ಬುಧವಾರ, ಜುಲೈ 12, 2017

ತೆರಿಗೆ ಬೇನೆ!

ನಿತ್ಯ ಬೆಳಗ್ಗೆದ್ದು ಯಾರನ್ನಾದರೂ ಒಬ್ಬರನ್ನ ಕಡ್ಡಾಯವಾಗಿ ನೆನೆಸಿಕೊಳ್ಳಲೇಬೇಕು ಅಂತ ಭಗವಂತನೇನಾದರೂ ರೂಲ್ಸು ಮಾಡಿದರೆ ನಾನು ನಂಗೆ ಎಸ್.ಎಸ್.ಎಲ್.ಸಿ ಯಲ್ಲಿ ಗಣಿತ ಟೀಚರಾಗಿದ್ದ ವಿನ್ನಿ ಟೀಚರನ್ನು ನೆನಪಿಸಿಕೊಳ್ಳುತ್ತೇನೆ. ಅನುಮಾನವೇ ಇಲ್ಲ. ಯಾಕೆಂದರೆ ಲೆಕ್ಕ ಅನ್ನುವುದು, ನನ್ನ ತಲೆಗೆ ಹೋಗುವುದು ಬಿಡಿ, ಹತ್ತಿರಕ್ಕೂ ಸುಳಿಯುತ್ತಿರಲಿಲ್ಲ. ಅಂಕಗಣಿತ, ಬೀಜಗಣಿತ, ರೇಖಾಗಣಿತ, ನೀವ್ ಯಾವ್ದೇ ಕೇಳಿ, ನಂಗೆ ಎಲ್ಲ ಕಬ್ಬಿಣದ ಕಡಲೆಯೇ. ಒಂದು ಹೆಚ್ಚು ಕಷ್ಟ, ಇನ್ನೊಂದು ಅದ್ಕಿಂತ ಹೆಚ್ಚು ಕಷ್ಟ, ಆಮೇಲಿಂದ ಅಭೂತಪೂರ್ವ ಕಷ್ಟ. ನಾನು ಹೇಗಾದರೂ ಮಾಥ್ಸಲ್ಲಿ ಗೋತಾ ಹೊಡೀತೇನೆ ಎನ್ನುವುದು ನಮ್ ಮನೇಲಿ ಬಿಡಿ, ನಮ್ಮ ಇಡೀ ವಠಾರಕ್ಕೇ ಗೊತ್ತಿತ್ತಾಗಿ ನಮ್ಮಪ್ಪ ವಿನ್ನೀ ಟೀಚರ ಬಳಿ ಏನೋ ಸಂಜೆ ಹೊತ್ತಿಗೆ ಸ್ವಲ್ಪ ಲೆಕ್ಕ ಹೇಳ್ಕೊಡಿ ಎಂದು ಕೇಳಿದ್ದರು. ಪರೀಕ್ಷೆಯ ಮುನ್ನಾದಿನದ ವರೆಗೂ ಅವರು ನನ್ನ ತಲೆಗೆ ಅದೇನೇನೋ ತುಂಬೀ ತುಂಬೀ ನನ್ನ ಉದ್ದಾರದ ಸಕಲ ಯತ್ನಗಳನ್ನ ಮಾಡಿದ್ದರು. ಇಷ್ಟಾಗಿಯೂ, ಯಾರಿಗೂ ಏನೂ ಭರವಸೆ ಇರಲಿಲ್ಲ. ಮುಂದಿನದು ದೇವರಾ ಚಿತ್ತ ಅಂತ ಸುಮ್ಮನಿದ್ದರು. ಕೊನೇಗೆ ರಿಸಲ್ಟು ಬಂದ ದಿನ ನೋಡಿದರೆ, ಕರೆಕ್ಟಾಗಿ ಮೂವತ್ತೈದು ಮಾರ್ಕು ಬಂದು ನಾನು ಗಣಿತ ಪಾಸಾಗಿದ್ದೆ! ಅಪ್ಪ ನಿರ್ದಾಕ್ಷಿಣ್ಯವಾಗಿ ಇದು ನಿನ್ನ ಸಾಧನೆಯೇನೂ ಅಲ್ಲ, ವಿನ್ನೀ ಟೀಚರಿದ್ದು ಅಂದಿದ್ದರು. ಅಲ್ಲ, ನಂಗೆ ಅದರ ಬಗ್ಗೆ ಯಾವ ಅನುಮಾನವೂ ಇರಲಿಲ್ಲ!

