ಭಾನುವಾರ, ಜೂನ್ 26, 2011

ಮರಳಿ ಬಾರೋ ಗೋಕುಲಕ್ಕೆ..

ಚೆಲ್ವ ಸಖನೇ,

ಕಾಲ ಕೆಳಗೆ ಹರಿಯುತ್ತಿರುವ ಯಮುನೆ. ಅದಕ್ಕೆ ತಾಕಿಕೊಂಡಿರುವ ಗೋಪುರದ ಕೆಳಗಿರುವ ಪಾಚಿ ಕಟ್ಟಿದ ಪಾವಟಿಗೆಗಳ ಮೇಲೆ ಕುಳಿತು ನಿನಗೆ ಈ ಓಲೆ ಬರೆಯುತ್ತಿದ್ದೇನೆ. ನಿತ್ಯ ಸುಮ್ಮಗೆ ಕೂತು ನದಿಯ ಪಾತ್ರಕ್ಕೆ ಕಲ್ಲೆಸೆವ ನನಗೆ ಈ ಕಲ್ಲಹಾಸುಗಳು ಬಲು ಪ್ರಿಯ. ನೀನು ಇಲ್ಲೇ ಇದ್ದ ಕಾಲದಲ್ಲಿ ನಿನಗೂ ಕೂಡ. ಎಷ್ಟು ದಿನ ಇಲ್ಲಿ ನಾನು ನಿನ್ನ ಭುಜಕ್ಕೊರಗಿ ಕೂತು ನದಿಯ ನೋಡುತ್ತ ಕೂತಿಲ್ಲ ಹೇಳು? ಆದರೀಗ ನೀನಿರುವ ಮಹಲುಗಳ ನಗರಿಯಲ್ಲಿ ನದಿಯಿದೆಯೋ, ಇಲ್ಲವೋ.. ಇದ್ದರೂ ನಿನಗೆ ಸಮಯವೆಲ್ಲಿದ್ದೀತು? ಸುಮ್ಮಗೆ ಕೂತು ಹರಿವ ನೀರು ನೋಡುವಷ್ಟೆಲ್ಲ ಹೊತ್ತು ನಿನಗಿದ್ದರೆ ಜಗದೋದ್ಧಾರಕನಾಗುವುದು ಹೇಗೆ?

ಗೋಕುಲದ ಮಣ್ಣನ್ನ ದಾಟಿ, ಪ್ರಪಂಚಕ್ಕೆ ಕಣ್ಣು ಕೊಡಲು ಹೊರಟ ಉದಾತ್ತ ಮನುಷ್ಯ ನೀನು. ಪುಣ್ಯಾತ್ಮ. ನನ್ನ ಗೆಳತಿಯರು ಕೆಲ ಕಾಲ ನೀನು ಬರುತ್ತೀಯಾ ಎಂದು ಸಮಾಧಾನದ ಮಾತುಗಳನ್ನ ಹೇಳುತ್ತಿದ್ದರು. ನೀನು ಯಾವಾಗ ನಿನ್ನುಸಿರಾದ ಕೊಳಲನ್ನೂ ಇಲ್ಲೇ ಬಿಟ್ಟು ನಡೆದೆಯೋ, ಅಂದೇ ನನಗೆ ತಿಳಿದಿತ್ತು ಮತ್ತೆ ನೀನು ಬರುವುದಿಲ್ಲ ಎಂದು. ಆದರೆ ಹೃದಯ ಮನಸಿನ ಮಾತು ಕೇಳಲಿಲ್ಲ. ಅದಕ್ಕೆ ಧನ್ಯವಾದ ಹೇಳಬೇಕು ನಾನು. ಅದರ ಪ್ರತಿ ತುಡಿತದಲ್ಲೂ ನಿನ್ನ ನೆನಪುಗಳು ಮರುಕಳಿಸಿ, ನನ್ನನ್ನು ಇಲ್ಲಿವರೆಗೆ ಜೀವದಿಂದಿರುವಂತೆ ಮಾಡಿದೆ.

