ಭಾನುವಾರ, ನವೆಂಬರ್ 30, 2008

ಮಕ್ಕಳ ಮಾಯಾಲೋಕ - ನುಡಿಸಿರಿ


ಚಿತ್ರಗಳು- ದಯಾನಂದ ಕುಕ್ಕಾಜೆ

ಶನಿವಾರ, ನವೆಂಬರ್ 29, 2008

ನುಡಿಸಿರಿಯ ಚಿತ್ರಗಳು

ನುಡಿಸಿರಿಯ ಚಿತ್ರಗಳಿಗಾಗಿ:

ಆಲ್ಬಮ್ - ಒಂದು
ಆಲ್ಬಮ್- ಎರಡು
ಆಲ್ಬಮ್- ಮೂರು

ನಿಸಾರ್ ಸಾರ್ ಮತ್ತು ಹೊಸ ಗೆಟಪ್ಪು!

ನಿತ್ಯೋತ್ಸವ ಕವಿ ನಿಸಾರ್ ಅಹಮದ್, ಯಾವತ್ತೂ ಸೂಟು ಬೂಟಿಂದ ಹೊರಗೆ ಬಂದವರಲ್ಲ. ಮಳೆಯಿರಲಿ- ಬಿಸಿಲಿರಲಿ. ಆದರೆ ಆ ಬಾರಿ ಆಳ್ವಾಸ್ ನುಡಿಸಿರಿಯಲ್ಲಿ ಅವರು ಜೀವನದಲ್ಲಿ ಮೊತ್ತ ಮೊದಲ ಬಾರಿಗೆ, ಸಾರ್ವಜನಿಕವಾಗಿ ಹೊಸ ವೇಷ ಭೂಷಣದಲ್ಲಿ ಕಾಣಿಸಿಕೊಂಡರು( ಅವರೇ ಹೇಳಿದ್ದು) ಮತ್ತು ಹೀಗೆ ಮಾಡಿಸಿದ್ದಕ್ಕೆ ಮೋಹನ ಆಳ್ವರಿಗೆ ಭೇಷ್ ಅಂದರು.

ಶುಕ್ರವಾರ, ನವೆಂಬರ್ 28, 2008

ಕಾಯ್ಕಿಣಿ ಹೇಳಿದ ಕಥೆಗಳು..


ಎಂದಿನಂತೆ ಈ ಬಾರಿಯೂ ಮೂಡುಬಿದಿರೆಯ ಆಳ್ವಾಸ್ ನುಡಿಸಿರಿಯಲ್ಲಿದ್ದೇನೆ. ನಾನೋದಿದ ಸಂಸ್ಥೆ ಅನ್ನುವ ಕಾರಣವೋ, ಅಥವ ನುಡಿಸಿರಿಯ ಜಾದುವೇ ಅಂತದ್ದೋ, ಇಲ್ಲಿಗೆ ಬಂದೇ ಬರುತ್ತೇನೆ- ಪ್ರತಿ ನುಡಿಸಿರಿಗೂ. ಈ ಬಾರಿ ವಿದ್ಯಾಗಿರಿಯ ನುಡಿಸಿರಿಗೆ ಜುಮುರು ಮಳೆ ಕೂಡ ಸಾಥ್ ನೀಡಿದೆ. ಆ ಮಳೆಯ ಮಧ್ಯೆಯೇ, ಈ ಸಂಜೆ ಕಾಯ್ಕಿಣಿ ಚಂದ ಮಾತನಾಡಿದರು.

ಅದಕ್ಕೊಂದು ಒಂದು ವರದಿಯ ಥರದ ಬರಹ:


ಆಳ್ವಾಸ್ ನುಡಿಸಿರಿಯ ರತ್ನಾಕರ ವರ್ಣಿ ವೇದಿಕೆಯೆದುರಿನ ಜನ ಜಯಂತ ಕಾಯ್ಕಿಣಿಯವರ ಮಾತುಗಳಿಗೆ ಸಂಜೆ ಮಳೆಯ ಮಧ್ಯೆ ಮರುಳಾದರು. ಕಥಾ ಸಮಯ ಅನ್ನುವ ವಿಭಾಗದಡಿ ಕಾಯ್ಕಿಣಿ ಮಾತನಾಡಿದರು. ಕಥೆ ಎಂದರೇನು, ಕಥೆ ಬರೆಯೋದು ಸುಲಭಾನಾ ಅಂತೆಲ್ಲ ಮಾತನಾಡುತ್ತ ಜಯಂತರು ಮೂರು ಘಟನೆಗಳನ್ನು ನಮ್ಮ ಮುಂದಿಟ್ಟರು.


