ನಾನು ಕಳೆದ ಮೂರು ವರುಷಗಳಿಂದ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಇರೋದ್ರಿಂದ, ಇಲ್ಲಿನ ಹಲವು ಹೋಟೇಲುಗಳ ಮೇಲೆ ನಂಗೆ ಋಣ ಇದೆ! ಪಾಪ, ಹೊತ್ತು ಹೊತ್ತಿಗೆ ನನ್ನಂತಹವರಿಗೆ ಬೇಕು ಬೇಕಾದ್ದನ್ನ ಮಾಡಿ ಹಾಕುತ್ತಿವೆ, ಈ ಹೋಟೇಲುಗಳು.
ಹಾಗಾಗಿ ಇಲ್ಲಿನ ವಿಶೇಷಗಳ ಕುರಿತ ಮಾಹಿತಿಯನ್ನ ನಿಮ್ಗೆ ಕೊಡೋಣ ಅನ್ನಿಸಿತು.
ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಎಸ್.ಎಲ್.ವಿ:
ಬನಶಂಕರಿ ಬಿ.ಡಿ.ಎ ಕಾಂಪ್ಲೆಕ್ಸ್ ನಿಂದ ಸ್ವಲ್ಪ ಮುಂದೆ ಬಂದ್ರೆ, ಈ ಪುಟ್ಟ ಹೋಟೇಲ್ ಸಿಗತ್ತೆ. ಇಲ್ಲಿನ ಸ್ಪೆಷಲ್ಲ್- ಇಡ್ಲಿ,ವಡೆ ಮತ್ತು ಚಟ್ನಿ. ಬೆಳಗ್ಗಿಂದ ಸಂಜೆ ತನಕಾ ಎಷ್ಟು ಹೊತ್ತಿಗೆ ಬಂದ್ರೂ, ಇಡ್ಲಿ ವಡೆ ಲಭ್ಯ. ಇಲ್ಲಿನ ಮಸಾಲೆ ವಡೇ ಕೂಡ ಚೆನ್ನಾಗಿದೆ. ಈ ಹೋಟೆಲು ಸದಾ ಜನರಿಂದ ತುಂಬಿ ತುಳುಕುತ್ತಿದ್ದಂತೆ ಅನ್ನಿಸಿದರೂ, ಕ್ವಿಕ್ ಸರ್ವೀಸು ಇರೋ ಕಾರಣ, ತೊಂದರೆಯಿಲ್ಲ. ಈ ಕಡೆ ಏನಾದ್ರೂ ಬಂದ್ರೆ, ಖಂಡಿತಾ ಟ್ರೈ ಮಾಡಿ- ಹೊಟ್ಟೆ ತುಂಬಿದ್ದರೂ ತೊಂದರೆಯಿಲ್ಲ.
ಗಾಂಧಿ ಬಜಾರ್ ಮಹಾಲಕ್ಷ್ಮೀ ಟಿಫಿನ್ ರೂಮ್
ಈ ಹೋಟೇಲು ನಮ್ಮ ಪ್ರಣತಿ ತಂಡದ ಒಂಥರಾ ಅಫೀಷಿಯಲ್ ಮೀಟಿಂಗ್ ಪ್ಲೇಸು. ಗಾಂಧೀ ಬಜಾರು ಸರ್ಕಲ್ನಲ್ಲಿ ಎಡಕ್ಕೆ ಒಂದು ೧೦೦ ಮೀಟರ್ ದೂರ ಹೋದ್ರೆ ಈ ಹೋಟೆಲ್ ಸಿಗತ್ತೆ. ಇಲ್ಲಿನ ಖಾಲಿ ದೋಸೆ ಮತ್ತು ಚಟ್ನಿಯ ರುಚಿ, ಅದ್ಭುತ. ಜೊತೆಗೆ ಕಾಫಿ ಕೂಡ. ಆರಾಮಾಗಿ ಕೂತು ತಿನ್ನಬಹುದಾದ ವ್ಯವಸ್ಥೆ, ಇಲ್ಲಿನ ಪ್ಲಸ್ ಪಾಯಿಂಟು.
