ಹಬ್ಬದೂಟದ ಮಧ್ಯಾಹ್ನ ಎಳೆಯುತ್ತಿದ್ದರೆ ಜೊಂಪು
ಹೊರಗೆ ವೇಷಗಳ ಮೆರವಣಿಗೆ
ತಮಟೆ ಸದ್ದು ರಾಮ
ರಾವಣ ಭೀಮ ಹನುಮಂತ
ಹುಲಿ ಕರಡಿ ಬೇಟೆಗಾರ
ಒಬ್ಬರ ಮೇಲೊಬ್ಬರು ಅಂಗಳ ರಂಗಸ್ಥಳ
ಕರೆಯದೆಯೆ ಬಂದು ದಿಗಿಣ
ರಿಂಗಣ ಬಿಸಿಲ ಹೊತ್ತಲೆ
ಬಲವಂತ ಯಕ್ಷಲೋಕ
ಕಾಂಪೌಂಡು ತುಂಬೆಲ್ಲ ಹಳದಿ ಹುಲಿಬಣ್ಣ
ಲಿಂಬೆಹಣ್ಣ ಕಚ್ಚಿಕೊಂಡು
ನಾವಿಟ್ಟ ನೋಟಿನ ಮೇಲೆಯೆ ಹಾರಿ ನೆಗೆದು
ದ್ರಾವಿಡ ಪ್ರಾಣಾಯಾಮ
ಮುಗಿದ ಮೇಲೆ ನಿಮಿಷಗಳ ಕೋಲಾಹಲ, ಹಗಲ ಆವೇಶ
ಅನಿಮಿಷರ ಮುಖದ ರಂಗೂ
ಮೀರಿ ಕಾಣುವ ದೈನ್ಯ.
ಈಗಷ್ಟೇ ಮೂರು ಲೋಕದ ಗಂಡನಾದವ
ಕೈಚಾಚಿ ಹಲ್ಕಿಸಿದು ಚಿಲ್ಲರೆ ಇಸಿದುಕೊಂಡು
ಹೋದರೆ, ಮತ್ತೊಂದು ವೇಷಕ್ಕೆ ಅಂಗಳ ಸಜ್ಜು
ಸಂಜೆವರೆಗೂ ಕಂಡದ್ದು ಮಹಾನವಮಿಯ
ಬಗೆಬಗೆಯ ವೇಷ
ಕೊಟ್ಟ ದುಡ್ಡಿಗೆ ಮಾತ್ರ ಲೆಕ್ಕ ಬಂದು ಹೋದವರಿಗಿಲ್ಲ
ಕೊನೆಗೆ ಬಂದಿದ್ದ ಹನುಮಂತ ತೆರೆದಿಟ್ಟು ಹೋಗಿದ್ದ ಗೇಟು
ಮುಚ್ಚಲೆಂದು ಹೋದರೆ ಅಂಗಳದ ಅಂಚಲ್ಲಿ
ಕಂಡಿದ್ದು ಯಾವನದೋ ಬಾಡಿಗೆ ಮುಕುಟದಿಂದುದುರಿದ ಮಣಿ
ಎಲ್ಲ ತೋರಿಕೆಗಳಿಂದ ಬಿಡುಗಡೆ ಪಡೆದಿದ್ದ
ಆ ಪುಟ್ಟ ಮಣಿಯನ್ನು
ಹಿಡಿದ ನಾನು ಸ್ವಯಂ ನನಗೇ ಮತ್ತೊಂದು ವೇಷ
ದಂತೆ ಕಂಡು ದಿಗಿಲಾಗಿ ರಪಕ್ಕನೆ ಅದನ್ನೆಸೆದು
ಒಳ ಬಂದು ಬಾಗಿಲು ಹಾಕಿಕೊಂಡೆ.
ಬಂಧನ,ಸಮಾಧಾನ.
2 ಕಾಮೆಂಟ್‌ಗಳು:
ಉದರ ನಿಮಿತ್ತಂ ಬಹುಕೃತ ವೇಷಂ..
Nice poem....
kavana chennagide. nice...
ಕಾಮೆಂಟ್ ಪೋಸ್ಟ್ ಮಾಡಿ