ಗುರುವಾರ, ಏಪ್ರಿಲ್ 26, 2007

ಬೇಸಗೆಯ ಮದುವೆಯೆಂದರೆ..

ಸಿಕ್ಕಾಪಟ್ಟೆ ಬಿಸ್ಲು, ಮಕ್ಳಿಗೆಲ್ಲ ರಜೆ. ಹೊರಗೆ ತಿರುಗಾಡೋಕೆ ಹೊರಟರೆ ಬೆವ್ರು- ಸೆಖೆ. ಬಿಸಿ ಗಾಳಿ. ಮನೆ ಹಂಚಿನ್ ಮೇಲೆ, ಚಪಾತಿ ಸುಡಬಹುದು. ಊರಲ್ಲಿ ಜಾತ್ರೆ ,ದಿನಾ ದೇವಸ್ಥಾನಕ್ಕೆ ಬೇರೆ ಹೋಗ್ಬೇಕು. ಹಲಸಿನ ಹಪ್ಳ ಮಾಡೋ ಚಿಂತೆ, ಮಳೆಗಾಲಕ್ ಕಟ್ಗೆ ಒಟ್ ಮಾಡೋ ಕಷ್ಟ, ಕರೆಂಟಿಲ್ದೇ ಒದ್ದಾಡೋ ರಾತ್ರೆ, ಒಂದಾ ಎರಡಾ?! ಎಲ್ಲ ಈ ಬೇಸಿಗೆಯ ಜೊತೆ ಜೊತೆಗೇ ಬರತ್ತೆ.. ಅದೇನೋ ಹೇಳ್ತಾರೆ ನಮ್ಮಲ್ಲಿ, "ಬಕನ್ ಬಾರಿ, ಮಗನ್ ಮದ್ವೆ, ಹೊಳಿಂದಚೀಗ್ ಪ್ರಸ್ಥ, ಎಲ್ಲ ಒಟ್ಟಿಗೇ ಬಂದಿತ್ತಡ" ಅಂತ.

ಹಾ! ಮದ್ವೆ ಅಂದ್ ಕೂಡ್ಲೆ ನೆನ್ಪಾಯ್ತು, ಈ ಮದ್ವೆ ಗೌಜು ಗಲಾಟೇನೂ ಬರೋದು ಬೇಸ್ಗೇಲೆ. ಪ್ರತೀ ವರ್ಷ ಎಪ್ರೀಲು ಮೇ ತಿಂಗ್ಳಲ್ಲಿ ಕಡ್ಮೆ ಅಂದ್ರೂ ೧೦ ಮದ್ವೆ ಇದ್ದಿದ್ದೆ. ಅದರಲ್ಲಿ ೪-೫ ನಮ್ಮ ಅತ್ಯಂತ ಹತ್ತಿರದೋರ್ದು. ಮನೇಲಿ ನೀರಿರಲ್ಲ , ನಮಗೇ ಪರದಾಟ , ಅದ್ರ್ ಜೊತೆಗೆ, ಒಂದಿಷ್ಟ್ ಜನ ನೆಂಟ್ರು - ನಮ್ ಮನೆ ಹತ್ರ ಅಂತ ಬಂದು ಉಳ್ಕೊಂಡಿರೋರು, ಚಿಳ್ಳೆ ಪಿಳ್ಳೆಗಳ ಸಮೇತ. ಮೂರು ಟ್ಯೂಬ್ ಲೈಟು, ಒಂದಿಷ್ಟ್ ಗ್ಲಾಸು, ಒಡಿಯೋದೆ. ನಮಗೆ ಬೈಯೋ ಹಾಂಗೂ ಇಲ್ಲ, ಬಿಡೋ ಹಾಂಗೂ ಇಲ್ಲ, ಬಿಸಿ ತುಪ್ಪ!!

ಹೊರಗಡೆ ತೋಟದಲ್ಲಿ ಕೆಲ್ಸಕ್ ಬಂದಿರೋರು ಒಂದಿಷ್ಟ್ ಜನ . ಅವ್ರ್ಗೂ ಮಾಡ್ ಹಾಕಿ, ಬಂದೊರ್ನ ಸುಧಾರ್ಸಿ, ಉಫ್,ಅಮ್ಮ ಕಂಗಾಲು. ಮದ್ವೆ ಮನೆಗೆ ಬೇರೆ ಹೋಗ್ಬೇಕು, ೨ ದಿನಾ ಮುಂಚೆ! ಮಂಗಲ ಪತ್ರ ಕೊಟ್ ಕೂಡ್ಲೆ ಧಮಕೀನೂ ಬಂದಿರುತ್ತದೆ, "ಎರಡು ದಿನ ಮುಂಚೆ ಬಂದು ಎಲ್ಲಾ ಸುಧಾರ್ಸಿಕೊಡಕು" ಅಂತ. ಏನೇ ರಗ್ಳೆ ಇದ್ರೂ, ಮದ್ವೆ ಮನೆ ಅಂದ್ರೆ ಖುಷಿನೇ ಬಿಡ್ರೀ!,ನಂಗೆ, ನಿಮ್ಗೆ ಮತ್ತೆ ಎಲ್ಲರಿಗೂ, ಅಲ್ವಾ?!

