ಭಾನುವಾರ, ಆಗಸ್ಟ್ 16, 2009

ಅಜ್ಜನಂಗಿ ತೊಟ್ಟ ಮೊಮ್ಮಗು..

ತೋಡು. ಹೀಗಂದರೆ ಮಲೆನಾಡಿನ ಕಡೆಯವರಿಗೆ ಹಂಡೆ ನೆನಪಾಗುತ್ತದೆ.ಹಂಡೆಯಿಂದ ಬಿಸಿ ಬಿಸಿ ನೀರೆತ್ತಿ ಬಾನಿಗೋ,ಬಕೇಟಿಗೋ ಬೆರೆಸುವುದು ನೆನಪಾಗುತ್ತದೆ. ನೀರ್ ತೋಡ್ಕ್ಯಂಡು ಸ್ನಾನಾ ಮಾಡಾ ಅಪೀ, ಬಿಸೀ ಇದ್ದು ನೀರು ಅಂತ ಅಮ್ಮ ಒಳಗೆಲ್ಲೋ ಅಡಿಗೆಮನೆಯಿಂದ ಕೂಗುವುದು ಕಿವಿಯೊಳಗೆ ಕೇಳಿಸಿದಂತಾಗುತ್ತದೆ. ಅದರೆ ಇಲ್ಲಿ ಹೇಳುತ್ತಿರುವ ತೋಡು,ದಕ್ಷಿಣ ಕನ್ನಡದ್ದು. ಪಕ್ಕಾ ತುಳುಭಾಷೆಯಿಂದ ಎತ್ತಿಕೊಂಡಿದ್ದು.

ತೋಡು ಎಂದರೆ ಹಳ್ಳ. ಪುಟ್ಟ ನೀರ ಹರಿವು. ಝರಿ. ಝರಿ ಎನ್ನುವುದಕ್ಕಿಂತ, ನೀರದಾರಿ ಎನ್ನಬಹುದೇನೋ. ಮಳೆಗಾಲದಲ್ಲಿ ಮಾತ್ರ ಎಲ್ಲೆಲ್ಲೆಂದಲೋ ಬರುವ ಜಲದ ಬಲಗಳಿಗೆ, ಗಮ್ಯದ ಸರಿದಾರಿ ತೋರೋ ಮೊದಲ ಕ್ರಾಸು. ದೂರ ನೀರಯಾನದ ಮೊದಲ ಕೊಂಡಿ. ಬೆಟ್ಟದೆಲೆಗೂ ಸಾಗರದ ಹರವು ತೋರಿಸುವ ಪುಣ್ಯಪಥ. ಮಳೆ ಗಾಳಿಗೆ ಮುರಿದು ಬಿದ್ದ ಹೂವ ಗೊಂಚಲನ್ನೂ ಸಮಾಧಾನ ಮಾಡಿ ಎತ್ತಿಕೊಂಡು ಸಾಗುವ ಜಲರಥ.

