ಸೋಮವಾರ, ಏಪ್ರಿಲ್ 09, 2012

ಬಿಟ್ಟೆನೆಂದರೂ ಬಿಡದೀ ಮಾಯೆ!

ದೃಶ್ಯ ಮಾಧ್ಯಮದಲ್ಲಿ ಕೆಲಸ ಮಾಡಬೇಕೆಂಬುದು ನನ್ನ ಜೀವಮಾನದ ಆಸೆಯಾಗಿತ್ತು.ಆದರೆ ಆ ಆಸೆಯನ್ನು ಮನೆಯಲ್ಲಿ ಹೇಳಿಕೊಳ್ಳಲು ಧೈರ್ಯವಿಲ್ಲದೇ ಯಾವುದೋ ಒಂದು ಕೋರ್ಸು ಮಾಡಿ ಮುಗಿಸಿದೆ. ಒಂದಿಷ್ಟು ದಿನ ಅದೂ ಇದೂ ಕೆಲಸ ಮಾಡಿದ್ದಾಯಿತು. ಆದರೆ, ಮಾಧ್ಯಮಕ್ಕೆ ಸೇರಿಕೊಳ್ಳಬೇಕು ಎಂಬ ಹಪಹಪಿ ಬಿಡಲಿಲ್ಲ. ಕೊನೆಗೆ ಚಟ ಮತ್ತು ಹಠ ಬಿಡದೇ ಒಂದು ಟಿವಿ ಚಾನಲ್ಲಿನಲ್ಲಿ ಹೇಗೋ ಕೆಲಸಕ್ಕೆ ಸೇರಿಕೊಂಡೆ. ಆರಂಭದಲ್ಲಿ ಡೆಸ್ಕು, ನಂತರ ನಿಧಾನಕ್ಕೆ ರಿಪೋರ್ಟಿಂಗು ಮಾಡಲು ತೊಡಗಿದೆ. ಮೊದಮೊದಲಿಗೆ ಭಾರೀ ಖುಷಿಯಾಯಿತು. ಆದರದು ಕೆಲವೇ ದಿನ. ಯಾವಾಗ ಮದುವೆ, ಮುಂಜಿಗೆ ಹೋದಲ್ಲೆಲ್ಲ ನನ್ನನ್ನ ಸೈಡಿಗೆ ಕರೆದು ದೇಶದ,ರಾಜ್ಯದ ಆಗುಹೋಗುಗಳ ಬಗ್ಗೆ ಘನವಾದ ಚರ್ಚೆ ಶುರು ಮಾಡಿದರೋ, ಆಗ ವರದಿಗಾರನೊಬ್ಬನ ತೊಂದರೆಗಳು ಅರಿವಾಗುತ್ತ ಹೋದವು. ಯಾರದೋ ಸಚಿವ ಸ್ಥಾನ ಹೋಗುವ ಬಗ್ಗೆಯೋ, ಇನ್ನಾರದೋ ಮನೆ ಮೇಲೆ ಐಟಿ ರೈಡ್ ಆಗುತ್ತದಂತೆ ಹೌದಾ ಎಂದೆಲ್ಲ ಕೇಳಿ, ನಾನು ಅದರ ಬಗ್ಗೆ ಗೊತ್ತಿಲ್ಲ ಎಂದು ತಲೆಯಲ್ಲಾಡಿಸಿದರೂ ಬಿಡದೇ, ನಿಮಗೆ ಗೊತ್ತಿಲ್ಲದ್ದು ಏನಿರತ್ತೆ ಹೇಳಿ, ನೀವು ಸುಮ್ಮನೆ ಗುಟ್ಟು ಮಾಡುತ್ತಿದ್ದೀರಿ ಅಲ್ವಾ? ಏನೋ ಭಾರೀ ಡೆವಲಪಮೆಂಟ್ ಇರಬೇಕು ಸದ್ಯದಲ್ಲೇ ಎಂದು ನನ್ನ ಮೌನಕ್ಕೂ ಅರ್ಥ ಕಲ್ಪಿಸುತ್ತಿದ್ದರು.

