತಿದ ಮಿರಿಮಿರಿ ಮಿಂಚುವ ಹೊಚ್ಚ ಹೊಸ ಕಪ್ಪುಕನ್ನಡಕ ತೆಗೆಯುತ್ತಾನೆ. ನೀವೂ ಕುತೂಹಲದಿಂದ ನೋಡಲಾರಂಭಿಸಿದರೆ- "ಸರ್, ನಾನು ಕನ್ನಡಕದ ಶೋರೂಮಲ್ಲಿ ಕೆಲಸ ಮಾಡ್ತಿದೀನಿ, ಈ ಕನ್ನಡಕ ಕದ್ದುಕೊಂಡು ಬಂದಿದೀನಿ, ಇದು ಪಕ್ಕಾ ಶೋರೂಮ್ ಪೀಸ್, ೨ ಸಾವಿರ ರೂಪಾಯಿ ಆಗತ್ತೆ, ನಿಮಗೆ ೫೦೦ಕ್ಕೆ ಕೊಡ್ತೀನಿ.. ನಂಗೇನೋ ಮನಿ ಅರ್ಜೆನ್ಸಿ ಇದೆ, ಅದಕ್ಕೆ ಹೀಗೆ ಮಾಡ್ಬೇಕಾಗಿದೆ" ಅನ್ನುತ್ತಾನೆ. ಜೊತೆಗೆ ವಿಶ್ವಾಸಾರ್ಹತೆಯ ಪ್ರತೀಕವಾಗಿ ಶೋರೂಮೊಂದರ ವಿಸಿಟಿಂಗ್ ಕಾರ್ಡನ್ನೂ ನಿಮಗೆ ತೋರಿಸುತ್ತಾನೆ. ನೀವು ನಿಮ್ಮ ಅದೃಷ್ಟಕ್ಕೆ ಖುಷಿ ಪಡುತ್ತ ಕನ್ನಡಕ ಕೊಂಡಿರೋ, ಅಷ್ಟೇ- ಮುಗಿಯಿತು. ಕಮ್ಮಿ ಎಂದರೂ ೪೦೦ ರೂಪಾಯಿ ಕಳೆದುಕೊಂಡಿರಿ ಅಂತ ಅರ್ಥ. ಇದೇ ತರ ಕಂಪನಿ ವಾಚುಗಳನ್ನು ಮಾರುವವರು ಕೂಡ ಸಿಗುತ್ತಾರೆ. "Rado ವಾಚು ಸರ್.. "ಮತ್ತೆ ಅದೇ ಹಳೇ ಕಥೆ..

೨. ನೀವು ನ್ಯಾಷನಲ್ ಮಾರ್ಕೆಟ್ ಕಡೆಗೋ ಮತ್ತೆಲ್ಲಿಗೋ ಅರ್ಜೆಂಟಾಗಿ ಹೋಗುತ್ತಿದ್ದೀರಿ... ಮಳೆ ಬೇರೆ ಬರುವ ಹಾಗಿದೆ. ಪಕ್ಕದಲ್ಲೊಬ್ಬ ಒಂದಿಷ್ಟು ಕಣ್ಣಿಗೆ ಕುಕ್ಕುವ ಬಣ್ಣದ ಜರ್ಕಿನ್ ಗಳನ್ನು ರಾಶಿ ಹಾಕಿಕೊಂಡು ೫೦ ಕ್ ಒಂದು ಅಂತ ಕಿರುಚತ್ತ ನಿಂತಿದ್ದಾನೆ. ಹೋಗಿ ನೋಡಿದರೆ ಆಕರ್ಷಕ ಬಣ್ಣಗಳ- ನೋಡಲೂ ಪರವಾಗಿಲ್ಲ ಅನ್ನಬಹುದಾದ ಜರ್ಕಿನ್ ಗಳು. ನಿಮ್ಮ ಬಳಿ ಮಳೆ ತಡೆದುಕೊಳ್ಳಲು ಏನೂ ಇಲ್ಲ ಬೇರೆ. ಆತ ನಿಮಗೆ ೪೦ಕ್ಕೇ ಕೊಡಲೂ ಸಿದ್ಧನಿದ್ದಾನೆ. ನಿಮಗೀಗ ಅದನ್ನು ಕೊಳ್ಳದೇ ಬೇರೆ ವಿಧಿಯೇ ಇಲ್ಲ. ಮನೆಗೆ ಹೋಗುವ ದಾರಿಯಲ್ಲಿ ಮಳೆ ಬಂದಿದ್ದೇ ಹೌದಾದರೆ, ನೀವು ಹಾಕಿಕೊಂಡಿದ್ದ ಶರ್ಟನ್ನು ಎಸೆಯಲು ಅಡ್ಡಿಯಿಲ್ಲ.

