ಸೋಮವಾರ, ಡಿಸೆಂಬರ್ 31, 2007

ಕಳೆದ ನಿನ್ನೆಗಳು ಮತ್ತೆ ಬರುವವು....

ಕಳೆದ ನಿನ್ನೆಗಳು ಮತ್ತೆ ಬರುವವು ಕನಸ ಬುಟ್ಟಿ ಹೊತ್ತು
ಸುಳಿವ ಬೇಸರವ ಬದಿಗಿಡು ಗೆಳೆಯಾ ಆಸೆ ಬೀಜ ಬಿತ್ತು

ಕಾವಳ ಕಳೆಯಲು ಬೆಳಕು ಹರಿವುದು ಕಳವಳ ಬೇಕಿಲ್ಲ
ನೋವೊಳು ನಗುವುದ ಕಲಿಯದೆ ಇದ್ದರೆ ಬದುಕಿಗರ್ಥವಿಲ್ಲ

ಕಟ್ಟಿದ ಮೋಡವು ಕರಗಲು ನೋಡು ಮಳೆ ತಾನಾಗೇ ಸುರಿಯುವುದು
ಮೆಟ್ಟಿದ ಬೀಜವೆ ಮೊಳಕೆ ರೂಪದಲಿ ತಲೆಯೆತ್ತಲ್ಲೇ ನಿಲ್ಲುವುದು

ಸುತ್ತಿಗೆ ಪೆಟ್ಟನು ತಿಂದರೆ ತಾನೆ ಮೊಳೆಯದು ಭದ್ರ ಗೋಡೆಯಲಿ?
ಮೆತ್ತಗೆ ಕುಳಿತೇ ಇದ್ದರೆ ನೀನು ಯಶವು ಸಿಗುವುದೇ ಯಾನದಲಿ?

ಇದ್ದಲ್ಲಿಂದ ಹೊರಟು ಬಿಡು ಹೋರಾಡೋ ಛಲವನು ತೊಟ್ಟುಬಿಡು
ಬಿದ್ದಿರೋ ಬದುಕನು ಎತ್ತಿಬಿಡು, ಗುರಿಯಲಿ ಕಣ್ಣನು ನೆಟ್ಟುಬಿಡು

ಮಾಲೆಯಾಗಲಿ ಬಾಳಿನ ಕೊರಳಿಗೆ ಇಂಥ ಯಶೋಸೂತ್ರ
ಸೋಲೇ ಇಲ್ಲದೆ ಸಾಗಲಿ ಮುಂದೆ ನಿನ್ನ ಯಶೋ ಯಾತ್ರ!


ಎಲ್ಲರಿಗೂ ಹೊಸ ವರುಷದ ಶುಭಾಶಯಗಳು.. ನಿಮ್ಮೆಲ್ಲ ಕನಸುಗಳಿಗೆ ನವ ವರುಷವು ಹೊಸ ದಾರಿ ತೋರಲಿ.

ಗುರುವಾರ, ಡಿಸೆಂಬರ್ 06, 2007

ಚಳಿಯ ಬೆಳಗಲಿ...

ತೆಳ್ಳಗಿನ ಚಳಿ ಪದರು, ಮುಂಜಾವ ಸುತ್ತೆಲ್ಲ
ಜುಮುರು ಮಳೆ ನಿಂತಿಹುದು, ಆಗತಾನೆ.
ಮನೆಯ ಹಿತ್ತಿಲಲಿಹುದು, ಪಾರಿಜಾತದ ವೃಕ್ಷ
ಎಲೆ ಹಸಿರ ಮೇಲೆಲ್ಲ ಬಿಳಿ ಹೂವ ರಂಗೋಲಿ.

ಹೂವು ಹೆಕ್ಕುವ ಸಮಯ,ಅವಳು ಬರಬೇಕಿತ್ತು
ಇಂದೇಕೆ ಬಂದಿಲ್ಲ, ಬಹಳ ಚಳಿಯೆಂದೆ?
ನಿನ್ನೆ ನನಗೂ ಮೊದಲೆ ಬಂದುನಿಂತಿದ್ದಳು,
ಯಾಕಿಂದು ಈ ರೀತಿ, ತಿಳಿಯದಲ್ಲ

ಚಳಿಯು ಕಾರಣವಲ್ಲ, ಬೇರೇನೋ ಇರಬೇಕು
ಅಥವಾ ಚಳಿಯೇ ಹೌದೋ?, ಇರಲೂಬಹುದು!
ಎಂದೂ ತಡಮಾಡಿಲ್ಲ, ಅವಳು ನನ್ನ ಹಾಗಲ್ಲ.
ಪಾರಿಜಾತಕೂ ಗೊತ್ತು ಅದು, ಅಲ್ಲವೇನೆ?