ಒಂದಿಷ್ಟು ದಿನ ಈ ಕೆಲಸ ಮಾಡಿದ ಮೇಲೆ, ಇದ್ಯಾಕೋ ನನಗೆ ಹೇಳಿಸಿದ್ದಲ್ಲ ಎಂದು ಅನುಮಾನ ಬರಲು ಆರಂಭವಾಯಿತು. ಆದರೆ ಅಷ್ಟು ಸುಲಭಕ್ಕೆ ಹೊರಬರಲು ಸಾಧ್ಯವಿಲ್ಲದ ಸೆಳೆತ ಮಾಧ್ಯಮದಲ್ಲಿದೆ. ಹೀಗಾಗಿ ಆಲೋಚನೆ ಮಾಡಿ, ಟೀವಿ ಚಾನಲ್ಲಿನಲ್ಲೇ ಕೆಲಸವನ್ನು ಮುಂದುವರಿಸಲು ನಿರ್ಧರಿಸಿದೆ. ಆದರೆ, ವರದಿಗಾರನಾಗಿಯಲ್ಲ. ಮತ್ತೊಂದು ಚಾನಲ್ಲಿನಲ್ಲಿ ಧಾರಾವಾಹಿಗಳ ವಿಭಾಗಕ್ಕೆ ಸೇರಿಕೊಂಡೆ. ಯಾರೋ ಹೇಳಿದ್ದರು, ಅಲ್ಲಿ ಸ್ವಂತಿಕೆಗೆ, ಕ್ರಿಯೇಟಿವಿಟಿಗೆಲ್ಲ ಜಾಸ್ತಿ ಅವಕಾಶ ಇದೆ, ಕಥೆ ಗಿಥೆ ಬರಕೊಂಡು ಹಾಯಾಗಿರಬಹುದು ಇತ್ಯಾದಿ. ಆದರೆ, ನಾನು ಬೆಂಕಿಯಿಂದ ಬಾಣಲೆಗೆ ಹೈಜಂಪ್ ಮಾಡಿದ್ದೇನೆ ಅನ್ನೋದು ಗೊತ್ತಾಗುವುದಕ್ಕೆ ಹೆಚ್ಚೇನೂ ಕಾಲ ಬೇಕಾಗಲಿಲ್ಲ.

ಧಾರಾವಾಹಿಗಳ ಬಗ್ಗೆ ನನಗೆ ಪ್ರೀತಿ ಇಲ್ಲ ಅಂತೇನೂ ಅಲ್ಲ. ಮಹಾಭಾರತದಿಂದ ತೊಡಗಿ ಮಾಯಾಮೃಗದವರೆಗೂ ಸುಮಾರು ಧಾರಾವಾಹಿಗಳನ್ನ ಬೆನ್ನುಬಿಡದೇ ನೋಡಿದ್ದು ಹೌದು. ಆಮೇಲೆ ಆ ಬಗೆಗಿನ ಆಸಕ್ತಿಯೇ ಕುಂದಿಹೋಗಿತ್ತು. ಆದರೆ ಈಗ ಮತ್ತೆ ಸೀರಿಯಲ್ಲುಗಳ ಬೆನ್ನು ಬೀಳುವ ಗ್ರಹಚಾರ ಆರಂಭವಾಯಿತು. ನಮ್ಮ ಚಾನಲ್ಲಿನ ಸೀರಿಯಲ್ಲುಗಳು,ಎದುರಾಳೀ ವಾಹಿನಿಗಳ ಸೀರಿಯಲ್ಲು ಅವುಗಳ ಟಿ,ಆರ್,ಪಿ ಎಷ್ಟು,ನಮಗೆ ಹೆಚ್ಚು ಬಂದಿದ್ದರೆ ಏನು ಕಾರಣ,ಕಡಿಮೆಯಾದರೆ ಯಾಕೆ? ಅದರ ಕಥೆ ಏನು? ಅಲ್ಲಿ ಸೊಸೆಯನ್ನು ಅತ್ತೆ ಕೊಂದಳಾ ಇಲ್ಲವಾ?ಕಳೆದು ಹೋಗ ಮಗ ಸಿಕ್ಕನೋ ಇಲ್ಲವೋ? ಆ ಚಾನಲ್ಲಿನ ಸೀರಿಯಲ್ಲಿನಲ್ಲಿ ಮಂತ್ರಶಕ್ತಿಯಿಂದ ಸತ್ತು ಮೂರು ದಿನದ ಮೇಲೆ ಅವಳ್ಯಾವಳೋ ಬದುಕಿದ್ದಕ್ಕೆ ನಮ್ಮ ಸೀರಿಯಲ್ಲಿನ ರೇಟಿಂಗು ಕಡಿಮೆಯಾಯಿತಾ? ನಮ್ಮ ಧಾರಾವಾಹಿಯಲ್ಲಿ ನಾವು ಗಂಡ ಹೆಂಡತಿ ಅನ್ಯೋನ್ಯವಾಗಿದ್ದಾರೆ ಎಂದು ತೋರಿಸಿದ್ದು ತಪ್ಪಾ? ಹೀಗೆ ಪ್ರಾಯಶಃ ತಲೆ ಬುಡ ಇದ್ದಿರಬಹುದಾದ,ಆದರೆ ನಮಗೆ ಅರ್ಥವಾಗಲು ಕಷ್ಟವಾಗುತ್ತಿದ್ದ ವಿಚಾರಗಳನ್ನು ಗುಡ್ಡೆ ಹಾಕಿಕೊಂಡು ಅವುಗಳ ಪೋಸ್ಟ್ ಮಾರ್ಟಂ ಮಾಡಬೇಕಿತ್ತು.