ಬೇಸಿಗೆಯಿಡೀ ಈ ನೀರ ದಾರಿಗಳು, ತಮ್ಮ ಇರವಿನ ಅರಿವು ಯಾರಿಗೂ ಅಗದಂತೆ ಜಡವಾಗಿ ಬಿದ್ದುಕೊಂಡಿರುತ್ತವೆ. ಹಾಡಿಯ ಬೈತಲೆ ತೆಗೆದು ಕೆಳಗೆ ಗದ್ದೆ ಸಾಗಿರುವ ಸಣ್ಣ ದಾರಿ, ಮಳೆಗಾಲದಲ್ಲಿ ಪುಟ್ಟ ಜಲಪಾತದಂತೆ ಕಾಣುತ್ತದೆ ಎಂದು ಯಾರೆಣಿಸಿಯಾರು? ತೆಂಗಿನ ತೋಟದೊಳಗಿನ, ಇಲಿ ತೂತು ಮಾಡಿರುವ ಬಾಡಿ ಬಿದ್ದಿರುವ ಎಳನೀರು ತುಂಬಿಕೊಂಡ ತೋಡು, ಮನೆ ಕೊಟ್ಟಿಗೆ ಪಕ್ಕದಲ್ಲಿ ಸಗಣಿನಾತ ಬೀರುತ್ತ ನಿಂತ ತೋಡು, ರಣರಣ ಬಿಸಿಲಲ್ಲಿ ಮರದ ಕೆಳಗೆ ಸಾಗಿ ಹೋಗಿ, ದೂರದಲ್ಲೆಲ್ಲೋ ಕರಗಿ ಹೋದಂತೆ ಕಾಣುವ ತೋಡು, ಕಾಲುದಾರಿಯ ಪಕ್ಕಕ್ಕೇ ಇದ್ದು, ಉದ್ದಕ್ಕೆ ಮಲಗಿರುವ ಹಾವೊಂದಕ್ಕೆ ತನ್ನೊಳಗೆ ಅಶ್ರಯ ಕೊಟ್ಟು, ಭುಸ್ ಅಂತ ಹೆದರಿಸುವ ತೋಡು-ಹೀಗೆ ಥರ ಥರ.

ಕಳೆದ ಮಳೆಋತುವಿನ ಪಳೆಯುಳಿಕೆಗಳನ್ನು ತಮ್ಮ ಒಡಲಲ್ಲಿ ತುಂಬಿಕೊಂಡು ಸುಮ್ಮಗೆ ಸತ್ತಂತಿರುವ ತೋಡುಗಳಿಗೆ, ಜೀವಸಂಚಾರವಾಗುವುದು ಮೊದಲೆರಡು ಮಳೆ ಬಂದ ಮೇಲೆ. ಬೆಂದನೆಲ ತಂಪುಗೊಂಡು , ಗುಡ್ಡ ಹಾಡಿಗಳಿಂದ, ಗದ್ದೆ ಬಯಲುಗಳಿಂದ ನೀರು ಹಳ್ಳಕಿಳಿಯಲು ಎರಡು ದೊಡ್ಡ ಮಳೆಯಾದರೂ ಬೇಕು. ಹದವಾಗಿ ಮಳೆ ಶುರುವಾಗುತ್ತಿದ್ದ ಹಾಗೆ, ಹಳ್ಳವೂ ಹದಗೊಳ್ಳುತ್ತದೆ. ಎರಡು ಭಾರೀ ಮಳೆ ಬಿದ್ದ ಬಳಿಕ ತೋಡಿನ ಹರಿವು ಸರಾಗ. ಬಿದಿರ ಮುಳ್ಳುಗಳು,ಬಾಟಲಿ ಚೂರುಗಳು ಇತ್ಯಾದಿ ನೀರಿನ ಹರಿವೊಳಗೆ ಕಳೆದು ಹೋದಮೇಲೆ ಹಳ್ಳಕ್ಕಿಳಿಯುವ ಧೈರ್ಯ.

ಶರಧಾರೆ ಜೋರಾದರೆ ಅಜ್ಜನಂಗಿ ತೊಟ್ಟಂತಹ ಮೊಮ್ಮಕ್ಕಳ ಸಂಭ್ರಮ ಹಳ್ಳಕ್ಕೆ. ತಮ್ಮ ಮಿತಿ ದಾಟಿ, ಅಗಲಗಲವಾಗಿ ಉಕ್ಕೇರಿ ಸಿಕ್ಕ ಅವಕಾಶಗಳನ್ನೂ ದಾಟಿ ಹರಿವ ಹುರುಪು.ಪಕ್ಕದ ಗದ್ದೆ ಬದುಗಳನ್ನು ಗುದ್ದಿ, ಕಾಲ್ದಾರಿಯನ್ನು ಸೀಳಿ,ಹೊಸ ದಿಕ್ಕಿಗೆ ಹೊರಳಿ, ತಗ್ಗುದಿಣ್ಣೆಗಳನ್ನು ಸಮಮಾಡಿ ಅದೆಲ್ಲಿಗೋ ಅವಸರವರಸವಾಗಿ ಹೊರಟಂತೆ ಕಾಣುವ ಹಳ್ಳಗಳ ಸೊಬಗು,ಅಹಾ.

