ಸೋಮವಾರ, ಡಿಸೆಂಬರ್ 21, 2009

ಗುನುಗುಗಳು..

ಪಟ್ಟಣದ ಚಂದಿರಗೆ ಬೇಡ
ತಾರೆಗಳ ಸಖ್ಯ, ಮಿನುಗು
ತಾರೆಗು ಮಿಗಿಲು
ನಗರ ದೀಪ!

ದಾರ ಕಡಿದ ಪಟಕೆ
ದೀಪಗಂಬದ ಕುಣಿಕೆ
ಮಗುವಾಸೆ ಸಾವು, ಪಟಕೆ
ದಿಗಂತದ ಕನಸು

ಬ್ರೇಕು ತಪ್ಪಿದ ಸೈಕಲ್,
ಸವಾರನಿಗೆ ದಿಗಿಲು,
ಇಳಿಜಾರ ಚಕ್ರಗತಿ
ಅದರೆದೆಯ ಮಿಡಿತ

ಶುಕ್ರವಾರ, ಡಿಸೆಂಬರ್ 11, 2009

ಅವಳು ಹೋದ ಸಂಜೆ..

ಗೋಧೂಳಿ ಹಳದಿಯಿದೆ ಆಗಸದ ರಂಗಲ್ಲಿ
ಕಣ್ಣ ಬಣ್ಣಗಳಲ್ಲಿ ವಿಷಾದರಾಗ
ಹೋದ ಹೆಜ್ಜೆಗಳಲ್ಲಿ ಕಲಸಿಹವು ನೀರಲ್ಲಿ
ಜೀವ ಕಣಕಣಕೆ, ಮಾನಿಷಾದ ಯೋಗ

ಸುಲಲಿತದಿ ಕೈ ಹಿಡಿದ ರಾಗಮಾಲಿಕೆಯೊಂದು
ಅರ್ಧದಲಿ ವೀಣೆಯನು ಬಿಟ್ಟು ಹೊರಟಂತೆ
ಕವಿತೆಯೊಂದರ ಕೊನೆಯ ಶಬ್ದ ಚಿತ್ರವು ಹಠದಿ
ಕವಿಮನೆಯ ಬಾಗಿಲಿನ ಹೊರಗೆ ನಿಂತಂತೆ

ಹೋಗಬಹುದೇ ಹೀಗೆ, ಎಲ್ಲ ಮರೆತಾ ಹಾಗೇ
ಮಲ್ಲಿಗೆಯ ಮಾಲೆಯನು ಹರಿದು ಒಗೆದು
ತರಿಯಬಹುದೇ ಮರದ ಹೀಚುಕಾಯಿಗಳನ್ನು
ಹಣ್ಣಾಗೋ ಮುನ್ನವೇ ಕಲ್ಲನೊಗೆದು

ಸೆಳೆಯುತಿದೆ ಮರಳುರುಳು ನಿಂತಲ್ಲೆ ನನ್ನನ್ನು
ಅಲೆ ಗಾಳ ಹಾಕುತಿದೆ ಆಳದೆಡೆಗೆ
ಮುಳುಗುತಿದೆ ಉರಿಗೆಂಪು ಗೋಲ ಶರಧಿಯ ಆಚೆ
ಕತ್ತಲಾಗುತಿದೆ, ದೂರ ದಾರಿ ನಡೆಗೆ


(ವಿಜಯ ಕರ್ನಾಟಕದ ಕವಿತೆಗೊಂದು ಕಾಲದಲ್ಲಿ ಪ್ರಕಟಿತ)

ಮಂಗಳವಾರ, ಅಕ್ಟೋಬರ್ 13, 2009

ಹಬ್ಬದ ಸಂಜೆ

ಬೆಟ್ಟ ತಪ್ಪಲಿನಾಚೆ ಕರಿಮೋಡ ಕವಿಯುತಿದೆ
ಇಲ್ಲಿ ಹೊಳೆಯುವ ಬೆಳಕು, ಮಾಗು ಬೈಗು
ನೆಟ್ಟನೋಟದ ಕಣ್ಣು ಬಯಲಾಚೆ ನೋಡುತಿದೆ
ಹೊಸ್ತಿಲಿನ ಹುಡುಗಿಗೆ, ಅವನದೇ ಗುಂಗು

ಮನೆಯ ಮಂದಿಯ ಗೌಜು ಹಬ್ಬವಾಗಿದೆಯಿಲ್ಲಿ
ಇವನ ಬರವಿನ ಅರಿವು ಯಾರಿಗಿಲ್ಲ
ಕತ್ತಲಿನ ನಡೆಯವಗೆ ಹೆಚ್ಚು ತಿಳಿಯದು ಬೇರೆ
ಮುಗಿಲೊಡೆಯುವಾ ಮೊದಲೆ ಬರುವನಲ್ಲ?

