ಶುಕ್ರವಾರ, ಜೂನ್ 08, 2007

ಹಲಸು, ಹೊಲಸು ಮತ್ತು ಹಸಿವು.

ಸೂಚನೆ: ( ಸಣ್ಣ ಪುಟ್ಟ ಅಸಹ್ಯಗಳಿಗೂ ರೇಜಿಗೆ ಪಟ್ಟುಕೊಳ್ಳುವವರು ಈ ಬರಹವನ್ನು ಓದಬಾರದಾಗಿ ವಿನಂತಿ)

ಸಿದ್ದಾಪುರದಿಂದ ಶಿರಸಿಗೆ ಹೊರಟಿದ್ದೆ. ಮಧ್ಯಾಹ್ನ ೧೨.೩೦ ಗಂಟೆ. ಉರಿ ಉರಿ ಬಿಸ್ಲು. ಎದುರಿಗೆ "ಸಿರ್ಸಿ ಸಿರ್ಸಿ ಸಿರ್ಸಿ" ಅಂತ ಕಂಡಕ್ಟರೊಬ್ಬ ಕೂಗುತ್ತಿದ್ದ. ನೋಡಿದರೆ ರಾಜಹಿಂಸೆ! ಗೊತಾಗಿಲ್ವಾ? ಅದೇ ರಾಜ ಹಂಸ ಕಣ್ರಿ! ಕೇಯಸ್ಸಾರ್ಟೀಸಿಯವರು ಹಳೆಯ ರಾಜಹಂಸವೊಂದನ್ನ ತೆಗೆದು ಈ ರೂಟಿಗೆ ಬಿಟ್ಟಿದ್ದರು ಅನಿಸುತ್ತದೆ. ವಿಲಾಸೀ ಸೀಟುಗಳೆಡೆಯಲ್ಲಿ, ಅಕ್ಕ ಪಕ್ಕ ಅಲ್ಲಿ ಇಲ್ಲಿ ಎಲ್ಲ ಜನ ತುಂಬಿಕೊಂಡಿದ್ದರು. ಕೂತರೆ ಬರಿಯ ೪೦ ಜನ ಇರಬಹುದಾದ ಆ ಬಸ್ಸಿನೊಳಗೆ ಮಿನಿಮಮ್ ೯೦ ಜನ ಇದ್ದರು. ಇದೆಲ್ಲ ಮಾಮೂಲಿ ಅಂತೀರಾ?, ಅದೂ ಸರೀನೇ ಬಿಡಿ. ನಾನು ಆ ಬಸ್ಸಿಗೆ ಕಡೆಯಯವನಾಗಿ ಹತ್ತಿದೆ, ಮತ್ತದು ನಂಗೆ ಲಾಭವೇ ಆಯಿತು. ಡ್ರೈವರು ಕ್ಯಾಬಿನ್ ಪಕ್ಕ, ಒಂದು ಕಾಲು ಮತ್ತು ಒಂದು ಕೈ ಅರಾಮಾಗೂ ಇನ್ನೊಂದು ಕಾಲು ಮತ್ತು ಕೈಯನ್ನ ಸ್ವಲ್ಪ ಕಷ್ಟ ಪಟ್ಟಾದರೂ ಇಡಬಹುದಾದಂತಹ ಜಾಗವೇ ಸಿಕ್ಕಿತು. ಅದಕ್ಕೂ ಮುಖ್ಯವಾಗಿ ಗಾಳಿ ಬರುತ್ತಿತ್ತು ನಾನು ನಿಂತ ಜಾಗದಲ್ಲಿ.