ದಕ್ಷಿಣ ಕನ್ನಡದ ಹಲವೆಡೆ ಮಳೆಗಾಲ ಆರಂಭವಾಗಿ, ಇಂತಹ ಜೋರು ನೆರೆಯುಕ್ಕುವಂತಹ ಮಳೆ ಬರಲು ಶುರುವಾದರೆ ತೋಡಿನ ಬಳಿಯಲ್ಲಿ ಕೈಯಲ್ಲೊಂದು ಮಕ್ಕೇರಿ ಹಿಡಿದು ನಿಂತ ಪೋರರು, ಕೆಲಸವಿಲ್ಲದ ಮಧ್ಯವಯಸ್ಕರು ಕಂಡೇ ಕಾಣುತ್ತಾರೆ. ಮಕ್ಕೇರಿ ಎಂದರೆ, ಉದ್ದ ಬಿದಿರ ಕೋಲ ತುದಿಗೆ ಬಲೆಯಚೀಲ. ಧೋ ಎಂದು ಸುರಿಯುವ ಮಳೆಯೊಳಗೆ ಧ್ಯಾನಸ್ಥರಂತೆ ನಿಂತಿರುವ ಈ ಮಂದಿ ಸಟಕ್ಕನೆ ಮಕ್ಕೇರಿಯನ್ನ ಹಳ್ಳಕ್ಕೆ ತೂರಿಸಿ ಮೇಲೆತ್ತಿದರು ಅಂದರೆ ತೆಂಗಿನಕಾಯಿಯೊಂದು ಅದರೊಳಗೆ ಬಂಧಿಯಾಯಿತು ಎಂತಲೇ ಅರ್ಥ.ಮಳೆಗಾಲದ ಗಾಳಿಜೋರಿಗೆ ತೋಡಂಚಿನ ಮರಗಳಿಂದುದುರಿದ ಕಾಯಿಗಳು ದಿಕ್ಕುದೆಸೆಯಿಲ್ಲದೇ ತೇಲಿ ಬರುತ್ತಿದ್ದರೆ, ಇವರುಗಳಿಗೆ ಹಬ್ಬ.
ಒಳ್ಳೆಯ ಮಳೆ ಬಂದರೆ ಮಕ್ಕೇರಿ ಪಡೆ ದಿನವಿಡೀ ಕಾದು ನೂರು ತೆಂಗಿನಕಾಯಿಗಳವರೆಗೆ ಹಿಡಿದ ದಾಖಲೆಗಳೂ ಇವೆ. ಮೊಣಕಾಲು ದಾಟಿ ಬರುವ ನೀರಲ್ಲಿ ತೊಪ್ಪೆಯಾಗಿ ನಿಂತು, ಕೈಲೊಂದು ವಿಚಿತ್ರ ಹತಾರಿನೊಡನೆ ನಿಂತ ಇವರುಗಳನ್ನು ನೋಡಿದಾಗ, ಹಳ್ಳದೊಳಗಿಂದಲೇ ಅವಿರ್ಭವಿಸಿದ ಜಲಮಾನವರಂತೆ ಕಾಣುತ್ತಿರುತ್ತಾರೆ.

