ಶುಕ್ರವಾರ, ಮಾರ್ಚ್ 02, 2007

ಎತ್ತಣ ಮಾಮರ..

ನನ್ನ ಹಳೆಯ ಕಂಪನಿಯಲ್ಲಿದ್ದಾಗ ನಡೆದ ಘಟನೆ.

ಒಂದು ದಿನ ಮಧ್ಯಾಹ್ನ, ಯಾವ್ದೋ ನಂಬರ್ ಗೆ ಕಾಲ್ ಮಾಡಿದೆ. ಎಂದಿನಂತೆ ಕೆಲಸ ಖಾಲಿ ಇತ್ತು ( ಸಾಫ್ಟ್ ವೇರ್ ಉದ್ಯಮದಲ್ಲಿ ಯಾವಾಗಲು ಕೆಲಸಗಳು ಖಾಲಿ ಇರುತ್ತವೆ, ಬಿಡಿ). ರಿಂಗ್ ಆಯಿತು. ಫೋನ್ ಆ ಕಡೆಯಿದ್ದದ್ದು ನಡುಗುವ ದನಿ.
"ಸರ್, ಕ್ಯಾನ್ ಇ ಸ್ಪೀಕ್ ಟು ......"
"ಯಾರಪ್ಪಾ ಮಾತಡೋದು?" ಅಚ್ಚ ಕನ್ನಡದಲ್ಲಿ ಉತ್ತರ ಬಂತು.

"ನಾನು ಶ್ರೀನಿಧಿ ಅಂತ, ಒಂದು ಕಂಪನಿಯಿಂದ ಕಾಲ್ ಮಾಡ್ತಾ ಇದೀನಿ. ಒಂದು ಕೆಲಸದ ವಿಚಾರವಾಗಿ ಇಂತವರ ಬಳಿ ಮಾತಾಡಬೇಕಿತ್ತು ..".

"ಹಮ್, ನಾನು ಅವನ ತಂದೆ ಕಣಪ್ಪಾ" ಅಂದ್ರು.

ಸರ್ ಹಾಗಾದರೆ ನಿಮ್ಮ ಮಗ ಬಂದ ಮೇಲೆ ಒಂದು ಫೋನ್ ಮಾಡೋಕೆ ಹೇಳಿ ಅಂತಂದು, ಮಾತು ಮುಗಿಸುವವನಿದ್ದೆ. ಅವರು,
"ಒಂದು ನಿಮಿಷ ..."ಅಂದ್ರು.

"ನಿಮಗೆ ಈ ನಂಬರ್ರು ಹೇಗೆ ಸಿಕ್ಕಿತು?"- ಅವರ ಬಯೋ ಡಾಟದಲ್ಲಿ ಇತ್ತು. ಅದರಿಂದ ತಗೊಂಡೆ"
"ಅದರಲ್ಲಿ ಬೇರೆ ವಿಳಾಸ ಇದೆಯಾ ನೋಡ್ತೀರಾ?"- ನನಗೆ ಅರ್ಥವಾಗಲಿಲ್ಲ. ಹಾ, ಏನು ಅಂದೆ. ಸಂಬಂಧ ಪಡದವರಲ್ಲಿ ಮಾತು ಲಂಬಿಸಲು ಕಿರಿಕಿರಿ ಅನ್ನಿಸುತ್ತದೆ. ದಿನಕ್ಕೆ ಇಂತಹ ಹಲವು ಫೋನ್ ಮಾಡಬೇಕು.

"ನೀನು ನಂಗೆ ಮಗ ಇದ್ದ ಹಾಗೆ ಕಣಪ್ಪ, ವಿಷಯ ಹೇಳ್ತೀನಿ ಕೇಳು, ನನ್ನ ಮಗ, ಅವರ ಅಮ್ಮನ ಹತ್ತಿರ ಗಲಾಟೆ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದಾನೆ, ಹ್ಯಾಗಾದರೂ ಹುಡುಕಿ ಕೊಡೋಕೆ ಆಗತ್ತಾ?, ಮಗ ಬೆಳೆದು ದೊಡ್ಡವನಾದ ಮೇಲೆ ಏನೆಲ್ಲ ಕಷ್ಟ ಪಡಬೇಕು ನೋಡು.."