ಮದುವೆಯ ಸೀಸನ್ನು ಬೇರೆ, ಬಸ್ಸಿನ ತುಂಬ ಬಿಳಿ ಪಂಚೆ, ರೇಷ್ಮೇ ಸೀರೆಗಳೇ ತುಂಬಿದ್ದವು. ಅವರೆಲ್ಲ ಯಾವುಯಾವುದೋ ಮದುವೆಗಳಿಗೆ ಹೊರಟಿದ್ದರೂ ನನ್ನ ತರಹ ಊಟದ ಸಮಯಕ್ಕೆ ಸರಿಯಾಗಿ ಹೊರಟಿದ್ದು ನೋಡಿ ಸಮಾಧಾನವಾಯಿತು. ಬಿಸಿಲಿನ ಸುಟಿಗೆ, ಎಲ್ಲರೂ ಅರ್ಧ ಮಿಂದವರಂತೆ ಕಾಣುತ್ತಿದ್ದರು. ಕೆಂಪು, ಹಳದಿ ರವಿಕೆಗಳೆಲ್ಲ ಅರ್ಧಂಬರ್ಧ ಕಪ್ಪಾಗಿ ಕಾಣುತ್ತಿತ್ತು. ಹಣೆಯ ಮೇಲಿನ ಕುಂಕುಮ ಕರಗಿ, ಅದನ್ನ ಕರ್ಚೀಫಲ್ಲಿ ಸರಿಯಾಗಿ ವರೆಸಿಕೊಳ್ಳಲೂ ಬರದೆ, ಇಡೀ ಮುಖ ತುಂಬ ಕೆಂಪು ಮಾಡಿಕೊಂಡಿದ್ದ ದಪ್ಪ ಹೆಂಗಸೊಬ್ಬಳು ಸಿಡಿ ಮಿಡಿ ಮುಖ ಹೊತ್ತು ನಿಂತಿದ್ದಳು ನನ್ನ ಸ್ವಲ್ಪ ಹಿಂದೆ. ಅವಳಿಗೆ ಅದನ್ನ ಹೇಳ ಬೇಕೆಂದು ಹೊರಟವನು ಬಾಯಿ ಮುಚ್ಚಿ ನಿಂತುಕೊಂಡೆ, ಸುಮ್ನೆ ಯಾಕೆ ರಿಸ್ಕು ಅಂತ.

ಜನ ತುಂಬಿ ತುಳುಕುತ್ತಿದ್ದರೂ ದುರಾಸೆ ಕಂಡಕ್ಟರು "ಸಿರ್ಸಿ ಸಿರ್ಸಿ ಸಿರ್ಸಿ" ಅಂತ ಮೈ ಮೇಲೆ ಬಂದವರ ಹಾಗೆ ಕಿರುಚುತ್ತಿದ್ದ ಹೊರಗಡೆ. ಬಸ್ಸೊಳಗೆ ಇದ್ದವರಿಗೆಲ್ಲ ಅಷ್ಟು ಹೊತ್ತಿಗೇ ತಾಳ್ಮೆ ತಪ್ಪಿದ್ದರಿಂದ ಅವನಿಗೂ, ಡ್ರೈವರನಿಗೂ ಬಾಯಿಗೆ ಬಂದ ಹಾಗೆ ಬೈದರು. ಎಲ್ಲರೂ ಹೆದರುವ ಹಾಗೆ ಬಸ್ಸಿನ ಹೊರಮೈಯನ್ನ ಡಬ ಡಬಾಂತ ಬಡಿದ ಕಂಡಕ್ಟರು ರೈಟ್ ರೈಟ್ ಅಂತಂದು ಒಳಗೆ ತೂರಿಕೊಂಡ. ಎದುರುಗಡೆ ಸೀಟಲ್ಲಿ ಕೂತ ಮಾಣಿಗೆ ಅವನಮ್ಮ ಕುರ್ಕುರೇ ತೆಗೆತೆಗೆದು ಕೊಡುತ್ತಿದ್ದಳು. ನಂಗೆ ಆವಾಗ ನೆನ್ಪಾಯಿತು, ಬೆಳಗ್ಗಿಂದ ಏನೂ ಸರಿಯಾಗಿ ತಿಂದೇ ಇಲ್ಲ ನಾನು! ಲೇಟಾಗ್ತಿದೆ ಅಂತ ಗಡಿಬಿಡಿ ಗಡಿಬಿಡಿ ಲಿ ಹೊರಟು ಬಂದಿದ್ದೆ ಹೊಸನಗರದಿಂದ. ತಗಡು ಹೋಟೇಲೊಂದರ ಮತ್ತೂ ತಗಡು ಕಾಪಿ ಕುಡಿದು , ಒಂದು ವಡೆ ತಿಂದಿದ್ದೆ ಅಷ್ಟೆ.

ಈ ಹಸಿವು ಅನ್ನೋದು ನೆನ್ಪಾಗ್ದೇ ಇದ್ರೆ ಚೆನ್ನಾಗಿತ್ತು. ನೆನಪಾಗಿ ಕೆಲಸ ಕೆಟ್ಟಿತು. ಬಸ್ಸು ಬೇರೆ ಹೊರಟಾಯ್ತು, ಕೆಳಗಿಳಿದು ಏನೂ ಖರೀದಿ ಮಾಡುವ ಹಾಗೂ ಇಲ್ಲ. ಆ ಕುರುಕಲು ತಿನ್ನುವ ಹುಡುಗನ್ನ ನೋಡುತ್ತಿದ್ದರೆ ಮತ್ತೂ ಹಸಿವಾಗುತ್ತದೆ ಅಂದುಕೊಂಡು ಮುಖ ತಿರುವಿಸಿ ,ಎದುರುಗಡೆಯ ರಸ್ತೆಯನ್ನು ನೋಡುತ್ತಾ ನಿಂತುಕೊಂಡೆ.

