ಮದ್ರಾಸ್ ಐ ಆದಂತಿದ್ದ ಕೆಂಪು ಕಣ್ಣುಗಳನ್ನ ಬಿಡಿಸಿ ಎದ್ದು ಕೂತ ಅವನು. ಭಾನುವಾರ ಬೆಳಗ್ಗೆ ಐದೂವರೆಗೆ ಆತನ ವೃತ್ತಿ ಜೀವನದಲ್ಲೇ ಎಂದೂ ಎದ್ದು ಗೊತ್ತಿರಲಿಲ್ಲ. ಮೊಬೈಲ್ ನಲ್ಲಿ ಮೂರು ಮೂರು ಬಾರಿ ಅಲರಾಮು ಹೊಡಕೊಂಡಿತ್ತು. ದೂರದ ಸಂಬಂಧಿ ಸುಧಾಕರ ಆತ ನಡೆಸುತ್ತಿರುವ ದೇವಸ್ಥಾನದ ಪೂಜೆಗೆ ಸಹಾಯ ಮಾಡಲು ಬಾ ಅಂದಿದ್ದರಿಂದ ಹೋಗದೆ ವಿಧಿಯಿಲ್ಲ. ಯಾಕಂದರವನ ಓದು ಮುಗಿಸಲು ಸಹಾಯ ಮಾಡಿದ್ದು ಇದೇ ಸುಧಾಕರನ ಅಪ್ಪ, ಮತ್ತು ಇವನು ಹಳ್ಳಿಯ ತನ್ನ ಮನೆಯಲ್ಲಿ ಪಿ ಯು ಸಿ ಓದಿ ಮುಗಿಸುವವರೆಗೊ, ತಂದೆಯ ಜೊತೆ ಪೌರೋಹಿತ್ಯಕ್ಕೆ ಸಹಾಯ ಮಾಡಲು ಹೋಗುತ್ತಿದ್ದ ವಿಚಾರ ಮನೆತನಕ್ಕೆಲ್ಲ ತಿಳಿದುದೇ ಆಗಿತ್ತು. ತನಗೀಗ ಅದೆಲ್ಲ ಅಭ್ಯಾಸವಿಲ್ಲ ಅಂತ ಅದೂ ಇದೂ ಕುಂಟು ನೆಪ ಹೇಳಿದರೂ ಆ ಪುಣ್ಯಾತ್ಮ ಇವನನ್ನ ಬಿಡಲು ತಯಾರಿರಲಿಲ್ಲ. ಹೇಗೋ ಎದ್ದು, ಮುಖ ತೊಳೆದು ನಿದ್ದೆಗಣ್ಣಲ್ಲೇ ಬೈಕಿನ ಕೀ ಎತ್ತಿಕೊಂಡು ಹೊರಬಿದ್ದ.
ಚಳಿಯೆಂಬುದು ಇವನ ನಿದ್ರೆಯನ್ನ ಮುರುಟಿ ಹಾಕಿತು, ಆ ಕ್ಷಣದಲ್ಲೇ.ನೆಂಟ ಹೇಳಿದ ದಾರಿಯನ್ನ ಆಗಾಗ ನೆನಪು ಮಾಡಿಕೊಳ್ಳುತ್ತಾ, ಕೆಟ್ಟ ಚಳಿಗೆ ಬೈದುಕೊಂಡು, ದೇವಸ್ಥಾನದ ಬಳಿ ಬಂದಾಗ ಗಂಟೆ ಆರೂ ಕಾಲು. ದಿನ ನಿತ್ಯ ಕಂಪೆನಿ ವಾಹನದಲ್ಲೇ ಓಡಾಡುತ್ತಿದ ಅವನಿಗೆ, ಬೆಳಗಿನ ಚಳಿಯ ಬೆಂಗಳೂರು ಹೊಸದು, ಅದೂ ಬೈಕಿನ ಮೇಲೆ. ಪ್ರತಿ ವಾರಾಂತ್ಯಗಳಲ್ಲಿ ಅವನು 'ಅವಳನ್ನು' ಕರಕೊಂಡು ಶಾಪಿಂಗ್ ಮಾಲುಗಳಿಗೆ ಹೋಗುವಾಗ ಮಾತ್ರ ಬೈಕನ್ನ ಬಳಸುತ್ತಿದ್ದ, ಮತ್ತು ಇವತ್ತು ಮೊದಲ ಬಾರಿ ಬೇರೆಯದೇ ಉದ್ದೇಶಕ್ಕೆ ಬಳಕೆ ಆಗಿತ್ತು! ಸ್ಪೀಡೋಮೀಟರು ನೋಡಿಕೊಂಡ, ೧೮ ಕಿಲೋಮೀಟರು ಪ್ರಯಾಣವಾಗಿತ್ತು. ಪ್ರಾಯಶ: ಇದು ಬೆಂಗಳೂರಿನ ಇನ್ನೊಂದು ತುದಿಯಿರಬೇಕು ಅಂತ ಆಲೋಚನೆ ಮಾಡುತ್ತ ದೇವಳದ ಬಳಿ ಬಂದ ಆತ.
ಈ ದೇವಸ್ಥಾನಕ್ಕೆ ಯಾವತ್ತೋ ಬಂದ ನೆನಪು.. ಹಾ.. ಹಿಂದೆ ಎಂಜಿನಿಯರಿಂಗ್ ಪಾಸಾದಾಗ ಅಪ್ಪನ ಜೊತೆ ಇಲ್ಲಿಗೆ ಬಂದು ಪೂಜೆ ಮಾಡಿಸಿರಬೇಕು ಅಂತಂದುಕೊಳ್ಳುತ್ತಾ, ಬೈಕನ್ನ ದೇವಸ್ಥಾನದ ಗೋಡೆ ಪಕ್ಕಕ್ಕೆ ನಿಲ್ಲಿಸಿದ. ವರ್ಷಕ್ಕೊಂದು ಕೆಲಸ ಬದಲಾಯಿಸುವ ಈ ಸಾಫ್ಟ್ ವೇರ್ ಯುಗದಲ್ಲೂ, ಈ ಪುಣ್ಯಾತ್ಮ, ಬೆಂಗಳೂರಿನ ಕೊಂಪೆಯೊಂದರಲ್ಲಿ ಕಳೆದ ಎಂಟು- ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದಾನೆ, ಅದೂ ದೇವಸ್ಥಾನವೆಂಬ ಅತೀ ಬೋರು ಬರುವ ಜಾಗದಲ್ಲಿ! ಬಹಳಾ ದೊಡ್ಡ ಸಾಧನೆಯೇ ಅಂತ ತಲೆ ಕೊಡವಿಕೊಂಡು ಒಳ ಹೆಜ್ಜೆ ಇಟ್ಟ.ದೇವಸ್ಥಾನದ ಬಾಗಿಲಲ್ಲೆ ಇದ್ದ ಸುಧಾಕರ, ಭರ್ಜರಿ ಮಡಿ ಉಟ್ಟುಕೊಂಡು, ದೊಡ್ಡ ಹೊಟ್ಟೆಯ ಜೊತೆಗೆ. ಆ ವೇಷದಲ್ಲಿ ಅವನಂತೂ ಹಳೆಯ ಕನ್ನಡ ಪೌರಾಣಿಕ ಸಿನಿಮಾದ ರಾಕ್ಷಸ ರಾಜನಂತೆ ಕಾಣುತ್ತಿದ್ದ. ಒಳ ಬರುತ್ತಿದ್ದ ಇವನನ್ನ ನೋಡಿ, ತನ್ನ ಅಷ್ಟೂ ಹಲ್ಲು ತೋರಿಸುತ್ತಾ ಇವತ್ತು ಮುಖ್ಯ ಅರ್ಚಕರಿಲ್ಲ, ಭಾನುವಾರ ಬಹಳ ಜನ, ನನ್ನ ಪರಿಚಯದವರಾರು ಸಿಗುವುದಿಲ್ಲ,ಇಂದು ಬಹಳಾ ಕಾರ್ಯಕ್ರಮಗಳಿರುತ್ತವಾದ್ದರಿಂದ....ಎಂದೆಲ್ಲಾ, ಹಿಂದೆ ಕರೆಯುವಾಗಲೇ ಕೊರೆದಿದ್ದ ವಿಷಯಗಳನ್ನೇ ಹೇಳಿ ಮುಗಿಸಿದ.
