ಬುಧವಾರ, ನವೆಂಬರ್ 05, 2014

ಎಮ್ಮ ಮನೆಯಂಗಳದಿ..


ಒಂದು ದಿನ ಸಂಜೆಯ ಹೊತ್ತಿಗೆ ಗಾಂಧಿಬಜಾರಿನ ಗಿಜಿಗುಡುವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನನಗೆ ಅಚಾನಕ್ಕಾಗಿ ಆ ಮನೆ ಕಣ್ಣಿಗೆ ಬಿತ್ತು. ಥಳಥಳ ಹೊಳೆಯುವ ಬೋರ್ಡುಗಳು, ಬಗೆ ಬಗೆಯ ಬೆಳಕುಗಳ ಬೆರಗಲ್ಲಿ ಅದ್ದಿ ತೆಗೆದ ರಸ್ತೆ ಕಟ್ಟಡಗಳು ಮತ್ತು ಮನುಷ್ಯರು.. ದೊಡ್ಡದನಿಯಲ್ಲಿ ಕರೆಯುವ ರಸ್ತೆಯಂಚಿನ ವ್ಯಾಪಾರಿಗಳು, ಫುಟ್ ಪಾತಿನಲ್ಲೇ ಮದುಮಗಳಿಗೆ ಮೆಹಂದಿ ಹಚ್ಚುತ್ತಿರುವ ಪ್ರಚಂಡ ಕಲಾಕಾರರು, ಬಣ್ಣಬಣ್ಣದ ಬಲೂನುಗಳನ್ನು ಎಲ್ಲರ ನೆತ್ತಿಯ ಮೇಲೆತ್ತಿ ಸಾಗುತ್ತಿರುವ ವ್ಯಾಪಾರಿ.. ಗಾಜಿನ ಹಿಂದೆ ಹೊಸ ಬಟ್ಟೆ ತೊಟ್ಟರೂ ಸುಮ್ಮನೆ ನಿಂತಿರುವ ಗೊಂಬೆಗಳು, ಇವನ್ನೆಲ್ಲ ನೋಡುತ್ತ ಹೋಗುತ್ತಿದ್ದವನಿಗೆ ಆ ಮನೆ ಕಾಣಿಸಿತು.  ಸುತ್ತಲಿನ ಚಿತ್ರಣವನ್ನು ಅಣಕಿಸಲೋ ಎಂಬಂತೆ ಯಾವನೋ ಮಾಯಗಾರನು ಮಲೆನಾಡಿನ ಹಳ್ಳಿಯೊಂದರಿಂದ ಕತ್ತರಿಸಿ ತಂದಿಟ್ಟಂತೆ ಆ ಮನೆ,  ಅಲ್ಲಿ- ಆ ಗಾಂಧಿಬಜಾರಿನ ಮುಖ್ಯ ರಸ್ತೆಯ ಗದ್ದಲದೊಳಗೆ ಸದ್ದಿಲ್ಲದೇ ಇತ್ತು. ಮನೆಯ ಮುಂದೊಂದು ಅಂಗಳ. ಅಲ್ಲೊಂದಿಷ್ಟು ಹೂ ಗಿಡಗಳು.. ಅಂಗಳದ ಹುಲ್ಲಿನ ಮೇಲೆ ಕೂತು ಹರಟೆ ಹೊಡೆಯುತ್ತಿದ್ದ ಅಮ್ಮ ಮಗಳು. ಸ್ಕ್ವೇರ್ ಫೀಟುಗಳಲ್ಲಿ ಭೂಮಿಯನ್ನು ಬಂಧಿಸುವ ಈ ಕಾಲದಲ್ಲಿ ಅಂಗಳವೆಂಬ ಅವಕಾಶ ಅಂಥ ಕಡೆ ಕಂಡದ್ದು ಅಚ್ಚರಿ ಮೂಡಿಸಿತ್ತು. ಬೆಂಗಳೂರಿನ ಕಿಷ್ಕಿಂಧೆಯಂತಹ ಇರುಕಿನಲ್ಲಿ ಇದೊಂದು ಬೇರೆಯೇ ಪ್ರಪಂಚದಂತೆ ಕಾಣಿಸಿತು!
