ಮಂಗಳವಾರ, ಜುಲೈ 10, 2007

ಖುಷಿಗೊಂದು ಪದ್ಯ.

ಮನೆಯ ಅಂಗಳದಂಚಿನ ಒದ್ದೆ ಮೆಟ್ಟಿಲು
ಹೆಜ್ಜೆ ಹಾಕುತ್ತ ಹೋದ ಹಾಗೆ
ಕೆಳಗೆಲ್ಲ ಹಸಿರು.
ಭಟ್ಟರ ಗದ್ದೆಯಲ್ಲಿ ನೇಜಿಯ ಹುರುಪು
ಸಂಪಿಗೆ ಮರದ ತುಂಬ ಹೂ ತೇರು.
ಕೊನೆಯ ಮೆಟ್ಟಿಲ ಸಂದಿಯಲ್ಲಿ, ಅಗೋ
ಬೆಳ್ಳಿಯಣಬೆ!


ತೆಂಗಿನ ಮರದ ಬುಡದಿ
ಸಣ್ಣ ಹುಲ್ಲ ಚಿಗುರು, ಅಲ್ಲೇ ಮುಂದೆ
ಹರಿವ ಹಳ್ಳ, ಜತೆಗೆ
ಮಣ್ಣ ಚಿತ್ರವ ಬಿಡಿಸಿದೇಡಿ ಬಿಲ.
ಪಕ್ಕದ ಬಂಡೆ ಕೆಳಗೀಗ ಪುಟ್ಟ ಒರತೆ.
ಹಲಸು ಮರದಲ್ಲಿ ಅಳಿಲಿನಾಟ.
ಬಾಳೆಗಿಡಗಳ ಸುತ್ತ ಹೊಸದು ಕಂದು.

ನಿತ್ಯ ನಡೆವ ಹಳೆ ಕಾಲು ಹಾದಿಯಲೂ
ಹೊಸ ಹೆಜ್ಜೆ ಗುರುತು.
ನೀರ ದಾರಿಗೆ ಸಿಕ್ಕ ತರಗೆಲೆಯಲಿ
ಬರಿ ಕಂದು ಪದರ-
ಹುಣಸೆ ಮರದ ಗೆಲ್ಲಲಿ ಸೀತಾಳೆ ದಂಡೆ
ಕೆಸುವಿನೆಲೆ ಮೇಲೆ ಸ್ಫಟಿಕ ಬಿಂದು.
ಜೊತೆಗೆ ಹೆಸರಿರದ ಹಳದಿ ಹೂವು.

ಎದುರು ಗದ್ದೆಯ ನಾಟಿ ಹೆಂಗಸು,
ಕೊರಳೆತ್ತಿ ಹಾಡುತ್ತಿದ್ದಾಳೆ,
ಅರ್ಥವಾಗದು ಸಾಹಿತ್ಯ.
ಆದರೆ ಅವಳ ಖುಷಿಯ ಏರು ದನಿ,
ಲವಲವಿಕೆ ರಾಗ,
ಈಗಷ್ಟೇ ಶುರುವಾದ ಹನಿ ಮಳೆ
ಎಲ್ಲ ಸೇರಿ ನನ್ನೊಳಗೆ ನವೋನ್ಮೇಷ.

18 ಕಾಮೆಂಟ್‌ಗಳು:

ಅನಿಕೇತನ ಹೇಳಿದರು...

ಚೆನ್ನಾಗಿದೆ.

Unknown ಹೇಳಿದರು...

ಖುಷಿಗೊಂದು ಪದ್ಯ vodi oorighogi bandastu kushiyaythu aa natty!!! aa anabe!!! hesru kelidareno khushi heege baritha iru friend

ಸಿಂಧು sindhu ಹೇಳಿದರು...

ಶ್ರೀನಿಧಿ,

ಏನೋ ದುಗುಡವಿತ್ತು, ಅದೆಲ್ಲ ಕಳೆದು ಖುಷಿಯಾಯ್ತು ಓದಿ.
ಕೆಳಗೆಲ್ಲ ಹಸಿರು, ಹೊಸದು ಕಂದು, ಹೆಸರಿರದ ಹೂಗೊಂಚಲು, ಸಹಜಯಾನದ ಬದುಕಿನ ಹೊಸ ರಾಗ... ಎಲ್ಲ ಖುಷಿಯಾಯಿತು..

ಶ್ಯಾಮಾ ಹೇಳಿದರು...

ನಿತ್ಯ ನಡೆವ ಹಳೆ ಕಾಲು ಹಾದಿಯಲೂ
ಹೊಸ ಹೆಜ್ಜೆ ಗುರುತು....
ಆಹಾ ಎಂಥ ಸುಂದರ ಸಾಲುಗಳು..
ಖುಷಿಗೊಂದು ಪದ್ಯ ಬರೆದೆ ನೀನು
ಓದುತ್ತ ಒಂದೊಂದು ಸಾಲು ಸಾಲೂ
ಖುಷಿಗೊಂಡೆನು ನಾನು.. :)

ಅನಾಮಧೇಯ ಹೇಳಿದರು...

ahaa..odi khushi aaytu.

