ಸೋಮವಾರ, ನವೆಂಬರ್ 17, 2014

ಭೋಜನ ಪರ್ವ


 ಹೊಲಿದ ಬಾಯಿಯ ತೆರೆಸುವುದು
ಕಷ್ಟ, ಯಾವ ಬಾಗಿಲು ತೆರೆಯೇ
ಸೇಸಮ್ಮಗಳೂ ಮಾಡುವುದಿಲ್ಲ ಚಮತ್ಕಾರ
ಚಂದಮಾಮ ಗುಬ್ಬಿ ಚಿಟ್ಟೆ ನವಿಲುಗಳಿಗೂ
ಇಲ್ಲ ಪುರಸ್ಕಾರ
ಬೇಡವೆಂದ ಮೇಲೆ ಬೇಡ ಅಷ್ಟೇ.

ಬಿಗಿದ ಬಾಯಿಯೊಳಗಿಂದ
ಕೆಳಗಿಳಿದಿಲ್ಲ ಹಳೆಯ ತುತ್ತು
ಕಥೆಗಳೆಲ್ಲ ಖರ್ಚಾಗಿ
ಓಲೈಸುವಿಕೆ ಮುಗಿದು
ಧ್ವನಿ ಏರಿದರೂ
ಕಣ್ಣು ಕೆಂಪಾದರೂ
ಜಗ್ಗದ ದಿಗ್ಗಜೆ.

ದ್ರಾವಿಡ ಪ್ರಾಣಾಯಾಮಗಳು
ಮುಗಿದು ಮಗಳು
ಇನ್ನು ಉಣ್ಣುವುದಿಲ್ಲ
ಎಂದು ಖಾತರಿಯಾದ ಮೇಲೆ
ಬಟ್ಟಲು ನೋಡಿಕೊಂಡು ಸುಳ್ಳು
ಸಮಾಧಾನ, ಅಮ್ಮನಿಗೆ
ನಿನ್ನೆಗಿಂತ ಕೊಂಚೆ ಹೆಚ್ಚೇ ಉಂಡಿದ್ದಾಳೆ
ಸಂಜೆ ಹೊಟ್ಟೆಗೆ ಬೇರೇನೋ ಹೋಗಿದೆ

ಕೊನೆಗೊಮ್ಮೆ ಏಳುವ ಮುನ್ನ
ಇನ್ನೊಂದು ವಿಫಲ ಪ್ರಯತ್ನ
ಯಾವ ಪಾಸ್ ವರ್ಡು ಹಾಕಿದರೂ
ಓಪನಾಗದ ಲಾಕು,
ಎಲ್ಲ ಅನುನಯದ ಕೀಗಳನೂ ಬಿಸಾಕು
ಸಿಂಕಿನಲಿ ಕುಕ್ಕಿದ ತಟ್ಟೆಯ ಸದ್ದು
ಕೇಳಿದೊಡನೆಯ, ಬಾಯ್ದೆರೆದು
ನಕ್ಕು ತಟ್ಟಿದ ಚಪ್ಪಾಳೆಗೆ
ಬ್ರಹ್ಮಾಂಡ ದರ್ಶನ.


ಬುಧವಾರ, ನವೆಂಬರ್ 05, 2014

ಎಮ್ಮ ಮನೆಯಂಗಳದಿ..