ನಾನು ತಡವಾದಂದು ಹುಸಿಮುನಿಸು ತೋರುವಳು
ಮಾತೇ ಆಡುವುದಿಲ್ಲ ಮೂರು ನಿಮಿಷ!
ಮತ್ತೆ ನಾನೇ ಮೆಲ್ಲ ಬೆರಳು ತಾಕಿಸಿ, ಕಣ್ಣು ಹೊಡೆದು
ನಗಿಸಿ, ಕಿವಿ ಹಿಡಿದು ಕ್ಷಮೆ ಕೇಳಿ- ಅಬ್ಬಬ್ಬ, ಕಷ್ಟ ಕಷ್ಟ.

ಇಂದು ಮಾಡುವೆ ಶಾಸ್ತಿ, ಬರಲಿ ನನ್ನಯ ಬಳಿಗೆ
ಮಾತಾನಾಡುವುದಿಲ್ಲ, ನೋಡುವುದೂ ಇಲ್ಲ
ನನ್ನ ಪಾಡಿಗೆ ನಾನು ಹೂಹೆಕ್ಕಿ ನಡೆಯುವೆನು
ನನ್ನ ಕಾಡಿಸುವಳಲ್ಲ, ಇಂದು ಗೊತ್ತಾಗಲಿ!

ಮುನಿಸೇನಾದರೂ ಇದೆಯೆ ?ಹೇಗೆ ಸಾಧ್ಯ
ನವಿಲುಗರಿ ಕೊಟ್ಟಿದ್ದು ನಿನ್ನೆ ಬೆಳಗೆಯೆ ತಾನೆ?
ಬಾರೆ ಬೇಗನೆ ಹುಡುಗಿ, ಒಬ್ಬನೇ ಇರಲಾರೆ
ದೇವಪೂಜೆಗೆ ಹೂವು ನನಗಂತೂ ನೆಪವೇ.


ಅಪ್ಪ ಹೊಗಳುತಿದ್ದ ನಿನ್ನೆ, ಮಗನು ಉತ್ತಮನೀಗ
ಶೃದ್ಧೆ ಭಕ್ತಿಯು ಬರುತಿದೆ ಜೀವನದೊಳು.
ನೀನು ಕಾರಣವೆಂದು ಅವಗೆಂತು ಗೊತ್ತು,ಇಲ್ಲದಿರೆ
ಈ ಕೊರೆವ ಚಳಿಯಲ್ಲಿ ಹೂವ ಹೆಕ್ಕಲು ಹುಚ್ಚೆ?

ಒಂದೊಂದೆ ಹೂ ಹೆಕ್ಕಿ, ಬಿದಿರ ಬುಟ್ಟಿಗೆ ಹಾಕಿ
ಮತ್ತೆ ನೋಡಿದನವನು ಮಂಜದಾರಿ.
ಮೆಲು ಗೆಜ್ಜೆಯಾದನಿಯು, ಬೇಲಿದಾಟುತಲಿರಲು
ಬುಟ್ಟಿಯಾ ಹೂ ಮತ್ತೆ, ಭೂಮಿಪಾಲು.

ಶನಿವಾರ, ಡಿಸೆಂಬರ್ 01, 2007

ನಾನು ನಾನಾಗುವುದು..

ನಾನು ಏನೂ ಅಲ್ಲ..
ಹಾಗೆಂದು ಹೇಳಿದರೆ ಯಾರೂ ನಂಬುವುದಿಲ್ಲ.
ನನ್ನ ಬಗೆಗೆ ನನಗಿಂತ ಹೆಚ್ಚು
ಅವರುಗಳಿಗೆ ಗೊತ್ತು.

ಅವರ ದನಿಗಳಿಗೆ ನಾನು ಮರುಳಾಗಿದ್ದೇನೆ.
ಹೊಗಳುವಿಕೆಗೆ ಅರಳಿದ್ದೇನೆ.
ನಾನೇನಲ್ಲವೋ , ಅದೇ ನಾನಾಗಿದ್ದೇನೆ.
ಆದರೂ ನನ್ನನ್ನು ಹುಡುಕುತ್ತಿದ್ದೇನೆ.

ಕಳೆದು ಹೋಗಲು ಇಷ್ಟವಿರಲಿಲ್ಲ ನನಗೆ,
ಏನು ಮಾಡುವುದು, ದಿಕ್ಕು ತಪ್ಪಿಬಿಟ್ಟಿದ್ದೇನೆ.
ಚಕ್ರದಾರಿಯಲಿ ಸುತ್ತುತ್ತಿದ್ದೇನೆ,
ನಿರ್ವಾತದಲೂ ಉಸಿರಾಡುತ್ತಿದ್ದೇನೆ.

ನಾನು ಮತ್ತಿನ್ನೇನಾದರೂ ಆಗೋ ಬದಲು
ನಾನೇ ಆಗಿದ್ದರೆ ಚೆನ್ನಿರುತ್ತಿತ್ತು,
ಆದರೆ ಭವಿಷ್ಯ ಯಾರಿಗೆ ಗೊತ್ತು?
ಕಾಯುತ್ತೇನೆ ಮೂರೂ ಹೊತ್ತು..

ನಾನು ನಾನೇ ಆಗುವವರೆಗೂ.