ಇಂದು ಕಿರುತೆರೆಯ ಧಾರಾವಾಹಿಗಳು ಸಿನಿಮಾ ಜಗತ್ತಿಗೇ ಸ್ಪರ್ಧೆಯನ್ನು ಒಡ್ಡಿರುವುದು ಸುಸ್ಪಷ್ಟ. ಕೆಲ ಸೀರಿಯಲ್ ಗಳು ಜನಪ್ರಿಯತೆಯಲ್ಲಿ ಚಲನಚಿತ್ರಗಳನ್ನೇ ಮೀರಿಸಿರುವುದೂ ಸುಳ್ಳಲ್ಲ. ನಿತ್ಯದ ಕ್ಲೀಷೆಗಳಲ್ಲೇ ಇನ್ನೂ ಸುತ್ತುತ್ತಿರುವ ಆಪಾದನೆ ಇದ್ದರೂ ಕೂಡ, ಅಪಾರ ಜನಸ್ತೋಮ –ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಧಾರಾವಾಹಿಗಳ ವೀಕ್ಷಣೆಯಲ್ಲಿ ತೊಡಗಿರುವುದಂತೂ ಸತ್ಯ. ಚಾನಲ್ ಗಳ ರೇಟಿಂಗ್ ಗಳನ್ನು ಗಮನಿಸಿದಾಗ ಇದಂತೂ ಅರಿವಾಗುತ್ತದೆ. ಕಳೆದೊಂದು ದಶಕದಲ್ಲಿ ಸೀರಿಯಲ್ಲುಗಳ ನಿರ್ಮಾಣದಲ್ಲಿ ಗಣನೀಯ ಏರಿಕೆಯಾಗಿದೆ.ಗುಣಮಟ್ಟದಲ್ಲೂ ಕೂಡ ಬಹಳ ಸುಧಾರಣೆಯಾಗಿದೆ. ನಿತ್ಯ ಸುಮಾರು ಐವತ್ತಕ್ಕೂ ಹೆಚ್ಚಿನ ಧಾರಾವಾಹಿಗಳ ಪ್ರಸಾರ ಕನ್ನಡದಲ್ಲಾಗುತ್ತಿದೆ. ಸಿನಿಮಾಗಳಂತೆಯೇ ಇಲ್ಲೂ ಅದ್ದೂರಿ ಸನ್ನಿವೇಶಗಳ ಚಿತ್ರೀಕರಣವಾಗುತ್ತಿದೆ. ಅದರಲ್ಲೂ ಮದುವೆಯ ಚಿತ್ರಣವಿದ್ದರಂತೂ ಕೇಳುವುದೇ ಬೇಡ. ಐಷಾರಾಮಿ ಕಲ್ಯಾಣ ಮಹೋತ್ಸವಗಳು ಇಂದು ಸೀರಿಯಲ್ ಗಳಲ್ಲಿ ಹಾಸುಹೊಕ್ಕಾಗಿ ಹೋಗಿವೆ!
ಸೀರಿಯಲ್ ಮದುವೆ-ಸಂಭ್ರಮಕ್ಕೆ ಕೊನೆಯಿಲ್ಲ!
