ಗುರುವಾರ, ಜೂನ್ 19, 2008

ಮಹಡಿ ಮೇಲಿಂದ..

ಕಿಟಕಿಯಾಚೆಗೆ ಮೇಲೆ ಕಟ್ಟಿಹುದು ಮಳೆಮೋಡ,
ನೀರ ಗರ್ಭವ ಹೊತ್ತು ತೂಗುತಿದೆ ಮುಗಿಲು
ಬಣ್ಣ ಗಾಜಿನ ಹೊರಗೆ, ಆಗಸಕು ಬಣ್ಣವಿದೆ
ಸಂಜೆಗಿರಣಗಳೆಲ್ಲ ಬಾನೊಳಗೆ ಸೆರೆಯು.

ಕೆಳಗೆ ರಸ್ತೆಯ ಮೇಲೆ, ಚಕ್ರವೇಗವು ಜೋರು
ಮನೆಗೆ ಸೇರುವ ತವಕ ಸಹಜ ತಾನೆ,
ಹಲವು ಬಣ್ಣದ ಬಾನು, ದಟ್ಟ ಕಪ್ಪಾಗುತಿದೆ
ಭುವಿಯೆಡೆಗೆ ಹೊರಟಿಹುದು, ಮಳೆಯ ಮೇನೆ.

ಇನ್ನು ಹಲವರಿಗಿಲ್ಲಿ, ನೆನೆದು ನಡೆಯುವ ಬಯಕೆ
ಮುಂಗಾರ ತೇರೊಳಗೆ ಕೊಳೆಯ ಕಳೆವಾಸೆ.
ಚಿತ್ರಚಿತ್ತಾರದಾ ಮಿಂಚುಗಳು ಮೂಡುತಿರೆ
ಆಗಸಕು ಆಗುತಿದೆ, ಪ್ರಸವದಭಿಲಾಷೆ!

ಸೈಕಲಿನ ಹುಡುಗ, ಕಡಲೆ ಮಾರುವ ಮುದುಕ
ಹೂ ಹುಡುಗಿ- ಎಲ್ಲರೂ ನಿಂತಿಹರು ಮರದ ಕೆಳಗೆ
ಒದ್ದೆಯಾದೇವೆಂಬ ಚಿಂತೆಯಿದ್ದಂತಿಲ್ಲ
ಮಳೆಯ ಪ್ರತಿಫಲನವಿದೆ, ಕಣ್ಣಪಾಪೆಗಳೊಳಗೆ.

ನಾನು ಹೊರಟಿದ್ದೇನೆ, ಅಲ್ಲಿ- ರಸ್ತೆಯ ಕಡೆಗೆ
ತೋಯ್ದು ಬಿಡಲೆನ್ನನು, ಮಳೆಯು ಕುಂಭದ್ರೋಣ.
ಒಳಗಿರುವರೆಲ್ಲ ಅಲ್ಲೆ ಇರಿ, ಬರಿದೆ ಕನಸುತ್ತ,
ಇಷ್ಟವಿದ್ದರೆ ಬನ್ನಿ- ಜೊತೆಗೆ ನೆನೆಯೋಣ!

28 ಕಾಮೆಂಟ್‌ಗಳು:

Susheel Sandeep ಹೇಳಿದರು...

"ಆಗಸಕು ಆಗುತಿದೆ, ಪ್ರಸವದಭಿಲಾಷೆ!" sooper expression.

oppisikoMDvi swami :) tuMbA iShTa Aytu

Srikanth - ಶ್ರೀಕಾಂತ ಹೇಳಿದರು...

"ಇಷ್ಟವಿದ್ದರೆ ಬನ್ನಿ- ಜೊತೆಗೆ ನೆನೆಯೋಣ"

ನಾನೂ ಬರ್ತೀನಿ ನೆನೆಯಕ್ಕೆ! ಮಳೆಯಲ್ಲಿ ನೆನೆಯಕ್ಕೆ ಖುಷಿಯಾಗತ್ತೆ. ಈ ಕವನ ಓದಕ್ಕೆ ಇನ್ನೂ ಖುಷಿಯಾಗತ್ತೆ!

ಸಿಂಧು sindhu ಹೇಳಿದರು...