ಒಂದು ದಿನ ಸಂಜೆಯ ಹೊತ್ತಿಗೆ ಗಾಂಧಿಬಜಾರಿನ ಗಿಜಿಗುಡುವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನನಗೆ ಅಚಾನಕ್ಕಾಗಿ ಆ ಮನೆ ಕಣ್ಣಿಗೆ ಬಿತ್ತು. ಥಳಥಳ ಹೊಳೆಯುವ ಬೋರ್ಡುಗಳು, ಬಗೆ ಬಗೆಯ ಬೆಳಕುಗಳ ಬೆರಗಲ್ಲಿ ಅದ್ದಿ ತೆಗೆದ ರಸ್ತೆ ಕಟ್ಟಡಗಳು ಮತ್ತು ಮನುಷ್ಯರು.. ದೊಡ್ಡದನಿಯಲ್ಲಿ ಕರೆಯುವ ರಸ್ತೆಯಂಚಿನ ವ್ಯಾಪಾರಿಗಳು, ಫುಟ್ ಪಾತಿನಲ್ಲೇ ಮದುಮಗಳಿಗೆ ಮೆಹಂದಿ ಹಚ್ಚುತ್ತಿರುವ ಪ್ರಚಂಡ ಕಲಾಕಾರರು, ಬಣ್ಣಬಣ್ಣದ ಬಲೂನುಗಳನ್ನು ಎಲ್ಲರ ನೆತ್ತಿಯ ಮೇಲೆತ್ತಿ ಸಾಗುತ್ತಿರುವ ವ್ಯಾಪಾರಿ.. ಗಾಜಿನ ಹಿಂದೆ ಹೊಸ ಬಟ್ಟೆ ತೊಟ್ಟರೂ ಸುಮ್ಮನೆ ನಿಂತಿರುವ ಗೊಂಬೆಗಳು, ಇವನ್ನೆಲ್ಲ ನೋಡುತ್ತ ಹೋಗುತ್ತಿದ್ದವನಿಗೆ ಆ ಮನೆ ಕಾಣಿಸಿತು.  ಸುತ್ತಲಿನ ಚಿತ್ರಣವನ್ನು ಅಣಕಿಸಲೋ ಎಂಬಂತೆ ಯಾವನೋ ಮಾಯಗಾರನು ಮಲೆನಾಡಿನ ಹಳ್ಳಿಯೊಂದರಿಂದ ಕತ್ತರಿಸಿ ತಂದಿಟ್ಟಂತೆ ಆ ಮನೆ,  ಅಲ್ಲಿ- ಆ ಗಾಂಧಿಬಜಾರಿನ ಮುಖ್ಯ ರಸ್ತೆಯ ಗದ್ದಲದೊಳಗೆ ಸದ್ದಿಲ್ಲದೇ ಇತ್ತು. ಮನೆಯ ಮುಂದೊಂದು ಅಂಗಳ. ಅಲ್ಲೊಂದಿಷ್ಟು ಹೂ ಗಿಡಗಳು.. ಅಂಗಳದ ಹುಲ್ಲಿನ ಮೇಲೆ ಕೂತು ಹರಟೆ ಹೊಡೆಯುತ್ತಿದ್ದ ಅಮ್ಮ ಮಗಳು. ಸ್ಕ್ವೇರ್ ಫೀಟುಗಳಲ್ಲಿ ಭೂಮಿಯನ್ನು ಬಂಧಿಸುವ ಈ ಕಾಲದಲ್ಲಿ ಅಂಗಳವೆಂಬ ಅವಕಾಶ ಅಂಥ ಕಡೆ ಕಂಡದ್ದು ಅಚ್ಚರಿ ಮೂಡಿಸಿತ್ತು. ಬೆಂಗಳೂರಿನ ಕಿಷ್ಕಿಂಧೆಯಂತಹ ಇರುಕಿನಲ್ಲಿ ಇದೊಂದು ಬೇರೆಯೇ ಪ್ರಪಂಚದಂತೆ ಕಾಣಿಸಿತು!
ಅಂಗಳ ಅನ್ನುವ ಪುಟ್ಟ ಜಾಗ ಅದೆಂಥಹ ವೈವಿಧ್ಯಮಯ ವಿಷಯಗಳ ಆಶ್ರಯದಾಣ. ಮನೆಗೂ ಹೊರ ಪ್ರಪಂಚಕ್ಕೂ ಇರುವ ವಿಚಿತ್ರ ಕೊಂಡಿ ಈ ಅಂಗಳ. ಮನೆಯೆಂಬ ಆಶ್ರಯದಿಂದ ಜಗತ್ತೆಂಬ ಜಾಲಕ್ಕೆ ಕಾಲಿಡಬೇಕೆಂದರೆ ಮೊದಲು  ಮೀರಬೇಕಾದ್ದು ಅಂಗಳವನ್ನೇ. ಮನೆ ಗೆದ್ದು ಮಾರು ಗೆಲ್ಲಬೇಕೆಂದು ಹೊರಡುವವನಿಗೆ ಸಿಗುವ ಆರಂಭ ಅಂಗಳದಲ್ಲೇ. ಅಂಗಳವೆ ಡೊಂಕಾದರೆ, ಕುಣಿತ ಬಾರದು ಎಂದರ್ಥ, ಅಷ್ಟೇ, ಒಳಗೆ ಕಾಲಿಡುವವನಿಗೆ ಎಲ್ಲ ಕೊಳೆಯನ್ನು ಕೊಡವಿ ಸಾಗಲು, ಹೊರಗೆ ನಡೆಯುವವನಿಗೆ ಎಲ್ಲ ಸರಿಯಾಗಿದೆಯೇ ಎಂದು ನೋಡಿಕೊಳ್ಳಲು ಅಂಗಳವೇ ಜಾಗ. ಮೊದಲು ಕತ್ತಲಾಗುವುದು ಮನೆಯೊಳಕ್ಕಾದರೆ, ಮೊದಲು ಬೆಳಕಾಗುವುದು ಅಂಗಳಕ್ಕೆ! ಹುಟ್ಟಿನ ಸಂಭ್ರಮಕ್ಕೆ ಒಳಮನೆ ಸಾಕ್ಷಿಯಾದರೆ, ಸಾವಿನ ಸೂತಕಕ್ಕೆ ಅಂಗಳವೇ ಆಶ್ರಯ. ಒಳಗೆ ಯಾರು ಹೇಗೋ, ಆದರೆ ಬಯಲಂಥ ಅಂಗಳಕ್ಕೆ ಎಲ್ಲರೂ ಸಮಾನರೇ. ಆಳೂ ಅರಸನೂ ಜೊತೆಗೆ ನಿಂತು ಮಾತನಾಡಲು ಅಂಗಳದಲ್ಲಿ ಮಾತ್ರ ಸಾಧ್ಯ. ಮನೆಯೇ ಮೊದಲ ಪಾಠಶಾಲೆಯಾದರೆ, ಅಂಗಳವೇ ಮೊದಲ ಮೈದಾನ.ಮಲೆನಾಡ ಮನೆಗಳ ರಚನೆ ಗಮನಿಸಿದರೆ, ಮೇಲೆ ಮನೆಯೆಂಬ ಸ್ವರ್ಗ, ಮಧ್ಯೆ ಅಂಗಳವೆಂಬ ಮರ್ತ್ಯ, ಕೆಳಗೆ ತೋಟವೆಂಬ ಪಾತಾಳ!
ಬೇಸಗೆಯ ನನ್ನ ಅಜ್ಜನ ಮನೆಯ ಸಕಲ ಆಟಗಳಿಗೂ ಅಂಗಳವೇ ಹೆಡ್ಡಾಫೀಸಾಗಿತ್ತು. ಕಣ್ಣಾ ಮುಚ್ಚಾಲೆಯಿಂದ ತೊಡಗಿ, ಕಂಬಾಟದವರೆಗೂ ಅಂಗಳವೇ ನಮ್ಮ ಆಡುಂಬೊಲ! ನಮ್ಮ ಕೈಯ ನುಣುಪೆಲ್ಲ ಆ ಐಸ್ ಪೈಸ್ ಆಡುವ ಕಂಬಗಳಿಗೆ ಮೆತ್ತಿಕೊಂಡು, ಕಂಬಗಳ ಒರಟೆಲ್ಲ ನಮ್ಮ ಕೈಗಂಟಿಕೊಳ್ಳುವಷ್ಟು ಅಲ್ಲೇ ಆಟವಾಡುತ್ತಿದ್ದೆವು. ಒಂದಾಟ ಮುಗಿದ ಮೇಲೆ ಇನ್ನೊಂದು. ಕೂತು ಆಡುವ ಆಟ ಮುಗಿದರೆ, ನಿಂತಾಟ, ಮತ್ತೆ ಕುಣಿದಾಟ. ಚಪ್ಪರದೇಣಿಯೇ ಸಿಂಹಾಸನ, ಸಗಣಿ ಸಾರಿಸಿದ ನೆಲವೇ ವೇದಿಕೆ. ಅಡಿಕೆಯ ದಬ್ಬೆಯೇ ಶಿವಧನುಸ್ಸು, ವಜ್ರಾಯುಧ, ಟಿಪ್ಪೂಸುಲಾನನ ಕತ್ತಿ! ನಮ್ಮ  ಕುಣಿತಕ್ಕೆ ಕಂಗಾಲಾಗುವ ಅಜ್ಜಿ ಕಷ್ಟಪಟ್ಟು ಸಗಣಿ ಸಾರಿಸಿದ ನೆಲವೆಲ್ಲ ಕಿತ್ತು ಹೋಯಿತು ಎಂದು ಬೈದರೆ ನಮಗೆ ಪರಮಾನಂದ.ಏಕೆಂದರೆ ಮಾರನೇ ದಿನದ ಸಗಣಿ ಸಾರಿಸುವ ಕೆಲಸ ಎಲ್ಲ ಆಟಗಳಿಗೂ ಮಿಗಿಲು. ಕೊಟ್ಟಿಗೆಯಿಂದ ಸಗಣಿ ಬಾಚಿ ತಂದು, ಅದನ್ನ ಬಕೇಟಲ್ಲಿ ಕರಡಿ.. ಅದಕ್ಕೆ ಹಳೆಯ ಬ್ಯಾಟರಿ ಸೆಲ್ಲು ಗುದ್ದಿ ಒಳಗಿನ ಪುಡಿ ತುಂಬಿ, ಅಂಗಳದ ತುಂಬ ಸಗಣಿ ನೀರು ಚೆಲ್ಲಿ ಗುಡಿಸುವ ಮಜವೇ ಬೇರೆ. ಇಷ್ಟೆಲ್ಲ ಮಾಡಿದ ಮೇಲೆ ಸಗಣಿ ಒಣಗುವ ಪುರುಸೊತ್ತೂ ಕೊಡದೇ ಇನ್ನೊಂದೇನೋ ಮಹಾಯುದ್ಧವನ್ನು ಅಲ್ಲಿಯೇ ಹಮ್ಮಿಕೊಂಡೂ ಆಗುತ್ತಿತ್ತು.
ಮೇ ತಿಂಗಳು ಬಂತೆಂದರೆ ಅಂಗಳಕ್ಕೆ ಭರ್ಜರಿ ಕೆಲಸ. ಅಂಗಳದ ಕುರುಚಲು ಕಳೆಯನ್ನೆಲ್ಲ ಕೆತ್ತಿ, ನೀಟಾಗಿ ಶೇವ್ ಮಾಡಿದ ಮುಖದಂತೆ ಫಳಫಳಿಸುವಂತೆ ಮಾಡಿದ ಮೇಲೆ ಚಾಪೆಗಳೆಲ್ಲ ಹೊರ ಬರುತ್ತವೆ. ಕರಿದು ತಿನ್ನುವ ಹುರಿದು ಮುಕ್ಕುವ ಸಕಲ ವಸ್ತುಗಳನ್ನೂ ಸಿದ್ಧಪಡಿಸುವ ಕಾಲ ತಾನೇ ಅದು? ಹಪ್ಪಳ ಸಂಡಿಗೆಗಳನ್ನು ಮಾಡುವವರ ಪಾಲಿನ ಅಮೋಘ ಮಿತ್ರ ಅಂಗಳ. ನಮ್ಮ ದೇಶದ ಅಂಗಳಗಳಲ್ಲಿ ಅದೆಷ್ಟು ಕೋಟಿ ಕೋಟಿ ಹಪ್ಪಳಗಳು ಬಿಸಿಲಿಗೆ ತಮ್ಮನ್ನು ಸುಟ್ಟುಕೊಂಡಿವೆಯೋ ಏನೋ! ನನ್ನಪ್ಪ ಪ್ರತಿ ವರ್ಷವೂ ಕರ್ತವ್ಯವೆಂಬಂತೆ ಹಲಸಿನ ಕಾಯಿ ಕೊಯ್ಯುವುದು,ಆಮೇಲೆ ನಾವು ಅಣ್ಣತಂಗಿ ಅಪ್ಪ ಸೇರಿ ಆ ಹಲಸಿನ ಕಾಯಿಯ ಮೈ ಹಿಸಿದು ಅಂಗಳದಲ್ಲೇ ಕೆತ್ತಿ ಸೊಳೆಗಳನ್ನ ಬಿಡಿಸುವುದು, ಅಮ್ಮ ಉಳಿದ ಸಕಲ ಸಂಸ್ಕಾರಗಳನ್ನು ನೆರವೇರಿಸಿ ಹಪ್ಪಳ ಮಾಡುವುದು ಹಲ ಕಾಲ ನಡೆದು ಬಂದ ಸಂಪ್ರದಾಯ. ಬಿಸಿಲಿಗೆ ನಾಯಿ ಕಾಗೆಗಳನ್ನೋಡಿಸುವ ನೆಪದಲ್ಲಿ, ಅಲ್ಲೇ ಕೂತು ಹಸಿ ಹಪ್ಪಳ ತಿನ್ನುವ ರುಚಿಯನ್ನು ಇಲ್ಲಿ ವರ್ಣಿಸಲು ಯಾವ ಪದಗಳೂ ಇಲ್ಲ. ಅಂಗಳ ದೊಡ್ಡದಾದಷ್ಟೂ ಅಕ್ಕಪಕ್ಕದವರ ಕಣ್ಣು ಬೀಳುವುದೂ ಜಾಸ್ತಿ. ಏಕಕಾಲದಲ್ಲಿ ಹೆಚ್ಚು ಹಪ್ಪಳಗಳನ್ನ ಒಣಗಿಸಿಕೊಳ್ಳಬಹುದೆಂಬ ಸಾಧನೆಯೇನು ಕಡಿಮೆಯೇ?
ಮಳೆಗಾಲದ ಮೋಡಗಳು ದಟ್ಟೈಸಿಕೊಳ್ಳುವ ಮೊದಲು ಎಲ್ಲವನ್ನೂ ಕಳಚಿಕೊಂಡು ಆಗಸಕ್ಕೆ ನೇರ ಮುಖ ಮಾಡಿಕೊಳ್ಳಬೇಕಾದ್ದು ಅಂಗಳದ ಕರ್ಮ. ಮಲೆನಾಡಿನಲ್ಲಾದರೆ ಅಡಿಕೆಯ ಸೋಗೆಗಳೂ, ಕರಾವಳಿಯಲ್ಲಿ ತೆಂಗಿನ ಮಡಲುಗಳೂ ಮತ್ತೆ ಕೊಟ್ಟಿಗೆಯಟ್ಟ ಸೇರಿದರೆ, ಬತ್ತಲು ಕಂಬಗಳು ಮಾತ್ರ ದೀನ ದಿಗಂಬರರಂತೆ ಮಳೆ ಹೊಡೆತಕ್ಕೆ ಸಿದ್ಧವಾಗಿ ನಿಲ್ಲುತ್ತವೆ. ಅಡಿಕೆ ಮರವನ್ನು ಸೀಳಿ ಮಾಡಿದ ಟೆಂಪರರಿ ಕಾಲುಹಾದಿ ದಣಪೆಯಿಂದ ಮನೆಯವರೆಗೆ. ಹೊರಲೋಕದಿಂದ ಒಳನಾಕಕ್ಕೆ.ಮಳೆ ನೀರು ಹಂಚಿಂದ ಬಿದ್ದು ನೆಲ ಹಾಳಾಗಬಾರದೆಂದು ಕೆಳಗೆ ಮುಚ್ಚಿಕೊಂಡಿರುವ ಸೊಪ್ಪು,ಸೋಗೆಗಳು. ಅದೇ ಹೊತ್ತಿಗೆ, ನೆಲದಾಳದಲ್ಲಿ ಎಲ್ಲಿರುತ್ತವೋ ಏನೋ.. ಸಾವಿರ ಸಾವಿರ ಸಂಖ್ಯೆಯಲ್ಲಿ ಅಂಗಳದ ಆಳದಿಂದ ಮೇಲೆದ್ದು ಬರುವ ಹಾತೆಗಳು ತಮ್ಮ ಆಗಮನದ ಜೊತೆಗೆ, ಮಳೆಯ ಆಗಮನವನ್ನೂ ಸಾರುತ್ತವೆ. ಅಂಗಳವನ್ನೆಲ್ಲ ಮುಚ್ಚುವಂತೆ ಬಿದ್ದಿರುವ ಆ ಹಾತೆಗಳ ರೆಕ್ಕೆಗಳು ಅಂದು ಸಂಜೆಯೋ, ಮಾರನೇ ದಿನ ಬೆಳಗ್ಗೆಯೋ ಬರುವ ಮಳೆಗೇ ಕೊಚ್ಚಿಕೊಂಡು ಹೋಗಬೇಕು! ಆ ಹೊತ್ತಿಗೆ ಹಿತ್ತಲಿನ ಬಚ್ಚಲ ಮನೆಯ ಸುತ್ತ ಕೂತು ಮಳೆ ಸದ್ದು ಕೇಳುತ್ತ ಹಲಸಿನ ಬೀಜವನ್ನೋ, ಗೇರು ಬೀಜವನ್ನೋ ಸುಟ್ಟುಕೊಂಡು ತಿನ್ನುತ್ತ ಕುಳಿತಿದ್ದರೆ, ಅಂಗಳ ಅನಾಥ.
ಆದರೆ ಇದೇ ಮಳೆಗಾಲದಲ್ಲಿಯೇ ಅಂಗಳದಲ್ಲಿ ಅಚ್ಚರಿಗಳೂ ಮೂಡುತ್ತವೆ. ಕಳೆದ ಮಳೆಗಾಲದಲ್ಲಿ ಹೂವಾಗಿ ಮರೆತು ಹೋಗಿದ್ದ ನಾಗದಾಳಿ ಗಿಡ, ಧುತ್ತೆಂದು ಅಲ್ಲೇ ಮೂಲೆಯಲ್ಲಿ ಮತ್ತೆ ಪ್ರತ್ಯಕ್ಷವಾಗಿ ಮಳೆಗೆ ಮುಖವೊಡ್ಡುತ್ತದೆ. ಇನ್ಯಾವುದೋ ಡೇರೇ ಹೂವಿನ ಗಿಡ ಗಡ್ಡೆಯಿಂದ ಮೂತಿ ಹೊರ ತೂರಿಸಿ ತಾನೂ ಇದ್ದೇನೆ ಎನ್ನುತ್ತದೆ. ಹೆಸರಲ್ಲಿದ ಹಳದಿ ಬಿಳಿ ಪುಟಾಣಿ ಹೂಗಳೂ ಜತೆ ಸೇರುತ್ತವೆ. ಬಣ್ಣ ಬಣ್ಣದ ಗೌರೀ ಹೂಗಳ ಗಿಡ, ಯಾವುದೋ ಹಕ್ಕಿಯುಪಕಾರದಿಂದ ಹುಟ್ಟಿದ ಟೊಮೇಟೋ ಗಿಡ, ಭತ್ತದ ಸಸಿ, ಎಲ್ಲ ಸಹಬಾಳ್ವೆ ಆರಂಭಿಸುತ್ತವೆ. ಅಂಗಳದಂಚಿನ ದಾಸವಾಳ ಗಾಳಿಗೆ ಇತ್ತಲೇ ಬಗ್ಗಿ ನಾನೂ ಇದ್ದೇನೆ ಎನ್ನುತ್ತದೆ. ಮನೆಯ ದಾರಿಯ ಅಡಿಕೆ ದಬ್ಬೆಯು ಶತಮಾನಗಳಿಂದ ಅಲ್ಲೇ ಇದ್ದೆ ಎನ್ನುವಂತೆ ಅಂಗಳಕ್ಕೆ ಒಗ್ಗಿಕೊಂಡೂ, ತಾನೂ ಅದೇ ಬಣ್ಣಕ್ಕೆ ತಿರುಗಿ, ಜಾರಬಾರದೆಂಬ ಉದ್ದೇಶಕ್ಕೆ ದಬ್ಬೆ ದಾರಿ ಮಾಡಿದ್ದಾದರೂ,ಅದೇ ನಮ್ಮನ್ನು ಜಾರಿಸಿ ಗೊಂದಲಕ್ಕೀಡುಮಾಡುತ್ತದೆ. ಕಂಬಳಿಕೊಪ್ಪೆಯ ಕೆಲಸದಾಳು ದಣಪೆಯನ್ನು ಸರಿಸುವಾಗಲೇ ಹುಷಾರು ಮಾರಾಯಾ ಎಂಬ ಬೊಬ್ಬೆ ಮನೆಯೊಳಗಿಂದ ಮಳೆಸೀಳಿಕೊಂಡು ಬರುತ್ತದೆ.
