ಶುಕ್ರವಾರ, ಜೂನ್ 29, 2007

ಮೇ ಫ್ಲವರಿನ ಮರ

ಮೇ ಫ್ಲವರ್ ಮರಗಳ
ಸಾಲಿನ ಕೆಳಗೆ,
ಹಳೆಯ ಒಣಗಿದ ಹೂ ರಾಶಿ
ಸಣ್ಣನೆಲೆಗಳ ತರಗೆಲೆ ಪದರ
ಹಾಸಿಕೊಂಡಿವೆ.
ಈ ಬೀದಿ ಎಲ್ಲೋ ಮೂಲೆಯಲ್ಲಿದೆ,
ಯಾರೂ ಇದನ್ನ ಗುಡಿಸಲು ಬರುವುದಿಲ್ಲ.

ಮರದ ಕೆಲ ಗೆಲ್ಲುಗಳಲಿನ್ನೂ,
ಹೂ ಗೊಂಚಲುಳಿದಿವೆ,
ಕೆಂಪು ಕೆಂಪು.
ಗಾಳಿಗೊಂದೊಂದು ಹೂ ಪಕಳೆ
ಅಲ್ಲೆ ತೇಲುತ್ತ ಕೆಳಬೀಳುತ್ತವೆ.
ಈ ಬೀದಿ ಎಲ್ಲೋ ಮೂಲೆಯಲ್ಲಿದೆ,
ಯಾರು ಇದನ್ನ ನೋಡಲು ಬರುವುದಿಲ್ಲ.

ಮಳೆಗಾಲ ಶುರುವಾಗಿದ್ದರಿಂದ,
ಸಾಲು ಮರಗಳ ತುಂಬ ಹಸಿರ ಲವಲವಿಕೆ;
ಮಳೆ ನಿಂತ ಮೇಲೆ ಇಲ್ಲಿ
ನಡೆಯುವುದೆಂದರೆ ಬಹಳ ಖುಷಿ.
ನೀರು ತೊಟ್ಟಿಕ್ಕುತ್ತದೆ, ಹನಿ-ಹನಿಯಾಗಿ.
ಈ ಬೀದಿ ಮೂಲೆಯಲ್ಲಿದೆ
ಯಾರೂ ಈ ಸುಖ ಅನುಭವಿಸಲು ಬರುವುದಿಲ್ಲ.

ಮೇ ಫ್ಲವರಿನ ಮರ ಎಷ್ಟೇ ಚಂದ
ಕಂಡರೂ,
ಮಳೆಗಾಲದಲ್ಲದು ಹೂ ಬಿಡುವುದಿಲ್ಲ.
ಭಣಗುಡುವ ಬೇಸಗೆಯೇ ಬೇಕದಕೆ.
ಹೂ ಬಿಟ್ಟಾಗಲೂ ಅಷ್ಟೇ,
ಯಾರು ಅದರ ಚಂದ ಹೊಗಳುವುದಿಲ್ಲ.
ಈ ಬೀದಿ, ಮೂಲೆಯಲ್ಲಿದೆ.

ಬುಧವಾರ, ಜೂನ್ 27, 2007

ಎರಡು ಚಿಟುಕು ಚುಟುಕಗಳು.

ಮಳೆ.
ಕಪ್ಪು ಆಗಸದಾಚೆ ಅರ್ಧ ಬೆಳಕಿನ ಚಿತ್ರ
ಕಂಡು ಕಾಣದ ಹಾಗೆ ಬೆಳ್ಳಕ್ಕಿ ಸಾಲು
ಮೋಡಗಳ ಮುಖದಲ್ಲಿ ಯಾರವೋ ಕಣ್ಣು
ಅರಳು ಕಣ್ಣುಗಳಿಂದ ಇಳಿವ ಜಲಧಾರೆ.

ಮಾತು - ಮೌನ
ಮೌನದಲೆ ಹಿತವಿತ್ತು , ಮಾತ ಕಲಿಸಿದನವನು
ಮಾತನಾಡಲು ಕಲಿತೆ, ಮೌನ ಮರೆತಿತ್ತು
ಅವನ ಮಾತನ್ನೆಲ್ಲ ನನಗೆ ಕೊಟ್ಟನೋ ಏನೋ,
ಅವನ ಮಾತುಗಳಲ್ಲಿ ಮೌನವಿಣುಕಿತ್ತು.

ಅವನ ಮೌನಕೆ ನನ್ನ ಮಾತ ನೀಡುವ ಆಸೆ
ಕೇಳಿದರೆ ಬೇಡೆನುವ, ಮೌನದಲ್ಲೇ.
ನನಗು ಅದು ಸಮ್ಮತವೇ, ಇರಲಿ ಬಿಡು ಮಾತಿಲ್ಲೇ,
ನಾ ಬೆಳ್ಳಿಯಾದರೋ, ಅವನು ಬಂಗಾರ!.

ನನ್ನ ಕವನಗಳಲ್ಲ. ಬರೆದವರಿಗೆ ಹೆಸರು ಹೇಳಿಕೊಳ್ಳುವುದು ಬೇಕಿಲ್ಲವಂತೆ.

ಮಂಗಳವಾರ, ಜೂನ್ 26, 2007

HR- ಮತ್ತೊಂದು ಸುತ್ತು!

ಕೆಲ ದಿನಗಳ ಹಿಂದೆ ನಮ್ಮಾಫೀಸಲ್ಲಿ ಇಂಟರ್ವ್ಯೂ ನಡೆಯುತ್ತಿತ್ತು. ಒಂದು ೧೦-೧೫ ಕೆಲ್ಸ ಖಾಲಿ ಇತ್ತು. ಸಂದರ್ಶನದ ವ್ಯವಸ್ಥೆಯ ಜವಾಬ್ದಾರಿ ಎಂಬ ಕರ್ಮ ನನ್ನ ತಲೆಗಂಟಿಕೊಂಡಿತ್ತು. ಒಂದೆರಡು ವಾರ ಬರೀ ಇದೇ ಕೆಲಸ ಮಾಡಿ ಹೈರಾಣಾಗಿ ಹೋದೆ. ನಾನು ಬರುವ ಕ್ಯಾಂಡಿಡೇಟುಗಳ ಹಣೇಬರದ ಬಗ್ಗೆ ಬರೆದರೆ, "ನೀನು ವ್ಯಂಗ್ಯ ಮಾಡುತ್ತೀಯಾ, ನಮ್ಮ ಕಷ್ಟ ನಮಗೆ" ಅಂತ ಓದುಗರಾದ ನೀವೆಲ್ಲ ತರಾಟಗೆ ತೆಗೆದುಕೊಳ್ಳುತ್ತೀರಿ, ನನಗೆ ಗೊತ್ತು. ಆದರೆ ಬರೆಯದೆ ಬೇರೆ ವಿಧಿಯಿಲ್ಲ. ಇದನ್ನ ಓದಿ, ಮುಂದೆ ಇಂಟರ್ವ್ಯೂಗಳಿಗೆ ತೆರಳುವ ಯಾರಿಗಾದರೂ ಉಪಕಾರವಾದರೂ ಅಗಬಹುದು.

. ಡ್ರೆಸ್ ಕೋಡ್.

ಶುಭ ಸೋಮವಾರ ಬೆಳಗ್ಗೆ ಒಬ್ಬ ಸುಂದರಾಂಗ ಬಂದ. ಒಳ್ಳೇ ನೈಕ್ ಸ್ಪೋರ್ಟ್ಸ್ ಶೂ, ಟಿ- ಶರ್ಟು, ಜೀನ್ಸು. "ಏನಪ್ಪಾ, ಏನಾಗಬೇಕು"? "ಶ್ರೀನಿಧಿ ಅನ್ನೋರು ಕರೆದಿದ್ದಾರೆ ನನ್ನ, ಇಂಟರ್ವ್ಯೂ ಇದೆ" . ಯಮ್ಮಾ! ಪದವಿ ಮುಗಿಸಿ, ಈಗಾಗಲೇ ಕೆಲಸ ಮಾಡುತ್ತಿರುವ ಯುವಕನಿಗೆ ಸಂದರ್ಶನಕ್ಕೆ ಹೇಗೆ ಬರಬೇಕು ಅನ್ನುವ ಕಾಮನ್ ಸೆನ್ಸ್ ಕೂಡಾ ಇಲ್ಲ. "ಅಣ್ಣಾ, ಈ ಡ್ರೆಸ್ಸಲ್ಲಿ ನಿನ್ನ ಇಂಟರ್ವೂ ತಗೋಳೋದಿಲ್ಲ, ವಾಪಾಸು ಹೋಗಿ ನಾಳೆ ಬಾರಪ್ಪಾ" ಅಂದು ಕಳಿಸಿದೆ.

ಒಬ್ಬ ಮಹಾಶಯರಂತೂ ಬಾಟಾ ಚಪ್ಪಲಿ ಹಾಕಿಕೊಂಡು ಸಂದರ್ಶನಕ್ಕೆ ಬಂದಿದ್ದರು.

ಸರಳವಾದ ಫಾರ್ಮಲ್ ಡ್ರೆಸ್ ಹಾಕಿಕೊಂಡು ಇಂಟರ್ವ್ಯೂಗಳಿಗೆ ಹೋಗಬೇಕು ಅನ್ನುವ ಕಾಮನ್ ಸೆನ್ಸ್ ಎಲ್ಲರಿಗು ಇದೆ ಅಂದುಕೊಂಡಿದ್ದೆ ನಾನು. ಅದು ಸುಳ್ಳು ಅಂತ ಈಗ ಗೊತ್ತಾಗಿದೆ.

೨. ರೆಸ್ಯೂಮ್ - ಜಾತಕ.

ನಮ್ ಆಫೀಸು ಗ್ಲಾಸ್ ಬಾಗಿಲನ್ನ ಹೆಚ್ಚು ಕಡಿಮೇ ಒಡೆದೇ ಬಿಡುವ ಸ್ಪೀಡಲ್ಲಿ ತಳ್ಳಿದ ಯಾರೋ ಒಬ್ಬ. ನಾನು ಅಲ್ಲೇ ಪೇಪರ್ ಓದುತ್ತ ಕುಳಿತಿದ್ದೆ. ಕೈಲಿ ಒಂದು ಸುರುಳಿ ಸುತ್ತಿದ ಪೇಪರು - ಈ ಒಲೇ ಊದೋಕೆ ಬಳಸುವ ಊದುಕೊಳವೆಯ ಹಾಗಿನದು.
"sorry i am bit late.. i am Mr. so and so.. ಇಂಟರ್ವ್ಯೂ... "

ಓಕೆ, ನಿನ್ನ ರೆಸ್ಯೂಮು ಕೊಡು ಅಂದಿದ್ದಕ್ಕೆ ಆ ಊದುಕೊಳವೆಯನ್ನ ನನ್ ಕೈಗಿತ್ತ ಆಸಾಮಿ. ಮುಖ ನೋಡಿದೆ. ಹೆ ಹೆ ಅಂತ ಪೆಕರು ನಗೆ. ನಾನು ಆ ಹಾಳೇ ಉಲ್ಟಾ ಪಲ್ಟಾ ಮಡಚಿ - ಸರಿ ಮಾಡಿ ನಮ್ಮ ಮ್ಯಾನೇಜರಿಗೆ ಕೊಟ್ಟೆ.

ಇನ್ನು ಒಂದಿಬ್ಬರು ರೆಸ್ಯೂಮಿನ ಬಿಡಿ ಬಿಡಿ ಹಾಳೆಗಳನ್ನ ನನ್ನ ಕೈಗಿತ್ತಿದ್ದರು. ನಾನು ಎಲ್ಲ ಜೋಡಿಸಿ, ಸ್ಟೆಪ್ಲರು ಹೊಡೆದುಕೊಂಡು ಇಟ್ಟುಕೊಂಡೆ. ನನಗೆ ಬೇಕಲ್ಲ ಅದು!.

ಒಂದು ಸಣ್ಣ ಫೈಲು ಇಟ್ಟುಕೊಂಡರೆ ಒಳಿತು. ಬೇಡ, ಆ ರೆಸ್ಯೂಮನ್ನ ನೀಟಾಗಿ ಹಿಡಕೊಂಡು ಬರೋಕೆ ಏನು ರೋಗ?

೩. ಸಮಯ ಪಾಲನೆ.

ಅರ್ಧ ತಾಸು ಲೇಟಾಗಿ ಬಂದು ಟ್ರಾಫಿಕ್ ಜಾಮ್ ಸಾರ್ ಸ್ವಾರೀ.. ಅನ್ನೋದು ಉಸಿರಾಡಿದಷ್ಟು ಸಹಜ ಕಾರಣವಾಗಿ ಬಿಟ್ಟಿದೆ. ಎಷ್ಟೇ ಉತ್ತಮ ಅಭ್ಯರ್ಥಿಯಾದರೂ, ಅವನ ಬಗ್ಗೆ ಒಂದು ಅಸಹನೆ ಮನದೊಳಗೆ ಅಷ್ಟರಲ್ಲೇ ಬೇರು ಬಿಟ್ಟಾಗಿರುತ್ತದೆ.

೪. ಸಂದರ್ಶನ

" tell me about yourself please.."

"myself ramalingam, myself did BE in ... . , myself working in ... "

ಮೊದಲ ಪ್ರಶ್ನೆ ಇದೇ ಆಗಿರುತ್ತದೆ ಅನ್ನುವುದು, ಎಲ್ಲರಿಗೂ ಗೊತ್ತಿದೆ ಮತ್ತು ಇಲ್ಲೇ ಯಡವುತ್ತಾರೆ. ಇಂಗ್ಲೀಷು ನನ್ನದೂ ಚೆನ್ನಾಗಿಲ್ಲ. ಆದರೆ, ಸ್ವಲ್ಪವಾದರೂ ಸರಿ ಮಾಡಿಕೊಂಡಿರಬೇಕು ತಾನೆ?

( ಇದರ ಬಗ್ಗೆ, ವಿವರವಾಗಿ ಬೇರೆಯದೇ ಬರಹ ಬರೆಯಬೇಕು).

೫. ರಿಸಲ್ಟು

"ಸಾರ್ ನಾನು ಸೆಲೆಕ್ಟಾ?" ಅಂದ ಒಬ್ಬಾತ, ಇಂಟರ್ವ್ಯೂ ಮುಗಿದು ಹೊರ ಹೋಗುತ್ತಲೇ ಫೋನು ಅವನದು.

ಅಷ್ಟೊಂದು ಗಡಿಬಿಡಿ ಒಳ್ಳೆಯದಲ್ಲ. ಬಹಳ openings ಇದ್ರೆ, ಫೀಡ್ ಬ್ಯಾಕೂ ಸ್ವಲ್ಪ ಲೇಟ್ ಆಗತ್ತೆ.

ತಲೆಯೊಳಗೆ ಎಷ್ಟೇ ಬುದ್ಧಿ ಇದ್ದರೂ, ಹೊರಗಡೆ - ಮೇಲು ನೋಟಕ್ಕೆ ಕಾಣುವ ಹಾಗಿನ ಯಡವಟ್ಟು ಮಾಡಿಕೊಂಡರೆ - ಊಹೂಂ! ಕಷ್ಟ ಕಷ್ಟ.