ಮುಂಜಾವು ಕಟ್ಟಿದ್ದ ಬಾಗಿಲಿನ ಹೂಮಾಲೆ,
ಈಕೆ ವದನದ ಹಾಗೆ ಮೆಲ್ಲ ಬಾಡುತಿದೆ
ಕುರುಡುದೀಪಗಳೆಲ್ಲ ಕಣ್ಣ ಬೆಳಕಿಗೆ ಕಾದು
ಇವಳಂತೆಯೇ ಪಾಪ, ಸುಸ್ತಾಗಿವೆ

ಶಂಖದನಿಗಳ ಮಧ್ಯೆ ಪೂಜೆ ಮಂಗಲ ಕಾರ್ಯ
ದೇವರೆದುರಲೂ ಮನ ಹರಿವ ಝರಿಯು
ಹೊರಗೆ ಏನೋ ಮಾತು, ಸಣ್ಣ ಸರಭರದೋಡು
ನಡೆದಿಹುದು ಮೆಲ್ಲ, ಉಭಯಕುಶಲೋಪರಿಯು

ಆರತಿಯ ತಟ್ಟೆಯನು ಹಿಡಿದು ನಡೆಯುತಲಿರಲು
ತಡೆದ ಕೈಗಳ ಬಿಸುಪು ಲಜ್ಜೆ ತರಿಸಿತ್ತು
ಸಾಲುದೀಪಗಳೆಲ್ಲ ಒಂದೊಂದೇ ನಗುತಿರಲು
ಹೊರಗೆ ಅಂಗಳದಲ್ಲಿ ನೆಲವು ನೆನೆದಿತ್ತು..

ಬುಧವಾರ, ಅಕ್ಟೋಬರ್ 07, 2009

ಕೆರೆಯ ನೀರನು ಕೆರೆಗೆ ಚೆಲ್ಲಿ

ಎಲ್ಲ ಕಡೆ ನೆರೆ ಪರಿಹಾರ ನಿಧಿ ಸಂಗ್ರಹಣೆ ಜೋರಾಗಿ ನಡೆಯುತ್ತಿದೆ. ಬೆಂಗಳೂರಿನಲ್ಲೂ ಕೂಡ ಇವತ್ತು ಭರ್ಜರಿ ಜಾಥಾ ಇತ್ಯಾದಿಗಳು ನಡೆದು ಕೋಟ್ಯಾಂತರ ರೂಪಾಯಿ ಸಂಗ್ರಹ ಆಗಿರುವುದು ಸಂತಸದ ವಿಚಾರ.

ಏನಾಗಿದೆ ಅಂದ್ರೆ, ಎಲ್ಲ ಪಕ್ಷಗಳೂ ಕೂಡ ಗಲ್ಲಿ ಗಲ್ಲಿ, ಬೀದಿ ಬೀದಿ, ಮುಖ್ಯ ರಸ್ತೆಗಳಲ್ಲಿ ಸುತ್ತುತ್ತಿದ್ದು, ಕೆಲ ಪುಂಡು ಲೀಡರುಗಳಿಗೆ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಲು ಇದು ಸದವಕಾಶ. ಇವತ್ತು ಹೀಗೊಂದು ಘಟನೆ ಆಯಿತು.

ಘನತೆವೆತ್ತ ಪಕ್ಷದ ಘನತೆವೆತ್ತ ಮುಖಂಡರೊಬ್ಬರು ನಿಧಿ ಸಂಗ್ರಹದ ಡಬ್ಬಿ ಹಿಡಿದು ಅಂಗಡಿ ಅಂಗಡಿ ಬಾಗಿಲಿಗೆ ಹೋಗುವುದೂ, ಅವರು ಹೋದಕೂಡಲೇ ಅಂಗಡಿ ಮಾಲಿಕ ಹತ್ತೋ, ಐವತ್ತೋ, ನೂರೋ ರೂಪಾಯಿ ಹಾಕುವುದೂ ನಡೆದೇ ಇತ್ತು. ಟೀವೀ ಚಾನಲಿನ ಕ್ಯಾಮರಾಗಳೂ ಹಿಂಬಾಲಿಸಿದ್ದವು.