ಅಲ್ಲವಯ್ಯ, ಒಮ್ಮೆಗಾದರೂ ನನ್ನನ್ನು ನೋಡಬೇಕು ಅಂತ ಅನ್ನಿಸಲಿಲ್ಲವಾ ನಿನಗೆ? ಮನೋಕೋಶದಲ್ಲಿ ಬರೀ ನಿನ್ನ ಬಿಂಬಗಳನ್ನೇ ತುಂಬಿಕೊಂಡು ಬದುಕಿದ್ದ ನನ್ನನ್ನ ಒಂದು ಸಲವಾದರೂ ಹಿಂದಿರುಗಿ ಬಂದು ಕಾಣಬೇಕು ಎಂದು ಅಂದುಕೊಳ್ಳಲೇ ಇಲ್ಲವಾ ಇಲ್ಲಿಯ ತನಕ? ನಿನಗೆ ಹಾಗೆಲ್ಲ ಕಂಡರೂ, ಪಾಪ ಕಾರ್ಯದೊತ್ತಡ, ದೊಡ್ಡ ಜನರ ಸಹವಾಸ ಅಂತೆಲ್ಲ ಅಂದುಕೊಂಡು ಬಹಳ ಕಾಲ ಸಮಾಧಾನ ತಂದುಕೊಂಡೆ ನಾನು.

ಆದರೆ ಅದೆಲ್ಲ ಸುಳ್ಳು ಅಂತ ಗೊತ್ತಾಗುತ್ತ ಹೋಯಿತು ಬಿಡು. ಸಾಲುಸಾಲಾಗಿ ಬಹಳ ಹುಡುಗಿಯರನ್ನ ನೀನು ಮದುವೆಯಾದೆ ಅಂತ ಸುದ್ದಿ ಬಂತು ನನಗೆ. ಹಾಂ, ಇದೊಂದು ತಿಳಕೋ, ನೀನು ಕೋಟಿ ಹುಡುಗಿರನ್ನ ವರಿಸಿದರೂ ಹೊಟ್ಟೆಕಿಚ್ಚಿಲ್ಲ. ಆದರೆ ನನ್ನ ಜೊತೆಗಿದ್ದ ಭಾವನಾತ್ಮಕ ಜಗದ ಸಂಬಂಧವನ್ನು ನೀನು ಕಡಿದುಕೊಂಡೆಯಲ್ಲ,ಅದನ್ನ ಸಹಿಸುವುದು ಸ್ವಲ್ಪ ಕಷ್ಟ. ಹಿಂದೆ ನನಗೆ ಬೇಸರವಾದಾಗಲೆಲ್ಲ ನೀನು ಧುತ್ತೆಂದು ಪಕ್ಕದಲ್ಲಿ ಹಾಜರಾಗುತ್ತಿದ್ದೆ.ಸಂತೈಸುತ್ತಿದ್ದೆ. ಅದೆಲ್ಲೆ ಇಲ್ಲಿದ್ದಾಗಲಷ್ಟೆ. ನೀನು ಹೋದ ಮೇಲೆ ಕಾಡೊಳಗೆ ಹೋಗಿ ಭೋರೆಂದು ಅತ್ತರೂ, ದಿನವಿಡೀ ಊಟ ಬಿಟ್ಟಿದ್ದರೂ,ಏನು ಮಾಡಿದರೂ ನಿನ್ನ ಸುಳಿವಿಲ್ಲ.