ದಿನವೂ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಬಂದ ಸೀರಿಯಲ್ಲುಗಳ ಟೇಪು ನೋಡಿ, ಅಲ್ಲಿರಬಹುದಾದ ತಪ್ಪುಗಳನ್ನ ಹುಡುಕಿ, ಸರಿಪಡಿಸಲು ಹೆಣಗುವುದು ಒಂದು ತೂಕವಾದರೆ, ಹೊಸ ಸೀರಿಯಲ್ಲು ಮಾಡುತ್ತೇವೆ ಅಂತ ಕಥೆ ಹಿಡಿದುಕೊಂಡು ಬರುವವರನ್ನು ನಿಭಾಯಿಸುವುದು ಮತ್ತೊಂದು ತೂಕ! ಯಾರ ಬಳಿ ಬೇಕಾದರೂ ಅದ್ಭುತ ಕಥೆ ಇರುವ ಸಾಧ್ಯತೆ ಇರುವುದರಿಂದ, ನಿರ್ಲಕ್ಷ್ಯ ಮಾಡುವ ಹಾಗೇ ಇಲ್ಲ.

ತಮಿಳು ಕಥೆಗಾರನೊಬ್ಬ ಒಂದು ದಿನ ಬಂದು ತನ್ನ ಸೀರಿಯಲ್ಲಿನ ಕಥೆ ಹೇಳುತ್ತಿದ್ದ. ಮೊದಲ ವಾರವೇ ಲವ್ ಮ್ಯಾರೇಜು, ಅತ್ತೆ ವಿರೋಧ, ಸೊಸೆಗೆ ಹಿಂಸೆ ಇತ್ಯಾದಿ ಕಥೆಯೆಲ್ಲ ಇದ್ದು ಹೆಂಗಳೆಯರ ಕರುಳನ್ನ ಕಿತ್ತು ಕೈಯಲ್ಲಿ ಕೊಟ್ಟು ಅಳಿಸುವುದಾಗಿ ಶ್ರೀಯುತ ನಿರ್ದೇಶಕರು ನಮಗೆ ಪ್ರಾಮಿಸ್ ಮಾಡುತ್ತಿದ್ದರು. ನಮ್ಮಲ್ಲಿನ ಬರಹಗಾರರ ಬಗ್ಗೆ ಯಾವತ್ತೂ ವಿಶ್ವಾಸ ಇಟ್ಟಿರದ ಆ ಮಹಾನುಭಾವರು ಚೆನ್ನೈನಿಂದ ಕಥೆಗಾರರನ್ನೂ, ಕಥೆಗಳನ್ನೂ ಆಮದು ಮಾಡಿಕೊಳ್ಳುತ್ತಾರಂತೆ.

“ಸರ್.. ಅವ್ಳು ಮೆಲ್ಲ ವರುವಳ್ ಸಾರ್.. ಕೈಲೆ ನೈಪು.. ಮೆಲ್ಲ ಅಂದರೆ ಮೆಲ್ಲ ವರ್ತಾಳೆ.. ನೈಪು ಕ್ಲೋಸಪ್ ಶಾಟ್ ಸಾರ್.. ಅಂಗೇ ಪ್ಯಾನು.. ಮುಕ ರಿವೀಲ್ ಪಣ್ಣಕೂಡಾದ್ ಸಾರ್.. ಅದು ತೋರಿಸಲ್ಲ.. ಗೊತ್ತು ಸರ್ ಎನಕು.. ಅಲ್ಲಿ ಹೀರೋಯಿನ್ ಕೂತು ಬಿಟ್ಟಿದಾಳೆ.. ನೈಫು ಬ್ಯಾಕ್ ಸೈಡಿಂದ ಬರತ್ತೆ ಸರ್.. ಹೀರೋಯಿನ್ ಶಾಟ್, ನೈಫ್ ಶಾಟ್.. ಫ್ರೈಡೇ ಎಪಿಸೋಡ್ ಎಂಡ್ ಸಾರ್!  ವೊಳ್ಳೆ ಟೆನ್ಶನ್ ಅಲ್ಲ ಸಾರ್?” ಎಂದ. ಸೋಮವಾರದ ಎಪಿಸೋಡ್ ಏನು ಎಂದು ತಡೆಯಲಾರದೆ ಕೇಳಿದೆ ನಾನು. ಸಾರ್, ಅದು ಸುಮ್ಮಗೆ ಸಾ.. ಫ್ರೈಡೇ ಕಿಕ್ ಗೆ! ಮಂಡೇ ಓಪನಿಂಗ್ ಲೆ ಅತ್ತೆ ವಂದು ಮೆಲ್ಲ ಆಪಲ್ ಕಟ್ಟ್ ಮಾಡ್ತಾರೆ ಸಾರ್ ನೈಪ್ ಲೆ.. ಅಂದ ಮಹಾಶಯ! ಪುಣ್ಯಕ್ಕೆ ನನ್ನ ಪಕ್ಕದಲ್ಲಿ ಯಾವುದೇ ಚೂರಿ ಇರಲಿಲ್ಲ.

