ಶುಕ್ರವಾರ, ಫೆಬ್ರವರಿ 10, 2012

ಅತಿಥಿ ಸತ್ಕಾರ

ಸುಮಾರು ೨೦-೨೫ ವರ್ಷಗಳ ಹಿಂದೆ ನಡೆದ ಘಟನೆ. ನನ್ನ ಅಪ್ಪ ಹೇಳಿದ್ದ ಈ ಕಥೆ, ನಿನ್ನೆ ಯಾಕೋ ನೆನಪಾಯಿತು.

ಗೋಪಾಲ ಶೆಟ್ಟರಿಗೆ, ಕಿನ್ನಿಗೋಳಿ ಸಮೀಪದ ಉಳೆಪಾಡಿಯ ಶಾಲೆಯಲ್ಲಿ ಮಾಸ್ತರಿಕೆ ಕೆಲಸ. ಅವರ ಪ್ರೈಮರಿ ಸ್ಕೂಲಿನ ಮ್ಯಾನೇಜುಮೆಂಟು ಚರ್ಚೊಂದರದು. ಅಲ್ಲಿನ ಮುಖ್ಯೋಪಾಧ್ಯಾಯಿನಿ ಚರ್ಚಿನ ಕಾನ್ವೆಂಟಿನಲ್ಲಿ ವಾಸ. ಒಂದು ದಿನ ಹೆಡ್ ಸಿಸ್ಟರ್ ಶಾಲೆಗೆ ಕಾರಣಾಂತರಗಳಿಂದ ಬರಲಿಲ್ಲ. ಏನೋ ಅಗತ್ಯ ದಾಖಲೆ ಪತ್ರಕ್ಕೆ ಮುಖ್ಯೋಪಾಧ್ಯಾಯಿನಿಯ ಸಹಿ ಬೇಕೇ ಬೇಕಾಗಿತ್ತು. ಹೀಗಾಗಿ ಗೋಪಾಲ ಶೆಟ್ಟರು ಶಾಲೆಗೆ ತುಸು ಸಮೀಪದಲ್ಲೇ ಇದ್ದ ಕಾನ್ವೆಂಟಿಗೆ ಹೋಗಿ ಬರೋಣ ಎಂದು ಹೊರಟರು.

ಕಾನ್ವೆಂಟಿಗೆ ಹೋದರೆ, ಹೆಡ್ ಸಿಸ್ಟರ್ ಒಳಗೆಲ್ಲೋ ವ್ಯಸ್ತರಾಗಿದ್ದರು. ಅಲ್ಲಿನ ಸಹಾಯಕಿಯೊಬ್ಬರು ಬಂದು, ಸ್ವಲ್ಪ ಕೂತಿರಿ ಬರುತ್ತಾರೆ ಎಂದು ಒಳನಡೆದರು. ಇನ್ನಾರೋ ಬಂದು ದೊಡ್ಡ ಗ್ಲಾಸೊಂದರಲ್ಲಿ ಶರಬತ್ತನ್ನೂ, ಪ್ಲೇಟು ತುಂಬಾ ಕೇಕು, ರಸ್ಕು, ಬಿಸ್ಕೀಟುಗಳನ್ನೂ ಇಟ್ಟು ತಿನ್ನಿ ಎಂದು ಹೇಳಿ ಹೋದರು. ಪಾಪ! ಗೋಪಾಲು ಮಾಸ್ಟ್ರು ಕಂಗಾಲು. ಬೆಳಿಗ್ಗೆಯಷ್ಟೇ ಮನೆಯಲ್ಲಿ ಹೊಟ್ಟೆ ತುಂಬ ಗಂಜಿ ಉಂಡು ಬಂದಿದ್ದ ಮಾಸ್ಟ್ರಿಗೆ ಇದನ್ನೆಲ್ಲ ಹೇಗೆ ತಿನ್ನುವುದು ಎಂಬ ಚಿಂತೆ ಆರಂಭವಾಯಿತು.

ವಿಷಯ ಏನೆಂದರೆ ಹಳ್ಳಿ ಕಡೆಗಳಲ್ಲಿ ಆಗಿನ್ನೂ ಈ ಬಿಸ್ಕೀಟು ಕೇಕು ಸಂಪ್ರದಾಯ ಬಂದಿರಲಿಲ್ಲ. ಮನೆಗೆ ಯಾರೇ ಬಂದರೂ ಎಳನೀರು, ಬಾಳೆಹಣ್ಣು, ಅವಲಕ್ಕಿ ಇಂತದ್ದು ನೀಡುವ ಕಾಲ. ಬಾಳೆ ಎಲೆಗೋ, ಪ್ಲೇಟಿಗೋ ಹಾಕಿ ಮುಂದಿಟ್ಟರೆ ಬಂದವರೂ ಅದನ್ನೆಲ್ಲ ತಿಂದೇ ಏಳುವುದು ವಾಡಿಕೆ. ಅಂತಹ ಕ್ರಮದಲ್ಲೇ ಬದುಕಿದ್ದ ಶೆಟ್ಟರಿಗೆ ಒಮ್ಮೆಗೇ ಹೀಗೆ ಪ್ಲೇಟು ತುಂಬ ಬಿಸ್ಕೀಟು ರಸ್ಕು ತಂದಿಟ್ಟರೆ ಹೇಗಾಗಬೇಡ? ತಂದಿಟ್ಟು ಹೋದದನ್ನು ತಿರಸ್ಕರಿಸಿದರೆ, ಬೇಜಾರು ಮಾಡಿಕೊಳ್ಳುತ್ತಾರೆ. ತಪ್ಪಾಗುತ್ತದೆ. ತಿಂದರೆ, ಹೊಟ್ಟೆ ಪರಿಸ್ಥಿತಿ ಹಾಳಾಗುತ್ತದೆ ಎಂದು ಗೋಪಾಲ ಶೆಟ್ರು ತಲೆಬಿಸಿ ಮಾಡಿಕೊಂಡರು.