ಮರುಳ ಅನ್ನುವವನೊಬ್ಬ ಗೋಕರ್ಣದಲ್ಲಿದ್ದ. ಪ್ರತಿ ದಿನ ಬೆಳಗ್ಗೆ ಬೇಗ ಎದ್ದವನೇ, ಪೂರ್ವ ದಿಕ್ಕಿಗೆ ಮುಖ ಮಾಡಿ, "ಬಾರೋ, ಬಾರೋ" ಅಂತ ಕಿರುಚುತ್ತಿದ್ದ. ಅವನ ಕಿರುಚುವಿಕೆ ಕಡಿಮೆಯಾಗುತ್ತಿದ್ದುದ್ದು ಸೂರ್ಯ ಮೂಡಿದ ಮೇಲೆಯೇ. ಅಂತೆಯೇ, ಸಂಜೆಯಾಗುತ್ತಿದ್ದ ಹಾಗೆ ಸಮುದ್ರ ತಟಕ್ಕೆ ತೆರಳಿ, "ಹೋಗೋ ಹೋಗೋ ಕತ್ತೆ, ಹಂದಿ" ಅಂತೆಲ್ಲ ಸೂರ್ಯನನ್ನು ನೋಡಿ ಬೈಯುತ್ತಿದ್ದ. ಸೂರ್ಯ ತೆರಳಿದ ಘಳಿಗೆ ಏನೋ ಸಾಧಿಸಿದ ನೆಮ್ಮದಿ.

ಒಂದು ದಿನ ನಾನು ಮನೆಗೆ ಹೋಗುತ್ತಿದ್ದೆ.ಮುಂಬೈನ ಯಾವುದೋ ರೈಲ್ವೇ ನಿಲ್ದಾಣ. ರೈಲು ಹಳಿಗೆ ಸಿಕ್ಕು ಯಾರೋ ಛಿದ್ರ. ಆ ಶವದ ರುಂಡವನ್ನು ಕೈಲಿ ಎತ್ತಿಕೊಂಡು ಹೋಗುತ್ತಿದ್ದಾತ, ನನ್ನನ್ನು ನೋಡಿ, " ಜಬ್ ಝಿಂದಾ ತಾ, ಭಂಗೀ ಕೋ ಗಾಲೀ ದೇತಾ ಹೋಗಾ" ಅಂದು ತೆರಳಿದ.
(ಭಂಗೀ ಅಂದರೆ ಕೀಳು ಜಾತಿ)

ಒಂದಿಷ್ಟು ಜನ ಹದಿಹರೆಯದ ಹುಡುಗಿಯರು ಗುಂಪುಗುಂಪಾಗಿ ಏನೇನೋ ಹರಟುತ್ತ, ನಗುತ್ತ ದಾರಿ ಸಾಗಿಸುತ್ತಿದ್ದರು. ಎಲ್ಲಿದ್ದಳೋ ಗೊತ್ತಿಲ್ಲ, ಅವರೆದುರು ಹುಚ್ಚಿಯೊಬ್ಬಳು ಪ್ರತ್ಯಕ್ಷವಾಗಿ ಗುರಾಯಿಸಿದಳು. ಹುಡುಗಿಯರೆಲ್ಲ ಹೆದರಿ ದಿಕ್ಕಾಪಾಲು. ಅಲ್ಲಿದ್ದ ಮತ್ಯಾರೋ ನಕ್ಕರು. ಆವಾಗ ಹುಚ್ಚಿ ಅಂದಳಂತೆ,
"ಸಾರೀ ದುನಿಯಾ ಮೇರೇ ಕಪಡೇ ಪೆಹನ್ ಕೇ ಘೂಮ್ತೀ ಹೈ, ಔರ್ ಮುಝ್ ಪೇ ಹೀ ಹಸ್ತೀ ಹೈ"

ಮಂಗಳವಾರ, ನವೆಂಬರ್ 18, 2008

ಹಳೆಯ ಧಾರಾವಾಹಿಗಳ ನೆನೆದು..