ಇನ್ನೂ ತುಂಬ ಹೇಳಬೇಕು- ಮತ್ಯಾವಾಗಾದರೂ....

ಸೋಮವಾರ, ಜೂನ್ 25, 2007

ಕೆಂಪು

ಅಂಬುಲೆನ್ಸಿನ ಮೇಲೆ ತಿರುಗೋ
ಬುರುಡೆ.
ಬೈಕು ಕಾರಿನ ಬ್ರೇಕ್
ಲೈಟು.
ಟ್ರಾಫಿಕ್ ಸಿಗ್ನಲ್ಲು.

ಮುತ್ತೈದೆಯ ಭ್ರೂ ಮಧ್ಯ.
ಯೋಧನ ತಿಲಕ
ರಂಗೋಲಿ ನಡುವಿನ
ರಂಗು
ದೇವರ ಮೇಲಿನ ದಾಸವಾಳ.

ಹುಡುಗನ ಕೈಯ ಗುಲಾಬಿ,
ಅವಳ ಬಳೆಗಳು.
ಸಂಜೆ ಸೂರ್ಯ,
ಸರದೊಳಗಿನ ಹವಳ.

ಹೆಂಡಗುಡುಕನ
ಕಣ್ಣು
ಕತ್ತಿಯಂಚಿನ ರಕ್ತ.
ಸ್ಲಮ್ಮಿನಂಚಿನ ಬೆಳಕು

ಕೆಂಪಿಗೆ ಹಲವು ಬಣ್ಣ!

ಗುರುವಾರ, ಜೂನ್ 21, 2007

ಕೈಗಳು

ಮದ್ರಾಸ್ ಐ ಆದಂತಿದ್ದ ಕೆಂಪು ಕಣ್ಣುಗಳನ್ನ ಬಿಡಿಸಿ ಎದ್ದು ಕೂತ ಅವನು. ಭಾನುವಾರ ಬೆಳಗ್ಗೆ ಐದೂವರೆಗೆ ಆತನ ವೃತ್ತಿ ಜೀವನದಲ್ಲೇ ಎಂದೂ ಎದ್ದು ಗೊತ್ತಿರಲಿಲ್ಲ. ಮೊಬೈಲ್ ನಲ್ಲಿ ಮೂರು ಮೂರು ಬಾರಿ ಅಲರಾಮು ಹೊಡಕೊಂಡಿತ್ತು. ದೂರದ ಸಂಬಂಧಿ ಸುಧಾಕರ ಆತ ನಡೆಸುತ್ತಿರುವ ದೇವಸ್ಥಾನದ ಪೂಜೆಗೆ ಸಹಾಯ ಮಾಡಲು ಬಾ ಅಂದಿದ್ದರಿಂದ ಹೋಗದೆ ವಿಧಿಯಿಲ್ಲ. ಯಾಕಂದರವನ ಓದು ಮುಗಿಸಲು ಸಹಾಯ ಮಾಡಿದ್ದು ಇದೇ ಸುಧಾಕರನ ಅಪ್ಪ, ಮತ್ತು ಇವನು ಹಳ್ಳಿಯ ತನ್ನ ಮನೆಯಲ್ಲಿ ಪಿ ಯು ಸಿ ಓದಿ ಮುಗಿಸುವವರೆಗೊ, ತಂದೆಯ ಜೊತೆ ಪೌರೋಹಿತ್ಯಕ್ಕೆ ಸಹಾಯ ಮಾಡಲು ಹೋಗುತ್ತಿದ್ದ ವಿಚಾರ ಮನೆತನಕ್ಕೆಲ್ಲ ತಿಳಿದುದೇ ಆಗಿತ್ತು. ತನಗೀಗ ಅದೆಲ್ಲ ಅಭ್ಯಾಸವಿಲ್ಲ ಅಂತ ಅದೂ ಇದೂ ಕುಂಟು ನೆಪ ಹೇಳಿದರೂ ಆ ಪುಣ್ಯಾತ್ಮ ಇವನನ್ನ ಬಿಡಲು ತಯಾರಿರಲಿಲ್ಲ. ಹೇಗೋ ಎದ್ದು, ಮುಖ ತೊಳೆದು ನಿದ್ದೆಗಣ್ಣಲ್ಲೇ ಬೈಕಿನ ಕೀ ಎತ್ತಿಕೊಂಡು ಹೊರಬಿದ್ದ.

ಚಳಿಯೆಂಬುದು ಇವನ ನಿದ್ರೆಯನ್ನ ಮುರುಟಿ ಹಾಕಿತು, ಆ ಕ್ಷಣದಲ್ಲೇ.ನೆಂಟ ಹೇಳಿದ ದಾರಿಯನ್ನ ಆಗಾಗ ನೆನಪು ಮಾಡಿಕೊಳ್ಳುತ್ತಾ, ಕೆಟ್ಟ ಚಳಿಗೆ ಬೈದುಕೊಂಡು, ದೇವಸ್ಥಾನದ ಬಳಿ ಬಂದಾಗ ಗಂಟೆ ಆರೂ ಕಾಲು. ದಿನ ನಿತ್ಯ ಕಂಪೆನಿ ವಾಹನದಲ್ಲೇ ಓಡಾಡುತ್ತಿದ ಅವನಿಗೆ, ಬೆಳಗಿನ ಚಳಿಯ ಬೆಂಗಳೂರು ಹೊಸದು, ಅದೂ ಬೈಕಿನ ಮೇಲೆ. ಪ್ರತಿ ವಾರಾಂತ್ಯಗಳಲ್ಲಿ ಅವನು 'ಅವಳನ್ನು' ಕರಕೊಂಡು ಶಾಪಿಂಗ್ ಮಾಲುಗಳಿಗೆ ಹೋಗುವಾಗ ಮಾತ್ರ ಬೈಕನ್ನ ಬಳಸುತ್ತಿದ್ದ, ಮತ್ತು ಇವತ್ತು ಮೊದಲ ಬಾರಿ ಬೇರೆಯದೇ ಉದ್ದೇಶಕ್ಕೆ ಬಳಕೆ ಆಗಿತ್ತು! ಸ್ಪೀಡೋಮೀಟರು ನೋಡಿಕೊಂಡ, ೧೮ ಕಿಲೋಮೀಟರು ಪ್ರಯಾಣವಾಗಿತ್ತು. ಪ್ರಾಯಶ: ಇದು ಬೆಂಗಳೂರಿನ ಇನ್ನೊಂದು ತುದಿಯಿರಬೇಕು ಅಂತ ಆಲೋಚನೆ ಮಾಡುತ್ತ ದೇವಳದ ಬಳಿ ಬಂದ ಆತ.

ಈ ದೇವಸ್ಥಾನಕ್ಕೆ ಯಾವತ್ತೋ ಬಂದ ನೆನಪು.. ಹಾ.. ಹಿಂದೆ ಎಂಜಿನಿಯರಿಂಗ್ ಪಾಸಾದಾಗ ಅಪ್ಪನ ಜೊತೆ ಇಲ್ಲಿಗೆ ಬಂದು ಪೂಜೆ ಮಾಡಿಸಿರಬೇಕು ಅಂತಂದುಕೊಳ್ಳುತ್ತಾ, ಬೈಕನ್ನ ದೇವಸ್ಥಾನದ ಗೋಡೆ ಪಕ್ಕಕ್ಕೆ ನಿಲ್ಲಿಸಿದ. ವರ್ಷಕ್ಕೊಂದು ಕೆಲಸ ಬದಲಾಯಿಸುವ ಈ ಸಾಫ್ಟ್ ವೇರ್ ಯುಗದಲ್ಲೂ, ಈ ಪುಣ್ಯಾತ್ಮ, ಬೆಂಗಳೂರಿನ ಕೊಂಪೆಯೊಂದರಲ್ಲಿ ಕಳೆದ ಎಂಟು- ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದಾನೆ, ಅದೂ ದೇವಸ್ಥಾನವೆಂಬ ಅತೀ ಬೋರು ಬರುವ ಜಾಗದಲ್ಲಿ! ಬಹಳಾ ದೊಡ್ಡ ಸಾಧನೆಯೇ ಅಂತ ತಲೆ ಕೊಡವಿಕೊಂಡು ಒಳ ಹೆಜ್ಜೆ ಇಟ್ಟ.ದೇವಸ್ಥಾನದ ಬಾಗಿಲಲ್ಲೆ ಇದ್ದ ಸುಧಾಕರ, ಭರ್ಜರಿ ಮಡಿ ಉಟ್ಟುಕೊಂಡು, ದೊಡ್ಡ ಹೊಟ್ಟೆಯ ಜೊತೆಗೆ. ಆ ವೇಷದಲ್ಲಿ ಅವನಂತೂ ಹಳೆಯ ಕನ್ನಡ ಪೌರಾಣಿಕ ಸಿನಿಮಾದ ರಾಕ್ಷಸ ರಾಜನಂತೆ ಕಾಣುತ್ತಿದ್ದ. ಒಳ ಬರುತ್ತಿದ್ದ ಇವನನ್ನ ನೋಡಿ, ತನ್ನ ಅಷ್ಟೂ ಹಲ್ಲು ತೋರಿಸುತ್ತಾ ಇವತ್ತು ಮುಖ್ಯ ಅರ್ಚಕರಿಲ್ಲ, ಭಾನುವಾರ ಬಹಳ ಜನ, ನನ್ನ ಪರಿಚಯದವರಾರು ಸಿಗುವುದಿಲ್ಲ,ಇಂದು ಬಹಳಾ ಕಾರ್ಯಕ್ರಮಗಳಿರುತ್ತವಾದ್ದರಿಂದ....ಎಂದೆಲ್ಲಾ, ಹಿಂದೆ ಕರೆಯುವಾಗಲೇ ಕೊರೆದಿದ್ದ ವಿಷಯಗಳನ್ನೇ ಹೇಳಿ ಮುಗಿಸಿದ.

ಇವನೆ, ಸ್ನಾನ ಆಯ್ತಾ? ಮುಖ ನೋಡಿದರೆ ಆಗಿಲ್ಲ ಅಂತ ಗೊತ್ತಾಗುತ್ತದೆ, ತಡಿ, ಟವಲು ಕೊಟ್ಟೆ, ಬಾವಿ ಅಲ್ಲಿದೆ, ನೀನು ಸ್ನಾನ ಮಾಡುವಷ್ಟರಲ್ಲಿ ನಾನು ಅವಲಕ್ಕಿ ಉಪ್ಪಿಟ್ಟು ತಂದಿಟ್ಟು, ಮಡಿ ರೆಡಿ ಮಾಡಿದೆ" ಅಂದ, ಒಂದೇ ಉಸಿರಿನಲ್ಲಿ! "ಬಾವಿ, ಅವಲಕ್ಕಿ, ಉಪ್ಪಿಟ್ಟು, ಮಡಿ" ಇತ್ಯಾದಿ ಶಬ್ದಗಳೆಲ್ಲ ಬಹಳ ಕಾಲದ ಮೇಲೆ ಕಿವಿಗೆ ಬಿದ್ದಂತಾಗುತ್ತಿತ್ತು ಅವನಿಗೆ. ಏನೋ ಕಿರಿಕಿರಿ ಜೊತೆಗೆ.. ಒಹ್, ನಿದ್ದೆಗಣ್ಣಲ್ಲಿ ಹೊರಟು ಬಂದಾತನಿಗೆ ಮೊಬೈಲು ತರುವುದೇ ಮರೆತು ಹೋಗಿತ್ತು.. ಆಹ್, ಇದೆಲ್ಲಿಗೆ ಬಂದು ಸಿಕ್ಕಿಕೊಂಡೆನಪ್ಪಾ ಅಂತ ಆಲೋಚಿಸುತ್ತಲೇ ಬಟ್ಟೆ ಬಿಚ್ಚಿಟ್ಟು , ಕೊಟ್ಟ ಟವಲು ಸುತ್ತಿ , ಕೊಡಪಾನವನ್ನ ಗಟ್ಟಿಯಾಗಿ ಕುಣಿಕೆಗೆ ಸಿಕ್ಕಿಸಿ ಬಾವಿಗೆ ಇಳಿಸಿದ.

ಹತ್ತಾರು ವರ್ಷಗಳ ಹಿಂದೆ ಮನೆಯಲ್ಲಿ ಇದೇ ತರ ಸ್ನಾನಗಳಾಗುತ್ತಿದ್ದವು.ಮನೆಗೆ ಹೋಗದೇ ೩ ವರ್ಷ ಆಯ್ತು, ಅಬ್ಬಾ! ಈ ಬಾವಿ ಬಹಳ ಆಳ..... ಸೋಪೇ ಇಲ್ಲವಲ್ಲ?.. ಕಡೆಯ ಬಾರಿ ಹೋಗಿ ಬಂದಿದ್ದಾದರೂ ಒಂದು ದಿನದ ಮಟ್ಟಿಗೆ.. ಅಜ್ಜ ಸತ್ತಾಗಲಲ್ಲವೇ..ಸೋಪಿಲ್ಲದೇ ಕೊಳಕು ಹೋಗೋದು ಹೇಗೆ?.. ರೂಮಲ್ಲಾದರೆ ಗೀಸರ್ ಇತ್ತು, ಬೆಚ್ಚಗೆ ಸ್ನಾನ ಮಾಡಿಕೊಂಡು ಬರಬಹುದಿತ್ತು..ಅವಲಕ್ಕಿ?.. ಮನೆಲಿ ಒಂದು ಕಾಲದಲ್ಲಿ ಅದನ್ನೇ ದಿನಾ ತಿನ್ನುತ್ತಿದ್ದೆನಾ?, ಅಮ್ಮ ನೀರಲ್ಲಿ ನೆನೆ ಹಾಕಿ ಕೊಡ್ತಾ ಇದ್ದಂತೆ ನೆನಪು.. ನೀರು ಭಾರಿ ತಣ್ಣಗಿದೆ... ಅರೆ, ಜ..ಜನಿವಾರ ಎಲ್ಲಿ?!! ಯಾವತ್ತೋ ಹರಿದು ಹೋಗಿದೆ, ಅವಳ ನೆಕ್ಲೇಸ್ ಗೆ ಸಿಕ್ಕಿ! ಥತ್! ಈಗ ಇಲ್ಲಿ ಕೇಳೋ ಹಾಗೂ ಇಲ್ಲ! ಮನೆಗೆ ಸುದ್ದಿ ಹೋಗುತ್ತದೆ. ಭಟ್ಟರ ಮಗ ಜನಿವಾರ ಕಿತ್ತು ಬಿಸಾಕಿದ್ದಾನೆ ಎಂದರೆ ಅಪ್ಪ ಆತ್ಮಹತ್ಯೆ ಮಾಡಿಕೊಂಡಾರು!..ತಲೆ ವರೆಸಿ,ಮಡಿ ಉಟ್ಟು ಕೊಂಡು, ಎಚ್ಚರದಲ್ಲಿ ಶಾಲು ಹೊದ್ದುಕೊಂಡ ಮೈ ತುಂಬಾ.