ಅಂಗಳ ಅನ್ನುವ ಪುಟ್ಟ ಜಾಗ ಅದೆಂಥಹ ವೈವಿಧ್ಯಮಯ ವಿಷಯಗಳ ಆಶ್ರಯದಾಣ. ಮನೆಗೂ ಹೊರ ಪ್ರಪಂಚಕ್ಕೂ ಇರುವ ವಿಚಿತ್ರ ಕೊಂಡಿ ಈ ಅಂಗಳ. ಮನೆಯೆಂಬ ಆಶ್ರಯದಿಂದ ಜಗತ್ತೆಂಬ ಜಾಲಕ್ಕೆ ಕಾಲಿಡಬೇಕೆಂದರೆ ಮೊದಲು  ಮೀರಬೇಕಾದ್ದು ಅಂಗಳವನ್ನೇ. ಮನೆ ಗೆದ್ದು ಮಾರು ಗೆಲ್ಲಬೇಕೆಂದು ಹೊರಡುವವನಿಗೆ ಸಿಗುವ ಆರಂಭ ಅಂಗಳದಲ್ಲೇ. ಅಂಗಳವೆ ಡೊಂಕಾದರೆ, ಕುಣಿತ ಬಾರದು ಎಂದರ್ಥ, ಅಷ್ಟೇ, ಒಳಗೆ ಕಾಲಿಡುವವನಿಗೆ ಎಲ್ಲ ಕೊಳೆಯನ್ನು ಕೊಡವಿ ಸಾಗಲು, ಹೊರಗೆ ನಡೆಯುವವನಿಗೆ ಎಲ್ಲ ಸರಿಯಾಗಿದೆಯೇ ಎಂದು ನೋಡಿಕೊಳ್ಳಲು ಅಂಗಳವೇ ಜಾಗ. ಮೊದಲು ಕತ್ತಲಾಗುವುದು ಮನೆಯೊಳಕ್ಕಾದರೆ, ಮೊದಲು ಬೆಳಕಾಗುವುದು ಅಂಗಳಕ್ಕೆ! ಹುಟ್ಟಿನ ಸಂಭ್ರಮಕ್ಕೆ ಒಳಮನೆ ಸಾಕ್ಷಿಯಾದರೆ, ಸಾವಿನ ಸೂತಕಕ್ಕೆ ಅಂಗಳವೇ ಆಶ್ರಯ. ಒಳಗೆ ಯಾರು ಹೇಗೋ, ಆದರೆ ಬಯಲಂಥ ಅಂಗಳಕ್ಕೆ ಎಲ್ಲರೂ ಸಮಾನರೇ. ಆಳೂ ಅರಸನೂ ಜೊತೆಗೆ ನಿಂತು ಮಾತನಾಡಲು ಅಂಗಳದಲ್ಲಿ ಮಾತ್ರ ಸಾಧ್ಯ. ಮನೆಯೇ ಮೊದಲ ಪಾಠಶಾಲೆಯಾದರೆ, ಅಂಗಳವೇ ಮೊದಲ ಮೈದಾನ.ಮಲೆನಾಡ ಮನೆಗಳ ರಚನೆ ಗಮನಿಸಿದರೆ, ಮೇಲೆ ಮನೆಯೆಂಬ ಸ್ವರ್ಗ, ಮಧ್ಯೆ ಅಂಗಳವೆಂಬ ಮರ್ತ್ಯ, ಕೆಳಗೆ ತೋಟವೆಂಬ ಪಾತಾಳ!
ಬೇಸಗೆಯ ನನ್ನ ಅಜ್ಜನ ಮನೆಯ ಸಕಲ ಆಟಗಳಿಗೂ ಅಂಗಳವೇ ಹೆಡ್ಡಾಫೀಸಾಗಿತ್ತು. ಕಣ್ಣಾ ಮುಚ್ಚಾಲೆಯಿಂದ ತೊಡಗಿ, ಕಂಬಾಟದವರೆಗೂ ಅಂಗಳವೇ ನಮ್ಮ ಆಡುಂಬೊಲ! ನಮ್ಮ ಕೈಯ ನುಣುಪೆಲ್ಲ ಆ ಐಸ್ ಪೈಸ್ ಆಡುವ ಕಂಬಗಳಿಗೆ ಮೆತ್ತಿಕೊಂಡು, ಕಂಬಗಳ ಒರಟೆಲ್ಲ ನಮ್ಮ ಕೈಗಂಟಿಕೊಳ್ಳುವಷ್ಟು ಅಲ್ಲೇ ಆಟವಾಡುತ್ತಿದ್ದೆವು. ಒಂದಾಟ ಮುಗಿದ ಮೇಲೆ ಇನ್ನೊಂದು. ಕೂತು ಆಡುವ ಆಟ ಮುಗಿದರೆ, ನಿಂತಾಟ, ಮತ್ತೆ ಕುಣಿದಾಟ. ಚಪ್ಪರದೇಣಿಯೇ ಸಿಂಹಾಸನ, ಸಗಣಿ ಸಾರಿಸಿದ ನೆಲವೇ ವೇದಿಕೆ. ಅಡಿಕೆಯ ದಬ್ಬೆಯೇ ಶಿವಧನುಸ್ಸು, ವಜ್ರಾಯುಧ, ಟಿಪ್ಪೂಸುಲಾನನ ಕತ್ತಿ! ನಮ್ಮ  ಕುಣಿತಕ್ಕೆ ಕಂಗಾಲಾಗುವ ಅಜ್ಜಿ ಕಷ್ಟಪಟ್ಟು ಸಗಣಿ ಸಾರಿಸಿದ ನೆಲವೆಲ್ಲ ಕಿತ್ತು ಹೋಯಿತು ಎಂದು ಬೈದರೆ ನಮಗೆ ಪರಮಾನಂದ.ಏಕೆಂದರೆ ಮಾರನೇ ದಿನದ ಸಗಣಿ ಸಾರಿಸುವ ಕೆಲಸ ಎಲ್ಲ ಆಟಗಳಿಗೂ ಮಿಗಿಲು. ಕೊಟ್ಟಿಗೆಯಿಂದ ಸಗಣಿ ಬಾಚಿ ತಂದು, ಅದನ್ನ ಬಕೇಟಲ್ಲಿ ಕರಡಿ.. ಅದಕ್ಕೆ ಹಳೆಯ ಬ್ಯಾಟರಿ ಸೆಲ್ಲು ಗುದ್ದಿ ಒಳಗಿನ ಪುಡಿ ತುಂಬಿ, ಅಂಗಳದ ತುಂಬ ಸಗಣಿ ನೀರು ಚೆಲ್ಲಿ ಗುಡಿಸುವ ಮಜವೇ ಬೇರೆ. ಇಷ್ಟೆಲ್ಲ ಮಾಡಿದ ಮೇಲೆ ಸಗಣಿ ಒಣಗುವ ಪುರುಸೊತ್ತೂ ಕೊಡದೇ ಇನ್ನೊಂದೇನೋ ಮಹಾಯುದ್ಧವನ್ನು ಅಲ್ಲಿಯೇ ಹಮ್ಮಿಕೊಂಡೂ ಆಗುತ್ತಿತ್ತು.
