ನಾನು ಆಗ ಒಂದನೇ ಕ್ಲಾಸ್ ನಲ್ಲಿದ್ದೆ. ಟೀಚರ್ರು ಎಲ್ಲರಿಗೂ ಕನ್ನಡದ ಒಂದೊಂದು ಅಕ್ಷರವನ್ನು ತೋರಿಸಿ ಅದನ್ನು ಗುರುತಿಸಲು ಹೇಳುತ್ತಿದ್ದರು. ನನ್ನ ಪಾಳಿ ಬಂತು. ಅವರು "ಷ" ಅಕ್ಷರವನ್ನು ತೋರಿಸಿ ಓದು ಅಂದರು. ನನಗೆ ಏನಾಯಿತು ಅಂತ ಗೊತ್ತಿಲ್ಲ, ಯಾಕೆ ಹಾಗಾಯಿತು ಅಂತಲೂ ಗೊತ್ತಿಲ್ಲ, ಏನು ಮಾಡಿದರೂ ಈ ಅಕ್ಷರವನ್ನು ಗುರುತಿಸಲೇ ಆಗಲಿಲ್ಲ. ನಾನು ಅವರನ್ನೂ , ಆ ಅಕ್ಷರವನ್ನೂ ನೋಡುತ್ತ ಸುಮ್ಮನೇ ನಿಂತುಬಿಟ್ಟೆ. ಟೀಚರ್ ನನ್ನ ಕನ್ನಡ ಪುಸ್ತಕದ, "ಷ" ಅಕ್ಷರದ ಎದುರಿಗೆ ಕೆಂಪು ಶಾಯಿಯಲ್ಲಿ ತಪ್ಪು ಮಾರ್ಕ್ ಹಾಕಿದರು. ನನ್ನನ್ನ ನನ್ನದೇ ತರಗತಿ ಮತ್ತೊಂದು ಹುಡುಗಿಯ ಎದುರು ಎಳೆದು ನಿಲ್ಲಿಸಿ "ಇವನಿಗೆ ಅ ಆ ಇ ಈ ಹೇಳಿಕೊಡು" ಅಂದು ಬಿಟ್ಟರು. ಆಮೇಲೆ ಬಹುಕಾಲ ನನ್ನನ್ನು ಆ ಟೀಚರ್ರು "ಕನ್ನಡ ಮಾಸ್ಟ್ರ ಮಗನಾಗಿ ಕನ್ನಡ ಅಕ್ಷರನೇ ಓದೋಕೆ ಬರೋದಿಲ್ಲ ನಿಂಗೆ" ಅಂತ ಹೀಯಾಳಿಸುತ್ತಲೇ ಇದ್ದರು. ಇವತ್ತಿಗೂ ಆ ಕೆಂಪು ಶಾಯಿಯ ತಪ್ಪು ಗುರುತು, ನನ್ನ ಕಣ್ಣೆದುರಿಗೇ ಇದೆ.
******
ನಾನು ಐದನೇ ಕ್ಲಾಸಿನಲ್ಲಿ ಓದುತ್ತಿದ್ದೆ. ಶಿಕ್ಷಕರ ದಿನಾಚರಣೆಯ ದಿನ ಇಷ್ಟವಿದ್ದವರು ಭಾಷಣ ಮಾಡಬಹುದು ಅಂತ ನಮ್ಮ ಹೆಡ್ ಸಿಸ್ಟರ್ ಕ್ಲಾಸಿಗೆ ಬಂದು ಹೇಳಿದ್ದರು. ನಾನು ಮನೆಗೆ ಹೋಗಿ ಅಪ್ಪನಿಗೆ ಹೇಳಿದೆ ಮತ್ತು ಅವರು ಆಗಿನ ನನ್ನ ಲೆವೆಲ್ಲಿಗೆ ತಕ್ಕ ಹಾಗೆ, "ಗುರು ಬ್ರಹ್ಮಾ, ಗುರೂರ್ ವಿಷ್ಣು.. ಇತ್ಯಾದಿಯಿಂದ ಶುರುವಾಗುವ ಭಾಷಣವೊಂದನ್ನು ತಯಾರು ಮಾಡಿಕೊಟ್ಟಿದ್ದರು. ನಾನೂ ಬಾಯಿಪಾಠ ಮಾಡಿಕೊಂಡು ತಯಾರಾದೆ. ಶಿಕ್ಷಕರ ದಿನಾಚರಣೆಯ ಬೆಳಿಗ್ಗೆ ಫಂಕ್ಷನ್ನು ಶುರುವಾಗುವ ಕೊಂಚ ಮುನ್ನ ಹೆಡ್ ಸಿಸ್ಟರ್ ಬಳಿಗೆ ಹೋಗಿ ನಾನೂ ಭಾಷಣ ಬರೆದುಕೊಂಡು ಬಂದಿದ್ದೇನೆ, ಅಂದೆ. ನನ್ನ ಎದುರಿಗೆ ಒಂದು ಸಲ ಓದಬೇಕಿತ್ತಲ್ಲಾ... ಈಗ ಟೈಮಿಲ್ಲ, ಸರಿಯಾಗಿ ಬಾಯ್ಪಾಠ ಮಾಡಿದೀಯಲ್ಲ ? ಅಂತ ಕೇಳಿದ್ರು. ಹುಂ ಅಂದೆ. ನನ್ನ ಗ್ರಾಚಾರಕ್ಕೆ ಸ್ಟೇಜಿನ ಮೇಲೆ ಯಾಕೋ ಒಂದೆರಡು ಸಾಲು ಮರೆತು ಹೋಗಿ ಬೆಬ್ಬೆಬ್ಬೆ ಆಯ್ತು. ಹೆಡ್ ಸಿಸ್ಟರ್ ಪ್ರೋಗ್ರಾಮು ಮುಗಿದು ಹೋದ ಮೇಲೆ ತಮ್ಮ ಚೇಂಬರಿಗೆ ಕರೆದು, ಉಗಿದು ಉಪ್ಪಿನಕಾಯಿ ಹಾಕಿದ್ರು. ಅವರ ದೊಡ್ಡ ನಾಗರ ಬೆತ್ತ ತೆಗೆದು ಎರಡು ಹೊಡೆದರು. ಆಮೇಲೆ ಮತ್ತೆ ಯಾವತ್ತೂ ನಾನು ಭಾಷಣ ಮಾಡಲಿಲ್ಲ, ಹೈಸ್ಕೂಲು ಮುಗಿಯುವವರೆಗೆ. ಆಮೇಲೆ ಸ್ಟೇಜು ಹತ್ತಿದರೂ ಕೈ ಕಾಲು ನಡುಗುತ್ತಿತ್ತು ಸ್ವಲ್ಪ ದಿನ.
*****
ಮೊನ್ನೆ ನನ್ನ ಚಿಕ್ಕಮ್ಮ ಮನೆಗೆ ಬಂದಿದ್ದರು, ಅವರಿಗೊಬ್ಬ ಪುಟ್ಟ ಮಗಳು, ೪ ವರ್ಷದವಳು. ಅವಳು ಚೆನ್ನಾಗಿ ಸಿನಿಮಾ ಹಾಡೆಲ್ಲ ನೆನಪಿಟ್ಟುಕೊಂಡು ಹಾಡುತ್ತಾಳೆ ಅಂತಿದ್ದರು ಅವರು. ಇಲ್ಲ ಚಿಕ್ಕಮ್ಮಾ, ನಾಡಿದ್ದು ಶಾಲೆಗೆ ಸೇರಿದ ಮೇಲೆ ನಿನ್ನ ಮಗಳು ಹಾಡುವ ಉಲ್ಲಾಸದ ಹೂಮಳೇ.. ವರ್ಕೌಟ್ ಆಗುವುದಿಲ್ಲ, ಬೇರೇನಾದರೂ ಬೇಕಾಗುತ್ತದೆ ಅಂದೆ. ಆವಾಗ ಇದೆಲ್ಲ ನೆನಪಾಯಿತು.
12 ಕಾಮೆಂಟ್‌ಗಳು:
ನಿಂಗೆ ಕನ್ನಡದ ಡಿಸ್ಲೆಕ್ಸಿಯಾ ಇತ್ತು ಅನ್ಸುತ್ತೆ!!
ಒಳ್ಳೆಯ ನೆನಪುಗಳು... ಆದ್ರೂ "ಕನ್ನಡ ಮಾಸ್ಟ್ರ ಮಗನಾಗಿ..." :-)
ಅರುಣ: "ಷ" ಡಿಸ್ಲೆಕ್ಸಿಯಾ ಇರ್ಬೇಕು
hmmm...ಪ್ರೀಚಿಂಗ್ ಅನ್ನಿಸದಂತೆ ವಿಷಯ ಮುಂದಿಟ್ಟ ರೀತಿ ಹಿಡಿಸ್ತು...