ಬಾಳೆಯೆಲೆಯ ಮೇಲೆ ಉಪ್ಪಿಟ್ಟು- ಅವಲಕ್ಕಿ ಹಾಕಿಟ್ಟಿದ್ದ ಸುಧಾಕರ. ಯಾಕೋ ತಾನು ಬೇರೆ ಪ್ರಪಂಚಕ್ಕೇನಾದರೂ ಬಂದೆನಾ ಅಂತ ಅನುಮಾನ ಶುರುವಾಯ್ತು ಅವನಿಗೆ. ದಿನಾ ಬೆಳಗ್ಗೆ ಹೋಟೇಲಿನ ಇಡ್ಲಿ ವಡಾ - ಮಧ್ಯಾಹ್ನದ ನಾರ್ತ್ ಇಂಡಿಯನ್ ರೋಟಿ - ತಡ ರಾತ್ರಿಯ ಪಿಜ್ಜಾಗಳ ಲೋಕದಿಂದ ಧುತ್ತೆಂದು ಹೊರ ಬಂದು ಬಿದ್ದಂತಾಗಿತ್ತು. ಹೊಟ್ಟೆಯಲ್ಲಿ ಬೇರೇನೂ ಇಲ್ಲವಾದ್ದರಿಂದ ತಿನ್ನತೊಡಗಿದ. "ಅಪ್ಪ ಆರಾಮಿದ್ದಾರ?" ಸುಧಾಕರ ಕೇಳತೊಡಗಿದ. "ಹಮ್". ಮನೆಗೆ ಫೋನ್ ಮಾಡದೆ ತಿಂಗಳು ಆರಾಯಿತು. ತನ್ನ ಹೊಸ ಮೊಬೈಲ್ ನಂಬರ್ ಮನೆಗೆ ಕೊಟ್ಟಿದ್ದೇನಾ?, ನೆನಪಿಲ್ಲ. "ಅಮ್ಮನ ಕಾಲು ನೋವು ಹೇಗಿದೆ?" ಅರೆ, ಅಮ್ಮನಿಗೆ ಕಾಲು ನೋವು ಯಾವಗಿನಿಂದ?.. "ಈಗ ಕಡಿಮೆ ಇದೆ". "ಮೀನಾಕ್ಷಮ್ಮ ಹೋಗಿಬಿಟ್ರಂತೆ?" ಅಯ್ಯೋ ಈ ಮೀನಾಕ್ಷಮ್ಮ ಯಾರು?! ನನ್ನ ಪಕ್ಕದ ಮನೆ ನಾರಾಯಣ ಭಟ್ರ ಹೆಂಡತಿಯಾ?"ಹೌದಂತೆ, ವಯಸ್ಸಾಗಿತ್ತು ಪಾಪ".. ಇನ್ನು ಕೂತರೆ ಕೆಲಸ ಕೆಡುತ್ತದೆನಿಸಿ, "ಕೈ ಎಲ್ಲಿ ತೊಳೆಯಲಿ"ಎನ್ನುತ್ತಾ ಅಲ್ಲಿಂದೆದ್ದ.

ಈಶ್ವರ ದೇವಸ್ಥಾನ, ಜೊತೆಗೆ ಗಣಪತಿ, ಪಾರ್ವತಿ. ಸುಧಾಕರ ಅದಾಗಲೇ ದೇವರ ಮೇಲಿನ ನೈರ್ಮಾಲ್ಯ ತೆಗೆಯಲಾರಂಭಿಸಿದ್ದ, ಗಣಪತಿಯ ಮೂರ್ತಿಯ ಮೇಲಿಂದ. ಆ ವಿಗ್ರಹ ನೋಡಿದ್ದೇ, ತನ್ನ ಮೈ ಮೇಲೆ ಜನಿವಾರ ಇಲ್ಲವೆಂಬುದು ನೆನಪಾಯಿತು. ಶಾಲನ್ನು ಮತ್ತೊಮ್ಮೆ ಸರಿಪಡಿಸಿಕೊಂಡ. ಸುಧಾಕರನ ಹೊಟ್ಟೆಗೂ ಗಣಪತಿಯದ್ದಕ್ಕೂ ಹೆಚ್ಚಿನ ವ್ಯತ್ಯಾಸ ಕಾಣುತ್ತಿರಲಿಲ್ಲ ಅವನಿಗೆ. "ನೀನಿಲ್ಲೇ ಕೂತು ಒಂದಾರು ದೀಪ ತಯಾರು ಮಾಡು, ನಾನೀಗ ಮನೆಗೆ ಹೋಗಿ ಹಾಲು ತಂದೆ" ಎಂದು ಅತ್ತ ಹೊರಟ ಸುಧಾಕರ. ಎಣ್ಣೆ, ಬತ್ತಿ, ದೀಪಗಳು.. ಅಪ್ಪನ ಜೊತೆಗೆ ಪೂಜೆಗೆ ಹೋದಾಗಲೂ ಇದನ್ನೇ ಮಾಡುತ್ತಿದ್ದೆನಲ್ಲ?, ಬಹಳ ಕಾಲವೇನಾಗಿಲ್ಲ ೬-೮ ವರ್ಷಗಳಷ್ಟೇ.. ಒಹ್, ಇವತ್ತು ಸಂಜೆ ಅವಳನ್ನ ಹೊಸ ಸಿನಿಮಾಕ್ಕೆ ಕರೆದೊಯ್ಯಬೇಕು.ಇಲ್ಲಿಂದ ಬೇಗ ಬಿಡುಗಡೇ ಸಿಕ್ಕಿದ್ದರೆ ಸಾಕಿತ್ತು.. ಚಿಕನ್ ತಿನ್ನದೇ ವಾರವಾಗಿದೆ. ಕೈ ಯಾಕೋ ತಣ್ಣಗಾಯ್ತು, ಎಣ್ಣೆ ಚೆಲ್ಲಿಕೊಂಡಿದ್ದ. ದೇವಸ್ಥಾನದಲ್ಲಿ ಚಿಕನ್ ನೆನಪಾದ್ದು ತಪ್ಪಾ? ಗೊತ್ತಾಗುತ್ತಿಲ್ಲ.

"ಇರ್ಲಿ ಬಿಡು, ನಾನು ಒರೆಸುತ್ತೇನೆ ನೀನು ದೀಪಾನ ಹಚ್ಚಿ ಎಲ್ಲ ದೇವರ ಮುಂದೆಯೂ ಇಡ್ತಾ ಬಾ" ಅಂತಂದ, ಸುಧಾಕರ .ಯಥಾವತ್ತಾಗಿ ಅದನ್ನ ಪಾಲಿಸಲು ಹೊರಟ. ಯಾಕೋ ಎಲ್ಲದೂ ಹೊಸತೆನಿಸುತ್ತಿತ್ತು, ದೇವರ ವಿಗ್ರಹ, ಆ ಎಣ್ಣೆಯ ಕಮಟು ವಾಸನೆ, ಕಾಲಿಗಂಟುವ ಕೊಳಕು, ಮೈಯಲ್ಲ ಹುಳ ಹರಿದಂತನಿಸಿತು. ತಾನು ಮೊದಲಿಂದ ಹೀಗಿರಲಿಲ್ಲವಲ್ಲಾ?!ಕಳೆದ ನಾಲ್ಕೆಂಟು ವರ್ಷದಲ್ಲಿ ನನ್ನ ಆಲೋಚನೆ ಯಾವತ್ತು ಬದಲಾಯಿತು?, ನನಗೇ ಗೊತ್ತಿಲ್ಲದೇ?.. ದೀಪಗಳನ್ನ ಉರಿಸುತ್ತಿದ್ದಂತೆ ಮನಸ್ಸೂ ಉರಿಯುತ್ತಿದೆಯೇನೋ ಅನ್ನಿಸಿತು ಅವನಿಗೆ."ಇನ್ನು ಭಕ್ತಾದಿಗಳು ಬರಲಾರಂಭಿಸುತ್ತಾರೆ, ಗಣಪತಿ ಪೂಜೆಗೆ ಇವತ್ತಿನ ದಿನ ಬಹಳ ವಿಶೇಷವಾದ್ದು, ನಿನಗೆ ಗೊತ್ತಲ್ಲ..".. ಏನೇನೋ ವಿವರಿಸುತ್ತಿದ್ದ ಸುಧಾಕರ.

ಅವನ ಮನಸ್ಸನ್ನ ಆ ಶಬ್ದಗಳು ಮುಟ್ಟುತ್ತಲೇ ಇರಲಿಲ್ಲ. ತಾನು ಬ್ರಾಹ್ಮಣತ್ವ ಬಿಟ್ಟು ಸಮಯ ಎಷ್ಟಾಯಿತು?, ನಾನು ಕೆಲಸದ ಜಂಜಡದಲ್ಲಿ ಬದಲಾದ್ದು ನನಗೇ ತಿಳಿದಿಲ್ಲವೆ? ಇರಲಾರದು,. ಕಂಬಳಿ ಹುಳ ಚಿಟ್ಟೆಯಾದಂತೆ, ತಾನೂ ಕೂಡಾ ಯಾವತ್ತೋ ಪೊರೆ ಕಳಚಿಕೊಂಡು ಅಲ್ಲಿಂದ ಹೊರ ಬಂದಿದ್ದೇನೆ,ರೂಪಾಂತರಗೊಂಡಿದ್ದೇನೆ. ತಿಳಿಯಲೇ ಇಲ್ಲ!...ಹೀಗೇ ಮನಸ್ಸು ಎತ್ತಲೋ ಸಾಗುತ್ತಿತ್ತು. ಅದರಿಂದ ಹೊರ ಬರುವ ಪ್ರಯತ್ನ ಮಾಡಬೇಕೆಂದು ನಿರ್ಧರಿಸಿ, ಅಯ್ಯೋ, ಅದರಲ್ಲಿ ತಲೆ ಕೆಡಿಸಿಕೊಳ್ಳೋದು ಏನಿದೆ, ಮನೆಗೆ ಹೋದರೆ ಸಂಭಾಳಿಸೋಕೆ ತಿಳಿದಿದೆ, ಮತ್ತೇಕೆ ಚಿಂತೆ ಮಾಡಬೇಕು ಬಂದ ಕೆಲಸ ಮುಗಿಸಿ ಹೊರಡು, ಸಾಕು ಅಂತ ಆದೇಶಿಸಿದ, ಮನಸ್ಸಿಗೆ.

ಗಂಧ ತೇಯ್ದು ಕೊಡಲು ಹೇಳಿದ್ದರಿಂದ ಒಂದು ಮೂಲೆಯಲ್ಲಿ ಕೂತು ಆ ಕೆಲಸ ಮಾಡ ತೊಡಗಿದ ಅವನು. ಮತ್ತೊಬ್ಬ ಭಟ್ಟರಾರೋ ಬಂದು ಗಣಹೋಮದ ತಯಾರಿ ನಡೆಸಿದ್ದರು. ಜನ ಒಬ್ಬೊಬ್ಬರಾಗೇ ಬಂದುಕೂಡ ತೊಡಗಿದರು. ಭಾನುವಾರ ಬೆಳಗ್ಗೆ ಇಷ್ಟು ಬೇಗ ಎದ್ದು ಬರುವವರನ್ನ ನೋಡಿ ಆಶ್ಚರ್ಯ !. ಎಲ್ಲರೂ, ದೇವರಿಗೆ, ಸುಧಾಕರನಿಗೆ, ಮತ್ತು ಇವನಿಗೂ ನಮಿಸಿ ಸಾಗತೊಡಗಿದರು. ಜೀವಮಾನ ಇಡೀ ಸಿಗದಷ್ಟು ವಂದನೆ ಅರ್ಧಗಂಟೆಗಳಲ್ಲೇ ಸಿಕ್ಕಿತೇನೋ ಅಂತ ಹೆದರಿಕೆ ಆಗತೊಡಗಿತು! ಜೊತೆಗೇ ತಾನು ಈವರೆಗೆ ತನ್ನ ಟೀಮ್ ಲೀಡು, ಪ್ರೊಜೆಕ್ಟ್ ಮ್ಯಾನೇಜರ್‌ಗಳಿಗೆ ಸಲ್ಲಿಸಿದ ಗೌರವ ಅಷ್ಟೂ ವಾಪಾಸು ಬಂತು ಅಂತಲೂ ಅನಿಸಿ ಖುಷಿ ಆಯಿತು!

ಗಣಹೋಮದ ಹೊಗೆ ಸ್ವಲ್ಪ ಹೊತ್ತಿಗೇ ದೇವಸ್ಥಾನ ತುಂಬಿತು. ಆವತ್ತೊಂದು ದಿನ ಪಬ್ ಒಂದರಲ್ಲಿ ಹುಕ್ಕಾ ಸೇದುವಾಗ ಎಲ್ಲೋ ಈ ತರಹದ ಹೊಗೆ ರೂಮೆಲ್ಲಾ ತುಂಬಿಕೊಂಡದ್ದು ನೆನಪಾಯ್ತು. ಹಿಂದೆಯೇ ಅನ್ನಿಸಿತು, ಅಲ್ಲಾ ,ಅಪ್ಪನ ಜೊತೆ ಪೌರೋಹಿತ್ಯಕ್ಕೆ ಹೋಗುತ್ತಿದ್ದಾಗ ಗಣಹೋಮಕ್ಕೆ ಸಹಕರಿದ್ದು ಯಾಕೆ ನೆನಪಾಗಲಿಲ್ಲ ಮೊದಲಿಗೆ? ಅವಲಕ್ಕಿ, ಅರಳು ಹಾಕಿ, ಬೆಲ್ಲ ಮಿಶ್ರಣ, ಮೇಲೆ ತೆಂಗಿನ ಕಾಯಿ ಹೆರೆದು, ಬಾಳೆಹಣ್ಣು ಕೊಚ್ಚಿ, ಕಬ್ಬಿನ ಹೋಳು ಮಾಡಿ, ಇನ್ನೂ ಏನೇನೂ ನೆನಪಿಗೆ ಬರುತ್ತಿಲ್ಲ.. ಅದನೆಲ್ಲ ಹಾಕಿ ಪ್ರಸಾದ ತಯಾರು ಮಾಡುತ್ತಿದ್ದು ನಾನೇ ಆಗಿತ್ತು! ಅಲ್ಲೇ ನಗು ಬಂದು ಬಿಟ್ಟಿತು ಅವನಿಗೆ. ಎಷ್ಟು ಬಾಲಿಶ ಅಲ್ಲವ ಇದೆಲ್ಲ! ಆವಾಗ ತನಗಿದೆಲ್ಲ ಗೊತ್ತಾಗುತ್ತಿರಲಿಲ್ಲ, ಅಪ್ಪ ಕೊಡುವ ಹತ್ತೈವತ್ತು ರೂಪಾಯಿಗಳು ಮುಖ್ಯವಾಗಿತ್ತು ತನಗೆ. ಮೊನ್ನೆ ಯಾವುದೋ ಹೋಟೇಲಿನಲ್ಲಿ ಐವತ್ತು ರೂಪಾಯಿ ಟಿಪ್ಸ್ ಇಟ್ಟಿದ್ದೆ, ಜೊತೆಗೆ ಅವಳಿದ್ದಳಲ್ಲ, ಅನಿವಾರ್ಯವಾಗಿತ್ತು. ಮತ್ತು ಆ ಐವತ್ತು ಗಳಿಸಲು ಅಂದು ಮೂರು ತಾಸು ಹೊಗೆಯಲ್ಲಿ ಕೂರಬೇಕಾಗುತ್ತಿತ್ತು!