ಬಸ್ಸು ಸಿದ್ದಾಪುರ ಪೇಟೆ ದಾಟಿ ಮುಂದುವರಿಯಿತು. ನಾನು ಕ್ಯಾಬಿನ್ ಬಾಗಿಲಿಗೆ ಹೇಗೇಗೋ ವರಗಿಕೊಂಡು ನಿಂತು ಬ್ಯಾಗನ್ನ ಅಲ್ಲೇ ಮೇಲುಗಡೆಯೆಲ್ಲೋ ತೂರಿಸಿ ನಿಟ್ಟುಸಿರು ಬಿಟ್ಟೆ. ಇನ್ನು ಇದೇ ಭಂಗಿಯಲ್ಲಿ ಹೆಚ್ಚೆಂದರೆ ಮುಕ್ಕಾಲು ತಾಸು ನಿಂತರಾಯಿತು, ಸಿರಸಿ ಬರುತ್ತದೆ ಅಂದುಕೊಂಡು ಹಾಯ್ ಎನಿಸಿತು. ಹಸಿವನ್ನ ನಿಧಾನವಾಗಿ ಮರೆಸುವ ಪ್ರಯತ್ನ ಮಾಡುತ್ತಿತ್ತು ಮೆದುಳು. ೪-೫ ಕಿಲೋಮೀಟರು ಬಂದಿರಬಹುದು, "ಘಮ್" ಅಂತ ಹಲಸಿನ ಹಣ್ಣಿನ ಪರಿಮಳ ಬಂದು ರಾಚಿತು ಮೂಗಿಗೆ! ಮೊದಲೇ ಕೆಟ್ಟ ಹಸಿವು, ಹಸಿದ ಹೊತ್ತಲ್ಲಿ ಹಲಸಿನ ಘಮ ಬಂದರೆ ಹೇಗಾಗಬೇಡ? ಸಟಕ್ಕನೆ ಹಿಂತಿರುಗಿ ನೋಡಿದರೆ....

ಎರಡನೇ ಸೀಟು, ಬಸ್ಸಿನ ಬಲ ಭಾಗದ್ದು. ಮದುವೆಗೆ ಹೊರಟ ಇಬ್ಬರು ಹೆಂಗಸರು ದಿವ್ಯವಾಗಿ ಅಲಂಕರಿಸಿಕೊಂಡು ಅಲ್ಲಿ ಪ್ರತಿಷ್ಠಾಪನೆಗೊಂಡಿದ್ದಾರೆ, ಅಲ್ಲೇ ಪಕ್ಕದ ಕಂಬ ಹಿಡಿದುಕೊಂಡು ಸುಮಾರು ೧೫-೧೬ ರ ಹುಡುಗಿಯೊಬ್ಬಳು ನಿಂತಿದ್ದಾಳೆ. ಈ ಹುಡುಗಿಗೆ ಪ್ರಾಯಶ: ಬಸ್ಸು ಹತ್ತೋಕೆ ಅರ್ಧ ಗಂಟೆ ಮೊದಲು ಎಲ್ಲೋ ಬಿಟ್ಟಿಯಾಗಿ ಮತ್ತು ಧಂಡಿಯಾಗಿ ಹಲಸಿನ ಹಣ್ಣು ತಿನ್ನಲು ಸಿಕ್ಕಿದೆ, ಮತ್ತು ಈ ಬಸ್ಸಿನ ಕುಲುಕಾಟದಿಂದಾಗಿ, ತಿಂದ ಅಷ್ಟನ್ನೂ ಕೆಳಗೇ, ಸರಿಯಾಗಿ ತನ್ನ ಕೆಳಗೇ ಕೂತ ಹೆಂಗಸಿನ ತಲೆಯ ಮೇಲೆ ಕಾರಿಕೊಂಡಿದ್ದಾಳೆ ಮತ್ತು, ನನ್ನ ದುರ್ದೈವಕ್ಕೆ ಹೀಗಾದ ಮಾರನೇ ಸೆಕೆಂಡಿಗೇ ಈ ಘನಘೋರ ದೃಶ್ಯ ನೋಡಿದೆ!

