ಬಿದಿರ ಮಟ್ಟಿಗಳನ್ನ ದಾಟಿ ಅಲ್ಲಿಗೆ ಬಂದು ನಿಂತಾಗ , ನಡು ಮಧ್ಯಾಹ್ನ ೨ ಗಂಟೆ. ಹೊಳೆ ದಾಟಿ ಆ ಹಳ್ಳಿಗೆ ಹೋಗಬೇಕೆಂದರೆ ಗಂಟಲು ಹರಿದು ಹೋಗುವ ಥರಾ ಕಿರುಚಬೇಕು ಬೇರೆ. ಹೊಟ್ಟೆ ತುಂಬಾ ಊಟ ಆಗಿದ್ದರಿಂದ ಏನೂ ತೊಂದರೆ ಆಗಲಿಲ್ಲ! ಅರ್ಧ ತಾಸಿನ ಪ್ರಯತ್ನ, ನಾನೂ, ಅನಾ, ಡೀನು ಎಲ್ಲಾ ಬೇರೆ ಬೇರೆ ವಿಧಾನದಲ್ಲಿ ಕಿರುಚಿದೆವು! ಗೋವಿಂದ ರಾಜ್ ಅಂತೂ "ಮಾದಾ, ಕೆಂಚಾ" ಅಂತೆಲ್ಲ ಕರೆದರು, ಆ ಹೆಸರಿನವರು ಖಂಡಿತಾ ಅಲ್ಲಿರುತ್ತಾರೆ ಎಂಬ ಭರವಸೆಯಲ್ಲಿ. ಅಂತೂ ಮೊದಲಿಗೆ ದೂರದಲ್ಲೊಂದು ನಾಯಿ ಕಂಡಿತು, ನಾಯಿಯ ಬೆನ್ನ ಹಿಂದೇ ಮನುಷ್ಯಾಕೃತಿಯೂ ಬಂತು. ಆ ಆಕೃತಿಯ ಹೆಸರು ಕೃಷ್ಣ ಅಂತ ಆಮೇಲೆ ಗೊತ್ತಾಯ್ತು. ಆ ಜೀವ, ಆ ದಂಡೆಯಲ್ಲಿ ಕಟ್ಟಿದ್ದ ದೋಣಿಯೊಂದನ್ನು ಬಿಚ್ಚಿ, ಮೆಲ್ಲನೆ ನಮ್ಮ ತೀರದತ್ತ ಹುಟ್ಟು ಹಾಕತೊಡಗಿತು.
ಹಳೇ ಮರದ ದೋಣಿ ಅದು. ನಾವಾರೂ ಜನರೂ ಕಷ್ಟ ಪಟ್ಟು ಕೂತಾಯ್ತು. ಆತ ಹೇಳುತ್ತಿದ್ದ, "ನಮ್ಮರೇ ಆದ್ರೆ ೧೫ ಜನ ಹಾಕತ್ ನಾವ್" ಅಂತ! ಆ ಇರುಕಲು ದೋಣಿ ಅತ್ತಿತ್ತ ಸ್ವಲ್ಪ ಅಲುಗಾಡಿದರೂ ಇನ್ನೇನು ಮುಳುಗೇ ಹೋಗುತ್ತೇನೋ ಅನ್ನುವಷ್ಟು ವಾಲಾಡುತ್ತಿತ್ತು ಬೇರೆ. ಅಂತೂ ಇಂತೂ ಆ ದಡಕ್ಕೆ ಹೋಗಿ ಉಸಿರು ಬಿಟ್ಟಾಯ್ತು.