ತೇಯ್ದ ಗಂಧವನ್ನ ಬಟ್ಟಲೊಂದಕ್ಕೆ ತೊಡೆದಿಟ್ಟು ಮುಖ ನೋಡಿದ, ಇನ್ನೇನು ಮಾಡಲಿ ಎಂಬಂತೆ. 'ನೀನು ಆ ಪಾರ್ವತಿಯ ಗುಡಿಯ ಹೊರಗಿರುವ ಬೇಂಚಿನ ಮೇಲೆ ಕೂತು ತೀರ್ಥ - ಪ್ರಸಾದ ಕೊಡೋಕೆ ಶುರು ಮಾಡು, ಜನ ಒಂದು ಕಡೆಯಿಂದ ಬರುತ್ತಾ ಹೋಗುತ್ತಾ ಇರುತ್ತಾರೆ. ಎಲ್ಲರೂ ಏನೂ ಕೊನೇತನಕ ಇರುವುದಿಲ್ಲ, ಬ್ಯುಸಿ ಇರುತ್ತಾರೆ ನೋಡು, ದೇವರ ದರ್ಶನ ಮಾಡಿಕೊಂಡು ಹೊರಡುತ್ತಾರೆ' ಅಂದ ಸುಧಾಕರ. ಆಯಿತು ಅಂತ ಚುಟುಕಾಗಿ ಉತ್ತರಿಸಿ, ಪಾರ್ವತಿ ಗುಡಿ ಕಡೆಗೆ ಹೊರಟ. ಹಾಗೇ ಎದ್ದು ಓಡಿ ಬಿಡೋಣ ಅಂತ ಅನ್ನಿಸತೊಡಗಿತ್ತು ಅವನಿಗೆ. ತನ್ನದಲ್ಲದ ಲೋಕದೊಳಗೆ, ಗೊತ್ತಿದ್ದೂ ಗೊತ್ತಿದ್ದೂ ನಡೆದು ಬಂದು ಈಗ ದಾರಿ ತಪ್ಪಿ ಹೋಗಿದ್ದೇನೆ ಅನ್ನುವ ಅನುಭವ.

ತೀರ್ಥದ ಬಟ್ಟಲು, ಪಕ್ಕದಲ್ಲಿ ಹೂ ತುಂಬಿದ ಹರಿವಾಣ ಇಟ್ಟುಕೊಂಡು, ಹಳೆಯ ಕಬ್ಬಿಣದ ಕುರ್ಚಿಯೊಂದರಲ್ಲಿ ಕೂತವನಿಗೆ ಆಫೀಸಿನ ಮೆತ್ತ ಮೆತ್ತಗಿನ ತಿರುಗುವ ಕುರ್ಚಿ ನೆನಪಾಯಿತು. ಪಕ್ಕದ ಸೀಟಲ್ಲೇ ಕೂರುವ 'ಅವಳು' ನೆನಪಾದಳು.ಇನ್ನು ಏನೇನು ನೆನಪಾಗುತ್ತಿತ್ತೋ ಏನೋ ಯಾರೋ ಬಂದು ಭಟ್ರೇ, ತೀರ್ತಾ ಅಂದರು. ಸರಸರನೆ ಉಧ್ಧರಣೆಯಿಂದ ತೀರ್ಥ ತೆಗೆದು ಕೊಟ್ಟು ಗಂಧ,ಪ್ರಸಾದ ಕೈ ಮೇಲೆ ಹಾಕಿದ, ಯಾವುದೋ ಜನ್ಮದ ನೆನಪಿನಂತೆ.

ಮುಂದಿದ್ದದ್ದು ಬಲಿಷ್ಟ ಅಂಗೈ. ಕೂಲಿ ಕೆಲಸದವನದಿರಬೇಕು. ಜಡ್ಡು ಗಟ್ಟಿತ್ತು. ತಾನು ೨ನೇ ಕ್ಲಾಸಿನಲ್ಲಿದಾಗ ಮನೆ ಎದುರಿನ ಕೆರೆಗೆ ಬಿದ್ದು ಉಸಿರು ಕಟ್ಟಿದಾಗ ತನ್ನನ್ನ ಮೇಲಿತ್ತಿದಂತ ಕೈ. ಮಾದನೆಂದಿರಬೇಕು ಅವನ ಹೆಸರು. ತನ್ನನ್ನ ಹೆಗಲ ಮೇಲೆ ಹೊತ್ತು ತೋಟ ಸುತ್ತಿಸುತ್ತಿದ್ದ ಅವನು. ಕೌಳಿ ಹಣ್ಣು, ಬಿಕ್ಕೆ, ಮುಳ್ಳು ಹಣ್ಣು ಗಳನ್ನ ಕಿತ್ತು ಕೊಡುತ್ತಿದ್ದ , ಇಂತದ್ದೇ ಜಡ್ಡುಗಟ್ಟಿದ ಕೈಲಿ.

ಇನ್ನೊಂದು ಕೈ ಮುಂದೆ ಬಂತು ಅಷ್ಟು ಹೊತ್ತಿಗೆ, ಬೆಳ್ಳನೆಯ ಮೃದು ಹಸ್ತ. ಅದಕ್ಕೂ ತೀರ್ಥವಿತ್ತ. ಹೈಸ್ಕೂಲು ಗೆಳತಿ ಸುಮಾಳ ಕೈಯಂತಿತ್ತು ಈ ಕೈ. ಪ್ರೇಮದ ಮೊದಲ ಸ್ಪರ್ಶದ ಅನುಭೂತಿ ನೀಡಿದ ಕೈ. ತುಂಬ ಬಳೆಗಳಿದ್ದವು, ಸುಮಾಳ ಹಾಗೆಯೇ. ಮಾತು ಹಾಗೆಯೇ ಇದ್ದೀತಾ, ಏನೋ, ಈಕೆ ಮಾತಾಡುತ್ತಿಲ್ಲ. ಸಂಜೆ ಶಾಲೆ ಬಿಟ್ಟ ಮೇಲೆ ಇಂತಹದ್ದೇ ಕೈಯನ್ನಲ್ಲವೇ, ಬಿಗಿಯಾಗಿ ಹಿಡಿದುಕೊಂಡು ಗುಡ್ಡ- ಬೆಟ್ಟ ತಿರುಗಿ , ಕಣ್ಣಲ್ಲೇ ಮಾತಾಡಿಕೊಂದು ಮನೆಗೆ ಹಿಂದಿರುಗುತ್ತಿದ್ದುದು ? ಯಾಕೋ ತಲೆಯೆತ್ತಿ ಒಮ್ಮೆ ಸುಮಳ ನೆನಪ ತಂದವಳ ಮುಖ ನೋಡಬೇಕೆನಿಸಿತು. ಸಾಧ್ಯವಾಗಲಿಲ್ಲ.

ಪುಟ್ಟ ಎಳೆಯ ಕೈಯೊಂದನ್ನ ಅದರಪ್ಪ ಮುಂದೆ ಹಿಡಿಸಿದ್ದ. ತಟಕೇ ತಟಕು ನೀರು ಹಿಡಿವ , ತುಂಬಿದ ಮಳೆಗಾಲದಲ್ಲಿ ಹುಟ್ಟಿದ ತನ್ನ ತಮ್ಮನದೇ ಕೈ. ಮೂರೇ ತಿಂಗಳಿಗೆ ಏನೋ ರೋಗ ಬಂದು ಸತ್ತು ಹೋಗಿ, ತನಗಿದ್ದ ಅಣ್ಣನ ಸ್ಥಾನ ಕಸಿದುಕೊಂಡ ಆ ಮಗುವಿನಂತದ್ದೇ. ಅಮ್ಮ, ಅಪ್ಪ ಎಲ್ಲರೂ ಮಂಕು ಬಡಿದು ಸುರಿಯುತ್ತಿದ್ದ ಮಳೆಯನ್ನೇ ನೋಡುತ್ತಾ, ಮಾತೇ ಇಲ್ಲದೇ ಕೂರುವಂತೆ ಮಾಡಿದ ಪಾಪುವಿನ ತರಹದ್ದೇ ಕೈ. ಈ ಮಗು ನೂರು ವರ್ಷ ಬಾಳಲಪ್ಪಾ ಅಂತ ಹಾರಯಿಸಿ, ಒದ್ದೆಯಾದ ಕಣ್ಣೊರಿಸಿಕೊಂಡ. ಆವನು ಬದುಕಿದ್ದಿದ್ದರೆ, ಏನಾಗುತ್ತಿದ್ದನೋ ಏನೋ. ಅಪ್ಪನಿಗೆ ಸಹಾಯ ಮಾಡುತ್ತಿದ್ದನೇನೋ, ಅಲ್ಲಾ, ತನ್ನಂತೆ ಸಾಫ್ಟ್‌ವೇರ್ ಬದುಕಿಗೆ ಬಂದು ಬಿಡುತ್ತಿದ್ದನೋ. .

ಈ ಬಾರಿ ಎದುರಿಗೆ ಬಂದ ಕೈ ತನ್ನ.. ಅಲ್ಲಲ್ಲ, ತನ್ನಂತಲ್ಲ ದಿನಾ ತನ್ನನ್ನ ದುಡಿಸಿಕೊಳ್ಳುವ ಪ್ರೊಜೆಕ್ಟ್ ಮ್ಯಾನೇಜರನದು.. ಒಮ್ಮೆ ಅವನೇ ಬಂದನೇನೋ ಎಂದು ಗಾಭರಿಯಾಗಿ ಮುಖ ನೋಡಿದ. ಅಲ್ಲ, ಈತ ಯಾರೋ ಮಧ್ಯಮ ವರ್ಗದ ಸಾದಾ ಮನುಷ್ಯ. ಕೊಟ್ಟ ಪ್ರಸಾದಾದಿಗಳನ್ನ ಭಕ್ತಿಯಿಂದ ಕಣ್ಣಿಗೊತ್ತಿಕೊಂಡು ಹೋದ. ನಿತ್ಯ ವ್ಯಂಗ್ಯವಾಡುವ ಅವನೆಲ್ಲಿ, ಈ ಸಾಧು ಪ್ರಾಣಿಯೆಲ್ಲಿ ? ಬರಿಯ ಕೈಗಳಿಗೆ ಮಾತ್ರ ಹೋಲಿಕೆಗಳಿವೆ, ಆದರೆ ಮನಸ್ಸಿಗೂ, ಬದುಕಿನ ದಾರಿಗೂ ಅಲ್ಲ ಅಂತನಿಸಿತವನಿಗೆ. ದಿನನಿತ್ಯ ಪರದೆ ನೋಡಿಕೊಂಡು ಬೇರೆ ಜಗತ್ತೇ ಇಲ್ಲವೆಂದು ಬದುಕುವ ತನಗಿಂತ, ತನ್ನ ಪ್ರೊಜೆಕ್ಟ್ ಮ್ಯಾನೇಜರನಿಗಿಂತ ಆತ ಸುಖಿಯೆ ? ಇರಬಹುದು, ಇರದಿರಬಹುದು. ಮುಖ ನೋಡಿದರೆ ಏನೂ ತಿಳಿಯಲಾರದು.

ಒಂದಾದ ಮೇಲೊಂದು ಕೈಗಳು ಅವನೆದುರು ಬರುತ್ತಲೇ ಇದ್ದವು. ಅರಸಿನ ತೊಡೆದುಕೊಂಡ ನವ ವಧುವಿನ ಅಂಗೈ, ಬಳೆಯಿಲ್ಲದ ಖಾಲಿ ಕೈ, ಜಜ್ಜಿಹೋದ ಹೆಬ್ಬೆರಳಿದ್ದ ಕೈ, ಐದು ಬೆರಳೂ ಉಂಗುರ ತೊಟ್ಟ ಶ್ರೀಮಂತ ಹಸ್ತ, ಮಾಸ್ತರ ಬಳಿಯಲ್ಲಿ ಹೊಡೆತ ತಿಂದು ಕೆಂಪಾದ ಕೈ, ಮದರಂಗಿ ಹಚ್ಚಿಕೊಂಡ ಪುಟ್ಟ ಕೈ, ಶಕ್ತಿಯಿಲ್ಲದೇ ನಡುಗುವ ವೃದ್ಧ ಕೈ, ಆಗಷ್ಟೇ ಅಡುಗೆ ಮುಗಿಸಿ ಬಂದಂತ ಗೃಹಿಣಿಯ ಕೈ.. ಎಲ್ಲ ಇವನ ಮುಂದೆ ಬಂದು ಸಾಗುತ್ತಿದ್ದವು.

ಪ್ರತಿ ಕೈಯನ್ನೂ ಕೂಡಾ ಅವನಿಗೆ ಹಿಂದೆಲ್ಲೋ ನೋಡಿದಂತನಿಸುತ್ತಿತ್ತು, ತನ್ನ ಮನೆಯ, ಊರಿನ, ಸುತ್ತಮುತ್ತಲ ಎಲ್ಲರ ಕೈಗಳೂ ಬೆಂಗಳೂರಿಗೆ ಬಂದು ಇಲ್ಲಿರುವವರ ದೇಹಕ್ಕೆ ಅಂಟಿಕೊಂಡು ಬಿಟ್ಟಿರಬೇಕು ಎಂಬ ಯೋಚನೆ ಬಂದು ಮೈ ಬೆವರತೊಡಗಿತು. ಯಾವುದಾದರೂ ಕೈ ಬಂದು ತನ್ನ ಶಾಲನ್ನ ಕಿತ್ತೆಸೆದು, ನನ್ನ ನಿಜವನ್ನ ಬಯಲು ಮಾಡಿದರೆ ?, ಜನಿವಾರವಿಲ್ಲದ ತನ್ನ ಅರೆ ಬೆತ್ತಲ ಮೈಯನ್ನ ಎಲ್ಲರಿಗೂ ತೊರಿಸಿಬಿಟ್ಟರೆ. ಏನು ಮಾಡಲಿ..ತನ್ನ ಕೆಟ್ಟು ಹೋದ ಮೆದುಳನ್ನ, ಅದರೊಳಗಿನ ಹೊಲಸು ವಿಚಾರಗಳನ್ನ ಎಳೆದು ಹೊರ ಹಾಕಿ.. ನನ್ನ ಕುಲಗೆಟ್ಟ ಕೃತ್ಯಗಳನ್ನ ಖಂಡಿಸಿ ಎರಡು ಕೆನ್ನೆಗಳಿಗೂ ಬಾರಿಸಿ, ಯಾಕೆ ಹೀಗಾದೆ ಎಂದು ಕಾರಣ ಕೇಳಿದರೆ ? ನನ್ನನ್ನ ಬಟ್ಟೆಯಿದ್ದೂ ಬೆತ್ತಲು ಮಾಡಿ ಎಲ್ಲರೆದುರೂ ನಿಲ್ಲಿಸಿ 'ಛೀ, ಥೂ' ಎಂದು ಉಗಿಸಿದರೆ ?..