ಮದ್ವೆ ಮನೆ ಓಡಾಟದಲ್ಲಿರೋ ಸಂತೋಷ ಮತ್ ಎಲ್ಲೂ ಇಲ್ಲ! ಎಲ್ಲರೂ ಕೆಲ್ಸ ಮಾಡೋರೆ. ನಾನ್ ಹೇಳ್ತಿರೋದು ಮನೇಲೇ ನಡಿಯೋ ಮಲೆನಾಡಿನ ಮದ್ವೆ ಬಗ್ಗೆ, ಈ ಪೇಟೆ ಛತ್ರದ್ ಮದ್ವೇ ಅಲ್ಲಾ ಮತ್ತೆ. ಚಪ್ಪರ ಹಾಕೋರೇನೂ, ಪಾತ್ರೇ ಸಾಗ್ಸೋರೇನು, ಹೂವು , ಹಣ್ಣು ತರೋರೇನು, ಓಡಾಟವೇ ಓಡಾಟ. ಮಕ್ಳಿಗಂತೂ ದೊಡ್ಡೋರ್ ಕೈ ಕಾಲಡಿಗೆ ಸಿಗೋದೆ ಸಂಭ್ರಮ. ಉಮೇದಲ್ಲಿ ಕೆಲಸ ಮಾಡೋ ಯುವಕರ ಒಂದು ಪಂಗಡ ಆದ್ರೆ, ಕೆಲ್ಸ ಮಾಡ್ಸೋ ಹಿರೀರದು ಇನ್ನೊಂದು. "ತಮ್ಮಾ, ಆ ಬದಿ ಸ್ವಾಂಗೆ ಹೊಚ್ಚಿದ್ದು ಸರಿ ಆಯ್ದಿಲ್ಲೆ ನೋಡು, ಹಾನ್, ಸ್ವಲ್ಪ ಇತ್ಲಾಗ್ ತಗ, ಹಾ, ಹಾಂಗೆ.. ಈಗ್ ಸರಿ ಆತು" "ಒಲೆ ಸ್ವಲ್ ವಾರೆ ಆದಾಂಗ್ ಇದ್ದು, ಆ ತಿಮ್ಮಣ್ಣನ್ ಕರಿ", "ಬೆಳ್ಗೆ ಹಾಲ್ ತಪ್ಪವು ಯಾರು, ಬೇಗ್ ಹೋಗ್ ಬನ್ನಿ"- ಉಸ್ತುವಾರಿ ಕೆಲ್ಸ!. ಕೆಲ್ಸಾ ಮಾಡ್ತಾ ಇರೋ ಹುಡುಗ್ರು ಇವ್ರ್ ಮೇಲೆ ಸೇಡ್ತೀರ್ಸ್ಕೊಳಕ್ಕೆ ಸರಿಯಾದ್ ಟೈಮ್ ಗೆ ಕಾಯೋದಂತೂ ಸುಳ್ಳಲ್ಲ.

ಇಡೀ ಊರಿನ ಹುಡುಗ ಪಾಳಯಕ್ಕೆ ಈ ಮದ್ವೆ, ಒಂದು ನೆಪ. ಮದ್ವೆ ಮುಗಿಯೋ ತಂಕ ಇವರ ಹಾರಾಟನ ಯಾರೋ ಕೇಳೋ ಹಾಂಗಿಲ್ಲ! ಪರೀಕ್ಷೆ, ಮಾಷ್ಟ್ರು, ಅಪ್ಪ- ಯಾರ್ ಕಾಟನೂ ಇರಲ್ಲ ಬೇರೆ. ಮನೆ ಹಿಂದಿನ ಬ್ಯಾಣದ ಗೇರು , ಮಾವುಗಳೆಲ್ಲ ಇವರದೇ ಪಾಲು. ಹುಡುಗೀರ ಪ್ರಪಂಚ ಬೇರೆಯದೇ, ಹೊಸ ಬಟ್ಟೆ, ಮದರಂಗಿ, ಹೂವು, ಅಮ್ಮನ ಹೊಸ ರೇಷ್ಮೆ ಸೀರೆಯ ಚಂದ, ಬೆಂಗಳೂರಿಂದ ಬಂದ ಅಕ್ಕ ಕಲಿಸಿಕೊಟ್ಟಿರೋ ಜಡೆ ಹಾಕುವ ನೂತನ ವಿಧಾನ..

ಇಷ್ಟೆಲ್ಲ ಗಡಿಬಿಡಿ ಎಲ್ಲರಿಗೆ ಇದ್ದರೂ , ಎಲ್ಲೋ ಒಂದು ಜೊತೆ ಕಣ್ಣು ಇನ್ನೊಂದನ್ನ ಸಂಧಿಸಿಯೇ ಸಂಧಿಸುತ್ತವೆ ಮತ್ತು ಚಿಗುರು ಪ್ರೇಮವೊಂದು ಹುಟ್ಟುತ್ತದೆ, ಮತ್ತದು ಅವರಿಬ್ಬರಿಗೆ ಮಾತ್ರ ತಿಳಿದಿರುತ್ತದೆ ! ಅದೇ ಊರಿನ್ ಹುಡ್ಗಿ ಇರಬಹುದು, ವರ್ಷಗಟ್ಲೆ ಅವಳು ಇವನ್ನ - ಇವನು ಅವಳನ್ನ ನೋಡ್ತಾ ಇದ್ರೂ, ಈ ಮದ್ವೆ ಮನೆ ಅವರಲ್ ಹೊಸ ಭಾವ ಹುಟ್ಟಿಸುತ್ತದೆ. ಎಲ್ಲೋ ಅಟ್ಟದ ಮೇಲಿನ ಬಾಳೆಗೊನೆಯನ್ನ ಕೆಳಗಿಳ್ಸೋವಾಗ, ಪಾತ್ರೆ ದಾಟಿಸುವಾಗ, ತರಕಾರಿ ಹೆಚ್ಚುವಾಗ, ತೋಟದಲ್ಲಿ ವೀಳ್ಯದೆಲೆ ಏಣಿಯನ್ನ ಅವನು ಹತ್ತಿದ್ದಾಗ, ಒತ್ತಾಯ ಮಾಡಿ ಹೋಳಿಗೆ ಬಡಿಸುವಾಗ!..

ತಲೆ ಮೇಲೆ ಸುಡೋ ಬಿಸ್ಲಿದ್ರೂ, ಗಾಳಿ ಬೀಸೋದು ನಿಲ್ಸಿದ್ರೂ, ಸಿಕ್ಕಾಪಟ್ಟೆ ಜನ ಅತ್ತಿಂದಿತ್ತ ಓಡಾಡ್ತಾ ಇದ್ರೂ, ಯಾವ್ದೋ ಒಂದು ಮಸ್ತ್ ಘಳಿಗೆಯಲ್ಲಿ ಹುಟ್ಟಿ ಬಿಡುತ್ತದೆ ಈ ಭಾವ. ದೂರದೂರಿಂದ ಬಂದ ಹುಡುಗನಾದರೆ ಅಥವ ಹುಡುಗಿಯಾದರೆ ಕತ್ತಲ ಮೂಲೆಯವರೆಗೆ ಸಾಗೀತೇನೋ, ಇಲ್ಲವಾದರೆ ಹೆಚ್ಚಿನ ಸಂದರ್ಭಗಳಲ್ಲಿ, ಕಣ್ಣ ಆರಾಧನೆಯಲ್ಲೇ ಕಳೆಯುತ್ತದೆ. ಪರಸ್ಪರ ನೋಟದಲ್ಲೇ ಅಚ್ಚರಿ- ನಗು.