ಇಂತಹ ಕಥೆಗಳನ್ನು ಪ್ರಾಯಶಃ ವಾರಕ್ಕೆ ಹತ್ತಿಪ್ಪತ್ತು ಕೇಳಿ ಕೇಳಿ, ಅಥವಾ ನೋಡೀ ನೋಡೀ ನವರಸಗಳನ್ನು ಗುರುತಿಸುವ ಇಂದ್ರಿಯಗಳು ನನ್ನಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿಬಿಟ್ಟಿವೆ. ಮನೆಯಲ್ಲಿ ಹೆಂಡತಿ ಒಂದು ದಿನ ಏನೋ ಬೇಸರ ತೋಡಿಕೊಳ್ಳುತ್ತಿದ್ದಳು. ನಾನೋ, ನನ್ನ ಎದುರಾಳೀ ವಾಹಿನಿಯಲ್ಲಿನ ಸೀರಿಯಲ್ ನ ಗಮನವಿಟ್ಟು ನೋಡುತ್ತಿದ್ದೆ. ಮಾರನೇ ದಿನ ಬಾಸು ಕಥೆ ಕೇಳುವ ಎಲ್ಲ ಸಾಧ್ಯತೆಗಳಿದ್ದವು. ನಿನಗೆ ಪ್ರಾಯಶಃ ನನ್ನ ಕಷ್ಟ ಅರ್ಥ ಆಗೋಕೆ ಅಲ್ಲಿ ಸೀರಿಯಲ್ಲಿನಲ್ಲಿ ತೋರಿಸೋ ಹಾಗೆ ಬ್ಯಾಕ್ ಗ್ರೌಂಡ್ ಮ್ಯೂಸಿಕ್ಕು ಬೇಕೇನೋ ಅಲ್ಲವಾ ಎಂದು ಬಾಗಿಲು ಧಡಾರನೆ ಹಾಕಿಕೊಂಡಳು. ಅವಳು ಬಾಗಿಲು ಹಾಕಿಕೊಳ್ಳೋದಕ್ಕೋ ಸೀರಿಯಲ್ಲಿನಲ್ಲಿ  ಸೊಸೆ ಬಾಗಿಲು ಹಾಕಿಕೊಳ್ಳೋದಕ್ಕೂ ಸರಿಯಾಗಿ ಹೊಂದಿಕೆಯಾಯಿತು. ನಾನು ಬ್ರೇಕ್ ಬಂದ ಕೂಡಲೇ ಎದ್ದು ಹೋಗಿ ಹೆಂಡತಿಯ ಸಮಾಧಾನ ಮಾಡಿದೆ.

ನನ್ನ ಚಿಕ್ಕಮ್ಮ ಮನೆಗೆ ಬಂದಿದ್ದಳು, ನಮ್ಮ ಚಾನಲ್ಲಿನ ಒಂದು ಸೀರಿಯಲ್ಲು ಆಕೆಗೆ ಬಹಳ ಫೇವರಿಟ್ಟು. ಮುಂದೇನಾಗತ್ತೆ ಅದರ ಕಥೆ ಹೇಳು ಮಾರಾಯ, ಮಗಳಿಗೆ ಪರೀಕ್ಷೆ ಬೇರೆ ಇದೆ, ನೀನು ಕಥೆ ಹೇಳಿದರೆ ನಾನು ಸೀರಿಯಲ್ಲೇ ನೋಡಲ್ಲ ಒಂದು ತಿಂಗಳು ಅಂತ ಅವಳು. ನೀನೇ ಗೆಸ್ ಮಾಡು ಏನಾಗತ್ತೆ ಅನ್ನೋದನ್ನ ಅಂದೆ. ಹಿಂದಿನ ದಿನ ತಾನೇ ನಾವು-ಡೈರೆಕ್ಟರು ಬೆಳಗ್ಗಿಂದ ಸಂಜೆಯವರೆಗೆ ಕೂತು, ಆ ಧಾರಾವಾಹಿಗೆ ಊಹಿಸಲು ಅಸಾಧ್ಯವಾದ ಭಯಾನಕ ತಿರುವುಗಳನೆಲ್ಲ ಆಲೋಚಿಸಿ, ಅದಕ್ಕೊಂದು ಅಂತಿಮ ರೂಪ ಕೊಟ್ಟಿದ್ದೆವು. ಚಿಕ್ಕಮ್ಮ ಇದ್ದೋಳು, “ಏನಿಲ್ಲ ಹೆಚ್ಚಾಗಿ ಆ ಸುನೀತಾ ಇದಾಳಲ್ಲ, ಅವಳ ನಿಜವಾದ ಅಮ್ಮ ಸಿಕ್ಕಿಬಿಡ್ತಾರೆ, ಆದ್ರೆ ಈಗಿರೋ ಅಮ್ಮ ಅವಳನ್ನ ಚೆನ್ನಾಗಿ ನೋಡ್ಕೊಂಡಿರೋದ್ರಿಂದ ನಿಜವಾದ ಅಮ್ಮ ವಾಪಸ್ ಹೋಗ್ತಾರೆ ಅಥವಾ ಏನೋ ಕಾಯಿಲೆ ಕಸಾಲೆ ಬಂದು ಸತ್ತೇ ಹೋಗ್ತಾರೇನೋ” ಅಂದಳು. ನನಗೆ ತಲೆ ಚಚ್ಚಿಕೊಳ್ಳುವಂತಾಯಿತು. ನಾವು ಇಡೀ ದಿನ ಕೂತು ತೌಡು ಕುಟ್ಟಿ ಇದೇ ಕತೆ ಆಲೋಚನೆ ಮಾಡಿದ್ದವು! “ನೀನು ಬಂದು ನಮ್ಮ ಟೀಮು ಸೇರ್ಕೋ ಮಾರಾಯ್ತಿ” ಅಂತಂದು ಸುಮ್ಮನಾದೆ.

