"ಏನ್ ಸಾರ್, ವ್ಹೀಲ್ ಚೇರ್ ಮೇಲೆ ಸೆಟ್ಲಾಗ್ ಬಿಟ್ಟಿದೀರಾ"? - ಅಸಹಾಯಕವಾಗಿ ಗಾಲಿ ಕುರ್ಚಿಯ ಮೇಲೆ ಕುಳಿತ ವೃದ್ಧನನ್ನು ಸಿಟಿ ಹುಡುಗ ಮಾತಾಡಿಸುವ ರೀತಿ ಇದು.
"ಹುಡುಗೀರು ಯಾವ್ ಏಜ್ ಆದ್ರೂ ಓಕೆ ಕಣೋ, ಎಲ್ಲಾ ಒಂದೇ..."ಅನ್ನುತ್ತಾ ಅರ್ಥಗರ್ಭಿತವಾಗಿ ನಗುತ್ತಾನೆ ಹೀರೋ..
"ಕರೆಕ್ಟಾಗಿ ಕಾಳ್ ಹಾಕ್ಬೇಕು ಮಗಾ".. ಅನ್ನುವುದು ಪ್ರೀತಿ ಬಗ್ಗೆ ನಾಯಕನಾಡುವ ಮಾತು...
ಯೋಗರಾಜ ಭಟ್ಟರ ಗಾಳಿಪಟ ಸಿನಿಮಾದ "ಉತ್ತಮ ಸಂಭಾಷಣೆ" ಗಳ ಮಧ್ಯದ ಕೆಲವು ಸಾಲುಗಳಿವು.
ಗಾಳಿಪಟ ಚಲನಚಿತ್ರದ ಕೆಲವು ಕುತೂಹಲ ಮೂಡಿಸುವ ಸೀನುಗಳನ್ನೂ, ಹಾಡುಗಳನ್ನೂ ಈ ಮೊದಲೇ ನೋಡಿದ್ದೆನಾದ್ದರಿಂದ ಮತ್ತು ಈ ಸಿನಿಮಾದ ಬಗ್ಗೆ ಎಲ್ಲರಂತೆಯೇ ನನಗೂ ಬಹಳ ನಿರೀಕ್ಷೆಗಳು ಇದ್ದಿದ್ದರಿಂದ ಮೊದಲ ದಿನವೇ ಚಿತ್ರ ವೀಕ್ಷಿಸಿದೆ.
ದಿಗಂತ್, ಕಿಟ್ಟಿ ಮತ್ತು ಗಣಿ ಬೆಂಗಳೂರಿನಲ್ಲಿ ವಾಸವಾಗಿರುವ ಮೂರು ಜನ ಸ್ನೇಹಿತರು. ಕಿಟ್ಟಿ ಸಾಫ್ಟ್‌ವೇರ್ ಇಂಜಿನಿಯರ್, ಗಣಿ ಕ್ರೆಡಿಟ್ ಕಾರ್ಡ್ ಮಾರುವಾತ , ದಿಗಂತ್ ಇನ್ನೂ ಮೆಡಿಕಲ್ ಓದುವ ಹುಡುಗ. ಎಲ್ಲರಿಗೂ ಸಿಟಿ ಜೀವನದ ಏಕತಾನತೆ ಬೇಜಾರು ಬಂದು ದಿಗಂತನ ಅಜ್ಜನ ಮನೆ, ಮೋಡಗಳೇ ತುಂಬಿಕೊಂಡಿರುವ ಹಳ್ಳಿ ಮುಗಿಲುಪೇಟೆಗೆ ಹೊರಡುತ್ತಾರೆ.