ಇವನೆ, ಸ್ನಾನ ಆಯ್ತಾ? ಮುಖ ನೋಡಿದರೆ ಆಗಿಲ್ಲ ಅಂತ ಗೊತ್ತಾಗುತ್ತದೆ, ತಡಿ, ಟವಲು ಕೊಟ್ಟೆ, ಬಾವಿ ಅಲ್ಲಿದೆ, ನೀನು ಸ್ನಾನ ಮಾಡುವಷ್ಟರಲ್ಲಿ ನಾನು ಅವಲಕ್ಕಿ ಉಪ್ಪಿಟ್ಟು ತಂದಿಟ್ಟು, ಮಡಿ ರೆಡಿ ಮಾಡಿದೆ" ಅಂದ, ಒಂದೇ ಉಸಿರಿನಲ್ಲಿ! "ಬಾವಿ, ಅವಲಕ್ಕಿ, ಉಪ್ಪಿಟ್ಟು, ಮಡಿ" ಇತ್ಯಾದಿ ಶಬ್ದಗಳೆಲ್ಲ ಬಹಳ ಕಾಲದ ಮೇಲೆ ಕಿವಿಗೆ ಬಿದ್ದಂತಾಗುತ್ತಿತ್ತು ಅವನಿಗೆ. ಏನೋ ಕಿರಿಕಿರಿ ಜೊತೆಗೆ.. ಒಹ್, ನಿದ್ದೆಗಣ್ಣಲ್ಲಿ ಹೊರಟು ಬಂದಾತನಿಗೆ ಮೊಬೈಲು ತರುವುದೇ ಮರೆತು ಹೋಗಿತ್ತು.. ಆಹ್, ಇದೆಲ್ಲಿಗೆ ಬಂದು ಸಿಕ್ಕಿಕೊಂಡೆನಪ್ಪಾ ಅಂತ ಆಲೋಚಿಸುತ್ತಲೇ ಬಟ್ಟೆ ಬಿಚ್ಚಿಟ್ಟು , ಕೊಟ್ಟ ಟವಲು ಸುತ್ತಿ , ಕೊಡಪಾನವನ್ನ ಗಟ್ಟಿಯಾಗಿ ಕುಣಿಕೆಗೆ ಸಿಕ್ಕಿಸಿ ಬಾವಿಗೆ ಇಳಿಸಿದ.
ಹತ್ತಾರು ವರ್ಷಗಳ ಹಿಂದೆ ಮನೆಯಲ್ಲಿ ಇದೇ ತರ ಸ್ನಾನಗಳಾಗುತ್ತಿದ್ದವು.ಮನೆಗೆ ಹೋಗದೇ ೩ ವರ್ಷ ಆಯ್ತು, ಅಬ್ಬಾ! ಈ ಬಾವಿ ಬಹಳ ಆಳ..... ಸೋಪೇ ಇಲ್ಲವಲ್ಲ?.. ಕಡೆಯ ಬಾರಿ ಹೋಗಿ ಬಂದಿದ್ದಾದರೂ ಒಂದು ದಿನದ ಮಟ್ಟಿಗೆ.. ಅಜ್ಜ ಸತ್ತಾಗಲಲ್ಲವೇ..ಸೋಪಿಲ್ಲದೇ ಕೊಳಕು ಹೋಗೋದು ಹೇಗೆ?.. ರೂಮಲ್ಲಾದರೆ ಗೀಸರ್ ಇತ್ತು, ಬೆಚ್ಚಗೆ ಸ್ನಾನ ಮಾಡಿಕೊಂಡು ಬರಬಹುದಿತ್ತು..ಅವಲಕ್ಕಿ?.. ಮನೆಲಿ ಒಂದು ಕಾಲದಲ್ಲಿ ಅದನ್ನೇ ದಿನಾ ತಿನ್ನುತ್ತಿದ್ದೆನಾ?, ಅಮ್ಮ ನೀರಲ್ಲಿ ನೆನೆ ಹಾಕಿ ಕೊಡ್ತಾ ಇದ್ದಂತೆ ನೆನಪು.. ನೀರು ಭಾರಿ ತಣ್ಣಗಿದೆ... ಅರೆ, ಜ..ಜನಿವಾರ ಎಲ್ಲಿ?!! ಯಾವತ್ತೋ ಹರಿದು ಹೋಗಿದೆ, ಅವಳ ನೆಕ್ಲೇಸ್ ಗೆ ಸಿಕ್ಕಿ! ಥತ್! ಈಗ ಇಲ್ಲಿ ಕೇಳೋ ಹಾಗೂ ಇಲ್ಲ! ಮನೆಗೆ ಸುದ್ದಿ ಹೋಗುತ್ತದೆ. ಭಟ್ಟರ ಮಗ ಜನಿವಾರ ಕಿತ್ತು ಬಿಸಾಕಿದ್ದಾನೆ ಎಂದರೆ ಅಪ್ಪ ಆತ್ಮಹತ್ಯೆ ಮಾಡಿಕೊಂಡಾರು!..ತಲೆ ವರೆಸಿ,ಮಡಿ ಉಟ್ಟು ಕೊಂಡು, ಎಚ್ಚರದಲ್ಲಿ ಶಾಲು ಹೊದ್ದುಕೊಂಡ ಮೈ ತುಂಬಾ.