೩. ಹತ್ರುಪಾಯ್ ಸಾಕ್ಸ್ ಹತ್ರುಪಾಯ್ ಸಾಕ್ಸ್ ಅಂತ ಕೂಗುವವರು ಅಡಿಗಡಿಗೆ ಸಿಕ್ಕಾರು ನಿಮಗಿಲ್ಲಿ. ಅರೇ, ನೋಡೋಣ- ಟ್ರೈ ಮಾಡಿದರೆ ಹೇಗೆ ಅಂತ ಕೊಂಡೊಯ್ದರೆ, ಮೊದಲ ಒಗೆತಕ್ಕೇ ಸಾಕ್ಸು ಒಂದೋ ಮೊರದಗಲ, ಇಲ್ಲವೋ ಬೆರಳಗಲ.

೪. ಇಂದು ರಾತ್ರಿಯೇ ನಿಮಗೆ ತಿರುಪತಿಗೋ, ಹೈದರಾಬಾದ್ ಗೋ , ಮಂತ್ರಾಲಯಕ್ಕೋ ಹೋಗಬೇಕಿದೆ. ಟಿಕೆಟ್ ಬುಕ್ ಆಗಿಲ್ಲ. ಮೆಜೆಸ್ಟಿಕ್ಕಿಗೆ ಹೋದರೆ ಸೀಟು ಸಿಗತ್ತೆ ಅಂತ ಯಾರೋ ಹೇಳುತ್ತಾರೆ. ಸರಕಾರೀ ಕೆ.ಎಸ್.ಆರ್.ಟಿ.ಸಿ ಬಗ್ಗೆ ನಿಮಗೆ ಒಳ್ಳೇ ಅಭಿಪ್ರಾಯವಿಲ್ಲ. ಖಾಸಗಿ ಟೂರಿಸ್ಟ್ ಬಸ್ಸುಗಳು ಸಿಗುವಲ್ಲಿಗೆ ಹೋಗುತ್ತೀರಿ. ನೀವು ಅಲ್ಲಿಗೆ ಹೋಗುತ್ತಿದ್ದ ಹಾಗೆ, "ಎಲ್ಲಿಗೆ ಸಾರ್, ಎಲ್ಲಿಗೆ ಮೇಡಮ್, ಎಷ್ಟ್ ಸೀಟ್ ಬೇಕು.. ಅಂತೆಲ್ಲ ಉಪಚಾರ ಮಾಡಿ ತಮ್ಮ ಕಿಷ್ಕಿಂದೆ ಆಫೀಸೊಳಗೆ ಕರೆದು, ತಮ್ಮ ಬಸ್ಸಿನ ಚಿತ್ರ ತೋರಿಸಿ, ಅವುಗಳ ಸುಖಾಸನಗಳ ಬಗ್ಗೆ ವಿವರಿಸಿ, ನಿಮಗೆ ಇದಕ್ಕೂ ಐಷಾರಾಮಿ ವ್ಯವಸ್ಥೆ ಮತ್ತೆಲ್ಲೂ ಸಿಗಲಾರದೆಂಬ ಅಶಾಭಾವನೆ ಮೂಡಿಸಿ, ಇನ್ನೇನು ಬಸ್ ಬರತ್ತೆ, ಹತ್ತಿಕೊಳ್ಳಿ ಅಂತ ರಸ್ತೆಗೆ ತಂದು ಬಿಡುತ್ತಾರೆ. ನೀವು ಟಿಕೆಟಿನ ಹಣ ಕೊಂಚ ದುಬಾರಿ ಅನ್ನಿಸಿದರೂ ಪಾವತಿಸಿ , ಬೆಳತನಕ ಹಾಯಾಗಿ ನಿದ್ರಿಸುವ ಕನಸು ಕಾಣುತ್ತ ಬಂದ ಬಸ್ಸು ಹತ್ತಿಕೊಂಡರೆ, ಅದೊಂದು ಸಾಮಾನ್ಯ - ಸೆಮಿ ಲಕ್ಷುರಿ ಬಸ್ಸು. ಕೇಳಿದರೆ, ಲಾಸ್ಟ್ ಮೊಮೆಂಟ್ ಗೆ ಆ ಬಸ್ಸು ಹಾಳಾಯ್ತು, ಸೋ ಈ ಬಸ್ ಬಂದಿದೆ ಅಂತೆಲ್ಲ ಕತೆ ಹೇಳಿ- ಬೆಳಗಾಗುವುದರೊಳಗೆ ತಿಗಣೆ ಕಡಿತ ಉಚಿತ ಮತ್ತು ಬೆನ್ನುನೋವು ಖಚಿತ.