ನಿಧಿ,

ತುಂಬ ಚೆನಾಗಿದೆ. ಪ್ರಸವದಭಿಲಾಷೆ.. ! :) ಇದು ಕಷ್ಟಕರ. ಪ್ರಸವದ ನಂತರದ ಕ್ಷಣಗಳು ಮತ್ತು ಮುನ್ನಿನ ದಿನಗಳು ಖುಶಿಯಾಗಿರುತ್ತವಾಗಲೀ.. ಆ ಕ್ಷಣ ಭಯಾವಹ ಎಂದಂದುಕೊಂಡಿದ್ದೀನಿ.. ಎನಿವೇ ಇದು ತಮಾಷಿಯ ಮಾತಾಯಿತು.

ಕವಿತೆ ಹನಿಹನಿಯಾಗಿ ಸುರಿದೂ ಇಡಿಯಾಗಿರುವ ಮಳೆಯ ಹಾಗೇ ಹಿತವಾಗಿದೆ.
ಒದ್ದೆಯಾದೇವೆಂಬ ಚಿಂತೆಯಿದ್ದಂತಿಲ್ಲ, ಮಳೆಯ ಪ್ರತಿಫಲನವಿದೆ, ಕಣ್ಣಪಾಪೆಗಳೊಳಗೆ. ಎಷ್ಟು ಚಂದದ ಅಭಿವ್ಯಕ್ತಿ.

ನಿನ್ನ ಕವಿತೆ ಓದಲು ತುಂಬ ಖುಶಿಯಾಗುತ್ತದೆ. ಇಲ್ಲಿ ಮನದ ಜಗುಲಿಯಲ್ಲಿ ಕೂತು ನೀನಲ್ಲಿ ಕವಿತೆಯ ಮಳೆಯಲ್ಲಿ ತೋಯುವುದನ್ನ ನೋಡಿ ಮನಸ್ಸು ಅರಳುತ್ತಿದೆ.

ಧನ್ಯವಾದಗಳು ಈ ಜೀವನಪ್ರೀತಿಯ ಕವಿತೆಗೆ.

ಪ್ರೀತಿಯಿಂದ
ಸಿಂಧು

ಅಮರ ಹೇಳಿದರು...

ಒಂದು ವಾರ ಆತು ನೋಡು.... ಬರಿ ಮೋಡಗಳ ಕಣ್ಣಾ ಮುಚ್ಚಾಲೆ ಆತು .....ನಾಲ್ಕು ಹನಿ ಹನ್ಸಿ ಮಾಯವಾಗ್ತಾದ...ಈ ಕವನದ ಹಾಗೆ ಮಳೆನು ಬರ್ಲಿ ಮಾರಾಯ ಬೇಗ.... :)

ಅನಾಮಧೇಯ ಹೇಳಿದರು...

Dosta,

Super kavana..
Intaddela hege holitu eenuvuda ariva abhilashe :)

-Chin

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ಶ್ರೀನಿಧಿ...
ಪ್ರತಿಸಾಲೂ ಒಂದೊಂದು ಹನಿಯಾಗಿ ಸುರಿವಾಗ ಯಾವ ಹನಿಯಲ್ಲಿ(ನ್ನು) ನೆನೆವುದೋ ....
ಒಟ್ಟಾರೆ ಮಳೆ....
ಸಂತಸ...
ಮಕ್ಕಳಂದದಿ ಮಳೆಯಲ್ಲಿ ಮೆರೆಯಲು...
ನಾನೂ ಎಲ್ಲರೊಡನೆ...
ಈ ಮಳೆ ಆಡಲೂಬಹುದು ಹಾಡಲೂಬಹುದು...ಬಲುಚಂದ.

ಶ್ರೀನಿಧಿ.ಡಿ.ಎಸ್ ಹೇಳಿದರು...

ಸುಶೀಲ್,
ಧನ್ಯವಾದಗಳು:) ಬರ್ತಾ ಇರಿ, ಹೀಗೇ..

ಶ್ರೀಕಾಂತ್,
ಥ್ಯಾಂಕ್ಸೂ:)

ಸಿಂಧಕ್ಕಾ,
ನೀ ಹೇಳಿದ್ ವಿಶ್ಯ ಹೌದು ನೋಡು!:) ನಮ್ಗೆ ಅನುಭವ ಆಗ್ದೇ ಇರೋದ್ರಿಂದ, ಇಂತಹ ತಪ್ಪುಗಳು(?) ಸಂಭವ್ಸೋ ಚಾನ್ಸು ಜಾಸ್ತಿ! ನಿನ್ ಪ್ರೀತಿಯ ಕಮೆಂಟ್ ಗೆ ವಂದೇ!