ನಮ್ಮ ಮನೆಗೆ ಟಿ.ವಿ ಬಂದಿದ್ದು, ನಾನು ಮೂರನೇ ಕ್ಲಾಸಲ್ಲಿದ್ದಾಗಲೇ. ಅ ಮಟ್ಟಿಗೆ ನಾನು ಪುಣ್ಯವಂತ ಎಂತಲೇ ಅನ್ನಬಹುದು. ಏಕೆಂದರೆ ಅ ಕಾಲಕ್ಕೆ- ನನ್ನ ಹೆಚ್ಚಿನ ಕ್ಲಾಸ್ ಮೇಟುಗಳ ಮನೆಗಳಲ್ಲಿ ಟಿ.ವಿ. ಇರಲಿಲ್ಲ, ಮತ್ತು ನಾನು ದಿನಾ ಬಂದು ಹೇಳುತ್ತಿದ್ದ ದೂರದರ್ಶನದ ಕಥೆಗಳನ್ನು ನನ್ನ ಮಿತ್ರರು ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದರು, ಸತ್ಯ ಹೇಳಬೇಕೆಂದರೆ ಆ ಕಥೆಗಳು- ನಾನು ಬಾಯಿ ಬಿಟ್ಟುಕೊಂಡು ಟೀವಿಯನ್ನ ಏನೂ ಅರ್ಥವಾಗದೇ ಸುಮ್ಮನೇ ದಿಟ್ಟಿಸುತ್ತಿದ್ದಾಗ ಪಾಪ ಅನ್ನಿಸಿ, ಅಥವಾ ಪದೇ ಪದೇ ಪೀಡಿಸುತ್ತಿದ್ದಾಗ ನನ್ನಪ್ಪ ಹೇಳಿದವೇ ಅಗಿದ್ದವು. ನನಗೆಲ್ಲಿಂದ ಹಿಂದಿ ಅರ್ಥವಾಗಬೇಕು?

ಕೆಲಬಾರಿ ಟಿ.ವಿಯಲ್ಲಿ ಓಡಾಡುತ್ತಿದ್ದ ಚಿತ್ರಗಳಿಗೂ, ಅಪ್ಪ ಹೇಳಿದ್ದಕ್ಕೂ ಸಂಬಂಧ ಇಲ್ಲದಂತೆ ಅನ್ನಿಸಿದರೂ, ಸುಮ್ಮನೇ ತಲೆಯಾಡಿಸುತ್ತಿದ್ದೆ, ಮಾರನೇ ದಿನ, ನಾನು ಹೀರೋ ಅಗಬೇಕಾದ್ದರಿಂದ, ಅಪ್ಪ ಹೇಳಿದ್ದನ್ನು ನೆನಪಿಟ್ಟುಕೊಂಡು ಬಂದು, ಅದನ್ನೇ ಸ್ನೇಹಿತರೆದುರು ವದರುತ್ತಿದ್ದೆ. ಅವರುಗಳಿಗೆ ಅದೆಷ್ಟು ಅರ್ಥವಾಗುತ್ತಿತ್ತೋ ಬಿಡುತ್ತಿತ್ತೋ, ದೇವರಿಗೇ ಗೊತ್ತು. ಏಕೆಂದರೆ- ಇವತ್ತೊಂದರ ಕಥೆಯಾದರೆ, ನಾಳೆ ಹೇಳುತ್ತಿದ್ದು ಇನ್ನೊಂದೇ ಅಗಿರುತ್ತಿತ್ತು. ಅದರೂ ಮಧ್ಯಾಹ್ನ ಊಟದ ಬುತ್ತಿ ಬಿಚ್ಚಿದಾಗ, ಭಕ್ತಿಯಿಂದ ಒಂದಿಷ್ಟು ಜನ ನನ್ನ ಸುತ್ತ ಸೇರಿರುತ್ತಿದ್ದು ಇನ್ನೂ ನೆನಪಿದೆ ನನಗೆ.

