ಗುರುವಾರ, ಫೆಬ್ರವರಿ 26, 2009

ರಾಧಾಸ್ವಗತ

ಕೊಳಲ ಮಾಂತ್ರಿಕನವನು ನವಿಲುಗಣ್ಣಿನ ಚೆಲುವ
ಎಲ್ಲಿಹನು ಯಾಕಿನ್ನು ಬಂದಿಲ್ಲವಲ್ಲ,
ನನ್ನ ಕಾಡುವುದವಗೆ ಸಂತಸದ ಕೆಲಸವು
ಉದ್ಧಾರವಾಗನಿವ ತುಂಟ ಗೊಲ್ಲ

ಅಲ್ಲೆಲ್ಲೋ ದೂರದಲಿ ಮುರುಳಿಗಾನದ ತಾನ
ಬರುತಿಹನೆ ಇತ್ತಕಡೆ ಗಿರಿಧಾರಿಯು?
ಮರಹೂವ ಹಾಸಿಗೆಯು,ಸ್ವಾಗತಕೆ ಸಿದ್ಧವಿದೆ
ಕಾತರದಿ ಕಾಯುತಿದೆ ವನದಾರಿಯು

ಘಳಿಗೆಗಳು ಕಳೆದರೂ, ಶ್ಯಾಮನಾ ಸುಳಿವಿಲ್ಲ
ನನಗೇತಕೋ ಇಂದು ಭ್ರಮೆಯಾಗಿದೆ
ಬಿದಿರ ಮೆಳೆಗಳ ಮಧ್ಯೆ ಗಾಳಿ ಸುಳಿದರು ಕೂಡ
ಮೋಹನನು ಕರೆದಂತೆ ಕೇಳಿಸುತಿದೆ

ಯಾವ ಗೋಪಿಕೆಯ ಜೊತೆ ಲಲ್ಲೆ ಹೊಡೆಯುತಲಿಹನೋ
ನನ್ನ ನೆನಪೇ ಇಲ್ಲ, ಕಳ್ಳನವನು
ಮತ್ತೆ ಮೆಲ್ಲನೆ ಬಂದು ನನ್ನ ಬಳಸುತ ನಿಂದು
ಏನೇನೋ ಕಥೆ ಹೇಳಿ ಮರುಳು ಮಾಡುವನು

ಗೋಪಾದಗಳ ಜೊತೆಗೆ ಗೋಪಾಲಾನ ಹೆಜ್ಜೆ
ಹುಡುಕುವುದದೆಂತು ಈ ನೀಲಮೊಗದವನ
ಯಾವ ಗಿರಿ ಕಂದರವೋ, ಹಸಿರ ಹಾಸಿನ ಬಯಲೋ,
ಇದ್ದಲ್ಲಿ ಇರಲಾರ, ಮಿಗದ ಚಲನ!

ಅಗೋ,ಅಲ್ಲಿ ಬಯಲೊಳಗೆ ನಿಂತಿಹನು ಚೆಲ್ವ ಸಖ
ಪುಟ್ಟ ಕರುವಿನ ಕುಣಿತ ಅವನ ಮುಂದೆ
ಸಂಜೆಗೆಂಪಾಗುತಿರೆ, ಬಾನುರಂಗೇರುತಿದೆ
ವನಮಾಲಿಯಾ ಹಿಂದೆ, ದನದ ಮಂದೆ

10 ಕಾಮೆಂಟ್‌ಗಳು:

ತೇಜಸ್ವಿನಿ ಹೆಗಡೆ ಹೇಳಿದರು...

ಶ್ರೀನಿಧಿ,

ರಾಧೆಯ ಸ್ವಗತ ಬಹಳ ಚೆನ್ನಾಗಿದೆ. ಕವನದ ಲಾಲಿತ್ಯ ಮನಸೂರೆಗೊಂಡಿತು. ಹಾಡಿಕೊಳ್ಳುವಂತಿದೆ ಕವನ.

ಜಿ ಎನ್ ಮೋಹನ್ ಹೇಳಿದರು...

chennaagide.

Ittigecement ಹೇಳಿದರು...

ಶ್ರೀನಿಧಿ..

ಬಹಳ ಇಷ್ಟವಾಯಿತು...

sunaath ಹೇಳಿದರು...

ನವೋದಯ ಗೀತೆಗಳ ಕಾಲ ಮುಗಿಯಿತೇನೊ ಎಂದು ಹೆದರಿಕೊಳ್ಳುತ್ತಿರುವಾಗ, ನಿಮ್ಮ
ಸುಂದರವಾದ ಕವನಗಳು ಹೊಸ ಭರವಸೆ ಹುಟ್ಟಿಸುತ್ತಿವೆ.

Greeshma ಹೇಳಿದರು...

ಚೆನಾಗ್ ಆಯ್ದು. ಅದೇನು? ಈಗ ರಾಧೆ ನೆನಪಾಗಿದ್ದು?

Srikanth - ಶ್ರೀಕಾಂತ ಹೇಳಿದರು...

bombaaT!!

ಶ್ರೀನಿಧಿ.ಡಿ.ಎಸ್ ಹೇಳಿದರು...

ಅತ್ಗೇ,

ನಾನು ಕವನ ಬರೆವಾಗ, ಗೇಯತೆ ಬಗ್ಗೆ ಹೆಚ್ಚಿನ ಗಮನ ಇರ್ತು..

ಮೋಹನ್ ಸರ್,
ಧನ್ಯ:)

ಪ್ರಕಾಶ್,
ಥ್ಯಾಂಕ್ಸು!

ಸುನಾಥ್ ಕಾಕಾ,
ಏನೋಪಾ! ಹೀಂಗೆಲ್ಲ ಹೇಳಿದ್ರೆ ಒಂಥರಾ ಹೆದ್ರಿಕೆ..

ಗ್ರೀಷ್ಮಾ,
ಹೀಂಗೇ ಸುಮ್ನೆ! ಎಂಥಾರು ನೆನ್ಪಾಯಕಾತಲೇ..

ಶ್ರೀಕಾಂತ್!
:೦

Annapoorna Daithota ಹೇಳಿದರು...

ಸುಂದರವಾಗಿದೆ.

ಸುಪ್ತದೀಪ್ತಿ suptadeepti ಹೇಳಿದರು...

ಶ್ರೀನಿಧಿ,
ಕೆಲವಾರು ದಿನ ನಾನು ಇತ್ತ ಬಂದಿರಲಿಲ್ಲ
ಆಗಲೇ ಎಷ್ಟೆಲ್ಲ ಸಂದಿಹುದು ಇಲ್ಲಿ
ಮೋಹನಗೆ ಮರುಳಾದ ರಾಧೆಯ ಮನಸಿದನು
ಸೊಗಸಾಗಿ ತಂದಿರುವೆ ಈ ಕವನದಲ್ಲಿ

ಶ್ರೀನಿಧಿ.ಡಿ.ಎಸ್ ಹೇಳಿದರು...

ಅನಕ್ಕಾ,

ಥ್ಯಾಂಕ್ಸು,

ಜ್ಯೋತೀಜೀ,

ಆಹಾ!:) ಕವನಕ್ಕೇ ಕವನ!