ನನಗೆ ಏನು ಹೇಳಲೂ ತೋಚಲಿಲ್ಲ. "ಆಯಿತು ಸಾರ್ ನೋಡ್ತೀನಿ, ಪ್ರಯತ್ನ ಪಡ್ತೀನಿ" ಅಂದೆ , ನನ್ನ ಫೋನ್ ನಂಬರನ್ನ ಆ ಹಿರಿಯರಿಗೆ ಕೊಟ್ಟೆ.

"ನಿನಗೆ ಹೇಗಾದರೂ ಅವನನ್ನ ಕಾಂಟಾಕ್ಟ್ ಮಾಡೋಕೆ ಆಗಬಹುದು, ಈ ನಂಬರು ಸಿಕ್ಕಿದೆ ನಿಮಗೆ, ಬೇರೆ ನಂಬರು ಕಂಡು ಹಿಡಿಯೋದು ಕಷ್ಟವಲ್ಲ ಅಲ್ವೇನೋ " ಅಂದರು. ಏನು ಹೇಳೋಣ ಅವರಿಗೆ?

"ನನ್ನಿಂದ ಆದಷ್ಟು ಪ್ರಯತ್ನ ಮಾಡ್ತೀನಿ ಸಾರ್ ..", ಅಂತೆಲ್ಲ ಏನೇನೋ ಸಮಾಧಾನ ಮಾಡಿ ಫೋನ್ ಇಟ್ಟೆ. ಹೇಗಪ್ಪಾ ಇವರ ಮಗನನ್ನ ಹುಡುಕುವುದು?, ಅಂತ ಅಲೋಚನೆ ಶುರು ಮಾಡಿದೆ, ಏನೋ ಒಂದು ಸಾಹಸ ಕಾರ್ಯ ಮಾಡುತ್ತೇನೆ ಅನ್ನುವ ಖುಷಿ ಹುಟ್ಟಿಕೊಂಡಿತು.

ಒಳ್ಳೆಯ ಉಪಾಯವೂ ಹೊಳೆಯಿತು. ನಾನೂ, ಪ್ರವೀಣ ಎಲ್ಲ ಮಾತಾಡಿ ಒಂದು ಪ್ಲಾನು ರೆಡಿ ಮಾಡಿ, ಆ ಪುಣ್ಯಾತ್ಮನಿಗೆ, ಭಯಂಕರ ಆಮಿಷ ಹುಟ್ಟುವ ಹಾಗೆ, ಒಂದು ಮೇಲ್ ಮಾಡಿದೆವು. ಒಳ್ಳೆಯ ಕಂಪನಿ, ಒಳ್ಳೆಯ ಸಂಬಳ ಹಾಗೇ ಹೀಗೆ ಅಂತ . ಒಟ್ಟಿನಲ್ಲಿ ಆ ಈ- ಮೇಲ್ ನೋಡಿಯೇ ಆತ ನಮ್ಮನ್ನ ಸಂಪರ್ಕಿಸಬೇಕು , ಆ ತರ.

ದಿನಾ ನನಗೆ ಅವನ ಮೇಲ್ ಬಂತಾ ಅಂತ ನೋಡುವುದೇ ಕೆಲಸ. ಒಂದು ವಾರದ ಮೇಲೆ ರಿಪ್ಲೈ ಬಂತು!ಅದರಲ್ಲಿ ಇನ್ಯಾವುದೋ ನಂಬರನ್ನ ಕೊಟ್ಟಿದ್ದ ಅವನು. ಅದಕ್ಕೆ ಫೋನ್ ಹೊಡೆದು ಮಾತಾಡಿಸಿದೆ. ಎಲ್ಲಿದ್ದೀಯಾ ಅಂದಿದ್ದಕ್ಕೆ, "ಬೆಂಗಳೂರು"ಅನ್ನುವ ಉತ್ತರವೇ ಬಂತು. ಅವನ ಹತ್ತಿರ ಮಾತಾಡಿ ಮುಗಿಸಿದ್ದೇ, ಅವರ ತಂದೆಗೆ ಫೋನಿಸಿ, ಈ ಹೊಸ ನಂಬರು ಕೊಟ್ಟೆ. ನಾಲ್ಕು ದಿನ ಬಿಟ್ಟು ಅವರು ನನಗೆ ಫೋನ್ ಮಾಡಿ "ಮಗ ಮನೆಗೆ ಬಂದ ಕಣಪ್ಪ", ಅಂತ ತುಂಬಿದ ಕಂಠದಿಂದ ಹೇಳಿದರು. ಅವರು ಅವನ ಬಳಿ ಏನು ಮಾತಾಡಿದರೋ ನನಗೆ ಹೇಳಲಿಲ್ಲ, ನಾನು ಕೇಳಲೂ ಇಲ್ಲ.