ಎರಡು ಮೂರು ವರುಷ ಕಳೆದ ಮೇಲೆ ನಾನು ಕಥೆ ಹೇಳುವ ಕಾಲ ಮುಗಿದಿತ್ತು. ನಾವೊಂದಿಷ್ಟು ಜನ ಸೇರಿ ಹಿಂದಿನ ದಿನ ನೋಡಿದ ಸೀರಿಯಲ್ ಗಳ ಬಗ್ಗೆ ಚರ್ಚೆ ಮಾಡುವಷ್ಟು ಪಾಂಡಿತ್ಯ ಬೆಳೆದಿತ್ತು - ಕಾರಣ- ದೂರದರ್ಶದಲ್ಲಿ ಕನ್ನಡ ಕಾರ್ಯಕ್ರಮಗಳು ಬರುತ್ತಿದ್ದವು. ನಾನಂತೂ ಸರಿಯಾಗಿ ಅರ್ಥವಾಗದ ಹಿಂದಿ ಕಾರ್ಯಕ್ರಮಗಳನ್ನೇ ನೋಡುತ್ತಿದ್ದವನು ಇನ್ನು ಕನ್ನಡ ಬಿಟ್ಟೇನೆಯೇ?

ನನ್ನಂತಹ ಅದೆಷ್ಟೋ ಹುಡುಗರಿಗೆ ಮತ್ತು ಅಪ್ಪ ಅಮ್ಮಂದಿರಿಗೆ ಕನ್ನಡ ಧಾರಾವಾಹಿಗಳ ಹುಚ್ಚು ಹತ್ತಿಸಿದ ಕೀರ್ತಿ 'ಗುಡ್ಡದ ಭೂತ' ಧಾರಾವಾಹಿಗೆ ಸಲ್ಲಬೇಕು. ಪ್ರತಿ ಸೋಮವಾರ ಇರಬೇಕು-ಸರಿಯಾಗಿ ನೆನಪಿಲ್ಲ- ಸಂಜೆ 7.30ಕ್ಕೆ ಸರಿಯಾಗಿ ದೂರದರ್ಶನದೆದುರು ಎಲ್ಲರೂ ಸ್ಥಾಪಿತ. ಜಾನ್ಸನ್ ಬೇಬೀ ಪೌಡರಿನದೋ- ಸೋಪಿನದೋ ಜಾಹೀರಾತು ಮುಗಿದ ಕೂಡಲೇ 'ಡೆನ್ನಾನ ಡೆನ್ನಾನ...' ಅನ್ನುವ ಟೈಟಲ್ ಸಾಂಗು. ಕೇಳುತ್ತಿದ್ದ ಹಾಗೇ- ಮೈ ರೋಮಾಂಚನ. ಭೂತದ ಕಥೆ ಬೇರೆ. ಗುಡ್ಡದ ಭೂತ ಎಂದು ಯಾರಾದರೂ ಕೂಡಲೇ ತೆಂಗಿನ ಗರಿ ಉದುರುವುದು- ಹೊರಗೆ ಒಣಗಲು ಹಾಕಿದ ಬಟ್ಟೆಗೆ ಥಟ್ಟಂತ ಬೆಂಕಿ ಹತ್ತಿಕೊಳ್ಳುವುದು- ಏನು ಕೇಳುತ್ತೀರಿ.

ಪ್ರಕಾಶ್ ರೈ ಅಭಿನಯದ ಮೊದಲ ಸೀರಿಯಲ್ ಅದು. ರಾಮಚಂದ್ರ ಅನ್ನುವ ರೋಲ್ ಮಾಡಿದ ಸಣಕಲು ಪ್ರಕಾಶ ರೈ ಇನ್ನೂ ನೆನಪಿದ್ದಾನೆ ನನಗೆ. ಈಗಿನ ಹಾಗೆ ನೂರಾರು ಎಪಿಸೋಡುಗಳಲ್ಲ- ಕೇವಲ 13 ಸಂಚಿಕೆಗಳಿಗೇ ಮುಗಿದ ಧಾರಾವಾಹಿ ಗುಡ್ಡದ ಭೂತ. ಅದು ಪ್ರಸಾರವಾಗುತ್ತಿದ್ದಷ್ಟೂ ಕಾಲ, ಯಾವತ್ತೂ ಅ ಹೊತ್ತಿಗೆ ಕರೆಂಟು ಸೈತ ಹೋಗಿರಲಿಲ್ಲ! ಮೊನ್ನೆ ಮೊನ್ನೆ ಏನನ್ನೋ ಹುಡುಕುತ್ತಿದ್ದವನಿಗೆ ಆ ಟೈಟಲ್ ಟ್ರಾಕ್ ನ ಎಂಪಿತ್ರೀ ಸಿಕ್ಕಿದಾಗ ಅದ ಖುಷಿಯಂತೂ ಹೇಳತೀರದು.