ಆ ಕೈಗಳ ಗುಂಪಿಂದ ನನ್ನಪ್ಪನ ಕೈ ಬಂದು ' ನಿನ್ನನ್ನ ಇಷ್ಟು ಕಷ್ಟ ಪಟ್ಟು ಬೆಳಸಿದ್ದು ಜಾತಿಕೆಡುವುದಕ್ಕೇನೋ, ಯಾಕೋ ಹೀಗೆ ಮಾಡಿ ನನ್ನ ಮಾನ ಕಳೆದೇ' ಅಂತ ಅತ್ತು ಬಿಟ್ಟರೆ ಏನು ಮಾಡಲಿ ತಾನು ?.. ಕೂತಲ್ಲಿಂದ ಏಳಲೂ ಆಗುತ್ತಿಲ್ಲ ಅವನಿಗೆ. ಅಸಹಾಯಕನಂತಾಗಿದ್ದ. ಕೈಗಳು ಮಾತ್ರ ಬಂದವರಿಗೆಲ್ಲ ತೀರ್ಥ ಪ್ರಸಾದ ವಿತರಣೆ ಮಾಡುತ್ತಿದ್ದವು. ಅಷ್ಟರಲ್ಲಿ ಒಂದು ಮಧ್ಯಮ ವಯಸ್ಸಿನ ಹೆಂಗಸಿನ ಕೈ ಮುಂದೆ ಬಂತು. 'ಮಗೂ, ತೀರ್ಥ ಕೊಡಪ್ಪಾ' ಅಂದಿತು. ಆ ಅರೆ ಸುಕ್ಕುಗಟ್ಟಿದ ಕೈ, ಆ ದನಿಯ ಮಾರ್ದವತೆ ಕೇಳಿದ ಅವನಿಗೆ ಅದು ಥೇಟ್ ತನ್ನಮ್ಮನದೇ ದನಿ ಎಂದೆನಿಸಿಬಿಟ್ಟಿತು. ತನ್ನ ತಲೆಯನ್ನ ನಿತ್ಯ ನೇವರಿಸಿದ ಕೈ, ಅಪ್ಪನೇಟಿನಿಂದ ತಪ್ಪಿಸುತ್ತಿದ್ದ ಕೈ, ತುತ್ತು ನೀಡಿ ಸಲಹಿದ ಕರುಣಾಮಯಿಯ ಕೈಯೇ ಅವನ ಮುಂದಿತ್ತು. ಎಲ್ಲವನ್ನು ಮರೆತು ಆ ಕೈಗಳನ್ನೇ ಹಿಡಿದುಕೊಂಡು ಅದರಲ್ಲಿದ್ದ ಗೆರೆಗಳನ್ನೇ ನೋಡುತ್ತಾ ನಿಂತುಬಿಟ್ಟ.

ಯಾವುದೋ ಹಳೆಯ ಲೋಕದ ಮರೆತ ದಾರಿಯನ್ನ ಆಕೆಯ ಕೈಲಿದ್ದ ಆ ಗೆರೆಗಳು ತೋರಿಸುತ್ತಿದ್ದವು.

{ಈ ಕಥೆ ಬರೆದು ವರ್ಷವಾಗುತ್ತ ಬಂತು. ಈಗ ಈ ಕಥೆ ಬರೆದಿದ್ದರೆ, ಬೇರೆಯದೇ ತರ ಬರೆಯುತ್ತಿದ್ದೆನೇನೋ. ಏನೂ ತಿದ್ದುಪಡಿ ಮಾಡದೇ ಹಾಗೆಯೇ ಹಾಕಿದ್ದೇನೆ. }

ಬುಧವಾರ, ಜೂನ್ 20, 2007

ಹಯವದನ ಮತ್ತು ಬೆಂಗಳೂರು ಸಂಜೆ.

ನಿನ್ನೆ ಸಂಜೆ "ಹಯವದನ" ನಾಟಕ ನೋಡಿದೆ, ರಂಗ ಶಂಕರದಲ್ಲಿ. ಅಭಿನಯಿಸಿದೋರು "ಬೆನಕ" ತಂಡದವರು. ರಚನೆ ಗಿರೀಶ್ ಕಾರ್ನಾಡರದು. ಟಿ.ಎಸ್.ನಾಗಾಭರಣ, ಸುಂದರ್ ರಾಜ್, ಮೈಕೋ ಚಂದ್ರು, ವಿದ್ಯಾ ವೆಂಕಟ್ರಾಮ್, ಪೂರ್ಣ ಚಂದ್ರ ತೇಜಸ್ವಿ.. ಇವರೆಲ್ಲ ಇದ್ದ ಮೇಲೆ ನಾಟಕ ಸೊಗಸಾಗೇ ಆಗಬೇಕು , ಆಯಿತು ಕೂಡ. ಜಾನಪದ- ಐತಿಹಾಸಿಕ ಕಥೆಯನ್ನ ಇವರೆಲ್ಲ ಸೇರಿ ಪ್ರಸ್ತುತ ಪಡಿಸುವ ಶೈಲಿಯೇ ಅನನ್ಯ. ಸೂತ್ರಧಾರನೇ ಒಮ್ಮೊಮ್ಮೆ ಪಾತ್ರಧಾರಿಯಾಗಿ ನಾಟಕದೊಳಗೆ ನಡೆದು ಬಿಡುತ್ತಾನೆ. ಮತ್ತೆ ಹೊರ ಬಂದು ವರ್ತಮಾನದಲ್ಲಿ ಮಾತಾಡುತ್ತಾನೆ. ಹಾಡುಗಳು ಕಥಾಹಂರದೊಳಗೆ ಬೆರೆತು ಬಿಟ್ಟಿವೆ. ನಿರ್ದೇಶನ - ಬಿ.ವಿ.ಕಾರಂತರದು.

ಬೆನಕ ತಂಡದ ಸದ್ಯ ಅಭಿನಯಿಸುತ್ತಿರುವ ಎಲ್ಲ ನಾಟಕಗಳನ್ನೂ ನೋಡಿದೆ. ಸತ್ತವರ ನೆರಳು, ಜೋಕುಮಾರ ಸ್ವಾಮಿ, ಗೋಕುಲ ನಿರ್ಗಮನ, ಹಯವದನ- ಎಲ್ಲವು ಒಂದಕ್ಕಿಂತ ಒಂದು ಚೆನ್ನಾಗಿವೆ. ಕಿರುತೆರೆಯಲ್ಲಿ, ಸಿನಿಮಾ ರಂಗದಲ್ಲಿ ಬ್ಯುಸಿಯಾಗಿರುವವರು ಇಷ್ಟ ಪಟ್ಟು ಇಂತಹ ನಾಟಕಗಳಲ್ಲಿ ಅಭಿನಯಿಸುದನ್ನ ನೋಡಿದಾಗ ಸಂತಸವೆನಿಸುತ್ತದೆ, ಇವರು ಬೇರು ಮರೆತಿಲ್ಲವಲ್ಲ ಅಂತ. ದೊಡ್ದ ಪಾತ್ರ- ಸಣ್ಣದು ಯಾವುದಾದರೂ ಅಭಿನಯಿಸುತ್ತಾರೆ , ಸ್ಟಾರ್ ಗಿರಿಯ ಹಂಗಿಲ್ಲದೆ.

ಈ ವರುಷ ಒಳ್ಳೆಯ ನಾಟಕಗಳು ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿವೆ ಬೆಂಗಳೂರಲ್ಲಿ. ಹೋಗುವ ಮನಸ್ಸಿದವರಿಗೆ, ದಿನವೂ ಒಂದಲ್ಲ ಒಂದು ಕಾರ್ಯಕ್ರಮ ಇದ್ದೇ ಇರುತ್ತದೆ. ರವೀಂದ್ರ ಕಲಾಕ್ಷೇತ್ರ, ರಂಗ ಶಂಕರಗಳಲ್ಲಿ ನಿತ್ಯ ಜಾತ್ರೆ. ವಾರದಲ್ಲಿ ಒಂದೆರಡು ಕಡೆಗಾದರೂ ಪ್ರಯತ್ನ ಪಟ್ಟು ಹೋಗುತ್ತೇನೆ ನಾನು. ಹೆಚ್ಚಿನ ಕಾರ್ಯಕ್ರಮಗಳು ಸಂಜೆ ೬ರ ಮೇಲೆ ನಡೆಯುವುದರಿಂದ ಯಥಾಸಾಧ್ಯ ಪ್ರಯತ್ನ ಮಾಡಿ ಹೋಗಬಹುದು.

ಈ ವಾರವೂ ಅಷ್ಟೇ, ಒಳ್ಳೊಳ್ಳೇ ನಾಟ್ಕ- ಇತ್ಯಾದಿಗಳಿವೆ . ಇವತ್ತು ತೇಜಸ್ವಿ ಸಪ್ತಾಹದ ಅಂಗವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಜುಗಾರಿ ಕ್ರಾಸ್ ನಾಟ್ಕ, ನಾಳೆ ೨೧ಕ್ಕೆ ಕೃಷ್ಣೇಗೌಡನ ಆನೆ, ನಾಡಿದ್ದು ತಬರನ ಕಥೆ, ಶನಿವಾರ ಯಮಳ ಪ್ರಶ್ನೆ. ಎಲ್ಲ ರವೀಂದ್ರ ಕಲಾಕ್ಷೇತ್ರದಲ್ಲಿ. ಸಮಯ - ೬.೧೫. ಇತ್ತಕಡೆ ರಂಗಶಂಕರದಲ್ಲಿ, ಇವತ್ತು ಜೋಕುಮಾರಸ್ವಾಮಿ, ನಾಳೆ, ನಾಡಿದ್ದು ಕೈಲಾಸಂ ನಾಟ್ಕ- ಬಂಡ್ವಾಳ್ವಿಲ್ದ ಬಡಾಯಿ. ಶನಿವಾರ ಭಾನುವಾರ - "ನೀನಾನಾದ್ರೆ ನಾನೀನೇನಾ" ಅನ್ನುವ - ಎಸ್.ಸುರೇಂದ್ರನಾಥ್ ನಿರ್ದೇಶನದ -ಸಂಕೇತ್ ಕಲಾವಿದರ- ಸಿಹಿಕಹಿ ಚಂದ್ರು ಮತ್ತು ಶ್ರೀನಿವಾಸ್ ಪ್ರಭು ಅಭಿನಯದ ನಾಟಕ, ೭.೩೦ಕ್ಕೆ.ಶನಿವಾರ ಸಂಜೆ ಹೆಚ್.ಎನ್.ಕಲಾಕ್ಷೇತ್ರದಲ್ಲಿ ಪ್ರವೀಣ್ ಗೋಡ್ಕಿಂಡಿಯ 'ಕೃಷ್ಣಾ' ತಂಡದಿಂದ ಕೊಳಲು ವಾದನ ಕಾರ್ಯಕ್ರಮವೂ ಇದೆ.

ಬನ್ನಿ. ಭೇಟಿಯಾಗೋಣ.

ಮಂಗಳವಾರ, ಜೂನ್ 19, 2007

ಭಾವ - ೧೧

ಇಲ್ಲೊಬ್ಬ ಗಂಡ ತನ್ನ ಹೆಂಡತಿಯನ್ನ ತೊಡೆ ಮೇಲೆ ಮಲಗಿಸಿಕೊಂಡು ತಟ್ಟುತ್ತಿದ್ದರೆ , ಪಕ್ಕದಲ್ಲಿರುವ ಮಗು ಅವರನ್ನೆ ದಿಟ್ಟಿಸುತ್ತಿದೆ ಅಚ್ಚರಿಯಲ್ಲಿ. ಬದುಕು ಸುಂದರವಾಗಿದೆ ಅಲ್ಲವೆ?

ಸೋಮವಾರ, ಜೂನ್ 18, 2007

ಹಕ್ಕಿ ಕಥೆ.

ನಿನ್ನೆ ರಾತ್ರೆ ಹನ್ನೆರಡು ಗಂಟೆ ಸುಮಾರಿಗೆ ಸುಶ್ರುತ ಮೆಸೇಜು ಮಾಡಿದ. ಎಕ್ಸಾಮಿಗೆ ಓದುತ್ತಿದ್ದವನು ಹಾಗೇ ಎಲ್ಲೋ ಎದ್ದು ಹೊರಗಡೆ ಹೋಗಿರಬೇಕು. ಈ ಪರೀಕ್ಷೆ ಅಂದರೇನೇ ಹಾಗೆ, ಆ ಸಮಯದಲ್ಲಿ ನಮಗೆ, ಓದುವುದೊಂದು ಬಿಟ್ಟು ಮತ್ತೆಲ್ಲ ವಿಚಾರಗಳೂ ತಲೆಗೆ ಬರುತ್ತವೆ. ಇಲ್ಲದ ಬೇರೆ ಜಂಜಡಗಳೆಲ್ಲ ಅದೇ ಸಮಯಕ್ಕೇ ತಲೆಗೆ ಸುತ್ತಿಕೊಳ್ಳುತ್ತವೆ. ಇವನ ವಿಷಯದಲ್ಲೂ ಹಾಗೇ ಆಗಿದೆ.

" ನಮ್ಮ ಮನೆ ಎದುರು ಒಂದು ದೊಡ್ಡ ಮರ. ಅದರ ನಾಕನೇ ರೆಂಬೆಯ ಮೂರನೇ ಕವಲಿನಲ್ಲಿ ಒಂದು ಹಕ್ಕಿ ಸಂಸಾರ. ಗಂಡ, ಹೆಂಡತಿ, ಮೂರು ಮಕ್ಕಳು. ಹೆಣ್ಣು ಹಕ್ಕಿ ಮತ್ತೆ ಗರ್ಭಿಣಿ! ಅದು ಎಲ್ಲಿಗೂ ಹೋಗದೇ ಗೂಡಿನಲ್ಲೇ ಕೂತಿರುತ್ತದೆ: ಮಳೆ ನೋಡುತ್ತಾ, ಮರಿಗಳೊಡನೆ. ಇವತ್ತು ಬೆಳಗ್ಗೆ ಆಹಾರ ತರಲೆಂದು ಹೋದ ಗಂಡ, ಇನ್ನೂ ವಾಪಾಸು ಬಂದಿಲ್ಲವಂತೆ.. ಗೂಡಿನಲ್ಲಿ ಚಿಂತೆ, ಬಿಕ್ಕಳಿಕೆ,ನಿಟ್ಟುಸಿರು.. ನಾನು ಅವಕ್ಕೆ, "ನಾಳೆ ಬೆಳ್ಗೆ ಹುಡುಕೋಣ" ಅಂತ ಸಮಾಧಾನ ಮಾಡಿದ್ದೇನೆ. ನಿನ್ನ ಜೊತೆ ಅವ್ರಿಗು ಗುಡ್ ನೈಟ್ ಹೇಳಿದ್ದೇನೆ. ಸರಿ ತಾನೆ"?