ಆ ಹೆಂಗಸಿನ ತಲೆ , ಮುಖ ಎಲ್ಲ ಸಂಪೂರ್ಣ ಹಲಸಿನ ತೊಳೆಗಳಿಂದ ತುಂಬಿ ಹೋಗಿತ್ತು ಪಾಪ! ಅರಸಿನದಲ್ಲಿ ಸ್ನಾನ ಮಾಡಿಸಿದಂತೆ ಎಲ್ಲ ಹಳದಿ ಹಳದಿ ಹಳದಿ. ಆಕೆಗೆ ತನಗೇನಾಯ್ತು ಎನ್ನುವುದು ಅರಿವಿಗೆ ಬರಲು ನಾಲ್ಕೆಂಟು ಸೆಕೆಂಡುಗಳೇ ಬೇಕಾದವು. ಅಲ್ಲಾ, ಅಷ್ಟು ಹೊತ್ತು ಬೇಕು , ಯಾಕೆ ಅಂದರೆ ಇಂತಹ ಅನುಭವಗಳೇನು ದಿನಾ ಆಗುತ್ತವೆಯೇ? ತನಗೇನಾಯ್ತು ಅಂತ ಅವಳಿಗೆ ಗೊತ್ತಾಗಿ ಬಾಯಿ ಬಿಡುವುದಕ್ಕೊ , ಹಲಸಿನ ತೊಳೆಯೊಂದು ಸೀದಾ ಆ ಹೆಂಗಸಿನ ಬಾಯೊಳಗೇ ಹೋಯಿತು! ಅಷ್ಟಾಗಿದ್ದೇ ತಡ, ಅತ್ಯಂತ ಅಸಹ್ಯವಾಗಿ ಮುಖ ಕಿವುಚಿಕೊಂಡು "ವ್ಯಾಕ್" ಅಂದು, ತನ್ನ ಹೊಟ್ಟೆಗೆ ಹೋಗಲು ಯತ್ನಿಸುತ್ತಿದ್ದ ಆ ಹಲಸಿನ ತೊಳೆಯನ್ನು, ಉದರದೊಳಗಿರುವ ಇನ್ನಿತರ ಸಶೇಷ ವಸ್ತುಗಳ ಸಮೇತವಾಗಿ ಹೊರಗಟ್ಟಿದಳು!.

ಇಷ್ಟಾಗುವಾಗ ಬಸ್ಸಿನ ತುಂಬ ಹಲಸಿನ ಪರಿಮಳ "ಪಸರಿಸಿತ್ತು"!. ಎಲ್ಲರೂ "ಏನು, ಏನು ಏನಾಯ್ತು, ಯಾಕಾಯ್ತು"ಅಂತೆಲ್ಲ ಮಾತಾಡಲು ಆರಂಭಿಸಿದರು. ಆ ಎರಡನೇ ಸೀಟು ಅದರ ಅಕ್ಕ - ಪಕ್ಕ ಸಣ್ಣ ವಾಂತಿ ಹಳ್ಳವೇ ನಿರ್ಮಾಣವಾಗಿತ್ತು. ಅಲ್ಲೇ ಹಿಂದೆಲ್ಲೋ ನಿಂತಿದ್ದ ಮುದುಕಿಯೊಬ್ಬಳು ಮುಂದಿದ್ದ ಯಾರನ್ನೋ ಸರಿಸಿ, "ಎಂತ್ ಆಯ್ತ್ ಇಲ್ಲಿ" ಅಂತ ಮೆಲ್ಲಗೆ ಯಾರದೋ ಕೈಯ ಸಂದಿಯಿಂದ ಹಣುಕಿದಳು, ಒಂದು ಕ್ಷಣ ಅಷ್ಟೆ- ಆ ಹಳದಿ ತಲೆ, ಕೆಳಗಿನ ಸಶೇಷ ವಸ್ತುಗಳಿಂದ ನಿರ್ಮಿಸಲ್ಪಟ್ಟು ವಿಕಾರವಾಗಿ ಕಾಣುತ್ತಿದ್ದ ರಾಶಿ , ಎಲ್ಲ ನೋಡಿದವಳೇ "ಸಿವನೇ" ಅಂತೊಂದು ದೊಡ್ಡ ಉದ್ಗಾರ ತೆಗೆದು, ತನ್ನ ಬಾಯನ್ನು ಯಥಾಸಾಧ್ಯ ಅಗಲಿಸಿ ಆ ರಾಶಿಗೇ ಸರಿಯಾಗಿ ಬೀಳುವಂತೆ ಕಕ್ಕಿದಳು- ತನ್ನೊಳಗಿನ ಎಲ್ಲವನ್ನೂ!