ಪುಳಿಯೋಗರೆ ಪಾಯಿಂಟ್- ಡಿ.ವಿ.ಜಿ ರೋಡ್ ಬಸವನಗುಡಿ
ಕಹಳೆಬಂಡೆ ಪಾರ್ಕ್ ಪಕ್ಕದಲ್ಲೇ ಇರುವ ಈ ಹೋಟೆಲ್ ಗೆ, ಡಿ.ವಿ.ಜಿ ರೋಡ್ ನಲ್ಲಿ ಸ್ವಲ್ಪ ದೂರ ಬಂದು ಎಡಗಡೆ ರೋಡಲ್ಲಿ ಬರಬೇಕು. ಹೆಸರೇ ಹೇಳುವ ಹಾಗೆ ಈ ಹೋಟೆಲ್, ಪುಳಿಯೋಗರೆ-ಮೊಸರಿಗೆ ಫೇಮಸ್ಸು. ಜೊತೆಗೆ ಇಲ್ಲಿನ ಸ್ವೀಟ್ ಪೊಂಗಲ್ ಕೂಡ ಸೂಪರ್ರು. ಚಿತ್ರಾನ್ನ, ಬಿಸಿಬೇಳೆ ಬಾತ್ ಕೂಡ ಚೆನ್ನಾಗಿರತ್ತೆ.
ದಾವಣಗೆರೆ ಬೆಣ್ಣೆ ದೋಸೆ-ಎನ್.ಆರ್.ಕಾಲೊನಿ
ನರಸಿಂಹ ರಾಜ ಕಾಲೋನಿಯ, ನೆಟ್ಟಕಲ್ಲಪ್ಪ ಬಸ್ ಸ್ಟ್ಯಾಂಡ್ ನ ಸಮೀಪವೇ ಇರುವ ಒಂದು ಪುಟ್ಟ ದರ್ಶಿನಿ ಶ್ರೀ ಗುರು ಕೊಟ್ಟೂರೇಶ್ವರ ದಾವಣಗೆರೆ ಬೆಣ್ಣೇ ದೋಸೆ ಹೋಟೇಲು. ಇಲ್ಲಿನ ಬೆಣ್ಣೆ ದೋಸೆ, ಬೆಣ್ಣೇ ಖಾಲಿ , ಓಪನ್ ದೋಸೆ, ಪಡ್ಡು ಎಲ್ಲವೂ ಸಖತ್! ತಿಂದು ಕೈತೊಳೆದ ಮೇಲೂ ಅದರ ಘಮ ಹಾಂಗೇ ಇರತ್ತೆ! ಸಂಜೆ ಹೊತ್ತು ಇಲ್ಲಿಗೆ ಬಂದರೆ ಮಂಡಕ್ಕಿ ಒಗ್ಗರಣೆ ಮತ್ತು ಹಲಸಿಂದಿ ವಡೆ ತಿಂದು ನೋಡಿ, ಆಮೇಲೆ ಹೇಳಿ. ಫುಟ್ ಪಾತ್ ನಲ್ಲೇ ನಿಂತುಕೊಂಡು ತಿನ್ನಬೇಕಾಗಿರೋದೊಂದೇ ಮೈನಸ್ ಪಾಯಿಂಟ್- ಅದೇನ್ ಸಮಸ್ಯೆ ಆಗಲ್ಲ ಬಿಡಿ.
ಯುಡಿ ಅಥವಾ ಉಪಹಾರ ದರ್ಶಿನಿ- ನೆಟ್ಕಲ್ಲಪ್ಪ ಸರ್ಕಲ್
ದಾ.ಬೇ.ದೋ ಹೋಟೇಲ್ ಎದುರಿಗೆ ನಿಲ್ಲೋಕೂ ಜಾಗ ಇಲ್ಲದಷ್ಟು ರಶ್ ಇದೆ ಅಂತಿಟ್ಟುಕೊಳ್ಳಿ. ಹಾಂಗೇ ಒಂದು ಸ್ವಲ್ಪ ಮುಂದೆ ಬಂದು ಡಿ.ವಿ.ಜಿ. ರೋಡ್ ಕಡೇ ಹೊರಳಿದರೆ ಅಲ್ಲಿ ಇನ್ನೊಂದು ರುಚ್ ರುಚಿಯಾದ್ ತಿಂಡಿ ಸಿಗೋ ಉಪಹಾರ ದರ್ಶಿನಿ ಇದೆ. ಇಲ್ಲಿನ ರವಾ ದೋಸೆ ಫೇಮಸ್ಸು.