ಆವತ್ತೇ ಕೊನೆ.ನಾನು ಈ ಲೆಕ್ಕದ ದಿಕ್ಕಲ್ಲಿ ಮುಖ ಹಾಕಿ ನಿಂತಿದ್ದರೆ ಕೇಳಿ. ಆಮೇಲೆ ನಾನು ಓದುವ ಯಾವ ಕೋರ್ಸಿನಲ್ಲಿರೂ ಅದರ ನೆರಳೂ ಕೂಡ ಕಾಣಬಾರದೆಂಬ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡು, ಶಿಕ್ಷಣಶರಧಿಯನ್ನೇನೋ ದಾಟಿಬಿಟ್ಟೆ! ಆದರೆ ನಾನು ಗಣಿತವನ್ನು ಬಿಟ್ಟರೂ, ಈ ಅಗಣಿತ ತಾರಾ ಮಂಡಲದವರೆಗೆ ವ್ಯಾಪಿಸಿರುವ ಈ ಕೂಡುಕಳೆಯಾಟ ನನ್ನನ್ನ ಬಿಡಬೇಕಲ್ಲ! ಏನೋ, ಓದ್ಕಂಡು ನನ್ನ ಪಾಡಿಗೆ ನಾನು ಯಾವ್ದೋ ಕೆಲಸ ಮಾಡುತ್ತೇನೆ, ಕಂಪನಿ ಸಂಬಳ ಕೊಡತ್ತೆ ತಗೊಂಡರಾಯ್ತು ಅಂತ ಅಂದುಕೊಂಡಿದ್ದರೆ, ವಕ್ಕರಿಸಿತು ನೋಡಿ, ಈ ಟ್ಯಾಕ್ಸು ಲೆಕ್ಕಾಚಾರ. ಭಗವಂತನೇ. ಎಲ್ಲೆಲ್ಲೋ ಪಾರಾಗಿ ತುದೀಗೆ ಹೀಗೆ ಸಿಕ್ಕಾಕ್ಕೊಂಡಿದ್ದೆ ನಾನು. ಈ ಲೆಕ್ಕ ಹಾಕದೇ ವಿಧಿಯಿಲ್ಲ ಆದರೆ ನನಗೋ, ಸುತಾರಾಂ ತಲೆಗೆ ಹೋಗುವುದಿಲ್ಲ.