ಬಾಳೆಯೆಲೆಯ ಮೇಲೆ ಉಪ್ಪಿಟ್ಟು- ಅವಲಕ್ಕಿ ಹಾಕಿಟ್ಟಿದ್ದ ಸುಧಾಕರ. ಯಾಕೋ ತಾನು ಬೇರೆ ಪ್ರಪಂಚಕ್ಕೇನಾದರೂ ಬಂದೆನಾ ಅಂತ ಅನುಮಾನ ಶುರುವಾಯ್ತು ಅವನಿಗೆ. ದಿನಾ ಬೆಳಗ್ಗೆ ಹೋಟೇಲಿನ ಇಡ್ಲಿ ವಡಾ - ಮಧ್ಯಾಹ್ನದ ನಾರ್ತ್ ಇಂಡಿಯನ್ ರೋಟಿ - ತಡ ರಾತ್ರಿಯ ಪಿಜ್ಜಾಗಳ ಲೋಕದಿಂದ ಧುತ್ತೆಂದು ಹೊರ ಬಂದು ಬಿದ್ದಂತಾಗಿತ್ತು. ಹೊಟ್ಟೆಯಲ್ಲಿ ಬೇರೇನೂ ಇಲ್ಲವಾದ್ದರಿಂದ ತಿನ್ನತೊಡಗಿದ. "ಅಪ್ಪ ಆರಾಮಿದ್ದಾರ?" ಸುಧಾಕರ ಕೇಳತೊಡಗಿದ. "ಹಮ್". ಮನೆಗೆ ಫೋನ್ ಮಾಡದೆ ತಿಂಗಳು ಆರಾಯಿತು. ತನ್ನ ಹೊಸ ಮೊಬೈಲ್ ನಂಬರ್ ಮನೆಗೆ ಕೊಟ್ಟಿದ್ದೇನಾ?, ನೆನಪಿಲ್ಲ. "ಅಮ್ಮನ ಕಾಲು ನೋವು ಹೇಗಿದೆ?" ಅರೆ, ಅಮ್ಮನಿಗೆ ಕಾಲು ನೋವು ಯಾವಗಿನಿಂದ?.. "ಈಗ ಕಡಿಮೆ ಇದೆ". "ಮೀನಾಕ್ಷಮ್ಮ ಹೋಗಿಬಿಟ್ರಂತೆ?" ಅಯ್ಯೋ ಈ ಮೀನಾಕ್ಷಮ್ಮ ಯಾರು?! ನನ್ನ ಪಕ್ಕದ ಮನೆ ನಾರಾಯಣ ಭಟ್ರ ಹೆಂಡತಿಯಾ?"ಹೌದಂತೆ, ವಯಸ್ಸಾಗಿತ್ತು ಪಾಪ".. ಇನ್ನು ಕೂತರೆ ಕೆಲಸ ಕೆಡುತ್ತದೆನಿಸಿ, "ಕೈ ಎಲ್ಲಿ ತೊಳೆಯಲಿ"ಎನ್ನುತ್ತಾ ಅಲ್ಲಿಂದೆದ್ದ.
ಈಶ್ವರ ದೇವಸ್ಥಾನ, ಜೊತೆಗೆ ಗಣಪತಿ, ಪಾರ್ವತಿ. ಸುಧಾಕರ ಅದಾಗಲೇ ದೇವರ ಮೇಲಿನ ನೈರ್ಮಾಲ್ಯ ತೆಗೆಯಲಾರಂಭಿಸಿದ್ದ, ಗಣಪತಿಯ ಮೂರ್ತಿಯ ಮೇಲಿಂದ. ಆ ವಿಗ್ರಹ ನೋಡಿದ್ದೇ, ತನ್ನ ಮೈ ಮೇಲೆ ಜನಿವಾರ ಇಲ್ಲವೆಂಬುದು ನೆನಪಾಯಿತು. ಶಾಲನ್ನು ಮತ್ತೊಮ್ಮೆ ಸರಿಪಡಿಸಿಕೊಂಡ. ಸುಧಾಕರನ ಹೊಟ್ಟೆಗೂ ಗಣಪತಿಯದ್ದಕ್ಕೂ ಹೆಚ್ಚಿನ ವ್ಯತ್ಯಾಸ ಕಾಣುತ್ತಿರಲಿಲ್ಲ ಅವನಿಗೆ. "ನೀನಿಲ್ಲೇ ಕೂತು ಒಂದಾರು ದೀಪ ತಯಾರು ಮಾಡು, ನಾನೀಗ ಮನೆಗೆ ಹೋಗಿ ಹಾಲು ತಂದೆ" ಎಂದು ಅತ್ತ ಹೊರಟ ಸುಧಾಕರ. ಎಣ್ಣೆ, ಬತ್ತಿ, ದೀಪಗಳು.. ಅಪ್ಪನ ಜೊತೆಗೆ ಪೂಜೆಗೆ ಹೋದಾಗಲೂ ಇದನ್ನೇ ಮಾಡುತ್ತಿದ್ದೆನಲ್ಲ?, ಬಹಳ ಕಾಲವೇನಾಗಿಲ್ಲ ೬-೮ ವರ್ಷಗಳಷ್ಟೇ.. ಒಹ್, ಇವತ್ತು ಸಂಜೆ ಅವಳನ್ನ ಹೊಸ ಸಿನಿಮಾಕ್ಕೆ ಕರೆದೊಯ್ಯಬೇಕು.ಇಲ್ಲಿಂದ ಬೇಗ ಬಿಡುಗಡೇ ಸಿಕ್ಕಿದ್ದರೆ ಸಾಕಿತ್ತು.. ಚಿಕನ್ ತಿನ್ನದೇ ವಾರವಾಗಿದೆ. ಕೈ ಯಾಕೋ ತಣ್ಣಗಾಯ್ತು, ಎಣ್ಣೆ ಚೆಲ್ಲಿಕೊಂಡಿದ್ದ. ದೇವಸ್ಥಾನದಲ್ಲಿ ಚಿಕನ್ ನೆನಪಾದ್ದು ತಪ್ಪಾ? ಗೊತ್ತಾಗುತ್ತಿಲ್ಲ.
"ಇರ್ಲಿ ಬಿಡು, ನಾನು ಒರೆಸುತ್ತೇನೆ ನೀನು ದೀಪಾನ ಹಚ್ಚಿ ಎಲ್ಲ ದೇವರ ಮುಂದೆಯೂ ಇಡ್ತಾ ಬಾ" ಅಂತಂದ, ಸುಧಾಕರ .ಯಥಾವತ್ತಾಗಿ ಅದನ್ನ ಪಾಲಿಸಲು ಹೊರಟ. ಯಾಕೋ ಎಲ್ಲದೂ ಹೊಸತೆನಿಸುತ್ತಿತ್ತು, ದೇವರ ವಿಗ್ರಹ, ಆ ಎಣ್ಣೆಯ ಕಮಟು ವಾಸನೆ, ಕಾಲಿಗಂಟುವ ಕೊಳಕು, ಮೈಯಲ್ಲ ಹುಳ ಹರಿದಂತನಿಸಿತು. ತಾನು ಮೊದಲಿಂದ ಹೀಗಿರಲಿಲ್ಲವಲ್ಲಾ?!ಕಳೆದ ನಾಲ್ಕೆಂಟು ವರ್ಷದಲ್ಲಿ ನನ್ನ ಆಲೋಚನೆ ಯಾವತ್ತು ಬದಲಾಯಿತು?, ನನಗೇ ಗೊತ್ತಿಲ್ಲದೇ?.. ದೀಪಗಳನ್ನ ಉರಿಸುತ್ತಿದ್ದಂತೆ ಮನಸ್ಸೂ ಉರಿಯುತ್ತಿದೆಯೇನೋ ಅನ್ನಿಸಿತು ಅವನಿಗೆ."ಇನ್ನು ಭಕ್ತಾದಿಗಳು ಬರಲಾರಂಭಿಸುತ್ತಾರೆ, ಗಣಪತಿ ಪೂಜೆಗೆ ಇವತ್ತಿನ ದಿನ ಬಹಳ ವಿಶೇಷವಾದ್ದು, ನಿನಗೆ ಗೊತ್ತಲ್ಲ..".. ಏನೇನೋ ವಿವರಿಸುತ್ತಿದ್ದ ಸುಧಾಕರ.