ಇವನಿಗ್ಯಾಕಪಾ ಬೇಕಿತ್ತು ಇಲ್ಲದ ಉಸಾಬರಿ? ಅಲ್ದೇ ಪಾಪ ಆ ಹಕ್ಕಿಗೆ ಗುಡ್ ನೈಟ್ ಬೇರೆ ಹೇಳಿದ್ದಾನೆ. ಅದ್ಕೆ ಪಾಪ ಅದು ಗುಡ್ ನೈಟ್ ಹೇಗಾಗ ಬೇಕು? ಹಮ್, ಹಾರೈಸೋದ್ರಲ್ಲಿ ತಪ್ಪಿಲ್ಲ ಅಂದುಕೊಳ್ಳೋಣ. ಅಲ್ಲದೇ ಆ ಹಕ್ಕಿ ಸಂಸಾರಕ್ಕೆ ವಿಷ್ ಮಾಡೋ ಭರದಲ್ಲಿ ನಮ್ಮನ್ನೂ ತನ್ನ ಜೊತೆ ಎಳೆದುಕೊಂದು ಬಿಟ್ಟಿದ್ದಾನೆ! ನಾವು ಕೂಡಾ ತಿಳಿದೋ , ತಿಳಿಯದೆಯೋ ಆ ಹಕ್ಕಿ ಸಂಸಾರದ ದುಃಖದಲ್ಲಿ ಭಾಗಿಗಳಾಗಿ ಬಿಟ್ಟಿದ್ದೇವೆ, ಒಂದು "ಗುಡ್ ನೈಟ್" ಕಾಲದಲ್ಲಿ.

ನಂಗೋ ಬೆಳ್ಗೆ ತಂಕ ಪಾಪ, ಆ ಹಕ್ಕಿದೇ ಆಲೋಚ್ನೆ! ಎಲ್ ಹೋಯ್ತೋ, ಎನ್ ಆಯ್ತೋ. ಈ ಬೆಂಗಳೂರೆಂಬೋ ಮಾಯಾ ನಗರಿ ಏನ್ ಸಾಮಾನ್ಯಾನಾ? ಎಲ್ಲ ಒಂದೇ ತರ ಕಾಣೋ ಪೆಟ್ಗೆ ಪೆಟ್ಗೆ ಮನೆಗಳು. ದಾರಿ ತಪ್ಸ್ ಕೊಂಡು ಎಲ್ಲಿ ಅಲೀತಿದ್ಯೋ, ಹೆಂಡ್ತಿ ನೋಡದ್ರೆ ಗರ್ಭಿಣಿ ಅಂದಿದಾನೆ ಸುಶ್. ಮಳೆ ಬೇರೆ ಜೊತೆಗೆ. ಅಲ್ಲಾ ಇವನ್ಯಾಕಪಾ ಅದ್ರ್ ಹತ್ರ ಕೇಳೋಕೆ ಹೋಗ್ಬೇಕಿತ್ತು? ಸುಮ್ನೆ ಇದಿದ್ರೆ ಏನಾಗಿರೋದು? ಅಲ್ಲಾ, ನಾನಾಗಿದ್ರೂ ಕೇಳ್ತಿದ್ದೆ ಅನ್ನಿ, ಅದು ಬೇರೆ ವಿಚಾರ.

ಅದೇ ಹಕ್ಕಿನೇ ತಲೆ ಒಳಗೆ ಇಟ್ಕೊಂಡು ಸ್ನಾನ, ತಿಂಡಿ ಮುಗ್ಸಿ ಪ್ಯಾಂಟು- ಶರ್ಟು ಹಾಕ್ಕಂಡು ಬಸ್ಯಾಂಡಿಗೆ ಹೋಗ್ ನಿಂತೆ. ಅಲ್ಲೇ ಪಕ್ಕದಲ್ ಒಂದು ಮರ ಇದೆ. ಕೀಚ್ಲು ಧ್ವನಿ ನಿ ಯಾವ್ದೋ ಹಕ್ಕಿ ಸಣ್ಣಕೆ ಗಲಾಟೆ ಮಾಡ್ತಿತ್ತು! ಮೈ ಪುಕ್ಕ ಎಲ್ಲಾ ಕೆದ್ರೋಗಿದೆ ಪಾಪ.
"ಏನೇ ಹಕ್ಕಿ ಏನಾಯ್ತು" ಅಂದೆ.

ಏನೂ ಇಲ್ಲಾ ಮನೆ ದಾರಿ ತಪ್ಪಿದೆ ನಂಗೆ, ನಿನ್ನೆ ಆಹಾರ ಹುಡಕ್ಕೊಂಡ್ ಹೊರ್ಟಿದ್ನಾ - ಯಾವ್ದೋ ತಲೇಲಿ ಎಲ್ಲೆಲ್ಲೋ ಹಾರಿದೀನಿ. ಆಹಾರ ಸಿಗ್ತು, ಕಚ್ಕೊಂಡು ಹಾರೋಕೆ ನೋಡಿದ್ರೆ ಏನ್ ಮಾಡೋದು, ಯಾವ್ದೋ ಗೊತ್ತಿಲ್ದೇ ಇರೋ ಜಾಗ. ಹೆಂಗೆ ವಾಪಾಸು ಹೋಗೋದು ಅಂತ್ಲೂ ಗೊತಾಗ್ಲಿಲ್ಲ. . ಅಲ್ಲೇ ಒಂದು ಅರ್ಧ ಕಟ್ಟಿರೋ ಬಿಲ್ಡಿಂಗ್ ಇತ್ತು, ಸುಮ್ನೆ ವೆಂಟಿಲೇಟರ್ ಸಂದೀಲಿ ಕೂತು ರಾತ್ರಿ ಕಳ್ದೆ.. ಈಗ ಮನೆಗೆ ಹೇಗ್ ಹೋಗ್ಲಿ.. ಹೆಂಡ್ತಿ ಬೇರೆ ಗರ್ಭಿಣಿ.. ಮೂರು ಪುಟ್ ಪುಟ್ ಮಕ್ಳಿದಾರೆ..

ಓಹ್- ಇದು ಸುಶ್ ಮನೆ ಎದ್ರುಗಡೇ ಹಕ್ಕಿ! ನಂಗೆ ಭಾರೀ ಖುಶಿ ಆಗೋಯ್ತು!

ನಾನು ಅದರ ಮಾತ್ನ ಅರ್ಧಕ್ಕೆ ನಿಲ್ಸಿದವನೇ,

"ನಂಗೆ ನಿಮ್ಮನೆ ದಾರಿ ಗೊತ್ತು... ನಿಮ್ ಮನೆ ಎದ್ರಿಗೆ ಟಾರಸಿ ಮನೆ ಇಲ್ವಾ, ಅಲ್ಲೇ ಮೇಲಿರೋ ಹುಡ್ಗ ನಂಗೆ ಫ್ರೆಂಡು ಹಕ್ಕೀ, ಅವನು ನಿನ್ನೆ ರಾತ್ರೇನೇ ನೀನು ಮನೇಲ್ ಇಲ್ದಿರೋ ಕಥೆ ನಂಗೆ ಹೇಳಿದಾನೆ, ಏನೂ ಚಿಂತೆ ಮಾಡ್ಬೇಡ" ಅಂತಂದು ಅದರ ಮನೆಗೆ ಹೋಗೋ ದಾರಿ ಹೇಳಿ, ಶುಭೋದಯಾ ಅಂತ ಹಾರೈಸಿ ಕಳ್ಸಿಕೊಟ್ಟೆ. ಅಷ್ಟು ಮಾಡಿದವನೇ ಸುಶ್ ಗೆ ಮೆಸೇಜು ಬಿಟ್ಟೆ.

" ಇಲ್ಲೊಂದು ಪುಟ್ಟ ಬೆದರಿದಂತೆ ಕಾಣುವ ಹಕ್ಕಿ, ನನ್ನ ಪಕ್ಕ ಇರೋ ಮರದ ಗೆಲ್ಲ ಮೇಲೆ. ಪುಕ್ಕ ಕೆದರಿದೆ. ಕಣ್ಣಲ್ಲಿ ಚಿಂತೆ, ದೇಹ ಭಾವ ಗಾಭರಿಯದು. ಅದು ದಾರಿ ತಪ್ಪಿಸಿಕೊಂಡಿದೆಯಂತೆ. ಹೆಂಡತಿ ಗರ್ಭಿಣಿ ಬೇರೆ ಅಂತು. ನಾನು ನಿನ್ನ ಮನೆ ದಾರಿ ಹೇಳಿ, ಶುಭೋದಯ ಅಂತ ಹಾರೈಸಿ, ಅರಾಮಾಗಿ ಹೋಗು ಅವ್ರೆಲ್ಲ ಚೆನ್ನಾಗಿದಾರೆ ಅಂದೆ. ಸರಿ ತಾನೆ?"

"ಥ್ಯಾಂಕ್ಸು ಮಾರಾಯಾ, ನಾನಿನ್ನು ನಿಶ್ಚಿಂತೆಯಿಂದ ಎಕ್ಸಾಮು ಬರೀ ಬಹುದು " - ರಿಪ್ಲೈ ಬಂತು ಆ ಕಡೆಯಿಂದ.

ಇಷ್ಟು ಹೊತ್ತಿಗೆ ಗಂಡು ಹಕ್ಕಿ ಗೂಡು ಮುಟ್ಟಿರಬಹುದು. ತನ್ನ ಪುಟ್ಟ ರೆಕ್ಕೆಯಡಿ ಮತ್ತೂ ಪುಟ್ಟ ಮರಿಗಳನ್ನ ಕೂರಿಸಿಕೊಂಡು ಹೆಂಡತಿ ಹಕ್ಕಿಯ ಪಕ್ಕ ಬೆಚ್ಚಗೆ ಕೂತಿರಬಹುದು.

ಓವರ್ ಟು ಸುಶ್!

ಬುಧವಾರ, ಜೂನ್ 13, 2007

ಇವತ್ತು ಬೆಳಗ್ಗೆ..

ಇಂದು ಬೆಳಗ್ಗೆ ಎಂದಿನಂತೆ BTM ಲೇ ಔಟಲ್ಲಿ ೨೦೧ ಬಸ್ಸಿಳಿದೆ, ೯ ಗಂಟೆಯ ಸಮಯ. ಟ್ರಾಫಿಕ್ ಜಾಮ್ ಯಾಕೋ ಇನ್ನು ಆಗಿರಲಿಲ್ಲ, ಆಶ್ಚರ್ಯ ಅನ್ನಿಸಿತು. ದಿನನಿತ್ಯ ಇಲ್ಲಿ ವಾಹನಗಳ ಸರತಿ ಸಾಲು ಪೇ ಪೇ ಅಂತ ಹಾರ್ನು ಬಾರಿಸಿಕೊಂಡು ನಿಂತಿರುವುದು ತೀರಾ ಸಾಮಾನ್ಯ ದೃಶ್ಯ. ನಾನು ಬಸ್ಸಿಳಿದು ರೋಡು ದಾಟಲು ಹೊರಡುವುದಕ್ಕೂ, ಸಿಗ್ನಲ್ಲು ಬೀಳುವುದಕ್ಕೂ ಸರಿಯಾಯಿತು. ೨೦೧ ಬಸ್ಸು , ಅದರ ಹಿಂದೆ ಒಂದು ಆಟೋ, ಜೀಪು.. ಎಲ್ಲ ಬ್ರೇಕು ಹಾಕಿ ನಿಂತವು ಅಲ್ಲೇ.

೪ನೇ ವೆಹಿಕಲ್ಲು ಒಂದು ಅಂಬುಲೆನ್ಸ್. ಹಾರನ್ ಮೇಲೆ ಹಾರನ್ ಬಾರಿಸುತ್ತಿದ್ದ ಆತ. ನನ್ನಷ್ಟೇ ಪ್ರಾಯದ ಹುಡುಗ ಡ್ರೈವರ್ರು. "ಅಣ್ಣಾ, ಪ್ಲೀಸ್ ಮುಂದ್ ಹೋಗಣ್ಣ, ಅರ್ಜೆಂಟ್ ಕೇಸ್ ಬೇಗ್ ಹೋಗ್ಬೇಕೂ" ಅಂತ ಮುಂದಿನ ಜೀಪ್ನವನ್ನ ಅಂಗಲಾಚುತ್ತಿದ್ದ. ಅವನೋ, "ಸಿಗ್ನಲ್ ಇದ್ಯಪ್ಪಾ, ನಾನೇನ್ ಮಾಡ್ಲಿ ಹೋಗಿ ಆ ಟ್ರಾಫಿಕ್ ಪೋಲೀಸ್ನ ಕೇಳು" ಅಂದು ಸುಮ್ಮಗಾದ. ಇಲ್ಲಿನ ಪರಿಸ್ಥಿತಿ ಹೇಗೆಂದರೆ, ಮುಂದಿನ ಯಾವ ಘಳಿಗೆಯಲ್ಲಿ ಬೇಕಾದರೂ, ಯಾವನೋ ಒಬ್ಬ ತಲೆ ಕೆಟ್ಟವನು ಅಡ್ಡಂಬಡ್ದ ನುಗ್ಗಿ, ಟ್ರಾಫಿಕ್ಕು ಚಿತ್ರಾನ್ನ ಆಗಿಬಿಡಬಹುದು. ಹಾಗೆ ಆಗಿದ್ದನ್ನ ನಾನೇ ಎಷ್ಟೋ ಸಲ ನೋಡಿದ್ದೇನೆ.

ಒಂದು ಪ್ರಯತ್ನ ಮಾಡೋಣ ಅಂತ ಸೀದಾ ಟ್ರಾಫಿಕ್ ಪೋಲಿಸ್ ಹತ್ರ ಹೋದವನೇ
"ಸಾರ್ ನೋಡಿ ಅಲ್ಲಿ,ಒಂದು ಅಂಬುಲೆನ್ಸ್ ಮಧ್ಯ ಇದೆ..ಸಿಲ್ಕ್ ಬೋರ್ಡ್ ಕಡೆ ಹೋಗೋದು, ಆ ಕಡೆ ಸಿಗ್ನಲ್ ಕ್ಲಿಯರ್ ಮಾಡಿ .. ಏನೋ ಅರ್ಜೆಂಟಿರಬೇಕು" ಅಂದೆ, ಒಂದೇ ಉಸಿರಿಗೆ.