ಕೇವಲ ತೆಂಗಿನಕಾಯೊಂದೇ ಹರಿದುಬರುವುದಿಲ್ಲ ಈ ಮಳೆಯೊಳಗೆ. ಇನ್ನೂ ಎಂಥೆಂಥ ಅಚ್ಚರಿಗಳು ಕೂಡ. ಬೇಸಿಗೆಯಲ್ಲಿ ಗುಡ್ಡದ ಮೇಲಿನ ಬಯಲಲ್ಲಿ ಕ್ರಿಕೆಟ್ ಅಡುವಾಗ, ತಾನೇ ಸಿಕ್ಸರ್ ಹೊಡೆದು ಕಳೆದು ಹಾಕಿದ್ದ ಕೆಂಪು ಬಣ್ಣದ ಟೆನಿಸ್ ಚೆಂಡು, ಈಗೋ, ನನ್ನ ತೆಗೆದುಕೋ ಎಂಬಂತೆ ಕಾಲ ಬಳಿಯೇ ಸುಳಿದು ಬರುತ್ತದೆ. ಶೆಟ್ಟರ ತೋಟದ ಪೇರಲೆ ಹಣ್ಣು, ಬುಡಕಿತ್ತುಕೊಂಡೇ ಬಂದ ಅನಾನಸ್ಸು ಗಿಡ, ಹೀಗೆ.

ಮಳೆ ನಿಂತ ರಾತ್ರಿಗಳ ಜೀರುಂಡೆ ಸದ್ದಿನ ಕತ್ತಲಲ್ಲಿ ಕೆಲಬಾರಿ ಮನೆಗಳಿಂದ ದೂರದ ಗದ್ದೆಗಳಂಚಿನ ತೋಡಲ್ಲಿ ಕಥೆಗಳಲ್ಲಿ ಕೇಳಿದ ಮಾಯಾಜಗತ್ತಿನ ಪ್ರವೇಶ ದ್ವಾರದಂತಹ ಕೆಂಪುಕೆಂಪು ಬೆಳಕಸಾಲು ಕಾಣುತ್ತದೆ.ಹೊಸದಾಗಿ ಇವುಗಳನ್ನು ನೋಡುವವರು ತಮ್ಮೆಲ್ಲ ವೈಜ್ಞಾನಿಕ ತರ್ಕಗಳನ್ನು ಸಾರಾಸಗಟಾಗಿ ತಳ್ಳಿಹಾಕಿ, ಕೊಳ್ಳಿ ದೆವ್ವಗಳ ಇರವನ್ನು ಒಪ್ಪಿಕೊಂಡುಬಿಡುತ್ತಾರೆ. ಇಲ್ಲವಾದರೆ, ರಾತ್ರಿ ಹತ್ತರ ನಂತರದ ಗಾಢಾಂಧಕಾರದಲ್ಲಿ ವಿಶಾಲ ಬಯಲಿನ ಮಧ್ಯದ ಮರಗಳ ಮರೆಗಳಾಚೆ ಫಳಫಳ ಮಿನುಗುತ್ತ ಸಾಗುವ ತೇಜಪುಂಜಗಳಿಗೆ ಜಗತ್ತಿನ ಯಾವ ಸಿದ್ಧಾಂತ ಉತ್ತರ ಹೇಳೀತು?

ವಾಸ್ತವವಾಗಿ ಇವು ಏಡಿ ಹಿಡಿವ ತಂಡದ ಕರಾಮತ್ತು. ಸೂಟೆಸಾಲಿನ ಮಂದಿ, ಕಣ್ಣಿಗೆ ಕಾಣದ ಸಮಸ್ತ ಜೀವಜಾಲಗಳು ವಿಚಿತ್ರ ಸದ್ದು ಹೊರಡಿಸುತ್ತ ಬಿದ್ದುಕೊಂಡಿರುವ ರಾತ್ರಿಗಳಲ್ಲಿ ಹಳ್ಳಗಳಲ್ಲಿ ಓಡಾಡುವ ಏಡಿಗಳನ್ನು ಹಿಡಿಯಲು ಹೊರಡುತ್ತಾರೆ. ಕೈಲಿ ಕತ್ತಿ ಹಿಡಿದವರೊಂದಿಷ್ಟಾದರೆ, ಅವರಿಗೆ ಒಣತೆಂಗಿನ ಮಡಲು ಸುತ್ತಿದ ಸೂಟೆಗಳ ಬೆಳಕು ತೋರಲು ಮತ್ತಷ್ಟು ಜನ. ಸಳ ಸಳ ಸದ್ದು ಮಾಡುತ್ತ ಸಾಗುವ ನೀರಿಳಿದ ತೋಡಿನಲ್ಲಿ ಚಕಚಕನೋಡುವ ಏಡಿಗಳನ್ನು ಕತ್ತಿಯಲ್ಲಿ ಕುಕ್ಕಿ, ಕೊಂಬುಮುರಿದು ಬುಟ್ಟಿ ತುಂಬುತ್ತ ಸಾಗುತ್ತಾರೆ.ಮಾರನೇ ದಿನದ ವರ್ಷಧಾರೆಯ ಜೊತೆಗಿನ ಬಿಸಿಬಿಸಿ ಮನೆಯೂಟಕ್ಕೆ, ಏಡಿ ಕಜ್ಜಾಯ.