೩೦ ಸೆಕೆಂಡುಗಳೊಳಗಾಗಿ ಮೂರು ಮೂರು ವಾಂತಿಗಳು! ಎಲ್ಲರೂ ಎಲ್ಲರನ್ನೂ ಬೈಯುವವರೇ ಈಗ ಬಸ್ಸೊಳಗೆ. ಆದರೆ ಹೆಚ್ಚಿಗೆ ಬೈಗುಳಕ್ಕೆ ತುತ್ತಾದವಳು ಮೊದಲು ವಾಂತಿ ಮಾಡಿದವಳು. "ಗೊತಾಗಲ್ವಾ ವಾಂತಿ ಬರತ್ ಅಂತ, ಏನ್ ಖರ್ಮ ಇದು" "ಮದ್ವೆಗ್ ಹೊರ್ಟಿದ್ದೆ ನಾನು , ಸೀರೆ ಎಲ್ಲ ಗಲೀಜಾಯ್ತು" " ಥೂ, ಏನ್ ಜನನಪಾ , ಸ್ವಲ್ಪಾನೂ ಕಾಮನ್ ಸೆನ್ಸ್ ಇಲ್ಲ" - ಹೀಗೆ ಸೀರೀಸ್ ಆಫ್ ಬೈಗುಳಾಸ್! ವಾಂತಿಗೂ ಕಾಮನ್ ಸೆನ್ಸ್ ಗೂ ಎಲ್ಲಿಯ ಸಂಬಂಧಾನೋ ಗೊತ್ತಾಗಲಿಲ್ಲ ನಂಗೆ. ಪಾಪ, ಆ ರಶ್ಶು ಬಸ್ಸಲ್ಲಿ ಎಷ್ಟೇ ಕಾಮನ್ ಸೆನ್ಸ್ ಇದ್ರೂ, ಜನಗಳನ್ನ ತಳ್ಳಿ ಕಿಟಕಿ ಬಳಿ ಓಡೋಕೆ ತಾಕತ್ತೂ ಬೇಕಲ್ಲವೇ? ಭೀತಿಯಿಂದ ಅಕ್ಕ ಪಕ್ಕ ಇರುವವರ ಮುಖಭಾವ ಗಮನಿಸಲು ಆರಂಭಿಸಿದೆ, ಇನ್ಯಾರಾದರೂ ವಾಂತಿ ಮಾಡಿದರೆ ?! ಯಾರೇ ಸುಮ್ಮನೇ ಬಾಯಿ ಬಿಟ್ಟರೂ ಎಲ್ಲಿ ಒಳಗಿದ್ದದ್ದನ್ನ ಹೊರ ಹಾಕುತ್ತಾರೋ ಅನ್ನೋ ವಾಂತಿಫೋಬಿಯಾ ಶುರುವಾಯಿತು ನಂಗಂತೂ.

ನೀವಿದನ್ನು ಓದಲು ತೆಗೆದುಕೊಂಡಿರುವ ಸಮಯಕ್ಕಿಂತ ಎಷ್ಟೋ ಕಡಿಮೆ ಸಮಯದೊಳಗೆ ಈ "ವಾಂತಿ ಸರಪಣಿ ಕ್ರಿಯೆ" ಜರುಗಿದೆ ಎಂಬುದನ್ನ ನೆನಪಿನಲ್ಲಿಟ್ಟುಕೊಳ್ಳಿ. ಇಂತಹ ಒಂದು ಯಡವಟ್ಟು ಮತ್ತು ಅಸಂಗತವಾಗಿರುವ ಸನ್ನಿವೇಶವನ್ನ ನಾನು ನನ್ನ ಜೀವಮಾನದಲ್ಲೇ ಕಂಡಿರಲಿಲ್ಲ.

ಬಸ್ಸನ್ನ ಮುಂದೆಲ್ಲೋ ನಿಲ್ಲಿಸಿದರು. ಬಿರುಬೇಸಗೆಯಲ್ಲೂ ಯಾವುದೋ ಅಂಗಡಿಯಾತ "ಅರ್ಧ ಕೊಡಪಾನ" ನೀರನ್ನ ಉದಾರವಾಗಿ ದಾನ ಮಾಡಿದ. ಅಷ್ಟರಲ್ಲೇ ಹೇಗೋ ಬಸ್ಸನ್ನ ಕ್ಲೀನು ಮಾಡಲಾಯಿತು. ಮತ್ತು ಎಲ್ಲವನ್ನೂ ಆ ಹುಡುಗಿಯೇ ಮಾಡಬೇಕಾಯಿತು. ಒಂದ ವಾಂತಿಯ ಪರಿಣಾಮವಾಗಿ ಉಳಿದವರದನ್ನೂ ಬಾಚುವ ಕೆಲಸ ಅವಳಿಗೆ. ಹಲಸಿನ ಸ್ನಾನವಾದ ಹೆಂಗಸಂತೂ ಗರ ಬಡಿದವಳ ಹಾಗೆ ಸುಮ್ಮನಾಗಿ ಹೋಗಿದ್ದಳು. ಅವಳಿಗೆ ಅಲ್ಲೇ ಹೊರಗೆ ಸಣ್ಣಗೆ ತಲೆ ಸ್ನಾನ ಮಾಡಿಸಲಾಯಿತು. ಏನೇನೋ ಸಣ್ಣಗೆ ಗೊಣಗುತ್ತಿದ್ದಳು ಅವಳು. ಜೀವಮಾನ ಪೂರ್ತಿ ಹಲಸೆಂಬ ಹೊಲಸನ್ನ ಮುಟ್ಟುವುದಿಲ್ಲ ಎಂಬ ಪ್ರತಿಜ್ಞೆ ಮಾಡಿರುತ್ತಾಳೆ ಆಕೆ, ಅದಂತೂ ಶತಃಸಿದ್ಧ.