ನಾನು ನಿನ್ನನ್ನು ಇಷ್ಟಪಡುವ ಮೊದಲು ನಿನ್ನ ಕೊಳಲ ದನಿಯನ್ನು ಇಷ್ಟಪಟ್ಟಿದ್ದೆ. ನೀನಿಲ್ಲದ ನೀರವ ರಾತ್ರಿಗಳಲ್ಲಿ ಪಕ್ಕದ ಬಿದಿರು ತೋಪಿನಿಂದ ಹಾಯ್ದು ಬರುವ ಗಾಳಿಯಲ್ಲಿ ಕೂಡ ಮುರುಳಿಯ ನಾದ ಕೇಳಿದಂತಾಗಿ ಅದೆಷ್ಟು ಬಾರಿ ಮನೆಯಿಂದ ಹೊರಗೋಡಿ ಬಂದಿದ್ದೇನೋ ನಾನು. ನಿನಗೆ ಇದನ್ನೆಲ್ಲ ಹೇಳಿ ಪ್ರಯೋಜನವಿಲ್ಲ. ಸುಮ್ಮಗೆ ನಗುತ್ತೀಯೇನೋ, ಇದನ್ನೆಲ್ಲ ನೋಡಿ. ನನ್ನ ಕರ್ಮ. ಬರೆಯದಿದ್ದರೆ ಒಳಗಿನ ಒಡಲ ಬೆಂಕಿ ನನ್ನನ್ನೇ ದಹಿಸಿಯಾತು.

ನಿನ್ನ ಮಹಿಮೆಯನ್ನು ಕೊಂಡಾಡುವ, ನಿನ್ನ ಲೀಲೆಗಳನ್ನು ಸ್ತುತಿಸುವ ಜನ ನಮ್ಮಲ್ಲೂ ಬಹಳವಿದ್ದಾರೆ. ಅವರನ್ನೆಲ್ಲ ಹುಲಿ ಹಿಡಿಯ. ಅದ್ಯಾರಿಗೋ ಸೀರೆ ಕೊಟ್ಟೆಯಂತೆ, ಇನ್ಯಾವುದೋ ಪುಂಡನನ್ನ ಕೊಂದೆಯಂತೆ. ಅಂಥದ್ದನ್ನೆಲ್ಲ ಇಲ್ಲಿದ್ದಾಗಲೂ ಮಾಡಿದ್ದೆ ನೀನು. ಆವಾಗ ಸುದ್ದಿಯಾಗಿರಲಿಲ್ಲವೇನೋ ಅದು. ಒಮ್ಮೆ ದೊಡ್ಡ ಮನುಷ್ಯ ಅಂತಾದರೆ ಸಾಕು, ಎಲ್ಲದರೂ ದೈವತ್ವ ಹುಡುಕುತ್ತಾರೆ ಮಂದಿ.

ನೀನಾಗಿ ಬಂದು ನನ್ನನ್ನ ನೋಡುವ ತನಕ ನಿನ್ನನ್ನ ಮಾತನಾಡಿಸಬಾರದು ಅಂದುಕೊಂಡವಳು ನಾನು. ಆದರೆ ನಿನ್ನ ಹೊಸ ಸಾಹಸದ ಸುದ್ದಿಯೊಂದು ಕಿವಿಗೆ ಬಿದ್ದು ಚಡಪಡಿಕೆ ಶುರುವಾಗಿದೆ. ಅದೇನೋ ಯುದ್ಧವಂತೆ, ನೀನು ಪಾಂಡವರ ಕಡೆಯಂತೆ.ಅರ್ಜುನನ ಸಾರಥಿಯಂತೆ.ಸುಡುಗಾಡು.ನಮ್ಮಲ್ಲಿಂದಲೂ ಒಂದಿಷ್ಟು ಜನ ಬಡಿಗೆ ಬಿಲ್ಲು ಬಾಣ ತೆಗೆದುಕೊಂಡು ಹೊರಟಿದ್ದಾರೆ.ನಾನು ಮೊದಲಿಗೆ ನಂಬಲಿಲ್ಲ. ಆದರೆ ನಿನ್ನ ಹುಚ್ಚುತನವನ್ನು ತಳ್ಳಿ ಹಾಕುವ ಹಾಗೂ ಇಲ್ಲ. ಮೊದಲೇ ಹುಂಬ ನೀನು. ಅವರ್ಯಾರೋ ಯುದ್ಧ ಮಾಡಿಕೊಂಡು ಸಾಯ ಹೊರಟರೆ ನಿನಗೇನು ಕಷ್ಟ? ಸಂಧಾನ ಮಾಡಲು ಯತ್ನಿಸಿದ್ದೆಯಂತಲ್ಲ? ನಿನ್ನ ಪ್ರಯತ್ನ ನೀನು ಮಾಡಿದ್ದೆ. ಸಾಕಾಗಿತ್ತು.