Susheel Sandeep ಹೇಳಿದರು...

ಅದ್ಭುತ ಪರಿಕಲ್ಪನೆ! ಸಣ್ಣ ಸಣ್ಣ ಖುಷಿಗಳನ್ನೆಲ್ಲ ಕಟ್ಟಿ ಗುಚ್ಛವಾಗಿ ನೀಡಿದ್ದೀರಿ ಈ ಕವನದಲ್ಲಿ!

ಸುಪ್ತದೀಪ್ತಿ suptadeepti ಹೇಳಿದರು...

ಸೊಗಸಾಗಿದೆ ಶ್ರೀನಿಧಿ... ಬದುಕಿನ ಕಾಲುದಾರಿಯ ಅಕ್ಕಪಕ್ಕದ ಸಣ್ಣಸಣ್ಣ ಹೆಸರಿಲ್ಲದ ಹೂಗಳನ್ನೂ ಕೆಸುವಿನೆಲೆಯ ಮುತ್ತುಹನಿಯನ್ನೂ ಜೊತೆಜೊತೆಗೇ ನೋಡುವಾಗ, ಜೀವನ ಮತ್ತು ವೈರಾಗ್ಯಗಳ ನೆನಪಾಗುತ್ತದೆ. ಎರಡರ ಸಮ್ಮಿಲನವೇ ನಮ್ಮ ವೇದಗಳ ಸಾರ, ಅಲ್ಲವೆ? ಒಳ್ಳೆಯ ಕವನ, ಸಂದೇಶ.

Satish ಹೇಳಿದರು...

ಇಷ್ಟೆಲ್ಲಾ ಗಮನಿಸೋ ಮನ್ಷಾ ಸೋಂಬೇರಿ ಅನ್ನಿಸಿಕೊಳ್ಳೋಲ್ಲ...
ಅಂಥವರನ್ನ ಮಹಾಸೋಂಬೇರಿ ಅಂತ ಕರೀಬೇಕು :-)

ಅನಾಮಧೇಯ ಹೇಳಿದರು...

ಶ್ರೀ,
ಕವನ ತುಂಬಾ ಚನ್ನಾಗಿ ಇದೆ.
ನಿನ್ನ ಖುಷಿಗೊಂದು ಪದ್ಯ ಓದಿ ನನಗೂ ಖುಷಿ ಆಯಿತು.

ಅನಂತ ಹೇಳಿದರು...

ಶ್ರೀನಿಧಿ,
ತುಂಬಾನೇ ಚೆನ್ನಾಗಿದೆ.. ಇಂತದೊಂದು ಪದ್ಯ ದಿನಾ ಓದುತಿದ್ದರೆ, ಕಷ್ಟ ದುಃಖ ಅನ್ನೊದು ಜೀವನದಲ್ಲಿ ಇರುತ್ತೆ ಅನ್ನೋದೆ ಮರೆತ್ಹೋಗುತ್ತೆ..

ಶ್ರೀನಿಧಿ.ಡಿ.ಎಸ್ ಹೇಳಿದರು...

@ಅನಿಕೇತನ,
ಹೌದಾ?:)

@ನಿಶ್ಚಿತ್,
ಹಮ್, ನಾನು ಮನೆಗೆ ಹೋದಾಗ್ಲೇ ಮೂಡಿದ್ದು ಈ ಪದ್ಯ.

@ಸಿಂಧು,
ನಿನ್ನ ದುಗುಡ ಕಳೆಯೋ ತಾಕತ್ತು ಇತ್ತೇ ಈ ಪದ್ಯಕ್ಕೆ? ಧನ್ಯ!

@ಶ್ಯಾಮಾ,
ಅರೇ ನೀನೂ ಕವನ ಬರದ್ದೆ!:)ಖುಷಿಯಾದ್ರೆ ನನ್ಗೂ ಖುಷಿನೇ!

ಶ್ರೀನಿಧಿ.ಡಿ.ಎಸ್ ಹೇಳಿದರು...

@ ಅರ್ಚನಾ,
ಬರ್ತಾ ಹೋಗ್ತಾ ಇರಿ ಹೀಂಗೆ!
@ಸುಸಂಸ್ಕೃತ
ಸಣ್ಣ ಸಣ್ಣ ಖುಷಿಗಳನ್ನೆಲ್ಲ ಕಟ್ಟಿ ಗುಚ್ಛವಾಗಿ ನೀಡೋದೆ ನನ್ನ ಉದ್ದೇಶವಾಗಿತ್ತು!
@ಸುಪ್ತದೀಪ್ತಿ,
ನಿಮ್ಮ view ಗೆ ಕೃತಜ್ಞ.
@ ಸತೀಶ್
ನೀವೊಬ್ರೇ ನೋಡಿ ಇದ್ನ ಗಮನಿಸಿದ್ದು!
@ರಂಜು,
ಅಷ್ಟೆಲ್ಲ ಖುಶಿ ಆತಾ?:)ಸಂತೋಷ.
@ಅನಂತ,
ಮರೆಯಬಾರದು:) ಜೊತೆಗೇ ಸಾಗಬೇಕು!