ಮದುವೆ ಬರಿಯ ಇಬ್ಬರದಲ್ಲ , ಹಲವು ಬಂಧಗಳನ್ನ ಬೆಸೆಯುತ್ತದೆ. ನಾಲ್ಕು ವರ್ಷದಿಂದ ಮಾತಾಡ್ದೇ ಇರೋ ಗಣಪಣ್ಣ- ಮಾಬ್ಲೇಶ್ವರ ಈ ಮದುವೇಲಿ ಒಟ್ಟಿಗೇ ಅನ್ನದ ಕೌಳಿಗೆ ಹಿಡ್ದ್ರೂ ಆಶ್ಚರ್ಯ ಇಲ್ಲ! ಪಾಲಾಗಿ , ಅಡ್ಡ ಬಾಗಿಲುಗಳನ್ನ ಮುಚ್ಚಿದ್ದ ಮನೆಗಳು, ಈಗ ತೆರೆದು ಕೊಳ್ಳುತ್ತವೆ, ಎಲ್ಲರ ಮನೆಯ ಬಾಳೇ ಎಲೆಗಳೂ ಸಾಲಾಗಿ ಹಾಕಲ್ಪಡುತ್ತವೆ, ಸಾಲುಮನೆಗಳ ಅಟ್ಟದ ಮೇಲೆ ಹಾಸಿರುವ ಕಂಬಳಿಗಳು, ಇಡಿಯ ಊರಿನದು!. ಎಲ್ಲ ಕೊಟ್ಟಿಗೆಗಳ ಗಿಂಡಿ ನೊರೆ ಹಾಲು ಬಂದು ಬೀಳುವುದು ಒಂದೇ ಪಾತ್ರೆಗೆ. ವೆಂಕಣ್ಣ ನ ಮನೆಯ ಚಾಲಿಯೂ, ಗಿರಿ ಭಟ್ಟರ ಕೆಂಪಡಕೆಯೂ, ಒಂದೇ ವೀಳ್ಯದ ಬಟ್ಟಲೊಳಗೆ.

ಮದುವೆ, ಇಡಿಯ ಊರನ್ನ ಒಗ್ಗೂಡಿಸಿರುತ್ತದೆ. ಮದುವೆ ಮುಗಿದ ಮೇಲೆ, ಎಲ್ಲ ತೆರಳಿದ ಮೇಲೆ, ಊರಿಗೂರೇ ಆ ಖಾಲಿತನವನ್ನ ಅನುಭವಿಸುತ್ತದೆ. ಚಪ್ಪರ, ಮನೆಯ ಮೆತ್ತು ಎಲ್ಲ ಖಾಲಿ. ಬಾಡಿದ ಹೂವಿನ ರಾಶಿ, ಸುತ್ತಿಟ್ಟ ಚಾಪೆಗಳು, ತಮ್ಮ ತಮ್ಮ ಮನೆಗಳಿಗೆ ತೆರಳಲು ಸಿದ್ಧವಾಗಿ ನಿಂತ ಪಾತ್ರೆ- ಕಂಬಳಿಗಳ ಗಂಟು, ಪೆಚ್ಚು ಮೋರೆಯಲ್ಲಿ ಮತ್ತೆ ತೋಟದ ಕಡೆಗೆ ಹೊರಟು ನಿಂತ ಆಳು.. ಮಗಳನ್ನ ಕಳುಹಿಸಿ ಕೊಟ್ಟ ಅಪ್ಪ- ಅಮ್ಮ ಮಾತ್ರವಲ್ಲ, ಮದುವೆ ಮನೆಯಲ್ಲಿ ಸಿಕ್ಕಿದ್ದ ಹೊಸ ಗೆಳೆಯನನ್ನ ಕಳೆದುಕೊಂಡ ಹುಡುಗಿಯೂ ಅಷ್ಟೇ ನೋವನುಭವಿಸುತ್ತಾಳೆ. ಇನ್ನು ಯಾವಾಗ ಬರುವವನೋ ಅವನು..

ಎಲ್ಲರ ಮನೆಯ ಪಾತ್ರೆ ಪಗಡ, ಕಂಬಳಿಗಳು ಅವರ ಮನೆಯ ಮೇಲುಪ್ಪರಿಗೆಯಲ್ಲಿ ಕುಳಿತಾದ ಮೇಲೆ, ಕರೆದ ನೊರೆಹಾಲು ಮತ್ತೆ ತಮ್ಮ ತಮ್ಮ ಮನೆಯ ಗಿಂಡಿಗಳೊಳಗೇ ಕಲಕಲು ಶುರುವಾದ ಮೇಲೆ,
ಸಾಲು ಸಾಲಾಗಿ ಎಲ್ಲರ ಮನೆಯ ಚಿಟ್ಟೆಗಳನ್ನ ನೆಗೆದೋಡುತ್ತಿದ್ದ ಪುಟ್ಟ ಪೋರಿಯ ಕಾಲ್ಗೆಜ್ಜೆ ಶಬ್ದ, ಮುಂದೆಷ್ಟೋ ದಿನಗಳವರೆಗೆ ಅನುರಣಿಸುತ್ತಿರುತ್ತದೆ, ಬಿಸಿಲ ಮಧ್ಯಾಹ್ನಗಳಲ್ಲಿ.

ಸೋಮವಾರ, ಏಪ್ರಿಲ್ 23, 2007

ಮಳೆಯಲಿ ನೆನೆಯುವ ಮಜವೇ ಬೇರೆ...

ಮಳೆಯಲಿ ನೆನೆಯುವ ಮಜವೇ ಬೇರೆ, ಗಾಂಧಿಬಜಾರೊಳಗೆ!
ಅವಳಲ್ಲಿದ್ದರು ನೆನೆವಳು ಇಲ್ಲಿ ನನ್ನಯ ಜೊತೆ ಜೊತೆಗೇ.
ವಾಹನಸಾಲು ಓಡುತ್ತಿದ್ದರೂ, ಕೇಳದು ಅವುಗಳ ಶಬ್ದ,
ಮತ್ತೆ ಮತ್ತೆ ಮನದೊಳಗೆ, ಏನೇನೋ ಗುಣಲಬ್ಧ.

ಹೂವ ಮಾರುವ, ಹಣ್ಣ ಕೊಳ್ಳುವ ಎಲ್ಲರು ನೋಡಲು ಖುಷಿಯೇ.
ಹೊರಗಡೆಯೆಲ್ಲ ಒದ್ದೆಯಾದರೂ, ಮನವದು ಮಾತ್ರ ಬಿಸಿಯೇ.
ದೇವರ ಪೂಜೆಯ ಅಂಗಡಿಯೊಳಗೆ ಅರಸಿನ ಕುಂಕುಮ ಗೋಪುರವು
ಮಳೆಹನಿ ತಟ ಪಟ ಅನ್ನುತಲಿದ್ದರೆ, ನೆನಪಲಿ ಅವಳಾ ನೂಪುರವು.