ಯಾವುದೇ ಕಂಪನಿಯಾಗಿರಲಿ, ಈ ಹೆಚ್ಚಾರುಗಳು ನಾವು ಕೆಲಸಕ್ಕೆ ಸೇರುವಾಗ ಹೇಳುವ ಸಂಬಳಕ್ಕೂ ಆಮೇಲೆ ಕೈಗೆ ಬರುವ ಮನೆಗೆ ಕೊಂಡುಯ್ಯುವ ಟೇಕ್ ಹೋಮು ಸ್ಯಾಲರಿಗೂ ತಲೆಬುಡ ಹೊಂದಿಕೆಯಾದರೆ ಕೇಳಿ! ನೂರಾರು ಅಲೋವೆನ್ಸು, ಟ್ಯಾಕ್ಸುಗಳ ಕಥೆ ಹೇಳಿ ಹರಿದ ಗೋಣಿಯಲ್ಲಿ ಭತ್ತ ಹೊತ್ತ ಕಥೆಯಾಗುತ್ತದೆ ಜೀವನ. ನೋಡಿ, ಅಷ್ಟೆಲ್ಲ ಟ್ಯಾಕ್ಸು ಕಟ್ಟಾಗಬಾರದೆಂದಿದ್ದರೆ, ಅಲ್ಲೆಲ್ಲೋ ಇನ್ವೆಸ್ಟ್ ಮಾಡಿ, ಇನ್ನೆನ್ನೋ ಸಾಲ ಮಾಡಿ ಅಂತೆಲ್ಲ ತಿಳಿದವರು ಕೂರಿಸಿ ಹೇಳಿ, ಅಯ್ಯೋ, ಇನ್ನೂ ಏನೋ ಮಾಡ್ಕೊಂಡಿಲ್ಲವೇನ್ರೀ ಥೋ ನಿಮ್ಮಾ ಎಂದು ಗಾಬರಿ ಹುಟ್ಟಿಸಿಬಿಡೂತ್ತಾರೆ. ಅದಕ್ಕೆ ತಕ್ಕ ಹಾಗೆ ನೀವು ಜೀವವಿಮೆ ಅದೂ ಇದೂಂತ ಎಲ್ಲಾ ಎಳೆದು ಮೈ ಮೇಲೆ ಹಾಕ್ಕೊಂಡು ನಾಳೆಯಿಂದ ತೆರಿಗೆ ಮುಕ್ತ ಎಂದುಕೊಳ್ಳುತ್ತೀರಿ. ಆದರೆ, ಯಾವ ದ್ರಾವಿಡ ಪ್ರಾಣಾಯಾಮ ಮಾಡಿದರೂ,ಕೊನೆಗೆ ಕಟ್ಟಬೇಕಾದ ಟ್ಯಾಕ್ಸು ಚಿಲ್ಲರೆಯಲ್ಲಿ ವ್ಯತ್ಯಾಸವಾದಂತೆ ಕಾಣುತ್ತದೆಯೇ ಹೊರತು ಬೇರೇನೂ ಆಗದು!