ಕರಾವಳಿಯ ಮಳೆಗಾಲದಲ್ಲಿ ಮನೆ ಬಾಗಿಲಿಗೆ ಬರುವ ಆಟಿ ಕಳಂಜವೆಂಬ ಜನಪದ ನೃತ್ಯದ ಸೊಗಸೂ, ಮಳೆಯ ಸದ್ದನ್ನೂ ಮೀರಿಸುವ ನೇಜಿ ನೆಡುವ ಹೆಂಗಸರ ಚಹಾದ ಜೊತೆಗಿನ ಕಿಲಕಿಲವು ನಡೆಯುವುದು ಅಂಗಳದಲ್ಲೇ. ಪತ್ರೊಡೆಗಳಾಗಿ ನಮ್ಮನ್ನ ಜಿಹ್ವಾಚಾಪಲ್ಯವನ್ನು ತೀರಿಸುವ ಕೆಸುವಿನೆಲೆಗಳ ಜನನವೂ ಇಲ್ಲಿಯೇ. ಬಣ್ಣಬಣ್ಣದ ಅಣಬೆಗಳೂ, ದಾರಿತಪ್ಪಿ ಬರುವ ದೊಡ್ಡ ಕಪ್ಪೆಗಳೂ ಅಂಗಳವನ್ನು ಅಲಂಕರಿಸುತ್ತವೆ.
ಇನ್ನು, ಮುತ್ತೈದೆಯ ಹಣೆಗೆ ತಿಲಕ ಇಟ್ಟಂತೆ, ಅಂಗಳಕ್ಕೆ ತುಳಸೀಕಟ್ಟೆ. ರಾತ್ರಿ ಆ ಕಟ್ಟೆಯಲ್ಲಿ ಮಿನುಗುವ ಪುಟ್ಟ ದೀಪವು ಅಂಗಳದ ನಕ್ಷತ್ರ! ಮಳೆಗಾಲದಲ್ಲಿ ತುಳಸಿಯ ದೀಪಕ್ಕೆ ಹೊಸ್ತಿಲೇ ಆಸರೆ. ಮಳೆ ಕಳೆದ ಮೇಲೆ ಬರುವ ಹಬ್ಬಗಳ ಜೊತೆಗೆ ಮತ್ತೆ ಹಣತೆಗೆ ತುಳಸಿಕಟ್ಟೆಯ ಸಖ್ಯ ಮರಳಿ ದೊರಕುತ್ತದೆ. ದೀಪಾವಳಿ ತುಳಸೀ ಪೂಜೆ, ಉತ್ಥಾನ ದ್ವಾದಶಿಯ ತುಳಸೀ ಮದುವೆಗೆ ಅಂಗಳದ್ದೇ ಪಾರುಪತ್ಯ.
ಮಲೆನಾಡಿನಲ್ಲಿ ಬಹಳ ಮದುವೆಗಳ ಮಂಟಪಗಳಿಗೆ ಅಂಗಳವೇ ಆಶ್ರಯದಾತ. ಮನೆಯೆದುರಿನ ಅಂಗಳಕ್ಕೆ ಖಡಕ್ಕು ಸಗಣಿಸಾರಿಸಿ, ಮಂಟಪ ಎಬ್ಬಿಸಿ ಚಪ್ಪರ ಹಾಕಿದರೆ, ಮದುವೆ ಗೌಜಿ! ಅಂಗಳ ದೊಡ್ಡಕ್ಕಿದ್ದಷ್ಟೂ ಖರ್ಚು ಜಾಸ್ತಿ ಮಾರಾಯಾ ಎನ್ನುವುದು ಇಲ್ಲಿನ ಖಾಯಂ ಮಾತು. ಮಳೆಗಾಲದ ಬತ್ತಲು ಕಂಬಗಳ ಮಾನವನ್ನು ಮಾವಿನೆಲೆಯು ಮುಚ್ಚುತ್ತದೆ, ಅಲ್ಲದೇ ಹೋದರೆ ಬಣ್ಣ ಬಣ್ಣದ ಕಾಗದಗಳ ಅಲಂಕಾರವಾದರೂ. ಹೋದ ಸೀಸನ್ನಿನಲ್ಲಿ ಅಡಕೆ ಒಣಗಿಸಿದ ತಟ್ಟಿಗಳೇ ಅಂಗಳದಂಚಿನ ತಾತ್ಕಾಲಿಕ ಗೋಡೆಗಳು. ಹೆಂಗಸರ ಕಪಾಟಿನ ಹಳೆಯ ಸೀರೆಗಳೇ ಚಪ್ಪರದ ತೂತನ್ನ ಮುಚ್ಚುವ ವಸ್ತ್ರಗಳು. ಊರಿನ ಮಂದಿಯೆಲ್ಲ ಕೂಡಿ ಓಡಾಡಿ ಕೆಲಸ ಮಾಡಿದರೆ ಎರಡು ದಿನದೊಳಗೆ ಕಂಬಳಿ ಹುಳ ಚಿಟ್ಟೆಯಾದ ಹಾಗೇ ಲೆಕ್ಕ! ಮನೆಯವರಿಗೇ ಅಂಗಳದ ಗುರುತು ಸಿಕ್ಕಲಾರದು.
ಮದುವೆಯ ಸಮಸ್ತ ತಯಾರಿಗಳಿಗೂ ಅಂಗಳವೇ ಗತಿ. ಪಕ್ಕದ ಮನೆ ಅಂಗಳದಲ್ಲಿ ಬಾಳೆ ಎಲೆಗಳನ್ನ ಕ್ಲೀನು ಮಾಡಿ, ತರಕಾರಿ ಕೊಚ್ಚಿದರೆ, ಮತ್ತೊಂದು ಮನೆಯಂಗಳದಲ್ಲಿ ಊಟದ ತಯಾರಿ. ಇನ್ಯಾರದೋ ಹಿತ್ತಲಲ್ಲಿ ಅಡುಗೆ. ಊರೊಟ್ಟಿನ ಕಂಬಳಿ ಟರ್ಪಾಲುಗಳೆಲ್ಲ ಮದುವೆ ಮಂಟಪವಿರುವ ಅಂಗಳದಲ್ಲಿದ್ದೇ ಸಿದ್ಧ. ಹೆಚ್ಚಾಗಿ ಉಳಿದವು ಸದಾ ಸೇವೆಗೆ ಸನ್ನದ್ಧ. ಒಂದು ಅಂಗಳದಲ್ಲಾದ ಮದುವೆಯ ಮುಂದಿನ ಅಂಕ ಮತ್ತೊಂದು ಅಂಗಳಕ್ಕೇ ವರ್ಗವಾಗುತ್ತದೆ. ಗೃಹಪ್ರವೇಶವೆಂಬ ಗಂಡಿನ ಮನೆಯ ಸಂಭ್ರಮಕ್ಕೆ ಮತ್ತೆ ಅಂಗಳವೇ ಸಾಕ್ಷಿ. ಅಲ್ಲಿ ಆರತಕ್ಷತೆಗೆ ಇನ್ನೊಂದಿಷ್ಟು ಅಲಂಕಾರಗಳು. ಹೆಣ್ಣಿನ ಹೊಸ ಬದುಕು ಆರಂಭವಾಗುವುದೇ ಅಲ್ಲಿ. ಹೊಸ ಊರು, ಹೊಸ ಜಾಗ ಹೊಸ ಮಂದಿಯ ಮಧ್ಯೆ ಪ್ರಾಯಶಃ ಆ ಅಂಗಳ ಮಾತ್ರವೇ ಹಳೆಯದು ಎನ್ನಿಸುವುದೋ ಏನೋ! ಮದುವೆಯ ಸಂಭ್ರಮಗಳೆಲ್ಲ ಮುಗಿದ ರಾತ್ರಿ ನೆರೆದ ಹತ್ತು ಸಮಸ್ತರ ಇಸ್ಪೀಟು ಮಂಡಲವೂ ಅದೇ ಚಪ್ಪರದ ಕೆಳಗೇ ನಡೆಯುತ್ತದೆ. ಅದೆಷ್ಟು ಸುಸ್ತಾದರೂ, ಕಣ್ಣೆಳೆದರೂ ಮಧ್ಯೇ ಮಧ್ಯೇ ಚಹಾಪಾನಂ ಮಾಡುತ್ತ ಬೆಳಗಿನವರೆಗೂ ಕಾರ್ಡುಗಳ ಕಲಸು ಮೇಲೋಗರ ನಡೆದೇ ನಡೆಯುತ್ತದೆ.ಅದೇ ಮಾರನೆಯ ದಿನದ ಚಳಿಬೆಳಗಲ್ಲಿ ಅಂಗಳದಲ್ಲಿ ರಂಗೋಲಿಯ ಚಿತ್ರಗಳನ್ನ ಬಿಡಿಸುತ್ತ ನವವಧುವು ತಾನೇ ಚಿತ್ರವಾಗುವ ಸೋಜಿಗವೂ ನಡೆಯುತ್ತದೆ. ಆಮೇಲೆ ನಾಲ್ಕು ದಿನ ಬಿಟ್ಟು, ಮದುವೆ ಚಪ್ಪರಕ್ಕೆ ಕಟ್ಟಿದ ಸೀರೆಗಳನ್ನು ಬಿಡಿಸಲು ಗಂಡನಿಗೆ ಅವಳೇ ನೆರವಾಗಬೇಕೋ ಏನೋ!
ಆಗ ನೆರವಾಗದೇ ಹೋದರೂ ಮುಂಬರುವ ಅಡಿಕೆ ಕೊಯ್ಲಲ್ಲಂತೂ ಹೇಗೂ ಆಗಲೇಬೇಕು. ಏಕೆಂದರೆ ಮಲೆನಾಡಿನಲ್ಲಿ ಅದು ಇಡಿಯ ಊರಿನ ಕೆಲಸ! ಹಸಿರು ಹಳದಿ ಅಡಿಕೆಗಳ ರಾಶಿ ರಾಶಿ ಗೊಂಚಲುಗಳು ಅಂಗಳವನ್ನು ತುಂಬಿಕೊಳ್ಳುವ ಪರಿಯೇ ಚಂದ. ಊರ ಮಂದಿಯೆಲ್ಲ ಒಂದಾಗಿ, ಹಗಲೆನ್ನದೆ, ರಾತ್ರಿಯೆನ್ನದೇ ಆ ಅಡಿಕೆಗಳನ್ನು ಸುಲಿಯುವ ಸಂಭ್ರಮಕ್ಕೆ ಸಾಟಿಯೇ ಇಲ್ಲ! ಅಂಗಳದ ಆಚೆಗೆ ಅದೇನೇ ಆಗಿದ್ದರೂ ಒಳಗೆ ಬಂದು ಕೂತ ಮೇಲೆ ಎಲ್ಲರೂ ಒಂದೇ ಇಲ್ಲಿ. ವಿದೇಶೀ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ, ವೀಕೆಂಡಿನಲ್ಲಿ ಊರಿಗೆ ಬಂದ ಮನೆ ಮಗನೂ, ಆಳು ಮಗನೂ ಒಟ್ಟಿಗೇ ಅಡಿಕೆ ಸುಲಿಯುತ್ತಿರುತ್ತಾರೆ. ಜಗದ ಸುದ್ದಿಗಳೆನ್ನಲ್ಲ ಹೇಳುತ್ತ, ಏನೇನೋ ಹರಟೆ ಹೊಡೆಯುತ್ತಿದ್ದರೂ ಕೈಗಳು ಮಾತ್ರ ಯಾಂತ್ರಿಕವಾಗಿ ರಾಶಿಯಿಂದ ಅಡಿಕೆ ಹೆಕ್ಕಿ ಸುಲಿದು, ಡಬ್ಬ ತುಂಬಿಸುವ ಆ ಚಾಕಚಕ್ಯತೆಯನ್ನ ನೋಡಲೆರಡು ಕಣ್ಣು ಸಾಲದು. ಸುಮ್ಮನೇ ತಮಾಷೆಗೆಂದೇನಾದರೂ ಅದನ್ನೇ ನಾವೂ ಮಾಡಿದರೆ ಕೈಗೆ ಬ್ಯಾಂಡೇಜು ತಪ್ಪದು.
ನೀನನಗಾದರೆ ನಾ ನಿನಗೆ ಎಂಬ ಕವಿವಾಣಿಯನ್ನು ಆಗಿ ತೋರಿಸುವ ಈ ಅಡಕೆ ಸುಲಿಯವ ಕಾರ್ಯಕ್ರಮ ಊರ ಒಗ್ಗಟನ್ನೂ, ಜನರ ಲವಲವಿಕೆ, ಹಾಸ್ಯ ಪ್ರಜ್ಞೆಗಳನ್ನೂ, ಆ ವರುಷದ ಬೆಳೆಯ ಸ್ಥಿತಿಯನ್ನೂ, ಬೆಳೆದಾತನ ಆರ್ಥಿಕ ಸ್ಥಿತಿಯನ್ನೂ, ಒಟ್ಟು ಸಮಷ್ಟಿಯ ಬದಲಾಗುತ್ತಿರುವ ಪರಿಸ್ಥಿತಿಯನ್ನೂ ಒಟ್ಟಿಗೇ ಹೇಳುತ್ತಿರುತ್ತದೆ! ಹೋದ ವರ್ಷ ಇದ್ದ ಹಾಡು ಹರಟೆಗಳು ಈ ವರ್ಷ ಇಲ್ಲ. ಈ ವರ್ಷದು, ಮುಂದಣವರ್ಷಕ್ಕಿಲ್ಲ. ಏಕೆಂದರೆ ವರುಷದಿಂದ ವರುಷಕ್ಕೆ ಅಡಿಕೆ ಸುಲಿಯುವವರು ಕಡಿಮೆಯಾಗುತ್ತಿದ್ದಾರೆ. ಮನೆ ಮಗನಿಗೆ ಊರಿಗೆ ಬರಲು ರಜೆ ಸಿಕ್ಕುವುದಿಲ್ಲ. ಸಿಕ್ಕಿದರೂ ಅಡಕೆ ಸುಲಿಯಲು ಹೊರಗೆ ಬಂದು ಕೂರಲೇ ಬೇಕೆಂದೂ ಇಲ್ಲ.  ಸಂಬಂಧಗಳು ಸಂಕುಚಿತವಾಗುತ್ತಿದ್ದ ಹಾಗೆ, ಬದುಕೂ ಸಂಕುಚಿತವಾಗುತ್ತದೆ.
ಬದಲಾವಣೆ ಎಂಬ ಜಗದ ನಿಯಮ ಅಂಗಳಕ್ಕೂ ಅಪ್ಲೈ ಆಗುತ್ತದೆ. ಸಗಣಿಯ ಅಂಗಳವನ್ನು ಇಂಟರ್ ಲಾಕುಗಳು ನಿಧಾನವಾಗಿ ಬಂಧಿಸುತ್ತಿವೆ. ಮಣ್ಣ ಪಾಗಾರವನ್ನು ಇಟ್ಟಿಗೆ ಸಿಮೆಂಟುಗಳು ತಿಂದು ಹಾಕಿವೆ. ಸ್ವಚ್ಛಂದ ಬೇರು ಬಿಟ್ಟ ಹೂ ಗಿಡಗಳಿಗೆ ಪಾಟುಗಳು ಬಂದಿವೆ. ಅಂಗಳದ ಹುಲಿ ದನದ ಆಟವು ಆಂಡ್ರಾಯ್ಡ್ ಪ್ಲೇ ಸ್ಟೋರುಗಳಲ್ಲಿ ಸಿಗುತ್ತಿರುವ, ನಗರ ತರಂಗಗಳು ಹಳ್ಳಿಗಳಲ್ಲೂ ಪ್ರತಿಧ್ವನಿಸುತ್ತಿರುವ ಈ ಕಾಲದಲ್ಲಿ ಅದೆಲ್ಲ ಎಷ್ಟರ ಮಟ್ಟಿಗಿನ ಮಾತು? ಅಪಾರ್ಟ್ ಮೆಂಟಿನ ಸಿಮೆಂಟಿನಂಗಳದ ಬ್ಯಾಡ್ಮಿಂಟನ್ನಿನ ಗಮ್ಮತ್ತು ಕಂಬಾಟದಲ್ಲಿರಬೇಕೆಂದೇನೂ ಇಲ್ಲವಲ್ಲ? ಮಣ್ಣಲ್ಲಾಡಿದ ಪೋರನೀಗ, ಗಾಳಿಯ ಜಾಗದಲ್ಲಿರುವ ೧೨ನೇ ಫ್ಲೋರಿನಲ್ಲಿನ ಮನೆಯ ಆರಡಿ ಉದ್ದದ ಪೋರ್ಟಿಕೋದಲ್ಲಿ ಕೂತು ಬಾಲ್ಯದ ಕಣ್ಣಮುಚ್ಚಾಲೆಯ ರೋಚಕ ಅನುಭವನನ್ನು ಕಥೆಯಾಗಿಸಿ ಮಕ್ಕಳಿಗೆ ಹೇಳುವ ಅನಿವಾರ್ಯದಲ್ಲಿರುವಾಗ ಏನನ್ನೋಣ?
ಹಳಹಳಿಕೆಗಳನ್ನು ಬಿಟ್ಟು ಯೋಚಿಸಿದರೆ , ಅಂಗಳಕ್ಕೆ ಅಕಾಲ ವೃದ್ಧಾಪ್ಯ ಬಂದಿರಬಹುದು, ಆದರೆ ಅದರ ಸೊಬಗು ಇನ್ನೂ ಮಾಸಿಲ್ಲ. ದೀಪಾವಳಿಯಂದು ತಿರುಗುವ ನೆಲ ಚಕ್ರಕ್ಕೆ ಸಿಮೆಂಟಿನಂಗಳದಲ್ಲಿ ಹೊಸ ವೇಗ ದಕ್ಕಿದೆ, ಮಳೆ ಬಂದಾಗ ಅಮ್ಮನೀಗ ತಗಡು ಚಪ್ಪರದ ಕೆಳಗೆ ತೋಯದೇ ನಡೆಯುತ್ತಾಳೆ. ಅಂಗಳದ ಕಳೆ ತೆಗೆದೂ ತೆಗೆದೂ ನಡು ಬಾಗಿದ್ದ ಅಜ್ಜನೀಗ ಕೋಲು ಹಿಡಿದು ನೆಟ್ಟಗಾಗಿದ್ದಾನೆ. ಏದುಸಿರು ಬಿಡುತ್ತ ಅಂಗಳ ಚಂದ ಕಾಣಬೇಕೆಂದು ಗುದ್ದಲಿ ಹಿಡಿದು ನೆಲ ಕೆತ್ತುತ್ತಿದ್ದ ಅಪ್ಪ, ಆರಾಮ ಕುರ್ಚಿಯಲ್ಲಿ ಕೂತಿದ್ದಾನೆ. ಅಂಗಳವನ್ನು ಬಂಧಿಸಿದ ಕಾಂಪೌಡು ವಾಲಿನ ಮೇಲೆ ಅಳಿಲು ಕೂತು ಬಿಸಿಲು ಕಾಯಿಸಿಕೊಳ್ಳುತ್ತಿದೆ. ಧೂಳು ಕೆಸರುಗಳು ಅದರಾಚೆಗೇ ಉಳಿದಿವೆ. ಹಬ್ಬಕ್ಕೆಂದು ಮನೆಯ ಸುತ್ತ ಹಚ್ಚಿದ ದೀಪಸಾಲುಗಳನ್ನ ಅಂಗಳವೂ ಮಸುಕಾಗಿ ಪ್ರತಿಫಲಿಸುತ್ತ ತಾನೂ ಪ್ರಜ್ವಲಿಸುತ್ತಿದೆ!