ಯಾರಿಗು ಇಲ್ಲಿ ಆತುರವಿಲ್ಲ, ಮಳೆ ಹೊಡೆತದ ಭಯವಿಲ್ಲ,
ಏನಿವರೆಲ್ಲರು ಪ್ರೇಮಿಗಳೇನೇ?, ನನಗದು ತಿಳಿದಿಲ್ಲ.
ರಸ್ತೆಯಂಚಿನಾ ಹೋಟೇಲೊಳಗೆ ಕಾಫಿಯ ಪರಿಮಳವು,
ಯಾಕಿವಳಿಲ್ಲ ನನ್ನ ಜೊತೆ, ಸಣ್ಣಗೆ ಏಕೋ ತಳಮಳವು.

ಮರಸಾಲಿನ ಅಡಿ ನಡೆಯುತಲಿದ್ದರೆ, ನೀರ ಧಾರೆಯೊಳಗೆ
ಬರುವಳು ಅವಳೂ ನನ್ನ ಜತೆ, ನೆನಪ ದಾರಿಯೊಳಗೆ.
ಮಳೆಯಲಿ ನೆನೆಯುವ ಮಜವೇ ಬೇರೆ, ಗಾಂಧಿ ಬಜಾರೊಳಗೆ
ಪ್ರೀತಿಯೊಳಿದ್ದರೆ ಒಮ್ಮೆ ಬಂದು ಬಿಡಿ, ಮಳೆ ಕಳೆವುದರೊಳಗೆ!

ಬುಧವಾರ, ಏಪ್ರಿಲ್ 18, 2007

ಕಡೆಯ ಘಳಿಗೆ..

ಆ ಗುಡ್ಡದಾ ತುದಿಯ ಹೆಸರಿಲ್ಲದ ಮರದ,
ತುಂಡು ಗೆಲ್ಲೊಳಗೊಂದು ಹಳದಿ ಹಣ್ಣೆಲೆಯಿತ್ತು.
ಜೋರು ಗಾಳಿಗೆ ಮರವೊಮ್ಮೆ ತೂಗಲದು
ತೊಟ್ಟ ಬಂಧವ ಕಡಿದು, ನೆಲಕೆ ಬಿತ್ತು.

ಬಿದ್ದ ಎಲೆಗೇನೋ ನೋವು, ಚಡಪಡಿಕೆ ಜೊತೆಗೆ,
ಏನ ಮಾಡಿದೆ ತಾನಿಷ್ಟು ದಿನ, ತಿಳಿಯಲೇ ಇಲ್ಲ!
ಗುಂಪಿನೊಳಗಿದ್ದೆ, ತೊನೆದಾಡುತಲಿದ್ದೆ ,
ಎಲ್ಲರಂತೆಯೇ ಇದ್ದೆ, ಈಗ ಬುಡವೆ ಕಳಚಿತಲ್ಲ!

ಸಾಧನೆಯು ಶೂನ್ಯವೇ, ಬದುಕು ಮುಗಿವುದೆ ಈಗ?
ಯಾರಿಗಾದರು ನನ್ನ ನೆನಪು ಬರಬಹುದೆ?
ಎಲೆಯಾಗಿ ಹುಟ್ಟಿದ್ದೆ ತಪ್ಪಾಗಿ ಹೋಯಿತೇ
ದೈವ ಸೃಷ್ಟಿಯನು ನಾ ಪ್ರಶ್ನಿಸಲು ಬಹುದೆ?

ಹಣ್ಣಲೆಯು ಹಾಗಲ್ಲೆ ಕೊರಗುತಾ ಬಿದ್ದಿರಲು
ಬಂತೊಂದು ಪುಟ್ಟ ಹುಳ ಅದರ ಬಳಿಗೆ
ಎಲೆಯ ಮರುಗುವ ಕಾರಣವು ತಿಳಿಯುತಲಿ
ನಕ್ಕು ಸಮಾಧಾನಿಸಿತು, ತನ್ನ ಮಾತಿನಲಿ.

ನಿನ್ನ ನಿಲುಕಿನ ಕೆಲಸ ಮಾಡಿರುವೆ ನೀನು
ಮರದ ಹಸಿರಿನುಸಿರಲಿ ನಿನ್ನದೂ ಪಾಲಿತ್ತು,
ನೆಳಲ ತಂಪನು ಮರವು ನೀಡುತಿರುವಾಗಲ್ಲಿ,
ನಿನ್ನ ಮೈಯ್ಯಿಗು ಬಿಸಿಲ ಝಳವು ಸೋಕಿತ್ತು.

ಆ ಹಕ್ಕಿ ಗೂಡಿಗೆ, ನೀನಲ್ಲವೇ ತಳಪಾಯ,
ನಿನ್ನ ಮೇಲೆಯೇ ತಾನೆ ನಾನು ನಲಿದದ್ದು?
ಇದ್ದ ಜಾಗದೊಳಗೆಯೇ, ಇಷ್ಟೆಲ್ಲ ಮಾಡಿರುವೆ
ಸಾಕಯ್ಯ ಉಪಕಾರ ನೀನು ಮಾಡಿದ್ದು

ಆ ಸಣ್ಣ ಜಂತುವಿನ ಮಾತ ಕೇಳಿದಾ ಎಲೆಗೆ,
ಧನ್ಯವೆನಿಸಿತು ಬಾಳು, ಕಡೆಯ ಕ್ಷಣದೊಳಗೆ.
ಹಿತವೆನಿಸಿ ಆ ಘಳಿಗೆ, ಸುಮ್ಮಗೇ ಇದ್ದಿರಲು
ಗಾಳಿ ತೇಲಿಸಿತದನು, ಕಣಿವೆಯೊಳಗೆ.

ಮಂಗಳವಾರ, ಏಪ್ರಿಲ್ 10, 2007

ರಿಸಲ್ಟು ಬಂತು!