ಅವನ ಮನಸ್ಸನ್ನ ಆ ಶಬ್ದಗಳು ಮುಟ್ಟುತ್ತಲೇ ಇರಲಿಲ್ಲ. ತಾನು ಬ್ರಾಹ್ಮಣತ್ವ ಬಿಟ್ಟು ಸಮಯ ಎಷ್ಟಾಯಿತು?, ನಾನು ಕೆಲಸದ ಜಂಜಡದಲ್ಲಿ ಬದಲಾದ್ದು ನನಗೇ ತಿಳಿದಿಲ್ಲವೆ? ಇರಲಾರದು,. ಕಂಬಳಿ ಹುಳ ಚಿಟ್ಟೆಯಾದಂತೆ, ತಾನೂ ಕೂಡಾ ಯಾವತ್ತೋ ಪೊರೆ ಕಳಚಿಕೊಂಡು ಅಲ್ಲಿಂದ ಹೊರ ಬಂದಿದ್ದೇನೆ,ರೂಪಾಂತರಗೊಂಡಿದ್ದೇನೆ. ತಿಳಿಯಲೇ ಇಲ್ಲ!...ಹೀಗೇ ಮನಸ್ಸು ಎತ್ತಲೋ ಸಾಗುತ್ತಿತ್ತು. ಅದರಿಂದ ಹೊರ ಬರುವ ಪ್ರಯತ್ನ ಮಾಡಬೇಕೆಂದು ನಿರ್ಧರಿಸಿ, ಅಯ್ಯೋ, ಅದರಲ್ಲಿ ತಲೆ ಕೆಡಿಸಿಕೊಳ್ಳೋದು ಏನಿದೆ, ಮನೆಗೆ ಹೋದರೆ ಸಂಭಾಳಿಸೋಕೆ ತಿಳಿದಿದೆ, ಮತ್ತೇಕೆ ಚಿಂತೆ ಮಾಡಬೇಕು ಬಂದ ಕೆಲಸ ಮುಗಿಸಿ ಹೊರಡು, ಸಾಕು ಅಂತ ಆದೇಶಿಸಿದ, ಮನಸ್ಸಿಗೆ.
ಗಂಧ ತೇಯ್ದು ಕೊಡಲು ಹೇಳಿದ್ದರಿಂದ ಒಂದು ಮೂಲೆಯಲ್ಲಿ ಕೂತು ಆ ಕೆಲಸ ಮಾಡ ತೊಡಗಿದ ಅವನು. ಮತ್ತೊಬ್ಬ ಭಟ್ಟರಾರೋ ಬಂದು ಗಣಹೋಮದ ತಯಾರಿ ನಡೆಸಿದ್ದರು. ಜನ ಒಬ್ಬೊಬ್ಬರಾಗೇ ಬಂದುಕೂಡ ತೊಡಗಿದರು. ಭಾನುವಾರ ಬೆಳಗ್ಗೆ ಇಷ್ಟು ಬೇಗ ಎದ್ದು ಬರುವವರನ್ನ ನೋಡಿ ಆಶ್ಚರ್ಯ !. ಎಲ್ಲರೂ, ದೇವರಿಗೆ, ಸುಧಾಕರನಿಗೆ, ಮತ್ತು ಇವನಿಗೂ ನಮಿಸಿ ಸಾಗತೊಡಗಿದರು. ಜೀವಮಾನ ಇಡೀ ಸಿಗದಷ್ಟು ವಂದನೆ ಅರ್ಧಗಂಟೆಗಳಲ್ಲೇ ಸಿಕ್ಕಿತೇನೋ ಅಂತ ಹೆದರಿಕೆ ಆಗತೊಡಗಿತು! ಜೊತೆಗೇ ತಾನು ಈವರೆಗೆ ತನ್ನ ಟೀಮ್ ಲೀಡು, ಪ್ರೊಜೆಕ್ಟ್ ಮ್ಯಾನೇಜರ್‌ಗಳಿಗೆ ಸಲ್ಲಿಸಿದ ಗೌರವ ಅಷ್ಟೂ ವಾಪಾಸು ಬಂತು ಅಂತಲೂ ಅನಿಸಿ ಖುಷಿ ಆಯಿತು!
ಗಣಹೋಮದ ಹೊಗೆ ಸ್ವಲ್ಪ ಹೊತ್ತಿಗೇ ದೇವಸ್ಥಾನ ತುಂಬಿತು. ಆವತ್ತೊಂದು ದಿನ ಪಬ್ ಒಂದರಲ್ಲಿ ಹುಕ್ಕಾ ಸೇದುವಾಗ ಎಲ್ಲೋ ಈ ತರಹದ ಹೊಗೆ ರೂಮೆಲ್ಲಾ ತುಂಬಿಕೊಂಡದ್ದು ನೆನಪಾಯ್ತು. ಹಿಂದೆಯೇ ಅನ್ನಿಸಿತು, ಅಲ್ಲಾ ,ಅಪ್ಪನ ಜೊತೆ ಪೌರೋಹಿತ್ಯಕ್ಕೆ ಹೋಗುತ್ತಿದ್ದಾಗ ಗಣಹೋಮಕ್ಕೆ ಸಹಕರಿದ್ದು ಯಾಕೆ ನೆನಪಾಗಲಿಲ್ಲ ಮೊದಲಿಗೆ? ಅವಲಕ್ಕಿ, ಅರಳು ಹಾಕಿ, ಬೆಲ್ಲ ಮಿಶ್ರಣ, ಮೇಲೆ ತೆಂಗಿನ ಕಾಯಿ ಹೆರೆದು, ಬಾಳೆಹಣ್ಣು ಕೊಚ್ಚಿ, ಕಬ್ಬಿನ ಹೋಳು ಮಾಡಿ, ಇನ್ನೂ ಏನೇನೂ ನೆನಪಿಗೆ ಬರುತ್ತಿಲ್ಲ.. ಅದನೆಲ್ಲ ಹಾಕಿ ಪ್ರಸಾದ ತಯಾರು ಮಾಡುತ್ತಿದ್ದು ನಾನೇ ಆಗಿತ್ತು! ಅಲ್ಲೇ ನಗು ಬಂದು ಬಿಟ್ಟಿತು ಅವನಿಗೆ. ಎಷ್ಟು ಬಾಲಿಶ ಅಲ್ಲವ ಇದೆಲ್ಲ! ಆವಾಗ ತನಗಿದೆಲ್ಲ ಗೊತ್ತಾಗುತ್ತಿರಲಿಲ್ಲ, ಅಪ್ಪ ಕೊಡುವ ಹತ್ತೈವತ್ತು ರೂಪಾಯಿಗಳು ಮುಖ್ಯವಾಗಿತ್ತು ತನಗೆ. ಮೊನ್ನೆ ಯಾವುದೋ ಹೋಟೇಲಿನಲ್ಲಿ ಐವತ್ತು ರೂಪಾಯಿ ಟಿಪ್ಸ್ ಇಟ್ಟಿದ್ದೆ, ಜೊತೆಗೆ ಅವಳಿದ್ದಳಲ್ಲ, ಅನಿವಾರ್ಯವಾಗಿತ್ತು. ಮತ್ತು ಆ ಐವತ್ತು ಗಳಿಸಲು ಅಂದು ಮೂರು ತಾಸು ಹೊಗೆಯಲ್ಲಿ ಕೂರಬೇಕಾಗುತ್ತಿತ್ತು!
