ಅಖಂಡ ಇಪ್ಪತ್ತಾರು ವರ್ಷಗಳ ಕಾಲ ಬ್ರಹ್ಮಚಾರಿಯಾಗಿದ್ದ ನಾನು, ಇಪ್ಪತ್ತೇಳಕ್ಕೆ ಕಾಲಿಡುತ್ತಿದ್ದ ಹಾಗೆ ಮದುವೆಯಾಗಬೇಕಾಯಿತು. ಮೆಚ್ಚಿ ಮಾಡಿದ ಪ್ರೀತಿ, ಹೆತ್ತವರೊತ್ತಾಯ ಇದಕ್ಕೆ ಕಾರಣವಾದವು. ಒಪ್ಪಿಗೆ ಕೊಟ್ಟಿದ್ದೇ ತಡ, ಗಾಣಕ್ಕೆ ಸಿಕ್ಕ ಕಬ್ಬಿನಂತಾಯಿತು ನನ್ನ ಗತಿ. ಏನಕ್ಕೂ ನನ್ನನ್ನು ಕೇಳಲು ಹೋಗದೇ ಮನೆಮಂದಿ ವಿವಾಹದ ಕೆಲಸಗಳನ್ನು ಶುರುಮಾಡಿಕೊಂಡಿದ್ದರು. ನನಗೆ ಒಂದೆಡೆ ಹೊಸ ಜೀವನ ಆರಂಭವಾಗುವ ಖುಷಿ, ಇನ್ನೊಂದೆಡೆ ಕಣ್ಣೆದುರು ಜವಾಬ್ದಾರಿಗಳ ಬೆಟ್ಟ.
ನಾನು ಭಾವೀ ಪತ್ನಿ ಜೊತೆಗೂಡಿ ಮದುವೆಯಾಗಿ ಪಳಗಿರುವ ಸ್ನೇಹಿತರುಗಳ ಬಳಿ, ವಿವಾಹದ ಹಿಂದೆ-ಮುಂದೆ ಮಾಡಿಕೊಳ್ಳಬೇಕಾದ ತಯಾರಿಗಳ ಬಗ್ಗೆ ಕೋಚಿಂಗ್ ಕ್ಲಾಸುಗಳನ್ನು ತೆಗೆದುಕೊಂಡೆ. ಮನೆ-ಅಡ್ವಾನ್ಸು, ಚಿನ್ನ-ಬಟ್ಟೆ ಖರೀದಿಗಳ ಸಲಹೆ ನೀಡಿದ ನಂತರ ಎಲ್ಲ ಹೇಳಿದ್ದು ಒಂದೇ ಮಾತು, ಮದುವೆಗೆ ಕರಿಯೋದು ಇದೆ ನೋಡು, ಅದು ಅತ್ಯಂತ ಮುಖ್ಯ ವಿಚಾರ. ಎಲ್ಲರ ಅನುಭವಕ್ಕೂ ಜನ್ಯವಾಗಿದ್ದಿದ್ದು ಏನೆಂದರೆ ಏನೇ ಹೆಸರು ಬರೆದುಕೊಂಡರೂ, ಎಕ್ಸೆಲ್ ಶೀಟಲ್ಲಿ ಹೆಸರು ಟೈಪಿಸಿ ಪ್ರಿಂಟ್ ಔಟ್ ತೆಗೆದಿಟ್ಟುಕೊಂಡರೂ, ಹತ್ತಿರದ ಗೆಳೆಯನಿಗೋ, ಎಲ್ಲೋ ಇರುವ ಅತ್ತೆಯ ತಮ್ಮನ ಮಗನಿಗೋ ಕರೆಯೋಲೆ ತಲುಪಿರುವುದಿಲ್ಲ. ಅವರೋ ಅದಕ್ಕಾಗೇ ಯುಗಪರ್ಯಂತರ ಕಾದಿದ್ದು ಮುಂದೆಲ್ಲೋ ಸಿಕ್ಕಾಗ ನೀನು ಬಿಡಪ್ಪ ದೊಡ್ಡ ಮನುಷ್ಯ- ನಮ್ಮಂತಹ ಬಡಪಾಯಿಗಳು ಎಲ್ಲಿ ನೆನಪಿರುತ್ತಾರೆ. ನಮ್ಮನ್ನೆಲ್ಲಕರೀಬೇಕು ಅಂತಿಲ್ಲ ಬಿಡು, ನೀವು ದಂಪತಿ ಚೆನ್ನಾಗಿದ್ದೀರೋ, ಅಷ್ಟು ಸಾಕು ಎಂದು ಸಾರ್ವಜನಿಕವಾಗಿ ಹಾರೈಸಿ ಸೇಡು ತೀರಿಸಿಕೊಳ್ಳುತ್ತಾರೆ.
