ಮಂಗಳವಾರ, ಅಕ್ಟೋಬರ್ 19, 2010

ಬದುಕೆಂಬ ರಂಗೋಲಿ

ಉಷೆಯೆದ್ದು ನಸುಕಿನಲಿ,
ಮಂಜಿನಲಿ ಮುಖ ತೊಳೆದು
ಭ್ರೂ ಮಧ್ಯದಲಿ ರವಿಯ ಸಿಂಧೂರವಿಟ್ಟು
ಬಣ್ಣದಾ ಬಟ್ಟಲನು ಕೈಗಳಲಿ ಹಿಡಿದು
ನಗುಮೊಗದಿ ಬಂದಿಹಳು ಜಗದ ಹೆಬ್ಬಾಗಿಲಿಗೆ
ಚಿತ್ತ ಭಿತ್ತಿಯ ಮೇಲೆ ಚಿತ್ತಾರವಿಡಲು

ಎಳೆದಂತೆ ಆಕೃತಿಯು
ಜೀವಿಗಳೆ ಚುಕ್ಕಿಗಳು, ಅನುರಾಗದೆಳೆ ಎಳೆಯು
ನೂರಾರು ಚುಕ್ಕೆಗಳ ಮಧ್ಯೆ ಹೊಳಪಿನ ಚುಕ್ಕಿ
ಸೊಗಸಾಗಿ ರಚಿಸುವಳು ಚುಕ್ಕೆಗಳ ಬಳ ಬಳನೆ
ಎಳೆಯಾಯ್ತು ಚಿತ್ತಾರ ಬಂಧಾನುಬಂಧ

ಚಿತ್ರ ಮುಗಿದರೂ ಮತ್ತೆ,
ಹೊರಗೆ ಕೆಲ ಚುಕ್ಕಿಗಳು
ಸುತ್ತಿ ಎಳೆಯುತ ಬಂಧ ಬರೆವ ಸಡಗರದಲ್ಲಿ
ಇಟ್ಟ ಚುಕ್ಕೆಯ ಇವಳು ಮರೆತಿಹಳೋ ಎಂತೋ ?
ಇಟ್ಟು ಚುಕ್ಕಿಯ, ಮತ್ತೆ ಬಿಟ್ಟಿದ್ದು ಏಕೋ ?
ಚಿತ್ರವಾಗದ ಚುಕ್ಕಿ ಇಟ್ಟಿದ್ದು ಹೇಗೋ ?

ಹೊರಗುಳಿದರೇನಾಯ್ತು
ಕಣ್ಣೆದುರು ಮಿಂಚುತಿದೆ
ಚಿತ್ತಾರಕೇಂದ್ರದೊಳು ನಿಂತ ಹೊಳೆ ಚುಕ್ಕೆ
ಎಳೆಗಳಾ ಬಂಧದಲಿ ನಗುವ ಬಿಂದು
ಹೆಬ್ಬಾಗಿಲಲಿ ನಿಂತು ಶುಭವ ಹಾರೈಸಿದರೆ
ತುಂಬು ಮನಸಿನ ಹರಕೆ ಕೇಳೀತು ಒಳಗೆ !


-ಭಾರತಿ ಹೆಗಡೆ, ಸಿದ್ದಾಪುರ
(ನಿಮ್ಮ ಅನಿಸಿಕೆಗಳನ್ನು ನನ್ನ ಅತ್ತೆಗೆ ತಲುಪಿಸಲಾಗುವುದು)

9 ಕಾಮೆಂಟ್‌ಗಳು:

ತೇಜಸ್ವಿನಿ ಹೆಗಡೆ ಹೇಳಿದರು...

ತುಂಬಾ ಚೆನ್ನಾಗಿದ್ದು ಕವನ. ಅದರಲ್ಲೂ ಮೊದಲ ಎರಡು ಪ್ಯಾರಾಗಳು ಮತ್ತೂ ಇಷ್ಟವಾದವು. (ತಲುಪ್ಸಲೆ ಮರ್ಯಡ:-))

sunaath ಹೇಳಿದರು...