ಇಷ್ಟಕ್ಕೂ ಯುದ್ಧರಂಗವೇನು ಸಾಮಾನ್ಯವಾಗಿರುವುದಿಲ್ಲ. ಗೋಕುಲದಲ್ಲಿ ಹಳೇ ಮುದಿ ಹೆಂಗಸರ ಕಣ್ಣು ತಪ್ಪಿಸಿ ಬೆಣ್ಣೆ ಕದ್ದ ಹಾಗಲ್ಲ ಅದು. ಸಾವಿರ ಸಾವಿರ ಸಂಖ್ಯೆಯಲ್ಲಿ ಕಾದಾಡುವ ಸೈನಿಕರ ಮಧ್ಯ ಗೊಲ್ಲ ನಿನಗೇನು ಕೆಲಸ? ಹೊತ್ತಿಗೆ ಸರಿಯಾಗಿ ತುತ್ತು ಕೂಡ ದಕ್ಕಲಾರದು ಅಲ್ಲಿ. ಅಷ್ಟಕ್ಕೂ ಆ ರಾಜಮಕ್ಕಳಿಗೆ ರಥಕ್ಕೆ ನೂರು ಸಾರಥಿಯರು ಸಿಕ್ಕಾರು ಬಿಡು. ಹೇಳು ಅವರಿಗೆ. ಇಷ್ಟು ದಿನದ ಕೆಲಸದೊತ್ತಡ ಸಾಕಾಗಿದೆ, ಒಮ್ಮೆ ಗೋಕುಲಕ್ಕೆ ಹೋಗಿ ಬರುತ್ತೇನೆ ಅಂತ. ನನ್ನ ಹೆಸರು ಹೇಳು. ಗೆಳತಿಯಿದ್ದಾಳೆ ಅನ್ನು. ಬೇಡ ಅನ್ನುವುದಿಲ್ಲ ಯಾರೂ.

ನೀನು ಕೂಡ ಇಂತಹ ಅವಕಾಶಕ್ಕೆ ಕಾಯುವ ಜಾತಿಯವನೇ ಅನ್ನುವುದೂ ಗೊತ್ತು ನನಗೆ. ಊರಿನ ಗಂಡಸರೆಲ್ಲ ಅಲ್ಲಿ ಯುದ್ಧದಲ್ಲೇ ಇರುತ್ತಾರೆ. ಇಲ್ಲಿ ಇಡೀ ಗೋಕುಲಕ್ಕೆ ನೀನೊಬ್ಬನೇ ಆಗ. ಜೊತೆಗೆ ನಾನು. ನೀನು ಬಂದರೆ ಇಲ್ಲಿಗೊಂದು ಹೊಸ ಕಳೆ ಬರುತ್ತದೆ. ನಿನ್ನ ಹೆಜ್ಜೆಯ ಸ್ಪರ್ಶವಾದರೆ ಇಲ್ಲಿನ ಮಣ್ಣಿಗೆ ಹೊಸ ಗಂಧ ಬರುತ್ತದೆ. ನೀನು ಹೋದ ಮೇಲೆ ತರಗೆಲೆ ತುಂಬಿಕೊಂಡಿರುವ ಅರಳಿ ಕಟ್ಟೆಗೆ ಮತ್ತೆ ಯೌವನ ಬರುತ್ತದೆ . ನಾವೆಲ್ಲ ಕರೆಯುವ ಹಾಲಿಗೆ ಮತ್ತದೇ ಹಳೆಯ ಘಮ ಬರುತ್ತದೆ. ಊರ ಮಧ್ಯದ ಅಶೋಕ ವೃಕ್ಷ ಮತ್ತೆ ಹೂವು ಬಿಡುತ್ತದೆ. ನಮ್ಮ ಮೋದದ ದಿನಗಳನ್ನ ಒಮ್ಮೆ ನೆನಪು ಮಾಡಿಕೊಡಲಾದರೂ ಬಾ. ಇನ್ನೊಮ್ಮೆ ಹೇಳುತ್ತೇನೆ, ನನಗೇ ಅಂತಲ್ಲದಿದ್ದರೂ ಇವಕ್ಕಾಗಿಯಾದರೂ ಬಾರೋ ಮಾಧವಾ.