ಆಹ್! ಎಂತ ಸುಂದರ ತಾಣ ಇದು! ಸುತ್ತುವರಿದ ಗುಡ್ಡಗಳ ಮಧ್ಯೆ, ಒಂದು ಪುಟ್ಟ, ಶಾಂತ ಊರು. ಮೂವತ್ತು ಮನೆಗಳಿವೆ, ಹೆಚ್ಚೆಂದರೆ. ದೋಣಿ ಕೃಷ್ಣ ನಮಗೆ ದಾರಿ ತೋರಿಸಿದ, ಊರೊಳಗೆ ಹೋಗಲು. ಮುಳುಗಡೆ ಊರಲ್ಲಿ ಬದುಕುವ ಕಷ್ಟಗಳ ಬಗ್ಗೂ ಹೇಳಿದ. 'ಒಂದ್ ಕಟ್ ಬೀಡಿಗೆ ೧೦ ಕಿಲೋಮೀಟರ್ ನಡೀಬೇಕು" ಅನ್ನೋದು ಅವನ ಬೇಜಾರು.
ಮೂರು ಸುತ್ತಲೂ ನೀರು, ಇನ್ನೊಂದು ಕಡೆ ನಿರ್ಭಂದಿತ ಪ್ರದೇಶ. ೨ ದಿನಗಳ ಪ್ರವಾಸಕ್ಕೆ ಹೋಗುವ ನಮಗೆ ಬಹಳ ಸಂತಸ ತರುವ ತಾಣ ಇದು.. ಎಲ್ಲೇ ಕಣ್ಣು ಹಾಯಿಸಿದರೂ ಹಸಿರು, ಹರಿಯೋ ನೀರು, ದನ ಕರು, ಗದ್ದೆ.. ಒಳ್ಳೇ ಕಥೆಗಳಲ್ಲಿ ಬರುವ ಊರಿನಂತೇ ಇದೆ . ಆದರೆ ಪಾಪ, ಅಲ್ಲಿರುವವರ ಪಾಡು ಹೇಳ ತೀರದು. ಏನೇ ಬೇಕಾದರೂ ಕಿಲೋಮೀಟರುಗಟ್ಟಲೇ ನಡೀಬೇಕು. ಇನ್ನು ಹೆಚ್ಚು ದಿನ ಇಲ್ಲ ಅವರ ಕಷ್ಟ, ಅದು ಬೇರೆ ವಿಚಾರ.
ನಮ್ಮನ್ನ ಆ ಊರಿನ ವ್ಯಕಿಯೊಬ್ಬರು ಅಲ್ಲೇ ಇರುವ ಜಲಪಾತದ ಕಡೆಗೆ ಹೋಗಲು ಸಹಕರಿಸಿದರು. ಅವರ ಸಂಬಂಧಿಕರ ಮನೆಯಲ್ಲೇ ನಮ್ಮ ಬ್ಯಾಗುಗಳನ್ನ ಇಟ್ಟು ಜಲಪಾತದ ಕಡೆ ಹೊರಟದ್ದಾಯಿತು ನೀರು ಕುಡಿದು, ದಣಿವಾರಿಸಿಕೊಂಡು. ಪ್ರಕೃತಿ ಇಲ್ಲೇ ಮನೆ ಮಾಡಿದ್ದಾಳೆ, ತನ್ನ ಸಂಸಾರ ಸಮೇತ. ಯಾಕೋ ಒಂದು ನಿಗೂಢತೆ ಇದೆ ಈ ಜಾಗದಲ್ಲಿ ಅಂತ ನನಗನ್ನಿಸಿತು. ದಟ್ಟ ಕಾಡು, ಆದರೂ ಜಲಪಾತಕ್ಕೆ ಸಾಗುವ ದಾರಿ ಸುಗಮವಾಗೇ ಇದೆ.
