ಮಂಗಳವಾರ, ನವೆಂಬರ್ 27, 2007

ಬೆಳಕಿನ ಕವನ

ಆಕಾಶ ದೀಪದ ಸುತ್ತ ಮಿಣುಕು ಹುಳ ಸುತ್ತಿತ್ತು,
ಹೊಸಬಣ್ಣ-ಬೆಳಕನು ನೋಡಿ, ಆಶ್ಚರ್ಯವದಕೆ.
ಎಂದೂ ಇಲ್ಲಿಲ್ಲದ್ದು, ಇಂದೆಂತು ಬಂದಿತೋ
ಸೋಜಿಗವೆ ಸೋಜಿಗವು, ಬೆಳಕ ಹುಳಕೆ.


ಅಂಜುತಂಜುತಲೆ ಮೆಲ್ಲನೇ ಬಳಿಸಾರಿ,
ಕೇಳಿತದು ಆಕಾಶಬುಟ್ಟಿಯನು,
ಎಲ್ಲಿಂದ ಬಂದೆಯೋ ,ಯಾರು ನೀನು,
ನಿನಗೆ ಮಾತ್ರವ ಏಕೆ ಈಸೊಂದು ಪ್ರಖರತೆಯು
ನನ್ನ ಪ್ರಭೆಯೇಕೆ ಬಲು ಮಂಕು, ನಿನ್ನ ಹಾಗಿಲ್ಲ?


ಸಣ್ಣಗೆ ನಕ್ಕಿತಾ ಆಕಾಶದೀಪವು,
ನಿನ್ನಂತೆ ನಾನಲ್ಲ,ಅಲ್ಪಾಯುಷಿಯು ನಾನು ಗೂಡುದೀಪ.
ಹಬ್ಬದಾ ದಿನ ಮಾತ್ರ ನನ್ನಿರವು ಬಾನಲ್ಲಿ
ನಾಳೆ ಮತ್ತದೇ ಹಳೆ ಕತ್ತಲಾ ಗೂಡು,
ಆಥವ ಹೊರಗೆಸೆವರು, ಬರಿ ಬಿದಿರ ಅಸ್ಥಿ.


ನೀನೋ ನಿತ್ಯ ಸಂತೋಷಿ, ಸ್ವಪ್ರಭೆಯು ನಿನಗೆನನಗೋ
,ಬೆಳಕು ಕೊಡುವಾತ ಮನುಜ
ಅವಗೆ ಬೇಕೆಂದಷ್ಟು ಹೊತ್ತು ಮಾತ್ರವೆ ನಾನು.
ನಿನ್ನಷ್ಟು ಸುಖಿಯಲ್ಲ, ನನ್ನ ಬದುಕು.


ನನ್ನ ಶ್ರೀಮಂತಿಕೆಯು ಬಾಡಿಗೆಗೆ ಬಂದಿದ್ದು
ಮಂಕು ನೀನಹೆ ಗೆಳೆಯ, ನಿನ್ನ ಬೆಳಕಲ್ಲ!
ನಾಳೆ ಮರತುಂಬ ಮತ್ತೆ ನಿನ್ನದೇ ಮಿಣುಕ ಮಣಿ,
ನನ್ನ ನೆನಪೂ ಬರದು ಇವರಾರಿಗೂ.


ಆದರೂ ನನಗಂತೂ ಸಂತಸವು ಬಹಳವಿದೆ.
ನನ್ನ ಬೆಳಕನು ಕಣ್ಣು ತುಂಬಿಕೊಳುವರು ಎಲ್ಲ.
ಇದ್ದಷ್ಟು ದಿನ ಖುಷಿಯು ಇರಲೇ ಬೇಕಲ್ಲವೇ
ಸುಮ್ಮಗೇ ಬೇಸರವ ಹುಡುಕುವುದು ಸಲ್ಲ.


ಆಗಸದೀಪದ ಮಾತ ಕೇಳಿದ ಮಿಂಚು ಹುಳ,
ಸುಮ್ಮಗೇ ಮೈಕೊಡವಿ ಸಾಗಿತಲ್ಲಿಂದ.
ಯಾವುದೋ ತಾನದ ಹಾಡ ಗುನುಗುತಿದ್ದರೆ ದೀಪ,
ನೇಸರನು ಮೂಡಿದ್ದ ದೂರ ಬೆಟ್ಟಸಾಲಲ್ಲಿ.

9 ಕಾಮೆಂಟ್‌ಗಳು:

ಸಿಂಧು sindhu ಹೇಳಿದರು...

ನಿಧಿ,

ಖುಷ್ಯಾತು ಓದಿ.

ಆಶ್ಚರ್ಯವದಕೆ..ಬೆಳಕ ಹುಳಕೆ..
ಗೂಡುದೀಪ, ಆಗಸದೀಪ..
ನಿತ್ಯಸಂತೋಷಿ, ಸ್ವಪ್ರಭೆ.., ಮಿಣುಕಮಣಿ..

ಕನ್ನಡಮ್ಮನಿಗೆ ಸಂಪ್ರೀತಿಯ ಮೆಲ್ನಗೆ. ನಿನ್ನ ಪದಸಂಪತ್ತಿ ಕಂಡು.