ನಮ್ಮ ಮನೆಯಲ್ಲಿ ಧಾರಾವಾಹಿಗಳನ್ನು ಅಪ್ಪ ಅಮ್ಮನೂ ಕೂತು ನೋಡುತ್ತಿದ್ದುದರಿಂದ- ನಂಗೆ, ತಂಗಿಗೆ ಯಾವ ತೊಂದರೆಯೂ ಇಲ್ಲದೇ ಅವರ ಜೊತೆ ಕೂತು ಇವುಗಳನ್ನು ನೋಡುವ ಅವಕಾಶ ಲಭ್ಯವಿತ್ತು. ಅಷ್ಟಕ್ಕೂ ದಿನಕ್ಕೆ ನೋಡುತ್ತಿದ್ದದು ಒಂದೋ- ಎರಡೋ ಸೀರಿಯಲ್ಲುಗಳನ್ನು ಮಾತ್ರ. ಎಲ್ಲಾದರೂ ಪರೀಕ್ಷೆಗಳಿದ್ದ ಸಮಯ ಓದಿಕೋ ಹೋಗಿ ಅಂದರೂ, ಅದು ಮೆತ್ತನೆ ಗದರಿಕೆಯಷ್ಟೇ ಅಗಿದ್ದು, ಧಾರಾವಾಹಿಗಳಿಗೆ ಕತ್ತರಿ ಬೀಳುತ್ತಿರಲಿಲ್ಲ.

ಎಂಥೆಂಥ ಸೊಗಸಾದ ಸೀರಿಯಲ್ ಗಳು ಅಗ. ನಾಗಾಭರಣರ ತಿರುಗುಬಾಣ, ಥ್ರಿಲ್ಲರ್ ಅದರೆ ರಮೇಶ್ ಭಟ್ ಅಭಿನಯದ ಕ್ರೇಝಿ ಕರ್ನಲ್ ಕಾಮಿಡಿ ಧಾರಾವಾಹಿ. ಬಿ.ವಿ.ರಾಜಾರಾಂ ಅಭಿನಯದ ಅಜಿತನ ಸಾಹಸಗಳು ಪತ್ತೇದಾರಿ. ಆಜಿತನ ಸಾಹಸಗಳನ್ನು ನೋಡಿ ನೋಡೀ ಅವರ ಫ್ಯಾನ್ ಅಗಿ ಹೋಗಿದ್ದೆ. ಎಷ್ಟರ ಮಟ್ಟಿಗೆಂದರೆ, ಅದೆಷ್ಟೋ ವರುಷಗಳ ನಂತರ, ಮೊದಲ ಬಾರಿಗೆ ಬೆಂಗಳೂರಿಗೆ ಬಂದಾಗ ರಾಜಾರಾಂ ಸರ್ ಅನಂದ ರಾವ್ ಸರ್ಕಲ್ ಸಮೀಪದ ಸಿಗ್ನಲ್ ನಲ್ಲಿ ಸ್ಕೂಟರ್ ನಿಲ್ಲಿಸಿಕೊಂಡಿದ್ದು ನೋಡಿ ಅಜಿತ- ಅವನ ಪತ್ತೇದಾರಿ ಬುದ್ಧಿ- ಕಣ್ಣೆದುರಿರುವ ಅತ್ಯಂತ ಸಾಮಾನ್ಯ ರಾಜಾರಾಂ - ಸಂಪೂರ್ಣ ಅಯೋಮಯವಾಗಿ ಹೋಗಿತ್ತು!