ಅವನ ಅಜ್ಜನ ಮನೆಯ ಪಕ್ಕದ ಎಸ್ಟೇಟಿನಲ್ಲಿ ಮೂರು ಜನ ಹುಡುಗಿಯರು ಇರುವ, ಬೇಟೆಯ ಹುಚ್ಚಿನ ಅನಂತನಾಗ್ ಮನೆ ಯಜಮಾನರಾಗಿರುವ ಸಂಸಾರವೊಂದಿರುತ್ತದೆ.ಅನಂತನಾಗ್ ಹಂದಿಯೊಂದರ ಬೇಟೆಯಾಡಲು ಹೋಗಿ ಕಾಲಿನ ಸ್ವಾಧೀನ ಕಳೆದುಕೊಂಡು ಅಸಹಾಯಕ ಸ್ಥಿತಿಯಲ್ಲಿರುವ ಮನುಷ್ಯ. ಮನೆಯ ಮೂರು ಹೆಣ್ಣು ಮಕ್ಕಳೂ ಮೂರು ತರಹದ ಗುಣ ಸ್ವಭಾವದವರು. ಈ ಹುಡುಗರು ಅವರ ಮನೆ ಸೇರಿಕೊಂಡು, ಸಿಕ್ಕ ಸಿಕ್ಕ ಹಾಗೆ ಚೇಷ್ಟೆ ಮಾಡಿಕೊಂಡು, ಹಂದಿ ಗಿಂದಿ ಓಡಿಸಿಕೊಂಡು ಒಂದಿಷ್ಟು ಕಾಲ ಹಾಯಾಗಿ ಕಾಲ ಕಳೆಯುತ್ತಾರೆ. ಈ ಮಧ್ಯೆ ಏನೇನೋ ಆಗಿ ಮೂರು ಜನ ಹುಡುಗರಿಗೂ ಈ ಮೂರು ಹುಡುಗಿಯರ ಮೇಲೆ ಪ್ರೀತಿ ಹುಟ್ಟುತ್ತದೆ. ಎರಡು ಜೋಡಿಗಳು ಮನೆಯವರನ್ನೂ ಒಲಿಸಿಕೊಳ್ಳುವುದರಲ್ಲಿ ಯಶಸ್ವಿಯಾಗುತ್ತಾರೆ. ಮತ್ತೊಬ್ಬನ ಕಥೆ ಏನಾಗುತ್ತದೆ ಅನ್ನುವುದು ಗಾಳಿಪಟದ ಕೊನೆಗೆ ತಿಳಿಯುತ್ತದೆ.
ಇದು ಸಿನಿಮಾದ ಒಟ್ಟು ಸಾರಾಂಶ.ಯೋಗರಾಜ ಭಟ್ಟರು ಮುಂಗಾರು ಮಳೆಯ ನಂತರ ನಿರ್ದೇಶಿಸಿದ ಬಹು ಚರ್ಚಿತ ಸಿನಿಮಾ ಗಾಳಿಪಟ. ಹಿಂದಿನ ಸಿನಿಮಾ ಮುಂಗಾರು ಮಳೆ ಯದ್ವಾ ತದ್ವಾ ಹಿಟ್ ಆಗಿದ್ದರಿಂದ ಭಟ್ಟರು ಹಳೆಯ ಸಿದ್ಧ ಸೂತ್ರಕ್ಕೇ ಅಂಟಿಕೊಂಡಿದ್ದು ಮೇಲ್ನೋಟಕ್ಕೇ ಗೋಚರವಾಗುತ್ತದೆ. ಅದೇ ಮುಂಗಾರು ಮಳೆಯ ಧಾಟಿಯ ಹಲವು ಡೈಲಾಗುಗಳು, ಮಳೆ, ಬೆಟ್ಟ, ಜಲಪಾತ. ಆದರೆ ಕೇವಲ ಅವುಗಳನ್ನು ತೋರಿಸುವ ಭರದಲ್ಲಿ ಬಿಗಿಯಾದ ಕಥೆಯನ್ನು ಹೆಣೆಯುವ ಹೊಣೆಗಾರಿಕೆಯನ್ನು ಭಟ್ಟರು ಮರೆತು ಬಿಟ್ಟಿದ್ದಾರೆ. ಇಡಿಯ ಸಿನಿಮಾದಲ್ಲಿ ಏನೂ ಕೂಡಾ ಸಂಭವಿಸುವುದೇ ಇಲ್ಲ. ಕೊನೆಗೂ!