ವಿಜಯವಾಣಿ ದೀಪಾವಳಿ ವಿಶೇಷಾಂಕಕ್ಕೆ ಬರೆದ ಪ್ರಬಂಧ.

ಗುರುವಾರ, ಅಕ್ಟೋಬರ್ 30, 2014

ಅಪ್ಪನಾಗುವ ಕಷ್ಟ ಮತ್ತು ಸುಖ


ಆಸ್ಪತ್ರೆಯ ಕಾರಿಡಾರ್ ಖಾಲಿ ಹೊಡೆಯುತ್ತಿತ್ತು. ನಾನು  ವಾಚ್ ನೋಡಿಕೊಂಡರೆ ಕೊಂಚ ಹೊತ್ತಿಗೆ ಮುಂಚೆ ಎಷ್ಟು ಸಮಯವಾಗಿತ್ತೋ ಅಷ್ಟೇ!  ಅಲ್ಲಾ, ೨೦ ಸೆಕೆಂಡಿಗೊಮ್ಮೆ ಗಂಟೆ ನೋಡಿಕೊಂಡರೆ ಬಡಪಾಯಿ ವಾಚಾದರೂ ಏನು ಮಾಡೀತು? ಸುಮ್ಮನೆ ಯಾರ ಬಳಿಯಾದರೂ ಮಾತನಾಡೋಣ ಅನ್ನಿಸಿದರೂ ಊಹೂಂ, ಯಾರೂ ಇರಲಿಲ್ಲ. ಪ್ರಾಯಶಃ ನನ್ನ ಜೀವನದ ಅತ್ಯಂತ ಒತ್ತಡದ ಮತ್ತು ಸುದೀರ್ಘವೆನಿಸಿದ ಕ್ಷಣಗಳು ಅವು. ಖುಷಿಯ ಘಳಿಗೆಗಳಿಗೂ ಮೊದಲ ತಲ್ಲಣ, ಹೊಸ ಜೀವದ ಸ್ವಾಗತಕ್ಕೂ ಮೊದಲಿನ ಕ್ಷಣಗಣನೆ.
ಹೆಂಡತಿ ಒಳಗೆ ಹೆರಿಗೆ ಕೋಣೆಯಲ್ಲಿ, ನಾನು ಹೊರಗೆ ಕಾರಿಡಾರ್ ನಲ್ಲಿ. ಅದಾಗಲೇ ನೂರಾರು ಸಿನಿಮಾಗಳಲ್ಲಿ ದೃಶ್ಯವನ್ನು ನೋಡಿದ್ದೆ ನಾನು. ಗಂಡ ಹೊರಗೆ ನಿಂತಿದ್ದಾನೆ. ಪಕ್ಕದಲ್ಲಿ ಅಪ್ಪ ಅಮ್ಮ. ಮುಖದಲ್ಲಿ ಚಿಂತೆ. ಅತ್ತಿತ್ತ ಓಡಾಟ, ಗಡಿಯಾರದ ಮುಳ್ಳಿನ ಕ್ಲೋಸ್ ಅಪ್ ಶಾಟು. ಒಳಗೆ ಓಡೋ ನರ್ಸ್ ಕಡೆಗೆ ಯಾಚನಾ ಭಾವದಲ್ಲಿ ನೋಡುವ ಗಂಡನಿಗೆ ಅದೇನೋ ಸನ್ನೆ ಮಾಡಿ ಹೋಗುವ ಆಕೆ.. ಏನೂ ಆಗಲ್ಲ ಚಿಂತಿಸಬೇಡ ಎಂದು ಕಣ್ಣಲ್ಲೇ ಹೇಳೋ ಅಮ್ಮ.. ಪ್ರತಿ ಬಾರಿ ನೋಡುವಾಗಲೂ, ಅಲ್ಲಾ ಸೀನನ್ನು ಇಷ್ಟೊಂದು ವೈಭವೀಕರಿಸಿ ತೋರಿಸೋ ಅಗತ್ಯ ಏನಿದೆ, ಒಳಗೆ ಡಾಕ್ಟರುಗಳಿರುತ್ತಾರೆ, ನರ್ಸ್ಗಳಿದ್ದಾರೆ, ತಂತ್ರಜ್ಞಾನ ಅದೆಷ್ಟು ಮುಂದುವರಿದಿದೆ, ಯಾವ ತಲೆಬಿಸಿಯೂ ಇಲ್ಲದೇ ಹೆರಿಗೆ ಆಗೋದು ಗ್ಯಾರೆಂಟಿ, ಅಷ್ಟಾದರೂ ಇನ್ನೂ ಹಳೇ ಸಿನಿಮಾದ ಮೆಲೋಡ್ರಾಮಾ ಬಿಟ್ಟಿಲ್ಲವಲ್ಲ  ಅಂದುಕೊಳ್ಳುತ್ತಿದ್ದೆ. ಆದರೆ ಯಾವಾಗ ನಾನು ಖಾಲಿ ಕಾರಿಡಾರಿನ ಮೌನದಲ್ಲಿ, ಸೌಂಡ್ ಪ್ರೂಫಾಗಿದ್ದರೂ ಬಾಗಿಲಿನ ಸಂದುಗಳಲ್ಲಿ ತೂರಿಬರುತ್ತಿದ್ದ ಆಕ್ರಂದನವನ್ನು ಕೇಳುತ್ತ ನಿಂತಿದ್ದೆನೋ, ಯಾವಾಗ ನನ್ನ ಕಾಲುಗಳಲ್ಲೂ ಸಣ್ಣಗೆ ನಡುಕ ಉಂಟಾಗಿ ಇದೆಲ್ಲ ಬೇಗ ಮುಗಿದು ಹೋಗಬಾರದೇ ಎನ್ನಿಸಿತೋ, ಆವಾಗ ಸಂದರ್ಭದ ಗಂಭೀರತೆ ಅರ್ಥವಾಯಿತು.
ನಾನು ಏನಾಗಿದ್ದೇನೆ ಎಂಬುದೇ ನನಗರ್ಥವಾಗದೇ ನಿಂತಿದ್ದ ಹೊತ್ತಿಗೆ, ನನ್ನೆದುರಿನ ಆಪರೇಶನ್ ಥಿಯೇಟರ್ ಬಾಗಿಲು ತೆರೆಯಿತು. ನನ್ನ ಬಾಳಿನ ಹೊಸ ಅರ್ಥವನ್ನು ಕೈಯಲ್ಲಿ ಹೊತ್ತು ನಿಂತಿದ್ದ ನರ್ಸಮ್ಮ, ನಕ್ಕುಹೆಣ್ಣುಮಗುಎಂದು ಮೃದುಬಟ್ಟೆಯಲ್ಲಿ ಸುತ್ತಿದ್ದ ಎಳೇ ಕಂದಮ್ಮನನ್ನು ಕೈಗಿತ್ತಳು. ೨೫ ಕೇಜಿ ತೂಕ ಹೊತ್ತಾಗಲೂ ನಡುಗದ ಕೈ, ಈಗ ನಡುಗುತ್ತಿತ್ತು. ಜಗದ ಬೆಳಕಿಗಂಜಿ ಮುಚ್ಚಿಕೊಂಡಿರುವ ಪುಟ್ಟ ಕಣ್ಣುಗಳು, ಗಾಳಿಯನ್ನೇ ಗಟ್ಟಿ ಹಿಡಿದಿರುವ ಬಿಗಿಮುಷ್ಟಿಗಳು.. ಹಾಗೇ ನೋಡುತ್ತ ನಿಂತ ನನಗೆ ಒಂದು ನಿಮಿಷ ಏನಾಗುತ್ತಿದೆ ಎಂದೇ ತಿಳಿಯಲಿಲ್ಲ. ಆನಂದವೋ, ರೋಮಾಂಚನವೋ, ಭಾವೋದ್ವೇಗವೋ.. ಊಹೂಂ.. ಎಲ್ಲ ಖಾಲಿ ಖಾಲಿ. ಮಗಳ ಮುಖವನ್ನೇ ನೋಡಿ ನೀಳ ಉಸಿರು ಹೊರ ಬಿಟ್ಟ ಮೇಲೆ ನಿಧಾನವಾಗಿ, ಖಾಲಿಯಾದ ನನ್ನ ಒಳಗೆಲ್ಲ ತುಂಬತೊಡಗಿತು. ಆವತ್ತಿನಿಂದ ತುಂಬಿಕೊಳ್ಳುತ್ತಿರುವ ನನ್ನ ಖಾಲೀತನ ಇನ್ನೂ ತುಂಬಿಕೊಳ್ಳುತ್ತಲೇ ಇದೆ!
ಅಪ್ಪ ಅನ್ನಿಸಿಕೊಂಡ ಘಳಿಗೆ ಅರ್ಥವಾದ ಮಹತ್ವದ ಸತ್ಯ ಏನಂದರೆ ಅದು ಬರಿಯ ನಾಮಪದವಲ್ಲ ಕ್ರಿಯಾಪದ ಅಂತ! ಹೆಂಗಸರಿಗೆ ಸೂಕ್ಷ್ಮ ಅನ್ನುವುದು ಹುಟ್ಟುತ್ತಲೇ ದಕ್ಕಿಬಿಟ್ಟಿರುತ್ತದೆ, ನಾವುಗಳೋ ಅದನ್ನು ಒಲಿಸಿಕೊಳ್ಳಬೇಕು. ಮಗಳು ಹುಟ್ಟಿದ ದಿನವೇ ನನ್ನ ಹೆಂಡತಿ ಅಪಾರ ಜ್ಞಾನವಿರುವವಳಂತೆ ಅದನ್ನು ನೋಡಿಕೊಳ್ಳುತ್ತಿರುವುದನ್ನ ನೋಡಿ ನಾನಂತೂ ಕಂಲಾಗಾಗಿ ಹೋಗಿದ್ದೆ. ಹೀಗೆ ಹೀಗೇ ಎತ್ತಿಕೊಳ್ಳಬೇಕು, ಕುತ್ತಿಗೆ ಹಿಡಿದುಕೋ.. ಛೇ.. ಹಾಗಲ್ಲ ಹೀಗೆ ಎಂದು ಅವಳು ನನಗೆ ವಿವರಿಸಬೇಕಿದ್ದರೆ ನಾನು ಪೆದ್ದು ಪೆದ್ದಾಗಿ ತಲೆಯಾಡಿಸುತ್ತಿದ್ದೆ. ಹಾಲು ಕುಡಿದದ್ದು ಹೆಚ್ಚಾಯ್ತು, ಈಗ ವಾಂತಿಯಾಗುತ್ತದೆ ಎಂದು ಅವಳು ಹೇಳಿದರೆ ಮಾತು ಮುಗಿಯುವುದರೊಳಗೆ ಹಾಗೇ ಆಗಬೇಕೆ. ಇದೆಲ್ಲ ಹೇಗೆ ತಿಳಿಯುವುದಪ್ಪ ಎಂದು ನಾನು ಅರ್ಥವಾಗದೆ ನೋಡುತ್ತಿದ್ದೆ.ನಮ್ಮತ್ತೆ ಮತ್ತು ಇವಳು ಇಬ್ಬರೂ ಸೇರಿ ಹಸುಳೆಯ ಆರೈಕೆ ಮಾಡುತ್ತಿದ್ದರೆ ನಾನು ಬಿಟ್ಟಕಣ್ಣು ಬಿಟ್ಟುಕೊಂಡು ನೋಡುತ್ತಿದ್ದೆ ಅಷ್ಟೆ. ನಾನೇನಾದರೂ ಸಹಾಯ ಮಾಡಬೇಕೇ ಎಂದು ಕೇಳಿದ ವಿನಂತಿಯನ್ನು ನನ್ನವಳು ಗೌರವ ಪೂರ್ವಕವಾಗಿ ಸ್ವೀಕರಿಸಿ, ಸಾರಾಸಗಟಾಗಿ ತಿರಸ್ಕರಿಸಿದ್ದಳು. ದಯಾಪರರಾದ ಅವರುಗಳು ಡಯಾಪರು ಸೊಳ್ಳೆಪರದೆ ಇತ್ಯಾದಿಗಳನ್ನು ತರುವ ಕೆಲಸವನ್ನು ನನಗೆ ವಹಿಸಿ ಇತರ ಸಂಕಷ್ಟಗಳಿಂದ ನನ್ನನ್ನು ಪಾರು ಮಾಡಿದ್ದರು.
ಆಸ್ಪತ್ರೆಯ ಅಧ್ಯಾಯ ಮುಗಿದು ಬಾಣಂತನದ ಸಂಭ್ರಮಗಳು ಶುರುವಾಗುವ ಹೊತ್ತಿಗೆ ನಾನೂ ಸ್ವಲ್ಪ ಪರಿಶ್ರಮ ಹಾಕಿ, ಅನುಭವ ಪಡೆದುಕೊಂಡಿದ್ದೆ. ಮಗಳನ್ನು ಎತ್ತಾಡಿಸುವ ಕಲೆ ನನಗೂ ಅರ್ಥವಾಗಿತ್ತು. ಬೊಚ್ಚುಬಾಯಿ ಅಗಲಿಸಿ ಹಾಹೂ ಅನ್ನುತ್ತಿದ್ದ ಮಗಳಿಗೆ ಅಪ್ಪನೆಂಬ ಜೀವಿಯ ಪರಿಚಯ ನಿಧಾನವಾಗಿ ಆಗುತ್ತಿತ್ತು. ಇಷ್ಟಾದರೂ ನಾನು ಮಗಳನ್ನು ನೋಡಿಕೊಳ್ಳುವ ವಿಚಾರದಲ್ಲಿ ಇನ್ನೂ ಪ್ರೈಮರಿಯನ್ನೂ ಪಾಸಾಗಿರಲಿಲ್ಲ. ಯಾಕೆಂದರೆ ಬಹಳಷ್ಟು ವಿಚಾರಗಳನ್ನ ನನಗೆ ನೋಡಲೇ ಆಗುತ್ತಿರಲಿಲ್ಲ, ಇನ್ನು ಮಾಡುವುದು ಆಮೇಲಿನ ಮಾತು.
ಪಾಪೂಗೆ ಸ್ನಾನ ಮಾಡಿಸುವುದು ಎಂಬ ಘನಘೋರ ಕಾರ್ಯವನ್ನು ನನಗಂತೂ ಕಣ್ಣಲ್ಲಿ ಕಾಣಲೇ ಸಾಧ್ಯವಾಗುತ್ತಿರಲಿಲ್ಲ.! ಸ್ನಾನ ಮಾಡಿಸಲೆಂದೇ ವಿಶೇಷ ಪರಿಣತಿಯನ್ನು ಪಡೆದ ಕೊಲ್ಲೂರಿಯೆಂಬ ಅಜ್ಜಿಯು ಬಿಸಿಬಿಸಿ ನೀರನ್ನು ತೊಪತೊಪನೆ ಹೊಯ್ಯುತ್ತಿದ್ದರೆ ಮಗಳು ಹಂಚು ಹಾರಿ ಹೋಗುವಂತೆ ಅಳುತ್ತಿದ್ದಳು. ಅವಳು ಹುಚ್ಚಾಪಟ್ಟೆ ಅಳುತ್ತಿದ್ದರೂ ಹಾಗೊಂದು ಕ್ರಿಯೆಯೇ ನಡೆಯುತ್ತಿಲ್ಲ ಎಂಬಂತೆ ಆಕೆಯೂ ನನ್ನತ್ತೆಯೂ ಅದೇನೋ ಊರಿನ ಸುಖಕಷ್ಟಗಳನ್ನೆಲ್ಲ ಮಾತನಾಡುತ್ತಿದ್ದರು. ಅದ್ಯಾರೋ ಪುಣ್ಯಾತ್ಮ ಇನ್ನಾರಿಗೋ ಬಾರಿಸಿದನಂತೆ, ಅಲ್ಲಾ ಜಗತ್ತಲ್ಲಿ ಹಾಗಾದರೆ ಕರುಣೆಯೇ ಇಲ್ಲವೇ? ಎಲ್ಲ ಏನಾಗ್ತಾ ಇದೆ ಎಂದು ಮರುಗುತ್ತ ಕೂಸಿನ ತಲೆ ಕಾಲು ಹೊಟ್ಟೆ ಬೆನ್ನಿಗೆ ಇನ್ನಷ್ಟು ನೀರು ಸುರಿಯುತ್ತ ಕಾಲ ಮೇಲೆಯೇ ಮಲಗಿಸಿಕೊಂಡು ಅದೇನೇನೋ ಕವಾಯತುಗಳನ್ನ ಮಾಡಿಸುತ್ತಿದ್ದರು. ಕರುಣೆ ಬಚ್ಚಲಮನೆಯ ಬಿಸಿನೀರ ರೂಪದಲ್ಲಿ ಹರಿದು ಮೋರಿ ಸೇರುತ್ತಿತ್ತು. ನಾನು ಸ್ನಾನ ಮಾಡಿಸುವಾಗ ಒಂದೆರಡು ದಿನ ಇದನ್ನೆಲ್ಲ ನಿಂತು ನೋಡಿ ಹೌಹಾರಿ ಮುಖವನ್ನು ಚಿತ್ರವಿಚಿತ್ರವಾಗಿಸಿಕೊಂಡು ಅಯ್ಯೋ ಅಪ್ಪಾ ಸ್ವಲ್ಪ ನೋಡ್ಕಂಡು ನೀರು ಹುಯ್ರೇ ಎಂದಿದ್ದಕ್ಕೆ ಮಾರನೇ ದಿನದಿಂದ ನನ್ನ ಪಾಲಿಗೆ ಬಚ್ಚಲು ಬ್ಯಾನ್ ಆಯಿತು. ಪ್ಯಾಟೆ ಸೇರ್ಕಂಡ್ರೆ ಹೀಗೆ ಅಮ್ಮ, ಎಲ್ಲದಕ್ಕೂ ಹುಡುಗ್ರು ಅತಿ ಆಡ್ತವೆ ಅಂತ ಕೆಲಸದ ಕೊಲ್ಲೂರಿಯೂ ಷರಾ ಬರೆದಳು. ಹಾಗೆಂದು ನಾನು ಮಾಡಿಕೊಂಡ ವಿಡಿಯೋ ತೋರಿಸೆಂದು ಕೇಳಲು ಮರೆಯಲಿಲ್ಲ!
