ಬುಧವಾರ, ಫೆಬ್ರವರಿ 14, 2018

ಬಯಲೊಳಗೆ ಬಯಲಾಗಿ!

ನಮ್ಮ ಊರಿನ ರಾಮದಾಸ ಮಾಮನ ಹೋಟೇಲು ಅಂದ್ರೆ ನಂಗೆ ಬಹಳ ಪ್ರಿಯವಾಗಿತ್ತುಎಲ್ಲ ಹಳ್ಳಿಗಳ ಹಾಗೆ ಮುಂದಿನ ಯಾವುದೋ ಊರಿಗೆ ಸಾಗಿ ಹೋಗುವ ರಸ್ತೆಯೊಂದರ ಪಕ್ಕಹರಕಲು ಬಸ್ ಸ್ಟ್ಯಾಂಡಿನ ಆಚೆಗಿದ್ದ ಈ ಹೋಟೇಲಿನ ಎದುರಿಗೇ ದೊಡ್ಡದೊಂದು ಗ್ರೌಂಡಿತ್ತುಇಡಿಯ ಊರನ್ನ ಎರಡು ಭಾಗ ಮಾಡಿದ ಹಾಗಿದ್ದ ಗ್ರೌಂಡಲ್ಲಿ ಸದಾ ಕಾಲ ಕ್ರಿಕೆಟೋವಾಲಿಬಾಲೋಆಡಿಕೊಂಡಿದ್ದ ಮಂದಿಯನ್ನ ನೋಡುತ್ತಆ ಹೋಟೇಲಲ್ಲಿ ಕೂರುವುದು ಒಂದು ಬಗೆಯ ಮಜಾ ನೀಡುತ್ತಿತ್ತುಯಾರೇ ಆದರೂ ಊರ ಹೃದಯ ಭಾಗಕ್ಕೆ ಬರಬೇಕೆಂದರೆಆ ಬಯಲನ್ನ ಹಾದುಕೊಂಡೇ ಬರಬೇಕು. ಹೀಗಾಗಿ ಗ್ರೌಂಡಿನ ತುದಿಯಲ್ಲಿ ತಲೆ ಕಂಡರೆ ಸಾಕು ಓ ಪೈಗಳು ಬಂದ್ರು ಚಾ ಮಾಡು ಅಂತಲೋಮಂಜಣ್ಣಂಗೊಂದು ದೋಸೆ ಹಾಕು ಅಂತಲೋ ರಾಮ್ದಾಸ ಮಾಮ ಗಲ್ಲೆಯಿಂದಲೇ ಕೂಗುವುದು ಸಾಮಾನ್ಯವಾದ ಸಂಗತಿಊರಿಗೂರೇ ಬಯಲಿಗೆ ತೆರೆದುಕೊಂಡ ಕಾರಣಕ್ಕೆ ಕದ್ದುಮುಚ್ಚಿ ಯಾವ ವ್ಯವಹಾರವೂ ನಡೆಯುವುದೂ ಅನುಮಾನವೇ ಆಗಿತ್ತುಬಯಲಂಚಿನ ಸಾಲು ಮನೆಗಳಲ್ಲಿಯಾರೋ ಇನ್ಯಾರ ಬಳಿಯೋ ಬೈದಾಡಿಕೊಂಡರೆ ಗಾಳಿ ಅದನೆತ್ತಿಕೊಂಡು ಬಂದು ಊರೆಲ್ಲ ಹಬ್ಬಿಸುವುದು ಪಕ್ಕಾಮಗ್ಗೀಬಾಯಮ್ಮನಿಗೂಗೌರಕ್ಕನಿಗೂ ಹಾಲಿಗೆ ನೀರು ಹೆಚ್ಚಾದ ಕಾರಣಕ್ಕೆ ನಡೆದ ಹೊಡೆದಾಟಗೊತ್ತಿಲ್ಲದವರೇ ಇಲ್ಲಹೀಗಾಗಿ ಗಲಾಟೆಯೂ ಪಿಸುದನಿಯಲ್ಲೇ ಆಗುವುದು ಸಾಮಾನ್ಯ ಸಂಗತಿ ಇಲ್ಲಿ.