ಅಮರ,
ಹೌದಲೇ ಅಣ್ಣಾ, ಇಂದಾದರೂ ಬರಲಿ ಮಳೆ!

ಚಿನ್ಮಯಾ,
ಎಂತೇನ, ತಲಿಗ್ ಬತ್ತು, ಬರಿತಿ:)

ಶಾಂತಲಾ ಮೇಡಮ್,
ಮಳೆ ಅಂದ್ರೆ ಇಷ್ಟ ನಂಗೆ, ಅದ್ಕೇ, ಇಂತದ್ದೆಲ್ಲ :)ಕವನ ಮೆಚ್ಚಿಕೊಂಡಿದ್ದಕ್ಕೆ ಧನ್ಯ.

Prakash Shetty ಹೇಳಿದರು...

ಏನ್ ಸ್ವಾಮಿ ನಮ್ಮನ್ನಾ ಉರಿಸ್ತಾ ಇದ್ದೀರಾ...

ಹಳ್ಳಿಯಿಂದ ಬಂದ ಈ ಹುಡ್ಗಂಗೆ ಈ ದೆಲ್ಲಿಯಲ್ಲಿ ನೆನೆಯೋ ಆಸೆ... ಉಫ್.....

ಏನ್ ಮಾಡ್ಲಿ.. ಮಳೆಯೇ ಇಲ್ವಲ್ಲಾ..

ಹಾ... ಟೀವೀಲಿ ನ್ಯೂಸ್ ಬಂತಾ.. ದೆಲ್ಲೀಲಿ ಸಖ್ಖತ್ ಮಳೆ ಅಂತಾ...

ಬಿಡ್ರೀ... ಅದೆಂತಾ ಮಳೆ.... ನಮ್ಮೂರ್ನಾಗೆ ... ತುಂತುರು ಮಳೆ ಅಂತೀವಲ್ಲಾ... ಅದೆ... ಚಿಕ್ಕ ಮಳೆ ಅದೆ.. ಈ ಊರ್ನೋರಿಂಗೆ 108 ವರುಷದಂಗೆ ಅತ್ಯಂತೆ ಹೆಚ್ಚು ಅಂತೆ....!!!!

ಅನಾಮಧೇಯ ಹೇಳಿದರು...

super super.... you hve given a new thought ಕಣೋ. ಆಗಸನ ಯಾವಾಗಲು male element ಥರಾನೇ ನೋಡಿದಾರೆ.this is sumthing new nd appealing ಇಲ್ಲಿ ಆಕಾಶ ಹುಡುಗಿ! ಕುಶಿ ಆಗ್ತಿದೆ... ಮತ್ತೆ ಮತ್ತೆ Oding...

ಅನಾಮಧೇಯ ಹೇಳಿದರು...

tumba dinagaLa nantra ninna kavite odta iddi... chendiddu. illi maLene ille. ninna kavite odidmele kanna munde maLegala esht chendanapa anstu... barita iri. abhinandanegaLondige...

ರಂಜನಾ ಹೆಗ್ಡೆ ಹೇಳಿದರು...

super shree. nice poem.
matte maLe gaMdhi bazar lli aagada. haMgaadare naanu neniyake baradille ille niMte noDthi.

ತೇಜಸ್ವಿನಿ ಹೆಗಡೆ ಹೇಳಿದರು...

"ಭುವಿಯೆಡೆಗೆ ಹೊರಟಿಹುದು, ಮಳೆಯ ಮೇನೆ."
ವ್ಹಾಹ್! ತುಂಬಾ ಸುಂದರ ಕಲ್ಪನೆ ಶ್ರೀನಿಧಿ. ನಂಗಂತು ಮಳೇಲಿ ನೆನೆಯದು ಅಂದ್ರೆ ಪಂಚಪ್ರಾಣ.. ಆದ್ರೆ ಈಗ ನಾ ನೆನೆಯಲ್ ಹೋದ್ರೆ ಪುಟ್ಟೀನೂ ಬತ್ತು.. ಹಾಂಗಾಗಿ.. ಕಲ್ಪನೆಯ ಕಣ್ಣಿನ ಮೂಲಕ ಮಳೆಯಲ್ಲಿ ನೆನೆವ ಕನಸ ಕಾಣ್ತಿ.. ಸುಂದರ ಕವನ. ಮತ್ತಷ್ಟು ಬರಲಿ.