ಸ್ನಾನ ಮಾಡಿಕೊಂಡು ಒಳಗೆ ಬರುವಾಗ ಪುಟ್ಟ ಹಬೆಯ ದೇವತೆಯಂತೆ ಕಾಣುತ್ತಿದ್ದ ಮಗಳು ಕೊಲ್ಲೂರಿಯ ಬಿಸಿ ನೀರಿನ ಹೊಡೆತಕ್ಕೆ ಕಂಗಾಲಾಗಿ ಬಸವಳಿದು ಹೋಗಿರುತ್ತಿದ್ದಳು. ಪೌಡರು ಹಾಕಿ ಗೊಬ್ಬೆ ಕಟ್ಟುವುದರೊಳಗೆ ನಿದ್ದೆ ಗ್ಯಾರೆಂಟಿ. ಹಾಗೆಲ್ಲ ಸುಮ್ಮ ಸುಮ್ಮನೆ ನಿದ್ರೆ ಮಾಡಿಸುವ ಹಾಗೆಲ್ಲ ಇಲ್ಲ! ತೊಟ್ಟಿಲನ್ನು ತೂಗಲೂ ಒಂದು ಕ್ರಮ, ಮಲಗಿಸಲೂ ಒಂದು ಶಿಸ್ತು, ಸ್ನಾನವಾದ ಮೇಲಿನ ನಿದ್ದೆಗೆ ಒಂದು ರೀತಿಯ ವ್ಯವಸ್ಥೆ, ಮಧ್ಯಾಹ್ನಕ್ಕಾದರೆ ಇನ್ನೊಂದು, ರಾತ್ರಿಗೆ ಮಗದೊಂದು. ಅಬ್ಬಬ್ಬ! ಒಂದು ಪಂಚೆಯನ್ನೇ ಹೇಗೆಲ್ಲ ಆ ಕೂಸಿಗೆ ಸುತ್ತುತ್ತಿದ್ದರು ಎಂದರೆ ನಾನು ಹೊತ್ತಿಗೆಲ್ಲ  ಹೆಚ್ಚು ಮಾತನಾಡದೆಫೋಟೋ ತೆಗೆಯುವುದುಎಂಬ ಅತ್ಯಂತ ಮುಖ್ಯ ಕಾರ್ಯ ಮಾಡುತ್ತಿದ್ದೆ. ಸಹಾಯ ಮಾಡಲಾ ಎಂದು ಕೇಳಿ, ಅತ್ತೆಯೋ ಹೆಂಡತಿಯೋ ಹುಂ ಅಂದರೆ ಎಂಬ ಹೆದರಿಕೆ!
ಇನ್ನು ಮಗುವನ್ನು ನೋಡಲು ಬರುವ ಮಹನೀಯರುಗಳ ಬಗ್ಗೆ ಹೇಳ ಹೊರಟರೆ ಅದೇ ಬೇರೆಯ ಪ್ರಬಂಧವಾಗುತ್ತದೆ. ಅಪ್ಪನಿಗೋ ಅಮ್ಮನಿಗೋ ಅಜ್ಜಿ ಅಜ್ಜನಿಗೋ ಮಗುವನ್ನು ಹೋಲಿಸಬೇಕಾಗಿರುವುದು ಅತ್ಯಂತ ಅನಿವಾರ್ಯವೂ ಅವಶ್ಯವೂ ಆಗಿರುವ ಪ್ರಕ್ರಿಯೆ ಎಂದು ನೂರಕ್ಕೆ ನೂರು ಪ್ರತಿಶತ ಜನರೂ ಭಾವಿಸಿದ್ದಾರೆ. ಕೆಲವರು ಇನ್ನೂ ಮುಂದೆ ಹೋಗಿ ಕಣ್ಣು  ಇವನ ಹಾಗೆ ಮೂಗು ಅವಳದು.. ಆದರೆ ನೋಡಲು ಥೇಟು ಅಜ್ಜಿಯ ಥರ ಎಂದು ಯಥಾ ಸಾಧ್ಯ ಕುಟುಂಬಸ್ಥರನ್ನು ಓಲೈಸುವ ಕಾರ್ಯವನ್ನೂ ಮಾಡುತ್ತಾರೆ. ನಾನು ಮೊದ ಮೊದಲು ತಲೆಯಾಡಿಸಿ ಭಾರೀ ಉತ್ಸಾಹದಿಂದ ಪ್ರತಿಕ್ರಿಯೆ ನೀಡಿದೆ. ಅದು ಅತ್ಯಂತ ಅಪಾಯಕಾರಿ ಅನ್ನುವುದು ಆಮೇಲಾಲಾಮೇಲೆ ಅರಿವಾಯಿತು. ಕಾಲು ನೋಡು ಇವನ ಅಜ್ಜನೂ ಹೀಗೇ ಇದ್ದ, ಕೈ ನೋಡು ಅಜ್ಜಿಯ ಥರವೇ ಎಂದೆಲ್ಲ ಇನ್ನೂ ಗಂಭೀರವಾಗಿ ಡಿ-ಕೋಡ್ ಮಾಡಲು ಶುರು ಮಾಡಿದ ಮೇಲೆ ನಾನೂ ಸುಮ್ಮನಾಗಬೇಕಾಯಿತು. ಏಕೆಂದರೆ ಬಂದ ಎಲ್ಲರ ಬಳಿಯೂ ನಕ್ಕು, ಕೃತಜ್ಞತೆಯನ್ನು ವ್ಯಕ್ತಪಡಿಸಬೇಕಾದ ಭಾರ ನಮ್ಮ ಮೇಲಿರುವುದರಿಂದ ಯಾವ ವ್ಯಂಗ್ಯ ಉಡಾಫೆಗಳಿಗೂ ಅವಕಾಶ ಇರುವುದಿಲ್ಲ. ಯಾರೋ ಸ್ನೇಹಿತ ದಂಪತಿ ಬಂದಿದ್ದರು, ಅವರವರೇ ಯಾರ ಹಾಗೆ ಕಾಣುತ್ತಿದೆ ಎಂದು ಮಾತನಾಡಿಕೊಂಡರು. ಸ್ನೇಹಿತನ ಮಾತಿಗೆ ನಾನು ಸುಮ್ಮನೇ ತಲೆಯಾಡಿಸಿ ಹೌದು ಹೌದು ನನಗೂ ಹಂಗೇ ಅನ್ನಿಸ್ತು ಎಂದೆ. ಅವನು ತಿರುಗಿ ಹೆಂಡತಿಯ ಬಳಿ ನೋಡಿದ್ಯಾ ನಾನು ಹೇಳಿದ್ದೇ ಕರೆಕ್ಟು ಎಂದು ಮತ್ತೆ ವಾದಕ್ಕೆ ತೊಡಗಿದ. ನಿದ್ದೆಯಲ್ಲಿದ್ದ ಕೂಸು ವಿನಾಕಾರಣ ನಕ್ಕಿತು.
ಬಾಣಂತನ ಮುಗಿಸಿದ ಹೆಂಡತಿಯನ್ನು ಮರಳಿ ಬೆಂಗಳೂರಿಗೆ ಕರೆದೊಯ್ಯಲು ಬಂದೆ. ಹೊತ್ತಿನಲ್ಲಿ ನಡೆದ ಸಲಹಾಪರ್ವ ಎಂಬ ಅಮೋಘ ಸಂದರ್ಭದ ಬಗ್ಗೆ ಏನು ಹೇಳಲಿ? ಊರಿನ ಹಿತೈಷಿಗಳೂ, ಬಂಧು ಬಾಂಧವರೂ ಬಂದು ಬೆಳಗಿನಿಂದಲೇ ಥರಹೇವಾರಿ ಸಲಹೆಗಳನ್ನು ನನ್ನವಳಿಗೆ ನೀಡಲು ಆರಂಭಿಸಿದ್ದರು. ಮಗಳಿಗೆ ಕ್ಯಾರೆಟ್ಟು ತಿನ್ನಿಸಬೇಡ ಕಣ್ಣಿನ ತೊಂದರೆ ಬರತ್ತೆ, ಎಮ್ಮೆ ಹಾಲು ಕುಡಿಸಬೇಡ ಬುದ್ದಿ ಮಂದ, ಅಪ್ಪಿತಪ್ಪಿಯೂ ಪ್ಯಾಕೇಟು ಮೊಸರು ತಿನ್ನಿಸಬೇಡ ಅದ್ರಲ್ಲಿ ಬರೀ ಕೆಮಿಕಲ್ಲು, ಬಾಳೆಹಣ್ಣು ಥಂಡಿ ದಾಳಿಂಬೆ ಹೀಟು ಮೂಸಂಬಿ ನೆಗಡಿ.. ಆಚೆ ಮನೆ ಕುಸುಮಕ್ಕ ಹೇಳಿದ್ದು ಈಚೆಮನೆ ಚಿಕ್ಕಮ್ಮನ ಪ್ರಕಾರ ತಪ್ಪು. ರಾಮಣ್ಣ ಬೇಡ ಎಂದ ಯಾವುದೋ ಹಣ್ಣು, ಲಕ್ಷ್ಮಜ್ಜಿಯ ಪ್ರಕಾರ ತಿನ್ನಲೇಬೇಕು. ಸಂಜೆ ಆಗುವ ಹೊತ್ತಿಗೆ ನನ್ನ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿಯೇ ಬಿಟ್ಟಿತ್ತು. ನನ್ನ ಹೆಂಡತಿ ಈಗಾಗಲೇ ಹಲವು ತಿಂಗಳುಗಳ ಕಾಲ ಇದನ್ನೆಲ್ಲ ಕೇಳಿದ್ದರಿಂದ ಸ್ಥಿತಪ್ರಜ್ಞಳಾಗಿ ಹುಂ ಅನ್ನುತ್ತಿದ್ದಳು. ಅವಳ ಧೈರ್ಯ ನೀಡಿದ ಮೇಲೆಯೇ ನನಗೆ ನಮ್ಮ ಮಗಳು ಉಪವಾಸ ಇರಬೇಕಾಗಿಲ್ಲ ಎಂದು ಖಾತ್ರಿಯಾಯಿತು!
ನಾಲ್ಕಿದ್ದ ಹೆಜ್ಜೆ ಆರಾಗಿ ಬೆಂಗಳೂರಿನಲ್ಲಿ ಮೂಡಿದ ಮೇಲೆ, ಕಾಲ ಸಾಗುವ ಪರಿಯನ್ನು ಕಂಡು ನನಗೇ ಅಚ್ಚರಿಯಾಯಿತು. ಅಂಬೆಗಾಲಿನಿಂದ ಪುಟ್ಟಪುಟ್ಟ ಹೆಜ್ಜೆಗಳನ್ನ ಇಡುತ್ತ ತೊದಲು ಮಾತನಾಡುತ್ತ ಸಾಗುವ ಮಗಳ ಹಿಂದೆ ನಾವೂ ಓಡುತ್ತ ಅದು ಹೇಗೆ ವರುಷ ಕಳೆದು ಮುಂದೆ ಸಾಗಿತೋ ಗೊತ್ತೇ ಆಗಲಿಲ್ಲ. ಆದರೆ ಇಲ್ಲಿಗೆ ಬಂದ ಮೇಲೆ ಬೇರೆಯದೇ ಬಗೆಯ ಚಾಲೆಂಜುಗಳು. ಮಗಳು ಪಾಪ, ನಾಲ್ಕು ಗೋಡೆಗಳ ಮಧ್ಯವೇ ದಿನದ ಹೆಚ್ಚಿನಂಶವನ್ನು ಕಳೆಯಬೇಕು, ಬೇಕೋ ಬೇಡವೋ, ಡಾಕ್ಟರುಗಳು ಹೇಳುವ ಅದೆಂಥದೋ ಇಂಜೆಕ್ಷನ್ನುಗಳನ್ನ ಮಾತ್ರೆಗಳನ್ನ ಕೊಡಿಸಬೇಕು.. ಆಕೆ ಹನೀಸಿಂಗನ ಲುಂಗಿ ಡ್ಯಾನ್ಸಿಗೆ ಮೆಲ್ಲನೆ ಕೈ ಎತ್ತಿ ಕಾಲು ಕುಣಿಸಿದರೆ ಅದನ್ನ ಸಾಧನೆ ಎಂದು ಖುಷಿ ಪಡಬೇಕೋ, ಅಥವಾ ಇಷ್ಟು ಬೇಗನೆ ಇದೆಲ್ಲ ಅಭ್ಯಾಸವಾಯಿತಲ್ಲ ಎಂದು ಬೇಸರಿಸಬೇಕೋ? ತಿಳಿಯುತ್ತಿಲ್ಲ!
 ಒಟ್ಟಿನಲ್ಲಿ ಹೊಸ ಹೊಸ ಪಾಠಗಳನ್ನ ಕಲಿಯುತ್ತ ಅಪ್ಪನೆಂಬ ಪದವಿಯ ಮೆಟ್ಟಿಲುಗಳನ್ನೇರುತ್ತಿದ್ದೇನೆ. ನರ್ಸು ನನ್ನ ಕೈ ಮೇಲೆ ಮಗುವನ್ನು ಇಟ್ಟದ್ದು ಇನ್ನೂ ಈಗತಾನೇ ನಡೆದಂತಿದೆ. ಆದರೆ ಮಗಳು ಹುಟ್ಟಿ ಆಗಲೇ ಒಂದೂವರೆ ವರ್ಷವಾಗುತ್ತಿದೆ. ಮೊನ್ನೆ ತಾನೇ ಹಗುರ ಹೆಜ್ಜೆಗಳನ್ನು ಹಾಕುತ್ತ ನಡೆಯುವ ಅವಳನ್ನ ಕರೆದುಕೊಂಡು ವಾಕಿಂಗ್ ಗೆ ಹೋಗಿದ್ದೆ. ನಾನು ಎರಡೆರಡು ಅಕ್ಷರದ ಏನೇನೋ ಶಬ್ದಗಳನ್ನ ಹೇಳಿಕೊಡುತ್ತ ನಡೆಸಿಕೊಂಡು ಹೊರಟಿದ್ದೆ. ಅವಳೂ ಅವಳ ಬಾಲ ಭಾಷೆಯಲ್ಲಿ ಅದೇನೋ ಹೇಳುತ್ತಿದ್ದಳು. ಹಾಗೇ ಹೋಗುತ್ತಿದ್ದಾಗ, ಯಾವುದೋ ಕ್ಷಣದಲ್ಲಿ ನನಗೇ ಗೊತ್ತಿಲ್ಲದ ಹಾಗೆ ನನ್ನ ಕೈ ಬಿಡಿಸಿಕೊಂಡು ಓಡಿಯೇ ಬಿಟ್ಟಳು. ಹೇ ಎಂದು ಮುಂದಡಿಯಿಟ್ಟೆ.. ಆಕೆ ನಾಲ್ಕೆಂಟು ಹೆಜ್ಜೆ ಓಡಿದವಳು ಅಲ್ಲೇ ನಿಂತು, ತಿರುಗಿ ನನ್ನನ್ನು ನೋಡಿ ನಕ್ಕು.. ಕೈ ಚಾಚಿ   ’ಅಪಾ ಬಾಎಂದು ಕರೆದಳು! ನಾನು ನೋಡುತ್ತ ನಿಂತೆ..