ಮೇ ತಿಂಗಳು ಬಂತೆಂದರೆ ಅಂಗಳಕ್ಕೆ ಭರ್ಜರಿ ಕೆಲಸ. ಅಂಗಳದ ಕುರುಚಲು ಕಳೆಯನ್ನೆಲ್ಲ ಕೆತ್ತಿ, ನೀಟಾಗಿ ಶೇವ್ ಮಾಡಿದ ಮುಖದಂತೆ ಫಳಫಳಿಸುವಂತೆ ಮಾಡಿದ ಮೇಲೆ ಚಾಪೆಗಳೆಲ್ಲ ಹೊರ ಬರುತ್ತವೆ. ಕರಿದು ತಿನ್ನುವ ಹುರಿದು ಮುಕ್ಕುವ ಸಕಲ ವಸ್ತುಗಳನ್ನೂ ಸಿದ್ಧಪಡಿಸುವ ಕಾಲ ತಾನೇ ಅದು? ಹಪ್ಪಳ ಸಂಡಿಗೆಗಳನ್ನು ಮಾಡುವವರ ಪಾಲಿನ ಅಮೋಘ ಮಿತ್ರ ಅಂಗಳ. ನಮ್ಮ ದೇಶದ ಅಂಗಳಗಳಲ್ಲಿ ಅದೆಷ್ಟು ಕೋಟಿ ಕೋಟಿ ಹಪ್ಪಳಗಳು ಬಿಸಿಲಿಗೆ ತಮ್ಮನ್ನು ಸುಟ್ಟುಕೊಂಡಿವೆಯೋ ಏನೋ! ನನ್ನಪ್ಪ ಪ್ರತಿ ವರ್ಷವೂ ಕರ್ತವ್ಯವೆಂಬಂತೆ ಹಲಸಿನ ಕಾಯಿ ಕೊಯ್ಯುವುದು,ಆಮೇಲೆ ನಾವು ಅಣ್ಣತಂಗಿ ಅಪ್ಪ ಸೇರಿ ಆ ಹಲಸಿನ ಕಾಯಿಯ ಮೈ ಹಿಸಿದು ಅಂಗಳದಲ್ಲೇ ಕೆತ್ತಿ ಸೊಳೆಗಳನ್ನ ಬಿಡಿಸುವುದು, ಅಮ್ಮ ಉಳಿದ ಸಕಲ ಸಂಸ್ಕಾರಗಳನ್ನು ನೆರವೇರಿಸಿ ಹಪ್ಪಳ ಮಾಡುವುದು ಹಲ ಕಾಲ ನಡೆದು ಬಂದ ಸಂಪ್ರದಾಯ. ಬಿಸಿಲಿಗೆ ನಾಯಿ ಕಾಗೆಗಳನ್ನೋಡಿಸುವ ನೆಪದಲ್ಲಿ, ಅಲ್ಲೇ ಕೂತು ಹಸಿ ಹಪ್ಪಳ ತಿನ್ನುವ ರುಚಿಯನ್ನು ಇಲ್ಲಿ ವರ್ಣಿಸಲು ಯಾವ ಪದಗಳೂ ಇಲ್ಲ. ಅಂಗಳ ದೊಡ್ಡದಾದಷ್ಟೂ ಅಕ್ಕಪಕ್ಕದವರ ಕಣ್ಣು ಬೀಳುವುದೂ ಜಾಸ್ತಿ. ಏಕಕಾಲದಲ್ಲಿ ಹೆಚ್ಚು ಹಪ್ಪಳಗಳನ್ನ ಒಣಗಿಸಿಕೊಳ್ಳಬಹುದೆಂಬ ಸಾಧನೆಯೇನು ಕಡಿಮೆಯೇ?
ಮಳೆಗಾಲದ ಮೋಡಗಳು ದಟ್ಟೈಸಿಕೊಳ್ಳುವ ಮೊದಲು ಎಲ್ಲವನ್ನೂ ಕಳಚಿಕೊಂಡು ಆಗಸಕ್ಕೆ ನೇರ ಮುಖ ಮಾಡಿಕೊಳ್ಳಬೇಕಾದ್ದು ಅಂಗಳದ ಕರ್ಮ. ಮಲೆನಾಡಿನಲ್ಲಾದರೆ ಅಡಿಕೆಯ ಸೋಗೆಗಳೂ, ಕರಾವಳಿಯಲ್ಲಿ ತೆಂಗಿನ ಮಡಲುಗಳೂ ಮತ್ತೆ ಕೊಟ್ಟಿಗೆಯಟ್ಟ ಸೇರಿದರೆ, ಬತ್ತಲು ಕಂಬಗಳು ಮಾತ್ರ ದೀನ ದಿಗಂಬರರಂತೆ ಮಳೆ ಹೊಡೆತಕ್ಕೆ ಸಿದ್ಧವಾಗಿ ನಿಲ್ಲುತ್ತವೆ. ಅಡಿಕೆ ಮರವನ್ನು ಸೀಳಿ ಮಾಡಿದ ಟೆಂಪರರಿ ಕಾಲುಹಾದಿ ದಣಪೆಯಿಂದ ಮನೆಯವರೆಗೆ. ಹೊರಲೋಕದಿಂದ ಒಳನಾಕಕ್ಕೆ.