ಅನಾಮಧೇಯ ಹೇಳಿದರು...

ಸುಮ್ಮನೆ ಮುಂದೆ ಹೋಗೋದ್ ಬಿಟ್ಟು, ಇಷ್ಟ ಆಗ್ಲಿಲ್ಲ ಅಂತ ಹೇಳೋಕ್ ನಿಂತೆ.
ಇನ್ನೂ ಚೆನ್ನಾಗಿ ಬರೀ ಬಹುದಿತ್ತು :(

Annapoorna Daithota ಹೇಳಿದರು...

Maleyashte chennaagide kavana... naanoo barteeni nenyokke :) baduku sundaravagide allave :)

ಅಂತರ್ವಾಣಿ ಹೇಳಿದರು...

ಶ್ರೀನಿಧಿಯವರೆ,

ತುಂಬಾ ತುಂಬಾ ಚೆನ್ನಾಗಿದೆ!!!

ಶ್ರೀನಿಧಿ.ಡಿ.ಎಸ್ ಹೇಳಿದರು...

ಪ್ರಕಾಶರೇ, ಪಾಪ:) ನಿಮ್ಮ ಬಗ್ಗೆ ನನ್ನ ಸಹಾನುಭೂತಿಯಿದೆ! ಬಂದು ಬಿಡಿ ಊರಿಗೆ!

ಮಲ್ನಾಡ್ ಹುಡ್ಗೀ, ಥ್ಯಾಂಕ್ಸೂ!:) ಏನೋ, ಹೀಗೂ ಬರೆಯಬಹುದಲ್ಲ ಅಂತ ಅನ್ನಿಸಿತು..

ಅನಾನಿಮಸ್ ವ್ಯಕ್ತಿಗೆ- ಧನ್ಯವಾದಗಳು, ನನಗೆ ಮಳೆ ಅನ್ನುವ ಪದವೇ ಹೊಸ ಹುರುಪು ಕೊಡುತ್ತದೆ.

ಅರೇರೆ ರಂಜನಾ ಮೇಡಮ್ಮು- ನನ್ನ ಬ್ಲಾಗು ಪಾವನವಾಯ್ತು:)ಕಮೆಂಟಿಸಿದಕ್ಕೆ ಧನ್ಯ!

ತೇಜಸ್ವಿನತ್ಗೇ, ಪುಟ್ಟಿ ನೋಡಲೆ ಬರಕಾತು ನೋಡು ಒಂದ್ ದಿನ!:), ಪುಟ್ಟಿ ಕರ್ಕಂಡೇ ನೆನಿಯೇ, ಎಂತೂ ಆಗ್ತಿಲ್ಲೆ!

ಶ್ರೀನಿಧಿ.ಡಿ.ಎಸ್ ಹೇಳಿದರು...

ಅನಾನಿಮಸ್,

ನಿಮ್ಮ ಅಭಿಪ್ರಾಯ ನನ್ನದೂ,ಪ್ರತಿ ಬರಹದ ನಂತರ ಇದನ್ನ ಮತ್ತೂ ಚಂದ ಮಾಡಬಹುದು ಅನ್ನಿಸುತ್ತದೆ! ಹೆಸರಿನ ಸಮೇತ ಕಮೆಂಟಿಸಿದ್ದರೆ, ನಾನೇನು ತಪ್ಪು ತಿಳಿದುಕೊಳ್ಳುವುದಿಲ್ಲ!:)

ಅಕ್ಕಾ,

ಜೈ , ಬೇಗ್ ಬಂದ್ ಬಿಡು..

ಅಂತರ್ವಾಣಿ,

ಥ್ಯಾಂಕ್ಸು, ಹೀಗೇ ಬರ್ತಾ ಇರಿ.

Srinivasa Rajan (Aniruddha Bhattaraka) ಹೇಳಿದರು...

suuper kavana.. tumba khushi aaytu Odi.. :)

ಅನಾಮಧೇಯ ಹೇಳಿದರು...

heyyy blog header haakida photo suuuuuper...enu kavana oodi comments baryo bittu design bagge comments heLtidini anta anstirbeku alwa :) comments modale bardidni sir

ಶ್ವೇತ ಹೇಳಿದರು...

kavana nangishta aytu.

Lakshmi Shashidhar Chaitanya ಹೇಳಿದರು...

ಕೆಳಗೆ ರಸ್ತೆಯ ಮೇಲೆ, ಚಕ್ರವೇಗವು ಜೋರು
ಮನೆಗೆ ಸೇರುವ ತವಕ ಸಹಜ ತಾನೆ,
ಹಲವು ಬಣ್ಣದ ಬಾನು, ದಟ್ಟ ಕಪ್ಪಾಗುತಿದೆ
ಭುವಿಯೆಡೆಗೆ ಹೊರಟಿಹುದು, ಮಳೆಯ ಮೇನೆ

ಆಹಾ....ಸಖತ್ತಾಗಿದೆ ಏ stanza ! ಮಿಕ್ಕವೂ equally ಸೂಪರ್ರೆ ! ಮಳೇಲಿ ನೆನೀಬೇಕು ಅಂತ ನನಗೂ ಆಸೆ ಆಯ್ತು !

Unknown ಹೇಳಿದರು...

Dosta...... Nice Kavite.... Good one....

VENU VINOD ಹೇಳಿದರು...

olleya kavana....maLe bagge eshtu baredrooo mugiyalla :)

Shree ಹೇಳಿದರು...

Thamma blogannu anonymoussugaLige commenT maDalaaradanthe close maaDidare uttama...!

Kavithe innu chennaagi bareyabahudittu... Idakkintha gaandhi bajaar maLedu chennaagide. aadru maLe andre mugeeth bidi.

ಮನಸ್ವಿನಿ ಹೇಳಿದರು...

ಶ್ರೀನಿಧಿ,

ಚಂದದ ಕವಿತೆ.ಎಲ್ಲ ಚಿತ್ರಣಗಳೂ ಇಷ್ಟವಾದವು. ಓದಿ, ಮಳೆಯಲ್ಲಿ ನೆಂದಂಥ ಅನುಭವ.ಖುಶಿಯಾಯ್ತು ಕಣೊ. ಬರೀತಾ ಇರು.

jomon varghese ಹೇಳಿದರು...

ಚೆಂದದ ಕವಿತೆ, ಮಳೆಯಲ್ಲಿ ತೋಯ್ದಂತಾಯಿತು.

ಶ್ರೀನಿಧಿ.ಡಿ.ಎಸ್ ಹೇಳಿದರು...

ಗಂಡಭೇರುಂಡರೇ,
ನಿಮ್ಮಂತಾ ಕವಿಗಳು ಮೆಚ್ಚಿಕೊಂಡರೆ, ಮತ್ತೇನು ಬೇಕು!ಥ್ಯಾಂಕ್ಸು..

ಅನಾನಿಮಸ್,
ಥ್ಯಾಂಕ್ಸ್!

ಶ್ವೇತಾ,

ಧನ್ಯ!


ಲಕ್ಷ್ಮೀಜೀ,
ನೆಂದ್ ಬಿಡಿ ಮತ್ತೆ! ಶುಭವಾಗಲಿ:)

ಮಹೇಶೂ, ಥ್ಯಾಂಕ್ಸಣಾ!

ಶ್ರೀನಿಧಿ.ಡಿ.ಎಸ್ ಹೇಳಿದರು...

ವೇಣು,
ಅಂದಂತೂ ಸತ್ಯ. ಪ್ರತಿ ಮಳೆಗೂ ಹೊಸ ವಿಶ್ಯ ಹೊಳಿಯತ್ತೆ, ಏನೋ ನೆನಪು ಕೆದಕಲ್ಪಡತ್ತೆ..


ಶ್ರೀ,

ಹೆಚ್ತಾ ಇರೋ ಅನಾನಿಮಸ್ ಕಮೆಂಟ್ ನೋಡದ್ರೆ ನಂಗೊ ಹಾಂಗೇ ಅನ್ಸ್ತಿದೆ:) ಹಮ್, ಇರಬಹುದೇನೋ.. ಅದನ್ನ ಬರೆದ ಕಾಲ- ಸಮಯ- ಪರಿಸ್ಥಿತಿಗೂ, ಇದಕ್ಕೂ ವ್ಯತ್ಯಾಸ ಇರೊದ್ರಿಂದ...

ಮನಸ್ವಿನಿ ಮೇಡಮ್ಮೂ, ಹಾರಯಿಕೆಗೆ ವಂದನೆಗಳು:)

ಜೋಮನ್ ಜೀ,
:)ಅಷ್ಟಾದರೆ ಸಾರ್ಥಕ!