ಅರುಣ, ಸುಬ್ಬಿ ಮತ್ತೆ ಗೋವಿಂದ ರಾಜು ಹಿಂದೇ ಉಳಿದರು. ಗೋವಿಂದ ರಾಜು ವಾರ್ನಿಂಗು ಬೇರೆ, "come back, ಲೇಟ್ ಆದ್ರೆ ಕಷ್ಟ" ಅಂತ. ಅವರ ಬಳಿ ಆಯ್ತು ಸಾರ್ ಅಂತಲೇ ಹೇಳಿ ಮುನ್ನಡೆದದ್ದಾಯ್ತು, ನಾನು, ಡೀನು, ಅನಾ. ಜಲಪಾತದ ಪಾತ್ರದಲ್ಲೇ ಸಾಗಬೇಕು, ಪೂರ್ಣ ಪ್ರಮಾಣದ ಜಲಪಾತವನ್ನ ನೋಡಲು. ನಡು ನಡುವೆ ಪುಟ್ಟ ಪುಟ್ಟ ಮಡುಗಳು, ಝರಿಗಳು ಬೇರೆ.
ಜಲಪಾತ ಸಂಪೂರ್ಣ ಕಾಣುವವರೆಗೂ ತೆರಳಿ , ಚಿತ್ರಗಳನ್ನ ತೆಗೆದು, ಒಲ್ಲದ ಮನಸ್ಸಿನಿಂದ ಹಿಂದೆ ಬಂದು, ಸ್ನಾನದ ಶಾಸ್ತ್ರ ಮಾಡಿ ಮರಳಿ ಊರಿಗೆ ಬಂದದ್ದಾಯ್ತು. ಸಂಜೆಗತ್ತಲಲ್ಲಿ ಸಹೃದಯರೊಬ್ಬರ ಮನೆ ಅಂಗಳದಲ್ಲಿ ಕೂತು ಹರಟಿದ್ದಾಯ್ತು. ಸಂಪೂರ್ಣ ಶಾಂತ, ಈ ಪರಿಸರ. ಪ್ರಾಯಶ: ನಮ್ಮ ಗಲಾಟೆ ಇತರರಿಗೆ ಭಂಗ ತರುತ್ತಿತ್ತೋ ಏನೋ!. ನಾನೂ, ಡೀನು ಮನೆಯಿಂದ ಹೊರಟು ಹೊರಗಿನ ಗದ್ದೆ ಬಯಲಲ್ಲಿ ತಿರುಗಾಡುತ್ತಿದ್ದೆವು.. ಹೀಗೇ ಮಾತಾಡುತ್ತಾ ಮೇಲೆ ನೋಡಿದರೆ, ಬೆಟ್ಟವೊಂದರ ಮರೆಯಿಂದ ಮೂಡುತ್ತಿರುವ ಬೆಳ್ಳಿ ಚಂದ್ರ!. ನನ್ನ ಜೀವನ ಅತ್ಯಂತ ಸುಂದರ ಚಂದ್ರೋದಯ ಅದು. ಡೀನ್ ಖುಷಿಯಲ್ಲಿ ಹೇಳುತ್ತಿದ್ದರು " ಹೋದ ವರ್ಷ ನನ್ನ ಹುಟ್ಟಿದ ಹಬ್ಬಕ್ಕೂ ಇಂತಹುದೇ ಚಂದ್ರೋದಯ ನೋಡಿದೆ" ಅಂತ.
ಚಂದಿರನ ಬೆಳಕಲ್ಲಿ ಎಲ್ಲ ಕೂತು ಹರಟಿ, ಸೊಗಸಾದ ಊಟವನ್ನೂ ಮುಗಿಸಿ ಮಲಗಿದೆವು, ಗೋವಿಂದರಾಜರ ಗೊರಕೆಯ ಹಿಮ್ಮೇಳದ ಜೊತೆ! ಅವರ ಗೊರಕೆ ನಿಲ್ಲಿಸಲು ನಾನು ಏನೆನೆಲ್ಲ ಪ್ರಯತ್ನ ಮಾಡಿದೆ, ಆದರೆ ಯಶಸ್ವಿಯಾಗಲಿಲ್ಲ.