ಸೀರಿಯಲ್ಲುಗಳ ಜಗತ್ತಿಗೂ ಮಹಿಳೆಯರಿಗೂ ಅವಿನಾಭಾವ ಸಂಬಂಧ ಎನ್ನುವುದು ಎಲ್ಲರಿಗೂ ಗೊತ್ತಿರುವುದೇ. ಆದರೆ ಅದರ ನಿಜವಾದ ಅರ್ಥ ಆಗಿದ್ದ ಮಾತ್ರ ನನಗೆ ಈ ಕೆಲಸ ಮಾಡಲು ಆರಂಭಿಸಿದ ಮೇಲೆಯೇ. ನಮ್ಮ ಸೀರಿಯಲ್ಲುಗಳ ಬಗ್ಗೆ ಜನಾಭಿಪ್ರಾಯ ಕೇಳಲು ಆಗೀಗ ಕಾರ್ಯಕ್ರಮಗಳನ್ನು ಮಾಡುತ್ತಿದ್ದೆವು. ಒಮ್ಮೆ ಹಾಸನದಲ್ಲಿ, ಒಬ್ಬ ಹೆಂಗಸು ಬಂದು ಆಗತಾನೇ ನಿಲ್ಲಿಸಿದ್ದ ನಮ್ಮ ಸೀರಿಯಲ್ ಒಂದರ ಹೆಸರು ಹೇಳಿ,”ಸಾರ್, ಅದ್ಯಾಕ್ ಆ ಧಾರ್ವಾಹಿ ನಿಲ್ಸಿದ್ರಿ” ಅಂದಳು.. ನಾನು ಅವಳಿಗೆ “ಟಿ.ಆರ್.ಪಿ ಇರಲಿಲ್ಲ..ಹಾಗಾಗಿ ನಿಲ್ಲಿಸಬೇಕಾಯ್ತು” ಅಂದೆ. ಏನ್ ಟೀಆರ್ಪಿ ಗೀಆರ್ಪಿ ಎಲ್ಲ ನಂಗೊತ್ತಿಲ್ಲ..ಅಂತಾ ಒಳ್ಳೇ ಸೀರಿಯಲ್ಲು ಅಣ್ಣ.. ನನ್ ಸಂಸಾರಾ ಉದ್ದಾರ ಮಾಡಿದ್ ಧಾರವಾಹೀನ ಅಂಗೆಲ್ಲ ನಿಲ್ಲುಸ್ ಬುಟ್ರಲ್ಲಣ್ಣ ಅಂತ ಭಾವುಕಳಾಗಿ ಹೇಳುತ್ತ ಕಣ್ಣಲ್ಲೆಲ್ಲ ನೀರು ತಂದುಕೊಂಡಳು. ವಿಷ್ಯ ಏನು ಅಂದ್ರೆ ಅವಳ ಗಂಡ ಕುಡೀತಿದ್ದನಂತೆ.ಸಿಕ್ಕಾಪಟ್ಟೆ. ಒಂದು ದಿನ ನಮ್ಮ ಸೀರಿಯಲ್ಲಿನ ಹೀರೋಯಿನ್ನು ಕುಡಿದು ಬಂದ ತನ್ನ ಗಂಡನಿಗೆ ಪೊರಕೆಯಲ್ಲಿ ಹೊಡೆದದ್ದನ್ನು ನೋಡಿ ಈಕೆ ಧೈರ್ಯ ತಂದುಕೊಂಡು ತನ್ನ ಗಂಡನಿಗೂ ಅದೇ ಗತಿ ಕಾಣಿಸಿದ್ದಾಳೆ. ವಠಾರದ ಅಕ್ಕಪಕ್ಕದ ಜನಗಳೆದುರು ಅವನ ಮರ್ಯಾದೆ ಹೋಗಿದೆ. ಮಾರನೇ ದಿನದಿಂದ ಕುಡಿತ ಹದಕ್ಕೆ ಬಂದಿದೆ! “ಏನಾರ ಮಾಡಿ ಮತ್ತೆ ಆ ಧಾರ್ವಾಹಿ ಶುರು ಮಾಡಿ” ಅಂತ ಗೋಗರೆದಳು ಆಕೆ. ನಾನು ಈ ಕಥೆಯನ್ನ ನಮ್ಮ ಮಾರ್ಕೆಟಿಂಗ್ ವಿಭಾಗದೋರಿಗೆ ಹೇಳಿದರೆ, ಅವರು ನನಗೆ ಪೊರಕೆ ಸೇವೆ ಮಾಡುವ ಸಾಧ್ಯತೆ ಇದ್ದದ್ದರಿಂದ, ಅವಳನ್ನ ಏನೋ ಸಮಾಧಾನ ಮಾಡಿ ಸಾಗಹಾಕಿದೆ.