ಹೇಗೋ ಜೀವನ ಎಲ್ಲಾ ಕಷ್ಟಪಟ್ಟು ಗಳಿಸಿರುವ ಮರ್ಯಾದೆಯನ್ನು ಖಂಡಿತ ಹಾಳು ಮಾಡಿಕೊಳ್ಳಬಾರದು ಎಂದು ನಿಶ್ಚಯಿಸಿ, ಅದನ್ನ ಉಳಿಸಿಕೊಳ್ಳೋಕೆ ಹತ್ತು ರೂಪಾಯಿ ಕೊಟ್ಟು ನೋಟ್ ಬುಕ್ಕೊಂದನ್ನು ಖರೀದಿಸಿದೆ. ಯಾವುದಕ್ಕೂ ವಿಘ್ನ ಬರದಿರಲಿ ಎಂದು ಮೊದಲಿಗೊಂದು ಓಂ ಬರೆದು ಸಮಸ್ತ ಗೆಳೆಯರ, ಸಂಬಂಧಿಗಳ ಹೆಸರು ಬರೆಯಲು ಆರಂಭಿಸಿದೆ. ಹತ್ತಿರದ ಗೆಳೆಯರು, ಈಗಿನ ಆಫೀಸು, ಹಳೇ ಆಫೀಸು ಮತ್ತು ಮತ್ತೂ ಹಳೆಯ ಆಫೀಸಿನ ಕೊಲೀಗುಗಳು, ಕಾಲೇಜು, ಪದವಿ,ಪಿಯೂಸಿ,ಹೈಸ್ಕೂಲು ಸಹಪಾಠಿಗಳು, ಅಪ್ಪನ ಕಡೆಯ ನೆಂಟರು, ಅಜ್ಜನ ಮನೆ ಹಾಯ್ಸಾಲು ಎಲ್ಲ ಬರೆದು ಮುಗಿಸಿದೆ.
ದೂರದಿಂದ ನೋಡಿದರೆ ರಾಮಜಪ ಬರೆದಂತಿದ್ದ ಹಾಳೆಗಳನ್ನು ಮಗುಚುತ್ತಿದ್ದಂತೆ ಅರಿವಾಗಿ ಹೋಯಿತು, ಈ ಜನ್ಮದಲ್ಲಿ ನನ್ನ ಮರ್ಯಾದೆ ಕೆಡೋದು ತಪ್ಪಿದ್ದಲ್ಲ ಅಂತ. ಅಲ್ಲಿ ಬರೆದಿದ್ದ ಭೂಮಂಡಲದ ಅರೆವಾಸಿ ನಿವಾಸಿಗಳನ್ನು ಕರೆಯುವುದಕ್ಕೇ ಏನಿಲ್ಲವೆಂದರೂ, ನಾಕಾರು ತಿಂಗಳಾದರೂ ಬೇಕಿತ್ತು. ಅಲ್ಲಿಯವರೆಗೆ ಮಾನದ ಬಗ್ಗೆ ವಿಚಾರ ನಡೆಸಿದ್ದ ಮನಸ್ಸು ಈ ಲಿಸ್ಟು ಕಂಡದ್ದೇ ಅದನ್ನೆಲ್ಲ ಕ್ಷಣಾರ್ಧದಲ್ಲಿ ತಳ್ಳಿ ಹಾಕಿತು. ಯಾರೋ ಏನೋ ಹೇಳ್ತಾರೆ ಅಂತೆಲ್ಲ ತಲೆಕೆಡಿಸಿಕೊಳ್ಳೋದು ತಪ್ಪೂ, ನಿನ್ನ ಲೈಫು ನಿನ್ನದು, ನಿನ್ನ ಹತ್ತಿರದ ಬಳಗವನ್ನಾದರೂ ನೆಟ್ಟಗೆ ಕರಿ. ನಿನ್ನ ಮರ್ಯಾದೆಯನ್ನು ಅವರು ರಕ್ಷಿಸುತ್ತಾರೆ ಅಂತ ಬುದ್ಧಿ ಹೇಳಿತು.
ಪುಸ್ತಕದಲ್ಲಿ ತುಂಬಿ ಹೋಗಿದ್ದ ಸಾವಿರಾರು ಹೆಸರುಗಳಲ್ಲಿ ಆಪ್ತರು, ಅನಿವಾರ್ಯರು, ಸಂಬಂಧಿಕರು ಎಂಬೆಲ್ಲ ಕ್ಲಿಷ್ಟಕರ ಸುತ್ತುಗಳನ್ನು ದಾಟಿ ಕೊನೆಯ ಹಂತಕ್ಕೆ ಬಂದ ಅದೃಷ್ಟಶಾಲಿಗಳಿಗೆ ಮಾತ್ರ ಮದುವೆಯ ಕರೆಯೋಲೆ ನೀಡಲಾಗುವುದು ಎಂದು ನಿರ್ಧರಿಸಿದೆ. ಈ ಮಧ್ಯ ಆರ್ಕುಟ್, ಫೇಸ್ ಬುಕ್ ಮತ್ತು ಜೀ ಮೇಲ್ ಕಾಂಟಾಕ್ಟುಗಳಿಂದ ಹಲವಷ್ಟು ಹೆಸರುಗಳಿಗೆ ವೈಲ್ಡ್ ಕಾರ್ಡ್ ಎಂಟ್ರಿ ದೊರಕಿತು.