ನಾನು ಒಬ್ಬ ಕ್ಯಾಂಡಿಡೇಟು ಕಳೆದುಕೊಂಡಿರಬಹುದು... ಇರ್ಲಿ ಬಿಡಿ ಪರ್ವಾಗಿಲ್ಲ! ಅಲ್ವಾ?

12 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಶ್ರೀನಿಧಿ ಅ೦ದರೆ ಅರ್ಥ ಹೇಳಬೇಕಾಗಿಲ್ಲ
ನೀವು ತು೦ಬಾ ಭಾವಜೀವಿ ಎನ್ನುವುದರಲ್ಲಿ ಎರಡು ಮಾತಿಲ್ಲ ಬೀಡಿ...........
ಅನುಭವದೊಡನೆ ಅನಾನುಭಾವ ಬೆರೆತರೆ
ಹೇಗಿರುತ್ತೇ ಹೇಳಿ
ನೀವು ನಿಜಕ್ಕೂ ಒಳ್ಳೆಯ ಮನೋಭಾವವುಳ್ಳ ವ್ಯಕ್ತಿ.........
ನಿಮಗೆ ಆ ಪರಮಾತ್ಮ ಸದಾ ಒಳ್ಳೆಯದನ್ನೆ ಕೊಡಲಿ....
ನಿಮಗೆ ನನ್ನ ಪುಟ್ಟ ಸಲಾಮ್ ....
ಆದರೆ ಎಲ್ಲರಲ್ಲೂ ನಿಮ್ಮ ತರಹ ಸಹಾಯಗುಣ ಇರೋಲ್ಲ ಬಿಡಿ.......

ಅನಾಮಧೇಯ ಹೇಳಿದರು...

ಈ ರೀತಿ ನಮ್ಮ ವೃತ್ತಿ ಜೀವನದಲ್ಲೇ ಗೊತ್ತಿದ್ದೋ ಗೊತ್ತಿಲ್ಲದೆಯೋ ಆಗುವ ಅನುಭವಗಳು, ಮಾಡುವ/ಆಗುವ ಉಪಕಾರಗಳು ಒಂದು ರೀತಿ ಮನಸ್ಸಿಗೆ ಸಾರ್ಥಕತೆ ತಂದು ಕೊಡುತ್ತವೆ ಅಲ್ಲವೆ.

ಇದೇ ರೀತಿ ಜೀವನದ ಕೆಆರೆಸ್ಸಿನಿಂದ ಅನುಭವಗಳ ಸರಣಿ ಕಾವೇರಿಯಂತೆ ಟಿ.ಎಂ.ಸಿ ಗಳಲ್ಲಿ ಹರಿದು ಬರಲಿ ಎಂದು ಈ ತಮಿಳುನಾಡಿನ ಆಶಯ :-)

Pramod P T ಹೇಳಿದರು...

ಶ್ರೀನಿಧಿಯವರೇ,
ಕೆಲಸದ ಅನುಭವಗಳು ಬರವಣಿಗೆ ರೂಪದಲ್ಲಿ ಸುಂದರವಾಗಿ ಮೂಡಿ ಬರುತ್ತಿವೆ.

Sushrutha Dodderi ಹೇಳಿದರು...