ದಿನವೂ ಧಾರಾವಾಹಿಗಳು ಪ್ರಸಾರವಾಗುವ ಕಾಲ ಬೇರೆ ಇರಲಿಲ್ಲ ಅವಾಗ, ಇವತ್ತು ಒಂದು ಧಾರಾವಾಹಿ ಬಂದು ಹೋದರೆ, ಮತ್ತೊಂದು ವಾರ ಕಾಯಬೇಕು ಅದಕ್ಕಾಗಿಯೇ. ಪ್ರತಿ ದಿನ ಕೂಡ ಬೇರೆ ಬೇರೆ ಧಾರಾವಾಹಿಗಳು. ಪ್ರತಿ ಭಾನುವಾರ ಬೆಳಗ್ಗೆ ಸಬೀನಾ ಅಂತೊಂದು ಫ್ಯಾಂಟಸಿ ಸೀರಿಯಲ್ ಬರುತ್ತಿತ್ತು. ಅದರ ಟೈಟಲ್ ಟ್ರ್ಯಾಕ್ ಗೇ ನಾನು- ತಂಗಿ ಮರುಳಾಗಿದ್ದೆವು. ಡಿಸ್ಕೋರಾಗ ಅದಿತಾಳ, ಸಾಧನೆ, ಚಕ್ರ, ಚಿಗುರು, ಬೆಳದಿಂಗಳಾಗಿ ಬಾ ಇವೆಲ್ಲ ಚಂದದ ಶೀರ್ಷಿಕೆ ಗೀತೆ- ಜೊತೆಗೆ ಕಥೆ ಹೊಂದಿದ ಧಾರಾವಾಹಿಗಳೇ.

ಮೋಡಕೆ ಮೋಡ ಬೆರೆತರೆ ನೋಡು ತುಂತುರು ಹೂ ಹಾಡು ಅನ್ನುವ ಚಕ್ರ ಧಾರಾವಾಹಿಯ ಹಾಡು ತೀರಾ ನಿನ್ನೆ ಮೊನ್ನೆ ಕೇಳಿದ್ದೇನೋ ಅನ್ನುವ ತರ ತಲೆಯೊಳಗೆ ಕೂತುಬಿಟ್ಟಿದೆ. ಅದೇ ತರ 'ಅಲ್ಲೊಂದು ಚಿಗುರು, ಇಲ್ಲೊಂದು ಚಿಗುರು', - ಚಿಗುರು ಧಾರಾವಾಹಿಯದು, ಕಾಲ ಮುಂದೆ, ನಾವು ಹಿಂದೆ ಜೂಟಾಟ ಜೂಟಾಟ ಅನ್ನೋ ಸಾಧನೆಯ ಹಾಡು.. ಎಲ್ಲಕ್ಕೂ ಮಿಗಿಲಾಗಿ, ಧಾರಾವಾಹಿ ಪ್ರಪಂಚದ ಅನೂಹ್ಯ ಸಾಧ್ಯತೆಗಳನ್ನು ತೆರೆದಿಟ್ಟ, ಮಾಯಾಮೃಗದ ಮ್ಯಾಜಿಕಲ್ ಹಾಡು, ಮಾಯಾಮೃಗ ಮಾಯಾಮೃಗ ಮಾಯಾಮೃಗವೆಲ್ಲಿ...