ಈ ಕವನದಲ್ಲಿ ಅಡಕವಾದ ಮಂಗಳಭಾವನೆಯಿಂದ ಮನಸ್ಸು ತುಂಬಿ ಬಂದರೆ, ಕವನದ ಸಂಕೀರ್ಣ ಬಂಧವನ್ನು ಗಮನಿಸಿ ವಿಸ್ಮಯವೂ ಆಯಿತು. ನಿಮ್ಮ ಅತ್ತೆಯವರ ಕಾವ್ಯಶಕ್ತಿ ಹೆಚ್ಚಿನದು. ಅವರಿಗೆ ನನ್ನ್ನ ಅಭಿನಂದನೆಗಳು.
ಶ್ರೀನಿಧಿ,
ಇಲ್ಲೊಂದು ಜನಪ್ರಿಯ ಮಿಸ್ಟೇಕ್ ಆಗಿದೆ. ‘ಸಿಂಧೂರ’ ಎನ್ನುವ ಪದ ಸರಿಯಲ್ಲ. ಕುಂಕುಮಕ್ಕೆ ‘ಸಿಂದೂರ’ ಎನ್ನುವದು ಸರಿಯಾದದ್ದು.

sunaath ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ವಿ.ರಾ.ಹೆ. ಹೇಳಿದರು...

ninge bariyade martoyda entu?

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ಶ್ರೀನಿಧಿ...

" ಚಿತ್ರ ಮುಗಿದರೂ ಮತ್ತೆ,
ಹೊರಗೆ ಕೆಲ ಚುಕ್ಕಿಗಳು
ಸುತ್ತಿ ಎಳೆಯುತ ಬಂಧ ಬರೆವ ಸಡಗರದಲ್ಲಿ
ಇಟ್ಟ ಚುಕ್ಕೆಯ ಇವಳು ಮರೆತಿಹಳೋ ಎಂತೋ ?
ಇಟ್ಟು ಚುಕ್ಕಿಯ, ಮತ್ತೆ ಬಿಟ್ಟಿದ್ದು ಏಕೋ ?
ಚಿತ್ರವಾಗದ ಚುಕ್ಕಿ ಇಟ್ಟಿದ್ದು ಹೇಗೋ ?"

ಹೀಗೆಯೇ ಇಂಥದೇ ಎಲ್ಲ ಸಾಲುಗಳೂ ಇಷ್ಟವಾದ್ವು. ನೀ ಬರ್ದಿದ್ರೂ ಹಿಂಗೇ ಬರೀತಿದ್ದೆ ಅನ್ನಿಸ್ತು. ಬಲು ಇಷ್ಟವಾಯ್ತು.

ಮನಮುಕ್ತಾ ಹೇಳಿದರು...

ವಾಹ್! ಒಳ್ಳೆ ಕವನ.. ಹಿಡಿಸಿತು.

paapu paapa ಹೇಳಿದರು...

kavanada heading ishtavaayitu.



ondu vishaada geete -

badukemba rangoliyali
yaksha yakshiniyaru
taka taiya kuniyutirali
baduku mattoo yaksha prashneyaagali

Unknown ಹೇಳಿದರು...

ಬದುಕನ್ನು ರಂಗೋಲಿಗೆ ಹೋಲಿಸಿದ ನಿಮ್ಮ ಭಾವನೆ ಇಷ್ಟವಾಯಿತು.

Anuradha ಹೇಳಿದರು...

ನಮ್ಮ ತುಂಬು ಮನಸಿನ ಶುಭಾಶಯಗಳನ್ನು ಭಾರತಿ ಹೆಗ್ಡೆ ಅವರಿಗೆ ತಿಳಿಸಿ ..