ಹಳ್ಳಿ ತಿಂಡಿ, ಆಶ್ರಮ ಸರ್ಕಲ್
ಹೆಸರೇ ಹೇಳುವ ಹಾಗೆ ಹಳ್ಳಿ ತಿಂಡಿ- ಪತ್ರೊಡೆ, ಅಕ್ಕಿರೊಟ್ಟಿ, ಹಲಸಿನ ಹಣ್ಣಿನ ಕಡುಬು(ಸೀಸನಲ್ ಮತ್ತೆ!), ಸುಕ್ಕಿನುಂಡೆ, ಹಾಲ್ಬಾಯಿ, ಒಂದಾ ಎರಡಾ... ಇಲ್ಲಿನ ಬನ್ಸ್ ನ ರುಚಿ ಇಡೀ ಬೆಂಗಳೂರಲ್ಲಿ ಎಲ್ಲೂ ಸಿಗದು. ದೊಡ್ಡ ಗಣಪತಿ ದೇವಸ್ಥಾನದ ಸಮೀಪವೇ ಇದೆ ಈ ಹೋಟೆಲು.
ಎಸ್.ಎಲ್.ವಿ. ಆಶ್ರಮ
ಆಶ್ರಮ ಸರ್ಕಲ್ಲಿನಲಿರುವ ಈ ಹೋಟೇಲಿನ ಇಡ್ಲಿವಡೆ ಸಾಂಬಾರು ಸಖತ್! ಕಾಪೀನೂ ಅಷ್ಟೆ.
ಕೂಲ್ ಕಾರ್ನರ್- ಜೈನ್ ಕಾಲೇಜ್ ಹತ್ರ.
ಇಲ್ಲಿನ ಅಕ್ಕಿರೊಟ್ಟಿ ಸೂಪರ್ ಟೇಸ್ಟ್. ಜ್ಯೂಸ್ ಗಳೂ ಚೆನ್ನಾಗಿರುತ್ತವೆ. .
ಇವುಗಳನ್ನು ಬಿಟ್ಟರೆ ಚಾಮರಾಜಪೇಟೆಯ ಬ್ರಾಹ್ಮಿನ್ಸ್ ಕೆಫೆ, ಎನ್.ಆರ್ ಕಾಲನಿಯ ಐಯರ್ಸ್ ಮೆಸ್ಸು, ಮನೆಊಟ, ವಿ.ವಿ ಪುರಂ ನ ಫುಡ್ ಸ್ಟ್ರೀಟು... ಆಹಾರಪ್ರಿಯರಿಗೆ ಇನ್ನೊಂದಿಷ್ಟು ಉತ್ತಮ ಜಾಗಗಳು.
ಎಲ್ಲರಿಗೂ ಶುಭವಾಗಲಿ:)
ನಾರ್ತ್ ಬೆಂಗಳೂರಿನ ಬೆಸ್ಟ್ ಹೋಟೇಲುಗಳು
16 ಕಾಮೆಂಟ್ಗಳು:
ಶ್ರೀನಿಧಿ...
ಚೆಂದದ ಲೇಖನಕ್ಕೆ ಧನ್ಯವಾದ.
ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಎಸ್.ಎಲ್.ವಿ
ಸ್ಯಾಂಡ್ ವಿಚ್ ಕೂಡ ಸೂಪರ್ ಇರ್ತು.
ಯುಡಿ ಅಥವಾ ಉಪಹಾರ ದರ್ಶಿನಿ- ನೆಟ್ಕಲ್ಲಪ್ಪ ಸರ್ಕಲ್
ಇಲ್ಲಿ ಖಾರ ಪೊಂಗಲ್ ಜೊತೆ ರಾಇತನೂ ಕೊಡ್ತ, ಚೆನಾಗಿರ್ತು.