ಮತ್ತೆ ಬಸ್ಸು ಹೊರಟಿತು. ವಾಂತಿಯಾದ ಸೀಟಿನ ಮೇಲೆ ಯಾರೂ ಅಸಹ್ಯಪಟ್ಟು ಕೂರದೇ ಇದ್ದಾಗ, ಭೂಪನೊಬ್ಬ ಶಿಸ್ತಾಗಿ ತನ್ನ ಬಳಿಯಿದ್ದ ದಿನ ಪತ್ರಿಕೆಯ ಹಾಳೆಯನ್ನ ಆ ಸೀಟಿನ ಮೇಲೆ ಹಾಸಿ ಆರಾಮಾಗಿ ಕೂತೇ ಬಿಟ್ಟ. ಆಚೀಚೆ ನಿಂತವರೆಲ್ಲ ಮಿಕಿ ಮಿಕಿ ಮುಖ ನೋಡಿಕೊಂಡರು! ಬಸ್ಸೊಳಗೆ ಹಲಸಿನ ಹಣ್ಣಿನ ಪರಿಮಳ ಇನ್ನೂ ಹರಡಿತ್ತು.
ಕೆಟ್ಟ ಹಸಿವಿಂದ ಕಂಗೆಟಿದ್ದ ನನಗೆ ಆ ಪರಿಮಳವನ್ನ ಆಸ್ವಾದಿಸಬೇಕೋ, ಅಸಹ್ಯ ಪಟ್ಟುಕೊಳ್ಳಬೇಕೋ ಗೊತ್ತಾಗದೇ ತೆಪ್ಪಗೆ ನಿಂತುಕೊಂಡೆ.

ಪೂರಕ ಓದಿಗೆ :) - ಉದಯವಾಣಿ ( ಓದೋ ಮುನ್ನ ಎಚ್ಚರಿಕೆ ಇರಲಿ)

17 ಕಾಮೆಂಟ್‌ಗಳು:

Susheel Sandeep ಹೇಳಿದರು...

ಸೂಚನೆ: ( ಸಣ್ಣ ಪುಟ್ಟ ಅಸಹ್ಯಗಳಿಗೂ ರೇಜಿಗೆ ಪಟ್ಟುಕೊಳ್ಳುವವರು ಈ ಬರಹವನ್ನು ಓದಬಾರದಾಗಿ ವಿನಂತಿ)

ಸೂಚನಾನುಸಾರವಾಗಿಯೇ ಎಲ್ಲೆಲ್ಲಿ ಬೇಕೋ ಅಲ್ಲಲ್ಲಿ ಕತ್ತರಿ ಹಾಕಿಕೊಂಡು ಓದಿ ಮುಗಿಸಿಬಿಟ್ಟೆ ಸ್ವಾಮಿ!
ನಿಜಕ್ಕೂ ನೀವು ಗಟ್ಟಿಪಿಂಡ ಬಿಡಿ...ಅಷ್ಟೆಲ್ಲ ಕಣ್ಮುಂದೆಯೇ ನಡೆದರೂ "ಆ ಪರಿಮಳವನ್ನ ಆಸ್ವಾದಿಸಬೇಕೋ, ಅಸಹ್ಯ ಪಟ್ಟುಕೊಳ್ಳಬೇಕೋ " ಅನ್ನೋ ಡೌಟ್ ಇದ್ಯಲ್ಲ ನಿಮಗೆ!
ವ್ಯಾ....:)

Susheel Sandeep ಹೇಳಿದರು...

ವಿಷಯವಲ್ಲದಿದ್ದರೂ ನಿಮ್ಮ ಬರವಣಿಗೆ ಶೈಲಿ ಮುದನೀಡಿತು..ರಾಜಹಿಂಸೆ,ಮೈಮೇಲೆ ಬಂದಂಥ ಕಂಡಕ್ಟರು ಹ ಹ ಹ....

ಅನಾಮಧೇಯ ಹೇಳಿದರು...