ತೇಯ್ದ ಗಂಧವನ್ನ ಬಟ್ಟಲೊಂದಕ್ಕೆ ತೊಡೆದಿಟ್ಟು ಮುಖ ನೋಡಿದ, ಇನ್ನೇನು ಮಾಡಲಿ ಎಂಬಂತೆ. 'ನೀನು ಆ ಪಾರ್ವತಿಯ ಗುಡಿಯ ಹೊರಗಿರುವ ಬೇಂಚಿನ ಮೇಲೆ ಕೂತು ತೀರ್ಥ - ಪ್ರಸಾದ ಕೊಡೋಕೆ ಶುರು ಮಾಡು, ಜನ ಒಂದು ಕಡೆಯಿಂದ ಬರುತ್ತಾ ಹೋಗುತ್ತಾ ಇರುತ್ತಾರೆ. ಎಲ್ಲರೂ ಏನೂ ಕೊನೇತನಕ ಇರುವುದಿಲ್ಲ, ಬ್ಯುಸಿ ಇರುತ್ತಾರೆ ನೋಡು, ದೇವರ ದರ್ಶನ ಮಾಡಿಕೊಂಡು ಹೊರಡುತ್ತಾರೆ' ಅಂದ ಸುಧಾಕರ. ಆಯಿತು ಅಂತ ಚುಟುಕಾಗಿ ಉತ್ತರಿಸಿ, ಪಾರ್ವತಿ ಗುಡಿ ಕಡೆಗೆ ಹೊರಟ. ಹಾಗೇ ಎದ್ದು ಓಡಿ ಬಿಡೋಣ ಅಂತ ಅನ್ನಿಸತೊಡಗಿತ್ತು ಅವನಿಗೆ. ತನ್ನದಲ್ಲದ ಲೋಕದೊಳಗೆ, ಗೊತ್ತಿದ್ದೂ ಗೊತ್ತಿದ್ದೂ ನಡೆದು ಬಂದು ಈಗ ದಾರಿ ತಪ್ಪಿ ಹೋಗಿದ್ದೇನೆ ಅನ್ನುವ ಅನುಭವ.
ತೀರ್ಥದ ಬಟ್ಟಲು, ಪಕ್ಕದಲ್ಲಿ ಹೂ ತುಂಬಿದ ಹರಿವಾಣ ಇಟ್ಟುಕೊಂಡು, ಹಳೆಯ ಕಬ್ಬಿಣದ ಕುರ್ಚಿಯೊಂದರಲ್ಲಿ ಕೂತವನಿಗೆ ಆಫೀಸಿನ ಮೆತ್ತ ಮೆತ್ತಗಿನ ತಿರುಗುವ ಕುರ್ಚಿ ನೆನಪಾಯಿತು. ಪಕ್ಕದ ಸೀಟಲ್ಲೇ ಕೂರುವ 'ಅವಳು' ನೆನಪಾದಳು.ಇನ್ನು ಏನೇನು ನೆನಪಾಗುತ್ತಿತ್ತೋ ಏನೋ ಯಾರೋ ಬಂದು ಭಟ್ರೇ, ತೀರ್ತಾ ಅಂದರು. ಸರಸರನೆ ಉಧ್ಧರಣೆಯಿಂದ ತೀರ್ಥ ತೆಗೆದು ಕೊಟ್ಟು ಗಂಧ,ಪ್ರಸಾದ ಕೈ ಮೇಲೆ ಹಾಕಿದ, ಯಾವುದೋ ಜನ್ಮದ ನೆನಪಿನಂತೆ.
ಮುಂದಿದ್ದದ್ದು ಬಲಿಷ್ಟ ಅಂಗೈ. ಕೂಲಿ ಕೆಲಸದವನದಿರಬೇಕು. ಜಡ್ಡು ಗಟ್ಟಿತ್ತು. ತಾನು ೨ನೇ ಕ್ಲಾಸಿನಲ್ಲಿದಾಗ ಮನೆ ಎದುರಿನ ಕೆರೆಗೆ ಬಿದ್ದು ಉಸಿರು ಕಟ್ಟಿದಾಗ ತನ್ನನ್ನ ಮೇಲಿತ್ತಿದಂತ ಕೈ. ಮಾದನೆಂದಿರಬೇಕು ಅವನ ಹೆಸರು. ತನ್ನನ್ನ ಹೆಗಲ ಮೇಲೆ ಹೊತ್ತು ತೋಟ ಸುತ್ತಿಸುತ್ತಿದ್ದ ಅವನು. ಕೌಳಿ ಹಣ್ಣು, ಬಿಕ್ಕೆ, ಮುಳ್ಳು ಹಣ್ಣು ಗಳನ್ನ ಕಿತ್ತು ಕೊಡುತ್ತಿದ್ದ , ಇಂತದ್ದೇ ಜಡ್ಡುಗಟ್ಟಿದ ಕೈಲಿ.
ಇನ್ನೊಂದು ಕೈ ಮುಂದೆ ಬಂತು ಅಷ್ಟು ಹೊತ್ತಿಗೆ, ಬೆಳ್ಳನೆಯ ಮೃದು ಹಸ್ತ. ಅದಕ್ಕೂ ತೀರ್ಥವಿತ್ತ. ಹೈಸ್ಕೂಲು ಗೆಳತಿ ಸುಮಾಳ ಕೈಯಂತಿತ್ತು ಈ ಕೈ. ಪ್ರೇಮದ ಮೊದಲ ಸ್ಪರ್ಶದ ಅನುಭೂತಿ ನೀಡಿದ ಕೈ. ತುಂಬ ಬಳೆಗಳಿದ್ದವು, ಸುಮಾಳ ಹಾಗೆಯೇ. ಮಾತು ಹಾಗೆಯೇ ಇದ್ದೀತಾ, ಏನೋ, ಈಕೆ ಮಾತಾಡುತ್ತಿಲ್ಲ. ಸಂಜೆ ಶಾಲೆ ಬಿಟ್ಟ ಮೇಲೆ ಇಂತಹದ್ದೇ ಕೈಯನ್ನಲ್ಲವೇ, ಬಿಗಿಯಾಗಿ ಹಿಡಿದುಕೊಂಡು ಗುಡ್ಡ- ಬೆಟ್ಟ ತಿರುಗಿ , ಕಣ್ಣಲ್ಲೇ ಮಾತಾಡಿಕೊಂದು ಮನೆಗೆ ಹಿಂದಿರುಗುತ್ತಿದ್ದುದು ? ಯಾಕೋ ತಲೆಯೆತ್ತಿ ಒಮ್ಮೆ ಸುಮಳ ನೆನಪ ತಂದವಳ ಮುಖ ನೋಡಬೇಕೆನಿಸಿತು. ಸಾಧ್ಯವಾಗಲಿಲ್ಲ.