ಬೆಳಗ್ಗೆದ್ದು ನೋಡಿದರೆ ಅನಾ, ಗದ್ದೆ ಬದುವಿನ ಕೂತು, ಯಾವುದೋ ಒಂದು ಬೆಟ್ಟವನ್ನೇ ದಿಟ್ಟಿಸುತ್ತಿದಳು. ( ಯಾವುದೋ ಒಂದು ಅಂತ ಯಾಕೆ ಅಂದೆ ಅಂದ್ರೆ, ಇಲ್ಲಿ ಸುತ್ತಲೂ ಬೆಟ್ಟಗಳೇ ಇರೋದು)ಏನು ನೋಡುತ್ತಿದ್ದೀಯಾ ಅಂದಿದ್ದಕ್ಕೆ, "ಹಂತ ಹಂತವಾಗಿ ಬೆಳಗಾಗುವದನ್ನ ನೋಡ್ತಾ ಇದೀನಿ, ನಿಧಾನವಾಗಿ ಬೆಳಗಾಗ್ತಾ ಇದೆ".. ಅಂತೆಲ್ಲ ಏನೋ ಅಂದಳು. ನಾನೂ ಸ್ವಲ ಹೊತ್ತು ಕೂತು ಅದನ್ನ ನೋಡಿ, ಮತ್ತೆ ಬಂದು ಮಲಗಿದೆ. ಸ್ವಲ್ಪ ಹೊತ್ತಿಗೇ ಸ್ಲೀಪಿಂಗ್ ಬ್ಯಾಗುಗಳಿಂದ ಎಲ್ಲ ಜೀವಿಗಳೂ ಹೊರ ಬಂದವು.
ಉಪಹಾರಕ್ಕೆ ಭರ್ಜರಿ ನೀರುದೋಸೆ. ಎಂದೂ ಹಾಲು ಹಾಕಿ ಮಾಡಿದ ದ್ರವ ಪದಾರ್ಥ ಕುಡಿಯದ ಡೀನ್, ಇಲ್ಲಿ ಕಷಾಯ ಕುಡಿದುಬಿಟ್ಟರು.ಆ ಹಿರಿಯರು ನಮಗೆ ಆ ಊರಿನ ದೇವಸ್ಥಾನ ತೋರಿಸುತ್ತೇನೆ ಅಂತ ಅಂದಿದ್ದರು. ಮನೆಯೊಡತಿಗೆ ವಂದನೆ ಸಲ್ಲಿಸಿ, ಅಲ್ಲಿಂದ ಗಂಟು ಮೂಟೆ ಕಟ್ಟಿ ಹೊರಟಿದ್ದಾಯ್ತು.
ಜಲಪಾತದಿಂದಲೇ ಬರುವ ಹಳ್ಳ ದಾಟಿ, ದೇವಸ್ಥಾನಕ್ಕೆ ಬಂದೆವು.
ಸಣ್ಣ ಅಂದ್ರೆ ಸಣ್ಣ ದೇವಸ್ಥಾನ ಇದು. ಗರ್ಭಗುಡಿಯಲ್ಲಿರುವ ಲಿಂಗ ರಾಮಲಿಂಗೇಶ್ವರನದು. ರಾಮ- ಸೀತೆ ಇಲ್ಲಿ ಲಿಂಗ ಸ್ಥಾಪನೆ ಮಾಡಿದರೆಂದೂ, ನಂತರ ಪಾಂಡವರು ಈ ದೇವಸ್ಥಾನ ಕಟ್ಟಿದರೆಂದೂ ಊರವರು ಐತಿಹ್ಯ ಹೇಳುತ್ತಾರೆ.ಹೊರಗಡೆ ಒರಟು ಕಲ್ಲಿನಂತೆ ಕಂಡರೂ ಗರ್ಭಗುಡಿಯ ಒಳಮೈ ನುಣುಪಾಗಿದೆ. ಈ ಕುಗ್ರಾಮದಲ್ಲಿರುವ ದೇವಳವೂ, ಪರಕೀಯರ ಆಕ್ರಮಣಕ್ಕೆ ತುತ್ತಾಗಿದ್ದು ಸ್ಪಷ್ಟವಿದೆ. ಅಂಗಳದಲ್ಲಿನ ನಂದಿ, ಗರ್ಭಗುಡಿಯ ಹೊರಗಿರುವ ಪಾರ್ವತಿ(?) ಯ ವಿಗ್ರಹಗಳು ದುರುಳರ ಹೊಡೆತಕ್ಕೆ ಸಿಕ್ಕಿವೆ.