ಮಾಯಾಮೃಗ ಪ್ರಸಾರವಾಗಬೇಕಿದ್ದರೆ ನಾನು ಹತ್ತನೇ ತರಗತಿ. ಸಂಜೆ ಕ್ಲಾಸು ಬಿಟ್ಟು ಅರ್ಧ ಗಂಟೆಗೆ ಸರಿಯಾಗಿ 4 ಕಿಲೋಮೀಟರು ದೂರದ ಮನೆಯಲ್ಲಿರಬೇಕಿತ್ತು. ಎದ್ದೂ ಬಿದ್ದೂ ಓಡಿಬರುವಷ್ಟರಲ್ಲಿ- ಮಾಯಾಮೃಗದ ಹಾಡು ಕೇಳುತ್ತಿತ್ತು. ತೀರಾ ನಮ್ಮದೇ ಮನೆಯದೇ ಕಥೆ ಇದು ಎಂದು ನಂಬಿಸಿಯೇ ಬಿಟ್ಟಿದ್ದ ಧಾರಾವಾಹಿ ಅದು. ಎಲ್ಲರಿಗೂ ಈ ಧಾರಾವಾಹಿ ಬಗ್ಗೆ ಖಂಡಿತಾ ತಿಳಿದೇ ಇರುತ್ತದೆ ಎನ್ನುವ ವಿಶ್ವಾಸವಿರುವ ನಾನು ಈ ಬಗ್ಗೆ ಏನೂ ಹೆಚ್ಚಿಗೆ ಹೇಳುವುದಿಲ್ಲ. ವಾರಪತ್ರಿಕೆಯೊಂದು ವಾರಾ ವಾರಾ ಮಾಯಾಮೃಗದ ಕಥೆ ಮುದ್ರಿಸಲೂ ಅರಂಭಿಸಿತ್ತು ಅವಾಗ.

ಮನ್ವಂತರ ಧಾರಾವಾಹಿಯೊಂದಿಗೆ ನನ್ನ ಸೀರಿಯಲ್ ಕ್ರೇಝ್ ಮುಗಿಯಿತು. ಅಮೇಲೆ ಇವತ್ತಿನವರೆಗೆ ಯಾವ ಧಾರಾವಾಹಿಯನ್ನೂ ಫಾಲೋ ಮಾಡಿಲ್ಲ, ಗರ್ವ ಮತ್ತು ಗೃಹಭಂಗ ಹೊರತು ಪಡಿಸಿ. ಮುಕ್ತ ಪ್ರಸಾರವಾಗುವಾಗ ಬೆಂಗಳೂರಿಗೆ ಬಂದಿದ್ದೆ, ನೋಡಲಾಗಲಿಲ್ಲ. ಅಲ್ಲದೇ ಅಷ್ಟು ಹೊತ್ತಿಗೆ ಅಷ್ಟೂ ಚಾನಲ್ ಗಳ ಪ್ರೈಮ್ ಟೈಮ್ ಅತ್ತೆ ಸೊಸೆಯರಿಗೇ ಮೀಸಲಾಗಿಹೋಗಿತ್ತು. ಒಮ್ಮೆ ನೋಡಿದ ಧಾರಾವಾಹಿಯನ್ನ ಮತ್ತೆ ನೋಡಬೇಕು ಎಂದು ಅನ್ನಿಸಲೇ ಇಲ್ಲ. ಧಾರಾವಾಹಿಗಳ ಸುವರ್ಣಯುಗ, ಗುಣಮಟ್ಟದ ದೃಷ್ಟಿಯಿಂದ ನೋಡಿದರೆ ಐದಾರು ವರ್ಷಗಳ ಕೆಳಗೇ ಮುಗಿದು ಹೋಗಿದೆ ಎಂದನ್ನಿಸುತ್ತದೆ.

ಕೆಲಬಾರಿ ಸಂಜೆ ಹೊತ್ತಿಗೆ ಈ ಬೆಂಗಳೂರಿನ, ನಮ್ಮ ಮನೆಯ ಬೀದಿಯಲ್ಲಿ ನಡೆಯುವಾಗ ಅನ್ನಿಸುವುದುಂಟು- ಯಾವುದರೂ ಮುಚ್ಚಿದ ಬಾಗಿಲಿನ, ಅದರೆ ತೆರೆದಿರುವ ಮನೆ ಕಿಟಕಿಯೊಳಗಿಂದ, ' ಸೆಳೆಯುತ್ತಿದೆ ಕಣ್ಣಂಚೂ, ಗಿರಿವಜ್ರದ ಹಾಗೇ' ಅನ್ನುವ ಮಾಯಾಮೃಗದ ಗೀತೆ ಮತ್ತೆ ಕೇಳಬಾರದೇ. S. ನಾನು ಓಡಿ ಹೋಗಿ, ಟಿ.ವಿ ಹಾಕಿ....