ಮಳೆಗಾಲದ ಬಣ್ಣದವೇಷ ಮುಗಿಯುತ್ತಿದ್ದ ಹಾಗೆ, ಹಳ್ಳ ಶುಭ್ರ. ಕೆಂಪು ನೀರೆಲ್ಲ ಹಣಿದು ತೋಡಿನ ತಳ ಕಾಣುವ ಸ್ವಚ್ಛ ನೀರಿನ ಹರಿವು ಅರಂಭ. ಬಿಸಿಲಕಿರಣಗಳ ಹೊಳಪಿಗೆ ಹಳ್ಳ ಕೂಡ ಮೈಯೊಡ್ಡಿ ಬೆಚ್ಚಗಾಗುತ್ತದೆ. ಅದೆಲ್ಲಿಂದ ಹುಟ್ಟಿ ಬರುತ್ತವೋ, ಮೀನುಗಳ ಸಾಲು ಸಾಲು ನೀರೊಳಗೆ ಯಾತ್ರೆ ಹೊರಟಿರುತ್ತವೆ. ಹುಡುಗು ಜಾತಿ, ಒಂದಿಷ್ಟು ಸಣ್ಣ ಸಣ್ಣ ಮೀನುಗಳನ್ನು ಅದು ಹೇಗಾದರೂ ಹಿಡಿದು ಮನೆಬಾವಿಗಳಿಗೆ ಬಿಡುವುದೂ ಉಂಟು,ಅಪ್ಪ ಅಮ್ಮಂದಿರ ಬೈಗುಳಗಳಿಗೂ ಬೆಲೆ ಕೊಡದೆ. ಕೆಲ ಬಾರಿ ಮೀನ ಜೊತೆ ಬಂಪರ್ ಬಹುಮಾನವಾಗಿ ಅಮೆ ಕೂಡ ಸಿಗುತ್ತದೆ ಇಲ್ಲಿ. ಅದೂ ಕೂಡ ಸೀದಾ ಬಾವಿಗೇ.

