ಗುರುವಾರ, ಜುಲೈ 03, 2008

ತಿರುವಿನ ಮನೆ ಹುಡುಗಿ

ನಿತ್ಯ ಸಾಗುವ ದಾರಿ,ತಿರುವಿನಲಿ ಅವಳ ಮನೆ
ಕತ್ತುಹೊರಳುವುದತ್ತ ಅಭ್ಯಾಸ ಬಲವು
ಅವಳಿಲ್ಲ ಈಗಲ್ಲಿ, ತಿಳಿದಿಹುದು ನನಗು ಅದು
ನೆನಪಾಗುವುದು ನಿತ್ಯ ಒಲವ ಚೆಲುವು

ಅಂದೊಂದು ಕಾಲದಲಿ ಆ ಮನೆಯು ನಂದನವು
ನವಿಲ ನರ್ತನದಂತೆ ಅವಳ ನಡಿಗೆ
ಆ ತಿರುವ ದಾರಿಯಲಿ ಜನರ ಸಂದಣಿ ನಿತ್ಯ
ನಡೆವ ಕಾಲುಗಳೆಲ್ಲ ಆ ಮನೆಯ ಕಡೆಗೇ

ಅಂಥ ಸುಂದರಿ ಆಕೆ,ದೇವಲೋಕದ ಹುಡುಗಿ
ಹುಚ್ಚಾಗಲೇಬೇಕು ಎಂಥವರು ಕೂಡ
ಅವಳ ನಲ್ನುಡಿಗಾಗಿ ಕಾಯುತಿದ್ದರು ಎಲ್ಲ
ಮಾತಾಡಿದಳೋ!,ಖುಷಿಯ ಕೇಳುವುದೆ ಬೇಡ

ಆಕೆಗೂ ತಿಳಿಯಿತು ತನ್ನ ಚೆಲುವಿನ ಬಗೆಯು
ಚೆಲುವಿಗೂ ಅಹಮಿಗೂ ಬೇಗ ಸ್ನೇಹ
ಸೌಂದರ್ಯವಿದ್ದೀತು ನಾಲ್ಕೆಂಟು ವರುಷಗಳು
ಕಾಲಸಾಗಿದ ಹಾಗೆ ಕಾಯುವುದೆ ದೇಹ?

ಹಾಗಂದುಕೊಂಡೊಡನೆ, ಮತ್ತೆ ಅಲ್ಲಿರಲಿಲ್ಲ
ಹಕ್ಕಿ ಹಾರಿತು ದೂರ, ಪ್ರಚಾರವರಸಿ
ಹಾಗೆ ಹೋದವಳಿಂದಿಗೂ ಬಂದಿಲ್ಲ
ವರುಷ ಸಾಗಿದೆ ನೆನಪ ಪರದೆ ಸರಿಸಿ

ಅವಳ ಮನೆ ಮುಂದೀಗ ಹೂ ಗಿಡವು ನಗದು
ನಗುವು ಕಾಣದು ಮನೆಮಂದಿಯಲ್ಲಿ
ಅಂಗಳದ ತುಂಬೆಲ್ಲ ಚೆಲ್ಲಿಹುದು ತರಗೆಲೆಯು
ಕಳೆದುಹೋಗಿದೆಯಲ್ಲಿ ರಂಗವಲ್ಲಿ

ಅಂದುಕೊಳ್ಳುತ್ತೇನೆ ಬರಬಾರದೇ ಅವಳು
ಮತ್ತೆ ಹುಟ್ಟಿತೀಲ್ಲಿ ನಂದನವನ
ನಗುವ ರಂಗೋಲಿಗಳು ಮರಳಿ ಬಂದೀತಿಲ್ಲಿ
ಪಾಳು ತುಳಸಿಯ ಕಟ್ಟೆ ವೃಂದಾವನ!

ಪ್ರತಿದಿನವು ಅದೆ ಆಸೆ, ತಿರುಗುವುದು ಕೊರಳು
ಬದಲಿರದ ನೋಟ, ಯಾಕೋ ಬೇಸರವು
ಮನದ ಯೋಚನೆಯಲ್ಲ ಸತ್ಯವಾಗಬೇಕಿಲ್ಲ
ದೂರದಲಿ ಮುಳುಗುತಿಹ ಸಂಜೆ ನೇಸರನು.

15 ಕಾಮೆಂಟ್‌ಗಳು:

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ಶ್ರೀನಿಧಿ...
ಚೆಲುವಿನ ಸಾಲುಗಳು, ಅಷ್ಟೆ.

Harisha - ಹರೀಶ ಹೇಳಿದರು...