ನನ್ನ ಶಾಲೆಯ ನೆನಪುಗಳಲ್ಲಿ ಇಂಥಾ ಘಟನೆಗಳೆಷ್ಟೋ...ವ್ಯತ್ಯಾಸವೊಂದೇ, ನಾನಿರ್ತಿದ್ದಿದ್ದು ಬೇಲಿಯ ಆ ಬದಿಗೆ, ಕನ್ನಡ, ಇಂಗ್ಲಿಷ್ ’ಹೇಳಿಕೊಡೋದು’ ಭೂಪಟ ಬಿಡಿಸೋದು...ಆಗೆಲ್ಲಾ ಆ ಹುಡುಗ್ರು ನಿಷ್ಪ್ರಯೋಜಕರು, ನಾನು ಮಹಾ ಜ್ಞಾನಿ ಅಂತ ಬೀಗುತ್ತಿದ್ದದ್ದು ನೆನಪಿಸಿಕೊಂಡ್ರೆ ಈಗ ಮುಜುಗರವೆನ್ನಿಸತ್ತೆ, ಗಿಲ್ಟ್ ಕಾಡುತ್ತೆ!
ಶಿಕ್ಷಣ ವ್ಯವಸ್ಥೆ ಬದಲಾಗ್ಬೇಕು ಅಂತ ಭಾಷಣ ಕುಟ್ಟೋದು ನಿಲ್ಸಿ ಏನಾದ್ರೂ ಮಾಡಬೇಕನ್ನಿಸಲ್ಲ್ವಾ...ಅರಳುತ್ತಿರೋ ಮೊಗ್ಗುಗಳಂಥ ಮಕ್ಕಳನ್ನ ಸ್ಕೂಲಿಗೆ ದಬ್ಬುವಾಗ!
ಆ ಸಂದರ್ಭದಲ್ಲಿ ಅವತ್ತು ನಿನ್ನ ಟೀಚರ್ ಭಾಷಣ ಮಾಡಲಾಗದ ಕಾರಣ ತಿಳಿದು ನಿನ್ಗೆ ಧೈರ್ಯ ತುಂಬಿದ್ದರೆ ಸ್ಟೇಜ್ ಫೀಯರ್ ಅವಾಗಲೆ ಮಾಯವಾಗುತ್ತಿತ್ತೆನೊ.... ಅಲ್ವ.
ನಾನು ಮೂರನೆ ಕ್ಲಾಸ್ ನಲ್ಲಿದಾಗ ನಮ್ಮ ಮೇಡಮ್ ಹೇಳುತ್ತಿದ್ದ ಮಾತು ಇವತ್ತು ನೆನೆಪಿದೆ "ಶಾಲೆಗೆ ಬಂದು ನೀವು ಕಲಿಯದೆ ಹೊದರೆ ಕೊನೆಗೆ ಕೂಲಿ ಮಾಡಿಕೊಂಡು ಅವರು ಕೊಡೊ ನಾಲ್ಕಾಣಿಗೆ ಕೈವೊಡ್ಡಬೇಕಾಗುತ್ತೆ".
-ಅಮರ
Hi. Your article is nice. Please have an eye on my blog too. I can't write stories and poems. I think, for the same reason Kannada bloggers have turned a blind eye towards my blog.
:( Remembering the moments that forced u to sit infornt of camera at odd hours... n really appreciate ur spirit!
- SHREE
ಶ್ರೀನಿಧಿ...
ಪ್ರಥಮ ಪ್ರಯತ್ನಕ್ಕೆ ಪ್ರೋತ್ಸಾಹದ ಬದಲಾಗಿ ಟೀಕೆ-ಕಟುನುಡಿಗಳೇ ದೊರಕಿಬಿಟ್ಟರೆ ಮೊದಲ ಹೆಜ್ಜೆ ಎರಡನೆ ಹೆಜ್ಜೆಗೆ ನಾಂದಿಯಾಗುವ ಬದಲು ಇಟ್ಟ ಹೆಜ್ಜೆಯನ್ನು ಕಿತ್ತು ಹಿಂದಿಡಲು ಹವಣಿಸುತ್ತದೆ. ಹಿಂಜರಿವ ಮನಸ್ಸು ಸ್ಥಿಮಿತಕ್ಕೆ ಬರಲು ಹೊಸ ಆಡಿಪಾಯವೇ ಬೇಕಾಗುತ್ತದೆ, ಅಲ್ಲವಾ?
ನಿಮ್ಮ ಈ ಲೇಖನ ಮತ್ತೊಮ್ಮೆ ನನ್ನನ್ನು ಶಾಲಾದಿನಗಳಿಗೆ ಕರೆದೊಯ್ದಿತು. ಉತ್ತಮ ಉದಾಹರಣೆಗಳೊಂದಿಗಿನ ಒಳ್ಳೆಯ ಲೇಖನ.
ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರವಲ್ಲ, ಯಾವುದೇ ರೀತಿಯಲ್ಲೂ ನಮ್ಮ ಮಕ್ಕಳ ಬೆಳವಣಿಗೆಯ ಜವಾಬ್ದಾರಿಯನ್ನು ಮುಂದಿಟ್ಟುಕೊಂಡು ಯೋಚಿಸುವಾಗ ನಾವು ಕಲಿಯಬೇಕಾದ್ದೇ ಬಹಳಷ್ಟಿದೆ ಅನಿಸಿಬಿಡುತ್ತದೆ.
"ನನ್ನನ್ನ ನನ್ನದೇ ತರಗತಿ ಮತ್ತೊಂದು ಹುಡುಗಿಯ ಎದುರು ಎಳೆದು ನಿಲ್ಲಿಸಿ "ಇವನಿಗೆ ಅ ಆ ಇ ಈ ಹೇಳಿಕೊಡು" ಅಂದು ಬಿಟ್ಟರು"
-ಛೆ! ಹುಡುಗಿ ಮುಂದೆ ಮಾನ ಬೇರೆ ಹೋಯ್ತು :( . ಹೋಗ್ಲಿ ಬಿಡು ಏನ್ ಮಾದೋಕ್ಕಾಗತ್ತೆ
ನಮ್ ಸ್ಕೂಲ್ನಲ್ಲೂ ಭಾಷಣ, ಚರ್ಚೆ, ಹಾಡು ಇತ್ಯಾದಿಗಳು ಸಿಕ್ಕಾಪಟ್ಟೆ ಇದ್ವು. ತುಂಬ ಕಲ್ತ್ವಿ. ನಿಜವಾಗ್ಲೂ ಪ್ರಾಥಮಿಕ ಹಂತದ ಶಿಕ್ಷಣ ತುಂಬ ಮುಖ್ಯ. ತಳಹದಿ ಸರಿ ಇದ್ರೆ ತಾನೆ ಮುಂದೆ ಬಿಲ್ಡಿಂಗ್ ಗಟ್ಟಿಯಾಗಿರೋದು.
ಅರುಣ್,
ಇದ್ರೂ ಇರ್ಬೋದು ಕಣಯ್ಯ!! ನಂಗಿದು ಹೋಳ್ದೇ ಇರ್ಲಿಲ್ಲ!
ಶ್ರೀಕಾಂತ್,
:D, ಇರ್ಲಿ ಇರ್ಲಿ, ನೋಡ್ಕೋತೀನಿ!
ಶ್ರೀ೧,
ಬೆಕ್ಕಿನ್ ಕೊರ್ಳಿಗೆ ಗಂಟೆ ಕಟ್ಟೋರು ಯಾರು ಅನ್ನೋದೇ ಪ್ರಶ್ನೆ!
ಅಮರ,
ಹೂಂ ಕಣಯ್ಯ, ಏನ್ ಮಾಡೋದು ನಸೀಬಿರ್ಬೇಕೆ!:(
ವಿಜಯ್,
ನಿಂಗೂ ಟೈಮ್ ಬರತ್ತಪಾ, ನಾಟ್ ಟು ವರಿ!:)
ಶ್ರೀ೨,
:D,
ಶಾಂತಲಾ ಮೇಡಮ್,
ಇವತ್ತಿಗೂ ಇಂತಹ ಕಟುನುಡಿಗಳಿಂದ ನಲುಗಿ ಹೋಗ್ತಿರೋ ಎಸ್ಟ್ ಮಕ್ಳಿದಾರೇನೋ:(
ಕಾರ್ತೀಕ್,
ಹುಡುಗಿ ಮುಂದೆ ಮಾನ ಹೋಗಿದ್ದು ವಿಚಾರನೇ ಅಲ್ಲ, ಜೀವನದಲ್ಲಿ ಮೊತ್ತ ಮೊದಲ ಬಾರಿ ಇನ್ಫೀರಿಯಾರಿಟಿ ಕಾಂಪ್ಲೆಕ್ಸು ಹುಟ್ಕೊಂಡಿತ್ತು ಆ ಘಳ್ಗೆ...
[ಶ್ರೀಕಾಂತ್] "ಅರುಣ: "ಷ" ಡಿಸ್ಲೆಕ್ಸಿಯಾ ಇರ್ಬೇಕು" - ಇದ್ಯಾಕೋ ಕೇಳೋಕೆ ಅಷ್ಟು ಚೆನ್ನಾಗಿಲ್ಲ ಅಂತ ಹೇಳೋಕೆ ಇಷ್ಟ ಪಡ್ತೀನಿ.
ಕಾಮೆಂಟ್ ಪೋಸ್ಟ್ ಮಾಡಿ