ಒಂದು,ಎರಡು,ಮೂರು,ನಾಲ್ಕು ಅಂತ ಕೆಲವೊಂದಿಷ್ಟು ಹೊಟ್ಟೆಗೆ ಹೋಯಿತು. ಶರಬತ್ತು ಸೇವನೆಯೂ ಮುಗಿಯಿತು. ಇನ್ನೂ ಹೆಡ್ ಸಿಸ್ಟರ್ ಸುಳಿವಿಲ್ಲ ಬೇರೆ. ತಟ್ಟೆ ಖಾಲಿ ಮಾಡುವ ಬಗೆ ಮಾಸ್ಟ್ರಿಗೆ ಹೊಳೆಯಲಿಲ್ಲ. ಅಷ್ಟು ಹೊತ್ತಿಗೆ ಅವರ ಕಣ್ಣಿಗೆ ಬಿದ್ದದ್ದು, ಅಲ್ಲೇ ಹಾಲ್ ನ ಮೂಲೆಯಲ್ಲಿ ಮಲಗಿದ್ದ ನಾಯಿ! ಮೆಲ್ಲನೆ ಅದರತ್ತ ಒಂದು ರಸ್ಕು ಎಸೆದರು. ಅದನ್ನ ಆ ನಾಯಿ ಗಬಕ್ಕನೆ ಸ್ವಾಹಾ ಮಾಡಿತು. ಯಾರಾದರೂ ಬಂದರೋ ಅಂತ ನೋಡಿದರೆ, ಇಲ್ಲ.

ಒಂದನ್ನ ಇವರು ತಿನ್ನುವುದು, ಮತ್ತೊಂದನ್ನ ನಾಯಿಗೆ ಹಾಕುವುದು. ಹೀಗೇ ಕೆಲ ಹೊತ್ತು ಆಟ ನಡೆಯಿತು. ಇವರಿಗೆ ಗೊತ್ತಾಗದ್ದು ಏನೆಂದರೆ, ಕೊಂಚ ಹೊತ್ತಿಗೆ ಮೊದಲೇ ಅಲ್ಲಿಗೆ ಬಂದಿದ್ದ ಮುಖ್ಯೋಪಾಧ್ಯಾಯಿನಿ ಪರದೆ ಮರೆಯಲ್ಲಿ ನಿಂತು ಇವರ ಹರಕತ್ತು ಗಮನಿಸುತ್ತಿದ್ದರು. ನಂತರ ಮೆಲ್ಲ ಬಂದ ಅವರು ಪೆಚ್ಚುಪೆಚ್ಚಾಗಿ ನಕ್ಕ ಶೆಟ್ಟರನ್ನು ನೋಡಿ, ಮಾಸ್ಟ್ರೇ, ಕೊಟ್ಟದ್ದನ್ನೆಲ್ಲ ತಿನ್ನಬೇಕೂಂತ ಇಲ್ಲ. ನೀವು ತಲೆಬಿಸಿ ಮಾಡಿಕೊಳ್ಳಬೇಡಿ ಅಂದರಂತೆ.

ಆದರೆ ಅಷ್ಟು ಹೊತ್ತಿಗಾಗಲೇ ಪ್ಲೇಟು ಖಾಲಿಯಾಗಿತ್ತು!

2 ಕಾಮೆಂಟ್‌ಗಳು:

ಸಂಧ್ಯಾ ಶ್ರೀಧರ್ ಭಟ್ ಹೇಳಿದರು...

"ಅಥಿತಿ ಸತ್ಕಾರ" ಎಂದು ಓದಿ ಏನೋ ಘನ ಗಂಭೀರವಾದದ್ದಿರಬೇಕು ಎಂದು ಒಳಗೆ ಬಂದದ್ದು ಸುಳ್ಳಲ್ಲ... ಆದರೆ ತೆಳು ಹಾಸ್ಯದ ಮೂಲಕ ಅಥಿತಿ ಸತ್ಕಾರದ ಬಗ್ಗೆ ಹೇಳಿದ್ದು ತುಂಬಾ ಇಷ್ಟವಾಯಿತು... ನಿಮ್ಮ ಸತ್ಕಾರ ತುಂಬಾ ಚೆನ್ನಾಗಿದೆ...

Harisha - ಹರೀಶ ಹೇಳಿದರು...

ಹಹ್ಹಾ.. ಮಸ್ತ್ :)