ಬಡಬಡನೆ ಮದುವೆ ಕಾರ್ಡು ಅಚ್ಚು ಹಾಕಿಸಿ, ಕರ್ಮಕ್ಷೇತ್ರ ಬೆಂಗಳೂರಿನ ಬಂಧುಗಳು ಮತ್ತು ಸ್ನೇಹಿತರನ್ನು ಡೇ ಎಂಡುಗಳಲ್ಲಿ, ವೀಕೆಂಡುಗಳಲ್ಲಿ ಕರೆದಿದ್ದಾಯ್ತು. ಉಳಿದೆಲ್ಲರಿಗೆಲ್ಲ ಈ ಮೇಲ್ ಇದ್ದೇ ಇತ್ತು. ಕರೆಯೋಲೆ ಸ್ಕ್ಯಾನು ಮಾಡಿ , ಕಾಂಟಾಕ್ಟುಗಳನ್ನ ಹೆಕ್ಕಿ ತುಂಬಿ ಸೆಂಡ್ ಬಟನೊತ್ತಿದ್ದರೆ, ಅಮೇರಿಕದಲ್ಲಿದ್ದವರಿಗೂ ಕರೆದಾಯ್ತು, ಅರಕಲಗೂಡೂ ಮುಗಿದಾಯ್ತು! ಎಲ್ಲ ಆರಾಮಾಗಿ ನಡೀತಿದೆ ಎನ್ನುವಾಗ ಅಪ್ಪ ಫೋನಾಯಿಸಿ, ಮಗನೇ ಊರಿನ ಕಡೆ ಕರಿಯೋಕೆ ಹೋಗಬೇಕಲ್ಲಪ್ಪ, ಯಾವಾಗ ಬರುತ್ತೀಯಾ ಎಂದರು. ನಗರ ಜೀವನದ ಗೊಂದಲ ಗಲಿಬಿಲಿಗಳಲ್ಲಿ ಕಳೆದೇ ಹೋಗಿದ್ದ ನನಗೆ ಜ್ಞಾನೋದಯವಾಯಿತು.
ಮದುವೆಗೆಂದು ಹಾಕಿದ್ದ ರಜೆಯನ್ನು ಇನ್ನೊಂದೆರಡು ದಿನಗಳಷ್ಟು ವಿಸ್ತರಿಸಿ, ಮನೆಗೆ ಬಂದೆ. ಒಂದು ದಿನ ಶುಭ ಸಮಯ ನೋಡಿ ನಮ್ಮ ಮದ್ವೆ ಕರ್ಯದ ಕಾರ್ಯಕ್ರಮ ಆರಂಭವಾಯಿತು. ನಾಲ್ಕು ಮೂಲೆಗೂ ಅರಶಿನ ಕುಂಕುಮ ಹಚ್ಚಿಕೊಂಡಿರೋ ವಿವಾಹದ ಕರೆಯೋಲೆಗಳು ಮತ್ತು ಅಕ್ಷತೆ ತುಂಬಿರುವ ಪುಟ್ಟ ಬೆಳ್ಳಿ ಬೋಗುಣಿ ಸಮೇತ ಹೊರಟಿದ್ದೂ ಆಯಿತು.
ನನ್ನ ಭಾವ ಕೋಶದ ಭಿತ್ತಿಯಲ್ಲಿ ಹೊಸ ಚಿತ್ತಾರಗಳನ್ನು ಮೂಡಿಸಿದ ಪ್ರಯಾಣ ಅದು.ನನ್ನಪ್ಪನಿಗೆ ಅವರು ಓದುವ ಕಾಲದಲ್ಲಿ ಸಹಾಯ ಮಾಡಿದ್ದ ಯಾರೋ ಅಜ್ಜ, ಅಮ್ಮನಿಗೆ ಕಷ್ಟಕಾಲದಲ್ಲಿ ಆಶ್ರಯವಿತ್ತ ಇನ್ನಾರೋ ಹಿತೈಷಿ, ಮಗುವಾಗಿದ್ದಾಗ ಸತ್ತೇ ಹೋಗುವಂತಾಗಿದ್ದ ನನ್ನನ್ನು ಅದೇನೋ ಔಷಧಿ ಕೊಟ್ಟು ಬದುಕಿಸಿದ ಅಜ್ಜಿ, ಇವರನ್ನೆಲ್ಲ ಮದುವೆಗೆ ಕರೆಯುವ ನೆಪದಲ್ಲಿ ಭೇಟಿ ಮಾಡಿದ ಹಾಗಾಯಿತು. ನನ್ನ ನೋಟ್ ಬುಕ್ಕಿನ ಹಾಳೆಗಳಲ್ಲಿ ಬರೆದಿಟ್ಟ ಹೆಸರುಗಳ ಪರಿಧಿಯನ್ನು ಮೀರಿದ, ಆದರೂ ಯಾವುದೋ ಸಂಬಂಧದ ಮಾಯಾತಂತುಗಳ ಮೂಲಕ ನಾನು ನಾನಾಗಿರಲು ಕಾರಣರಾದ ಈ ಜೀವಗಳನ್ನು ಕಂಡ ಸಂತಸ, ಅನಿರ್ವಚನೀಯ.
ಮರೆತ ಪರಿಚಯಗಳನ್ನು ನವೀಕರಿಸಿಕೊಳ್ಳುವ ಈ ವಿಶೇಷ ತಿರುಗಾಟದಲ್ಲಿ ಅಚಾನಕ್ಕಾಗಿ ಗುವ ಆಹ್ಲಾದಗಳಂತೆ, ಅನಿವಾರ್ಯವಾಗಿ ಎದುರಿಸಲೇ ಬೇಕಾಗಿರುವ ಗ್ರಹಚಾರಗಳೂ ಇವೆ. ಹಳ್ಳಿಮನೆಗಳಲ್ಲಿ ಯಾವ ಹೊತ್ತಿಗೆ ಹೋದರೂ ಮನೆಗೊಬ್ಬರಾದರೂ ಇದ್ದೇ ಇರುತ್ತಾರೆ. ನಗರ ಸಂಪ್ರದಾಯದ ನೀವು ಮನೆಯಲ್ಲೇ ಇದ್ದೀರೋ, ನಾನು ಸಂಜೆ ಆರೂಕಾಲಿಗೆ ಸರಿಯಾಗಿ ಬರುತ್ತೇನೆ ಎಂಬಿತ್ಯಾದಿ ಔಪಚಾರಿಕ ನುಡಿಗಳಲ್ಲಿ ಬೇಕಾಗುವುದಿಲ್ಲ. ಹೀಗಾಗಿ, ನಾವು ದಾರಿಯಲ್ಲಿ ಸಿಕ್ಕ ಮನೆಗೆ ಸರಕ್ಕನೆ ನುಗ್ಗುತ್ತಿದ್ದೆವು.
ತಗೋ! ಮದುಮಗ ಹೆತ್ತವರ ಸಮೇತನಾಗಿ ಮದ್ವೆ ಕರ್ಯಕ್ ಬಂದಿದ್ದು ಗೊತ್ತಾದ್ ಕೂಡಲೇ ಮನೆಜನಕ್ಕೆ ಸಣ್ಣಕೆ ದಯ್ಯ ಮೆಟ್ಟಿಕೊಳ್ಳುತ್ತಿತ್ತು. ಮನೆತುಂಬ ಓಡಾಡೋ ಹೆಂಗಸರು ಕೂ ಹೊಡೆದು ತೋಟದಲ್ಲಿದ್ದ ಯಜಮಾನರನ್ನ ಕರೆದರೆ, ಅವರು ಬರೋದರೊಳಗೆ ಇತರರು ಮೆಲ್ಲಗೆ ಬಂದು ಜಗಲಿಯಲ್ಲಿ ಜಮಾಯಿಸುತ್ತಿದ್ದರು. ಅಪ್ಪ ಅಮ್ಮ ಅವರ ಬಳಿ ದಶಕಗಳ ಹಿಂದಿನ ರಸವಾರ್ತೆಗಳನ್ನು ಮಾತನಾಡಿದ ಮೇಲೆ ಶುರುವಾಗುವುದು ನನ್ನ ಮರ್ಯಾದೆ ಹರಾಜು ಕಾರ್ಯಕ್ರಮ.
ಕೆಲವರು ಅಯ್ಯೋ ನೀನು ಗಳಗಂಟೆ ಬಿಟ್ಕಂಡಿದ್ದಾಗ ನೋಡಿದಿದ್ನಲೋ ಅಂದರೆ, ಇನ್ನುಳಿದವರು ನಾನು ಸಣ್ಣವನಿದ್ದಾಗ ಅಲ್ಲಿಗೆ ಬಂದವನು ಹೇಗೆ ಅವರ ಮನೆ ಹಾಲಿನ ಪಾತ್ರೆಗೆ ಉಚ್ಚೆ ಹೊಯ್ದಿದ್ದೆ, ಹೇಗೆ ಯಾರದೋ ಸೀರೆ ಎಳೆದಿದ್ದೆ, ಅನ್ನದ ಪಾತ್ರೆಗೆ ಬೂದಿ ತುಂಬಿ ಮತ್ತೆ ಅಡುಗೆ ಮಾಡಿಸಿದ್ದೆ ಅನ್ನೋದನ್ನೆಲ್ಲ ಸಾಭಿನಯವಾಗಿ ಹೇಳುತ್ತಿದ್ದರು. ನಾನು ಅವರ ಅಂದಿನ ಅನ್ನಕ್ಕೆ ಕಲ್ಲು ಹಾಕಿದ್ದಕ್ಕೆ ಇಂದು ಸಂಕಟಪಡುತ್ತ ಕೂತಿದ್ದರೆ, ಅಪ್ಪ ಅಮ್ಮಂದಿರು ಅವರ ಜೊತೆಗೇ ನಕ್ಕು ನನ್ನ ಯಾತನೆ ಹೆಚ್ಚು ಮಾಡುತ್ತಿದ್ದರು.