ಎಲ್ಲರಿಗೂ ಇಂತಹ ಅನುಭವಗಳು ಆಗ್ಲೇಬೇಕು ಅಂತೇನೂ ಇಲ್ಲ.. ಎಲ್ಲ ನಿಮ್ಮ ನಿಮ್ಮ ಪುಣ್ಯಗಳ ಮೇಲೆ ಅವಲಂಬಿತ :)

10 ಕಾಮೆಂಟ್‌ಗಳು:

Sushrutha Dodderi ಹೇಳಿದರು...

ನಂಗಂತೂ ಆಗಿದೆ! ಸಾಕ್ಸು ಮತ್ತು ಬಸ್ಸಿನ ವಿಷಯದಲ್ಲಿ ಮೋಸ ಹೋಗಿದ್ದೇನೆ.

ಮತ್ತೆ, ಈ ಮೆಜೆಸ್ಟಿಕ್ ಏರಿಯಾದ ಅಂಗಡಿಗಳಲ್ಲಿ ಏನನ್ನಾದರೂ ಕೊಳ್ಳುವಾಗ ಬಾರ್ಗೇನ್ ಮಾಡದೇ ಹೋದರೆ ನೀವು ಡಬಲ್ ರೇಟ್ ಕೊಟ್ಟು ಕೊಂಡಂತೆ! ಒಂದು ಬ್ಯಾಗಿಗೆ ಅಂಗಡಿಯವನು ನಾಲ್ಕುನೂರು ರೂಪಾಯಿ ಹೇಳಿದನೆಂದರೆ ನೀವು ನೂರಾ ಎಂಭತ್ತರಿಂದ ಶುರು ಮಾಡಬೇಕು. ಆಗ ಅದು ಇನ್ನೂರಕ್ಕೆ ಬಂದು ನಿಲ್ಲುತ್ತೆ.

ಬಹುಶಃ ’ವ್ಯಾಪಾರದ ಕಲೆ’ ಕಲಿಯುವುದಕ್ಕೆ ಮೆಜೆಸ್ಟಿಕ್ಕು ಒಳ್ಳೆಯ ಶಾಲೆ.

ವಿ.ರಾ.ಹೆ. ಹೇಳಿದರು...

good awareness.

ಆದ್ರೂ 10 rupayi soxu ಇನ್ನೇನ್ ಒಂದು ವರ್ಷ ಬಾಳಿಕೆ ಬರಕ್ಕೆ ಸಾಧ್ಯನೆನ್ರಿ? :)

sunaath ಹೇಳಿದರು...

ಅಯ್ಯೋ, ಈ ಮೆಜಸ್ಟಿಕ್ ಅಂಗಡಿಯವರು ನಿಮ್ಮನ್ನು ಬಕರಾ ಮಾಡೋದಷ್ಟೇ ಅಲ್ಲ, ನಿಮ್ಮನ್ನು ಬಕರಾಗಳಷ್ಟೇ ಕೀಳಾಗಿ ಟ್ರೀಟ್ ಮಾಡುತ್ತಾರೆ!

Ittigecement ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Ittigecement ಹೇಳಿದರು...

ಶ್ರೀನಿಧಿ...

ಈ ಥರಹದ ಜನರನ್ನು ನಾನು ಗಮನಿಸಿದ್ದೇನೆ....