ಒಳ್ಳೆಯ ಕೆಲಸ ಮಾಡಿದ್ದೀಯ ಗೆಳೆಯ. ಕಾಣದ ಹಿರಿಯ ಜೀವವೊಂದಕ್ಕೆ ಅಷ್ಟಾದರೂ ಮಾಡದಿದ್ದರೆ ಹೇಗೆ?ಕೆಲಸ, ಬ್ಯುಸಿ, ಒತ್ತಡಗಳ ನಡುವೆ ಇಂಥವನ್ನೇನಾದರೂ ಮಾಡುತ್ತಿರದಿದ್ದರೆ ಅವುಗಳಲ್ಲೇ ಕಳೆದುಹೋಗುವ ಸಾಧ್ಯತೆಯಿರುತ್ತೆ. ಹಾಗಾಗಬಾರದಲ್ಲ? ಪಾಪ-ಪುಣ್ಯಗಳ ಮಾತು ಬಿಡು; ಇದು ಮಾನವೀಯತೆಯ ಪ್ರಶ್ನೆ. ಗುಡ್ ವರ್ಕ್.

Shivakumara ಹೇಳಿದರು...

ತುಂಬಾ ಅಂದ್ರೆ ತುಂಬಾನೇ ಚೆನ್ನಾಗಿದೆ ರೀ ಶ್ರೀನಿಧಿ. ಇಷ್ಟಿಷ್ಟೊಂದು ಸಿಂಪಲ್ ಆದ, ಅದ್ಭುತ ಎನಿಸುವ, ಮನಮುಟ್ಟುವ ಬರವಣಿಗೆ ನನ್ನ ಕೈಗೆ ಯಾವಗ್ಲೂ ಹತ್ತೊಲ್ವಲ್ಲಾ ಅನ್ನೋ ಸಣ್ಣ ಹೊಟ್ಟೆಕಿಚ್ಚಿನ ನಡುವೆಯೂ ಹೇಳ್ತಾ ಇದೀನಿ, - ಸಕ್ಕತ್ ಚೆನ್ನಾಗಿದೆ :)

ಸಿಂಧು sindhu ಹೇಳಿದರು...

ಅಡ್ ಬಿದ್ದೆ ಬುದ್ದೀ..

ಯಾವುದು ಜಾಸ್ತಿ ಚೆನ್ನಾಗಿದೆ..
ಬರಹವೋ ಭಾವವೋ ಅಂತ ಯೋಚನೆ ಮಾಡುತ್ತ ಸಾಕಷ್ಟು ಹೊತ್ತು ಕಳೆದೆ..
ಉಂಹುಂ..ನಿರ್ಧರಿಸಲಾಗುತ್ತಿಲ್ಲ.
ಇಷ್ಟು ಚಂದದ ಭಾವತೀರಕ್ಕೆ ಕರೆದೊಯ್ದಿದ್ದಕ್ಕೆ ಧನ್ಯವಾದ.
ಕ್ಯಾಂಡಿಡೇಟ್ಸೇನು ಸಿಗುತ್ತಿರುತ್ತಾರೆ... ಅಪ್ಪನೊಬ್ಬನ ಕತ್ತಲಿಗೆ ಬೆಳಕಾಗುವುದು ಹೆಚ್ಚು.

ಶ್ರೀನಿಧಿ.ಡಿ.ಎಸ್ ಹೇಳಿದರು...

ಪುಷ್ಪಾ,
ಸಿಕ್ಕಾಪಟ್ಟೆ ಹೊಗಳ್ಬೇಡಾ ಮಾರಾಯ್ತಿ!:)ಪ್ರತಿಕ್ರಿಯೆಗೆ ಧನ್ಯವಾದಗಳು.

ವಿಕಾಸ್,
ತರಹೇವಾರಿ ಅನುಭವಗಳಿವೆ, ಬರಲಿವೆ ಮುಂದೆ..

ಪ್ರಮೋದ್,
ಧನ್ಯ!

ಶ್ರೀನಿಧಿ.ಡಿ.ಎಸ್ ಹೇಳಿದರು...

ಸುಶ್,
ಈಗೀಗ ಪ್ರಾಯಶ: ಕಳೆದೇ ಹೋಗುತ್ತಿದ್ದೀನೋ ಅಂತ ಡೌಟು ಕಣಯ್ಯ... ಪ್ರೊಫೆಷನಲ್ ಆಗಿ ಬೆಳೆಯುತ್ತಿದ್ದ ಹಾಗೆ, ಮಾನವೀಯ ಮೌಲ್ಯಗಳ ಕಡೆಗಿನ ಗಮನ ಕಡಿಮೆಯಾಗುತ್ತದೆಯೋ ಏನೋ ಅನ್ನುವ ಹೆದರಿಕೆ..