ಆಫೀಸಿನ ಜಂಜಡದಲ್ಲೇ ಇರುವವರಿಗಾದರೂ ಹೆಚ್ಚಿನ ಸಮಸ್ಯೆ ಇಲ್ಲ, ನಿಮ್ಮ ಕೂಡು ಕಳೆ ಗುಣಿಸು ಭಾಗಿಸುಗಳನ್ನ ಅಕೌಂಟ್ಸು ವಿಭಾಗದವರೇ ಹೆಚ್ಚಿನ ಸಲ ಮಾಡಿ, ನೀವು ಬರೀ ಇಷ್ಟೂಂತ ಟ್ಯಾಕ್ಸು ಕಟ್ಟಿದರಾಯ್ತು ಅನ್ನುತ್ತಾರೆ. ನೀವು ಹಿಂದೆ ಮುಂದೆ ನೋಡದೇ ಅವರು ಹೇಳಿದ ಅಮೌಂಟನ್ನ ಸಾವಾಸ ಸಾಕಪ್ಪಾ ಅಂತ ಕಟ್ಟಿಬಿಡುತ್ತೀರಿ. ಆದರೆ ಫ್ರೀಲ್ಯಾನ್ಸರುಗಳಾದರೆ ಮುಗಿದೇ ಹೋಯಿತು ಕತೆ. ನಿಮ್ಮ ತೆರಿಗೆಗೆ ನೀವೇ ಜವಾಬ್ದಾರರು! ಯಾರೋ ಹೇಳಿದ್ದನ್ನ ನಂಬಿಕೊಂಡು ನನ್ನ ಟ್ಯಾಕ್ಸು ನಾನೇ ಕಟ್ಟಿಕೊಳ್ಳುತ್ತೇನೆ ಅಂತ ಹೊರಟೆನಪ್ಪ ಒಂದು ಸಲ. ಆ ಗರ್ವಮೆಂಟು ವೆಬ್ ಸೈಟಲ್ಲಿ ಅಸಂಖ್ಯಾತ ಫಾರ್ಮುಗಳು. ಅದರಲ್ಲಿ ತುಂಬಿಸಬೇಕಾದ ಕೋಟಿ ದಾಖಲೆಗಳು. ಒಂದೇ ಎರಡೇ! ಮೊದಲೇ ಸ್ವತಂತ್ರವಾಗಿ ಕೆಲಸ ಮಾಡುತ್ತಿರುತ್ತೀರಿ. ಮಾಡಿರೋ ಕೆಲಸಕ್ಕೆ ದುಡ್ಡು ಬರೋ ಖಾತ್ರಿಯೇ ಇಲ್ಲದೇ ಹೋದರೂ, ತೆರಿಗೆಯ ಕತ್ತರಿ ಮಾತ್ರಾ ಪಕ್ಕಾ ಲೆಕ್ಕ! ಆ ಟ್ಯಾಕ್ಸು ಈ ಟ್ಯಾಕ್ಸು ಅಂತೆಲ್ಲ ಇಷ್ಟುದ್ದ ಲಿಸ್ಟು ನೋಡಿದರೆ ಸಂಬಳಕ್ಕಿಂತ ಹೆಚ್ಚೇ ತೆರಿಗೆ ಕಟ್ಟಬೇಕು ಎನ್ನುವ ಲೆಕ್ಕ ಸಿಕ್ಕು ಕಂಗಾಲು ನಾನು. ನಾನು ಆರೆಂಟು ಜಾಲತಾಣಗಳನ್ನೆಲ್ಲ ನೋಡಿ ನನ್ನ ಉಳಿಕೆ ಬಗ್ಗೆ, ನಾನು ಮಾಡಬೇಕಾದ ಹೂಡಿಕೆ ಬಗ್ಗೆ ಅರ್ಥ ಮಾಡಿಕೊಳ್ಳಲು ಹೆಣಗಾಡಿದೆ. ಅಲ್ಲಿ ಹೇಳಿದಷ್ಟು ಇನ್ವೆಷ್ಟು ಮಾಡಿ ತೆರಿಗೆ ಉಳಿಸಬೇಕು ಎಂದರೆ, ನನ್ನನ್ನೇ ನಾನು ಹರಿಶ್ಚಂದ್ರನ ತರಹ ಮಾರಿಕೊಳ್ಳಬೇಕಿತ್ತು. ನನ್ನ ಒಟ್ಟೂ ಜೀವನದ ಬಗ್ಗೆ ನನಗೆಯೇ ಮರುಕ ಬಂದು ಹೋಯಿತು. ಈ ತೆರಿಗೆಗಳನ್ನೆಲ್ಲ ಕಟ್ಟಿಕೊಂಡು ಇನ್ನೂ ನಾನು ಬದುಕಿರುವುದೇ ಒಂದು ಭಾಗ್ಯ ಎನ್ನಿಸಿ ಆನಂದವನ್ನು ಹೊಂದಿದೆ.