ಇಂತಹ ತೋಡುಗಳ ಪಕ್ಕದಲ್ಲಿ ನಾಲ್ಕೆಂಟು ಮಳೆಯಾಗುತ್ತಿದ್ದ ಹಾಗೆ ಯಾವು ಯಾವುದೋ ತೆರನಾದ ನೆಲಹೂ ಗಿಡಗಳ ಹಿಗ್ಗು. ಕೆಂಪು, ಹಳದಿ , ಬಿಳಿಯ ಸಾಸಿವೆ ಕಾಳಿನಾಕೃತಿಯಿಂದ ತೊಡಗಿ ಅಂಗೈ ಅಗಲದವರೆಗಿನ ಸೊಬಗುಗಳ ವರ್ಣಜಾತ್ರೆ. ಹಳ್ಳದಂಡೆಯಲ್ಲೇ ಇಡೀ ಚಳಿಗಾಲ ಬೇಸಿಗೆಗಳಲ್ಲಿ ಹುದುಗಿದ್ದ ಗಡ್ಡೆಗಳು ಜೀವತಾಳಿ,ಮೊಳಕೆ ಬಂದು ಹೂಬಿಟ್ಟು ತೋಡಂಚು ಹೂದೋಟವಾಗಿ ಬಿಡುತ್ತವೆ. ಯಾವ ದೇವರ ಮುಡಿಗೂ ಕೀಳಲ್ಪಡದ ಪುಣ್ಯ ಇವಕ್ಕೆ. ಮಳೆ ಕಡಿಮೆಯಾಗುತ್ತಿದ್ದ ಹಾಗೆ ಭೂದೇವಿಗೇ ಅರ್ಪಣೆಗೊಳ್ಳುವ ಈ ಕುಸುಮಗಳು ಮತ್ತೆ ಕಾಣಿಸಿಕೊಳ್ಳುವುದು ಮುಂದಿನ ಮಳೆಮಾಸದಲ್ಲೇ.

ಮಳೆ ಕಡಿಮೆಯಾಗಿ ಸೆಪ್ಟೆಂಬರ್ ಮುಗಿಯುತ್ತಿದ್ದ ಹಾಗೆ ಗದ್ದೆಗಳಿಗೆ ನೀರುಣಿಸುವ ಕೆಲಸವೂ ಈ ಹಳ್ಳಗಳದು. ಪುಟ್ಟ ಕಲ್ಲು- ಕಸಗಳನ್ನು ಅಡ್ಡಕಟ್ಟಿ ಗದ್ದೆಗೆ ಹರಿವು ತಿರುಗಿಸಿದರೆ, ಬಲಿಯುತ್ತಿರುವ ಭತ್ತದ ತೆನೆಗಳ ಬುಡಕ್ಕೆ ಸಾಗಿಹೋಗಿ ಅವುಗಳನ್ನು ತಂಪು ಮಾಡುತ್ತದೆ ತೋಡಿನ ನೀರು. ತನ್ನೊಳಗಿನ ಕೊನೆಯ ಹನಿಯನ್ನೂ ಕೂಡ ಗದ್ದೆಗೆ ಬಸಿದ ಮೇಲೆ ತೋಡು ಅಂತರ್ಧಾನ. ಅಮೇಲೆ, ಇದ್ದರೂ ಇಲ್ಲದ ಹಾಗಿನ ಕಷ್ಟ. ಮರಳಿ ಮಳೆಗಾಲಕ್ಕೆ ಕಾಯುತ್ತ ತಟುಕು ಹನಿಗಳು ಮತ್ತೆ ಮೈಯ ಮುಟ್ಟುವವರೆಗೆ ಸುತ್ತಲಿನ ಹಸಿರಿಗೆ ಉತ್ತರವಾಗಿ ಮಲಗಿರುತ್ತವೆ, ಈ ಚಿರಂಜೀವಿ ಹಳ್ಳಗಳು.

(ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟಿತ )

10 ಕಾಮೆಂಟ್‌ಗಳು:

ಸುಪ್ತದೀಪ್ತಿ ಹೇಳಿದರು...

ನಿಧಿ, ಸುಂದರ ಲೇಖನ. ನಾಸ್ಟಾಲ್ಜಿಯಾ ಅಂಟಿಸಿತು ನನಗೆ.

ತೋಡುಗಳ ಈ ಅಸ್ಖಲಿತ ಚಿತ್ರಣದಲ್ಲಿ ಆಗಸ್ಟ್-ಸೆಪ್ಟೆಂಬರಿನಲ್ಲಿ ಮಳೆ ಕಡಿಮೆಯಾದ ಹೊತ್ತಿನಲ್ಲಿ ಬುಟ್ಟಿತುಂಬ ಬಟ್ಟೆರಾಶಿ ಹೊತ್ತು ತಂದು ತೋಡುನೀರಿನಲ್ಲಿ ಒಗೆಯುವ ಬಾಲೆಯರನ್ನು ಮರೆತಿದ್ದೀ. ತೋಡಿನ ಹರಿವಿನ ಕಲರವಕ್ಕೆ ಸಾಟಿಯಾಗಿ ಅವರೆಲ್ಲರ ಕಿಲಕಿಲ- ನೋಡಿಲ್ಲ, ಕೇಳಿಲ್ಲ ಅನ್ನಬೇಡ.