ಚೆನ್ನಾಗಿ ಬರೆದಿದ್ದೀರ :-)

Shrinidhi Hande ಹೇಳಿದರು...

ಚೆನ್ನಾಗಿದೆ

ಸಿಂಧು sindhu ಹೇಳಿದರು...

ನಿಧಿ,
ತುಂಬ ಚೆನಾಗಿದೆ.
ಇದನ್ನು ಓದಿ ಕೆ.ಎಸ್.ನ ಅವರ ಸಾಲೊಂದು ಮತ್ತೆ ಮತ್ತೆ ನೆನಪಾಗುತ್ತಿದೆ.
ಕಂಬನಿ ಬದುಕು, ಕರವಸ್ತ್ರ ಕವಿತೆ.

ಪ್ರೀತಿಯಿಂದ
ಸಿಂಧು

Shree ಹೇಳಿದರು...

Jeevana irode haage, andukomDa haage yaavdu irodila, yaaru irodilla! :(

ಅನಾಮಧೇಯ ಹೇಳಿದರು...

Nidhi !

My Autograph movie ge eee kavana na title song maadidre chola irtittena !!

Best iddu !!!

Warm Regards,
Suresh

Annapoorna Daithota ಹೇಳಿದರು...

Aase irbeku.... ashaavaadi aagidrene jeevna nadyodu :)

ವಿನಾಯಕ ಭಟ್ಟ ಹೇಳಿದರು...

ಘರ್ ಸೆ ನಿಕಲ್ ತೇಹಿ
ಕುಚ್ ದೂರ್ ಚಲ್ತೇ ಹಿ
ರಸತೇ ಮೆ ಉಸ್ ಕಾ ಘರ್... ಎಂಬ ಹಳೆಯ ಹಿಂದಿ ಹಾಡು ನೆನಪಾಯಿತು, ನಿನ್ನ ಕವನದ ಮೊದಲ ಸಾಲು ಓದಿದಾಕ್ಷಣ.

ರಾಧಾಕೃಷ್ಣ ಆನೆಗುಂಡಿ. ಹೇಳಿದರು...

ಮತ್ತೆ ಬರಬಾರದೇ... ಬರುವುದಿಲ್ಲ ಬಿಡು.... ನದಿ ನೀರು ಕಡಲಿಗೆ ಸೇರಿದರೆ ಗುರುತಿಸುವವರಾರು

sunaath ಹೇಳಿದರು...

ನಿಮ್ಮ ಕವನ ಓದಿ ನರಸಿಂಹಸ್ವಾಮಿಯವರ 'ಮೈಸೂರು ಮಲ್ಲಿಗೆ'ನೆನಪಾಯಿತು.

Vijaya ಹೇಳಿದರು...

nan comment enu antha ninge gothu :-)
oh yes ... kavite ... superraagide :-)

Parisarapremi ಹೇಳಿದರು...

ನೀನು ಎನ್.ಸಿ.ಸಿ.ಯಲ್ಲಿದ್ದೆ ಅನ್ನಿಸುತ್ತೆ. ಅವಳ ಮನೆ ಬಂದ ತಕ್ಷಣ ದೈನೇ ದೇಖ್ ಅನ್ನೋಕೆ! ಲೋ, ಮುಂದೆ ನೋಡ್ಕೊಂಡ್ ಹೋಗೋ ರಾಜ, ಬಿದ್ ಗಿದ್ರೆ ಕಷ್ಟ. ;-)

Unknown ಹೇಳಿದರು...

kragಹೆ ಹೆ ಹೆ ಎಲ್ಲರಿಗೂ ಆಗೋ ಅನುಭವವೇ!!!

ನೀಳ್ಗವನ ಬಹಳ ಸೊಗಸಾಗಿದೆ - ಕೆ‍ಎಸ್‍ನ ಅವರ ಕವನ ಓದಿದ ನೆನಪಾಯ್ತು

ಒಳ್ಳೆಯದಾಗಲಿ

ಗುರುದೇವ ದಯಾ ಕರೊ ದೀನ ಜನೆ

ಸಂತೋಷಕುಮಾರ ಹೇಳಿದರು...

Nammuralli saha E tarada ondu bhari preKshaNiya staLa ittu. Mostly we were at SSLC at that time, we used to roam infront of her house with out reason. :)

Nice poem, I memorised all ur deeds at that time.

Sree ಹೇಳಿದರು...

ವಿಕ್ರಮ್ ಅವ್ರ ಮಾಯೆಯ ಹುಡುಗಿಯ ನೆನಪಾಯ್ತು!:)