ಪುಟ್ಟ ಎಳೆಯ ಕೈಯೊಂದನ್ನ ಅದರಪ್ಪ ಮುಂದೆ ಹಿಡಿಸಿದ್ದ. ತಟಕೇ ತಟಕು ನೀರು ಹಿಡಿವ , ತುಂಬಿದ ಮಳೆಗಾಲದಲ್ಲಿ ಹುಟ್ಟಿದ ತನ್ನ ತಮ್ಮನದೇ ಕೈ. ಮೂರೇ ತಿಂಗಳಿಗೆ ಏನೋ ರೋಗ ಬಂದು ಸತ್ತು ಹೋಗಿ, ತನಗಿದ್ದ ಅಣ್ಣನ ಸ್ಥಾನ ಕಸಿದುಕೊಂಡ ಆ ಮಗುವಿನಂತದ್ದೇ. ಅಮ್ಮ, ಅಪ್ಪ ಎಲ್ಲರೂ ಮಂಕು ಬಡಿದು ಸುರಿಯುತ್ತಿದ್ದ ಮಳೆಯನ್ನೇ ನೋಡುತ್ತಾ, ಮಾತೇ ಇಲ್ಲದೇ ಕೂರುವಂತೆ ಮಾಡಿದ ಪಾಪುವಿನ ತರಹದ್ದೇ ಕೈ. ಈ ಮಗು ನೂರು ವರ್ಷ ಬಾಳಲಪ್ಪಾ ಅಂತ ಹಾರಯಿಸಿ, ಒದ್ದೆಯಾದ ಕಣ್ಣೊರಿಸಿಕೊಂಡ. ಆವನು ಬದುಕಿದ್ದಿದ್ದರೆ, ಏನಾಗುತ್ತಿದ್ದನೋ ಏನೋ. ಅಪ್ಪನಿಗೆ ಸಹಾಯ ಮಾಡುತ್ತಿದ್ದನೇನೋ, ಅಲ್ಲಾ, ತನ್ನಂತೆ ಸಾಫ್ಟ್‌ವೇರ್ ಬದುಕಿಗೆ ಬಂದು ಬಿಡುತ್ತಿದ್ದನೋ. .
ಈ ಬಾರಿ ಎದುರಿಗೆ ಬಂದ ಕೈ ತನ್ನ.. ಅಲ್ಲಲ್ಲ, ತನ್ನಂತಲ್ಲ ದಿನಾ ತನ್ನನ್ನ ದುಡಿಸಿಕೊಳ್ಳುವ ಪ್ರೊಜೆಕ್ಟ್ ಮ್ಯಾನೇಜರನದು.. ಒಮ್ಮೆ ಅವನೇ ಬಂದನೇನೋ ಎಂದು ಗಾಭರಿಯಾಗಿ ಮುಖ ನೋಡಿದ. ಅಲ್ಲ, ಈತ ಯಾರೋ ಮಧ್ಯಮ ವರ್ಗದ ಸಾದಾ ಮನುಷ್ಯ. ಕೊಟ್ಟ ಪ್ರಸಾದಾದಿಗಳನ್ನ ಭಕ್ತಿಯಿಂದ ಕಣ್ಣಿಗೊತ್ತಿಕೊಂಡು ಹೋದ. ನಿತ್ಯ ವ್ಯಂಗ್ಯವಾಡುವ ಅವನೆಲ್ಲಿ, ಈ ಸಾಧು ಪ್ರಾಣಿಯೆಲ್ಲಿ ? ಬರಿಯ ಕೈಗಳಿಗೆ ಮಾತ್ರ ಹೋಲಿಕೆಗಳಿವೆ, ಆದರೆ ಮನಸ್ಸಿಗೂ, ಬದುಕಿನ ದಾರಿಗೂ ಅಲ್ಲ ಅಂತನಿಸಿತವನಿಗೆ. ದಿನನಿತ್ಯ ಪರದೆ ನೋಡಿಕೊಂಡು ಬೇರೆ ಜಗತ್ತೇ ಇಲ್ಲವೆಂದು ಬದುಕುವ ತನಗಿಂತ, ತನ್ನ ಪ್ರೊಜೆಕ್ಟ್ ಮ್ಯಾನೇಜರನಿಗಿಂತ ಆತ ಸುಖಿಯೆ ? ಇರಬಹುದು, ಇರದಿರಬಹುದು. ಮುಖ ನೋಡಿದರೆ ಏನೂ ತಿಳಿಯಲಾರದು.
ಒಂದಾದ ಮೇಲೊಂದು ಕೈಗಳು ಅವನೆದುರು ಬರುತ್ತಲೇ ಇದ್ದವು. ಅರಸಿನ ತೊಡೆದುಕೊಂಡ ನವ ವಧುವಿನ ಅಂಗೈ, ಬಳೆಯಿಲ್ಲದ ಖಾಲಿ ಕೈ, ಜಜ್ಜಿಹೋದ ಹೆಬ್ಬೆರಳಿದ್ದ ಕೈ, ಐದು ಬೆರಳೂ ಉಂಗುರ ತೊಟ್ಟ ಶ್ರೀಮಂತ ಹಸ್ತ, ಮಾಸ್ತರ ಬಳಿಯಲ್ಲಿ ಹೊಡೆತ ತಿಂದು ಕೆಂಪಾದ ಕೈ, ಮದರಂಗಿ ಹಚ್ಚಿಕೊಂಡ ಪುಟ್ಟ ಕೈ, ಶಕ್ತಿಯಿಲ್ಲದೇ ನಡುಗುವ ವೃದ್ಧ ಕೈ, ಆಗಷ್ಟೇ ಅಡುಗೆ ಮುಗಿಸಿ ಬಂದಂತ ಗೃಹಿಣಿಯ ಕೈ.. ಎಲ್ಲ ಇವನ ಮುಂದೆ ಬಂದು ಸಾಗುತ್ತಿದ್ದವು.