ಅನಾಮಧೇಯ ಹೇಳಿದರು...

ನಮ್ಮಲ್ಲಿ ಈಗಲೂ ಮಳೆಯನ್ನು ಅಳೆಯುವುದು ತೋಡಿನಲ್ಲಿ ಎಷ್ಟು ನೀರಿದೆ ಎನ್ನುವುದರ ಆಧಾರದಲ್ಲಿ.
ಅಪ್ಪ ಹೇಳುದು "ಈ ವರ್ಷ ಮಳೆ ಕಡಮ್ಮೆ, ತೋಡಿಲಿ ನೀರೆ ಇಲ್ಲೆ!"

sunaath ಹೇಳಿದರು...

ಶ್ರೀನಿಧಿ,
ಮಳೆಗಾಲದ ಪರಿಸರದ ವರ್ಣನೆ ರಂಜನೀಯವಾಗಿದೆ. ಸುಪ್ತದೀಪ್ತಿಯವರು ಅದಕ್ಕೆ ಜೋಡಿಸಿದ ಬಾಲವೂ ಸಹ ಸೊಗಸಾಗಿದೆ!

Parisarapremi ಹೇಳಿದರು...

ಒಳ್ಳೇ ತೋಡು. ನಂಗೆ ಪರೀಣಿತಾ ಪಿಚ್ಚರ್ ನೆನಪಾಗುತ್ತೆ ತೋಡು ಎಂದರೆ.

Parisarapremi ಹೇಳಿದರು...

vi.soo: word verification ge "gobad" antha bandittu.

Arun ಹೇಳಿದರು...

Just install Add-Kannada widget on your blog/ website, Then u can easily submit your pages to all top Kannada Social bookmarking and networking sites.

Kannada bookmarking and social networking sites give more visitors than if we submit our articles on reddit.com or digg ..etc because naturally of their content specific.

Click here for Install Add-Kannada widget

Sree ಹೇಳಿದರು...

sikkaapaTTe chennaagide bardiro shaili! u just rock wt essays! u must write more of the kind...

ಶ್ರೀನಿಧಿ.ಡಿ.ಎಸ್ ಹೇಳಿದರು...

ಪ್ರತಿಕ್ರಿಯೆಗೆ ವಂದನೆಗಳು. ಜ್ಯೋತಿ ಮೇಡಮ್, ಹೌದು, ಮರೆತೇ ಬಿಟ್ಟಿದ್ದೆ ಆ ವಿಶ್ಯನ!:)
ಜ್ಯೋತಿ, ಮೊನ್ನೆ ಮನೆಗೆ ಹೋದಾಗಲೂ ಇದೇ ಮಾತು ಕೇಳಿಬಂತು..

ಸುನಾಥ ಕಾಕಾ, ವಂದೇ.

ಅರುಣಾ, ನಿನ್ನನ್ನ...

ಶ್ರೀ, ಬ್ಯಾಡ ಕಣ್ರೀ!:)

Sree ಹೇಳಿದರು...

ಏನಪ್ಪಾ ಬ್ಯಾಡ???:)ಚೆನ್ನಾಗ್ ಬರ್ಯೋವ್ರು ಇನ್ನೊಂದಷ್ಟ್ ಬರೀಲಿ ಅಂದ್ರೆ ತೆಪ್ಪಾ?!

Unknown ಹೇಳಿದರು...

"""""" ರಂಜನೀಯವಾಗಿದೆ """""""