ಮಳೆ ನೀರು ಹಂಚಿಂದ ಬಿದ್ದು ನೆಲ ಹಾಳಾಗಬಾರದೆಂದು ಕೆಳಗೆ ಮುಚ್ಚಿಕೊಂಡಿರುವ ಸೊಪ್ಪು,ಸೋಗೆಗಳು. ಅದೇ ಹೊತ್ತಿಗೆ, ನೆಲದಾಳದಲ್ಲಿ ಎಲ್ಲಿರುತ್ತವೋ ಏನೋ.. ಸಾವಿರ ಸಾವಿರ ಸಂಖ್ಯೆಯಲ್ಲಿ ಅಂಗಳದ ಆಳದಿಂದ ಮೇಲೆದ್ದು ಬರುವ ಹಾತೆಗಳು ತಮ್ಮ ಆಗಮನದ ಜೊತೆಗೆ, ಮಳೆಯ ಆಗಮನವನ್ನೂ ಸಾರುತ್ತವೆ. ಅಂಗಳವನ್ನೆಲ್ಲ ಮುಚ್ಚುವಂತೆ ಬಿದ್ದಿರುವ ಆ ಹಾತೆಗಳ ರೆಕ್ಕೆಗಳು ಅಂದು ಸಂಜೆಯೋ, ಮಾರನೇ ದಿನ ಬೆಳಗ್ಗೆಯೋ ಬರುವ ಮಳೆಗೇ ಕೊಚ್ಚಿಕೊಂಡು ಹೋಗಬೇಕು! ಆ ಹೊತ್ತಿಗೆ ಹಿತ್ತಲಿನ ಬಚ್ಚಲ ಮನೆಯ ಸುತ್ತ ಕೂತು ಮಳೆ ಸದ್ದು ಕೇಳುತ್ತ ಹಲಸಿನ ಬೀಜವನ್ನೋ, ಗೇರು ಬೀಜವನ್ನೋ ಸುಟ್ಟುಕೊಂಡು ತಿನ್ನುತ್ತ ಕುಳಿತಿದ್ದರೆ, ಅಂಗಳ ಅನಾಥ.
ಆದರೆ ಇದೇ ಮಳೆಗಾಲದಲ್ಲಿಯೇ ಅಂಗಳದಲ್ಲಿ ಅಚ್ಚರಿಗಳೂ ಮೂಡುತ್ತವೆ. ಕಳೆದ ಮಳೆಗಾಲದಲ್ಲಿ ಹೂವಾಗಿ ಮರೆತು ಹೋಗಿದ್ದ ನಾಗದಾಳಿ ಗಿಡ, ಧುತ್ತೆಂದು ಅಲ್ಲೇ ಮೂಲೆಯಲ್ಲಿ ಮತ್ತೆ ಪ್ರತ್ಯಕ್ಷವಾಗಿ ಮಳೆಗೆ ಮುಖವೊಡ್ಡುತ್ತದೆ. ಇನ್ಯಾವುದೋ ಡೇರೇ ಹೂವಿನ ಗಿಡ ಗಡ್ಡೆಯಿಂದ ಮೂತಿ ಹೊರ ತೂರಿಸಿ ತಾನೂ ಇದ್ದೇನೆ ಎನ್ನುತ್ತದೆ. ಹೆಸರಲ್ಲಿದ ಹಳದಿ ಬಿಳಿ ಪುಟಾಣಿ ಹೂಗಳೂ ಜತೆ ಸೇರುತ್ತವೆ. ಬಣ್ಣ ಬಣ್ಣದ ಗೌರೀ ಹೂಗಳ ಗಿಡ, ಯಾವುದೋ ಹಕ್ಕಿಯುಪಕಾರದಿಂದ ಹುಟ್ಟಿದ ಟೊಮೇಟೋ ಗಿಡ, ಭತ್ತದ ಸಸಿ, ಎಲ್ಲ ಸಹಬಾಳ್ವೆ ಆರಂಭಿಸುತ್ತವೆ. ಅಂಗಳದಂಚಿನ ದಾಸವಾಳ ಗಾಳಿಗೆ ಇತ್ತಲೇ ಬಗ್ಗಿ ನಾನೂ ಇದ್ದೇನೆ ಎನ್ನುತ್ತದೆ. ಮನೆಯ ದಾರಿಯ ಅಡಿಕೆ ದಬ್ಬೆಯು ಶತಮಾನಗಳಿಂದ ಅಲ್ಲೇ ಇದ್ದೆ ಎನ್ನುವಂತೆ ಅಂಗಳಕ್ಕೆ ಒಗ್ಗಿಕೊಂಡೂ, ತಾನೂ ಅದೇ ಬಣ್ಣಕ್ಕೆ ತಿರುಗಿ, ಜಾರಬಾರದೆಂಬ ಉದ್ದೇಶಕ್ಕೆ ದಬ್ಬೆ ದಾರಿ ಮಾಡಿದ್ದಾದರೂ,ಅದೇ ನಮ್ಮನ್ನು ಜಾರಿಸಿ ಗೊಂದಲಕ್ಕೀಡುಮಾಡುತ್ತದೆ. ಕಂಬಳಿಕೊಪ್ಪೆಯ ಕೆಲಸದಾಳು ದಣಪೆಯನ್ನು ಸರಿಸುವಾಗಲೇ ಹುಷಾರು ಮಾರಾಯಾ ಎಂಬ ಬೊಬ್ಬೆ ಮನೆಯೊಳಗಿಂದ ಮಳೆಸೀಳಿಕೊಂಡು ಬರುತ್ತದೆ.