ಪ್ರಾಯಶಃ ಎಲ್ಲ ವರ್ಗದ ಹೆಂಗಸರೂ ಕೂಡ ಈ ಸೀರಿಯಲ್ಲುಗಳನ್ನು ತಮ್ಮದೇ ಭಾವ ವಲಯದೊಳಗೆ ತಂದುಕೊಂಡು ನೋಡುತ್ತಾರೆ. ಅಲ್ಲಿನ ಪಾತ್ರಗಳು ಅವರನ್ನೇ ಪ್ರತಿನಿಧಿಸುತ್ತವೆ. ತಾವು ಕಂಡ ಕನಸುಗಳನ್ನು, ತಮ್ಮಿಂದ ಎಂದಿಗೂ ಮಾಡಲಾಗದ ಕೆಲಸವನ್ನು ಧಾರಾವಾಹಿಯ ಪಾತ್ರವೊಂದು ನನಸಾಗಿಸುತ್ತಿದೆ ಎಂಬುದೇ ಹೆಚ್ಚಿನವರಿಗೆ ಅತ್ಯಂತ ಖುಷಿ ಕೊಡುವ ವಿಚಾರ. ಎಂದೆಂದಿಗೂ ಅತ್ತೆಗೆ ಎದುರಾಡದ ಸೊಸೆಯೊಬ್ಬಳಿಗೆ, ಸೀರಿಯಲ್ಲಿನ ಸೊಸೆ ಅತ್ತೆಗೇ ಎದುರುನಿಂತರೆ ಆ ಪಾತ್ರದೊಳಗೆ ತಾನೇ ಆವಾಹನೆಯಾದಂತೆ ಅನ್ನಿಸುತ್ತದೆ. ಅಷ್ಟರಮಟ್ಟಿಗಾದರೂ ನೆಮ್ಮದಿ ಆಕೆಗೆ. ಅಪ್ಪನ ನೆರಳು ಕಂಡರೆ ಹೆದರುವ ಹುಡುಗಿಗೆ, ಮನೆಯವರನ್ನು ವಿರೋಧಿಸಿ ಮದುವೆಯಾದ ಧಾರಾವಾಹಿಯ ಹುಡುಗಿ ಆದರ್ಶಪ್ರಾಯಳು! ಒಬ್ಬಬ್ಬೊರಿಗೂ ಒಂದೊಂದು ಕಾರಣಗಳಿವೆ, ಧಾರಾವಾಹಿ ನೋಡಲು. ಹೀಗಾಗಿ ಕೊನೆಗೆ ಬೈದುಕೊಂಡಾದರೂ ಮಂದಿ ಸೀರಿಯಲ್ ನೋಡೇ ನೋಡುತ್ತಾರೆ!