ಇದೆಲ್ಲ ಆದ ಮೇಲೆ, ನಾನಾಗಿಯೇ ಇನ್ನು ಮೇಲೆ ತೆರಿಗೆ ಕಟ್ಟುವ ಸಹವಾಸಕ್ಕೆ ನೇರವಾಗಿ ಹೋಗಲಾರೆ ಎಂದು ನಿರ್ಧರಿಸಿ, ಲೆಕ್ಕ ಪರಿಶೋಧಕರ ಮೊರೆ ಹೋದೆ. ಆಮೇಲೆ ಜೀವನ ಸ್ವಲ್ಪ ಸಹಜ ಸ್ಥಿತಿಗೆ ಬಂದು ಉಸಿರಾಡುವಂತಾಗಿದ್ದಂತೂ ಹೌದು. ಅಷ್ಟಾದರೂ ಸರ್ವೀಸ್ ಟ್ಯಾಕ್ಸೆಂಬ ಶೂಲವನ್ನ ನಾವೇ ಇರಿದುಕೊಳ್ಳಬೇಕಾದ ಕತೆ ಇರುವುದರಿಂದ ಲೆಕ್ಕದ ಭೂತ ಬಂದು ನನ್ನನ್ನ ತಿವಿಯುತ್ತಲೇ ಇರುತ್ತದೆ. ನೆಟ್ಟಗೆ ಸೇವಾ ತೆರಿಗೆಯನ್ನೇ ಲೆಕ್ಕ ಮಾಡಲು ಬಾರದ ನನಗೆ, ಮತ್ತೆ ಅದರ ತುದಿ ಕೊಸರು ಕೃಷಿ ಕಲ್ಯಾಣ ಸೆಸ್ಸೂ, ಸ್ವಚ್ಚ ಭಾರತ ತೆರಿಗೆ ಅಂತೆಲ್ಲ ನೂರಕ್ಕೆ ಇಪ್ಪತ್ತು ಸೇರಿಸಿ ಹತ್ತು ಕಳೆದು ಮುಕ್ಕಾಲು ಗುಣಿಸಿ, ಉಫ್! ಇಷ್ಟಾಗಿ ಸ್ವಲ್ಪ ಹೆಚ್ಚುಕಮ್ಮಿ ಲೆಕ್ಕವಾದರೆ ಎಲ್ಲ ಅಧ್ವಾನಂ. ಸೇವಾ ತೆರಿಗೆಯ ಜಾಲತಾಣವನ್ನೊಮ್ಮೆ ನೋಡಿ, ನೂರು ನೂರಾಹತ್ತು ಬಗೆಯ ಟ್ಯಾಕ್ಸುಗಳೂ, ಅದಕ್ಕೊಂದು ಕೋಡ್ ನಂಬರೂ, ಅದಕ್ಕೊಂದಿಷ್ಟು ಪರ್ಸಂಟೇಜು ಲೆಕ್ಕಾಚಾರಗಳೂ- ಅಲ್ಲಾ, ಹುಲು ಮಾನವವರಾದ ನಾವು ಇದನ್ನೆಲ್ಲ ಮಾಡಿಯೇ ತೀರಬೇಕೆಂದರೆ ಹೇಗೆ ಸ್ವಾಮಿ? ಆದರೆ ಈ ಸೀಎಗಳಿರುತ್ತಾರಲ್ಲ, ಅವರನ್ನು ನಾನು ದೇವಮಾನವರೆಂದೇ ನಿರ್ಧರಿಸಿದ್ದೇನೆ. ನಾನು ಬೆಳಗ್ಗಿಂದ ಸಂಜೆಯವರೆಗೆ ಲೆಕ್ಕಹಾಕಿಯೂ ಮುಗಿಯದ ಟ್ಯಾಕ್ಸಿನ ಗೋಜಲನ್ನ, ಅಯ್ಯೋ ಅಷ್ಟೇಯಾ ಮಾರಾಯಾ ಎಂದು ನನ್ನ ಸೀಎ ಗೆಳೆಯ ಗಿರಿ ಫಟ್ಟಂತ ಕಣ್ಕಟ್ ಮಾಡಿದ ಹಾಗೆ ಬಗೆಹರಿಸುವುದನ್ನ ನೋಡಿ ಈಗೀಗ ಅವನು ಗೋವರ್ಧನ ಗಿರಿಧಾರಿಯ ಹಾಗೇ ಕಾಣಿಸುತ್ತಾನೆ!