ನೀವು ನೋಡಿರಬಹುದಾದ ಚಲನಚಿತ್ರಗಳಲ್ಲಿ ಬಹುಶಃ ತೊಂಬತ್ತಕ್ಕೂ ಹೆಚ್ಚು ಪ್ರತಿಶತ ಚಿತ್ರಗಳು ಮದುವೆಗಳಿಂದಲೇ ಮುಗಿದು, ಶುಭಂ ಕಾಣಿಸಿಕೊಳ್ಳುತ್ತವೆ. ಹೀರೋ ಹೀರೋಯಿನ್ನುಗಳು ಏನೇನೋ ಕಷ್ಟಪಟ್ಟು ಕೊಟ್ಟಕೊನೆಗೆ ತಾಳಿ ಕಟ್ಟುವುದರ ಮೂಲಕ ಸಿನಿಮಾ ಅಂತ್ಯವಾಗುತ್ತದೆ. ಆದರೆ ಧಾರಾವಾಹಿ ಜಗತ್ತಿನಲ್ಲಿ ಎಲ್ಲ ಶುರುವಾಗುವುದೇ ಮದುವೆಯಿಂದ! ಸೇರೊದ್ದ ಹೀರೋಯಿನ್ನು ಅತ್ತೆ ಮನೆಗೆ ಬರುತ್ತಲೇ ನಮ್ಮ ಕಥೆ ಆರಂಭ! ಸಾವಿಲ್ಲದ ಮನೆಯಿಂದ ಸಾಸಿವೆಯನ್ನಾದರೂ ತರಬಹುದು ಆದರೆ ಮದುವೆಯಿಲ್ಲದ ಸೀರಿಯಲ್ ಹುಡುಕಲು ಸಾಧ್ಯವಿಲ್ಲ.ಅದೂ ಕಳೆದ ಮೂರು ನಾಲ್ಕು ವರ್ಷಗಳ್ ಈಚೆಗಂತೂ ಅದ್ದೂರಿ ವಿವಾಹವಿಲ್ಲದ ಸೀರಿಯಲ್ಲೇ ಇಲ್ಲ ಎನ್ನಬಹುದೇನೋ. ಧಾರಾವಾಹಿಗಳಲ್ಲಿನ ಮದುವೆಗಳಲ್ಲಿನ ಅಬ್ಬರದ ಸಂಭ್ರಮವನ್ನು ನೋಡದೇ ಇರುವ ವೀಕ್ಷಕರೇ ಇಲ್ಲ ಅನ್ನಿಸುತ್ತದೆ. ಹೀಗಾಗಿಯೇ ಚಳಿಯೇ ಇರಲಿ , ಮಳೆಯೇ ಬರಲಿ, ಆಷಾಢವೋ-ಅಧಿಕಮಾಸವೋ ತಿಂಗಳಲ್ಲಿ ಒಂದೆರಡು ಮದುವೆಯಾದರೂ ಕಿರುತೆರೆಯಲ್ಲಿ ಪಕ್ಕಾ!
ಅದ್ದೂರಿತನಕ್ಕೆ ಸರಿಸಾಟಿಯಿಲ್ಲ
ವೀಕ್ಷಕರ ಬಯಕೆಯೋ, ಚಾನಲುಗಳ ನಿರ್ಧಾರವೋ, ಹೆಚ್ಚು ಮಂದಿಯನ್ನ ಧಾರಾವಾಹಿಗಳ ಕಡೆಗೆ ಸೆಳೆಯುವ ಯತ್ನವೋ- ಅದ್ದೂರಿ ಕಲ್ಯಾಣಗಳೀಗ ಟೀವಿಯಲ್ಲಿ ಸಾಮಾನ್ಯವಾಗಿ ಹೋಗಿದೆ. ದೇವಸ್ಥಾನದಲ್ಲಿ ನಾಯಕ ನಾಯಕಿಗೆ ತಾಳಿ ಕಟ್ಟುವ ಕಾಲ ಮುಗಿದಿದೆ! ಸಾಲು ಸಾಲು ರೆಸಾರ್ಟುಗಳೀಗ ಧಾರಾವಾಹಿಗಾಗಿ ಮದುವೆಗಾಗಿಯೇ ಬುಕ್ಕಿಂಗ್ ಆಗುತ್ತಿವೆ. ಮಧ್ಯಮ ವರ್ಗದ ವ್ಯಥೆಯೋ, ಶ್ರೀಮಂತರ ಕಥೆಯೋ- ಮದುವೆಗಳು ಮಾತ್ರ ಸಂಭ್ರಮೋಪೇತವಾಗಿ ನಡೆಯಬೇಕೆಂಬ ಅಲಿಖಿತ ನಿಯಮ ಜಾರಿಗೆ ಬಂದು ಬಿಟ್ಟಿದೆ. ಎರಡು ಮೂರು ಕುಟುಂಬಗಳ ನಡುವೆ -ಒಂದಲ್ಲ ಎರಡೆರಡು ಮದುವೆ, ನೂರಾರು ಮಂದಿ ಸಹನಟರು, ಫಳಫಳ ರೇಷ್ಮೆಸೀರೆ ಕೋಟು ಬೂಟುಗಳ ಓಡಾಟ- ಇವೆಲ್ಲ ನೀವು ನಿತ್ಯ ನೋಡುವ ಪ್ರಹಸನದ ಭಾಗವಾಗಿ ಹೋಗಿದೆ. ಝಗಮಗ ಜೀವಕಳೆಯ ಮಂದಿ ತೆರೆಯ ಮೇಲೆ ಓಡಾಡುತ್ತಿದ್ದರೆ ಮನೆಮನೆಗಳ ವೀಕ್ಷಕರ ಮುಖವೂ ಬೆಳಗುತ್ತಿದೆ. ಮದುವೆಯ ಸೀನುಗಳಿದ್ದರೆ ಖಂಡಿತಕ್ಕೂ ಅದಕ್ಕೆ ಹೆಚ್ಚಿನ ಟೀಆರ್ಪಿ ಬರುತ್ತದೆ ಎನ್ನುವುದು ಚಾನಲ್ಲುಗಳ ಒಳಗೆ ಕೂತ ಎಲ್ಲರಿಗೂ ಗೊತ್ತಿರುವ ಸತ್ಯ!