ಇದು ದಟ್ಸ್ ಕನ್ನಡಕ್ಕೆ ಬರೆದ ಅಂಕಣ. ಹಲವರು ಮೇಲ್ ಮಾಡಿ ಗುಡ್ಡದ ಭೂತ ಮತ್ತು ಇತರ ಧಾರಾವಾಹಿಗಳ ಎಂಪಿತ್ರೀ ಕೇಳಿದರು. ಈ ಲಿಂಕ್ ಲಿ ಕೆಲ ಹಳೆಯ ಧಾರಾವಾಹಿಗಳ ಹಾಡುಗಳು ಲಭ್ಯವಿದೆ.

ಶುಕ್ರವಾರ, ನವೆಂಬರ್ 07, 2008

ಮತ್ತೊಂದು ಮಳೆ ಕವನ..

ಥೋ! ಜೋರು ಮಳೆ ಸಡನ್ನಾಗಿ
ಶುರುವಾಯಿತು ಅಂತ,
ನಿಲ್ಲಿಸಿ ಬೈಕ,
ನಾನೂ ನಿಂತೆ ಅಂಗಡಿಯೊಂದರ ಪಕ್ಕ
ಸಿಡಿಮಿಡಿಗುಟ್ಟುತ್ತ,
ಅನಿರೀಕ್ಷಿತದ ಮೇಲೆ.

ಚುರುಗುಟ್ಟುವ ಹೊಟ್ಟೆ
ಅರೆಬರೆ ಒದ್ದೆ,
ಥೂ! ಅಂತೊಮ್ಮೆ ಸುರಿವ ಮಳೆಗೇ ಕ್ಯಾಕರಿಸಿ
ಹಳಿದುಕೊಳ್ಳುತ್ತ ನನ್ನ ಗ್ರಹಚಾರ
ನೋಡುತ್ತ ನಿಂತೆ ಖಾಲಿ ರಸ್ತೆ
ವಿರಳ ಸಂಚಾರ

ಪಕ್ಕದಲಿ ಅಜ್ಜಿ, ಮೊಮ್ಮಗ
ಇಬ್ಬರೂ ನಿರಾಳ
ಹುಡುಗ ನೀರ ಹರಿವಿಗೆ
ಮೆಲ್ಲನೆ,ಅಜ್ಜಿಗೆ ಕಾಣದ ಹಾಗೆ ಕಾಲದ್ದಿ
ರೋಮಾಂಚನಗೊಳ್ಳುತ್ತ
ಅಜ್ಜಿ, ಕಂಡರೂ ಕಾಣದ ಹಾಗೆ ಮಾಡುತ್ತ..

ಆ ಜಡಿಧಾರೆಯಲ್ಲೇ ರಸ್ತೆಯಲಿ
ಹೈಸ್ಕೂಲು ಹುಡುಗಿ, ಬಟ್ಟಲು ಗಣ್ಣಿನವಳು
ಚೂಡಿದಾರದ ವೇಲು ತಲೆಗೆ ಹೊದ್ದು
ಮಳೆಯ ನೋಡುತ್ತ
ಯಾವುದೋ ಹಾಡು ಗುನುಗುತ್ತ
ಪ್ರಸನ್ನವದನೆ, ಮಂದಗಮನೆ.

ರಸ್ತೆಯ ಆ ಬದಿಗೆ
ಗಿರಾಕಿಗಳಿಲ್ಲದ ಕಾಂಡಿಮೆಂಟ್ಸಿನವನು
ತನ್ನ ಕೈಯಾರೆ ಮಾಡಿದ
ಚಹವ ತಾನೆ ಹೀರುತ್ತ - ಹೊತ್ತು
ಬ್ರಹ್ಮಾನಂದ,
ರೇಡಿಯೋ ಕೇಳುತ್ತ ಮಳೆಗೆ ಮುಖ ಮಾಡಿದ್ದ.

ನನಗೆ ಯಾಕೋ ಅಲ್ಲಿ ನಿಲ್ಲಲೇ ಆಗದೆ
ಸಟಕ್ಕನೆ
ಬೈಕಿನೆಡೆಗೋಡಿ, ಕೀ ತಿರುವಿ
ಹಾಗೇ ನೆನೆಯುತ್ತಲೇ ಮನೆಗೆ
ಬರುವಷ್ಟರಲ್ಲಿ
ಮಳೆ ನಿಂತುಹೋಗಿತ್ತು.