ನನ್ನ ತಂಗಿಯ ಬಾಣಂತನಕ್ಕೆ, ಊರಿಂದ ಒಬ್ಬಾಕೆ ಬಂದಿದ್ದರು. ಆಕೆಗೆ ಅದೇನೋ ತೊಂದರೆಯಾಗಿ ಕಳೆದ ನಾಲ್ಕೆಂಟು ವರ್ಷದಿಂದ ಕಿವಿ ಕೇಳಿಸುವುದಿಲ್ಲ. ಅದೇ ಕಾರಣಕ್ಕೆ ಕುಟುಂಬಸ್ಥರೂ ಅವರನ್ನ ದೂರ ಮಾಡಿದ್ದಾರೆ.  ಇನ್ನೂ ನಲವತ್ತು-ನಲ್ವತ್ತೈದರ ಪ್ರಾಯದ ಆಕೆ ಅವರಿವರಿಗೆ ಹೆರಿಗೆ ಬಾಣಂತನಕ್ಕೆ ಸಹಾಯ ಮಾಡುತ್ತ, ಅಡುಗೆ ಮಾಡಿಕೊಡುತ್ತ ಜೀವನ ಸಾಗಿಸುತ್ತಾರೆ.

ಅವರು ದಿನಾ ಸಂಜೆ ತಮ್ಮ ಒಂದು ಹಂತದ ಕೆಲಸ ಮುಗಿದ ಮೇಲೆ ಕಡ್ಡಾಯವಾಗಿ ಕೂತು ಮನೆ ಮಂದಿಯ ಜೊತೆಗೆ ಯಾವುದೋ ಒಂದು ಸೀರಿಯಲ್ ನೋಡುತ್ತಿದ್ದರು. ಕಿವಿ ಕೇಳದವರು ಸೀರಿಯಲ್ ಯಾಕೆ ನೋಡುತ್ತಾರೆ ಅನ್ನುವುದು ನಮ್ಮೆಲ್ಲರ ಪ್ರಶ್ನೆ.  ತೀರಾ ಕಿವಿ ಹತ್ತಿರ ಹೋಗಿ ಕೂಗಿದರೆ ಮಾತ್ರ ನಾವು ಹೇಳುವುದು ಕೇಳುತ್ತಿತ್ತು. ಒಂದು ದಿನ ಆಕೆಗೆ ಯಾವುದೋ ಕಾರಣಕ್ಕೆ ಸಂಚಿಕೆಯೊಂದನ್ನು ನೋಡಲಾಗಿಲ್ಲ. ಮಾರನೇ ದಿನ ತಂಗಿಯ ಬಳಿ, “ರಾಘವೇಂದ್ರನಿಗೆ ಏನಾಯ್ತು ನಿನ್ನೆ? ಅಶ್ವಿನಿನ ಮದುವೆಯಾಗ್ತಾನಂತ ಅವನು? ಅಂತ ಕೇಳಿದರು. ಇವಳಿಗೆ ತಲೆಬುಡ ಅರ್ಥವಾಗಲಿಲ್ಲ! ಆ ಹೆಸರಿನ ಯಾವ ಪಾತ್ರಗಳೂ ಅವರು ನೋಡುವ ಸೀರಿಯಲ್ಲಿನಲ್ಲಿ ಇಲ್ಲ.

ಆಮೇಲೆ ನಿಧಾನಕ್ಕೆ ನಮಗೆ ಹೊಳೆದದ್ದೇನೆಂದರೆ, ಸೀರಿಯಲ್ ನೋಡುತ್ತ ನೋಡುತ್ತ ಆಕೆ ತನ್ನದೇ ಕಥೆಯೊಂದನ್ನು ಮನಸ್ಸಿನಲ್ಲಿ ಹೆಣೆದುಕೊಂಡಿದ್ದರು. ಅಲ್ಲಿನ ಚಲಿಸುವ ಚಿತ್ರಗಳಿಗೆ ಇವರದೇ ಚಿತ್ರಕಥೆ. ಪಾತ್ರಗಳಿಗೊಂದೊಂದು ಹೆಸರು. ಕಣ್ಣಿಗೆ ಕಾಣುವ ಪಾತ್ರಗಳಿಗೆ ತಮ್ಮದೇ ಕಥೆಯನ್ನು ಆರೋಪಿಸಿಕೊಳ್ಳುತ್ತ ಆಕೆ ಧಾರಾವಾಹಿ ನೋಡುತ್ತಿದ್ದರು. ಪ್ರಪಂಚದ ಯಾವ ಶಬ್ದಗಳೂ ಅವರನ್ನು ತಲುಪುವುದಿಲ್ಲವಾದರೂ, ಅವರ ಒಳಗಿನ ಮಾತುಗಳಿಗೆ-ಕಲ್ಪನೆಗಳಿಗೆ ಈ ಧಾರಾವಾಹಿ ಸೇತುವೆಯಂತೆ ಕೆಲಸ ಮಾಡುತ್ತಿತ್ತು!