-ಕನ್ನಡಪ್ರಭ ದೀಪಾವಳಿ ಲಲಿತ ಪ್ರಬಂಧ ಸ್ಪರ್ಧೆ -2014 ರಲ್ಲಿ ದ್ವಿತೀಯ ಬಹುಮಾನ

ಭಾನುವಾರ, ಮೇ 04, 2014

ಗೋಳಿಬೈಲಿನ ನ್ಯೂಲೈಫು

ಪಂಚಾಯ್ತಿ ಮೆಂಬರು ದಾಮು ಹೇಳಿದ ಸುದ್ದಿಯನ್ನ ಗೋಳಿಬೈಲಿನ ವೆಂಕಟರಮಣ ಸ್ಟೋರ್ಸಿನ ಕಿಣಿ ಮಾಮ್ ಯಾತಕ್ಕೂ ನಂಬಲಿಲ್ಲ. ಅವರು ದಾಮು ಕೇಳಿದ ಜಾಫಾ ಕೋಲಾ ತೆಗೆದು ಕೊಟ್ಟು, ಅಂಗಡಿಯ ಗಾಜಿನ ಬಾಟಲುಗಳನ್ನ ಸರಿಯಾಗಿ ಜೋಡಿಸಿ, ಧೂಳು ಹೊಡೆದು, ಊದುಬತ್ತಿ ಹಚ್ಚಿ ಅದನ್ನು ಬಾಲಾಜಿಯ ಫೋಟೋಕ್ಕೆ ಮೂರು ಸುತ್ತು ಸುತ್ತಿಸಿ. ನಿಧಾನ ತಮ್ಮ ಕುರ್ಚಿಯ ಮೇಲೆ ಕುಳಿತು, “ಅದೆಂತ ಸಮಾ ಹೇಳು ಮಾರಾಯಾ” ಅಂದರು. ದಾಮು ಜಾಫಾ ಕುಡಿಯುತ್ತಿದ್ದವನು, ಇದಕ್ಕಾಗೇ ಕಾದಿದ್ದವನ ಹಾಗೆ, ಗಂಟಲು ಸರಿ ಮಾಡಿಕೊಂಡ. “ನೋಡಿ ಕಿಣಿ ಮಾಮ್, ನಂಗೊತ್ತುಂಟು ನೀವೆಂತ ಯೋಚನೆ ಮಾಡ್ತ ಇದ್ದೀರೀಂತ. ಈ ದಾಮುಗೆ ಮಾಡ್ಲಿಕ್ಕೆ ಬೇರೆ ಕೆಲ್ಸ ಇಲ್ಲ. ದಿನಕ್ಕೊಂದು ರೈಲು ಬಿಡ್ತಾನೆ. ಇದು ಸಾ ಹಾಗೇ ಅಂತ ಎಣಿಸಿರ್ತೀರಿ. ಆದ್ರೆ ನಾನು ಹೇಳುದು ದೇವರ್ನಜ ಸತ್ಯ ಮಾಮ್. ಬಿಡಿಸಿ ಹೇಳ್ತೇನೆ ಕೇಳಿ. ನಮ್ಮ ಚಿಕನ್ ಸ್ಟಾಲ್ ಮಹಮದ್ ಕಾಕ ಇದ್ರಲ್ಲ, ಅವರ ಮಗ ರಫೀಕ್ ನಮ್ಮೂರಲ್ಲಿ ಅಪಾರ್ಟ್ ಮೆಂಟ್ ಕಟ್ತಾನಂತೆ. ಅಪ್ಪ ಅಮ್ಮ ಏಕ್ಸಿಡೆಂಟಲ್ಲಿ ಸತ್ತ ಮೇಲೆ ಊರು ಬಿಟ್ಟು ಹೋದ ಅವ ಏಳು ವರ್ಷ ದುಬೈಲಿದ್ದ. ಒಳ್ಳೇ ದುಡ್ಡು ಮಾಡಿದಾನಂತೆ. ಊರಿಗೆ ಬಂದು ತಿಂಗಳಾಯ್ತು, ನಮ್ಮ ಶಾಲೆ ಉಂಟಲ್ಲ, ಅದ್ರ ಪಕ್ಕದಲ್ಲಿ ಇದ್ದ ಡಿಸೋಜ ಪೊರ್ಬುಗಳ ಒಂದೆಕರೆ ಜಾಗ ತಗೊಂಡಿದ್ದಾನೆ. ಅಲ್ಲಿ ಒಂದು ದೊಡ್ಡ ಅಪಾರ್ಟ್ ಮೆಂಟ್ ಕಟ್ತಾನಂತೆ. ಹತ್ತು ಮಾಳಿಗೆದ್ದು, ಇಪ್ಪತ್ತೋ ಮೂವತ್ತೋ ಮನೆ ಇರ್ತದಂತೆ. ನಂಗೆ ಈಗ ಬೆಳಿಗ್ಗೆ ಬೆಳಿಗ್ಗೆ ದೇವಸ್ಥಾನದಲ್ಲಿ ರಫೀಕನ ದೋಸ್ತಿ ತಿಲಕ ಸಿಕ್ಕಿದ್ದ, ಅವ್ನೇ ಇದನ್ನೆಲ್ಲ ಹೇಳಿದ್ದು. ಕೇಳಿ ಮಂಡೆ ಬೆಚ್ಚ ಆಗಿದೆ ಮಾರ್ರೆ. ಅದಕ್ಕೆ ಬೆಳಗ್ಗೆ ಎದ್ದು ಪಸ್ಟು ನಿಮ್ಮಲ್ಲಿಗೇ ಬಂದದ್ದು ನಾನು” ಎಂದು ಮಾತು ನಿಲ್ಲಿಸಿದ ದಾಮು, ಕಿಣಿ ಮಾಮ್ ಏನ್ ಹೇಳಿಯಾರು ಎಂದು ಅವರ ಮುಖವನ್ನೇ ನೋಡುತ್ತಿದ್ದ. ಆದರೆ ಅವರ ಮುಖದಲ್ಲಿ, ಯಾವ ಬದಲಾವಣೆಯೂ ಕಾಣಲಿಲ್ಲ. ಸ್ವಭಾವತಃ ಭಯಂಕರ ಸ್ಥಿತಪ್ರಜ್ಞರಾಗಿರುವ ಎಪ್ಪತ್ತು ವರ್ಷದ ಕಿಣಿ, ಪಕ್ಕದಲ್ಲೇ ಬಾಂಬು ಬಿದ್ದರೂ ತಮ್ಮ ಮುಖಚರ್ಯೆಯನ್ನ ಬದಲಿಸುವುದು ಅನುಮಾನವೇ. ಅದರಲ್ಲೂ,ಪಂಚಾಯ್ತು ಮೆಂಬರಾದರೂ ಎಂ.ಎಲ್.ಎ ತರ ವರ್ತಿಸುವ, ಕಡ್ಡಿಯನ್ನ ಗುಡ್ಡ ಮಾಡುವ ದಾಮುವಿನ ಮಾತಿಗೆ ಬೈಹುಲ್ಲು ಹಾಕುದು ಅಷ್ಟರಲ್ಲೇ ಇತ್ತು. ಹಾಗಾಗೇ “ಮಾಡಿದ್ರೆ ಮಾಡ್ಲಿ ಮಾರಾಯಾ,ಅದ್ರಲ್ಲಿ ಮಂಡೆಬೆಚ್ಚ ಆಗುದೆಂತ ಉಂಟು” ಎಂದು ನೀರಸವಾಗಿ ಉತ್ತರಿಸಿ ಕೂತರು. ದಾಮು, “ಎಂತ ತಲೆಬಿಸಿ ಅಂತ ಈಗ ಗೊತ್ತಾಗುದಿಲ್ಲ, ನೋಡ್ತಾ ಇರಿ” ಎಂದು ದುಡ್ಡನ್ನ ಕುಕ್ಕಿ, ಅಲ್ಲಿಂದ ಎದ್ದು ಹೋದ. ದಾಮು ಹೇಳುವ ಇಂತಹ ಎಷ್ಟೋ ವಿಷಯಗಳು, ಆಮೇಲಷ್ಟೇ ಸತ್ಯ ಎಂದು ಗೊತ್ತಾಗುತ್ತಿದ್ದವು. ಈ ಪ್ರಕರಣದಲ್ಲೂ ಹಾಗೇ ಆಯ್ತು.
ಸಂಜೆಯ ಹೊತ್ತಿಗೆ ಗೋಳಿಬೈಲಿನಲ್ಲಿ ರಫೀಕ ಅಪಾರ್ಟ್ ಮೆಂಟ್ ಕಟ್ಟುತ್ತಾನಂತೆ ಎನ್ನುವ ಸುದ್ದಿ ಪ್ರಚಂಡವಾಗಿ ಹಬ್ಬಿತು. ಜನವರಿಯ ಹದಾ ಸೆಕೆಯಲ್ಲೂ ಸುಬ್ಬಣ್ಣನ ಶ್ರೀದೇವಿ ಹೋಟೆಲಿನ ಗೋಳಿಬಜೆಗಳು ಕೊಂಚ ಹೆಚ್ಚಾಗಿಯೇ ಖರ್ಚಾದವು. ನಲ್ವತ್ತು ಫ್ಲೋರಿದ್ದು ಬಿಲ್ಡಿಂಗ್ ಕಟ್ತಾನಂತೆ, ಒಂದು ಮನೆಗೆ ಒಂದು ಕೋಟಿಯಂತೆ ಎಂಬೆಲ್ಲ ಮಾತುಗಳಿಂದ ತೊಡಗಿ, “ಎಂತ ಇಲ್ಲ ಅವ ಸ್ವಂತಕ್ಕೆ ಮನೆ ಕಟ್ಟುದಂತೆ” ಎಂಬೆಲ್ಲ ಗಾಳಿಮಾತುಗಳು ಊರ ದಾರಿಗಳ ತುಂಬ ತೇಲಾಡಿದವು. ಮಂಗಳೂರಿನಿಂದ ಕೇವಲ ಇಪ್ಪತ್ತು ಕಿಲೋಮೀಟರು ದೂರ ಇರುವ ಗೋಳಿಬೈಲು ಎನ್ನುವ ಅತ್ತ ಹಳ್ಳಿಯೂ ಅಲ್ಲದ, ಇತ್ತ ಪೇಟೆಯೂ ಅಲ್ಲದ ಕಸಿ ಮಾಡಿದ ಊರು. ಮಂಗ್ಳೂರನ್ನ ಎಲ್ಲದಕ್ಕೂ ನಂಬಿಕೊಂಡಿರುವ ಈ ಊರಿನ ಮಂದಿಗೆ ಅಪಾರ್ಟ್ ಮೆಂಟೆಂಬುದು ಹೊಸ ಸಂಗತಿಯಂತೂ ಆಗಿರಲಿಲ್ಲ. ದಿನಾ ಕುಡ್ಲ ಪೇಟೆಗೆ ನೂರರಲ್ಲಿ ಐವತ್ತು ಜನ ಹೋಗಿ ಬರುವವರೇ. ಅಲ್ಲಿನ ನಭದೆತ್ತರದ ಪೆಟ್ಟಿಗೆ ಪೆಟ್ಟಿಗೆ ಮನೆಗಳನ್ನ ಬಹುತೇಕ ಎಲ್ಲ ಕಂಡವರೇ. ಬೇರುಗಳನ್ನ ಇಲ್ಲೇ ಬಿಟ್ಟುಕೊಂಡು ಬೊಂಬಾಯಿ ಬೆಂಗಳೂರಲ್ಲಿ ರೆಂಬೆಕೊಂಬೆ ಚಾಚಿಕೊಂಡಿರುವ ಮಕ್ಕಳ ಮನೆಗಳಲ್ಲಿ ಇದ್ದು ಬಂದವರಂತೂ ಹಲವರಿದ್ದಾರೆ. ಆದರೆ ತಮ್ಮ ಊರಲ್ಲೇ ಯಾರೋ ಅಪಾರ್ಟ್ ಮೆಂಟ್ ಮಾಡುತ್ತೇನೆ ಎಂದಾಗ ಊರು ಸಣ್ಣಗೆ ದಂಗಾದ್ದು ಹೌದು. ಹೋಟೆಲಿನ ಸುಬ್ಬಣ್ಣ ಅಂತೂ, “ಈ ಊರಲ್ಲಿ ಯಾವ ಅಂಡೆದುರ್ಸು ಲಕ್ಷ ಲಕ್ಷ ಖರ್ಚು ಮಾಡಿ ಮನೆ ತೆಕೊಳ್ತಾನೆ? ಇದ್ದ ಮನೆಯ ಒಡೆದ ಹಂಚು ಹಾಕಿಸ್ಲಿಕ್ಕೆ ಗತಿ ಇಲ್ಲದೆ ಮಳೆ ಬಂದರೆ ಒಳಗೆ ತಪ್ಪಲೆ ಇಡುವ ಜನ. ನೇಜಿ ಹಾಕಿದ್ರೆ ನೆಡುವ ಹೆಣ್ಣಾಳಿಗೆ ತಲೆಗೆ ನೂರು ನೂರೈವತ್ತು ಕೊಡ್ಬೇಕು ಅಂತ ಗದ್ದೆಯನ್ನು ಬಿತ್ತುವ ಕಂಜೂಸುಗಳು. ಅದೆಲ್ಲ ಸಾಯ್ಲಿ, ನನ್ನ ಒಟೆಲಿಗೆ ಬಂದು, ಚಾ ತಿಂಡಿ ತಿಂದು ಲೆಕ್ಕ ಪುಸ್ತಕದಲ್ಲಿ ಬರೆಸಿ ನೂರಿನ್ನೂರು ರುಪಾಯಿ ಕೊಡ್ಲಿಕಾಗದೇ ತಲೆ ತಪ್ಪಿಸಿಕೊಂಡು ಓಡಾಡುವ ದರ್ಬೇಸಿಗಳು ಎಷ್ಟು ಜನ ಬೇಕು? ಅಂತಾದ್ರಲ್ಲಿ ಇಲ್ಲಿ ಅವ ಅಪಾರ್ಟ್ ಮೆಂಟು ಮಾಡುದಂತೆ.. ಮಂಗ್ಳೂರಲ್ಲಾದ್ರೆ ಹೌದು, ಅಲ್ಲಿ ಜಾಗ ಇಲ್ಲ. ಈ ಊರಲ್ಲಿ ಎಲ್ಲರತ್ರ ಎಕರೆಗಟ್ಲೆ ಜಾಗ ಉಂಟು, ಗದ್ದೆ ತೋಟ ಉಂಟು. ಗಮ್ಮತ್ತಲ್ಲಿ ಇರುವವರು ಬಂದು ಗೂಡಲ್ಲಿ ಕುತ್ಕೊಳ್ಳಿಕ್ಕೆ ಉಂಟಾ? ಪಾಪ, ಅವ ಮಾಡಿಟ್ಟ ದುಡ್ಡು ಲಗಾಡಿ ತೆಗ್ಯುವ ಅಂತಲೇ ಇಲ್ಲಿಗೆ ಬಂದ ಹಾಗೆ ಉಂಟು. ನಂಗೆ ಅವ್ನ ಪರಿಚಯ ಸಮಾ ಇಲ್ಲ. ಯಾರಾದ್ರೂ ಗೊತ್ತಿದ್ದವ್ರು ಸ್ವಲ್ಪ ಹೇಳಿ ಮಾರ್ರೆ”  ಎಂದು ಹೇಳಿ ದೋಸೆ ಮಗುಚಿ ಹಾಕಿದ್ದರು.
ಗೊತ್ತಿದ್ದವರು ತಿಳಿ ಹೇಳುವ ಸ್ಥಿತಿಯೇ ಬರಲಿಲ್ಲ. ಮಾರನೇ ದಿನ ಖುದ್ದು ರಫೀಕನೇ ಊರಲ್ಲಿ ಪ್ರತ್ಯಕ್ಷನಾಗಿ ಹಬ್ಬಿಕೊಂಡಿದ್ದ ಸುದ್ದಿಗೆ ಅಧಿಕೃತವಾಗಿ ಸೀಲು ಹೊಡೆದ. ಮಿರಿ ಮಿರಿ ಮಿಂಚುವ ಬಿಳೀ ಕಾರಲ್ಲಿ ಬಂದವನು, ಸುಬ್ಬಣ್ಣನ ಹೋಟೇಲಲ್ಲೇ ಕೂತು ಮಾತಾಡುತ್ತ, ಅಪಾರ್ಟ್ ಮೆಂಟ್ ಕಟ್ಟಿಸುತ್ತಿದ್ದೇನೆ ಅನ್ನುವುದನ್ನ ಹೇಳಿದ. ಚಾ ಕುಡಿದು ಸಾದಾ ದೋಸೆ ತಿಂದು ತಾನೇನು ಮಾಡುತ್ತಿದ್ದೇನೆ ಎನ್ನುವುದನ್ನ ವಿವರಿಸಿಯೂ ಹೋದ. ಆವತ್ತಿಂದ ಆ ಹೋಟೆಲು, ರಫೀಕನ ಅಪಾರ್ಟ್ಮೆಂಟಿನ ಪ್ರಚಾರ ಕಚೇರಿಯೂ ಆಗಿ ಬದಲಾಯಿತು. ಹಿಂದಿನ ದಿನವಷ್ಟೇ ಅವನ ಮಾನಸಿಕ ಸ್ಥಿತಿ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದ ಸುಬ್ಬಣ್ಣ, ತಾವೇ ಖುದ್ದು ಬಂದವರಿಗೆಲ್ಲ ಅದರ ವಿಶೇಷತೆಗಳನ್ನ ವಿವರಿಸಲು ಶುರು ಮಾಡಿದ್ದರು. ಐದು ಮಹಡಿಯ ಬಿಲ್ಡಿಂಗು,ಒಂದು ಫ್ಲೋರಿಗೆ ನಾಲ್ಕರ ಹಾಗೆ ಒಟ್ಟು ೨೦ ಮನೆಗಳು, ಮುಂದೆ ಗಾರ್ಡನು, ನೆಲಮಾಳಿಗೆಯಲ್ಲಿ ಪಾರ್ಕಿಂಗು ಹಿಂದೆ ಸ್ವಿಮ್ಮಿಂಗ್ ಪೂಲು, ಲಿಫ್ಟು, ಬ್ಯಾಡ್ಮಿಂಟನ್ ಕೋರ್ಟು ಹೀಗೆ ಥರಹೇವಾರಿ ಸೌಲಭ್ಯಗಳ ಬಗ್ಗೆ ಗುಣಗಾನ ಆರಂಭಿಸಿದ್ದರು. ಮುಂದಿನ ವಾರವೇ ಕೆಲಸ ಆರಂಭಗೊಂಡು ಎಂಟರಿಂದ ಹತ್ತು ತಿಂಗಳ ಒಳಗೇ ಅಪಾರ್ಟ್ ಮೆಂಟು ವಾಸಕ್ಕೆ ಸಿದ್ಧವಾಗುತ್ತದೆಯಂತೆ ಎಂಬ ಬ್ರೇಕಿಂಗ್ ನ್ಯೂಸು ಕೂಡ ಎಲ್ಲೆಡೆಗೆ ಹಬ್ಬಿತು. ಎಲ್ಲ ಮುಗಿದ ಮೇಲೆ ಸುಬ್ಬಣ್ಣ ಹೇಳುತ್ತಿದ್ದದ್ದು ರೇಟಿನ ವಿಷಯ. ಒಂದು ಮನೆಗೆ ೧೬ ಲಕ್ಷ ರೇಟು ಫಿಕ್ಸು ಮಾಡಿದ್ದು, ಅದು ಆರಂಭಿಕ ಆಫರಂತೆ, ಆಮೇಲಾದರೆ ೧೮ರಿಂದ ೨೦ ಲಕ್ಷ ಕೊಡಬೇಕು ಎನ್ನುವ ಉಪಸಂಹಾರದೊಂದಿಗೆ ಮಾತು ಮುಗಿಯುತ್ತಿತ್ತು. ಯಾವಾಗ ದುಡ್ಡಿನ ಸುದ್ದಿ ಬಂತೋ, ಆವಾಗ ಕಣ್ಣಗಲಿಸಿ ಕೇಳುತ್ತಿದ್ದವರ ಮುಖ ಚಪ್ಪೆ ಆಗಿ, ಅಷ್ಟಾದರೆ ಕಷ್ಟ ಅಂತ ಹೇಳಿ ಎದ್ದು ಹೋಗುತ್ತಿದ್ದರು. ಸುಬ್ಬಣ್ಣ ಮತ್ತೆ, “ನಾನು ಆವತ್ತೇ ಹೇಳಿದ್ದಲ್ವ? ಇದೆಲ್ಲ ಆಗುದಿಲ್ಲ ಮಾರ್ರೆ” ಎಂದು ಮೂಲೆಯಲ್ಲಿ ಚಾ ಹೀರುತ್ತ ಕುಳಿತವರಿಗೆ ಹೇಳುತ್ತ ತಮಗೆ ತಾವು ಸಮಾಧಾನ ಮಾಡಿಕೊಳ್ಳುತ್ತಿದ್ದರು. 
