ಭಾನುವಾರ, ಜುಲೈ 19, 2009

ಖುಷಿಗೊಂದು ಪದ್ಯ-೨

ರತ್ನಗಂಧಿಯ ಹಳದಿ
ನೆನೆದಿದೆ ಅಂಗಳದ ಅಂಚಲ್ಲಿ
ತುಂಬೆ ಗಿಡ ತುಂಬೆಲ್ಲ
ತೊನೆವ ಕೆಂಪು

ಹನಿಗೀತ ಹಾಡುತಿವೆ
ಕೆಸುವಿನೆಲೆಗಳ ಮೇಳ
ಗದ್ದೆಬದುವಿನ ಮೇಲೆ
ಕೊಕ್ಕರೆಯ ಹುಡುಕು

ನೀರದಾರಿಯ ಕೆಳಗೆ
ಫಳ್ಳ ಹೊಳೆಯುವ ಕಲ್ಲು
ಬೆಟ್ಟ ತಪ್ಪಲ ಬಳಿ
ಒದ್ದೆ ನವಿಲುಗರಿ

ಕರಗುಮಣ್ಣಿನ ಮೇಲೆ
ಬಿರಿದ ಮೊಳಕೆ
ಧರೆಯಂಚ ಗಿಡದೊಳಗೆ
ನೀಲಿಹೂವು

ದೂರಗದ್ದೆಯಲಿ
ನಟ್ಟಿತಂಡದ ಗೌಜು
ಅವರ ಹಾಡಿನ ಹುರುಪು
ನನ್ನೊಳಗೆ ಕೂಡ.



ಖುಷಿಗೊಂದು ಪದ್ಯ-೧

2 ಕಾಮೆಂಟ್‌ಗಳು:

sunaath ಹೇಳಿದರು...

ಖುಶಿ ತುಂಬಿದ ಮನಸ್ಸಿಗೆ ಸುತ್ತಲೆಲ್ಲ ಖುಶಿಯೇ ಕಾಣುತ್ತದೆ. ಕವನದಲ್ಲಿ ಆ ಸೊಬಗು ತುಂಬಿದೆ.

ಸುಪ್ತದೀಪ್ತಿ ಹೇಳಿದರು...

ಖುಷಿಯ ಪಲ್ಲವಿಗಳ ಪಲ್ಲವದೊಳಗೆ ಯಾರೋ ಕಾಣುತ್ತಿದ್ದಾರಲ್ಲ!? ಯಾರದು ಬಂದವರು ಬಾಗಿಲೊಳಗೆ?