ದಾವಣಗೆರೆ ಬೆಣ್ಣೆ ದೋಸೆ-ಎನ್.ಆರ್.ಕಾಲೊನಿ
ಇಲ್ಲೂ ಅಷ್ಟೇ. ಜೊತೆಯಲ್ಲಿ ಇದ್ದವ್ವು ಹ್ಯಾಂಗಿದ್ರೂ ದೋಸೆನೋ, ಪಡ್ಡೋ ತಗತ್ತ. ನಾವು ಅಲ್ಲೇ ಪಕ್ಕಕ್ಕಿರ ಗಾಡಿಯವರ ಹತ್ರೆ ಜೋಳನೋ ಅಥ್ವಾ ಮಸಾಲೆ ಪೂರಿನೋ ತಗಳವ್ವು :-) (ನಾನು ಹಂಗೇ ಮಾಡ್ತಿದ್ದಿ)
ಎಸ್.ಎಲ್.ವಿ. ಆಶ್ರಮ
ಅಲ್ಲಿ ಇಡ್ಲಿ ವಡೆ ಚೆನಾಗಿರ್ತು ಹೌದು. ಅದ್ಕೇ ಶಾರದಾ ಕುಟೀರದಲ್ಲಿರ ಹುಡ್ಗೀರೆಲ್ಲ ಅಲ್ಲೇ ತಿಂಡಿ ತಿನ್ನಕ್ಕೆ ಬತ್ತ.
ಈ ಎಲ್ಲ ಕಡೆ ಒಂದ್ಸಲ ಹೋಗಿ ಬಂದಷ್ಟು ಖುಷಿ ಆತು. ಅದ್ರೂ ಇನ್ನೊಂದಿಷ್ಟು ಫಾಸ್ಟ್ ಫುಡ್ಸ್ ಎಲ್ಲ ಬಿಟ್ಟಿದ್ದೆ ನೀನು.
ಯಾವಾಗ್ಲಾದ್ರೂ ದಕ್ಷಿಣ ಬೆಂಗಳೂರಲ್ಲಿ ಚಾಟ್ಸ್ ಎಲ್ಲೆಲ್ಲಿ ಚೆನಾಗಿರದು ಸಿಗ್ತು ಅಂತನೂ ಬರಿ ಪ್ಲೀಸ್.
ಬಿಟಿಎಮ್ ಲೇಔಟ್ ನ ಮಯ್ಯಾಸ್ ಚೆನ್ನಾಗಿದೆ. ಗಡದ್ದಾಗಿ ತಿ೦ದು ಬರ್ಬೋದು.
ಈ ವೀಕೆಂಡಿಂದಾ ಶುರು ಮಾಡಿ ಇನ್ನೆರಡು ಮೂರು ತಿಂಗಳಲ್ಲಿ ಅಷ್ಟೂ ಕವರ್ ಮಾಡ್ಬೇಕು.
thank you. :)
next meeting yaavaga?
ಈ ಸಲ ಬೆಂಗಳೂರಿಗೆ ಬರುವಾಗ, ನಿಮ್ಮ ಲೇಖನದ copy ಒಂದನ್ನು ಹಿಡಿದುಕೊಂಡು ಬರುವೆ.
"ಹಳ್ಳಿ ತಿಂಡಿ" ಹೊಟೆಲ್ ಬಿಟ್ಟು ಮತ್ತೆ ಯಾವುದನ್ನೂ ನಾನು ನೋಡೆ ಇಲ್ಲ..
ಇದೇ ವಾರ ನೋಡಿ ಬರುವೆ...
ಧನ್ಯವಾದಗಳು...
[ಶ್ರೀನಿಧಿ] ಬೆಂಗಳೂರನ್ನು ಚೆನ್ನಾಗಿ ಸುತ್ತಿದ್ದೀಯ, ಗುಡ್.. :-) ನನಗೆ ಕೊಟ್ಟ ಅಸೈನ್ಮೆಂಟನ್ನು ನೀನೇ ಪೂರೈಸಿದ್ದೀಯ.. ನಾನು ಬೇರೆ ರೀತಿ ಯೋಚಿಸುತ್ತೇನೆ ಹಾಗಾದರೆ... ;-)
ಶ್ರೀನಿಧಿ,
ಪ್ರಶಾಂತನಗರದಲ್ಲೊಂದು ಫಾಸ್ಟ್ಫುಡ್ ಕಾರ್ನರ್ ಇದ್ದು.. ಅದೂ ಚೆನ್ನಾಗಿದ್ದು. ಇದ್ರ ಪಕ್ಕದಲ್ಲೇ ಒಂದು ಹಣ್ಣಿನ ತಾಜಾ ಜ್ಯೂಸ್ ಸೆಂಟರ್ ಕೂಡಾ ಇದ್ದು ನೋಡು ಒಂದ್ಸಲ. ಚೆನ್ನಾಗಿದ್ದು ಎಲ್ಲಾ ಮಾಹಿತಿಗಳು. ಒಂದೊಂದಾಗಿ ಟ್ರೈ ಮಾಡವು. ಹಾಂಗೇಯಾ ಮುಂದಿನ ಪೋಸ್ಟ್ನಲ್ಲಿ ಸ್ವಲ್ಪ ಡಯಟಿಂಗ್ ಬಗ್ಗೂ ಬರ್ದುವುಡು. ಮತ್ತೂ ಹೆಲ್ಪ್ ಆಗ್ತು :) :D
ಬೆಂಗಳೂರು ಎಷ್ಟೆಲ್ಲಾ ಲಗಾಡಿ ಕೊಟ್ಟಿದ್ದಿ ಮಾರಾಯಾ !