ಮತ್ತೆ ಚಳಿಕತ್ತಲಲ್ಲಿ ಮಿನುಗುವ ಪುಟ್ಟದೊಂದು ಮಿಣುಕು ಹುಳ, ಹಬ್ಬದ ರಾತ್ರಿಗಳನ್ನ ಬೆಳಗುವ ಚಿತ್ತಾರವಿನ್ಯಾಸದ ಆಕಾಶಬುಟ್ಟಿಯ ಜತೆ ಕಟ್ಟಿ ನಡೆಸಿದ ಜುಗಲ್ ಬಂದಿ ಬದುಕಿನ ಸರಳ ಸತ್ಯವನ್ನ ವಿಶಿಷ್ಟವಾಗಿ ತೆರೆದಿಟ್ಟಿದೆ.

ತುಂಬ ದಿನಗಳ ನಂತರದ ಮೂಡಿದ ಅರಳುಮೊಗ್ಗಿಗೆ ನಾನು ಮರುಳಾಗಿದ್ದೇನೆ.

ಪ್ರೀತಿಯಿಂದ
ಸಿಂಧು

ಅನಾಮಧೇಯ ಹೇಳಿದರು...

ಕಲ್ಪನೆಯೋ,ವಾಸ್ತವವೋ..
ಹೆಣೆದ ರೀತಿ ಅದೆಷ್ಟು ಚೆನ್ನ,
ಮನಸ್ಸಿನ ಪುಟ್ಟ ಪ್ರಪಂಚದೊಳಗೆ,
ಬದುಕನ್ನೇ ಕಟ್ಟಿಕೊಟ್ಟ ಶ್ರೀನಿಧಿ ಅಣ್ಣ..
ದಿನ ನಿತ್ಯ ನೀ ಬರೆ..
ನಂಗೂ ಖುಷಿ,ನಿಮ್ಗೂ ಖುಷಿ..
ತುಂಬಾ ದಿನಗಳ ನಂತರ ನಿಮ್ಮ ಹನಿ ಹನಿ ಓದಿದೆ.ತೋಚಿದ್ದನ್ನು ಬರೆದೆ...ಏನೋ ಓದಿದ ಮೇಲೆ ನನಗನಿಸಿದ್ದನ್ನು..

Avani ಹೇಳಿದರು...

Nice maga after a long time ........................ Keep it up

Lanabhat ಹೇಳಿದರು...

ಚೆನ್ನಾಗಿದೆ .....
ಹಾಡೋವ್ರಿದ್ರೆ ಹಾಡ್ಸಿ..

nichu ಹೇಳಿದರು...

sakat aagide............

ಅನಾಮಧೇಯ ಹೇಳಿದರು...

ಇದು ಶ್ರೀನಿ ಲೆವೆಲ್ಲಿಗೆ ಅಲ್ಲ ಅವನು ಇನ್ನೂ ಚೆನ್ನಾಗಿ ಬರೀತಾನೆ
ಚೆನ್ನಗಿದೆ ಕಣೋ but I except a world more 4m u....

malnadhudgi

chethan ಹೇಳಿದರು...

ಚೆನ್ನಾಗಿದೆ.
"ಮಂಕು ನೀನಹೆ ಗೆಳೆಯ, ನಿನ್ನ ಬೆಳಕಲ್ಲ!" - ತುಂಬಾ ಇಷ್ಟವಾಯ್ತು

Sushrutha Dodderi ಹೇಳಿದರು...

ಸ್ವಿಚ್ಚು ಒತ್ತಿದ ಕೂಡಲೆ ಫಕ್ಕನೆ ಹೊತ್ತಿಕೊಳ್ಳುವ ಬರಿ ಬಿದಿರ ಅಸ್ಥಿಯೊಳಗಿನ ಬೆಳಕಿನ ಜೀವ... ಇದ ಕಂಡು ಕರುಬುವ ಮರಿ ಮಿಣುಕು ಹುಳ...

ಚನಾಗ್ ಬರದ್ದೆ ದೋಸ್ತಾ...ಕಾರ್ತೀಕ ಮುಗಿಯೋದ್ರೊಳಗೆ ನಿನ್ ಬ್ಲಾಗಲ್ಲೊಂದು ಆಕಾಶಬುಟ್ಟಿ ಬೆಳಗಿತಲ್ಲ ಅಂತೂ! ಮಿಣುಕು ಹುಳುಗಳು ಧನ್ಯ!

ಶ್ರೀನಿಧಿ.ಡಿ.ಎಸ್ ಹೇಳಿದರು...

ಸಿಂಧು,
ನೀ ಸಿಕ್ಕಾಪಟ್ಟೆ ಹೊಗಳ್ತೆ ಮಾರಾಯ್ತಿ, ಕಷ್ಟಾಗ್ತು:)

ಕರ್ಕೇರರೇ ,
ಧನ್ಯವಾದ,ಕವನಿಸಿದ್ದಕ್ಕೆ,ಕನವರಿಸಿದ್ದಕ್ಕೆ!

ಪ್ರವೀಣ್,ಲನಾ,ನಿಚ್ಚು,

ನಿಮ್ಮಗಳ ಪ್ರೀತಿಗೆ ಕೃತಜ್ಞ...

ಮಲ್ನಾಡ್ ಹುಡುಗೀ,
ಹಮ್, ಇರಬಹುದೇನೋ, ಬಹಳ ಕಾಲದ ನಂತರ ಬರೆದಿದ್ದಕ್ಕೆ... ಮುಂದೆ ಉತ್ತಮವಾಗಿ ಬರೆಯೋ ಪ್ರಯತ್ನ ಮಾಡಲಾಗುವುದು.:)

ಚೇತನ್,
ಬರ್ತಾ ಇರಿ ಸಾರ್!

ಸುಶ್,
ಬರ್ಯಕಾತಲಾ ಮಾರಯಾ, ಇಲ್ದೇ ಹೋದ್ರೆ ಕಷ್ಟಾಗ್ತು!