ಈ ಬಯಲ ತುದಿಯ ಚರ್ಚುಆ ಚರ್ಚಿನ ಪಕ್ಕದ ಗಂಟೆ ಗೋಪುರಇಡಿಯ ಮೈದಾನಕ್ಕೊಂದು ಸಣ್ಣ ದೈವಿಕ ಕಳೆಯನ್ನೂ ಕೊಟ್ಟಿತ್ತುಸೆಪ್ಟೆಂಬರು ತಿಂಗಳ ಕನ್ಯೆ ಮೇರಿಯ ಹಬ್ಬಕ್ಕೆ ನೆರೆಹೊರೆಯವರೆಲ್ಲ ಹೂವುಗಳ ಬುಟ್ಟಿ ಎತ್ತಿಕೊಂಡು ಬಯಲು ದಾಟಿಚರ್ಚಿನ ಮೂರ್ತಿಗೆ ಪೂಜೆ ಸಲ್ಲಿಸಿ ಬಂದರೆಬಯಲ ತುಂಬೆಲ್ಲ ಹೂವುಗಳದೇ ರಂಗೋಲಿಹದಮಳೆಯ ಮಧ್ಯೆ ಬಗೆ ಬಗೆಯ ಹೂವುಗಳ ಮೆರವಣಿಗೆ ನೋಡುವುದಕ್ಕೇ ಬಹಳ ಸೊಗಸುಇನ್ನೊಂದು ತಿಂಗಳು ಕಳೆದರೆಅದೇ ಚರ್ಚಿನ ಸಂತಮೇರಿಯ ಹಬ್ಬಕಿರ್ರೆನ್ನುವ ಜಾತ್ರೆಯ ಜೋಕಾಲಿ ಮೊದಲು ಹತ್ತಿದ್ದೇ ಇಲ್ಲಿಇಡೀ ಗ್ರೌಂಡಿನ ತುಂಬ ಐಸ್ಕ್ರೀಂ ಪೀಪೀ ಬಳೆಯಂಗಡಿ ಕಡ್ಲೆ ಮಿಠಾಯಿ ಥರಹೇವಾರಿ ಅಂಗಡಿ ಸಾಲುಗಳುಕೆಂಬಣ್ಣದ ಬಯಲ ತುಂಬ ಅಣಬೆಯಂತೆ ಎದ್ದು ನಿಂತ ನೀಲಿ ಬಿಳಿ ಟೆಂಪರರಿ ಟಾರ್ಪಾಲುಗಳ ಒಳಗೆ ಮುಗಿಯದ ಮನರಂಜನೆಯ ದಾಸ್ತಾನುಗಳುಕೈಯಲ್ಲಿರುವ ಎರಡೇ ರೂಪಾಯಿಯಲ್ಲಿ ಇಡೀ ಸಂತೆ ಪೇಟೆ ಖರೀದಿಸುವ ಉತ್ಸಾಹ ಬೇರೆಅಪ್ಪ ಇಂಥಾದಕ್ಕೆ ಹೆಚ್ಚು ದುಡ್ಡು ಕೊಡುತ್ತಿರಲಿಲ್ಲವಾಗಿನಮ್ಮ ನೈಜ ಸಂತೆ ಸುತ್ತುವ ಕಾರ್ಯಕ್ರಮವು ಮಾರನೇ ದಿನಕ್ಕೆ ಪೋಸ್ಟ್ ಪೋನ್ ಆಗಿರುತ್ತಿತ್ತು

ಅದು ಹೇಗೆ ಎಂದರೆವ್ಯಾಪಾರಸ್ಥರೆಲ್ಲ ಅಂಗಡಿ ಕಳಚಿಕೊಂಡು ಎದ್ದು ಹೋದ ಮೇಲೆನಾವೊಂದಿಷ್ಟು ಹುಡುಗರು ಬರಿಯ ಬಯಲಿಗೆ ದಾಂಗುಡಿಯಿಡುತ್ತಿದ್ದೆವುಯಾರದೋ ಕೈತಪ್ಪಿ ಬಿದ್ದು ಹೋಗಿರಬಹುದಾದ ಚಾಕ್ಲೇಟುತುದಿಯೊಡೆದ ವಿಶಲ್ಲುಇನ್ನೆಂತದೋ ಪುಟಾಣಿ ಗೊಂಬೆಹೀಗೆ ಕಸದ ರಾಶಿಯೊಳಗೆಲ್ಲೋ ಜತನವಾಗಿ ಬಚ್ಚಿಟ್ಟುಕೊಂಡಿರಬಹುದಾದ ವಸ್ತುಗಳಿಗಾಗಿ ತಲಾಷುಕೈಗೆ ಏನಾದರೂ ಸಿಗುತ್ತಿತ್ತೋ ಬಿಡುತ್ತಿತ್ತೋ , ಅಲ್ಲಿ ಏನಾದರೂ ಸಿಗಬಹುದೆಂಬ ಬಯಲ ಬಯಕೆಯೇ ಚಂದ! ಆದರೆ, ಚಿಂದಿ ಆಯುವ ಹುಡುಗರ ಹಾಗೆ ಧೂಳೆಬ್ಬಿಸುತ್ತ ಸಾಗುತ್ತಿದ್ದ ನಮ್ಮನ್ನ ನೋಡಿದ ಯಾರೋ ಮನೆಗಳಿಗೆ ವಿಷಯ ಮುಟ್ಟಿಸಿದರು. ಹೆಚ್ಚಿನ ವಿಚಾರಣೆಗಳೇನೂ ನಡೆಯದೇ, ನೇರವಾಗಿ ಬೆನ್ನ ಚರ್ಮ ಕಿತ್ತು ಬರುವ ಹಾಗೆ ಮಹಾ ಸೇವೆ ನಡೆದು  ಆ ಚಟವನ್ನ ಅನಿವಾರ್ಯವಾಗಿ ಹತ್ತಿಕ್ಕಿಕೊಳ್ಳಬೇಕಾಯಿತು.

ಹೀಗೆ ಈ ಬಯಲಿನಿಂದ ಆರಂಭವಾದ ಬದುಕಿನ ಪಯಣ ಆಮೇಲೆ ಅದೆಷ್ಟೋ ಬಯಲುಗಳನ್ನ ದಾಟಿ ಮುನ್ನಡೆದಿದೆವಿಸ್ತಾರವಾಗಿ ಹರಡಿನಿಂತ ಈ ಹರಹುಗಳು ವಿನಾಕಾರಣ ಅಚ್ಚರಿಯನ್ನ ಹುಟ್ಟಿಸುತ್ತಅವುಗಳನ್ನ ಮತ್ತೆ ಮತ್ತೆ ಗಮನಿಸುವಂತೆ ಮಾಡುತ್ತ ಸ್ಮೃತಿಯ ಭಾಗವಾಗಿ ಹೋಗಿದೆಕೆಂಪು ಬಸ್ಸು ಕುಮಟೆಗೆ ಇಳಿಯುವ ಮೊದಲುಬೆಟ್ಟದ ಮೇಲಿರುವ ಬಯಲೊಂದರ ಅಂಚಿಗೆ ನಿಂತಿರುವ ಉದ್ದನೆ ಮರ, ಕೋಗಾರು ಘಾಟಿಯ ನೆತ್ತಿಯಲ್ಲೆಲ್ಲೋ ಕಡುಗಪ್ಪು ಮೋಡಗಳ ಕೆಳಗೆ ಕಣ್ಣು ಹಾಯಿಸಿದಷ್ಟೂ ಕಾಣಿಸುತ್ತಿರುವ ವಿಸ್ತೃತ ಹುಲ್ಲುಗಾವಲೊಂದನ್ನು ದಾಟಿ ಎತ್ತಲೋ ಹೊರಟಿರುವ ವೃದ್ಧಮುಳ್ಳಯ್ಯನ ಗಿರಿಯ ಮೇಲೆ ನಿಂತರೆ ಕಾಣುವ ಚಿಕ್ಕಮಗಳೂರಿನ ಹಸಿರ ಬಯಲುಹಿಮಪರ್ವತಗಳ ನಡುವೆ ಗಾವುದ ಗಾವುದ ಸಪಾಟಾಗಿ ಹಬ್ಬಿರುವ ನುಬ್ರಾ ಎಂಬ ಮಂಜು ಮರುಭೂಮಿಯ ಪವಾಡದಂತಹ ಜಾಗ-ಇಂತಹ ಅದೆಷ್ಟೋ ಚಲಿಸುವ ಚಿತ್ರಗಳು ಮನದ ಪಟಲದಲ್ಲಿ ಅಚ್ಚೊತ್ತಿ ನಿಂತಿವೆ.