ಪ್ರತಿ ಕೈಯನ್ನೂ ಕೂಡಾ ಅವನಿಗೆ ಹಿಂದೆಲ್ಲೋ ನೋಡಿದಂತನಿಸುತ್ತಿತ್ತು, ತನ್ನ ಮನೆಯ, ಊರಿನ, ಸುತ್ತಮುತ್ತಲ ಎಲ್ಲರ ಕೈಗಳೂ ಬೆಂಗಳೂರಿಗೆ ಬಂದು ಇಲ್ಲಿರುವವರ ದೇಹಕ್ಕೆ ಅಂಟಿಕೊಂಡು ಬಿಟ್ಟಿರಬೇಕು ಎಂಬ ಯೋಚನೆ ಬಂದು ಮೈ ಬೆವರತೊಡಗಿತು. ಯಾವುದಾದರೂ ಕೈ ಬಂದು ತನ್ನ ಶಾಲನ್ನ ಕಿತ್ತೆಸೆದು, ನನ್ನ ನಿಜವನ್ನ ಬಯಲು ಮಾಡಿದರೆ ?, ಜನಿವಾರವಿಲ್ಲದ ತನ್ನ ಅರೆ ಬೆತ್ತಲ ಮೈಯನ್ನ ಎಲ್ಲರಿಗೂ ತೊರಿಸಿಬಿಟ್ಟರೆ. ಏನು ಮಾಡಲಿ..ತನ್ನ ಕೆಟ್ಟು ಹೋದ ಮೆದುಳನ್ನ, ಅದರೊಳಗಿನ ಹೊಲಸು ವಿಚಾರಗಳನ್ನ ಎಳೆದು ಹೊರ ಹಾಕಿ.. ನನ್ನ ಕುಲಗೆಟ್ಟ ಕೃತ್ಯಗಳನ್ನ ಖಂಡಿಸಿ ಎರಡು ಕೆನ್ನೆಗಳಿಗೂ ಬಾರಿಸಿ, ಯಾಕೆ ಹೀಗಾದೆ ಎಂದು ಕಾರಣ ಕೇಳಿದರೆ ? ನನ್ನನ್ನ ಬಟ್ಟೆಯಿದ್ದೂ ಬೆತ್ತಲು ಮಾಡಿ ಎಲ್ಲರೆದುರೂ ನಿಲ್ಲಿಸಿ 'ಛೀ, ಥೂ' ಎಂದು ಉಗಿಸಿದರೆ ?..
ಆ ಕೈಗಳ ಗುಂಪಿಂದ ನನ್ನಪ್ಪನ ಕೈ ಬಂದು ' ನಿನ್ನನ್ನ ಇಷ್ಟು ಕಷ್ಟ ಪಟ್ಟು ಬೆಳಸಿದ್ದು ಜಾತಿಕೆಡುವುದಕ್ಕೇನೋ, ಯಾಕೋ ಹೀಗೆ ಮಾಡಿ ನನ್ನ ಮಾನ ಕಳೆದೇ' ಅಂತ ಅತ್ತು ಬಿಟ್ಟರೆ ಏನು ಮಾಡಲಿ ತಾನು ?.. ಕೂತಲ್ಲಿಂದ ಏಳಲೂ ಆಗುತ್ತಿಲ್ಲ ಅವನಿಗೆ. ಅಸಹಾಯಕನಂತಾಗಿದ್ದ. ಕೈಗಳು ಮಾತ್ರ ಬಂದವರಿಗೆಲ್ಲ ತೀರ್ಥ ಪ್ರಸಾದ ವಿತರಣೆ ಮಾಡುತ್ತಿದ್ದವು. ಅಷ್ಟರಲ್ಲಿ ಒಂದು ಮಧ್ಯಮ ವಯಸ್ಸಿನ ಹೆಂಗಸಿನ ಕೈ ಮುಂದೆ ಬಂತು. 'ಮಗೂ, ತೀರ್ಥ ಕೊಡಪ್ಪಾ' ಅಂದಿತು. ಆ ಅರೆ ಸುಕ್ಕುಗಟ್ಟಿದ ಕೈ, ಆ ದನಿಯ ಮಾರ್ದವತೆ ಕೇಳಿದ ಅವನಿಗೆ ಅದು ಥೇಟ್ ತನ್ನಮ್ಮನದೇ ದನಿ ಎಂದೆನಿಸಿಬಿಟ್ಟಿತು. ತನ್ನ ತಲೆಯನ್ನ ನಿತ್ಯ ನೇವರಿಸಿದ ಕೈ, ಅಪ್ಪನೇಟಿನಿಂದ ತಪ್ಪಿಸುತ್ತಿದ್ದ ಕೈ, ತುತ್ತು ನೀಡಿ ಸಲಹಿದ ಕರುಣಾಮಯಿಯ ಕೈಯೇ ಅವನ ಮುಂದಿತ್ತು. ಎಲ್ಲವನ್ನು ಮರೆತು ಆ ಕೈಗಳನ್ನೇ ಹಿಡಿದುಕೊಂಡು ಅದರಲ್ಲಿದ್ದ ಗೆರೆಗಳನ್ನೇ ನೋಡುತ್ತಾ ನಿಂತುಬಿಟ್ಟ.
ಯಾವುದೋ ಹಳೆಯ ಲೋಕದ ಮರೆತ ದಾರಿಯನ್ನ ಆಕೆಯ ಕೈಲಿದ್ದ ಆ ಗೆರೆಗಳು ತೋರಿಸುತ್ತಿದ್ದವು.
{ಈ ಕಥೆ ಬರೆದು ವರ್ಷವಾಗುತ್ತ ಬಂತು. ಈಗ ಈ ಕಥೆ ಬರೆದಿದ್ದರೆ, ಬೇರೆಯದೇ ತರ ಬರೆಯುತ್ತಿದ್ದೆನೇನೋ. ಏನೂ ತಿದ್ದುಪಡಿ ಮಾಡದೇ ಹಾಗೆಯೇ ಹಾಕಿದ್ದೇನೆ. }
18 ಕಾಮೆಂಟ್‌ಗಳು:
Shree
you have got the power man....
nice. really expecting some more shorties from you.
love u dosta
Ravee......
ಕತೆ ಚೆನ್ನಾಗಿದೆ. ಕೆಲವು ವಿಷಯಗಳು ಅನವಶ್ಯಕ ಮತ್ತು ಅಸಂಬದ್ಧವೆನಿಸಿದರೂ (very few), ಇಡೀ ಕತೆ, ಕೈ'ಗಳ ಸಂಯೋಜನೆ, ಪುಟ್ಟ ತಮ್ಮ ಮತ್ತು ಅಮ್ಮನ ಕೈ ತುಂಬ ವಿಶಿಷ್ಟವಾಗಿ ಪದಬಳ್ಳಿಯಲ್ಲಿ ಅರಳಿದೆ.
ಕೊನೆಯ ಸಾಲು 'ಯಾವುದೋ ಹಳೆಯ ಲೋಕದ ಮರೆತ ದಾರಿಯನ್ನ ಆಕೆಯ ಕೈಲಿದ್ದ ಆ ಗೆರೆಗಳು ತೋರಿಸುತ್ತಿದ್ದವು.' ಮತ್ತೆ ಮತ್ತೆ ನೆನಪಾಗುವಂತಿವೆ.
adbutha shreenidhi..
ಕಥೆ ಚೆನ್ನಗಿದೆ.....ಎಂದಿನಂತೆ ಅದ್ಭುತ. ಮಾಡಿದ ತಪ್ಪು ಅರಿವಾಗ್ಬೆಕು. ಎಂದೂ ಬೇರನ್ನು ಮರಿಬಾರದು.... ನಿಮ್ಮ ಸಂಗ್ರಹದಲ್ಲಿ ಇನ್ನೂ ಹಲವು ಕಥೆ, ಕವನ ಇರಬಹುದು. ನಮಗೆ ಓದುವ ಅವಕಾಶ ಮಾಡಿ ಕೊಡಿ ಅಂತ ವಿನಂತಿಸುವೆ. ಬರಿತಾ ಇರಿ. ಶುಭವಾಗಲಿ.