ಕರಾವಳಿಯ ಮಳೆಗಾಲದಲ್ಲಿ ಮನೆ ಬಾಗಿಲಿಗೆ ಬರುವ ಆಟಿ ಕಳಂಜವೆಂಬ ಜನಪದ ನೃತ್ಯದ ಸೊಗಸೂ, ಮಳೆಯ ಸದ್ದನ್ನೂ ಮೀರಿಸುವ ನೇಜಿ ನೆಡುವ ಹೆಂಗಸರ ಚಹಾದ ಜೊತೆಗಿನ ಕಿಲಕಿಲವು ನಡೆಯುವುದು ಅಂಗಳದಲ್ಲೇ. ಪತ್ರೊಡೆಗಳಾಗಿ ನಮ್ಮನ್ನ ಜಿಹ್ವಾಚಾಪಲ್ಯವನ್ನು ತೀರಿಸುವ ಕೆಸುವಿನೆಲೆಗಳ ಜನನವೂ ಇಲ್ಲಿಯೇ. ಬಣ್ಣಬಣ್ಣದ ಅಣಬೆಗಳೂ, ದಾರಿತಪ್ಪಿ ಬರುವ ದೊಡ್ಡ ಕಪ್ಪೆಗಳೂ ಅಂಗಳವನ್ನು ಅಲಂಕರಿಸುತ್ತವೆ.
ಇನ್ನು, ಮುತ್ತೈದೆಯ ಹಣೆಗೆ ತಿಲಕ ಇಟ್ಟಂತೆ, ಅಂಗಳಕ್ಕೆ ತುಳಸೀಕಟ್ಟೆ. ರಾತ್ರಿ ಆ ಕಟ್ಟೆಯಲ್ಲಿ ಮಿನುಗುವ ಪುಟ್ಟ ದೀಪವು ಅಂಗಳದ ನಕ್ಷತ್ರ! ಮಳೆಗಾಲದಲ್ಲಿ ತುಳಸಿಯ ದೀಪಕ್ಕೆ ಹೊಸ್ತಿಲೇ ಆಸರೆ. ಮಳೆ ಕಳೆದ ಮೇಲೆ ಬರುವ ಹಬ್ಬಗಳ ಜೊತೆಗೆ ಮತ್ತೆ ಹಣತೆಗೆ ತುಳಸಿಕಟ್ಟೆಯ ಸಖ್ಯ ಮರಳಿ ದೊರಕುತ್ತದೆ. ದೀಪಾವಳಿ ತುಳಸೀ ಪೂಜೆ, ಉತ್ಥಾನ ದ್ವಾದಶಿಯ ತುಳಸೀ ಮದುವೆಗೆ ಅಂಗಳದ್ದೇ ಪಾರುಪತ್ಯ.
ಮಲೆನಾಡಿನಲ್ಲಿ ಬಹಳ ಮದುವೆಗಳ ಮಂಟಪಗಳಿಗೆ ಅಂಗಳವೇ ಆಶ್ರಯದಾತ. ಮನೆಯೆದುರಿನ ಅಂಗಳಕ್ಕೆ ಖಡಕ್ಕು ಸಗಣಿಸಾರಿಸಿ, ಮಂಟಪ ಎಬ್ಬಿಸಿ ಚಪ್ಪರ ಹಾಕಿದರೆ, ಮದುವೆ ಗೌಜಿ! ಅಂಗಳ ದೊಡ್ಡಕ್ಕಿದ್ದಷ್ಟೂ ಖರ್ಚು ಜಾಸ್ತಿ ಮಾರಾಯಾ ಎನ್ನುವುದು ಇಲ್ಲಿನ ಖಾಯಂ ಮಾತು. ಮಳೆಗಾಲದ ಬತ್ತಲು ಕಂಬಗಳ ಮಾನವನ್ನು ಮಾವಿನೆಲೆಯು ಮುಚ್ಚುತ್ತದೆ, ಅಲ್ಲದೇ ಹೋದರೆ ಬಣ್ಣ ಬಣ್ಣದ ಕಾಗದಗಳ ಅಲಂಕಾರವಾದರೂ. ಹೋದ ಸೀಸನ್ನಿನಲ್ಲಿ ಅಡಕೆ ಒಣಗಿಸಿದ ತಟ್ಟಿಗಳೇ ಅಂಗಳದಂಚಿನ ತಾತ್ಕಾಲಿಕ ಗೋಡೆಗಳು. ಹೆಂಗಸರ ಕಪಾಟಿನ ಹಳೆಯ ಸೀರೆಗಳೇ ಚಪ್ಪರದ ತೂತನ್ನ ಮುಚ್ಚುವ ವಸ್ತ್ರಗಳು. ಊರಿನ ಮಂದಿಯೆಲ್ಲ ಕೂಡಿ ಓಡಾಡಿ ಕೆಲಸ ಮಾಡಿದರೆ ಎರಡು ದಿನದೊಳಗೆ ಕಂಬಳಿ ಹುಳ ಚಿಟ್ಟೆಯಾದ ಹಾಗೇ ಲೆಕ್ಕ! ಮನೆಯವರಿಗೇ ಅಂಗಳದ ಗುರುತು ಸಿಕ್ಕಲಾರದು.