ಅವನು ತಣ್ಣಗೆ,
"ದಿನಕ್ಕೆ ಒಂದು ೧೦೦-೨೦೦ ಅಂಬುಲೆನ್ಸ್ ಓಡಾಡ್ತಾವೆ ಇಲ್ಲಿ, ಎಲ್ಲ ಅಂಬುಲೆನ್ಸ್ ಗೂ ನಾನು ಹೋಗೋಕೆ ಬಿಡ್ತಾ ಇದ್ರೆ, ಬೇರೆಯವ್ರು ಬಂದು ವದೀತಾರೆ ಅಷ್ಟೇ, ಸುಮ್ನೇ ಹೋಗಯ್ಯೋ "ಅಂದ.

"ಇಲ್ಲಣ್ಣಾ, ನೋಡಿ ಅಣ್ಣಾ, ಪ್ಲೀಸ್".. ಅಂದೆ ನಾನು, ಆಸೆ ಬಿಡದೆ. "ನೋಡಿ ಸರ್ ಸ್ವಲ್ಪ.. ಆಗತ್ತೆ ನಿಮ್ ಹತ್ರ..."
ಅಲ್ಲಿ ಹಿಂದುಗಡೆ ಅವ್ನು ಒಂದೇ ಸಮನೆ ಮಾಡುತ್ತಿರುವ ಹಾರನ್ ಕೇಳಿಸುತ್ತಿತ್ತು.

"ಇದೊಳ್ಳೇ ಗೋಳಾಯ್ತಲ್ಲಪ್ಪಾ..ತಡಿ" ಅಂದು, ದೊಡ್ಡದಾಗಿ ವಿಸಲ್ ಊದಿ, ಆಗತಾನೇ ಹೋಗಲು ಬಿಟ್ಟಿದ್ದವರನ್ನ ತಡೆದು ನಿಲ್ಲಿಸಿ, ೨೦೧ ಬಸ್ಸಿನ ಡ್ರೈವರನಿಗೆ ಸನ್ನೆ ಮಾಡಿದ - ಮುಂದೆ ಹೋಗೋ ಅಂತ. ಅಂಬುಲೆನ್ಸ್ ಡ್ರೈವರ್ ನಂಗೊಮ್ಮೆ ಕೈ ಮಾಡಿ (ಪ್ರಾಯಶಃ ಅವನು ನನ್ನನ್ನ ನೋಡುತ್ತಿದ್ದ ಅನಿಸುತ್ತದೆ) ವೇಗವಾಗಿ ಸಾಗಿದ.

ನಾನು ಆಫೀಸಿನತ್ತ ಹೆಜ್ಜೆ ಹಾಕಿದೆ. ಇಂತಹ ಸಣ್ಣ ಸಣ್ಣ ಘಟನೆಗಳು ಮನಸ್ಸಿಗೆ ಖುಷಿ ನೀಡುತ್ತವೆ.

ಶುಕ್ರವಾರ, ಜೂನ್ 08, 2007

ಹಲಸು, ಹೊಲಸು ಮತ್ತು ಹಸಿವು.

ಸೂಚನೆ: ( ಸಣ್ಣ ಪುಟ್ಟ ಅಸಹ್ಯಗಳಿಗೂ ರೇಜಿಗೆ ಪಟ್ಟುಕೊಳ್ಳುವವರು ಈ ಬರಹವನ್ನು ಓದಬಾರದಾಗಿ ವಿನಂತಿ)

ಸಿದ್ದಾಪುರದಿಂದ ಶಿರಸಿಗೆ ಹೊರಟಿದ್ದೆ. ಮಧ್ಯಾಹ್ನ ೧೨.೩೦ ಗಂಟೆ. ಉರಿ ಉರಿ ಬಿಸ್ಲು. ಎದುರಿಗೆ "ಸಿರ್ಸಿ ಸಿರ್ಸಿ ಸಿರ್ಸಿ" ಅಂತ ಕಂಡಕ್ಟರೊಬ್ಬ ಕೂಗುತ್ತಿದ್ದ. ನೋಡಿದರೆ ರಾಜಹಿಂಸೆ! ಗೊತಾಗಿಲ್ವಾ? ಅದೇ ರಾಜ ಹಂಸ ಕಣ್ರಿ! ಕೇಯಸ್ಸಾರ್ಟೀಸಿಯವರು ಹಳೆಯ ರಾಜಹಂಸವೊಂದನ್ನ ತೆಗೆದು ಈ ರೂಟಿಗೆ ಬಿಟ್ಟಿದ್ದರು ಅನಿಸುತ್ತದೆ. ವಿಲಾಸೀ ಸೀಟುಗಳೆಡೆಯಲ್ಲಿ, ಅಕ್ಕ ಪಕ್ಕ ಅಲ್ಲಿ ಇಲ್ಲಿ ಎಲ್ಲ ಜನ ತುಂಬಿಕೊಂಡಿದ್ದರು. ಕೂತರೆ ಬರಿಯ ೪೦ ಜನ ಇರಬಹುದಾದ ಆ ಬಸ್ಸಿನೊಳಗೆ ಮಿನಿಮಮ್ ೯೦ ಜನ ಇದ್ದರು. ಇದೆಲ್ಲ ಮಾಮೂಲಿ ಅಂತೀರಾ?, ಅದೂ ಸರೀನೇ ಬಿಡಿ. ನಾನು ಆ ಬಸ್ಸಿಗೆ ಕಡೆಯಯವನಾಗಿ ಹತ್ತಿದೆ, ಮತ್ತದು ನಂಗೆ ಲಾಭವೇ ಆಯಿತು. ಡ್ರೈವರು ಕ್ಯಾಬಿನ್ ಪಕ್ಕ, ಒಂದು ಕಾಲು ಮತ್ತು ಒಂದು ಕೈ ಅರಾಮಾಗೂ ಇನ್ನೊಂದು ಕಾಲು ಮತ್ತು ಕೈಯನ್ನ ಸ್ವಲ್ಪ ಕಷ್ಟ ಪಟ್ಟಾದರೂ ಇಡಬಹುದಾದಂತಹ ಜಾಗವೇ ಸಿಕ್ಕಿತು. ಅದಕ್ಕೂ ಮುಖ್ಯವಾಗಿ ಗಾಳಿ ಬರುತ್ತಿತ್ತು ನಾನು ನಿಂತ ಜಾಗದಲ್ಲಿ.

ಮದುವೆಯ ಸೀಸನ್ನು ಬೇರೆ, ಬಸ್ಸಿನ ತುಂಬ ಬಿಳಿ ಪಂಚೆ, ರೇಷ್ಮೇ ಸೀರೆಗಳೇ ತುಂಬಿದ್ದವು. ಅವರೆಲ್ಲ ಯಾವುಯಾವುದೋ ಮದುವೆಗಳಿಗೆ ಹೊರಟಿದ್ದರೂ ನನ್ನ ತರಹ ಊಟದ ಸಮಯಕ್ಕೆ ಸರಿಯಾಗಿ ಹೊರಟಿದ್ದು ನೋಡಿ ಸಮಾಧಾನವಾಯಿತು. ಬಿಸಿಲಿನ ಸುಟಿಗೆ, ಎಲ್ಲರೂ ಅರ್ಧ ಮಿಂದವರಂತೆ ಕಾಣುತ್ತಿದ್ದರು. ಕೆಂಪು, ಹಳದಿ ರವಿಕೆಗಳೆಲ್ಲ ಅರ್ಧಂಬರ್ಧ ಕಪ್ಪಾಗಿ ಕಾಣುತ್ತಿತ್ತು. ಹಣೆಯ ಮೇಲಿನ ಕುಂಕುಮ ಕರಗಿ, ಅದನ್ನ ಕರ್ಚೀಫಲ್ಲಿ ಸರಿಯಾಗಿ ವರೆಸಿಕೊಳ್ಳಲೂ ಬರದೆ, ಇಡೀ ಮುಖ ತುಂಬ ಕೆಂಪು ಮಾಡಿಕೊಂಡಿದ್ದ ದಪ್ಪ ಹೆಂಗಸೊಬ್ಬಳು ಸಿಡಿ ಮಿಡಿ ಮುಖ ಹೊತ್ತು ನಿಂತಿದ್ದಳು ನನ್ನ ಸ್ವಲ್ಪ ಹಿಂದೆ. ಅವಳಿಗೆ ಅದನ್ನ ಹೇಳ ಬೇಕೆಂದು ಹೊರಟವನು ಬಾಯಿ ಮುಚ್ಚಿ ನಿಂತುಕೊಂಡೆ, ಸುಮ್ನೆ ಯಾಕೆ ರಿಸ್ಕು ಅಂತ.

ಜನ ತುಂಬಿ ತುಳುಕುತ್ತಿದ್ದರೂ ದುರಾಸೆ ಕಂಡಕ್ಟರು "ಸಿರ್ಸಿ ಸಿರ್ಸಿ ಸಿರ್ಸಿ" ಅಂತ ಮೈ ಮೇಲೆ ಬಂದವರ ಹಾಗೆ ಕಿರುಚುತ್ತಿದ್ದ ಹೊರಗಡೆ. ಬಸ್ಸೊಳಗೆ ಇದ್ದವರಿಗೆಲ್ಲ ಅಷ್ಟು ಹೊತ್ತಿಗೇ ತಾಳ್ಮೆ ತಪ್ಪಿದ್ದರಿಂದ ಅವನಿಗೂ, ಡ್ರೈವರನಿಗೂ ಬಾಯಿಗೆ ಬಂದ ಹಾಗೆ ಬೈದರು. ಎಲ್ಲರೂ ಹೆದರುವ ಹಾಗೆ ಬಸ್ಸಿನ ಹೊರಮೈಯನ್ನ ಡಬ ಡಬಾಂತ ಬಡಿದ ಕಂಡಕ್ಟರು ರೈಟ್ ರೈಟ್ ಅಂತಂದು ಒಳಗೆ ತೂರಿಕೊಂಡ. ಎದುರುಗಡೆ ಸೀಟಲ್ಲಿ ಕೂತ ಮಾಣಿಗೆ ಅವನಮ್ಮ ಕುರ್ಕುರೇ ತೆಗೆತೆಗೆದು ಕೊಡುತ್ತಿದ್ದಳು. ನಂಗೆ ಆವಾಗ ನೆನ್ಪಾಯಿತು, ಬೆಳಗ್ಗಿಂದ ಏನೂ ಸರಿಯಾಗಿ ತಿಂದೇ ಇಲ್ಲ ನಾನು! ಲೇಟಾಗ್ತಿದೆ ಅಂತ ಗಡಿಬಿಡಿ ಗಡಿಬಿಡಿ ಲಿ ಹೊರಟು ಬಂದಿದ್ದೆ ಹೊಸನಗರದಿಂದ. ತಗಡು ಹೋಟೇಲೊಂದರ ಮತ್ತೂ ತಗಡು ಕಾಪಿ ಕುಡಿದು , ಒಂದು ವಡೆ ತಿಂದಿದ್ದೆ ಅಷ್ಟೆ.

ಈ ಹಸಿವು ಅನ್ನೋದು ನೆನ್ಪಾಗ್ದೇ ಇದ್ರೆ ಚೆನ್ನಾಗಿತ್ತು. ನೆನಪಾಗಿ ಕೆಲಸ ಕೆಟ್ಟಿತು. ಬಸ್ಸು ಬೇರೆ ಹೊರಟಾಯ್ತು, ಕೆಳಗಿಳಿದು ಏನೂ ಖರೀದಿ ಮಾಡುವ ಹಾಗೂ ಇಲ್ಲ. ಆ ಕುರುಕಲು ತಿನ್ನುವ ಹುಡುಗನ್ನ ನೋಡುತ್ತಿದ್ದರೆ ಮತ್ತೂ ಹಸಿವಾಗುತ್ತದೆ ಅಂದುಕೊಂಡು ಮುಖ ತಿರುವಿಸಿ ,ಎದುರುಗಡೆಯ ರಸ್ತೆಯನ್ನು ನೋಡುತ್ತಾ ನಿಂತುಕೊಂಡೆ.

ಬಸ್ಸು ಸಿದ್ದಾಪುರ ಪೇಟೆ ದಾಟಿ ಮುಂದುವರಿಯಿತು. ನಾನು ಕ್ಯಾಬಿನ್ ಬಾಗಿಲಿಗೆ ಹೇಗೇಗೋ ವರಗಿಕೊಂಡು ನಿಂತು ಬ್ಯಾಗನ್ನ ಅಲ್ಲೇ ಮೇಲುಗಡೆಯೆಲ್ಲೋ ತೂರಿಸಿ ನಿಟ್ಟುಸಿರು ಬಿಟ್ಟೆ. ಇನ್ನು ಇದೇ ಭಂಗಿಯಲ್ಲಿ ಹೆಚ್ಚೆಂದರೆ ಮುಕ್ಕಾಲು ತಾಸು ನಿಂತರಾಯಿತು, ಸಿರಸಿ ಬರುತ್ತದೆ ಅಂದುಕೊಂಡು ಹಾಯ್ ಎನಿಸಿತು. ಹಸಿವನ್ನ ನಿಧಾನವಾಗಿ ಮರೆಸುವ ಪ್ರಯತ್ನ ಮಾಡುತ್ತಿತ್ತು ಮೆದುಳು. ೪-೫ ಕಿಲೋಮೀಟರು ಬಂದಿರಬಹುದು, "ಘಮ್" ಅಂತ ಹಲಸಿನ ಹಣ್ಣಿನ ಪರಿಮಳ ಬಂದು ರಾಚಿತು ಮೂಗಿಗೆ! ಮೊದಲೇ ಕೆಟ್ಟ ಹಸಿವು, ಹಸಿದ ಹೊತ್ತಲ್ಲಿ ಹಲಸಿನ ಘಮ ಬಂದರೆ ಹೇಗಾಗಬೇಡ? ಸಟಕ್ಕನೆ ಹಿಂತಿರುಗಿ ನೋಡಿದರೆ....

ಎರಡನೇ ಸೀಟು, ಬಸ್ಸಿನ ಬಲ ಭಾಗದ್ದು. ಮದುವೆಗೆ ಹೊರಟ ಇಬ್ಬರು ಹೆಂಗಸರು ದಿವ್ಯವಾಗಿ ಅಲಂಕರಿಸಿಕೊಂಡು ಅಲ್ಲಿ ಪ್ರತಿಷ್ಠಾಪನೆಗೊಂಡಿದ್ದಾರೆ, ಅಲ್ಲೇ ಪಕ್ಕದ ಕಂಬ ಹಿಡಿದುಕೊಂಡು ಸುಮಾರು ೧೫-೧೬ ರ ಹುಡುಗಿಯೊಬ್ಬಳು ನಿಂತಿದ್ದಾಳೆ. ಈ ಹುಡುಗಿಗೆ ಪ್ರಾಯಶ: ಬಸ್ಸು ಹತ್ತೋಕೆ ಅರ್ಧ ಗಂಟೆ ಮೊದಲು ಎಲ್ಲೋ ಬಿಟ್ಟಿಯಾಗಿ ಮತ್ತು ಧಂಡಿಯಾಗಿ ಹಲಸಿನ ಹಣ್ಣು ತಿನ್ನಲು ಸಿಕ್ಕಿದೆ, ಮತ್ತು ಈ ಬಸ್ಸಿನ ಕುಲುಕಾಟದಿಂದಾಗಿ, ತಿಂದ ಅಷ್ಟನ್ನೂ ಕೆಳಗೇ, ಸರಿಯಾಗಿ ತನ್ನ ಕೆಳಗೇ ಕೂತ ಹೆಂಗಸಿನ ತಲೆಯ ಮೇಲೆ ಕಾರಿಕೊಂಡಿದ್ದಾಳೆ ಮತ್ತು, ನನ್ನ ದುರ್ದೈವಕ್ಕೆ ಹೀಗಾದ ಮಾರನೇ ಸೆಕೆಂಡಿಗೇ ಈ ಘನಘೋರ ದೃಶ್ಯ ನೋಡಿದೆ!