ಯಾರಾದರೂ ಬಂದು ನಿಮ್ಮ ಪರ್ಸು ಕಿತ್ತುಕೊಂಡು ಹೋದರೂ ಬೇಸರವಾಗದೇನೋ. ನಾವೇ ಸರಕಾರಕ್ಕೆ ಕೈ ಎತ್ತಿ ಕೊಡುವ ದುಡ್ಡಿಗೆ ಎಷ್ಟೆಲ್ಲ ಸರ್ಕಸ್ಸು ಮಾಡಬೇಕು ಹೇಳಿ? ಸುಮ್ನೆ ಯಾರಾದ್ರೂ ಬಂದು ನೋಡು ತಮಾ ಇದು ಲೆಕ್ಕ ಅಂತೇಳಿ ಕರೆಂಟು ಬಿಲ್ಲೋ ಕೇಬಲ್ಲು ಬಿಲ್ಲಿನ ತರವೋ ಟ್ಯಾಕ್ಸು ಕಲೆಕ್ಟು ಮಾಡಿದ್ದಿದ್ದರೆ ಭಾರಿ ಒಳ್ಳೇದಾಗುತ್ತಿತ್ತು ಎಂದು ಅನ್ನಿಸಿದ್ದಿದೆ ನಂಗೆ.  ಚಾಚೂ ತಪ್ಪದೇ ಕಟ್ಟುವ ತೆರಿಗೆಯನ್ನ ಮತ್ತೇನಾದರೂ ಕೊಂಚ ತಡ ಮಾಡಿದಿರೋ, ಮತ್ತೆ ಅದರ ಒದ್ದಾಟದ ಪರ್ವವೇ ಬೇರೆ. ಅದು ಹೇಗೋ ಮಾಡಿ ಈ ಎಲ್ಲ ತೆರಿಗೆಯ ಆಘಾತಗಳಿಗೆ ನನ್ನನ್ನ ಹೊಂದಿಸಿಕೊಂಡು ಉಸಿರು ಬಿಡುತ್ತಿದ್ದರೆ, ಈಗ ಹೊಚ್ಚ ಹೊಸ GST  ಬಂದು ಕೂತಿದೆ! ಅಲ್ಲ, ಹೆಂಗ್ ಸ್ವಾಮಿ ತಡ್ಕಳದು ಜೀವ? ಮೊದಲೇ ತೆರಿಗೆ ಬೇನೆಯಿಂದ ಬಳಲುತ್ತಿರುವ ನನ್ನಂತಹ ಬಡಪಾಯಿಗಳು, ಜಾಲತಾಣಗಳಲ್ಲಿ ಓಡಾಡುತ್ತಿರುವ ನೂರಾರು ಬಗೆಯ ಹೊಸ ಲೆಕ್ಕಾಚಾರಗಳಿಂದ ಪಕ್ಕಾ ಹೃದಯಾಘಾತಕ್ಕೆ ಒಳಗಾಗುವ ಎಲ್ಲ ಸಾಧ್ಯತೆಗಳು ಕಾಣಿಸುತ್ತಿವೆ. ತಿಂಗಳೂ ತಿಂಗಳೂ ಕಪ್ಪದ ಲೆಕ್ಕ ಸಲ್ಲಿಸಬೇಕಂತೆ ಅಂದರೆ ಇಲ್ಲ ಇಲ್ಲ ವಾರಕ್ಕೊಮ್ಮೆ ಅದೇನೋ ಫಾರ್ಮು ತುಂಬಿಸಿಟ್ಟುಕೊಳ್ಳಬೇಕಂತೆ ಅಂತ ಒಬ್ಬರಂದರೆ ಮೂರು ತಿಂಗಳಿಗೊಮ್ಮೆ ಸಲ್ಲಿಕೆ ಆದರೆ ಸಾಕಂತೆ ಅಂತ ಮಗದೊಬ್ಬನ ಪ್ರಲಾಪ. ನಾನೋ, ಹೊಸದಾಗಿ ಹಳ್ಳಿಯಿಂದ ಬಂದ ಸಿದ್ದ ಡಿವೈಡರಿನ ಮೇಲೆ ನಿಂತು ಆ ಕಡೆ ಈ ಕಡೆ ಹೋಗುವ ವಾಹನಗಳನ್ನ ನೋಡಿದ ಹಾಗೆ,ಮೂಕ ಪ್ರೇಕ್ಷಕ. ಒಬ್ಬರು ಸರಕಾರದ ವಿರೋಧ, ಮತ್ತೊಬ್ಬರು ಪರ. ನಾವೆಲ್ಲ 28 ಪರ್ಸೆಂಟು ಕಟ್ಬೇಕೂಂತ ಒಂದಿಷ್ಟು ಜನ, ಇಲ್ಲ ಇಲ್ಲ 18 ಸಾಕೂಂತ ಇನ್ನೊಂದಿಷ್ಟು ಮಂದಿ. ಎಲ್ಲ ಅತ್ತಿಂದಿತ್ತ ಇತ್ತಿಂದತ್ತ ಎತ್ತೆತ್ತಿ ಕಲ್ಲೊಗೆವ ಮಹಾಭಟರು. ನಾನೂ ನನ್ನೆರಡು ಜ್ಞಾನಬಿಂದುಗಳನ್ನ ಈ ಜಿ.ಎಸ್.ಟಿ ಯ ಅಗಾಧ ಸಾಗರಕ್ಕೆ ಸೇರಿಸೋಣವೆಂದರೆ, ಏನು ಮಾಡಲಿ, ಭೂಪರುಗಳ ನಡುವಿನ ಬೆಪ್ಪ ನಾನು.