ಶಿವ್,
ಏನೋ, ಉದ್ದಕ್ಕೆ ಬರ್ಕೊಂಡು ಹೋಗಿದೀನಿ ಅಷ್ಟೇ...

ಸಿಂಧು ಮೇಡಮ್,
ಈ ಪಾಟೀ ಎಲ್ಲಾ ಸಿಕ್ಕಾಪಟ್ಟೆ ಹೇಳ್ದ್ರೆ, ಕಷ್ಟ ಕಷ್ಟ!:)
ಏನೋ ನನ್ನಿಂದ ಆದ ಸಹಾಯ ಮಾಡಿದ್ದು ಅಷ್ಟೇ..

Annapoorna Daithota ಹೇಳಿದರು...

ನಂಗೆ ನಿಜ್‍ವಾಗ್ಲೂ ಏನ್ ಹೇಳ್ಬೇಕು ತೋಚ್ತಾ ಇಲ್ಲ..... ಘಟನೆ ಮನಮುಟ್ಟುವಂಥದ್ದು, ನೋವಿದ್ದರೂ ಸುಖಾಂತ್ಯ ಕಂಡಿದೆ. ಜೊತೆಗೆ ನಿಮ್ಮ ಸಹಾಯ ಮಾಡುವಂಥಾ ಒಳ್ಳೆಯ ಮನಸ್ಸು ಬೇರೆಯವರಿಗೆಲ್ಲಾ ಕನ್ನಡಿಯಾಗುತ್ತಿದೆ.

ಇಲ್ಲಿ ಘಟನೆಯ ಮುಂದೆ ನಿಮ್ಮ ಬರಹದ ಶೈಲಿಯ ಕಡೆ ನನ್ನ ಗಮನ ಹರಿದಿರಲಿಲ್ಲ, ಮೊದಲಿಗೆ ಮನಸಿಗೆ ನೋವಾಯಿತು, ಕೊನೆಗೆ ಮಗ ಸಿಕ್ಕಿದ ಎಂದು ಓದುವಾಗ ಮನಸ್ಸು ತುಂಬಿ ಬಂತು. ಇದೆಲ್ಲಾ ಓದಿದ ನಂತರ ಅನಿಸಿತು `ಒಂದು ಘಟನೆ ನಡೆದಿದೆ, ಇಂಥದ್ದು ನೂರಾರು ನಡೆಯುತ್ತದೆ, ಅದು ವಿಶೇಷವಲ್ಲ. ಇದನ್ನು ನಮ್ಮ ಮನತಟ್ಟುವಂತೆ ಶ್ರೀನಿಧಿ ಬರೆದಿದ್ದಾರಲ್ಲ ಅವರ ಬರವಣಿಗೆ ಮಹತ್ವದ್ದು ಎಂದು !!!

Unknown ಹೇಳಿದರು...

banglorenallidru badlagilla anta aitu....tumba kushi aitu kanri...

Unknown ಹೇಳಿದರು...

ಶ್ರೀನಿಧಿಯವರೇ,
ಬರಹಾಗಾರರಿಗೆ ಒಳ್ಳೆ ಹ್ರದಯವಿರುತ್ತೆ ಅನ್ನುವುದು ನಿಜ.
ಇಲ್ಲಿ ನಡೆದ ಘಟನೆಯ (ನಿಮ್ಮ ಬರಹವು) ಓದಿದ ನಂತರ ಮನಸ್ಸು ತಿಳಿಯಾಯ್ತು.
ನಿಮ್ಮ ಮಾನವೀಯತೆಯು ಎಲ್ಲಾರಿಗು ಆದರ್ಶವಾಗಲಿ.
ಧನ್ಯವಾದಗಳು.

ವಿಜಯ ಕುಮಾರ (ಉಡುಪಿ)

Preethi Shivanna ಹೇಳಿದರು...

Olledagli nimage :)