ಇಲ್ಲಿನ ದೇವಳದ ಆವರಣದಲ್ಲಿ ವೀರಗಲ್ಲುಗಳೂ ಇವೆ. ಆ ವೀರಗಲ್ಲುಗಳ ಬಗ್ಗೆ ಸರಿಯಾದ ಮಾಹಿತಿ ನಮಗೆ ಸಿಗಲಿಲ್ಲ.
ಇನ್ನು ವಾರ ಬಿಟ್ಟರೆ, ಅಲ್ಲಿನ ದೇವರಿಗೆ ಜಾತ್ರೆಯ ಸಂಭ್ರಮ. ನಾಲ್ಕಾರು ಜನ ಸೇರಿ ದೇವಸ್ಥಾನದ ಆವರಣವನ್ನು ಸಗಣಿ ಸಾರಿಸಿ ಶುಚಿ ಮಾಡುತ್ತಿದ್ದರು. ಒಬ್ಬ ಸಣ್ಣ ಹುಡುಗ,ನಾನು ಫೋಟೋ ತೆಗೆಯುದನ್ನೇ ಕುತೂಹಲದಿಂದ ನೋಡುತ್ತಿದ್ದ. ಅವನ ತಂಗಿಯನ್ನೂ ಕರೆತಂದು ತೋರಿಸಿದ. ಅವನ ಫೋಟೋ ತೆಗೆದು ತೋರಿಸಿದೆ. ಇಷ್ಟಗಲ ಬಾಯಿ ಬಿಟ್ಟು ನಕ್ಕ.
ನಮ್ಮ ಜೊತೆ ಬಂದವರು ಅಲ್ಲಿಂದ ನಾವು ಹೇಗೆ ಮುಂದುವರಿಯಬೇಕು ಅಂತ ದಾರಿ ತೋರಿಸಿದರು. ಅವರಿಗೆ ಮನ:ಪೂರ್ವಕ ಕೃತಜ್ಞತೆಗಳನ್ನ ತಿಳಿಸಿ, ಭಾರ ಬ್ಯಾಗುಗಳ ಜೊತೆ, ಅಲ್ಲೇ ಕೂತಿದ್ದ ನಮ್ಮ ಭಾರ ಮನಸ್ಸುಗಳನ್ನು ಹಠ ಮಾಡಿ ಎಬ್ಬಿಸಿ ಕರೆದುಕೊಂಡು ಹೊರಟೆವು, ಕಳೆದ ದಿನವನ್ನೇ ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಾ..
9 ಕಾಮೆಂಟ್ಗಳು:
ಪ್ರಕೃತಿಯ ಮಡಿಲಲ್ಲಿ ಮಕ್ಕಳಾಗಿ ಕಳೆದ ಆ ಕ್ಷಣಗಳನ್ನು ಮರೆಯಲುಂಟೇ.... :-)
ಹ್ವಾ... ಶ್ರೀನಿಧಿ
ಹೀಗೊಂದು ಪ್ರವಾಸದ ಕಥೆ ಎಷ್ಟು ಚೊಲೋಇದ್ದು ಅ೦ದ್ರೆ ಅನ೦ತಭಟ್ಟನ ಅಪ್ಪೆಮಿಡಿಲ್ಲಿ ಮಾಡಿದ್ದು ಅಪ್ಪೆಹುಳಿ ಹ೦ಗೆ ಇದ್ದು ನೋಡು.
--ಹಷ೯.
View of village life in modern scenario......
ಹೊಗಿಬಂದಷ್ಟೇ ಖುಷಿ ಆತು ನೋಡು..... ಪೋಟೊಗಳು ಕೂಡಾ ಚೆನ್ನಾಗಿದ್ದು.