ಮದುವೆಯ ಸಮಸ್ತ ತಯಾರಿಗಳಿಗೂ ಅಂಗಳವೇ ಗತಿ. ಪಕ್ಕದ ಮನೆ ಅಂಗಳದಲ್ಲಿ ಬಾಳೆ ಎಲೆಗಳನ್ನ ಕ್ಲೀನು ಮಾಡಿ, ತರಕಾರಿ ಕೊಚ್ಚಿದರೆ, ಮತ್ತೊಂದು ಮನೆಯಂಗಳದಲ್ಲಿ ಊಟದ ತಯಾರಿ. ಇನ್ಯಾರದೋ ಹಿತ್ತಲಲ್ಲಿ ಅಡುಗೆ. ಊರೊಟ್ಟಿನ ಕಂಬಳಿ ಟರ್ಪಾಲುಗಳೆಲ್ಲ ಮದುವೆ ಮಂಟಪವಿರುವ ಅಂಗಳದಲ್ಲಿದ್ದೇ ಸಿದ್ಧ. ಹೆಚ್ಚಾಗಿ ಉಳಿದವು ಸದಾ ಸೇವೆಗೆ ಸನ್ನದ್ಧ. ಒಂದು ಅಂಗಳದಲ್ಲಾದ ಮದುವೆಯ ಮುಂದಿನ ಅಂಕ ಮತ್ತೊಂದು ಅಂಗಳಕ್ಕೇ ವರ್ಗವಾಗುತ್ತದೆ. ಗೃಹಪ್ರವೇಶವೆಂಬ ಗಂಡಿನ ಮನೆಯ ಸಂಭ್ರಮಕ್ಕೆ ಮತ್ತೆ ಅಂಗಳವೇ ಸಾಕ್ಷಿ. ಅಲ್ಲಿ ಆರತಕ್ಷತೆಗೆ ಇನ್ನೊಂದಿಷ್ಟು ಅಲಂಕಾರಗಳು. ಹೆಣ್ಣಿನ ಹೊಸ ಬದುಕು ಆರಂಭವಾಗುವುದೇ ಅಲ್ಲಿ. ಹೊಸ ಊರು, ಹೊಸ ಜಾಗ ಹೊಸ ಮಂದಿಯ ಮಧ್ಯೆ ಪ್ರಾಯಶಃ ಆ ಅಂಗಳ ಮಾತ್ರವೇ ಹಳೆಯದು ಎನ್ನಿಸುವುದೋ ಏನೋ! ಮದುವೆಯ ಸಂಭ್ರಮಗಳೆಲ್ಲ ಮುಗಿದ ರಾತ್ರಿ ನೆರೆದ ಹತ್ತು ಸಮಸ್ತರ ಇಸ್ಪೀಟು ಮಂಡಲವೂ ಅದೇ ಚಪ್ಪರದ ಕೆಳಗೇ ನಡೆಯುತ್ತದೆ. ಅದೆಷ್ಟು ಸುಸ್ತಾದರೂ, ಕಣ್ಣೆಳೆದರೂ ಮಧ್ಯೇ ಮಧ್ಯೇ ಚಹಾಪಾನಂ ಮಾಡುತ್ತ ಬೆಳಗಿನವರೆಗೂ ಕಾರ್ಡುಗಳ ಕಲಸು ಮೇಲೋಗರ ನಡೆದೇ ನಡೆಯುತ್ತದೆ.ಅದೇ ಮಾರನೆಯ ದಿನದ ಚಳಿಬೆಳಗಲ್ಲಿ ಅಂಗಳದಲ್ಲಿ ರಂಗೋಲಿಯ ಚಿತ್ರಗಳನ್ನ ಬಿಡಿಸುತ್ತ ನವವಧುವು ತಾನೇ ಚಿತ್ರವಾಗುವ ಸೋಜಿಗವೂ ನಡೆಯುತ್ತದೆ. ಆಮೇಲೆ ನಾಲ್ಕು ದಿನ ಬಿಟ್ಟು, ಮದುವೆ ಚಪ್ಪರಕ್ಕೆ ಕಟ್ಟಿದ ಸೀರೆಗಳನ್ನು ಬಿಡಿಸಲು ಗಂಡನಿಗೆ ಅವಳೇ ನೆರವಾಗಬೇಕೋ ಏನೋ!
ಆಗ ನೆರವಾಗದೇ ಹೋದರೂ ಮುಂಬರುವ ಅಡಿಕೆ ಕೊಯ್ಲಲ್ಲಂತೂ ಹೇಗೂ ಆಗಲೇಬೇಕು. ಏಕೆಂದರೆ ಮಲೆನಾಡಿನಲ್ಲಿ ಅದು ಇಡಿಯ ಊರಿನ ಕೆಲಸ! ಹಸಿರು ಹಳದಿ ಅಡಿಕೆಗಳ ರಾಶಿ ರಾಶಿ ಗೊಂಚಲುಗಳು ಅಂಗಳವನ್ನು ತುಂಬಿಕೊಳ್ಳುವ ಪರಿಯೇ ಚಂದ. ಊರ ಮಂದಿಯೆಲ್ಲ ಒಂದಾಗಿ, ಹಗಲೆನ್ನದೆ, ರಾತ್ರಿಯೆನ್ನದೇ ಆ ಅಡಿಕೆಗಳನ್ನು ಸುಲಿಯುವ ಸಂಭ್ರಮಕ್ಕೆ ಸಾಟಿಯೇ ಇಲ್ಲ! ಅಂಗಳದ ಆಚೆಗೆ ಅದೇನೇ ಆಗಿದ್ದರೂ ಒಳಗೆ ಬಂದು ಕೂತ ಮೇಲೆ ಎಲ್ಲರೂ ಒಂದೇ ಇಲ್ಲಿ. ವಿದೇಶೀ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ, ವೀಕೆಂಡಿನಲ್ಲಿ ಊರಿಗೆ ಬಂದ ಮನೆ ಮಗನೂ, ಆಳು ಮಗನೂ ಒಟ್ಟಿಗೇ ಅಡಿಕೆ ಸುಲಿಯುತ್ತಿರುತ್ತಾರೆ. ಜಗದ ಸುದ್ದಿಗಳೆನ್ನಲ್ಲ ಹೇಳುತ್ತ, ಏನೇನೋ ಹರಟೆ ಹೊಡೆಯುತ್ತಿದ್ದರೂ ಕೈಗಳು ಮಾತ್ರ ಯಾಂತ್ರಿಕವಾಗಿ ರಾಶಿಯಿಂದ ಅಡಿಕೆ ಹೆಕ್ಕಿ ಸುಲಿದು, ಡಬ್ಬ ತುಂಬಿಸುವ ಆ ಚಾಕಚಕ್ಯತೆಯನ್ನ ನೋಡಲೆರಡು ಕಣ್ಣು ಸಾಲದು. ಸುಮ್ಮನೇ ತಮಾಷೆಗೆಂದೇನಾದರೂ ಅದನ್ನೇ ನಾವೂ ಮಾಡಿದರೆ ಕೈಗೆ ಬ್ಯಾಂಡೇಜು ತಪ್ಪದು.