ಹಾಂ, ನನಗಾಗಿಯೂ ನೀನು ಬರಲೇಬೇಕು.ನಾನು ನಿನಗೆ ಮತ್ತೆ ಯಮುನೆಯನ್ನು ತೋರಿಸಬೇಕು. ಅಲ್ಲಿನ ಸುಳಿಯೊಳಗೆ ನಾನು ಮತ್ತೊಮ್ಮೆ ಸಿಲುಕಬೇಕು, ನೀನು ಈಜಿ ಬಂದು ನನ್ನನ್ನ ಬದುಕಿಸಿ, ಸುಳ್ಳೇ ಪಳ್ಳೇ ಬೈದು, ಕಣ್ಣಲ್ಲಿ ಕಣ್ಣನ್ನಿಟ್ಟು ನೋಡಬೇಕು. ನನ್ನ ಬೆನ್ನಿಗೊರಗಿ ಕುಳಿತು, ಸಂಜೆ ನೇಸರ ಮುಳುಗುತ್ತಿರುವಾಗ ಯಾವುದೋ ಒಂದು ಹೊಸ ರಾಗವನ್ನ ನಿನ್ನ ಕೊಳಲಲ್ಲಿ ನುಡಿಸಬೇಕು. ನಮ್ಮಿಬ್ಬರನ್ನ ನೋಡಿ, ಇತರ ಗೋಪಿಕೆಯರಿಗೆ ಹೊಟ್ಟೆಕಿಚ್ಚಾಗ ಬೇಕು.

ಯಾವತ್ತು ಕೂಡ ನಿನ್ನಲ್ಲಿ ಏನನ್ನೂ ಬೇಡದ ನಾನು, ಮೊದಲ ಬಾರಿಗೆ ಕೇಳಿಕೊಳ್ಳುತ್ತಿದ್ದೇನೆ, ಮರಳಿ ಬಾ ಗೋಕುಲಕ್ಕೆ. ಯುದ್ಧದ ಕ್ಷುದ್ರ ರಣಾಂಗಣ, ನಿನ್ನಂತಹ ಮೃದು ಮನಸ್ಸಿನವನಿಗಲ್ಲ. ಅಲ್ಲಿ ಕತ್ತಿಗಳು ಖಣಗುಡೋ ಹೊತ್ತಲ್ಲಿ ನೀನು ನನ್ನ ಗೆಜ್ಜೆಗಳ ಘಳಿರು ನಾದದಲ್ಲಿ ಕಳೆದು ಹೋಗುವಿಯಂತೆ, ಬಾರೋ.

ನೀನು ಬರುವ ತನಕವೂ ಕಾಯುತ್ತಲೇ ಇರುವ,

ನಿನ್ನ ರಾಧೆ.


(ಕನ್ನಡ ಪ್ರಭ ಪ್ರೇಮಪತ್ರ ಸ್ವರ್ಧೆಗೆ ಕಳಿಸಿದ್ದೆ-ಆಯ್ಕೆಯಾಗಿಲ್ಲ)