ಏಪ್ರಿಲ್ ತಿಂಗಳ ಬಿಸಿಲು ಶುರುವಾಗುತ್ತಿದ್ದ ಹಾಗೇ, ರಾಜನಿಗೂ ಬಿಸಿ ಏರ ತೊಡಗಿದೆ. ಪರೀಕ್ಷೆ ಮುಗಿದು ೨೦ ದಿನಗಳಾಗಿವೆ. ಇಷ್ಟು ದಿನ ಬಿಸಿಲಲ್ಲಿ ಕ್ರಿಕೆಟ್ ಆಡಿದ್ದಾಯ್ತು, ಮುಳ್ಳು ಹಣ್ಣು ಹುಡುಕಿದ್ದಾಯ್ತು. ೧೦ನೇ ತಾರೀಕಿಗೆ ರಿಸಲ್ಟು! ೫ನೇ ಕ್ಲಾಸಿಂದ ೬ನೇ ಕ್ಲಾಸಿಗೆ ದಾಟುವ ಉತ್ತರಾಯಣ ಪರ್ವ ಕಾಲ ಅಂದರೆ ಸುಮ್ಮನೇನಾ? ಅವನಿಗೆ ಗಣಿತ ಬಿಟ್ಟು ಮತ್ತೆಲ್ಲ ವಿಷಯಗಳಲ್ಲಿ ಪಾಸಾಗುವಷ್ಟು ಅಗಣಿತ ಪ್ರತಿಭೆ ಇದೆ! ಆದರೆ ಅದು ಮಾಷ್ಟ್ರಿಗೆ ಹೇಗೆ ಗೊತ್ತಾಗಬೇಕು ಪಾಪ?

ಅವನ ಮನೆಯಿಂದ ಮೂರನೆ ಮನೆ ಆಚೆಯಿರುವ ಪದ್ಮಿನಿ ಭಾಳಾ ಜಾಣ ಹುಡುಗಿಯಂತೆ, ಹಾಗಂತ ಅವನ ಅಪ್ಪ ಅಮ್ಮ ಯಾವಾಗಲೂ ಹೇಳುತ್ತಾರೆ. ಅವಳೆದುರಿಗೆ ಮರ್ಯಾದೆ ಉಳಿಸಿಕೊಂಡರೆ ಸಾಕಾಗಿದೆ ರಾಜನಿಗೆ. ಅವಳೂ ಹಾಗೇ, ಇವನ ಬಳಿ ಮೊದಲೇ ಸರಿಯಾಗಿ ಮಾತಾಡುವುದಿಲ್ಲ, ಇನ್ನು ಫೇಲಾಗಿ ಹೋದರಂತೂ ಮುಗಿದೇ ಹೋಯಿತು. ಪುಣ್ಯಕ್ಕೆ ಇವನ ಶಾಲೆಗೆ ಬರುವುದಿಲ್ಲವಾದ್ದರಿಂದ ಗಣಿತ ಟೀಚರ್ ೨ ದಿನಕ್ಕೊಮ್ಮೆಯಾದರೂ ಪೆಟ್ಟು ಕೊಡುವುದು ಗೊತ್ತಿಲ್ಲ ಅವಳಿಗೆ. ಆ ವಿಚಾರ ಅಪ್ಪ ಅಮ್ಮನಿಗೂ ಗೊತ್ತಿಲ್ಲ, ಅದು ಬೇರೆ ವಿಷ್ಯ.

ಇನ್ನು ರಾಜನ ಸ್ನೇಹಿತ ಗಡಣ- ಸುರೇಸ, ಸೊಳ್ಳೆ ಬತ್ತಿ ಹೆಸರಿನ ಮಾರ್ಟೀನು, ಶ್ರೀನ್ವಾಸ ಎಲ್ಲ ಇವನ ತರದವರೆ. ರಾಜನಿಗೆ ಗಣಿತ ಮಾತ್ರ ಹೆದರಿಕೆಯಾದರೆ ಮಾರ್ಟೀನಿಗೆ ಇಂಗ್ಲೀಷೂ ಬರದು!ಇಂಗ್ಲೀಷು ಹೆಸರಿಟ್ಟುಕೊಂಡ ಅವನಿಗೆ ಆ ಭಾಷೆಯೇ ಯಾಕೆ ಅರ್ಥವಾಗುವುದಿಲ್ಲ ಅಂತ ಸೋಜಿಗೆ ರಾಜ, ಸುರೇಸ ಎಲ್ಲರಿಗೂ.

ಎಪ್ರೀಲು ೮ನೇ ತಾರೀಕಿಂದು ಎಲ್ಲರೂ ಸೇರಿ ಸ್ರೀನ್ವಾಸನ ಮನೆ ಹಿತ್ತಲಿನ ಮಾವಿನ ಮರದ ಮೇಲೆ ಮಂತ್ರಾಲೋಚನೆ ಮಾಡಿದ್ದಾಗಿದೆ. ರಿಸಲ್ಟಿನ ದಿನ ಏನು ಮಾಡಬೇಕೂಂತ. ರಾಜ ತಾನು ಫೇಲಾಗಬಹುದು ಎನ್ನುವ ವಿಚಾರವನ್ನೇ ಅವರ ಮುಂದಿಟ್ಟಿಲ್ಲ, ಯಾಕಂದರೆ ಅಲ್ಲಿದ್ದವರಲ್ಲಿ ಅವನೇ ಬುದ್ಧಿವಂತ ಮತ್ತು ಆ ಗೌರವವನ್ನ ಹಾಗೇ ಕಾಪಾಡಿಕೊಳ್ಳುವ ಅನಿವಾರ್ಯತೆ ಬೇರೆ ಇದೆ. ಮಾರ್ಟೀನು ತಾನು ಖಂಡಿತಾ ಫೇಲಾಗುತ್ತೇನೆ ಅಂತ ಒಪ್ಪಿಕೊಂಡಿದ್ದಾನೆ. ಮುಂದೇನು ಮಾಡುವುದು ಅಂತ ಅವನಿಗೆ ಗೊತ್ತಿಲ್ಲವಂತೆ. ಸ್ರೀನ್ವಾಸ ತಾನು ವಿಜ್ಞಾನದಲ್ಲಿ ಬರಿ ೫೦ ಮಾರ್ಕಿದ್ದು ಬರೆದಿದ್ದೇನೆ ಅಂದ. ನೂರು ಮಾರ್ಕಿದ್ದು ಬರೆದ ತನಗೇ ೫೦ ಬರುವ ವಿಶ್ವಾಸವಿಲ್ಲ ,ಇನ್ನು ಅವನು ಹೇಗೆ ಪಾಸಾದಾನು?