ಶಾಸ್ತ್ರ ಸಂಪ್ರದಾಯಗಳಿಗೆ ಮರು ಜೀವ!
ನಿಮ್ಮ ಮನೆಗಳ ಮದುವೆಗಳಲ್ಲಿ ನೀವು ಅದೆಷ್ಟು ಶಾಸ್ತ್ರಗಳನ್ನು ಪಾಲಿಸುತ್ತೀರೋ ಇಲ್ಲವೋ, ನಾವು ಸೀರಿಯಲ್ ಮಂದಿ ಮಾತ್ರ ಇವುಗಳ ಬಗ್ಗೆ ಅಪಾರ ಕಾಳಜಿ ವಹಿಸುತ್ತೇವೆ. ಬಳೆಪೂಜೆಯಿಂದ ಮೊದಲುಗೊಂಡು ಸಕಲೆಂಟು ಶಾಸ್ತ್ರಗಳನ್ನೂ ಹುಡುಕಿ ಅದನ್ನ ತೆರೆಯಮೇಲೆ ತರುವುದರ ಬಗ್ಗೆ ಗಮನ ಹರಿಸುವುದರಲ್ಲಿ ಯಾವ ಅನುಮಾನವೂ ಇಲ್ಲ! ಗಂಡಿಗೂ ಹೆಣ್ಣಿಗೂ ಮದುವೆಗೆ ಮೊದಲು, ನಂತರ- ಅದೇನೇ ಸಂಪ್ರದಾಯಗಳಿರಲಿ ಎಲ್ಲವನ್ನೂ ಅಚ್ಚುಕಟ್ಟಾಗಿ ನೆರವೇರಿಸುವುದರಲ್ಲಿ ಸಿದ್ಧಹಸ್ತರು. ಪುರೋಹಿತರುಗಳಿಗೇ ಶಾಸ್ತ್ರ ಮರೆತರೂ, ನಿರ್ದೇಶಕನಿಗೆ ಮರೆಯಲಾರದು. ನಾನೇ ಧಾರಾವಾಹಿಯೊಂದನ್ನು ಬರೆಯುವ ಸಂದರ್ಭದಲ್ಲಿ ಒಂದಿಷ್ಟು ಗ್ರಂಥಗಳು- ಗೂಗಲ್ಲು ಎಲ್ಲದರ ಸಹಾಯ ಪಡೆದು ಒಂದಾದ ಮೇಲೊಂದು- ಮದ್ವೆಗಳಲ್ಲಿ ಯಾವ ಯಾವ ಸಂಪ್ರದಾಯಗಳಿವೆ ಎಂದು ಅಭ್ಯಾಸ ಮಾಡಿದ್ದೆ! ಹಾಂ, ಇನ್ನೊಂದು ಮುಖ್ಯ ವಿಷಯ- ನಾವು ವಸುದೈವ ಕುಟುಂಬಕಂ ಎಂಬ ಸೂಕ್ತಿಯಲ್ಲಿ ವಿಶ್ವಾಸ ಹೊಂದಿದವರು.ಹೀಗಾಗಿ ಉತ್ತರ ಭಾರತದ ಯಾವುದೋ ಒಂದು ಶಾಸ್ತ್ರ ಮಲೆನಾಡಿನ ಮದುವೆಯೊಳಗೆ ಸಣ್ಣದಾಗಿ ತೂರಿಕೊಳ್ಳಬಹುದು. ಶೈವರ ಮದುವೆಗೆ ದೃಶ್ಯ ಮಾಧ್ಯಮಕ್ಕೆ ಸುಂದರವಾಗಿ ಕಾಣಬಹುದಾದ ಮಾಧ್ವರದೊಂದು ಆಚರಣೆ ಸೇರಿಕೊಂಡಿರಬಹುದು. ನಮ್ಮನ್ನ ಮನ್ನಿಸಿರಿ!