ಆಮೇಲೆ, ತಿಂಡಿ-ತೀರ್ಥ, ಪಾನಕ ಪನಿವಾರಾದಿ ರಿವಾಜುಗಳು. ನಾವು ಕರೆಯೋಕೆ ಹೋದ ಮೊದಲ ಮನೆಯಲ್ಲಿ, ಛೇ, ನಿಂಗ ಬರದು ಮೊದಲೇ ಹೇಳಿದ್ರೆ ಎಂತಾರೂ ಮಾಡ್ಲಾಗಿತ್ತು, ಅರ್ಜೆಂಟಿಗೆ ಶೀರಾ ಮಾಡ್ಕ್ಯ ಬತ್ತಿ ಅಂತಂದ ಮನೆಯೊಡತಿ ರುಚಿಕರ ಗೋಧಿರವೆ ಶಿರಾ ಯಾನೇ ಕೇಸರೀಬಾತನ್ನು ಮಾಡಿ ತಂದಿಟ್ಟಳು. ನಾನೂ ಚೆನ್ನಾಗೇ ತಿಂದೆ. ಪಕ್ಕದಲ್ಲಿದ್ದ ಅಪ್ಪ ಸ್ವಲ್ಪ ತಿಂದರೆ ಸಾಕಿತ್ತೇನೋ ಅಂತ ಗಂಭೀರವಾಗಿ ಹೇಳಿದರು.
ಅಪ್ಪನ ಮಾತಿನರ್ಥ ತಿಳಿಯೋಕೆ, ಮುಂದಿನ ಮನೆಗೆ ಹೋಗಬೇಕಾಯಿತು. ಅಲ್ಲಿ ಉಭಯಕುಶಲೋಪರಿ ಸಾಂಪ್ರತದ ಕೆಲ ಸೀನುಗಳ ನಂತರ ಅರ್ಜೆಂಟಿಗೆ ಶೀರಾ.. ಡೈಲಾಗು ರಿಪೀಟಾಯಿತು. ಅಲ್ಲಿಗೇ ಮುಗಿಯದ ಈ ರಣಭೀಕರ ಅರ್ಜೆಂಟಿಗೆ ಶೀರಾ.. ಅಂದು ನಾವು ಹೋದ ಎಲ್ಲ ಮನೆಗಳಲ್ಲೂ ಮುಂದುವರಿಯಿತು. ನಾನು ಮದುಮಗನಾಗಿರುವುದರಿಂದ, ಸಿಹಿ ತಿನ್ನದೇ ಹೋಗಬಾರದು ಅನ್ನುವ ಕಟ್ಟಪ್ಪಣೆ ಬೇರೆ. ಶೀರಾ ಸಹವಾಸದಿಂದ ರೋಸಿ ಹೋಗಿ, ಸಂಜೆ ಹೊತ್ತಿಗಂತೂ ರವೆ ಹುರಿಯೋ ಘಮಕ್ಕೇ ಹೊಟ್ಟೆಯೆಲ್ಲ ಕಲಸಿ, ವಾಂತಿ ಬರುವ ಹಾಗಾಗಿ ಹೋಗಿತ್ತು.
ಎರಡನೇ ದಿನ ಸಂಜೆಯ ಹೊತ್ತಿಗೆ ಹತ್ತೈವತ್ತು ಮನೆಗಳ ಶೀರಾ, ಖಾರಾ, ಉಪ್ಪಿಟ್ಟು,ಚಿಪ್ಸು ಮತ್ತು ಅಸಂಖ್ಯ ಕಾಪಿ-ಚಹಾ- ಕಷಾಯ ಇತ್ಯಾದಿ ದ್ರವಾಹಾರಗಳನ್ನ ಕುಡಿದ ಹೊಟ್ಟೆ ಪುಟ್ಟಮೋರಿಯಾಗಿತ್ತು. ಆವತ್ತು ಸಂಜೆ ನಮ್ಮ ಮೂಲಮನೆಗೆ ಬಂದು, ದೇವರಿಗೆ ಕಾಯಿ ಇಡೋದು ಇತ್ಯಾದಿ ಕಾರ್ಯಕ್ರಮಗಳನ್ನೆಲ್ಲ ಮುಗಿಸಿ ಕಾಲು ಕಾಚಿ ಕೂತಾಗ ಅಂತೂ ದೊಡ್ಡ ಕೆಲಸ ಮುಗಿದ ಸಮಾಧಾನ.
ಅಪ್ಪನ ಹತ್ತಿರ ಮಾತಾಡಿ, ಕರೆಯಬೇಕಿದ್ದ ಎಲ್ಲರನ್ನೂ ಕರೆದಾಯಿತು ಅಂತ ನಿಕ್ಕೀ ಮಾಡಿಕೊಂಡೆ. ಹಾಗೇ ಮಾತನಾಡುತ್ತ ಅವರು, ಹೋಗೋದಿದ್ದರೆ ಸಣ್ಣಜ್ಜನ ಮನೆಗೊಂದು ಹೋಗಬಹುದಿತ್ತು ನೋಡು ಅಂದರು. ಅಲ್ಲೇ ಸ್ವಲ್ಪ ದೂರದಲ್ಲಿರೋ ಸಣ್ಣಜ್ಜನ ಮನೆ, ನನ್ನ ಬಾಲ್ಯದ ಬೇಸಿಗೆ ರಜೆಯ ಚೇತೋಹಾರಿ ಕ್ಷಣಗಳನ್ನ ಕಳೆದ ಜಾಗ. ಲಿಂಗನಮಕ್ಕಿ ಅಣೆಕಟ್ಟು ಬಂದಿದ್ದರಿಂದ ತಮ್ಮ ೬೦ ಅಂಕಣದ ಮನೆ ಕಳೆದುಕೊಂಡಿದ್ದ ನಮ್ಮ ದೂರದ ಸಂಬಂಧಿ ಸಣ್ಣಜ್ಜ, ಅದರ ಪುಟ್ಟದೊಂದು ಪ್ರತಿರೂಪದಂತಹ ಮನೆಯನ್ನು ಸರ್ಕಾರ ನೀಡಿದ್ದ ಜಾಗದಲ್ಲಿ ಕಟ್ಟಿಕೊಂಡಿದ್ದರು. ಅಲ್ಲಿನ ದೊಡ್ಡ ತೊಲೆಗಳು, ಕತ್ತಲ ಕೋಣೆಗಳು ನನ್ನಲ್ಲಿ ಅಚ್ಚರಿ ಮೂಡಿಸಿದ್ದವು.