ಪ್ರಾಯಶಃ ಅವರ ಮನಸ್ಸಿನಲ್ಲಿ ನಮ್ಮ ಬಳಿ ಇದ್ದಿರಬಹುದಾದ ಕಥೆಗಳನ್ನು ಮೀರಿಸುವ ಕಥೆ ಇತ್ತೋ ಏನೋ? ಆದರೆ ನನಗೆ ಕೇಳುವ ಧೈರ್ಯ ಬರಲಿಲ್ಲ. ಹೊರ ಜಗತ್ತಿಗೆ ಬಂದು ಆ ಕಥೆ ಹಾಳಾಗುವುದಕ್ಕಿಂತ, ಅವರೊಳಗೇ ಅದು ಧಾರೆಯಾಗಿ ಪ್ರವಹಿಸಲಿ ಅಂದುಕೊಂಡು ಸುಮ್ಮನಾದೆ.

ಈಗ ನಾನು ಕೆಲವು ಸಲ ಟಿವಿಯ ಧ್ವನಿಯನ್ನು ಮ್ಯೂಟ್ ಮಾಡಿಕೊಂಡು ಧಾರಾವಾಹಿ ನೋಡಲು ಯತ್ನಿಸುತ್ತೇನೆ. ಏನೂ ಅರ್ಥವಾಗುವುದಿಲ್ಲ.


(ಕನ್ನಡ ಪ್ರಭ ಯುಗಾದಿ ಲಲಿತಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಬರಹ)






9 ಕಾಮೆಂಟ್‌ಗಳು:

Sandeepa ಹೇಳಿದರು...

ಚಂದ ಬರೆದಿದ್ದೀರಿ.
ಅಂದಹಾಗೆ
" ನಾನು ಬೆಂಕಿಯಿಂದ ಬಾಣಲೆಗೆ ಹೈಜಂಪ್ ಮಾಡಿದ್ದೇನೆ ಅನ್ನೋದು ಗೊತ್ತಾಗುವುದಕ್ಕೆ ಹೆಚ್ಚೇನೂ ಕಾಲ ಬೇಕಾಗಲಿಲ್ಲ."
ಬೆಂಕಿಯಿಂದ ಬಾಣಲೆಗೆ? ಹ್ಮ್ :)

Parisarapremi ಹೇಳಿದರು...

shreenidhi avare, nimma prabandhavannu Odi bahaLa santhosha paTTe.. naanu 10 ne taragatige paaTha maaDOke hOgtaaa ideeni, nange neevu shubha haaraisi. naanobba kavi. :p :p

ಸಂಧ್ಯಾ ಶ್ರೀಧರ್ ಭಟ್ ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಸಂಧ್ಯಾ ಶ್ರೀಧರ್ ಭಟ್ ಹೇಳಿದರು...

Congrats..:) chandada prabhandha...

ಸಿಂಧು sindhu ಹೇಳಿದರು...

ನಿಧೀ,
ತುಂಬಾ ಚೆನಾಗಿ ಬರದ್ದೆ. ಸುಲಲಿತವಾದ ಓದು.
ಫ್ರೈಡೆ ಕಿಕ್ಕು ಸರಿ ಒದೀತು :)

ಸರಿ ಈಗ... ಹೊಸ ಸ್ಟೈಲ್ ಅಲ್ಲಿ barbeque ಬೇರೆ ನಡೀತು. ಬೆಂಕಿ, ಬಾಣಲೆ ಬಿಟ್ಟು ಅದನ್ನು ಟ್ರೈ ಮಾಡಲಕ್ಕು.. :)
ಒಟ್ಟಲ್ಲಿ ಬೇಯದೇ ಬದುಕು ಅಂತ ಕಾಣುಸ್ತು. ಒಬ್ಬೊಬ್ರದ್ದು ಒಂದೊಂದು ಹದ!

ಧಾರಾವಾಹಿಗೆ ಅಲ್ದೆನು ಬ್ಲಾಗಲ್ಲೂ ಎಂತಾರು ಬರೀತಾ ಇರು ಮಾರಾಯ. ಈ ಚಂದದ ಬರಹಗಳು ಬರೀ ಟೀಆರ್ಪಿ ಗೆ ಸೀಮಿತ ಆಗಕ್ಕ?

- ಪ್ರೀತಿಯಿಂದ, ಸಿಂಧು

sunaath ಹೇಳಿದರು...

ನಿಮ್ಮ ಬರಹಕ್ಕೆ full TRP!

ವಿಕ್ರಮ ಹತ್ವಾರ ಹೇಳಿದರು...

so composed and hilarious...ultimate ending...

Keshav.Kulkarni ಹೇಳಿದರು...

ಸಕ್ಕತ್! ಪ್ರತಿ ಸಾಲೂ ಇಷ್ಟವಾಯಿತು.

Preethi Shivanna ಹೇಳಿದರು...

Bahala chennagi baritira Swamy,Omme nimmablog open madidre,samaya sariyode tiliyalla :)