ಹಾಡು ನೃತ್ಯಗಳ ಮಹಾನಂದ
ರೆಸಾರ್ಟ್ ಮದುವೆ ಎಂದಾದ ಮೇಲೆ ಮುಗಿದೇ ಹೋಯಿತು, ಆ ಧಾರಾವಾಹಿಯಲ್ಲಿನ ಮದುವೆಗೆ ಸೆಲೆಬ್ರಿಟಿ ಬರೋದು ಖಂಡಿತ. ಅವರು ಬಂದ ಮೇಲೆ ನಾಲ್ಕು ಹೆಜ್ಜೆ ಡ್ಯಾನ್ಸು ಖಾಯಂ. ಸೀರಿಯಲ್ಲಿ ನಾಯಕನಿಗೋ ನಾಯಕಿಗೋ ನಮ್ಮ ಸಿನಿಮಾ ಹೀರೋ ಫ್ರೆಂಡು. ಅವನ ಜೊತೆಗೆ ಬರುವ ದಂಡು ಒಂದು ಹಾಡೋ, ನೃತ್ಯಕ್ಕೋ ಸೇರಿಕೊಳ್ಳದಿದ್ದರೆ ಯಾವ ಮಜವೂ ಇರಲಾರದು. ಲಾಜಿಕ್ಕಿನ ಕಥೆ ಬಿಡಿ, ಇದು ಮ್ಯಾಜಿಕ್ಕಿನ ವಿಷಯ! ಕನ್ನಡ ಧಾರಾವಾಹಿಗಳ ಮದುವೆಗಳಲ್ಲಿ ಹೆಚ್ಚಿನೆಲ್ಲ ಸೆಲೆಬ್ರಿಟಿ ಬಂದು ಹೆಜ್ಜೆ ಹಾಕಿ ಹೋಗಿದ್ದಾರೆ. ಹಿಂದಿಯಲ್ಲಿ ಶಾರುಕ್ ಸಲ್ಮಾನ್ ಹೃತಿಕ್ ಕೂಡ ಇಂಥ ವಿವಾಹಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದರೆ, ಸೀರಿಯಲ್ ಮದುವೆಗಳ ಜನಪ್ರಿಯತೆ ಯಾವ ಮಟ್ಟಕ್ಕಿರಬಹುದು ಯೋಚಿಸಿ ನೋಡಿ. ತಮ್ಮ ಸಿನಿಮಾಗಳನ್ನು ಪ್ರಮೋಟ್ ಮಾಡಿಕೊಳ್ಳಲು ಜನಪ್ರಿಯ ಧಾರಾವಾಹಿಯೊಂದರ ಮದುವೆಯ ವೇದಿಕೆಗಿಂತ ಉತ್ತಮ ಜಾಗ ಯಾವುದಿದೆ ಹೇಳಿ?ಹೀಗಾಗಿಯೇ ಒಂದಿಡೀ ದಿನ ಅಭ್ಯಾಸ ಮಾಡಿ ನಂತರ ಶ್ರದ್ಧಾ ಭಕ್ತಿಗಳಿಂದ ನಟನಟಿಯರು ಈ ಮದುವೆಯ ನೃತ್ಯ ವಿಶೇಷಗಳಲ್ಲಿ ಪಾಲ್ಗೊಳ್ಳುತ್ತಾರೆ. ಇದು ಮನೆಯಲ್ಲೇ ಕೂತು ಮದುವೆ ನೋಡುವ ಮಂದಿಗೆ ಮೃಷ್ಟಾನ್ನ ಭೋಜನವೇ ಸರಿ.