ವಿ.ರಾ.ಹೆ. ಹೇಳಿದರು...

ಚೆನ್ನಾಗಿದೆ,
ಕವನದ ಮೂಲಕ ಸುಂದರ ಚಿತ್ರಣ ಕೊಟ್ಟಿರುವೆ .
ನಿಜವಾಗಿಯೂ ಇದು ನನಗೆ 'ಖುಷಿ ಕೊಟ್ಟ ಪದ್ಯ'

ಅನಾಮಧೇಯ ಹೇಳಿದರು...

ಅರ್ಥವಾಗದು ಸಾಹಿತ್ಯ.
ಆದರೆ ಅವಳ ಖುಷಿಯ ಏರು ದನಿ,
ಲವಲವಿಕೆ ರಾಗ,
ಈಗಷ್ಟೇ ಶುರುವಾದ ಹನಿ ಮಳೆ
ಎಲ್ಲ ಸೇರಿ ನನ್ನೊಳಗೆ ನವೋನ್ಮೇಷ....
lovelyyyyyyyyy

ಮನಸ್ವಿನಿ ಹೇಳಿದರು...

ಆಹಾಹ!

ಮಸ್ತ್ ಹಾಡು.

ಅನಾಮಧೇಯ ಹೇಳಿದರು...

ಎಂದಿನಂತೆ ಸುಂದರವಾಗಿದೆ.... ಮಲೆನಾಡ ಮುಂಗಾರಿನ ಚಿತ್ರಣ...ಕಣ್ಣು ಮುಂದೆ ನನ್ನ ಉರು ಮೂಡಿ ಬಂತು...ಚೆನ್ನಾಗಿದೆರಿ

ಶ್ರೀನಿಧಿ.ಡಿ.ಎಸ್ ಹೇಳಿದರು...

ವಿಕಾಸ,
ನಂಗೂ ಖುಷಿ ಆಗಿತ್ತು:)

ಮಲ್ನಾಡ್ ಹುಡ್ಗಿ,
ಏನ್ ಮೇಡಮ್ , ಎಲ್ ಮಾಯ ಆಗಿದೀರಾ? ಬ್ಲಾಗು ಅಪ್ ಡೇಟ್ ಮಾಡಿಲ್ಲ ಏನ್ ಕಥೆ?
ಕವನ ಓದಿ ಕಮೆಂಟಿಸಿದ್ದಕ್ಕೆ ಥ್ಯಾಂಕ್ಸು.

ಮನಸ್ವಿನೀ,
ಈ ಮಸ್ತ್ ಅಂದ್ರೆ ಏನು?:)

ಅನಾನಿಮಸ್,
ಎಂದಿನಂತೆ ಸುಂದರವಾಗಿದೆ ಅಂದ್ರೆ? ನಂಗೆ ಹೆದ್ರಿಕೆ ಆಗತ್ತೆ ಇಂಥ ಕಮೆಂಟೋದಿದ್ರೆ!:)

ಚಿತ್ರಾಕರ್ಕೇರಾ, ದೋಳ್ಪಾಡಿ ಹೇಳಿದರು...

ಎದುರು ಗದ್ದೆಯ ನಾಟಿ ಹೆಂಗಸು,
ಕೊರಳೆತ್ತಿ ಹಾಡುತ್ತಿದ್ದಾಳೆ,
ಅರ್ಥವಾಗದು ಸಾಹಿತ್ಯ.
ಆದರೆ ಅವಳ ಖುಷಿಯ ಏರು ದನಿ..
-ಈ ಸಾಲು ತುಂಬಾ ಚೆನ್ನಾಗಿದೆ..ಜನಪದ ಹಾಡುಗಳ ನೆನಪಾಯಿತು...ಮನದ ಖುಷಿಗಾಗಿ ಒಂದಿಷ್ಟು ಹೊತ್ತು ಸಾಹಿತ್ಯದೊಡನೆ ಮಾತಾಡುವವರು ಇರೋದು ಅಪೂರ್ವ ಅಲ್ಲವೇ? ಬದುಕನ್ನು ಭಾವನೆಗಳೊಂದಿಗೆ ಹೆಣೆದ ಮನುಷ್ಯ ಮಾತ್ರ ಈ ಖುಷಿ ಅನುಭವಿಸಲು ಸಾಧ್ಯ..