ಆ ಹೆಂಗಸಿನ ತಲೆ , ಮುಖ ಎಲ್ಲ ಸಂಪೂರ್ಣ ಹಲಸಿನ ತೊಳೆಗಳಿಂದ ತುಂಬಿ ಹೋಗಿತ್ತು ಪಾಪ! ಅರಸಿನದಲ್ಲಿ ಸ್ನಾನ ಮಾಡಿಸಿದಂತೆ ಎಲ್ಲ ಹಳದಿ ಹಳದಿ ಹಳದಿ. ಆಕೆಗೆ ತನಗೇನಾಯ್ತು ಎನ್ನುವುದು ಅರಿವಿಗೆ ಬರಲು ನಾಲ್ಕೆಂಟು ಸೆಕೆಂಡುಗಳೇ ಬೇಕಾದವು. ಅಲ್ಲಾ, ಅಷ್ಟು ಹೊತ್ತು ಬೇಕು , ಯಾಕೆ ಅಂದರೆ ಇಂತಹ ಅನುಭವಗಳೇನು ದಿನಾ ಆಗುತ್ತವೆಯೇ? ತನಗೇನಾಯ್ತು ಅಂತ ಅವಳಿಗೆ ಗೊತ್ತಾಗಿ ಬಾಯಿ ಬಿಡುವುದಕ್ಕೊ , ಹಲಸಿನ ತೊಳೆಯೊಂದು ಸೀದಾ ಆ ಹೆಂಗಸಿನ ಬಾಯೊಳಗೇ ಹೋಯಿತು! ಅಷ್ಟಾಗಿದ್ದೇ ತಡ, ಅತ್ಯಂತ ಅಸಹ್ಯವಾಗಿ ಮುಖ ಕಿವುಚಿಕೊಂಡು "ವ್ಯಾಕ್" ಅಂದು, ತನ್ನ ಹೊಟ್ಟೆಗೆ ಹೋಗಲು ಯತ್ನಿಸುತ್ತಿದ್ದ ಆ ಹಲಸಿನ ತೊಳೆಯನ್ನು, ಉದರದೊಳಗಿರುವ ಇನ್ನಿತರ ಸಶೇಷ ವಸ್ತುಗಳ ಸಮೇತವಾಗಿ ಹೊರಗಟ್ಟಿದಳು!.

ಇಷ್ಟಾಗುವಾಗ ಬಸ್ಸಿನ ತುಂಬ ಹಲಸಿನ ಪರಿಮಳ "ಪಸರಿಸಿತ್ತು"!. ಎಲ್ಲರೂ "ಏನು, ಏನು ಏನಾಯ್ತು, ಯಾಕಾಯ್ತು"ಅಂತೆಲ್ಲ ಮಾತಾಡಲು ಆರಂಭಿಸಿದರು. ಆ ಎರಡನೇ ಸೀಟು ಅದರ ಅಕ್ಕ - ಪಕ್ಕ ಸಣ್ಣ ವಾಂತಿ ಹಳ್ಳವೇ ನಿರ್ಮಾಣವಾಗಿತ್ತು. ಅಲ್ಲೇ ಹಿಂದೆಲ್ಲೋ ನಿಂತಿದ್ದ ಮುದುಕಿಯೊಬ್ಬಳು ಮುಂದಿದ್ದ ಯಾರನ್ನೋ ಸರಿಸಿ, "ಎಂತ್ ಆಯ್ತ್ ಇಲ್ಲಿ" ಅಂತ ಮೆಲ್ಲಗೆ ಯಾರದೋ ಕೈಯ ಸಂದಿಯಿಂದ ಹಣುಕಿದಳು, ಒಂದು ಕ್ಷಣ ಅಷ್ಟೆ- ಆ ಹಳದಿ ತಲೆ, ಕೆಳಗಿನ ಸಶೇಷ ವಸ್ತುಗಳಿಂದ ನಿರ್ಮಿಸಲ್ಪಟ್ಟು ವಿಕಾರವಾಗಿ ಕಾಣುತ್ತಿದ್ದ ರಾಶಿ , ಎಲ್ಲ ನೋಡಿದವಳೇ "ಸಿವನೇ" ಅಂತೊಂದು ದೊಡ್ಡ ಉದ್ಗಾರ ತೆಗೆದು, ತನ್ನ ಬಾಯನ್ನು ಯಥಾಸಾಧ್ಯ ಅಗಲಿಸಿ ಆ ರಾಶಿಗೇ ಸರಿಯಾಗಿ ಬೀಳುವಂತೆ ಕಕ್ಕಿದಳು- ತನ್ನೊಳಗಿನ ಎಲ್ಲವನ್ನೂ!

೩೦ ಸೆಕೆಂಡುಗಳೊಳಗಾಗಿ ಮೂರು ಮೂರು ವಾಂತಿಗಳು! ಎಲ್ಲರೂ ಎಲ್ಲರನ್ನೂ ಬೈಯುವವರೇ ಈಗ ಬಸ್ಸೊಳಗೆ. ಆದರೆ ಹೆಚ್ಚಿಗೆ ಬೈಗುಳಕ್ಕೆ ತುತ್ತಾದವಳು ಮೊದಲು ವಾಂತಿ ಮಾಡಿದವಳು. "ಗೊತಾಗಲ್ವಾ ವಾಂತಿ ಬರತ್ ಅಂತ, ಏನ್ ಖರ್ಮ ಇದು" "ಮದ್ವೆಗ್ ಹೊರ್ಟಿದ್ದೆ ನಾನು , ಸೀರೆ ಎಲ್ಲ ಗಲೀಜಾಯ್ತು" " ಥೂ, ಏನ್ ಜನನಪಾ , ಸ್ವಲ್ಪಾನೂ ಕಾಮನ್ ಸೆನ್ಸ್ ಇಲ್ಲ" - ಹೀಗೆ ಸೀರೀಸ್ ಆಫ್ ಬೈಗುಳಾಸ್! ವಾಂತಿಗೂ ಕಾಮನ್ ಸೆನ್ಸ್ ಗೂ ಎಲ್ಲಿಯ ಸಂಬಂಧಾನೋ ಗೊತ್ತಾಗಲಿಲ್ಲ ನಂಗೆ. ಪಾಪ, ಆ ರಶ್ಶು ಬಸ್ಸಲ್ಲಿ ಎಷ್ಟೇ ಕಾಮನ್ ಸೆನ್ಸ್ ಇದ್ರೂ, ಜನಗಳನ್ನ ತಳ್ಳಿ ಕಿಟಕಿ ಬಳಿ ಓಡೋಕೆ ತಾಕತ್ತೂ ಬೇಕಲ್ಲವೇ? ಭೀತಿಯಿಂದ ಅಕ್ಕ ಪಕ್ಕ ಇರುವವರ ಮುಖಭಾವ ಗಮನಿಸಲು ಆರಂಭಿಸಿದೆ, ಇನ್ಯಾರಾದರೂ ವಾಂತಿ ಮಾಡಿದರೆ ?! ಯಾರೇ ಸುಮ್ಮನೇ ಬಾಯಿ ಬಿಟ್ಟರೂ ಎಲ್ಲಿ ಒಳಗಿದ್ದದ್ದನ್ನ ಹೊರ ಹಾಕುತ್ತಾರೋ ಅನ್ನೋ ವಾಂತಿಫೋಬಿಯಾ ಶುರುವಾಯಿತು ನಂಗಂತೂ.

ನೀವಿದನ್ನು ಓದಲು ತೆಗೆದುಕೊಂಡಿರುವ ಸಮಯಕ್ಕಿಂತ ಎಷ್ಟೋ ಕಡಿಮೆ ಸಮಯದೊಳಗೆ ಈ "ವಾಂತಿ ಸರಪಣಿ ಕ್ರಿಯೆ" ಜರುಗಿದೆ ಎಂಬುದನ್ನ ನೆನಪಿನಲ್ಲಿಟ್ಟುಕೊಳ್ಳಿ. ಇಂತಹ ಒಂದು ಯಡವಟ್ಟು ಮತ್ತು ಅಸಂಗತವಾಗಿರುವ ಸನ್ನಿವೇಶವನ್ನ ನಾನು ನನ್ನ ಜೀವಮಾನದಲ್ಲೇ ಕಂಡಿರಲಿಲ್ಲ.

ಬಸ್ಸನ್ನ ಮುಂದೆಲ್ಲೋ ನಿಲ್ಲಿಸಿದರು. ಬಿರುಬೇಸಗೆಯಲ್ಲೂ ಯಾವುದೋ ಅಂಗಡಿಯಾತ "ಅರ್ಧ ಕೊಡಪಾನ" ನೀರನ್ನ ಉದಾರವಾಗಿ ದಾನ ಮಾಡಿದ. ಅಷ್ಟರಲ್ಲೇ ಹೇಗೋ ಬಸ್ಸನ್ನ ಕ್ಲೀನು ಮಾಡಲಾಯಿತು. ಮತ್ತು ಎಲ್ಲವನ್ನೂ ಆ ಹುಡುಗಿಯೇ ಮಾಡಬೇಕಾಯಿತು. ಒಂದ ವಾಂತಿಯ ಪರಿಣಾಮವಾಗಿ ಉಳಿದವರದನ್ನೂ ಬಾಚುವ ಕೆಲಸ ಅವಳಿಗೆ. ಹಲಸಿನ ಸ್ನಾನವಾದ ಹೆಂಗಸಂತೂ ಗರ ಬಡಿದವಳ ಹಾಗೆ ಸುಮ್ಮನಾಗಿ ಹೋಗಿದ್ದಳು. ಅವಳಿಗೆ ಅಲ್ಲೇ ಹೊರಗೆ ಸಣ್ಣಗೆ ತಲೆ ಸ್ನಾನ ಮಾಡಿಸಲಾಯಿತು. ಏನೇನೋ ಸಣ್ಣಗೆ ಗೊಣಗುತ್ತಿದ್ದಳು ಅವಳು. ಜೀವಮಾನ ಪೂರ್ತಿ ಹಲಸೆಂಬ ಹೊಲಸನ್ನ ಮುಟ್ಟುವುದಿಲ್ಲ ಎಂಬ ಪ್ರತಿಜ್ಞೆ ಮಾಡಿರುತ್ತಾಳೆ ಆಕೆ, ಅದಂತೂ ಶತಃಸಿದ್ಧ.

ಮತ್ತೆ ಬಸ್ಸು ಹೊರಟಿತು. ವಾಂತಿಯಾದ ಸೀಟಿನ ಮೇಲೆ ಯಾರೂ ಅಸಹ್ಯಪಟ್ಟು ಕೂರದೇ ಇದ್ದಾಗ, ಭೂಪನೊಬ್ಬ ಶಿಸ್ತಾಗಿ ತನ್ನ ಬಳಿಯಿದ್ದ ದಿನ ಪತ್ರಿಕೆಯ ಹಾಳೆಯನ್ನ ಆ ಸೀಟಿನ ಮೇಲೆ ಹಾಸಿ ಆರಾಮಾಗಿ ಕೂತೇ ಬಿಟ್ಟ. ಆಚೀಚೆ ನಿಂತವರೆಲ್ಲ ಮಿಕಿ ಮಿಕಿ ಮುಖ ನೋಡಿಕೊಂಡರು! ಬಸ್ಸೊಳಗೆ ಹಲಸಿನ ಹಣ್ಣಿನ ಪರಿಮಳ ಇನ್ನೂ ಹರಡಿತ್ತು.
ಕೆಟ್ಟ ಹಸಿವಿಂದ ಕಂಗೆಟಿದ್ದ ನನಗೆ ಆ ಪರಿಮಳವನ್ನ ಆಸ್ವಾದಿಸಬೇಕೋ, ಅಸಹ್ಯ ಪಟ್ಟುಕೊಳ್ಳಬೇಕೋ ಗೊತ್ತಾಗದೇ ತೆಪ್ಪಗೆ ನಿಂತುಕೊಂಡೆ.

ಪೂರಕ ಓದಿಗೆ :) - ಉದಯವಾಣಿ ( ಓದೋ ಮುನ್ನ ಎಚ್ಚರಿಕೆ ಇರಲಿ)

ಶನಿವಾರ, ಜೂನ್ 02, 2007

ಸಂಜೆಗೊಂದು ಕವನ..

ಬಾನಂಚಿನಲಿ ಕೆಂಪು
ಸೂರ್ಯ ಮುಳುಗುವ ಸಮಯ,
ಮೋಡಗಳ ತುದಿಯಲ್ಲಿ ಹೊನ್ನ ಕಲಶ.
ಬಾಗಿಲಲಿ ಅವಳ ನಗು
ಗುಡುಗು ಸಿಡಿಲಿನ ಮಂತ್ರಘೋಷ.

ಸಂಧ್ಯೆಯೊಡಲಿನ ಕೆಂಪು, ಸೂರ್ಯನಾಗಲೆ ತಂಪು
ಸೇರುತಿರುವನೆ ಅವನು ಅವಳ ಒಡಲೊಳಗೆ?
ಮನತೆರೆದು, ಕೈ ಚಾಚಿ, ಬರಮಾಡಿ
ಬರ ಸೆಳೆದು
ನಗುತಿಹುದು ನೋಡಲ್ಲಿ ಸಂಧ್ಯೆ ಮೊಗವು.

ದಿನದ ಕೆಲಸವ ಮುಗಿಸಿ, ಬಳಲಿ
ಸಾಗುತಲಿರಲು, ಮಂದಹಾಸವ ಬೀರಿ
ಕರೆಯುವಳು ಅವಳೆಡೆಗೆ.
ಅವನ ಪುಣ್ಯವೆ ಪುಣ್ಯ!
ಬಳಲಿಕೆಯ ಅರಿವಿಲ್ಲ,
ಕರಗುವನು ಅವಳಲ್ಲೆ,
ಕದವ ಮುಚ್ಚಿ.

{ನನ್ನ ಗೆಳತಿ ಅಂಜಲಿ ಬರೆದಿರೋ ಕವನ ಇದು. ಅಪ್ಪಣೆಯಿಲ್ಲದಿದ್ದರೂ ಇಲ್ಲಿ ಪ್ರಕಟಿಸಿದ್ದೇನೆ. ಅವಳು ಬೈದುಕೊಂಡರೂ ಬೇಜಾರಿಲ್ಲ. }