ತೆರೆಯ ಹಿಂದಿನ ಶ್ರಮ
ಆದರೆ ಇಷ್ಟೆಲ್ಲವನ್ನ ಕಟ್ಟಿಕೊಡುವುದಕ್ಕೆ ತಂತ್ರಜ್ಞರ ಬಳಗ ಹಗಲು ರಾತ್ರಿಯೆನ್ನದೆ ಶ್ರಮಿಸಬೇಕು. ಎರಡು ಮೂರು ದಿನಗಳೊಳಾಗಿ ಹತ್ತೈವತ್ತು ದೃಶ್ಯಗಳನ್ನ ಶೂಟ್ ಮಾಡಬೇಕು. ನಾನೇ ಇಂತಹ ೨-೩ ಮದುವೆಗಳ ಚಿತ್ರೀಕರಣದಲ್ಲಿ ಪಾಲ್ಗೊಂಡ ಅನುಭವ ಇರುವುದರಿಂದ ಹೇಳುತ್ತಿದ್ದೇನೆ- ಖಂಡಿತಕ್ಕೂ ಇದು ಸುಲಭವಲ್ಲ. ದಪ್ಪನೆಯ ರೇಷ್ಮೆ ಸೀರೆಯಲ್ಲಿ ಪ್ರಖರ ಬೆಳಕಿನಲ್ಲಿ ಬೆಳಗ್ಗಿಂದ ಸಂಜೆಯವರೆಗೆ ನಗುಮೊಗ ಹೊತ್ತು ಕೂತ ನಾಯಕಿಯ ಬೆವರ ಸಂಕಟ ತೆರೆಯ ಮೇಲೆ ಕಾಣುವುದಿಲ್ಲ. ಅಲ್ಲಲ್ಲೇ ಸೀನು ಬರೆವ ಸಂಭಾಷಣೆಕಾರ, ಸೊಂಟ ಬಿದ್ದು ಹೋಗುವಂತೆ ಓಡಾಡುವ ಸೆಟ್ ಹುಡುಗರು, ಕಲಾ ನಿರ್ದೇಶಕ, ಛಾಯಾಗ್ರಾಹಕ ತೆರೆಯ ಮೇಲೆ ಕಾಣಿಸುವುದೇ ಇಲ್ಲ. ಇವರೆಲ್ಲರ ತೆರೆಮರೆಯ ಒದ್ದಾಟದಿಂದಲೇ ತೆರೆ ಮೇಲೆ ಸೊಗಸು ಹೆಚ್ಚುತ್ತಿರುತ್ತದೆ.
ಇನ್ನೆಷ್ಟು ದಿನ ಹೀಗೆ?
ಆದರೀಗ ವೀಕ್ಷಕ ವರ್ಗಕ್ಕೂ ಏಕತಾನತೆ ಕಾಡಲಾರಂಭಿಸಿದೆ. ಒಂದೇ ಬಗೆಯ ಮದುವೆಗಳು- ಅದದೇ ಹಾಡು ನೃತ್ಯಗಳು ಬೋರಾಗಲಾರಂಭಿಸಿದೆ. ನೈಜತೆಯಿಂದ ದೂರವೇನೋ ಅನ್ನಿಸುವ ದೃಶ್ಯಾವಳಿಗಳು- ಅವವೇ ಮಸಲತ್ತುಗಳು,ಮದುವೆ ನಿಲ್ಲಿಸಲು ಯಾವುದೋ ಪಾತ್ರ ಮಾಡುವ ಕಸರತ್ತುಗಳು ಆಕಳಿಕೆ ತರಿಸುತ್ತಿವೆ. ಅದ್ದೂರಿತನವನ್ನು ಮೀರಿದ ಕಂಟೆಂಟ್ ಅನ್ನು ಜನರೀಗ ಬಯಸುತ್ತಿದ್ದಾರೆ. ಯಾವುದೋ ಒಂದು ಧಾರಾವಾಹಿ ಈ ಸಿದ್ಧಸೂತ್ರವನ್ನು ಬದಿಗೊತ್ತಿ ಹೊಸ ದಾರಿಯನ್ನು ಹಿಡಿಯಬಹುದು. ಅಲ್ಲಿಯವರೆಗೆ ಸಶೇಷ! ಹಾಂ, ಹೇಳೋದು ಮರೆತೆ- ಟೀವಿ ಮದುವೆಯೊಂದಕ್ಕೆ ಇತ್ತೀಚೆಗೆ ಪತ್ರಿಕೆಯಲ್ಲಿ ಅಕ್ಷತೆಯ ಸ್ಯಾಷೆ ಹಂಚಿದ್ದರು ಮೊನ್ನೆ ಮೊನ್ನೆ ತಾನೇ! ನಂಗಂತೂ ಆ ಐಡಿಯಾ ಇಷ್ಟವಾಯಿತು. ಯಾರಿಗೆ ಗೊತ್ತು- ನಾಳೆ ನಿಮ್ಮ ಮನೆಗೇ ನುಗ್ಗಿ ಮದುವೆ ಶೂಟಿಂಗ್ ನಡೆದರೂ ಅಶ್ಚರ್ಯವಿಲ್ಲ! ಕಾದು ನೋಡೋಣ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