ಹೆಯ್ ಶ್ರೀನಿಧಿ,

ನೀನು ಬರೆದಿದ್ದು ಓದಿ ನಂಗೆ ಆಫೀಸ್ ನಲ್ಲೆ ವಾಂತಿ ಬರಹಂಗೆ ಆತು. ತುಂಬಾ ಚನ್ನಾಗಿ ಬರದ್ದೆ. ಸಿದ್ದಾಪುರದ ಬಸ್ ಸ್ಟಾಂಡ್ ಕಣ್ಣಮುಂದೆ ಬಂತು.

ಇದನ್ನ ನೋಡಿದ ನೀನು ಹಲಸಿನ ಹಣ್ಣು ತಿಂಬದು ಡೌಟ್ ಇದ್ದು.

My3 Hegde. ಹೇಳಿದರು...

Namma kade bussina naija chitraNa nijakku khushikodtu :-).

Strong vishya enu ildenu tumbaa chennagi ondiskyandu hotu.. swalpanu bore aagalle.... nange 2 line lli Nanna favorite kathegaara Poorna Chandre tejaswi nenapaathu ....

Totally kathe Chennagiddu :-)

ಸಂತೋಷಕುಮಾರ ಹೇಳಿದರು...

ಆ ಕರ್ಮಕ್ಕೆ ಪರಿಮಳ ಅಂತ ಬೇರೆ ಹೆಳ್ತಿರಲ್ಲಾ ಗುರುವೆ?.ಮೊದಲೆ ಎಚ್ಚರಿಸಿ ಮಾನಸಿಕವಾಗಿ ಸನ್ನದ್ಧರಾಗುವಂತೆ ಮಾಡಿದ್ದಕ್ಕೆ ನಿಮಗೆ ಋಣಿ. ಇಲ್ಲ ಅಂದಿದ್ರೆ!!!!!

ಶ್ಯಾಮಾ ಹೇಳಿದರು...

ನಾನೂ ಅಷ್ಟೇ ಓದಲೋ ಬೇಡವೋ ಅಂತ 2-3 ಸಲ ಯೋಚಿಸಿ ಆಮೇಲೆ ಏನಾದ್ರೂ ಆಗ್ಲೀ ಅಂತ ಧೈರ್ಯ ಮಾಡಿ ಓದಿದೆ.... ನಿಜಕ್ಕೂ ರಾಜ ಹಿಂಸೆ :)

archana ಹೇಳಿದರು...

ayyo..nimma avastheye!!

ಅನಾಮಧೇಯ ಹೇಳಿದರು...

Hi Shri,

Thumba chennagi bardiddiya... kelavandu padabalakeyanna suktha samayadalli madiddira.. ide reethi baritha iri

Unknown ಹೇಳಿದರು...

Shree yako innu halasina hannina smell bandre e kathe nenpaguthe anista ide

ಅನಾಮಧೇಯ ಹೇಳಿದರು...

ತತ್‍ಕ್ಷಣದ ಪ್ರತಿಕ್ರಿಯೆ:

1) ಈ ಹರಟೆಯನ್ನು "ಓಂ ವಾಂತಿಃ ವಾಂತಿಃ ವಾಂತಿಃ..." ಎಂದು ಮುಗಿಸಬಹುದಿತ್ತು (ಮೂರು ವಾಂತಿಗಳು ಆ ಬಸ್‌ನಲ್ಲಿ ಸಂಭವಿಸಿದ್ದರಿಂದ)

2) ಅಥವಾ, ಕನ್ನಡಸಿನೆಮಾ ಅಭಿಮಾನ ಸೂಚಕವಾಗಿ "ಶಾಂತಿ ಕ್ರಾಂತಿ (ಮತ್ತು ವಾಂತಿ)" ಎಂದುಬೇಕಾದರೂ ಸಬ್‍ಟೈಟಲ್ ಕೊಡಬಹುದು.

3) ಅಂದಹಾಗೆ ಬಸ್‍ನಲ್ಲಿ ಆ ಹುಡುಗಿ carಇದಳು! ಅಂದರೆ ಬಸ್ ತನ್ನೊಳಗೊಂದು ವಾಹನವನ್ನು ಹುಟ್ಟಿಸಿಕೊಂಡ ಕ್ಷಣದಿಂದ ಪುಳಕಿತವಾಗಿ morning sicknessನಿಂದ ಬಸ್ಸೇ ವಾಂತಿ ಮಾಡುವ ಸಂಭವವೂ ಇಲ್ಲದಿಲ್ಲ!

ಅನಾಮಧೇಯ ಹೇಳಿದರು...