ನೀನನಗಾದರೆ ನಾ ನಿನಗೆ ಎಂಬ ಕವಿವಾಣಿಯನ್ನು ಆಗಿ ತೋರಿಸುವ ಈ ಅಡಕೆ ಸುಲಿಯವ ಕಾರ್ಯಕ್ರಮ ಊರ ಒಗ್ಗಟನ್ನೂ, ಜನರ ಲವಲವಿಕೆ, ಹಾಸ್ಯ ಪ್ರಜ್ಞೆಗಳನ್ನೂ, ಆ ವರುಷದ ಬೆಳೆಯ ಸ್ಥಿತಿಯನ್ನೂ, ಬೆಳೆದಾತನ ಆರ್ಥಿಕ ಸ್ಥಿತಿಯನ್ನೂ, ಒಟ್ಟು ಸಮಷ್ಟಿಯ ಬದಲಾಗುತ್ತಿರುವ ಪರಿಸ್ಥಿತಿಯನ್ನೂ ಒಟ್ಟಿಗೇ ಹೇಳುತ್ತಿರುತ್ತದೆ! ಹೋದ ವರ್ಷ ಇದ್ದ ಹಾಡು ಹರಟೆಗಳು ಈ ವರ್ಷ ಇಲ್ಲ. ಈ ವರ್ಷದು, ಮುಂದಣವರ್ಷಕ್ಕಿಲ್ಲ. ಏಕೆಂದರೆ ವರುಷದಿಂದ ವರುಷಕ್ಕೆ ಅಡಿಕೆ ಸುಲಿಯುವವರು ಕಡಿಮೆಯಾಗುತ್ತಿದ್ದಾರೆ. ಮನೆ ಮಗನಿಗೆ ಊರಿಗೆ ಬರಲು ರಜೆ ಸಿಕ್ಕುವುದಿಲ್ಲ. ಸಿಕ್ಕಿದರೂ ಅಡಕೆ ಸುಲಿಯಲು ಹೊರಗೆ ಬಂದು ಕೂರಲೇ ಬೇಕೆಂದೂ ಇಲ್ಲ.  ಸಂಬಂಧಗಳು ಸಂಕುಚಿತವಾಗುತ್ತಿದ್ದ ಹಾಗೆ, ಬದುಕೂ ಸಂಕುಚಿತವಾಗುತ್ತದೆ.
ಬದಲಾವಣೆ ಎಂಬ ಜಗದ ನಿಯಮ ಅಂಗಳಕ್ಕೂ ಅಪ್ಲೈ ಆಗುತ್ತದೆ. ಸಗಣಿಯ ಅಂಗಳವನ್ನು ಇಂಟರ್ ಲಾಕುಗಳು ನಿಧಾನವಾಗಿ ಬಂಧಿಸುತ್ತಿವೆ. ಮಣ್ಣ ಪಾಗಾರವನ್ನು ಇಟ್ಟಿಗೆ ಸಿಮೆಂಟುಗಳು ತಿಂದು ಹಾಕಿವೆ. ಸ್ವಚ್ಛಂದ ಬೇರು ಬಿಟ್ಟ ಹೂ ಗಿಡಗಳಿಗೆ ಪಾಟುಗಳು ಬಂದಿವೆ. ಅಂಗಳದ ಹುಲಿ ದನದ ಆಟವು ಆಂಡ್ರಾಯ್ಡ್ ಪ್ಲೇ ಸ್ಟೋರುಗಳಲ್ಲಿ ಸಿಗುತ್ತಿರುವ, ನಗರ ತರಂಗಗಳು ಹಳ್ಳಿಗಳಲ್ಲೂ ಪ್ರತಿಧ್ವನಿಸುತ್ತಿರುವ ಈ ಕಾಲದಲ್ಲಿ ಅದೆಲ್ಲ ಎಷ್ಟರ ಮಟ್ಟಿಗಿನ ಮಾತು? ಅಪಾರ್ಟ್ ಮೆಂಟಿನ ಸಿಮೆಂಟಿನಂಗಳದ ಬ್ಯಾಡ್ಮಿಂಟನ್ನಿನ ಗಮ್ಮತ್ತು ಕಂಬಾಟದಲ್ಲಿರಬೇಕೆಂದೇನೂ ಇಲ್ಲವಲ್ಲ? ಮಣ್ಣಲ್ಲಾಡಿದ ಪೋರನೀಗ, ಗಾಳಿಯ ಜಾಗದಲ್ಲಿರುವ ೧೨ನೇ ಫ್ಲೋರಿನಲ್ಲಿನ ಮನೆಯ ಆರಡಿ ಉದ್ದದ ಪೋರ್ಟಿಕೋದಲ್ಲಿ ಕೂತು ಬಾಲ್ಯದ ಕಣ್ಣಮುಚ್ಚಾಲೆಯ ರೋಚಕ ಅನುಭವನನ್ನು ಕಥೆಯಾಗಿಸಿ ಮಕ್ಕಳಿಗೆ ಹೇಳುವ ಅನಿವಾರ್ಯದಲ್ಲಿರುವಾಗ ಏನನ್ನೋಣ?