ದೀಪಾವಳಿಯ ಗೂಡುದೀಪಗಳಿಗೆ ಬೆಳಕಾಗುವುದು ಬಯಲಿನ ಖುಷಿ.  ಪಟ್ಟೆ ಪಟ್ಟೆ ಸುಣ್ಣ ಬಳಿದುಕೊಂಡು ಪಕ್ಕದ ಪ್ರೈಮರಿ ಸ್ಕೂಲಿನ ಕ್ರೀಡಾದಿನಕ್ಕೆ ಸಜ್ಜಾಗಿ ನಿಂತ ಮೈದಾನದ ಅಂದವನ್ನು ಎಲ್ಲರೂ ನೋಡಿಯೇ ಇರುತ್ತೀರಿ. ಕ್ರೀಡಾಕೂಟಗಳಿಂದ ಶುರುವಾಗಿ ರಾಜಕೀಯದ ಭಾಷಣದವರೆಗೆ, ಎಲ್ಲದಕ್ಕೂ ಬಯಲೇ ತಾನೇ ಬೇಕು? ಹೀಗೆ ಒಂದಿಡೀ ಊರಿನ ಸಂತಸಕ್ಕೆ ಕಣ್ಣಾಗುವ ಮೊದಲ ಜಾಗಅಲ್ಲಿನ ಬಯಲು. ಎಲ್ಲಿದಂಲೋ ಬಂದು ಮೈದಾನದಂಚಲ್ಲಿ ಡೇರೆ ಹಾಕಿಕೊಂಡ ನಾಟೀವೈದ್ಯದ ಮುದುಕನ ಹೊತ್ತಿನನ್ನಕ್ಕೆ ಇದುವೆ ತಾನೇ ಆಸರೆ? ದೊಂಬರಾಟದ ತಂಡದ ತಮಟೆಯ ಸದ್ದು ಹರಡುವ ಜಾಗ, ಸರ್ಕಸ್ಸಿನ ಟೆಂಟಿನೊಳಗಣ ಮಾಯಾಲೋಕದ ಅಡ್ರೆಸ್ಸು ಸಿಗಬೇಕೆಂದರೆ, ಬಯಲೇ ಬೇಕು. ಸಾಲ ತೆಗೆದುಕೊಂಡ ಸ್ನೇಹಿತ ಎಲ್ಲೇ ತಲೆತಪ್ಪಿಸಿಕೊಂಡು ಅಲೆದರೂ ಕೂಡ ಸಂಜೆ ಹೊತ್ತು ಬಯಲಿನ ಆಟದೊಳಗೆ ಸಿಗಲೇಬೇಕು. ಎಲ್ಲಿ ಅಡಗಿದರೂ, ಮೈದಾನದೊಳಗೆ ಮುಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲವಲ್ಲ! ಬಯಲಲ್ಲಿ ಬೆತ್ತಲಾಗಲೇಬೇಕಲ್ಲ! ಹಾಂ, ಇನ್ನು ಹೈಸ್ಕೂಲು ದಿನಗಳ ಅರುಳು ಪ್ರೀತಿಗೆ ಅದೆಷ್ಟು ಗ್ರೌಂಡುಗಳ ಪಾವಟಿಗೆಗಳು ವೇದಿಕೆಯಾಗಿದೆಯೋ ಏನೋ.  