ವಾರದೊಳಗೆ ರಫೀಕ್ ಅಪಾರ್ಟ್ ಮೆಂಟ್ ಕೆಲ್ಸ ಶುರು ಮಾಡಿಸಿಯೇ ಬಿಟ್ಟ. ಅದಾದ ಮಾರನೇ ದಿನವೇ ಗೋಳಿಬೈಲಿನ ತುಂಬ ಅಪಾರ್ಟ್ ಮೆಂಟಿನ ಪ್ಯಾಂಪ್ಲೆಟ್ಟುಗಳು ಹರಿದಾಡಿದವು. “ಮಧ್ಯಮ ವರ್ಗದ ಜನತೆಗೆ ವರದಾನ, ನ್ಯೂ ಲೈಫ್ ಅಪಾರ್ಟ್ ಮೆಂಟ್” ಎಂದು ದಪ್ಪ ಅಕ್ಷರಗಳಲ್ಲಿ ಮುದ್ರಿತ ಕರಪತ್ರಗಳು ಪೇಪರುಗಳಲ್ಲಿ ಕೂತು ಮನೆ ಮನೆ ತಲುಪಿದವು. ಮೊದಲಿಗೆ ಐದು ಲಕ್ಷ ಅಡ್ವಾನ್ಸ್ ಕೊಟ್ಟರೆ ಸಾಕು, ಆಮೇಲೆ ಬ್ಯಾಂಕು ಲೋನು ಸಿಕ್ಕಿದ ಮೇಲೆ ದುಡ್ಡು ಕೊಟ್ಟರೆ ಸಾಕು, ಲೋನು ಸುಲಭಲ್ಲಿ ಸಿಗುತ್ತದೆ. ನಂತರ ಕಂತು ಕಟ್ಟಿದರಾಯ್ತು ಎಂಬಿತ್ಯಾದಿ ವಿವರಗಳು ಅದರಲ್ಲಿತ್ತು. ಇನ್ನೂ ಮನೆಯನ್ನೇ ನೋಡದೇ, ಅದು ಹೇಗಿರುತ್ತದೆ ಎಂದು ಕೂಡಾ ಗೊತ್ತಿಲ್ಲದೇ ದುಡ್ಡು ಕೊಡುವುದು ಹೇಗೆ ಎಂಬುದರಿಂದ ತೊಡಗಿ ರಫೀಕ ಕೈಕೊಟ್ಟು ಮತ್ತೆ ದುಬಾಯಿಗೆ ಓಡಿ ಹೋದರೆ ಎಂತ ಮಾಡುದು, ಭೂಕಂಪ ಆಗಿ ಬಿದ್ರೆ ಪರಿಹಾರ ಸಿಗ್ತದಾ? ಎಂಬೆಲ್ಲ ವಿವಿಧ ಆಯಾಮಗಳ ಚರ್ಚೆಗಳು ಬಾವಿಕಟ್ಟೆಯಲ್ಲಿ ಸಂತೆ ಮಾರ್ಕೆಟಿನಲ್ಲಿ ಸೇಂದಿ ಅಂಗಡಿಯಲ್ಲಿ ಹಾಲು ಡೈರಿಯಲ್ಲಿ ನಡೆದವು. ಒಬ್ಬೇ ಒಬ್ಬನೂ ಮನೆ ತೆಗೆದುಕೊಳ್ಳಲು ಮುಂದೆ ಬರಲಿಲ್ಲ. 
ಕರಪತ್ರ ಹೊರಟು ನಾಲ್ಕನೇ ದಿನಕ್ಕೆ ಗೊಂಬೆ ಗೋವಿಂದ ನ್ಯೂ ಲೈಫಲ್ಲಿ ಮನೆ ತಗೊಂಡನಂತೆ ಎಂಬ ವಿಚಾರ ಹೊರಬಿತ್ತು. ಗೊಂಬೆ ಗೋವಿಂದ, ಜಾತ್ರೆ ನಾಟಕ ಕೋಲ ನೇಮ ಸ್ಕೂಲ್ ಡೇ ಯಕ್ಷಗಾನ ಭರತನಾಟ್ಯ ಹೀಗೆ ಎಂಥದೇ ಮನರಂಜನಾ ಪ್ರಕಾರ ಇರಲಿ, ಅದಕ್ಕೆಲ್ಲ ಡ್ರೆಸ್ಸು-ಸಲಕರಣೆ ಸಪ್ಲೈ ಮಾಡುವ ಜನ. ಮೆರವಣಿಗೆಗಳಲ್ಲಿ ಕುಣಿಯುವ ಗೊಂಬೆ ವೇಷ ಬಾಡಿಗೆಗೆ ಕೊಡಲು ಶುರು ಮಾಡಿದ್ದಕ್ಕೆ ಅವನಿಗೆ ಗೊಂಬೆ ಗೋವಿಂದ ಎಂದೇ ಊರ ಮಂದಿ ಅಡ್ಡ ಹೆಸರಿಟ್ಟಿದ್ದರು. ಅವ ಐದು ಲಕ್ಷ ರಫೀಕನ ಕೈಗೆ ಇಟ್ಟು, ಮೊದಲ ಫ್ಲೋರಿನಲ್ಲೇ ಒಂದು ಮನೆ ಬುಕ್ ಮಾಡಿಯಾಗಿದೆ ಎಂಬ ಸುದ್ದಿಯಿಂದಾಗಿ, “ಎಂತ ಅವಸ್ಥೆ, ಅವ ಅಷ್ಟು ದುಡ್ಡು ಮಾಡಿದ್ದು ಗೊತ್ತೇ ಆಗ್ಲಿಲ್ಲ ನೋಡಿ” ಎಂದು ತೀರಾ ಕಿಣಿ ಮಾಮ್ ನಂತಾ ಕಿಣಿ ಮಾಮೇ ಹೇಳಿದರು. ಇದಾಗಿ ಮಾರನೇ ದಿನ ಮೇರಿ ಟೀಚರ್ ಕೂಡ ಮನೆ ತೆಕೊಂಡ್ರಂತೆ ಎಂಬ ಸುದ್ದಿ ಬಂದು ಸುಬ್ಬಣ್ಣನ ಎಣ್ಣೆ ಬಾಣಲೆಗೆ ಪೋಡಿಯ ಜೊತೆಗೆ ಬಿದ್ದು ಮೇಲೆ ಏಳುವಷ್ಟರಲ್ಲಿ ರಿಟೈರ್ಡ್ ಬ್ಯಾಂಕ್ ಉದ್ಯೋಗಿ ಸುಧಾಕರ ಶೆಟ್ರು ಹೋಗಿ ಅಪಾರ್ಟ್ ಮೆಂಟ್ ನೋಡಿ ಬಂದಿದ್ದಾರಂತೆ ಎಂಬ ಬಿಸಿಬಿಸಿ ವಿಷಯವೂ ಗೊತ್ತಾಯಿತು. ಅವರು ಊರಿನ ಗಣ್ಯರಲ್ಲಿ ಒಬ್ಬರು. ಗೋಳಿಬೈಲಿನ ಗುತ್ತಿನ ಮನೆ ಅವರದು. ಅವರನ್ನ ಕೇಳಿದ್ದಕ್ಕೆ, “ನಾನು ಹೋಗಿ ನೋಡಿ ಬಂದದ್ದು ಹೌದು, ನಾವು ಮೂರು ಜನ ಇರುದಲ್ವಾ? ನನ್ನ ಅಮ್ಮನಿಗೆ ವರ್ಷ ತೊಂಬತ್ತು ಆಗ್ತಾ ಬಂತು. ನನ್ನ ಹೆಂಡತಿಗೂ ಕೂಡುದಿಲ್ಲ. ಮಗಳು ಗಂಡ ಮತ್ತೆ ಮಗನೊಟ್ಟಿಗೆ ನಾಸಿಕ್ ಅಲ್ಲಿ ಇರುದು, ಅವ್ಳೇನು ಇನ್ನು ಬರುದಿಲ್ಲ ಈ ಕಡೆಗೆ. ಕೆಲಸಕ್ಕೆ ಜನ ಸಿಗುದಿಲ್ಲ. ನಮ್ಗೂ ವಯಸ್ಸಾಯ್ತಲ್ಲ? ನಾವು ಸತ್ರೆ ಸುದ್ದಿ ಮುಟ್ಟಿಸ್ಲಿಕ್ಕಾದ್ರೂ ಅಕ್ಕ ಪಕ್ಕದಲ್ಲಿ ಜನ ಇರ್ತಾರಲ್ಲ? ಮನೆ ಸ್ವಲ್ಪ ಚಿಕ್ಕದಾಯ್ತಂತ ಕಾಣ್ತದೆ. ಪಡಸಾಲೆ ಜಗಲಿ ಅಡುಗೆಮನೆ ಉಪ್ಪರಿಗೆ ಅಂತ ಓಡಾಡಿಕೊಂಡಿದ್ದವನಿಗೆ ಇದು ಕಷ್ಟ. ಅಮ್ಮನನ್ನ ಒಪ್ಪಿಸುದು ಹೇಗೆ ಅಂತಲೂ ಗೊತ್ತಿಲ್ಲ.ಆದ್ರೆ ದಿನ ಹೋದ ಹಾಗೆ ಇದೇ ಸುಖ ಅಂತ ಕಾಣ್ತದೆ. ಗುತ್ತಿನ ಮನೆ ಅಂತ ಕೂತರೆ ಆಮೇಲೆ ಬದುಕುವುದು ಹೇಗೆ” ಎಂದು ಹೇಳಿದ್ದು ಬಹಳಷ್ಟು ಮಂದಿಯಲ್ಲಿ ಹೊಸದೊಂದು ಯೋಚನೆಯನ್ನಂತೂ ಹುಟ್ಟು ಹಾಕಿದ್ದು ಸುಳ್ಳಲ್ಲ. 
ಆದರೆ ಮನೆ ಕೊಳ್ಳಲಿಕ್ಕಾಗದೇ ಇದ್ದವರು, ಅದರ ಅವಶ್ಯಕತೆ ಇಲ್ಲದವರು ರಫೀಕನನ್ನು ಹಳಿದೇ ಹಳಿದರು. “ಊರಿನ ಹಳ್ಳದಲ್ಲೇ ನಮ್ಮ ಹುಡುಗರು ಸ್ನಾನ ಮಾಡ್ಲಿಕ್ಕೆ ಹೋಗುದನ್ನ ಬಿಟ್ಟಿದಾರೆ, ಇನ್ನು ಅಲ್ಲಿ ಸ್ವಿಮ್ಮಿಂಗ್ ಪೂಲು ಯಾವ ಕರ್ಮಕ್ಕೆ?” ಎಂದು ಗ್ಯಾರೇಜಿನ ಶೇಖರ ಹೇಳಿದ್ದಕ್ಕೆ, “ಹೌದಪ್ಪ, ಕೆಳಗಿನ ಮನೆಯಲ್ಲಿ ಮೀನು ಕಾಯಿಸಿದ್ರೆ ಮೇಲ್ಗಡೆ ಮನೆಯವರಿಗೆ ಸಾ ವಾಸನೆ ಬರ್ತದೆ, ಇನ್ನು ಆ ಗೊಂಬೆ ಗೋವಿಂದನಿಗೆ ಮೊದಲೇ ದೊಂಡೆ ದೊಡ್ಡದು, ಅವ ಹೆಂಡ್ತಿಗೆ ಜೋರು ಮಾಡಿದ್ರೆ ಆಚೆ ಮನೆಯ ಮೇರಿ ಟೀಚರಿಗೆ ಕೇಳುದಿಲ್ವಾ” ಎಂದ ನಕ್ಕಿದ್ದು ದೇವಸ್ಥಾನದ ಮೊಕ್ತೇಸರ್ರ ಮಗ ಜನಾರ್ಧನ. ಶಾಲೆ ಗ್ರೌಂಡಲ್ಲೇ ಸಂಜೆ ಆಡ್ಲಿಕ್ಕೆ ಜನ ಇಲ್ಲದಾಗ ಅಲ್ಲಿ ಬ್ಯಾಡ್ಮಿಂಟನ್ ಕೋರ್ಟ್ ಯಾವ ಪುರುಷಾರ್ಥಕ್ಕೆ, ಇನ್ನು ಅಷ್ಟು ಮನೆಗೆ ನೀರು ಕೊಡುವ ಬೋರ್ ವೆಲ್ಲು ಕೈ ಕೊಟ್ರೆ ಎಂತ ಕತೆ? ಪೇಪರಲ್ಲಿ ಮೈ ಒರೆಸಿಕೊಳ್ಳುದಾ? ಎಂದೆಲ್ಲ ಕೇಳಿದವರೂ ಇದ್ದರು. 
ಯಾರು ಏನೇ ಅಂದರೂ, ನೋಡ ನೋಡುತ್ತಿದ್ದ ಹಾಗೆ ಒಟ್ಟು ಹದಿನೈದು ಮಂದಿ ನ್ಯೂ ಲೈಫ್ ನಲ್ಲಿ ಮನೆ ಕೊಳ್ಳಲು ಮುಂಗಡ ನೀಡಿದ್ದರು. ಬ್ಯಾಂಕಲ್ಲಿ ಫಿಕ್ಸೆಡಾಗಿದ್ದ ಬಹುಮಂದಿಯ ದುಡ್ಡು, ಹೊರ ಬಂದು ಚಲನಶೀಲವಾಯಿತು. ಮಂಗಳೂರಿಗೆ ಹೋಲಿಸಿದ್ರೆ ಗೋಳಿಬೈಲಿನಲ್ಲಿ ಅರ್ಧ ರೇಟಿಗೆ ಮನೆ ಸಿಕ್ಕಿದ ಹಾಗಾಯ್ತು ಎನ್ನುವ ಸುದ್ದಿಯೂ ಜೊತೆ ಜೊತೆಗೇ ಪ್ರಚಾರ ಪಡೆದುಕೊಂಡಿತು. ತಿಂಗಳೊಪ್ಪತ್ತಿಗೆ ಮೊದಲ ಮಹಡಿ ಮುಗಿದು, ಎರಡನೇ ಫ್ಲೋರು ಕಟ್ಟುವ ಕೆಲಸ ಶುರುವಾಯಿತು. ಈಗ ಅಪಾರ್ಟ್ ಮೆಂಟ್ ನೋಡಲು ಬಂದವರಿಗೆ ರಫೀಕನೇ ಖುದ್ದು ಮೊದಲ ಮಹಡಿಯ ಮನೆಗಳನ್ನ ತೋರಿಸಿ ರೂಪುರೇಷೆಗಳನ್ನು ವಿವರಿಸುತ್ತಿದ್ದ. ವಾಸ್ತುವಿನಿಂದ ಹಿಡಿದು ಇಂಟೀರಿಯರ್ ಡಿಸೈನ್ ವರೆಗೆ ಎಲ್ಲ ಅನುಮಾನಗಳನ್ನೂ ಪರಿಹರಿಸುತ್ತಿದ್ದ. ಮನೆ ಬೇಕಿಲ್ಲದೇ ಇದ್ದರೂ, ರಫೀಕ ಏನು ಮಾಡಿದ್ದಾನೆ ನೋಡುವ ಎಂದು ಬರುವವರ ಸಂಖ್ಯೆ ಏನು ಕಡಿಮೆ ಇರಲಿಲ್ಲ. ಅದಕ್ಕೆ ಅವನೇನೂ ಬೇಜಾರು ಮಾಡಿಕೊಳ್ಳಲಿಲ್ಲ. ಊರಿನ ಅಂಗಡಿ ಹೋಟೇಲುಗಳಲ್ಲಿ ಬಿಲ್ಡಿಂಗು ಕಟ್ಟುವ ಕೆಲಸದವರ ಅಕೌಂಟು ಕೂಡ ಶುರುವಾಗಿತ್ತು. ರಫೀಕನ ನ್ಯೂಲೈಪು” ಎಂಬ ಪದಪುಂಜ ಊರಿನ ಲೋಕಲ್ ನುಡಿಗಟ್ಟಲ್ಲಿ ಸೇರಿಕೊಂಡಿತು. 
ದೇವಸ್ಥಾನದ ಅರ್ಚಕ ನಾರಾಯಣ ಭಟ್ಟರಿಗೂ ಯಾಕೆ ಒಂದು ಅಪಾರ್ಟ್ ಮೆಂಟು ತೆಕೊಳಬಾರದು ಎಂಬ ಯೋಚನೆ ಕಾಡುತ್ತಿತ್ತು. ಅವರದು ಕೂಡು ಕುಟುಂಬ. ಇಬ್ಬರು ತಮ್ಮಂದಿರು ಕೂಡ ಪೌರೋಹಿತ್ಯ ಮಾಡಿಕೊಂಡೇ ಇದ್ದವರು. ಮಕ್ಕಳಿಲ್ಲದ ಭಟ್ಟರು ಹತ್ತಿಪ್ಪತ್ತು ವರ್ಷಗಳಿಂದ ಒಂದಿಷ್ಟು ಇಡುಗಂಟು ಮಾಡಿಕೊಂಡಿದ್ದರು. ಸುಮ್ಮನೆ ನಿತ್ಯ ಮನೆಯಲ್ಲಿ ಮೂರೂ ಹೆಂಗಸರ ಕಿರಿಕಿರಿ ಕೇಳಿ ರೋಸಿ ಹೋಗಿದ್ದ ಅವರು ಮೆಲ್ಲನೆ ಒಂದು ರಾತ್ರಿ ವೀಳ್ಯದೆಲೆಗೆ ಸುಣ್ಣ ಹಚ್ಚುತ್ತ ಹೆಂಡತಿಗೆ ಯಾಕೆ ನಾವು ಬೇರೆ ಹೋಗಬಾರದು, ಇಲ್ಲಿ ಬೇಕಿದ್ದರೆ ತಮ್ಮಂದಿರೂ, ಅವರ ಹೆಂಡಿರೂ ಇರಲಿ. ನಾವು ನ್ಯೂಲೈಫಲ್ಲಿ ಮನೆ ತಗೊಂಡು ನೆಮ್ಮದಿಯಲ್ಲಿ ಇರುವ ಅಂದಿದ್ದಕ್ಕೆ, ಅವರ ಶಾರದೆಯೆಂಬ ಹೆಸರಿನ ಹೆಂಡತಿ ಚಾಮುಂಡಿಯೇ ಆಗಿಬಿಟ್ಟರು. “ಎಂತ ಅಂತ ಎಣಿಸಿದ್ದೀರಿ ನೀವು? ಮಂಡೆ ಸಮ ಉಂಟಾ? ಐವತ್ತು ವರ್ಷಕ್ಕೆ ಮೆದುಳು ಕಲಸಿ ಹೋಯ್ತಾ? ಆ ಶೂದ್ರರ ಒಟ್ಟಿಗೆಲ್ಲ ನಾವು ಹೇಗೆ ಇರ್ಲಿಕ್ಕಾಗ್ತದೆ? ಮಡಿಯಾ ಮೈಲಿಗೆಯಾ? ಕೋಳಿ,ಮೀನು ತಿನ್ನುವವರೊಟ್ಟಿಗೆ ನಾವು ಇರುದಾ? ಅಷ್ಟಕ್ಕು ನೀವು ಊರಿನ ಪುರೋಹಿತರು. ಮಾಲಿಂಗೇಶ್ವರನ ತಲೆಗೆ ನೀರು ಹಾಕುವವರು. ಕೆಲಸಕ್ಕೆ ಬರ್ತಿದ್ಲಲ್ಲ ಲಚುಮಿ, ಅವಳ ಮಕ್ಕಳು ಬೊಂಬಾಯಲ್ಲಿ ಇದ್ದಾರಲ್ಲ, ಅಮ್ಮನಿಗೆ ಅಂತ ಒಂದು ಮನೆ ತೆಕೊಂಡಿದಾರಂತೆ ಅಲ್ಲಿ. ನಮ್ಮ ಹಿತ್ತಿಲಲ್ಲಿ ಕೂತು ಚಾ ಕುಡೀತಿದ್ದ ಹೆಂಗಸಿನ ಒಟ್ಟಿಗೆ ಬದ್ಕುದಕಿಂತ ಹೊಳೆ ಹಾರಿ ಸಾಯ್ತೇನೆ ಬೇಕಿದ್ರೆ. ಓರಗಿತ್ತೀರ ಜೊತೆಗೆ ಗಲಾಟೆ ಮಾಡಿಕೊಂಡಾದ್ರೂ ಸೈಯೇ,  ಆ ಬ್ಯಾರಿಯ ಮನೆಯಲ್ಲಿ ಇರುವ ಗ್ರಹಚಾರ ಬೇಡ”  ಎಂದು ಭಟ್ಟರ ಭೂತ ಬಿಡಿಸಿದರು. ಹೆಂಡತಿಯನ್ನ ಹೇಗೆ ರಿಪೇರಿ ಮಾಡುವುದೆಂದು ತಲೆಕೆಡಿಸಿಕೊಳುತ್ತ ಭಟ್ಟರು ರಾತ್ರಿ ಕಳೆದರು.