ಹಾಗೆ "prostitutions" ಸಹ..
ಮರ್ಯಾದಸ್ಥರು ಅಲ್ಲಿ ನಿಲ್ಲುವಹಾಗಿಲ್ಲ...

ಇದೆಲ್ಲ ನಿಲ್ಲ ಬೇಕು..

ನಿಮ್ಮ ಬರವಣಿಗೆ ಇಷ್ಟವಾಯಿತು...

ಅಭಿನಂದನೆಗಳು...

Parisarapremi ಹೇಳಿದರು...

ಏಸ್.. ಥಾಡೀಫಾಯ್... ಥಾಡೀಫಾಯ್.. ಆಹ್.. ಎಷ್ಟು ಇಂಪಾಗಿದೆ ಈ ಶಬ್ದ!!! ನಂಗೆ ಸಕ್ಕತ್ ಇಷ್ಟ ಕೇಳೋಕೆ! ಮೆಜೆಸ್ಟಿಕ್ಕಿನಲ್ಲಿ ಇದಕ್ಕೆ ಏನೂ ಬರವಿಲ್ಲ.

ಮೋಸ ಮಾಡುವುದು ಬರೀ ಜರ್ಕಿನ್ನು ಸಾಕ್ಸುಗಳಲ್ಲಲ್ಲ.. ಟಾರ್ಚು, ಸೋಪು, ಪುಸ್ತಕ, ಸಿ.ಡಿ., ಔಷಧಿ, ಪೆನ್ನು, ಪ್ಯಾಂಟು, ಲಾಡ್ಜು - ಮೋಸದ ಪ್ರಾಡಕ್ಟುಗಳು ಒಂದೇ ಎರಡೇ!! ಡಾಕ್ಟರುಗಳು ಕೂಡ ಇದ್ದಾರೆ ಕಣಪ್ಪೋ!!!

ಇರಲಿ, ಏನೇ ಆದ್ರೂ ಬೆಂಗಳೂರಿನಲ್ಲಿ ಇರುವ ಎಲ್ಲ ಜಾಗಗಳಿಗಿಂತಲೂ ನನಗೆ ಮೆಜೆಸ್ಟಿಕ್ ಬಸ್ ನಿಲ್ದಾಣ ಅತ್ಯಂತ ಪ್ರಿಯವಾದ ಜಾಗ ಅಂತ ಈ ಸಂದರ್ಭದಲ್ಲಿ ಹೇಳೋಕೆ ಇಷ್ಟ ಪಡ್ತೀನಿ. :-)

Keshav.Kulkarni ಹೇಳಿದರು...

ಇದು ವ್ಯಾಪಾರ! ಎಂದೂ ತಾನು ಜಹಿರಾತು ನೀಡುವ ಸಾಬೂನಿನ ವಾಸನೆ ಕೂಡ ನೋಡಿರದ ತಾರೆ ಅದನ್ನು ಮೂಸಿದಂತೆ ಮಾಡುತ್ತ ನೀರಿನಲ್ಲಿ ಇಳಿದಾಗ, "ಈ ತಾರೆಯ ಸೌಂದರ್ಯದ ಗುಟ್ಟು .... ಸೋಪು" ಎಂದಾಗ ಒಂದು ಕ್ಷಣ ಮೈ ಝುಂ ಎಂದು, ಅಂಗಡಿಗೆ ಹೋಗಿ ಆ ಸೋಪು ಕೊಳ್ಳುವುದಕ್ಕೂ ಈ ಮೆಜೆಸ್ಟಿಕ್ ವ್ಯವಹಾರಕ್ಕೂ ಹೆಚ್ಚಿನ ವ್ಯತ್ಯಾಸವೇನಿಲ್ಲ; ಮೆಜಸ್ಟಿಕ್ ವ್ಯಾಪಾರಸ್ಥನ ಲಾಭ ೧೦೦% ಇದ್ದರೆ, ಆ ಸೋಪಿನ ಕಂಪನಿಯ ಲಾಭ ೪೦೦% ಇರುತ್ತೆ, ಅಷ್ಟೇ! ಆದರೂ ನಾವು ಕೊನೆಗೆ ಬಯ್ಯುವುದು ಈ ಮೆಜೆಸ್ಟಿಕ್‍ನವನನ್ನೇ! Sorry, I am just playing Devil's advocate here, LOL!