ಮುಂದಿನ ಸರ್ತಿ ಬೆಂಗಳೂರಿಗೆ ಬಂದಾಗ ಈ ಲಿಸ್ಟ್ ತಗೊಂಡೇ ಬರ್ತೇನೆ. ಥ್ಯಾಂಕ್ಸ್ ಕಣೋ.
"ಬೆಂಗಳೂರು ಎಷ್ಟೆಲ್ಲಾ ಲಗಾಡಿ ಕೊಟ್ಟಿದ್ದಿ ಮಾರಾಯಾ !" -- ಇದು! ಟಿಪಿಕಲ್ ಮಂಗಳೂರಿನ ಕಮೆಂಟ್! ಊರಲ್ಲಿ ಗೇಟಿನ ಮುಂದೆ ನಿಂತು ಮಾತಾಡಿದ ಹಾಗಾಯ್ತು!
:) ಎಲ್ಲರಿಗೂ ಧನ್ಯಂ:) ಇದು ಬರೀ ಸೌತ್ ಬೆಂಗಳೂರಿನ ಲಿಸ್ಟು ಅಷ್ಟೇ.. ರಾಜಾಜಿ ನಗರ ಮಲ್ಲೇಶ್ವರಂ ಕಡೆ ಹೋದ್ರೆ ಮತ್ತೊಂದಿಷ್ಟಿದೆ.. ಅದ್ನೆಲ್ಲ ಸೇರ್ಸಿಲ್ಲ.. ನನ್ ರೀಚ್ ಎಷ್ಟೋ ಅಷ್ಟು ಬರ್ದಿದೀನಿ...
ಲಿಸ್ಟ್ ಕತೆ ಇರ್ಲಿ .... ಮತ್ತೆ ಯಾವಾಗ ಪಾರ್ಟಿ??? ಯಾವ ಕಡೆಯಿಂದ ಶುರು ಮಾಡೋಣ :)
thumbaa chennaag bardideera, elli treatu? yavaga?(yaavyaavaga is better;D):D
ಎಬ್ಬೇ.. ಇದೆಂಥದಾ... ಬರೀ ವೆಜ್ಜು...
ನಮ್ಮ ಕುಡ್ಲದ ಕೋರಿ ಮೀನ್ ಒಣಸ್ ಎಲ್ಲಾದ್ರೂ ಇದೆಯಾ...
ಆ ಲಿಸ್ಟ್ ಯಾರತ್ರಾದ್ರೂ ಇದೆಯಾ...
nange halli tindi bansginta Annakutirada bansu ishta.
ನಾನಂತೂ ವಿದ್ಯಾರ್ಥಿ ಭವನದ ಖಾಯಂ ಗಿರಾಕಿ, ಅದ್ರಲ್ಲೂ ನಮ್ ತಿಂಡಿಗಳೇ ನಮ್ ಗ್ಯಾಂಗಿಗೆ ಭಾರಿ ಇಷ್ಟ. ಹಳ್ಳಿ ತಿಂಡಿಗೂ ಹೋಗಿದ್ದೀನಿ,ನಿಮ್ ಲಿಸ್ಟ್ ನ್ನೂ ಒಮ್ಮೆ ಟ್ರೈ ಮಾಡೋಣ ಬಿಡಿ.....
ಕಾಮೆಂಟ್ ಪೋಸ್ಟ್ ಮಾಡಿ