ಅದ್ಭುತ ಕಥೆ ಶ್ರೀನಿಧಿಯವರೆ ಎಲ್ಲಿಂದ ಎಲ್ಲಿಗೆ ಒಯ್ದು ಕೊನೆಗೆ ಕೈಯ ರೇಖೆಯಲ್ಲಿ ಕೊನೆಯಾಯಿತು.
ಆತನ ಅಂತರಂಗದ ತುಮುಲ ಪಾಪ ಆತನಿಗೇ ಗೊತ್ತು.
ಆದರೆ ಕೆಲವೊಮ್ಮೆ ಪರಿಸ್ಥಿತಿಯ ಒತ್ತಡಕ್ಕೆ ಒಳಗಾಗಿ ಬದುಕಿನ ಬಂಡಿಯ ದಾರಿ ಬದಲಾಗಬೇಕಾಗುತ್ತದೆ ಅಲ್ಲವೇ ?
ಬ್ರಂಹಾಂಡ!!!
ಹಾಗೇ ಓದಿಸಿಕೊಂಡು ಹೋಯಿತು...ಆದರೂ ಈ ಯಾಂತ್ರಿಕತೆಯ ಸಿಕ್ಕುಗಳಿಗೆ ಸಿಲುಕಿ ಮನೆಗೆ ಹೋಗಿ ಆರು ತಿಂಗಳಾದ್ರೂ. ಹೊಸ ಮೊಬೈಲ್ ನಂಬರನ್ನು ಮನೆಯವರಿಗೆ ಕೊಡದಷ್ಟು ಕ್ರೂರಿಯಾಗಬಹುದೇ ಅನ್ನೋದು ಯೋಚನೆಗೆ ಈಡು ಮಾಡ್ತು...ಒಟ್ಟಿನಲ್ಲಿ ಸೂಪರ್ ಕಥೆ...
ಈ ಕಥೆ ನಿಮ್ಮದೆ ಆಗಿ ನಿಜವಾಗಿದ್ದರೆ, ದಯಮಾಡಿ ನಿಮ್ಮ ತನ್ದೇ ತಾಯಿಯನ್ನು ಓಮ್ಮೆ ನೋಡಿ ಬರಬಾರದೆ?
Hai
Kathe eno channagide adre nanagondu doubt yenandare idu thammade katheyoooo!!!!!!!!Hege???? Alpa swalpa thiddi barililla thane????
ಕಥೆ ಚೆನ್ನಾಗಿದೆ...
ಯಾಕೋ ಈ ಬೆಂಗಳೂರು, ಈ software, ಈ life style ಯಾಕೋ ನಮಗೆ ಗೊತ್ತಿಲ್ಲದಂತೆಯೆ ನಮ್ಮ ಬೇರುಗಳಿಂದ ದೂರ ಮಾಡುತ್ತಿದೆ ಅನ್ನಿಸ್ತಿದೆ... ಆದ್ರೂ ಎಲ್ಲಾರಂತೆ ನಾವು ಕೈ ಚೆಲ್ಲಿ "ಹೊಟ್ಟೆಪಾಡು..ಪ್ಚ್..ಪ್ಚ್.." ಅಂತ ನಮ್ಮನ್ನ ನಾವೇ ಸಂತೈಸಿ..ಕೈ ಚೆಲ್ಲಿ ಕೂರುತ್ತೇವೆ...ಅಲ್ವಾ...
ಒಳ್ಳೆಯ ಕಥೆ, ಶ್ರೀನಿಧಿ. ಕಥೆಯೊಳಗಿನ ವಿಚಾರ, ತುಮುಲ, ಗೊಂದಲ, ಕೈಗಳ ಲೋಕ, ಕೊನೆಗೆ ಅರಿವಿನ ದಾರಿ... ಎಲ್ಲವೂ ಮನ ಮುಟ್ಟುವ ಚಿತ್ರಕಟ್ಟಿವೆ.
ಹೀಗೇ ಬರೆಯುತ್ತಿರಿ. ಇದು ನಿಮ್ಮದೇ ಕಥೆ ಅನ್ನಲಾರೆ, ಆದರೆ ನಿಮ್ಮ ಅಂತರ್ದೃಷ್ಟಿ, ವೈಚಾರಿಕತೆ ಇಲ್ಲಿದೆ.
Hi Shreenidhi,
I liked the story.
Dr.D.M.Sagar
Hi Sreenidhi,
Bahala chennagi ide...
-Suma.
@ all.
ಕಥೆಯನ್ನು ಮೆಚ್ಚಿಕೊಂಡ ಎಲ್ಲರಿಗೂ ಧನ್ಯವಾದಗಳು. ಕಥಾ ಪ್ರಕಾರಕ್ಕೆ ನಾನು ಹೊಸಬ. ಹಿಂದೆ ಕಥೆಗಳನ್ನ ಬೆರೆದಿದ್ದೇನಾದರೂ, ಇಂತಹ ಗಂಭೀರ ಹಂದರ ಇಟ್ಟುಕೊಂಡು ಬರೆದಿರಲಿಲ್ಲ. ಯಾರು ಯಾರೋ ಹೇಳಿದ ಘಟನೆಗಳು - ಮತ್ಯಾರದೋ ಅನುಭವ ಎಲ್ಲ ಒಂದಕ್ಕೊಂದು ಬೆಸೆದು- ಏನೋ ಒಂದು ಕಥೆಯ ರೂಪ ಪಡೆದಿದೆ ಅನ್ನಿಸುತ್ತದೆ.
ಮತ್ತ್ ಹಾನ್,
ದೇವರಾಣೆಯಾಗೂ ಇದು ನನ್ನ ಕಥೆಯಲ್ಲ!:)
wawh..shree ..tumbaa chennagi barediddeeya...
ಅತ್ಯದ್ಭುತ!!
ಸದ್ಯದಲ್ಲೇ ಬೆಂಗಳೂರಿಗೆ ಹೋಗಬೇಕಾಗಿರುವ ನನಗೆ ನಿಜಕ್ಕೂ ಒಮ್ಮೆ ಭಯ ತರಿಸಿತು :)
ಇದು ಕಾಲ್ಪನಿಕ ಎಂದು ತಿಳಿದ ಮೇಲೆ ಮನಸ್ಸಿಗೆ ಸ್ವಲ್ಪ ನೆಮ್ಮದಿ ಎನಿಸಿತು...
ನಿಜಕ್ಕೂ ಇದು marvelous...
tumba tumba chennagide.....no words to express...
ತುಂಬಾ ಚೆನ್ನಾಗಿದೆ. ಸೂಪರ್.
ಹೀಗೆ ಬರೆದು ವರ್ಷವಾಗಿರೋ ಕಥೆಗಳು ಇನ್ನೆಷ್ಟಿವೆ?
ಕಾಮೆಂಟ್ ಪೋಸ್ಟ್ ಮಾಡಿ