ಸುಧಾಕರ ಶೆಟ್ರು ಮನೆ ತಗೊಳ್ಳುವ ನಿರ್ಧಾರ ಗಟ್ಟಿ ಮಾಡಿದ್ದರು. ರಫೀಕನಲ್ಲಿ ಹೋಗಿ ಸ್ವಲ್ಪ ದಿನ ವಾಯಿದೆ ಕೇಳಿಕೊಂಡು ಬಂದಿದ್ದೂ ಆಗಿತ್ತು. ಮೂರನೇ ಫ್ಲೋರಿನ ಮನೆಯನ್ನ ಬಾಯಿ ಮಾತಲ್ಲಿ ಕಾದಿರಿಸಿದ್ದರು. ಅವರ ಹೆಂಡತಿಯನ್ನು ಓಲೈಸಲು ಹೆಚ್ಚೇನೂ ಕಷ್ಟವಾಗಿರಲಿಲ್ಲ.  ಅಷ್ಟು ದೊಡ್ಡ ಗುತ್ತಿನ ಮನೆಯನ್ನು ಸಂಭಾಳಿಸುವುದಕ್ಕೆ ರತ್ನಕ್ಕನಿಗೆ ಸಾಕು ಸಾಕಾಗುತ್ತಿತ್ತು. ಕೆಲಸದವರಿಲ್ಲದೇ ತೆಂಗಿನ ತೋಟ ಹಾಳು ಬಿದ್ದಾಗಿತ್ತು. ಒಂದು ಕಾಲದಲ್ಲಿ ಕಂಬಳದ ಕೋಣಗಳನ್ನ ಹೊಂದಿದ್ದ ಮನೆಯ ಕೊಟ್ಟಿಗೆ, ಈಗ ಖಾಲಿಯಾಗಿತ್ತು. ಕೊನೆಯ ದನವನ್ನ ಮಾರುವಾಗಲೇ ಅವರಮ್ಮ ಸಕ್ಕುಶೆಡ್ತಿ ಅತ್ತು ಕರೆದು ರಣಾರಂಪ ಮಾಡಿದ್ದರು. ಈಗ ಗುತ್ತಿನ ಮನೆಯನ್ನೇ ಬಿಟ್ಟು ಹೋಗುತ್ತೇವೆ ಎನ್ನುವುದನ್ನ ಹೇಗೆ ತಿಳಿಸಿ ಹೇಳುವುದು ಎಂದು ಶೆಟ್ರು ನಾಲ್ಕೈದು ದಿನ ಪರದಾಡಿದರು. ಕೊನೆಗೊಂದು ದಿನ ಕೂರಿಸಿ ಮೆಲ್ಲ ವಿಷಯ ಹೇಳಿದರು. ಆ ಮುದಿಜೀವ ಕಂಗಾಲಾಗಿ ಹೋಗಿತ್ತು. ಕುಳಿತಲ್ಲೆ ಕಣ್ಣೀರು ಹಾಕಿ, ಅಯ್ಯೋ ಎಂಥ ಮಗನನ್ನು ಹೆತ್ತೆನಪ್ಪಾ ಎಂದು ಜೋರು ದನಿಯಲ್ಲಿ ಅರುವತ್ತೈದರ ಮಗನನ್ನ ಬೈದುಕೊಂಡಿತು. ಗುತ್ತಿನ ಗತ್ತು ಮುಗಿದು ವರುಷಗಳೇ ಆಗಿದೆ ಅನ್ನುವ ಸತ್ಯ ಹಿರಿಜೀವಕ್ಕೂ ಗೊತ್ತಿದ್ದದ್ದೇ. ಆದರೆ ದೈವದೇವರುಗಳನ್ನ, ನಾಗಬನವನ್ನ ತೊರೆದು ಹೋಗುವುದಕ್ಕೆ ಅವರು ಖಂಡಿತಾ ಸಿದ್ಧರಿರಲಿಲ್ಲ. ಕೊನೆಗೆ ಜಮೀನನ್ನು ಮಾರುವುದಿಲ್ಲ, ಆಗಾಗ ಬಂದು ನೋಡಿಕೊಂಡು ಹೋಗುವುದು, ದೈವದೇವರುಗಳ ವಾರ್ಷಿಕ ಕೋಲ ನೇಮ ತಂಬಿಲ ಇತ್ಯಾದಿ ಕಾರ್ಯಗಳನ್ನ ಇಲ್ಲಿಯೇ ನಡೆಸುವುದು ಎಂಬ ಕರಾರಿನ ಮೇಲೆ ಈ ಮನೆಯನ್ನ ಬಿಡುವುದಕ್ಕೆ ಒಪ್ಪಿಕೊಂಡರು. 
ಕೆಲವೇ ದಿನಗಳಲ್ಲಿ, ಬೇಕು ಎಂದರು ಕೂಡ ನ್ಯೂ ಲೈಟಿನಲ್ಲಿ ಒಂದು ಮನೆಯೂ ಖಾಲಿ ಉಳಿಯಲಿಲ್ಲ. ಹೋಟೇಲಿನ ಸುಬ್ಬಣ್ಣ ತಾನು ಕೂಡ ಮನೆ ತಕ್ಕೊಳ್ಳುವ ಪ್ಲಾನು ಮಾಡಿ, ರಫೀಕನ ಹತ್ತಿರ ಹೋಗಿದ್ದರೂ, ಇದ್ದ ಕೊನೇ ಮನೆಯನ್ನು ಹತ್ತೇ ನಿಮಿಷಕ್ಕೆ ಮುಂಚೆ ಶೀನ ಮೇಸ್ತ್ರಿ ಅಡ್ವಾನ್ಸು ಕೊಟ್ಟು ಬುಕ್ ಮಾಡಿದ್ದನ್ನು ಕೇಳಿ ಹೊಟ್ಟೆ ಹೊಟ್ಟೆ ಉರಿದುಕೊಂಡಿದ್ದರು. ರಫೀಕ ಹೇಳಿದ ಮಾತಿನಂತೆ ಹತ್ತು ತಿಂಗಳೊಳಗೆ ಅಪಾರ್ಟ್ ಮೆಂಟನ್ನ ಕಟ್ಟಿ ನಿಲ್ಲಿಸಿದ್ದ. ಹೋಗಿಬರುವವರೆಲ್ಲ ಕಣ್ಣೆತ್ತಿ ನೋಡಲೇಬೇಕೆಂಬ ಮಟ್ಟಿಗೆ ನ್ಯೂಲೈಫ್ ಮಿಂಚುತ್ತಿತ್ತು. ಅದರ ಟೆರೇಸಿನಲ್ಲಿ ನಿಂತು ನೋಡಿದರೆ ಇಡೀ ಗೋಳಿಬೈಲು ಚಂದ ಕಾಣ್ತದೆ, ಎಂಆರ್ ಪೀಎಲ್ಲಿನ ಲೈಟು ರಾತ್ರಿ ಹೊತ್ತು ಮಿನುಗುವುದು ಸೂಪರಾಗಿ ತೋರ್ತದೆ ಎಂಬುದನ್ನ ಒಂದಿಷ್ಟು ಮಂದಿ ಸಂಶೋಧಿಸಿದ್ದರು. ಅಲ್ಲಿನ ಸ್ವಿಮ್ಮಿಂಗ್ ಪೂಲು ಊರಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಯಿತು. 
ಮನೆಯ ಯಜಮಾನರುಗಳಿಗೆ ಕೀಯನ್ನು ಕೊಟ್ಟು ಹಸ್ತಾಂತರಿಸುವ ಸಾಂಕೇತಿಕ ಕಾರ್ಯಕ್ರಮಕ್ಕೆ ಒಂದು ದಿನ ನಿಗದಿಯೂ ಆಯಿತು. ಅಪಾರ್ಟ್ ಮೆಂಟಿಗೆ ದೊಡ್ಡದಾಗಿ ಬಂಗಾರ ಬಣ್ಣದಲ್ಲಿ , ಇಂಗ್ಲೀಷಿನಲ್ಲಿ ನ್ಯೂ ಲೈಫ್ ಎಂದು ಬರೆಸಲಾಗಿತ್ತು. ಉದ್ಘಾಟನೆ ದಿನ ಅದರ ಅಂಗಳಕ್ಕೆ ದೊಡ್ಡ ಶಾಮಿಯಾನ ಬಂತು. ಎಂಎಲ್ ಎ ಸಾಹೇಬರೂ ಬಂದರು. ಮನೆಯ ಮಾಲೀಕರುಗಳನ್ನು ಮೊದಲಿನ ಎರಡು ಸಾಲು ಮೂರು ಸಾಲುಗಳಲ್ಲೇ ಕೂರಿಸಲಾಗಿತ್ತು. ಅವರುಗಳಿಗೆ ಪಂಚಾಯತ್ ಪ್ರೆಸಿಡೆಂಟರು ಮತ್ತು ಎಂಎಲ್ಲೆ ಕೀ ವಿತರಿಸಿದರು. ಹೇಗೆ ನ್ಯೂಲೈಫ್ ಎಂಬ ವಸತಿ ಸಮುಚ್ಚಯ ಗೋಳಿಬೈಲಿನ ಜನರ ಆಶಾಕಿರಣ ಆಗಿದೆ ಎಂಬುದರ ಬಗ್ಗೆ ಅತಿಥಿಗಳು ಮಾತನಾಡಿದರು. ಬಂದವರಿಗೆಲ್ಲ ವಾಹನ ಪಾರ್ಕಿಂಗ್ ಗೆ ಅಂತ ಜಾಗ ಮಾಡಿದ್ದ ನೆಲಮಾಳಿಗೆಯಲ್ಲಿ ಊಟದ ವ್ಯವಸ್ಥೆಯನ್ನೂ ಮಾಡಿದ್ದು, ಆವತ್ತಿನ ಮಟ್ಟಿಗೆ ಸುಬ್ಬಣ್ಣ ನ ಹೋಟೆಲು ಬಂದಾಗಿತ್ತು. ಇಡೀ ಊರಿನ ಜನ ಅಪಾರ್ಟ್ ಮೆಂಟಿನ ಮನೆ ಮನೆಗಳನ್ನೂ ಒಳ ಹೊಕ್ಕು ಅಧ್ಯಯನ ಮಾಡಿದರು. ಲಚುಮಿ ನೇಜಿನಡಲು ತನ್ನ ಜೊತೆ ಬರುವ ಸ್ನೇಹಿತೆಯರಿಗೆ ಮನೆಯನ್ನ ತೋರಿಸಿ ತೋರಿಸಿ ಸಂತಸ ಪಟ್ಟಳು. ಒಳಗೆ ಟಾಯ್ಲೆಟ್ಟಿನಲ್ಲಿ ಫಾರಿನ್ನು ಶೈಲಿಯ ಕಮೋಡನ್ನ ಕಂಡ ಅವಳ ದೋಸ್ತಿ ಇಂದ್ರಕ್ಕ ಪಿಸಿಪಿಸಿ ನಗೆಯಾಡಿ, “ ಇದೆಂತ ಕರ್ಮ ಮಾರಾಯ್ತಿ, ಗುಡ್ಡೆಗೆ ಚೊಂಬು ತಗೊಂಡು ಹೋದ ನಿಂಗೆ ಇದೆಲ್ಲ ಸಮ ಆಗ್ತದ” ಎಂದಿದ್ದಳು. ಆದರೆ ಹಾಗೆ ಹೇಳುತ್ತಿರುವ ಅವಳ ಕಣ್ಣುಗಳಲ್ಲಿ ಮಿನುಗಿದ ಅಸೂಯೆಯನ್ನು ಲಚುಮಿ ಗಮನಿಸದೆ ಇರಲಿಲ್ಲ. ಗೊಂಬೆ ಗೋವಿಂದ ಮನೆಯ ಬಾಗಿಲಿನ ಪಕ್ಕಕ್ಕೆ, ಒಂದು ಬಣ್ಣದ ಮುಖವಾಡ ಕೂರಿಸಿದ್ದ. ಮೇರಿ ಟೀಚರ ಮಗ ಈ ಕಾರ್ಯಕ್ರಮಕ್ಕಂತ ರಿಯಾದ್ ನಿಂದ ಬಂದಿದ್ದರೆ ಲಚುಮಿಯ ಇಬ್ಬರು ಮಕ್ಕಳು ಬೊಂಬಾಯಿಂದ ಬಂದಿದ್ದರು. ಲಾದ್ರು ಪೊರ್ಬುಗಳೂ, ಶೀನ ಮೇಸ್ತ್ರಿಯೂ ಅಹಮ್ಮದು ಬ್ಯಾರಿ ಎಲ್ಲರೂ ಇದು ಅವರದೇ ಕಾರ್ಯಕ್ರಮ ಎನ್ನುವಂತೆ ಓಡಾಡುತ್ತಿದ್ದರು.  ಇಪ್ಪತ್ತಕ್ಕೆ ಇಪ್ಪತ್ತು ಮನೆಗಳ ಎಲ್ಲ ಬಲ್ಬು ಫ್ಯಾನು ಹಗಲೇ ಆದರೂ ಚಾಲೇ ಇತ್ತು.  ಬೆಳಗಿಂದ ಸಂಜೆ ತನಕ ಊರ ಮಕ್ಕಳು ಲಿಫ್ಟಿನ ಬಟನುಗಳನ್ನು ಒತ್ತಿ ಮೇಲೆ ಕೆಳಗೆ ಹೋಗಿ ಬಂದರು. 
ಗೋಳಿಬೈಲಿನಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದ ನಾರಾಯಣ ಶೆಟ್ಟರನ್ನು ಅಮೆರಿಕಕ್ಕೆ ಕರೆಸಿಕೊಂಡಿದ್ದ ಮಗ ಸಂಜೀವ, ಊರಲ್ಲಿ ಅಪಾರ್ಟ್ ಮೆಂಟ್ ಆದ ಸುದ್ದಿ ಕೇಳಿ, ರಫೀಕನ ಹತ್ರ ಈ-ಮೇಲಲ್ಲೇ ಎಲ್ಲ ವಿವರ ತರಿಸಿಕೊಂಡು, ಕೂತಲ್ಲೇ ಮನೆ ಖರೀದಿಸಿದ್ದ. ಆವತ್ತು ಅಪ್ಪ ಮಗ ಇಬ್ಬರೂ ಕೊಂಚ ತಡವಾಗಿ ಬ್ಯಾಗು ಸಮೇತ ಬಂದು ಗೋಳಿಬೈಲಿನಲ್ಲಿ ಇಳಿದರು. ಊರಿನ ಮಂದಿಯೆಲ್ಲ ಶೆಟ್ಟರನ್ನ ಮತ್ತೆ ಸ್ವಾಗತಿಸಿದರು. ಸಂಜೀವ ರಫೀಕನ ಹತ್ರ ಮಾತಾಡುತ್ತಾ, “ನೀನು ಈ ಅಪಾರ್ಟ್‌ಮೆಂಟ್ ಕಟ್ಟಿ ಭಾರೀ ಉಪಕಾರ ಮಾಡಿದೆ ಮಾರಾಯ. ಇಲ್ಲದಿದ್ರೆ ಮತ್ತೆ ನಾವು ಊರಿಗೆ ಬರುದೇ ಡೌಟಿತ್ತು. ಇಲ್ಲಿ ಅಪ್ಪ ಒಬ್ಬರನ್ನೇ ಬಿಟ್ಟು ಹೋಗ್ಲಿಕ್ಕೆ ನಂಗೆ ಮನಸ್ಸೇ ಇರ್ಲಿಲ್ಲ. ಹಾಗೆ ಅಲ್ಲಿಗೇ ಬನ್ನಿ ಅಂದಿದ್ದು. ಆದ್ರೆ ಅವ್ರಿಗೆ ಜೀವ ಇಲ್ಲಿಗೇ ಎಳೀತಾ ಇತ್ತು. ಗೋಲಿ ಸೋಡಾ, ನೋವಿನೆಣ್ಣೆ, ಕಾಲಿ ದೋಸೆ, ಗಂಜಿ ಚಟ್ನಿ ಒಣ ಮೀನು, ಕೋಳಿ ಸುಕ್ಕ ಅಂತ ಕೂತದ್ದಕ್ಕೆ ನಿಂತದಕ್ಕೆ ಊರಿನ ಧ್ಯಾನ ಮಾಡ್ತಿದ್ರು.ಎಂತ ಮಾಡುದು ಅಂತ ಧರ್ಮ ಸಂಕಟದಲ್ಲಿದ್ದೆ ನಾನು. ಅಷ್ಟು ಹೊತ್ತಿಗೆ ನೀನು ದೇವರ ಹಾಗೆ ಬಂದಿ. ಇನ್ನು ಮೇಲೆ ನಾನೂ ಬಂದುಹೋಗುತ್ತೇನೆ” ಎಂದು ಹೇಳಿದ್ದನ್ನ ಬಹಳ ಮಂದಿ ಕೇಳಿಸಿಕೊಂಡರು. 
ಮಾತಾಡುತ್ತ ನಿಂತಿದ್ದ ರಫೀಕನ ಹತ್ರ, ಅಹಮದು ಬ್ಯಾರಿಯ ಅಪ್ಪ ಬಂದು ಸಣ್ಣದೊಂದು ಗಲಾಟೆ ಎಬ್ಬಿಸಿದ್ದು ಮಾತ್ರ ಆವತ್ತಿನ ಕಪ್ಪು ಚುಕ್ಕೆ. ತಾವು ಮನೆಯ ಇನ್ನೊಂದು ತಿಂಗಳಲ್ಲಿ ಶಿಫ್ಟು ಮಾಡುತ್ತೇವೆ. ಬರುವಾಗ ಜೊತೆಗೆ ತಾವು ಸಾಕಿದ ಕೋಳಿ ತಗೊಂಡು ಬರಬಹುದಾ ಎಂಬುದು ಅವರ ಪ್ರಶ್ನೆಯಾಗಿತ್ತು. “ನೋಡು ರಫೀಕು, ನೀನು ನನ್ನ ದೋಸ್ತಿ ಮಹಮದಾಕನ ಮಗ, ನನ್ನದೊಂದು ಮೂರು ಕೋಳಿಗೆ ಇಲ್ಲಿ ಜಾಗ ಉಂಟಂತ  ಗೊತ್ತುಂಟು ನಂಗೆ, ಆದ್ರೆ ಕೇಳುವುದೊಂದು ಕ್ರಮ ಅಲ್ವೋ. ಅದಕ್ಕೆ ಕೇಳಿದ್ದು” ಎಂದರು ಝಕ್ರಿ ಸಾಯ್ಬರು. ಹೀಗೊಂದು ಸಮಸ್ಯೆ ಬರುತ್ತದೆ ಎಂದು ಅವನು ಅಂದುಕೊಂಡಿರಲೂ ಇಲ್ಲ.  ಕೋಳಿಗಳಿಗೆಲ್ಲ ಅಪಾರ್ಟ್ ಮೆಂಟಿನಲ್ಲಿ ಜಾಗ ಇಲ್ಲ ಅಂತ ಅವರನ್ನ ಸಮಾಧಾನ ಮಾಡುವಷ್ಟರಲ್ಲಿ ರಫೀಕನಿಗೆ ಸಾಕು ಸಾಕಾಯಿತು. “ಹೀಗೆಲ್ಲ  ಉಂಟಂತ ಗೊತ್ತಿದ್ರೆ ಲಕ್ಷ ಲಕ್ಷ ಕೊಟ್ಟು ಮನೆ ಮಾಡುವುದೇ ಬೇಡ ಇತ್ತು” ಎಂದು ಝಕ್ರಿ ಸಾಯ್ಬರು ಬಿಸಿಬಿಸಿ ಮಾತಾಡಿದರು. 
ಆವತ್ತು ಸಂಜೆ ಗುತ್ತಿನ ಮನೆಗೆ ಬೀಗ ಹಾಕಿ , ಹೆಂಡತಿ ಮತ್ತು ತಮ್ಮ ವೃದ್ಧೆ ತಾಯಿಯನ್ನ ಕರೆದುಕೊಂಡು, ನ್ಯೂ ಲೈಫ್ ಗೆ ಬಂದ ಸುಧಾಕರ ಶೆಟ್ರಿಗೆ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ಆ ಅಜ್ಜಿಮುದುಕಿ ಗಟ್ಟಿದನಿಯಲ್ಲಿ, “ಮಗಾ, ಈ ಜಾಗಕ್ಕೆ ಎಂತ ಹೇಳ್ತಾರೆ” ಎಂದು ಕೇಳಿದರು. “ನ್ಯೂಲೈಫ್” ಎಂದು ಸಟಕ್ಕನೆ ಉತ್ತರಿಸಿದ ಶೆಟ್ರಿಗೆ, ಹಾಗಂದರೆ ಅವರಿಗೆ ಅರ್ಥವಾಗುವುದಿಲ್ಲ ಎಂದು ಅರಿವಾಯಿತು. ಮೆಲ್ಲ ಬಗ್ಗಿ, ಹೊಸಬದುಕು ಎಂದು ಅಮ್ಮನ ಕಿವಿಯಲ್ಲಿ ಗಟ್ಟಿಯಾಗಿ ಹೇಳಿ ಸುಮ್ಮನಾದರು. ಆ ಅಜ್ಜಿ, “ಎಂತಾ ಹೊಸಬದುಕಾ ಏನಾ” ಎಂದು ಕೈಮೇಲೆತ್ತಿ ಗೊಣಗುತ್ತ ಮುಂದಕ್ಕೆ ಹೊರಟರು. ಅವರ ನಿಧಾನ ನಡಿಗೆಯ ಲಯಕ್ಕೆ  ಪಕ್ಕದ ಸೈಟಿನಲ್ಲಿ ನ್ಯೂ ಲೈಫ್-೨ ಗೆ ಪಂಚಾಂಗ ಹಾಕಲು ಮಣ್ಣು ಅಗೆಯುತ್ತಿದ್ದ ಸದ್ದು ಹೊಂದಿಕೊಳ್ಳುತ್ತಿತ್ತು. 
ಮಾರನೇ ದಿನದ ದಿನಪತ್ರಿಕೆಯೊಂದರ ಕರಾವಳಿ ವಿಭಾಗದಲ್ಲಿ “ಗೋಳಿಬೈಲಿನಲ್ಲಿ ನೂತನ ನ್ಯೂ ಲೈಫ್ ಅಪಾರ್ಟ್ ಮೆಂಟ್ ಆರಂಭ” ಎನ್ನುವ ಸುದ್ದಿ ಬಂದಿತ್ತು. ವರದಿಯ ಜೊತೆಗೆ, ಪತ್ನೀ ಸಮೇತರಾಗಿರುವ ನಾರಾಯಣ ಭಟ್ಟರೂ, ಮಕ್ಕಳ ಸಮೇತ ನಿಂತಿರುವ ಲಚುಮಿಯೂ ಗಣ್ಯರಿಂದ ಕೀ ಪಡೆದುಕೊಳ್ಳುತ್ತಿರುವ ಚಿತ್ರ ಪ್ರಕಟವಾಗಿತ್ತು.