ಬಯಲ ತುದಿಯ ಮರದ ಕೆಳಗೆ ಕೂತು ಆಡಿದ ಪಿಸುಮಾತುಗಳು ಎಷ್ಟು ಹೃದಯಗಳನ್ನ ಜೋಡಿಸಿರಬಹುದು? ಮಧ್ಯಾಹ್ನದ ಬಿಸಿಲಿನಲ್ಲಿ ಬೆವರು ಸುರಿಸುತ್ತ ಬಯಲು ದಾಟಿಸಿದ ಸಿಕ್ಸರು, ಹೊಡೆದೊಂದು ವಾಲಿಬಾಲಿನ ಸ್ಮಾಶು ಅದೆಷ್ಟು ಕನಸುಗಳನ್ನು ಉದ್ದೀಪಿಸಿರಬೇಡ?

ಬಯಲೆಂದರೆ ಆಟ. ಬಯಲೆಂದರೆ ಬೆರಗು. ಬಯಲೆಂದರೆ ದೇಗುಲದ ತೇರಿಗೂಮಸೀದಿಯ ಉರೂಸಿಗೂಮದುವೆಗೂ ಮಸಣಕ್ಕೂ ಎಲ್ಲದಕ್ಕೂ ಬಯಲೇ ತವರುದೇಗುಲದ ರಥಚಕ್ರಗಳು ಸಾಗದ ಬಯಲು ಯಾವ ಹಳ್ಳಿಯಲ್ಲೂ ಇಲ್ಲವೇನೋಬಯಲುಗಳಿಲ್ಲವಾಗಿದ್ದರೆ ಜಾತ್ರೆಗಳೆಂಬ ಸಾಂಸ್ಕೃತಿಕ ಉತ್ಸವಗಳೇ ಇಲ್ಲವಾಗುತ್ತಿತ್ತಲ್ಲ ನಮ್ಮ ಕಡೆಯ ಬಹಳ ಊರುಗಳಲ್ಲಿ ಬೇಸಿಗೆಯಲ್ಲಿ ಗದ್ದೆಗಳೇ ತೇರೆಳೆಯುವ ಬಯಲಾಗಿ ಪರಿವರ್ತನೆ ಆಗುವುದೂ ಇದೆಹಿಂದಿನ ದಿನ ಬರಿಯ ಮೈದಾನವಾಗಿದ್ದ ಜಾಗಅಂದು ದೇವತಾಣಭಕ್ತಾದಿಗಳ ಜೈಕಾರ ಉದ್ಘೋಷಗಳಿಗೆ ಕಿವಿಯಾಗುವ ಭಾಗ್ಯಒಳಗಿನ ದೇವರನ್ನ ನೋಡಲು ಹೋಗುವ ಮಂದಿಗೆ ವಿಶ್ರಾಂತಿಧಾಮಹೊರಗಿನ ಬಯಲಿದ್ದರೆ ತಾನೇಒಳಗಿನ ಆಲಯ?ನಮ್ಮೂರ ಬಯಲುಗಳು ನಮ್ಮನ್ನ ಸಾಂಸ್ಕೃತಿಕವಾಗಿ ಕೂಡ ರೂಪಿಸುವಲ್ಲಿ ಸಹಕಾರಿಯಾಗಿವೆ. ಅದೆಷ್ಟು ನಾಟಕ, ಯಕ್ಷಗಾನಗಳು..ಹಗಲು ಬಟಾಬಯಲಾದ ಜಾಗ, ಸಂಜೆ ಕಳೆದ ಮೇಲೆ ಝಗಮಗಿಸುವ ದೀಪಗಳನ್ನ ಹೊತ್ತು, ಬಣ್ಣಬಣ್ಣದ ಹೊಸ ಲೋಕವೊಂದನ್ನು ಮಂದಿಯೆದುರು ತೆರೆದಿಡುವ ತಾಣ. ವಿಸ್ತಾರ ಬಯಲ ತುದಿಯಲ್ಲಿ ಮಿಣುಕು ಮಿಣುಕಾಗಿ ಕಾಣುವ ರಂಗಸ್ಥಳ, ಅಲ್ಲಿಂದ ಹೊರಡುತ್ತಿರುವ ಚೆಂಡೆಮದ್ದಳೆಗಳ ಮಾಯಾದನಿ, ಬಣ್ಣಬಣ್ಣದ ವೇಷಗಳ ಅಬ್ಬರ, ಹೀಗೆ ರಾತ್ರಿಗಳು ಹಿಗ್ಗಿ ನಮ್ಮ ಹಿಗ್ಗಿಗೆ ಕಾರಣವಾಗುತ್ತಿದ್ದವು. ಬಯಲಲ್ಲಿ ಹಾಸಿದ ಚಾಪೆಯ ಮೇಲೆ ಕುಳಿತೇ ದೇವಲೋಕದ ಪಯಣ. ಯಾವು ಯಾವುದೋ ಊರುಗಳ ಮೈದಾನಗಳೆಲ್ಲ ನನ್ನೊಳಗೆ ಅವೆಷ್ಟೋ ರಸರಾತ್ರಿಗಳ ನೆನಪನ್ನುಳಿಸಿವೆ. ಮನರಂಜನೆಯೆಂದರೆ ಬೇರೇನೂ ಇಲ್ಲದ ಆ ಕಾಲದಲ್ಲಿ ಇಂತಹ ಖುಷಿಗಳೇ ನಮ್ಮನ್ನ ಬೆಳೆಸಿದ್ದು.

ಜಗತ್ತು ಕಿಷ್ಕಿಂಧೆಯಾಗುತ್ತ ಬದಲಾಗುತ್ತಿರುವ ಈ ಹೊತ್ತಿನಲ್ಲಿ ಉಳಿದುಕೊಂಡಿರುವ ಈ ಮೈದಾನಗಳೇ ಊರುಗಳು ಉಸಿರಾಡಲು ಸಹಕರಿಸುವ ಶ್ವಾಸಕೋಸಗಳಂತೆ ಕಾಣುತ್ತಿದೆ. ಗರ ಹೊಡೆದ ನಗರಗಳ ಮೈದಾನಗಳಂತೂ ಶನಿವಾರ ಭಾನುವಾರಗಳಲ್ಲಿ ಕಾಲು ಕೂಡ ಹಾಕಲು ಜಾಗವಿಲ್ಲದೇ ಕಿಕ್ಕಿರಿದು ತುಂಬಿರುತ್ತದೆ. ನಲವತ್ತು ಕ್ರಿಕೆಟ್ ತಂಡಗಳೂ ಇಪ್ಪತ್ತು ಮಂದಿ ಸೈಕಲೋಡಿಸುವ ಹುಡುಗರು, ತಟ್ಟಾಡಿಕೊಂಡು ಹೊಸದಾಗಿ ಟೂವೀಲರು ಕಲಿಯುವ ಹೆಂಗಸರೂ ಈ ಗ್ರೌಂಡು ತಮ್ಮದು ಮತ್ತು ತಮ್ಮದಷ್ಟೇ ಎಂಬ ತಲ್ಲೀನತೆಯಲ್ಲಿ ಕಳೆದುಹೋಗಿರುತ್ತಾರೆ. ಪ್ರತೀ ಕ್ರಿಕೆಟ್ ತಂಡಕ್ಕೂ ತಮ್ಮ ಮಂದಿಗಳಷ್ಟೇ ಕಾಣುವುದು ತಮ್ಮ ಬಾಲುಗಳನ್ನಷ್ಟೇ ಕ್ಯಾಚು ಹಿಡಿಯುವುದು ಈ ವಿಶ್ವದ ಕೌತುಕಗಳಲ್ಲೊಂದು. ಐದು ದಿನಗಳ ಕಾಲದ ಇರುಕು ಬದುಕನ್ನ ಬಯಲೊಳಗೆ ಮರೆಯುತ್ತ ಮೆರೆಯುವುದು ಎಲ್ಲರಿಗೂ ಇಷ್ಟವೇ.