ಹಳಹಳಿಕೆಗಳನ್ನು ಬಿಟ್ಟು ಯೋಚಿಸಿದರೆ , ಅಂಗಳಕ್ಕೆ ಅಕಾಲ ವೃದ್ಧಾಪ್ಯ ಬಂದಿರಬಹುದು, ಆದರೆ ಅದರ ಸೊಬಗು ಇನ್ನೂ ಮಾಸಿಲ್ಲ. ದೀಪಾವಳಿಯಂದು ತಿರುಗುವ ನೆಲ ಚಕ್ರಕ್ಕೆ ಸಿಮೆಂಟಿನಂಗಳದಲ್ಲಿ ಹೊಸ ವೇಗ ದಕ್ಕಿದೆ, ಮಳೆ ಬಂದಾಗ ಅಮ್ಮನೀಗ ತಗಡು ಚಪ್ಪರದ ಕೆಳಗೆ ತೋಯದೇ ನಡೆಯುತ್ತಾಳೆ. ಅಂಗಳದ ಕಳೆ ತೆಗೆದೂ ತೆಗೆದೂ ನಡು ಬಾಗಿದ್ದ ಅಜ್ಜನೀಗ ಕೋಲು ಹಿಡಿದು ನೆಟ್ಟಗಾಗಿದ್ದಾನೆ. ಏದುಸಿರು ಬಿಡುತ್ತ ಅಂಗಳ ಚಂದ ಕಾಣಬೇಕೆಂದು ಗುದ್ದಲಿ ಹಿಡಿದು ನೆಲ ಕೆತ್ತುತ್ತಿದ್ದ ಅಪ್ಪ, ಆರಾಮ ಕುರ್ಚಿಯಲ್ಲಿ ಕೂತಿದ್ದಾನೆ. ಅಂಗಳವನ್ನು ಬಂಧಿಸಿದ ಕಾಂಪೌಡು ವಾಲಿನ ಮೇಲೆ ಅಳಿಲು ಕೂತು ಬಿಸಿಲು ಕಾಯಿಸಿಕೊಳ್ಳುತ್ತಿದೆ. ಧೂಳು ಕೆಸರುಗಳು ಅದರಾಚೆಗೇ ಉಳಿದಿವೆ. ಹಬ್ಬಕ್ಕೆಂದು ಮನೆಯ ಸುತ್ತ ಹಚ್ಚಿದ ದೀಪಸಾಲುಗಳನ್ನ ಅಂಗಳವೂ ಮಸುಕಾಗಿ ಪ್ರತಿಫಲಿಸುತ್ತ ತಾನೂ ಪ್ರಜ್ವಲಿಸುತ್ತಿದೆ!


ವಿಜಯವಾಣಿ ದೀಪಾವಳಿ ವಿಶೇಷಾಂಕಕ್ಕೆ ಬರೆದ ಪ್ರಬಂಧ.

4 ಕಾಮೆಂಟ್‌ಗಳು:

prashasti ಹೇಳಿದರು...

nice ! :-)

ಸಂಧ್ಯಾ ಶ್ರೀಧರ್ ಭಟ್ ಹೇಳಿದರು...

ಎಲ್ಲೆಲ್ಲಿಯದೋ ಅಂಗಳದ ನೆನಪುಗಳು ಅಂಗೈಅಗಲದಲ್ಲಿ ಬಂದು ಕುಂತಂತೆ ...

ಹಸಿಯಡಕೆ ಸುಲಿಯಲು ಹೋಗಿ ಕೈ ಕಪ್ಪಿಸಿಕೊಂಡಿದ್ದು .. ಹಸಿರು ಬಾಳೆಯೆಲೆ ಮೇಲೆ ಹಪ್ಪಳ ಹಚ್ಚಿದ್ದು .. ಹೆಸರಿಲ್ಲದ ಹೂಗಳು ಅಂಗಳದಲ್ಲಿ ಅರಳಿ ಸಂಭ್ರಮಿಸಿದ್ದು .. ಕಂಬ್ ಕಂಬಾಟದಲ್ಲಿ ಕಂಬ ಹೊಡೆಸಿಕೊಂಡು ಹಣೆ ಒಡೆದುಕೊಂಡಿದ್ದು ...

awesome ...

ಮನಸಿನಮನೆಯವನು ಹೇಳಿದರು...

ಇಷ್ಟವಾಯಿತು, ಅಂಗಳ ಕುರಿತು ಯೋಚಿಸಿದರೆ ಇಷ್ಟೊಂದು ವಿಚಾರ ಹುಟ್ಟುತ್ತವೆ ಎಂದು ಹೀಗನಿಸಿತು

Medini M Bhat ಹೇಳಿದರು...

ಬಹಳ ಸೊಗಸಾಗಿದ್ದು ಶ್ರೀನಿಧಿ ಅಣ್ಣ. 'ಅಂಗಳ'ದ ಬಗ್ಗೆಯೂ ಇಷ್ಟೆಲ್ಲಾ ಬರೆಯಬಹುದಾ ಅಂತ ಅನುಸ್ತು. "ಮೊದಲು ಕತ್ತಲಾಗುವುದು ಮನೆಯೊಳಕ್ಕಾದರೆ, ಮೊದಲು ಬೆಳಕಾಗುವುದು ಅಂಗಳಕ್ಕೆ!" ಈ lines ಸಖತ್ ಇಷ್ಟ ಆತು.