ಅಪ್ಪ ಅಮ್ಮನನ್ನು ಮನೆಯಲ್ಲೇ ಬಿಟ್ಟು, ಸಂಜೆಗತ್ತಲಲ್ಲಿ ಹಳೆಯ ನೆನಪಿನ ಜಾಡಲ್ಲೇ ದಾರಿ ಹಿಡಿದು ಹೊರಟೆ. ಸಣ್ಣಜ್ಜನ ಮನೆ ತಲುಪಿ ಒಳನಡೆದರೆ, ಪಡಸಾಲೆ ಖಾಲಿ ಹೊಡೆಯುತ್ತಿತ್ತು. ಕರೆಂಟು ಹೋಗಿತ್ತು. ಒಳಗೆಲ್ಲೋ ಬೆಳಕು ಕಂಡು ನಡೆದೆ. ಅಲ್ಲಿ ವಯಸ್ಸಾದಾಕೆಯೊಬ್ಬರು ಕೂತಿದ್ದರು. ನನ್ನನ್ನ ನೋಡಿ, ಮೆಲ್ಲನೆದ್ದು ಮಬ್ಬು ಬೆಳಕಲ್ಲಿ ಗುರುತು ಹಿಡಿಯಲೆಂದು ಕಣ್ಣು ಕೀಲಿಸಿದರು. ನಾನೇನಾದರೂ ಹೇಳುವ ಮುನ್ನವೇ, ಸುರೇಂದ್ರಾ, ಅಂತೂ ಇವತ್ ಮನಿಗ್ ಬಂದ್ಯನೋ, ಮನೆ ನೆನ್ಪಾತನೋ, ಎಂತಕೋ ನಮ್ನೆಲ್ಲ ಬಿಟ್ಟಿಕ್ಕೆ ಹೋಗಿದ್ದೆ ಅಂತ ಭಾವುಕರಾಗಿ ಮಾತನಾಡುತ್ತ ನನ್ನ ಕತ್ತು ಗಲ್ಲಗಳನ್ನೆಲ್ಲ ಸವರಲು ಆರಂಭಿಸಿದರು. ನನ್ನನ್ನ ಮಾತಾಡೋಕೆ ಬಿಡದೇ, ಹ್ವಾಯ್, ಯಾರ್ ಬೈಂದ ನೋಡಿ ಇಲ್ಲಿ.. ಅಂತ ಕತ್ತಲಲ್ಲೇ ತಡಕಾಡುತ್ತ ಹಿಂದೆಲ್ಲೋ ನಡೆದರು. ಏನಾಗುತ್ತಿದೆ ಅಂತ ಅರ್ಥವಾಗದೇ ನಾನು ಕತ್ತಲಲ್ಲಿ ಕಳೆದುಹೋದವನಂತೆ ನಿಂತಿದ್ದೆ.
ನಿಂಗೆಲ್ಲೋ ಮಳ್ಳು ಅಂತ ಬಂದರು ಸಣ್ಣಜ್ಜ, ಆಕೆ ಅವರ ಹೆಂಡತಿ ಅನ್ನೋದು ತಿಳಿಯಿತು. ನನಗವರ ಗುರುತು ಸಿಕ್ಕಿರಲಿಲ್ಲ. ಸಣ್ಣಜ್ಜ ನನ್ನನ್ನ ನೋಡಿದವರೇ, ನೀ ಯಾರು ಅಂತ ತೆಳದ್ದಿಲ್ಲೆ ಅಂದರು. ನಾನು ಪ್ರವರಗಳನ್ನೆಲ್ಲ ಹೇಳಿದಮೇಲೆ, ಎಮ್ಮನೆ ಶ್ರೀಧರನ ಮಾಣಿಯನೋ ಅಂದು, ಬಾಗಿಲ ಹಿಂದೆ ಮುಸುಮುಸು ಅಳುತಿದ್ದ ಹೆಂಡತಿಯ ಕಿವಿಯಲ್ಲಿ ಇಂವ ಸುರೇಂದ್ರ ಅಲ್ದೇ, ಧರೇಮನೆ ಶ್ರೀಧರನ ಮಗ, ಮದ್ವೆ ಕರಿಯಲೆ ಬೈಂದ ಅಂತ ಗಟ್ಟಿಯಾಗಿ ಹೇಳಿದರು. ಆಕೆ ನನ್ನ ಮುಖವನ್ನು ಮತ್ತೊಮ್ಮೆ ನೋಡಿ, ಖಿನ್ನರಾಗಿ ಒಳನಡೆದರು.