ಮುಂಗಾರು ಮಳೆಯ ಜಪ ಮಾಡಿಕೊಂಡು ನೀವು ಥಿಯೇಟರ್‌ಗೆ ಕಾಲಿಟ್ಟರೆ ನಿರಾಸೆ ಖಚಿತ. ಏಕೆಂದರೆ ಈ ಚಿತ್ರ ಅದರ ಸನಿಹಕ್ಕೂ ಬಂದು ನಿಲ್ಲುವುದಿಲ್ಲ. ಅಲ್ಲಿನ ಬಿಗಿ ನಿರೂಪಣೆಯಿಲ್ಲ , ಅಲ್ಲಿನ ಅದ್ಭುತ ಅನ್ನಿಸುವಂತಹ ಡೈಲಾಗುಗಳಿಲ್ಲ ಮತ್ತು ಇಡಿಯ ಚಿತ್ರದಲ್ಲಿ ಏನೂ ಘಟಿಸುವುದೇ ಇಲ್ಲ. ಕ್ಲೈಮ್ಯಾಕ್ಸು ಯಾವುದೋ ಹಳೆಯ ಕನ್ನಡ ಚಿತ್ರವನ್ನು ನೆನಪಿಗೆ ತರಿಸಬಹುದಾದ ಸಾಧ್ಯತೆಗಳಿವೆ.ಗಣೇಶ್, ರಾಜೇಶ್ ಕೃಷ್ಣ, ದಿಗಂತ್ , ಡೈಸಿ ಬೋಪಣ್ಣ , ನೀತು, ಭಾವನಾ, ಅನಂತ್ ನಾಗ್, ರಂಗಾಯಣ ರಘು – ಎಲ್ಲರದೂ ಓಕೆ ಅನ್ನಿಸುವ ಅಭಿನಯ. ಗಣೇಶ್‌ಗೆ ಮಳೆಯಲ್ಲಿ ನೆನೆದುಕೊಂಡು ಡೈಲಾಗು ಹೇಳುವುದು ಮೊದಲೇ ಅಭ್ಯಾಸವಾಗಿರುವುದರಿಂದ ಎಲ್ಲರಿಗೂ ಸ್ವಲ್ಪ ಹೆಚ್ಚು ಪ್ರಿಯ ಅನ್ನಿಸಬಹುದು, ಅಷ್ಟೇ.
ಹಾಗೆಂದು ಗಾಳಿಪಟವನ್ನು ಸಾರಾಸಗಟಾಗಿ ತಿರಸ್ಕರಿಸುವ ಹಾಗಿಲ್ಲ. ಚಿತ್ರದ ಲೊಕೇಶನ್‌ಗಳು ಅದ್ಭುತ. ನವಿರು ಹಾಸ್ಯದಿಂದ ಕೂಡಿದ ಭಟ್ಟರ ಸಂಭಾಷಣೆ, ಕಾಯ್ಕಿಣಿ ಹಾಡುಗಳು, ಹರಿಕೃಷ್ಣ ಸಂಗೀತ ಮನಕ್ಕೆ ತಟ್ಟುತ್ತವೆ. ನೂರಾರು ಯಕ್ಷಗಾನ ವೇಷಧಾರಿಗಳು ಕುಣಿಯುವ “ನಧೀಂಧೀಂತನಾ" ಹಾಡಂತೂ ಕಣ್ಣಿಗೆ ಹಬ್ಬ. ಕಾಡುಹಂದಿ ನಿಮಗೆ ಗ್ರಾಫಿಕ್ಸ್ ಅನ್ನಿಸುವುದೇ ಇಲ್ಲ.
ಚಿಕ್ಕಮಗಳೂರಿನ ಎಸ್ಟೇಟು, ಹೊರಗೆ ಕಾಲಿಟ್ಟರೆ ಕೊಡಚಾದ್ರಿ ಬೆಟ್ಟ, ಅಲ್ಲಿ ನಿಂತು ನೋಡಿದರೆ ಶಿವನಸಮುದ್ರ ಜಲಪಾತ - ಹೀಗೊಂದು ಕಲ್ಪನೆ ಭಟ್ಟರಿಗೆ ಬಂದಿದ್ದಾದರೂ ಹೇಗೆ ಅಂತ! ನಿಮಗೆಲ್ಲೂ ಇದು ಅಸಹಜ ಅನ್ನಿಸುವುದಿಲ್ಲ. ಭೌಗೋಳಿಕ ಜ್ಞಾನ ಬದಿಗಿಟ್ಟು ಸಿನಿಮಾ ನೋಡುವ ಮನಸ್ಥಿತಿ ಬೇಕು ಅಷ್ಟೆ.
ಆದರೆ ಬರಿಯ ಬೆಟ್ಟ ಗುಡ್ಡ, ಜಲಪಾತ, ಮೋಡ, ಮಳೆ, ಛಾಯಾಗ್ರಹಣ ಮತ್ತು ಸಂಗೀತ ಒಂದು ಚಿತ್ರವನ್ನು ಉತ್ತಮವಾಗಿಸಲು ಸಾಧ್ಯವಿಲ್ಲ ಅನ್ನುವ ಸತ್ಯದ ಅರಿವು ಯೋಗರಾಜ ಭಟ್ಟರಿಗೆ ಆಗಿದ್ದರೆ ಚೆನ್ನಾಗಿತ್ತು.
ಇಷ್ಟಾಗಿ, ನಾನೇನೇ ಬರೆದರೂ ನೀವು ಈ ಸಿನಿಮಾ ನೋಡೇ ನೋಡುತ್ತೀರಿ, ಅದು ನನಗೆ ಗೊತ್ತು!