ಬುಧವಾರ, ಮಾರ್ಚ್ 04, 2009

ಅಂದೇ ಕೊನೆ ಮತ್ತೆ ಶ್ಯಾಮ..

ಅಂದೇ ಕೊನೆ ಮತ್ತೆ ಶ್ಯಾಮ ಕೊಳನನೂದಲಿಲ್ಲ
ಗೋಕುಲ ದಾಟಿದ ಹೆಜ್ಜೆಯು, ಮರಳಿ ಬರಲೆ ಇಲ್ಲ

ರಾಧೆಯ ಗೆಜ್ಜೆಯ ದನಿ ಮರೆತಿತ್ತು,ನಗಾರಿ ಧ್ವನಿಗಳಲಿ
ಗೋಗಂಟೆಗಳ ಸ್ವರ ಅಡಗಿತ್ತು, ಖುರಪುಟ ಸದ್ದಿನಲಿ.

ರಾಜಕುವರರಾ ಸಖ್ಯದ ಮಧ್ಯೆ, ಮಕರಂದ ಮರೆತು ಹೋದ
ಮಹಲಿನ ಸೊಬಗಲಿ ನೆನಪಾಗುವುದೇ, ಗೋಕುಲದಾ ಮೋದ

ಕಳ್ಳ ಗೋಪನನು ಕರೆಯದು ಈಗ ಬಿಂದಿಗೆ ನವನೀತ
ಖಡ್ಗಗಳನುರಣನ ಸುತ್ತ, ಮುರಾರಿಗೆ ಯುದ್ಧವೆ ಉಪವೀತ

ಅರ್ಜುನ ರಥದಲಿ ಸಾರಥಿಯಾತನು, ಹಿಡಿದಿಹ ಚಾವಟಿಗೆ
ಕಣ್ಣೆದುರೆಂತು ಬಂದೀತವಗೆ, ಯಮುನೆಯ ಪಾವಟಿಗೆ ?

ಪಿಳ್ಳಂಗೋವಿಯ ಜಾಗವ ಪಡೆದಿದೆ ಶಂಖ ಪಾಂಚಜನ್ಯ
ಗೋಗಳ ಮಂದೆಯ ಬದಲಿಗೆ ಎದುರಿದೆ, ಚಿತ್ತ ಮರೆತ ಸೈನ್ಯ.

5 ಕಾಮೆಂಟ್‌ಗಳು:

sunaath ಹೇಳಿದರು...

ಪುತಿನ ಅವರ ಗೋಕುಲನಿರ್ಗಮನ ನೆನಪಾಗುತ್ತದೆ.

Ittigecement ಹೇಳಿದರು...

ಶ್ರೀನಿಧಿ..

ಸುಂದರ ಕವನ...

ಕ್ರಷ್ಣನ ಚಿತ್ರಣ ಇಷ್ಟವಾಯಿತು...

Parisarapremi ಹೇಳಿದರು...

ಪೂರ್ವಪುಣ್ಯ ವಿಶೇಷ.

ಅನಾಮಧೇಯ ಹೇಳಿದರು...

ತುಂಬಾ ಭಾವಪೂರ್ಣ ಕವನ... ಕೃಷ್ಣನಷ್ಟೇ ಇಷ್ಟ ಆಯ್ತು..

ಶ್ರೀನಿಧಿ.ಡಿ.ಎಸ್ ಹೇಳಿದರು...

ಪ್ರತಿಕ್ರಿಯಿಸಿದ ಎಲ್ಲರಿಗೂ ಕೃತಜ್ಞ..