ಆಮೇಲೆ ಸಣ್ಣಜ್ಜ ಹೇಳಿದ ಕಥೆಯೇನೆಂದರೆ, ಅವರ ಒಬ್ಬನೇ ಮಗ ಸುರೇಂದ್ರ ಇಪ್ಪತ್ತು ವರುಷಗಳ ಹಿಂದೆಯೇ ಮನೆ ಬಿಟ್ಟು ಬೆಂಗಳೂರಿಗೆ ಹೋದವನು ತಿರುಗಿ ಬಂದಿಲ್ಲ. ಅಲ್ಲೇ ಹುಡುಗಿ ಹುಡುಕಿಕೊಂಡು, ಮದುವೆಯಾಗಿ, ಮಕ್ಕಳೂ ಆಗಿ ಹಾಯಾಗಿದ್ದಾನೆ. ಅವರ ಮಗ ಮನೆ ಬಿಟ್ಟು ಹೋಗೋ ಹೊತ್ತಿಗೆ ನನ್ನ ಪ್ರಾಯದ ಯುವಕ. ಮಗ ಎಂದಾದರೂ ತಿರುಗಿ ಬರುತ್ತಾನೆಂದರು ನಂಬಿರೋ ಆ ಹೆಣ್ಣು ಹೃದಯಕ್ಕೆ, ಮುಸ್ಸಂಜೆ ಹೊತ್ತಿಗೆ ಬಂದ ನಾನು ಥಟ್ಟನೆ ಮಗನಂತೆಯೇ ಕಂಡಿದ್ದೆ.
ನಾನು ಮದುವೆ ಕರೆಯೋಲೆಯನ್ನ ಅವರ ಕೈಗಿತ್ತು ಬಂದು ಹಾರಯಿಸಿ ಎಂದೆ. ಸಣ್ಣಜ್ಜ, ಬೆಂಗಳೂರಲ್ಲಿಪ್ಪ ಮಗನೇ ತನ್ ಮದ್ವೆಗೆ ನಂಗಳನ್ನ ಕರಿಯಲ್ಲೆ. ನೀ ಬಂದು ನಮ್ಮ ನೆನಪು ಮಾಡ್ಕ್ಯಂಡು ಕರಿತಾ ಇದ್ದೆ ನೋಡು, ಅದೇ ಖುಷಿ ಅಂದರು. ಮಾತು ಭಾರವಾಗಿತ್ತು. ನನ್ನ ಮನಸ್ಸೂ. ಅವರ ಕಾಲಿಗೆ ನಮಸ್ಕರಿಸಿ ಹೊರಟೆ. ಅಷ್ಟು ಹೊತ್ತಿಗೆ ಅಜ್ಜಿ, ನನ್ನ ಮಳ್ ತನಕ್ಕೆ ಬೇಜಾರು ಮಾಡ್ಕ್ಯಳಡ ತಮ್ಮಾ, ಒಳಗ್ ಬಾರೋ, ಅಪರೂಪಕ್ಕೆ ನಮ್ಮನಿಗೆ ಬೈಂದೆ, ಗಡಿಬಿಡಿಲಿ ಶೀರಾ ಮಾಡಿದ್ದಿ. ಸೀ ತಿಂದ್ಕಂಡು ಹೋಗ್ಲಕ್ಕಡ ಬಾ ಎಂದು ಕರೆದರು.
ಮಂದ ಬೆಳಕಲ್ಲಿ ಅಂದು ತಿಂದ ಶೀರಾದ ರುಚಿಯನ್ನು ನಾನು ಇಂದಿಗೂ ಮರೆತಿಲ್ಲ.
ಕನ್ನಡ ಪ್ರಭ- ಅಂಕಿತ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಯುವ ವಿಭಾಗದಲ್ಲಿ ಬಹುಮಾನ ಪಡೆದ ಬರಹ. ನಿನ್ನೆಯ ಕನ್ನಡ ಪ್ರಭ ಸಾಪ್ತಾಹಿಕದಲ್ಲಿ ಪ್ರಕಟಿತ
15 ಕಾಮೆಂಟ್ಗಳು:
ನಿಮ್ಮ ಮದುವೆ ಆಮಂತ್ರಣ ನನಗಂತೂ ತಲುಪಿಲ್ಲ!
ಚನಾಗಿದೆ. ಇಷ್ಟ ಆಯ್ತು ..