ಯಾವೂರು, ಎಲ್ಲಿ, ಏನು, ಎಂತು -ಒಂದೂ ಹೇಳದೇ ಪಯಣಗಾಥೆಯನ್ನು ಬರದ್ದೆ; ಗುಡ್! ನಾನೂ ಹೋಗವು ಅಲ್ಲಿಗೆ ಅನ್ನಿಸ್ತಾ ಇದ್ದು.. ಯಾವಾಗ ಕರ್ಕಂಡು ಹೋಗ್ತೆ?
ಮತ್ತೊಮ್ಮೆ ಅಲ್ಲಿಗೆ ಹೋಗಿ ಬಂದಂತೆ ಭಾಸವಾಯಿತು.. ಸುಬ್ಬಿಗೆ ಇದರ print-out ಕಳ್ಸ್ತೀನಿ..
[ಸುಶ್ರುತ]: ಬೇಗ ಎಳ್ಕೊಂಡ್ ಹೋಗಿ ಶ್ರೀನಿಧಿಯನ್ನ..
[Ana]: ಮರೆಯಲು ಸಾಧ್ಯವೇ ಇಲ್ಲ. ಆದರೆ, ನೀವು ಯಾವುದೋ ಒಂದು ಬೆಟ್ಟವನ್ನು ನೋಡುತ್ತಿದ್ದ ದೃಶ್ಯವನ್ನು ನಾನು miss ಮಾಡ್ಕೊಂಡ್ಬಿಟ್ಟೆ...
[ಹರ್ಷ]: ನಿಮ್ಮ comment ಮೇಲೆ ಒಂದು comment ಮಾಡುವ ಆಸೆಯಾಗಿದೆ.. ಬಹಳ soooooopperrrr ಆಗಿ ವಿಮರ್ಶೆ ಮಾಡಿದ್ದೀರ..
ಲೇಖನ ಮತ್ತು ಚಿತ್ರಗಳು ಬಹಳ ಚೆನ್ನಾಗಿವೆ. ಭಗ್ನಗೊಂಡಿರುವ ಶಿಲೆಗಳನ್ನು ನೋಡುತ್ತಿದ್ದರೆ ಕರುಳು ಕಿವುಚಿದಂತಾಗುತ್ತಿದೆ. ಪಾಪಿಗಳು! ನಿರುಪದ್ರವಿ ಸುಂದಲ ಶಿಲಾಕೃತಿಗಳನ್ನೂ ಹಾಳುಮಾಡಿದ್ದಾರೆ.
ಇಂತಹ ಚಾರಣ ಲೇಖನಗಳನ್ನೂ ಇನ್ನೂ ಹೆಚ್ಚು ಹೆಚ್ಚು ಬರೆದು ನಮ್ಮ ಮುಂದಿರಿಸಿ.
ತುಂಬ ಸುಂದರವಾಗಿದೆ
Sleeping Bagನೊಳಗಿಂದ ಒಂದೊಂದಾಗಿ ಜೀವಿಗಳು ಹೊರಗೆ ಬಂದದ್ದು ಬಹಳ ಚೆನ್ನಾಗಿತ್ತು..
ಶ್ರೀನಿಧಿಯವರೆ,
ಅದ್ಭುತವಾಗಿ ಬರೆದಿದ್ದೀರಾ! ಓದಿ ಬಹಳ ಸಂತೋಷವಾಯಿತು. ಮತ್ತೊಂದು ಸಲ ದೇವಕಾರಿಗೆ ಹೋಗಿ ಬಂದಂತಾಯಿತು. ನಿಮ್ಮ ಮುಂದಿನ 'ಪೋಸ್ಟ್' ಗಾಗಿ ಕಾಯುತ್ತಿರುತ್ತೇನೆ.
ರಾಜೇಶ್ ನಾಯ್ಕ.
ಕಾಮೆಂಟ್ ಪೋಸ್ಟ್ ಮಾಡಿ