ಕಳೆದ ನಿನ್ನೆಗಳು ಮತ್ತೆ ಬರುವವು ಕನಸ ಬುಟ್ಟಿ ಹೊತ್ತು
ಸುಳಿವ ಬೇಸರವ ಬದಿಗಿಡು ಗೆಳೆಯಾ ಆಸೆ ಬೀಜ ಬಿತ್ತು
ಕಾವಳ ಕಳೆಯಲು ಬೆಳಕು ಹರಿವುದು ಕಳವಳ ಬೇಕಿಲ್ಲ
ನೋವೊಳು ನಗುವುದ ಕಲಿಯದೆ ಇದ್ದರೆ ಬದುಕಿಗರ್ಥವಿಲ್ಲ
ಕಟ್ಟಿದ ಮೋಡವು ಕರಗಲು ನೋಡು ಮಳೆ ತಾನಾಗೇ ಸುರಿಯುವುದು
ಮೆಟ್ಟಿದ ಬೀಜವೆ ಮೊಳಕೆ ರೂಪದಲಿ ತಲೆಯೆತ್ತಲ್ಲೇ ನಿಲ್ಲುವುದು
ಸುತ್ತಿಗೆ ಪೆಟ್ಟನು ತಿಂದರೆ ತಾನೆ ಮೊಳೆಯದು ಭದ್ರ ಗೋಡೆಯಲಿ?
ಮೆತ್ತಗೆ ಕುಳಿತೇ ಇದ್ದರೆ ನೀನು ಯಶವು ಸಿಗುವುದೇ ಯಾನದಲಿ?
ಇದ್ದಲ್ಲಿಂದ ಹೊರಟು ಬಿಡು ಹೋರಾಡೋ ಛಲವನು ತೊಟ್ಟುಬಿಡು
ಬಿದ್ದಿರೋ ಬದುಕನು ಎತ್ತಿಬಿಡು, ಗುರಿಯಲಿ ಕಣ್ಣನು ನೆಟ್ಟುಬಿಡು
ಮಾಲೆಯಾಗಲಿ ಬಾಳಿನ ಕೊರಳಿಗೆ ಇಂಥ ಯಶೋಸೂತ್ರ
ಸೋಲೇ ಇಲ್ಲದೆ ಸಾಗಲಿ ಮುಂದೆ ನಿನ್ನ ಯಶೋ ಯಾತ್ರ!
ಎಲ್ಲರಿಗೂ ಹೊಸ ವರುಷದ ಶುಭಾಶಯಗಳು.. ನಿಮ್ಮೆಲ್ಲ ಕನಸುಗಳಿಗೆ ನವ ವರುಷವು ಹೊಸ ದಾರಿ ತೋರಲಿ.
10 ಕಾಮೆಂಟ್ಗಳು:
ಕಮೆಂಟಲ್ಲಿ ಚಪ್ಪಾಳೆ ತಟ್ಟಕ್ಕಾಗಿದ್ದಿದ್ರೆ ತಟ್ತಿದ್ದೆ. ತುಂಬ ಚೆನ್ನಾಗಿದೆ ಪದ್ಯ. ಬೊಂಬಾಟ್! [ಚಪ್ಪಾಳೆ... ಚಪ್ಪಾಳೆ...] :-)
ನಿಮಗೂ ಹೊಸ ವರ್ಷದ ಶುಭಾಷಯಗಳು.
ನೆನ್ನೆಗಳು ನೆರಳಾದವು ... ನಾಳೆಗಳು ಕನಸಾಗಿ ಕನವರಿಸಿದವು... ಇಂದಿನ ಪ್ರತಿ ಕ್ಷಣಗಳ ತನ್ನದಾಗಿಸಲು ಸಾಗಿದೆ ಬದುಕು .... :))
ಹೊಸ ಬಗೆಯ ಕನಸಿರಲಿ .... ನನಸಾಗಿಸುವ ಮನಸಿರಲಿ ..
ಒಲುಮೆಯ ಹಾರೈಕೆಗಳೊಂದಿಗೆ
ಅಮರ
happy new year shrinidhi.
ಊಹ್ಞೂ.. ಉಪದೇಶಗಳು! ಸಮ್ಮರೈಜ್ ಮಾಡಿ ಬರೆದ ಹಾಗಿದೆ.
ಚೆನ್ನಾಗಿದೆ.... "ಹೇಳೋದು ಶಾಸ್ತ್ರ, ಇಕ್ಕೋದು ಗಾಳ" ಅಲ್ಲ ತಾನೇ?
ನನ್ನ ಹಾರೈಕೆಗಳು... ನಿಮಗೆಲ್ಲ:
ಹೊಸ ವರುಷ ಹರುಷದಾಯಕವಾಗಿರಲಿ.
ಸುಖ, ಸಂತಸ, ಶಾಂತಿ ತರಲಿ,
ನಗು ಹಬ್ಬಲಿ, ಬಿಗು ತಗ್ಗಲಿ,
ಸಮೃದ್ಧಿಯ ಆಪ್ತ ತೋಳು ಎಲ್ಲರನು ತಬ್ಬಲಿ.
ಪದ್ಯ ಚೆನ್ನಾಗಿದೆ. ಕನಸೆಲ್ಲಾ ಸಾಕಾರವಾಗಲಿ.
ನಾವಡ
ಎಲ್ಲರಿಗೂ ಸಲಾಮುಗಳು:)
ಕಳೆದ ದಿನ, ಕ್ಷಣಗಳನ್ನ ಮತ್ತೆ ಪಡೆಯಲಾಗದು ಎಂದು ಗೊತ್ತಿದ್ದೂ ಆ ದಿನಗಳನ್ನು ಕಾಣುವ ಕನಸ ಕಾಣುತ್ತಿರುವುದು, ಬಿತ್ತುತ್ತಿರುವುದು ನಿಜಕ್ಕೂ ಒಂದು ಉತ್ತಮ ಪ್ರಯತ್ನ.
"ಬಿದ್ದಿರೋ ಬದುಕನು ಎತ್ತಿಬಿಡು, ಗುರಿಯಲಿ ಕಣ್ಣನು ನೆಟ್ಟುಬಿಡು"-ಈ ಸಾಲು ಮನತಟ್ಟಿತು.
ತುಂಬಾ ಚೆನ್ನಾಗಿದೆ. ಅರ್ಥಪೂರ್ಣವಾಗಿದೆ.
"ಸುತ್ತಿಗೆ ಪೆಟ್ಟನು ತಿಂದರೆ ತಾನೆ ಮೊಳೆಯದು ಭದ್ರ ಗೋಡೆಯಲಿ?
ಮೆತ್ತಗೆ ಕುಳಿತೇ ಇದ್ದರೆ ನೀನು ಯಶವು ಸಿಗುವುದೇ ಯಾನದಲಿ?"
"......ಬಿದ್ದಿರೋ ಬದುಕನು ಎತ್ತಿಬಿಡು, ಗುರಿಯಲಿ ಕಣ್ಣನು ನೆಟ್ಟುಬಿಡು"
Arthpoorna saalugalu.
ಕಾಮೆಂಟ್ ಪೋಸ್ಟ್ ಮಾಡಿ