BTW.."nangu (ninninda) amantrana talpilla"...;-):-)
ಶ್ರೀನಿಧಿ ..ನಿನ್ನ "ಮದುವೆಯ ಕರೆಯ " ಕನ್ನಡಪ್ರಭ ದಲ್ಲಿ ಓದಿದೆ .ಚೆನ್ನಾಗಿದೆ .ಹಾಸ್ಯ ವೇ ಪ್ರಧಾನವಾದರೂ ಅಂತ್ಯ ಭಾವಪೂರ್ಣವಾಗಿದೆ .ಮನೆ ಬಿಟ್ಟು ಹೋದ ಮಗ ಮಧ್ಯವಯಸ್ಕನಾಗಿರಬಹುದು .ಆದರೆ ಕಥಾನಾಯಕನಿನ್ನು ಯುವಕ .ಮನೆ ಬಿಡುವಾಗ ಸಣ್ಣಜ್ಜನ ಮಗ ಕಥಾನಯಕನಷ್ಟೇ ವಯಸ್ಸಿನವನಿರಬಹುದು .ಅದೇ ರೂಪವನ್ನು ಇವನಲ್ಲಿ ಕಾಣುವ ಸಣ್ಣಜ್ಜನ ಹೆಂಡತಿಯ ಪಾತ್ರ ಮನಮುಟ್ಟುತ್ತದೆ .ಸಣ್ಣಜ್ಜನ ಮನೆಯ ಶಿರ ತಿನ್ನುವಾಗ ಕಥಾನಾಯಕನ ಒಂದೆರಡು ಕಣ್ಣೀರು ಅದರಲ್ಲಿ ಬೆರೆತಿರಬೇಕು.
ಮದುವೆಯ ಕರೆಯೋಲೆಯ ಅನುಭವ ಚೆನ್ನಾಗಿದೆ... ಎಷ್ಟೋ ಭಾರಿ ಎದುರು ಮನೆಯವರನ್ನೇ ಮರೆತಿರುತ್ತೇವೆ ಹಹಹ ಉದಾಹರಣೆ ನಮ್ಮ ಮನೆಯಲ್ಲೇ ಆ ಘಟನೆ ನೆಡೆದಿತ್ತು...
Shrinidhi,
Very touchy... Tumba chennagiddu..
I am sure most of us can relate to this...real good one
ಪ್ರೈಝು ಬಂದದ್ದಕ್ಕೆ ಅಭಿನಂದನೆ. ಮತ್ತು ಹೊಟ್ಟೆಕಿಚ್ಚು
ista aaytu sannajjamane hatra iro turn kushi kottitu
@ಸುನಾಥ್ ಕಾಕ! ಅನ್ಯಾಯ ಇದು, ಸುಳ್ಳು ಹೇಳ್ತಾ ಇದೀರಿ ನೀವು.:(
॒॒@ದಿವ್ಯಾ, ಥ್ಯಾಂಕ್ಸು!ಹೌದಾ?:)
॒॒@ಅನುರಾಧ- ನಿಮ್ಮ ಪ್ರತಿಕ್ರಿಯೆಗೆ ಧನ್ಯ!
॒@ಮನಸು,:)
॒@ ತೇಜತ್ಗೇ, ಥ್ಯಾಂಕ್ಸೇ!
@ Manjunatha- thanks...
@ ಮಿಥುನ ಕೊಡೆತ್ತೂರು- ಧನ್ಯವಾದ ಸರ್:)
@ ರಾಘವೇಂದ್ರ ಹೆಗಡೆ- ಥ್ಯಾಂಕ್ಸಮ್ಮಾ!
ಇನ್ನು ಯಾರಾದ್ರು ಮದುವೆ ಕರಿಯಲು ಬ೦ದರೆ ಈ ಮದುವೆ ಕರೆಯ ಖ೦ಡಿತ ನೆನಪಾಗುತ್ತದೆ.ತು೦ಬಾ ಚೆನ್ನಾಗಿದೆ.
ತುಂಬ ಲಾಯಕ್ಕಾಯಿದು. ಆದ್ರೆ ಎನ್ನ ಮಾತ್ರ ನೀನು ಇಮೈಲಿಲೇ ಕರೆದ್ದಂತಕೆ? ಶೀರಾ ಕೊಡ್ತೇಳೀ ಹೆದ್ರಿಕೆ ಆತಾ? ಎಂಗಳಲ್ಲಿ ಶೀರಾ ಮಾಡ್ತಿಲ್ಲೆ.
ಚೆನ್ನಾಗಿದೆ.
ಮೊದಲನೆಯದಾಗಿ ವಿಷಯದ ಆಯ್ಕೆ ಚೆನ್ನಾಗಿದೆ. ಎರಡನೆಯದಾಗಿ ಅದನ್ನು ಹೇಳುತ್ತಾ ಹೋಗಿರುವ ಅನುಭವಗಳ ಓಘ ಮತ್ತು ಕೊನೆಯಲ್ಲಿ ಬರಬರುತ್ತ ಸ್ವಲ್ಪ ಸೀರಿಯಸ್ಸಾಗಿ ಹಾಗೆ ಚುಟುಕಾಗಿ ಮುಗಿಸಿಬಿಡುವುದು ಎಲ್ಲವೂ ಆಸಕ್ತಿ ಉಳಿಸುತ್ತವೆ.
ಇಷ್ಟವಾಯಿತು.. thanks
Good one sir
ಕಾಮೆಂಟ್ ಪೋಸ್ಟ್ ಮಾಡಿ