"ಕ್ಲಾಸಿನಲ್ಲಿ ಕೃಷ್ಣ ಮಾಷ್ಟ್ರು ಫಲಿತಾಂಶ ಓದುವಾಗ ಸುಮ್ಮನೇ ಕುಳಿತುಕೊಳ್ಳಬೇಕೆಂದೂ, ಎಲ್ಲ ಮುಗಿದ ಮೇಲೆ ಏನು ಮಾಡುವುದು ಅಂತ ನೋಡಿದರಾಯ್ತೆಂದೂ" ನಿರ್ಧಾರ ಕೈಗೊಳ್ಳಲಾಯ್ತು. ಸತ್ಯಕ್ಕಾದರೆ ಈ ನಿರ್ಧಾರದ ಒಟ್ಟೂ ಅರ್ಥ ರಾಜನಿಗಾಗಿರಲಿಲ್ಲ. ಆಗಿಲ್ಲ ಅಂತ ಹೇಳುವ ಹಾಗೂ ಇಲ್ಲ. ಸುರೇಸ ಎಲ್ಲದಕ್ಕೂ ತಲೆ ಹಾಕುತ್ತಿದ್ದ. ಅವನ ಪಾಲಿಗೆ ತಾನು ೫ನೇ ಕ್ಲಾಸಿಗೆ ಬಂದದ್ದೇ ದೊಡ್ಡ ವಿಷಯವಾಗಿತ್ತು. ಅವನಪ್ಪ ಇನ್ನು ಅವನನ್ನ ಗದ್ದೆ ಹೂಡುವಾಗ ಕರೆದುಕೊಂಡು ಹೋಗುತ್ತಾರಂತೆ.

೧೦ನೇ ತಾರೀಕು ಬೆಳಗ್ಗೆ ರಾಜನಿಗೆ ಹೊಟ್ಟೆಯೆಲ್ಲ ಸಂಕಟ. ಅಮ್ಮ ಬೇಗನೆ ಎಬ್ಬಿಸಿ,ಕಾಪಿ ಕೊಟ್ಟು, "ಸ್ನಾನ ಮಾಡಿ ಬಾ, ದೇವರಿಗೆ ಕೈ ಮುಗಿ"ಎಂದೆಲ್ಲ ಏನೋ ಹೇಳುತ್ತಿದ್ದಾರೆ. ಎಲ್ಲ ಮಾತುಗಳು ಕಿವಿಯ ಪಕ್ಕದಿಂದ ಸಾಗಿ ಗೋಡೆಗೆ ಬಡಿಯುತ್ತಿರುವ ಸದ್ದು ಮಾತ್ರ ಕೇಳುತ್ತಿದೆ ರಾಜನಿಗೆ. ಅಪ್ಪ ಪೇಪರೋದುತ್ತಿರುವವರು,ಎದ್ದು ಬಂದು ೫೦ರ ನೋಟು ಕೊಟ್ಟು "ಬರುವಾಗ ಶೆಣೈ ಮಾಮನ ಅಂಗಡಿಯಿಂದ ಚಾಕ್ಲೇಟು ತಾ, ಎಲ್ಲರಿಗೂ ಕೊಡುವಿಯಂತೆ" ಅಂದಿದ್ದಾರೆ. ದೇವರೇ ನಾನು ಪಾಸಾಗುತ್ತೇನೆ ಅಂತ ತನಗೇ ವಿಶ್ವಾಸವಿಲ್ಲ , ಅಪ್ಪನಿಗೆ ಹೇಗೆ ಆ ವಿಶ್ವಾಸ ಬಂತು ಅನ್ನುವುದು ಅವನಿಗೆ ತಿಳಿಯುತ್ತಿಲ್ಲ!

ಕ್ಲಾಸಿಗೆ ಬಂದು ಕೂತಿದ್ದಾನೆ ರಾಜ , ಅವನ ಪಕ್ಕ ವಿಷ್ಣು. ಅವ್ನೋ , ಕ್ಲಾಸಿನ ೨ನೇ ರ್‍ಯಾಂಕು ಹುಡುಗ! ಆರಾಮಾಗಿ ಕೂತು ಹಲುಬುತ್ತಿದ್ದಾನೆ. ರಾಜನಿಗೆ ಯಾಕೋ ನಂಬರ್ ಟು ಬರುವ ಅನುಭವ ಬೇರೆ ಆಗುತ್ತಿದೆ. ಸುರೇಸ, ಮಾರ್ಟೀನು ಹಿಂದಿನ ಬೇಂಚಲ್ಲಿ ಕೂತಿದ್ದಾರೆ. ಕೃಷ್ಣ ಮಾಷ್ಟ್ರು ಇನ್ನು ಬಂದಿಲ್ಲ. ಪಕ್ಕದ ೪ನೇ ಕ್ಲಾಸಲ್ಲಿ ಅವರು ಮಾತಾಡುತ್ತಿರುವುದು ಕೇಳುತ್ತಿದೆ. ಸ್ರೀನ್ವಾಸ ಮುಂದಿನ ಬೆಂಚಲ್ಲಿ ಕೂತಿದ್ದಾನೆ, ತನ್ನ ಪುಣ್ಯ, ತಾನಿರುವುದು ೪ನೇ ಬೆಂಚು.

ಕೃಷ್ಣ ಮಾಸ್ತರು ಒಂದು ದೊಡ್ದ ಹಾಳೆ ಸಮೇತ ಕ್ಲಾಸಿಗೆ ಬಂದಿದ್ದಾರೆ. ರಾಜನಿಗೆ ಅವರು ಯಮನಂತೆ ಕಾಣುತ್ತಿದ್ದಾರೆ ಈಗ. "ನಾನು ಹೆಸರು ಹೇಳುವ ಹುಡುಗರೆಲ್ಲ ಎದ್ದು ಹೊರಗಡೆಗೆ ಹೋಗಬೇಕು, ಅವರೆಲ್ಲ ಪಾಸು, ಯಾರ ಹೆಸರು ಕರೆದಿಲ್ಲವೋ, ಅವರು ಫೇಲು" ಅಂತ ಅಂದು ಹಾಳೆ ಬಿಡಿಸಿದ್ದಾರೆ. ಮೊದಲ ಹೆಸರೇ ವಿಷ್ಣು! ಅವನು ಎದ್ದು ಹೋದ. ರಾಜನಿಗೆ ಇದ್ದ ಆಧಾರವೂ ತಪ್ಪಿ ಹೋಯಿತು.ಸ್ವಾತಿ, ರಕ್ಷಾ, ಪ್ರೇಮ.. ಎಲ್ಲ ಹುಡುಗಿಯರ ಹೆಸರುಗಳೇ..ಹಮ್.. ಗಣೇಶ, ಆನಂದ.. ಅಯ್ಯೋ, ತಾನು ಖಂಡಿತಾ ಫೇಲೆಂಬುದು ರಾಜನಿಗೆ ಮನವರಿಕೆಯಾಗಿ ಹೋಯಿತು!

ಅಷ್ಟು ಹೊತ್ತಿಗೆ "ರಾಜ.ವಿ" ಅನ್ನುವ ಹೆಸರು ಕೃಷ್ಣ ಮಾಸ್ತರ ಬಾಯಲ್ಲಿ ಬಂತು ! ರಾಜನಿಗೆಏನು ಮಾಡಬೇಕೆಂದೇ ತಿಳಿಯಲಿಲ್ಲ! ತಾನು ಪಾಸು.. ದೇವರೇ.. ಆದರೆ ಅವನಿಗೆ ಕೂತಲ್ಲಿಂದ ಏಳಲೇ ಆಗುತ್ತಿಲ್ಲ. ಹೇಗೋ ಕಷ್ಟ ಪಟ್ಟು ಎದ್ದು ಹೊರಗೆ ಬಂದು ಬಿಟ್ಟ. ಆಹ್, ಅವನಿಗೆ ಏನೂ ಅನಿಸುತ್ತಲೇ ಇರಲಿಲ್ಲ ಸ್ವಲ್ಪ ಹೊತ್ತು. ಮತ್ತೆ ಕಿರುಚಬೇಕೆನ್ನಿಸಿತು. ಎರಡು ನಿಮಿಷವಾಗಿಲ್ಲ ಸ್ರೀನ್ವಾಸ ಹೊರಗೆ ಬಂದ. ರಾಜನಿಗೆ ಈಗ ಮತ್ತೂ ಖುಷಿಯಾಯಿತು. ಆರನೇ ಕ್ಲಾಸಲ್ಲಿ ಇವನೂ ಇರುತ್ತಾನೆ ಹಾಗಾದರೆ ನನ್ನ ಜೊತೆಗೆ!. ಕಡೆತನಕವೂ ಬರದಿದ್ದವರು ಮಾರ್ಟೀನು ಮತ್ತು ಸುರೇಸ.

ತಾನು ಪಾಸಾದ ಖುಷಿಯೊಳಗೆ ರಾಜನಿಗೆ ಮಾರ್ಟೀನು ಮತ್ತು ಸುರೇಸ ನೆನಪಾಗಲಿಲ್ಲ. ಆದರೆ ಜೇಬಿನೊಳಗಿನ ಅಪ್ಪ ಕೊಟ್ಟಿದ್ದ ೫೦ ರೂಪಾಯಿಯ ನೋಟು ನೆನಪಾಗಿ, ಅವನ ಖುಷಿಯು ಇಮ್ಮಡಿಯಾಯಿತು.

ಸೋಮವಾರ, ಏಪ್ರಿಲ್ 09, 2007

ಸತ್ಯ

ಅವೇ ನಮೂನೆಯ ನಾಲ್ಕು ಕಾಲುಗಳು,
ಎರಡೂ ಮಂಚದ್ದು. ಕಬ್ಬಿಣದ್ದೋ,ಮರದವೋ,
ಅಥವ ಬೇರೆಯ ತರದವೋ.
ಮೇಲಿನ ಪಟ್ಟಿಗಳು ಹಲಸಿನದೋ,ಪ್ಲೈವುಡ್ಡಿನದೋ,
ಏನೋ ಒಂದು.
ಬಣ್ಣ ಒಂದೇ- ಬಿಳಿ,
ಹಾಸಿಗೆಯೊಳಗಿನ ಹತ್ತಿಯದು.
ಹೊರ ಹೊದಿಕೆ ಬಣ್ಣವಿಲ್ಲ ಇಲ್ಲಿ,
ಅಲ್ಲೋ, ನಕ್ಷತ್ರ ಚಿತ್ತಾರ.
ಇಲ್ಲಿ ಮಾಸಿದ ಬಣ್ಣದ ಚಾದರ,
ಅಲ್ಲಿ ಬಣ್ಣಗಳದೇ ಕಲಸು ಮೇಲೋಗರ.
ಸಾಮ್ಯತೆಯೂ, ವ್ಯತಾಸವೂ ಇಷ್ಟೇ:
ಇದು ರುಗ್ಣಶಯ್ಯೆ
ಅದು ಮಧುಮಂಚ!

ಗುರುವಾರ, ಏಪ್ರಿಲ್ 05, 2007

ತೇಜಸ್ವಿ.....

ತೇಜಸ್ವಿ ಇನ್ನಿಲ್ಲವಂತೆ. ನಂಬುವುದು ಹೇಗೆ?

ಅವರ ಮಂದಣ್ಣ , ಕರಿಯಪ್ಪ, ನಾಯಿ ಕಿವಿ, ಪ್ರೊಫೆಸರ್ ಕರ್ವಾಲೋ, ಜುಗಾರಿ ಕ್ರಾಸಿನ ಸುರೇಶ,ಪ್ರೊಫೆಸರ್ ಗಂಗೂಲಿ, ಪ್ಯಾರ , ಲಕ್ಷ್ಮಣ, ಗಯ್ಯಾಳಿ ದಾನಮ್ಮಇವರೆಲ್ಲ ದಿನವೂ ಕಾಣುವಾಗ ಇವರನ್ನ ಸೃಷ್ಟಿಸಿದ ತೇಜಸ್ವಿ ಇಲ್ಲವೆಂದರೆ ನಂಬುವುದು ಹೇಗೆ?
ಮೊನ್ನೆ ಮೊನ್ನೆ ನಾನೇ ಆ ಮಂದಣ್ಣನ ಮದುವೆ ಹೋಗಿ ಬಂದಂತಿದೆ, ಜಗತ್ತನ್ನ ಮಿಲೇನಿಯಮ್ ಸೀರೀಸಿನ ಜೊತೆ, ನನ್ನಂತೆ ಎಷ್ಟೋ ಜನ ಸುತ್ತಿ ಬಂದಿದ್ದಾರೆ. ಮುಂದೆಲ್ಲಿ ಕರೆದೊಯ್ಯುತ್ತಾರೆ ಅಂತ ಕಾಯುತ್ತಿದ್ದ ನಮ್ಮನ್ನ ಬಿಟ್ಟು ಅವರೊಬ್ಬರೇ ಹೋದದ್ದು ಹೇಗೆ?