-ಕೇಶವ (www.kannada-nudi.blogspot.com)

Hema Powar ಹೇಳಿದರು...

ಒಳ್ಳೆ ಲೇಖನ! ಮೆಜೆಸ್ಟಿಕ್ ಮೋಸಗಳು ನಮ್ಮ ಜನಕ್ಕೆ ಒಗ್ಗಿ ಹೋಗಿದೆ, ಹೀಗಾಗಿ ಅಲ್ಲಿ ಮೋಸಹೋದವರೆ ಬೆಪ್ಪುತಕ್ಕಡಿಗಳು!!! ಏಕೆಂದರೆ ಭೂತಗನ್ನಡಿ ಹಾಕಿಕೊಂಡು ಹುಡುಕಿದರೂ, ನಿಮ್ಮನ್ನು ಬಕರ ಮಾಡಿದ ವ್ಯಕ್ತಿ ಇಡೀ ಮೆಜೆಸ್ಟಿಕ್ನಲ್ಲಿ ಮತ್ತೆ ಸಿಗಲಾರ!

ಅನಾಮಧೇಯ ಹೇಳಿದರು...

ಕೇವಲ 'Adidas' ಅಥವಾ 'Reebok' ಅಂತ print ಮಾಡೋದಕ್ಕೆ ಸಾವಿರಾರು ರೂಪಾಯಿ ಸುರಿಯುವ ನಾವು, ರಸ್ತೆ ಬದಿಯಲ್ಲಿ ಮಾರಾಟ ಮಾಡುವವರಿಗೆ 50-100 ರೂಪಾಯಿ ಕೊಡುವಲ್ಲಿ ಯಾಕೆ ಅಷ್ಟೊಂದು ಯೋಚನೆ ಮಾಡುತ್ತೇವೆ ಅಂತ ಇದುವರೆಗೆ ನನಗೆ ಗೊತ್ತಾಗಿಲ್ಲ! ಈಗ ಪರಿಸ್ಥಿತಿ ಹೇಗಾಗಿದೆ ಎಂದರೆ ಅವರು ಎಷ್ಟೇ ಒಳ್ಳೆಯ ಮಾಲು ಕೊಡಲಿ, ಅದನ್ನು ಅನುಮಾನದ ದೃಷ್ಟಿಯಿಂದಲೇ ನೋಡುತ್ತೇವೆ, ಎಷ್ಟೇ ಕಡಿಮೆ ದುಡ್ಡು ಹೇಳಲಿ ಇನ್ನೂ ಕಡಿಮೆಗೆ ಕೇಳುತ್ತೇವೆಯೇ ಹೊರತು ಅವರ ಹೊಟ್ಟೆಪಾಡಿನ ಕುರಿತು ಒಂಚೂರೂ ಯೋಚನೆ ಮಾಡುವಿದಿಲ್ಲ. ಅಲ್ಲವೇ ನೀವೇ ಹೇಳಿ.
ನನ್ನ ಒಂದು ಅನುಭವ ಹೇಳಬೇಕೆಂದರೆ majestic ನಲ್ಲಿ 100ರೂ ಕೊಟ್ಟ ಚಪ್ಪಲಿ bata showroom ಅಲ್ಲಿ ಕೊಂಡ 750ರೂ ಚಪ್ಪಲಿಗಿಂತ ಹೆಚ್ಚು ಸಮಯ ಬಾಳಿಕೆ ಬಂತು!

PrashanthKannadaBlog ಹೇಳಿದರು...

ಯಾವತ್ತಾದರು ರಾತ್ರಿ ಮೆಜೆಸ್ಟಿಕ್ ಗೆ ಹೋಗಿ ನೋಡಿ. ಜೀವನದಲ್ಲಿ ಕಷ್ಟ ಎಂದರೇನೆಂದು ಅನುಭವವಾಗುತ್ತದೆ. ದೇವರು ನಮಗೆ ಎಲ್ಲಾ ಕೊಟ್ಟಿದ್ದಾನೆ ಇನ್ನೇನು ಬೇಡ ಅನಿಸಿದರೆ ಆಶ್ಚರ್ಯವಿಲ್ಲ.