ಆದರೆ, ಇದ್ದಿದ್ದರಲ್ಲಿ ಈ ಸಲ ನನ್ನಂತಹ ದಡ್ಡಶಿಖಾಮಣಿಗಳಿಗೆ ಅರ್ಥವಾಗಲಿ ಅಂತಲೇ ಏನೋ, ಕೇಂದ್ರ ಸರಕಾರ ಜೀಎಸ್ಟಿ ಹೆಸರಲ್ಲಿ ತೆರಿಗೆ ವ್ಯವಹಾರ ಸರಳವಾಗಿ ಕಾಣುವ ಹಾಗಂತೂ ಮಾಡಿದೆ. ಕಟ್ಟುವ ದುಡ್ಡಲ್ಲಿ ವ್ಯತ್ಯಾಸವಾಗುತ್ತದೆಯೋ, ಇಲ್ಲವೋ ತಿಳಿಯದೇ ಹೋದರೂ ಏನು ಮಾಡುತ್ತಿದ್ದೇನೆ ಎನ್ನುವುದಂತೂ ಅರ್ಥವಾಗುವ ಹಾಗೆ ಕಾಣುತ್ತಿದೆ. ನನ್ನ ಸೀಎ ಗೆಳೆಯನಲ್ಲಿ ಕೇಳಿದೆ, ಏನಯ್ಯ ಇದು ಜೀಎಸ್ಟಿ ಈ ಸಲ ಹೆಂಗೆ ಜೀವನ ಅಂತ. ಅವನು ಬಹಳ ಚೆನ್ನಾಗಿ ಹೇಳಿದ, “ಮೊದ್ಲು ನಿಂಗೆ ಹೆಂಗೆ ಹೊಡೀತಿದ್ರೂಂತ ಗೊತಾಗ್ತಾ ಇರ್ಲಿಲ್ಲ, ಏಟು ಎಲ್ಲಿಂದ ಬೀಳ್ತಿದೆ ಅಂತ ಅಂದಾಜಾಗ್ತಾ ಇರ್ಲಿಲ್ಲ, ಇನ್ ಮೇಲೆ ಸರಿಯಾಗಿ ಗೊತ್ತಾಗತ್ತೆ”.

ಎಲ್ಲರಿಗೂ ತೆರಿಗೆ ಬೇನೆಯ ಶುಭಾಶಯಗಳು!

3 ಕಾಮೆಂಟ್‌ಗಳು:

ರಾಧಿಕಾ ವಿಟ್ಲ ಹೇಳಿದರು...

ಹ್ಹ ಹ್ಹ... ಚೆನ್ನಾಗಿದೆ :)

sunaath ಹೇಳಿದರು...

ಸಿ.ಏ. ಅನ್ನುವ ಸೂಲಗಿತ್ತಿಯನ್ನು ಹಿಡಿಯಿರಿ. ತೆರಿಗೆ ಬೇನೆಗೆ ಸುಖಪ್ರಸವ ಮಾಡಿಸುತ್ತಾರೆ.
ಶ್ರೀನಿಧಿ, ನಿಮ್ಮ ಅಭಿಮಾನಿ ಓದುಗರಲ್ಲಿ ನಾನೊಬ್ಬ. ನಿಮ್ಮ ಲೇಖನಗಳು ಖುಶಿಯನ್ನು ಕೊಡುತ್ತವೆ.

ಶ್ರೀನಿಧಿ.ಡಿ.ಎಸ್ ಹೇಳಿದರು...

@radhika- ಧನ್ಯವಾದಗಳು:)

@sunaath- ಕಾಕಾ, ಋಣಿ!