ಅವರ ತಬರನಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ, ಅವನನ್ನ ಬಿಟ್ಟು ಅವರು ಹೊರಟದ್ದು ಹೇಗೆ?

ಪರಿಸರದ ಬಗ್ಗೆ ಸರಳವಾಗೂ ಮಾತಾಡಬಹುದು ಅಂತ ತೋರಿಸಿಕೊಟ್ಟ ತೇಜಸ್ವಿ, ಯಾರ ಸುದ್ದಿಗೂ ಬರದೇ ಅವರಪಾಡಿಗವರು ಕೂತು ಬರೆಯುತ್ತಿದ್ದ ತೇಜಸ್ವಿ, ಕಾಡಿನ ಬಗ್ಗೆ ನನ್ನಲ್ಲೊಂದು ಮೋಹ ಹುಟ್ಟಿಸಿದ ತೇಜಸ್ವಿ.. ಚಾರಣದ ಆಸಕ್ತಿ ಬೆಳೆಸಿದ ತೇಜಸ್ವಿ...

ಹೀಗೆ ಒಮ್ಮಿಂದೊಮ್ಮೆಗೇ ಎದ್ದು ಹೋಗಿಬಿಡಬಹುದಾ, ಆ ಮಾಯಾಲೋಕಕ್ಕೆ..

ನಾನು ಬಹಳ ಸಣ್ಣವನು ಅವರೆದುರು, ಆದರೆ ಅವರ ಕೃತಿಗಳ ಮೇಲೆ ಪ್ರೀತಿ ದೊಡ್ಡದಿತ್ತು.
ಹೀಗಾಗಬಾರದಿತ್ತು.....

ನನ್ನ ನಮನಗಳು, ಆ ಹಿರಿಯ ಚೇತನಕ್ಕೆ.....

ಅವರ ಪುಸ್ತಕಗಳನ್ನ ಮಕ್ಕಳಿಗೆ ಓದಲು ಕೊಡಿ, ದಯವಿಟ್ಟು. ಅದೇ ಅವರಿಗೆ ನಾವು ಸಲ್ಲಿಸಬಹುದಾದ ದೊಡ್ಡ ಶೃದ್ಧಾಂಜಲಿ.

ಮಂಗಳವಾರ, ಏಪ್ರಿಲ್ 03, 2007

೧೯೧೫ರಿಂದ..

ಊಟಕ್ಕೆ ಹೋಗಿದ್ದೆವು, ನಾನೂ ನನ್ನ ಕೊಲೀಗು ಪ್ರವೀಣ.

ಅವನು ಯಾವುದೋ ಅಂಗಡಿಯ ಬೋರ್ಡು ನೋಡಿ ಗೊಣಗುತ್ತಿದ್ದ.

"ಏನಾಯ್ತೋ " ?

"ಅಲ್ಲಾ, ಆ ಚಿನ್ನದಂಗಡಿ ಬೋರ್ಡು ನೋಡು since 1915 ಅಂತ ಇದೆ! "

"ಅದಕ್ಕೇನೀಗ"?

"ಅಲ್ಲೇ ಪಕ್ಕಹೋಟೇಲಿನ ಬೋರ್ಡು ನೋಡು since 1930 "

"ಅಯ್ಯೋ ಅವರು ಯಾವಾಗ ಹೋಟೇಲು ಶುರು ಮಾಡಿದರೆ ನಿಂಗೇನೋ?"

ಪ್ರವೀಣ ದೊಡ್ಡ ದನಿಯಲ್ಲಿ ಹೇಳಿದ,

"ಅಲ್ಲಾ ದೇಶ ಇಡಿ ಆವಾಗ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ್ರೆ, ಈ ನನ್ ಮಕ್ಳು, ಪಾಪಿಗಳು
ಚಿನ್ನದಂಗಡಿ, ಹೋಟೇಲು ಅಂತ ದುಡ್ ಮಾಡ್ತಾ ಇದ್ರಲ್ಲಯ್ಯಾ"!!

ನಾನು ಸುಮ್ಮನೇ ಬಂದೆ!! ಅವನ ಜೋಶ್ ನೋಡಿ ಸ್ವಲ್ಪ ಹೆದರಿಕೆ ಆಯ್ತು!

ಸೋಮವಾರ, ಏಪ್ರಿಲ್ 02, 2007

ಒಂದು ಗ-ಪದ್ಯ

ಮೊನ್ನೆ ಸಿಕ್ಕಾತ ಹೇಳಿದ
ಅವನ ಕನಸುಗಳು ಸತ್ತಿವೆಯಂತೆ..
ನನ್ನ ಕೇಳಿಕೊಂಡ,
ನೀನಾದರೂ ನನ್ನ ಕನಸ ಈಡೇರಿಸು ಅಂತ!
ನನಗೆ ನನ್ನ ಗುರಿಯೆ ತಿಳಿದಿಲ್ಲ,
ಕನಸಂತೂ ಮೊದಲೇ ಇಲ್ಲ.
ಇನ್ನು ಯಾರದೋ ಕನಸಿನ ಭಾರ ನಾನೇಕೆ ಹೊರಲಿ?
ಹೇಳಿಬಿಟ್ಟೆ ಅವನ ಬಳಿ ಹಾಗಂತ.

ಬೇಜಾರು ಮಾಡಿಕೊಂಡಂತೆ ಕಾಣಿಸಿತು,
ನನಗೇನು ಬೇಸರವಿಲ್ಲ..
ದಾಕ್ಷಿಣ್ಯಕೆ ಬಸಿರಾದರೆ ಹೆರಲು ಜಾಗವಿಲ್ಲ.
ನಿಮಗೂ ಸಿಗಬಹುದು ನೋಡಿ ಅವನು
ಮನೆಯ ಬಳಿಯ ಕತ್ತಲ ಮೂಲೆಯಲ್ಲಿ,
ಇಲ್ಲವೆ ನಿತ್ಯ ಟೀ ಕುಡಿಯುವ ಹೋಟೇಲಿನಲ್ಲಿ.
ಸ್ವಲ್ಪ ಜಾಗ್ರತೆಯಿರಲಿ, ಅವನು ಬಲು ಚಾಲಾಕಿ,
ವಿನಂತಿಗಿಂತ ದೊಡ್ಡ ಉರುಳು ಬೇರೊಂದಿಲ್ಲ!