ಇಂದಿಗೂ ನಮ್ಮೂರಲ್ಲಿ ಸಂತಮೇರಿಯ ಹಬ್ಬ ಅದೇ ಮೈದಾನದಲ್ಲಿ ನಡೆಯುತ್ತದೆ, ಜಾತ್ರೆಯ ರಥವೂ ಬಯಲಿನಲ್ಲೇ ಓಡುತ್ತದೆ. ನೋಡುವ ಕಣ್ಣುಗಳು ಬೇರೆ ಇರಬಹುದು, ಆದರೆ ಮನಸ್ಸಿನ ಭಾವ ಮಾತ್ರ ಅದೇ ಅಲ್ಲವೇ? ಆದರೆ, ಪ್ರಪಂಚವೇ ಕಿರಿದಾಗುತ್ತ ಹೋಗುತ್ತಿರುವ ಈ ಕಾಲದಲ್ಲಿ, ಬಯಲುಗಳೂ ಕಿರಿದಾಗುತ್ತಿವೆ. ಕಾಲದ ಹೊಡೆತಕ್ಕೆ, ಅದಕ್ಕೂ ಹೆಚ್ಚಾಗಿ ಮನುಷ್ಯನ ಹಪಹಪಿಯ ತುಡಿತಕ್ಕೆ ಸಿಕ್ಕು ಬಯಲಿನವಕಾಶ ಕುಗ್ಗುತ್ತಿದೆ. ಸುತ್ತ ದೊಡ್ಡ ದೊಡ್ಡ ಬಿಲ್ಡಿಂಗುಗಳ ಕೋಟೆಗಳ ಮಧ್ಯ ಸಿಕ್ಕು ನರಳುತ್ತಿರುವ ಮೈದಾನಗಳು ಅವೆಷ್ಟಾಗಿವೆಯೋ ಏನೋ ಈಗ. ಆದರೆ, ಏನೇ ಆದರೂ ಕೂಡ ಬಯಲುಗಳ ಅಸ್ತಿತ್ವ ಹೀಗೇ ಇದ್ದೀತು. ಏಕೆಂದರೆ ಮನುಜನ ಸ್ವಾತಂತ್ರ್ಯದ ಬಯಕೆಗೆ ಬಯಲೇ ತಾನೇ ರೂಪಕ?  ಬಯಲುಗಳು ಅಳಿದ ದಿನ, ಬೇರೆ ಏನೂ ಉಳಿದಿಲ್ಲ ಎಂದು ಅರ್ಥ. ಅಂತಹ ದಿನಗಳು ಬರದೆ ಇರಲೆಂದು ಆಶಿಸುವುದಷ್ಟೇ ನಮ್ಮ ಪಾಲಿನ ಕೆಲಸ.