ಶ್ರೀನಿ ನಕ್ಕೂ ನಕ್ಕೂ ಸಾಕಾಯ್ತು. ಎನ್ ಹೇಳಲಿ ಮಾರಾಯ ನನ್ನ ರೂಮ್ ಮೇಟು ಹಲಸಿನ ಹಣ್ಣು ತಂದಿದಿನಿ ಬೇಗ ಬಾ ಅಂತ ಮೆಸೇಜ್ ಮಾಡಿದಾಳೇ.. ಹೋಗಿ ಹೇಗೆ ತಿನ್ನಲಿ??? ತುಂಬಾ ಚೆನ್ನಾಗಿ ಬರ್ದಿದಿಯ... ಬರಿ ಕವನ ಬರೀತಾ ಇರ್ಬೇಡ. ಇಂಥದ್ದು ಬರಲಿ

ನಂದಕಿಶೋರ ಹೇಳಿದರು...

"ವಾಂತಿಗೂ ಕಾಮನ್‍ಸೆನ್ಸಿಗೂ ಏನು ಸಂಬಂಧ!" - ಓದಿದವನೇ ಗೊಳ್ಳೆಂದು ನಕ್ಕುಬಿಟ್ಟೆ. ಸಂಬಂಧ ಇದೆ ಅಂತ ನನ್ನ ನಂಬಿಕೆ. ಏಕೆಂದರೆ ನನ್ನದೂ ಅಂಥ ಅನುಭವವಿದೆ. ’ಸುವರ್ಣಕರ್ನಾಟಕ’ ಜಾತಿಯ ಬಸ್ಸು ಅದು. ರಾತ್ರಿ ಪ್ರಯಾಣ ಬೇರೆ. ಪಕ್ಕದಲ್ಲಿ ಕೂತಿದ್ದವ ರಾತ್ರಿ ೨ ಗಂಟೆಗೆ, ನಿದ್ರಿಸುತ್ತಿದ್ದ ನನ್ನನ್ನು ಎಬ್ಬಿಸಿ ’ವ್ಯಾ ವ್ಯಾ’ ಅಂತ ಅಭಿನಯಿಸಿದ. ನಾನು ಕೈ ಹಿಡಿಯಬೇಕಿತ್ತು ಅಂತ ಎಣಿಕೆಯೋ ಏನೋ ಅವನದ್ದು!! ’ಹೋಗಯ್ಯಾ, ಹಿಂದುಗಡೆ ಹೋಗಿ ಮಾಡ್ಕೋ’ ಅಂತ ಸಿಡುಕಿ ಅವಸರಿಸಿದ ಮೇಲೆ ನಿಧಾನಕ್ಕೆ ಹೋದ. ಮತ್ತೇನು ಮಾಡಿದನೋ!
ನಿಮ್ಮ ಬರಹ ಓದಿದ ಮೇಲೆ ಆ ಘಟನೆ ನೆನೆಸಿಕೊಂಡಾಗ ಅನಿಸುತ್ತಿದೆ - ವಾಂತಿಗೂ, ಕಾಮನ್‍ಸೆನ್ಸಿಗೂ ಸಂಬಂಧ ಇದೆ ಅಂತ.

Lanabhat ಹೇಳಿದರು...

ಅಯ್ಯೋ ರಾಮ ಯರಾದ್ರೂ ಒಬ್ಬರು ವಾಂತಿ ಮಾಡಿದರೇ ಬಸ್ಸಿನ ಶಾಂತಿ ಕೆಡುತ್ತದೆ ಸ್ವಾಮಿ.. ಸರಣಿ ವಾಂತಿ ರಾಜಹಿಂಸೆ ಅಯ್ಯಯ್ಯೋ ಬಹಳ ಕಷ್ಟ..

ಚೆನ್ನಾಗಿ ಬರೆದಿದ್ದೀರ ...

ಅರ್ಚನ ಧಾಮಿ ಹೇಳಿದರು...

ನಕ್ಕೂ ನಕ್ಕೂ ಸುಸ್ತಾಯ್ತು. ಚೆನ್ನಾಗಿದೆ ವಾಂತಿಕಥೆ!

Enigma ಹೇಳಿದರು...

oor kade bussina circus nenpaythu :-).
bus nalli yaradru olle hudga barthana antha nododu. appa ammana jothe idda naanu mellane nododu :D amele shimoga bandmele ilidu hogodu :-)

ಅನಾಮಧೇಯ ಹೇಳಿದರು...

Arda raathrili nakku nakku kanniru baro haage madidri.. :'(

:D

Guru

Preethi Shivanna ಹೇಳಿದರು...

Sir,am at office and its lunch time :D
Reading this i was laughing so much that the girl next to my cubical came and asked me if everything is ok :)
Love u r writing Sir :)