ಒಂದೆಡೆ ಕ್ಯಾಮರಾಗಳು ಮುಂದೆ ಹೋದವು, ಶ್ರೀಯುತರೂ ಕ್ಯಾಮರಾಗೆ ಪೋಸುಕೊಡುತ್ತ ಶಾಪ್ ಓನರ್ ಎದುರು ಡಬ್ಬಿ ಹಿಡಿದರು, ಅವರು ಅದೆಷ್ಟೋ ದುಡ್ಡು ತುರುಕಿ ತಾವೂ ಕ್ಯಾಮರಾಗೆ ಹಲ್ಕಿರಿದರು. ಮುಖಂಡ ಮಹಾಶಯರು, "ದೇಣಿಗೆ ನೀಡಿದ್ದಕ್ಕೆ ಸಂತೋಷ, ಥ್ಯಾಂಕ್ಸು" ಅಂದಾಗ ಆ ಪುಣ್ಯಾತ್ಮ - ಅಯ್ಯ ನಿಮ್ದೇ ದುಡ್ಡು ನಿಮ್ದೇ ಡಬ್ಬಿ ಅದಿಕ್ಕೆಲ್ಲ ಯಾಕೆ ಥ್ಯಾಂಕ್ಸು ಬಿಡೀ ಸಾರ್" ಅಂದು ಬಿಟ್ಟರು! ಪಾಪ, ಲೀಡರ್ರು ತಬ್ಬಿಬ್ಬು! ಅದ್ನೆಲ್ಲ ಏನ್ ಹೇಳ್ತೀರಿ ಮರ್ಯಾದಿ ಕಳೀಬೇಡಿ ಅಂತ ಬಡಬಡನೆ ಮುಂದೋಡಿತು ಸವಾರಿ..

ವಿಷ್ಯ ಏನೂಂತ ಕೇಳಿದ್ರೆ, ಈ ಮುಖಂಡರಿಗೆ ಮೂರು ಚೇಲಾಗಳು.. ಅವರು, ಎಲ್ಲರಿಗಿಂತ ಮೊದಲು ಅಂಗಡಿಗಳಿಗೆ ಹೋಗಿ, ವಿಶ್ಯ ಹೀಗೀಗೆ, ದುಡ್ಡು ಕೊಡಿ ಅನ್ನೋದು.. ಅಲ್ಲಿದ್ದವ್ರು ಜೈ ಅಂದ್ರೆ ಸಂತೋಷ.. ಇಲ್ಲದೇ ಇದ್ದರೆ, ಆ ಶಾಪ್ ನ ಗೆಟಪ್ ನೋಡಿ ಯಥಾಸಾದ್ಯ ದುಡ್ಡು ಕೈಲಿ ಹಿಡಿಸಿ, ಹಾಕಿ ಇದ್ನ ಪ್ಲೀಸ್, ನಮ್ ಸಾಯಬ್ರುದು ಮರ್ಯಾದೆ ಪ್ರಶ್ನೆ ಅನ್ನೋದು..

ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ!

ಸೋಮವಾರ, ಅಕ್ಟೋಬರ್ 05, 2009

ಆಗ್ರಹ

ಇಂಥ ಹುಚ್ಚು ಮಳೇಲಿ
ಮನೇ ತಂಕ
ಬಿಟ್ಟು , ಚೂರಾದ್ರೂ
ಅಪ್ಪಿಕೊಳೇ
ಇಲ್ಲ ಪಪ್ಪಿ ಕೊಡೇ
ಅಂದ್ರೆ,
ತಪ್ಪಿಸಿಕೊಂಡು ಹೋದಳಲ್ಲ,
ಹೀಗೆಲ್ಲ ಮಾಡಬಾರದು ಅಂತ
ನ್ಯೂಟನ್ನು, ಐನ್ ಸ್ಟೀನು
ಬರೆದಿಲ್ಲವ ಎಂಥದೂ ತತ್ವ?
ಹೊರಡಿಸಬೇಕಿದೆ ಇಂಥ
ಅನ್ಯಾಯಕ್ಕೆಲ್ಲ
ಅರ್ಜೆಂಟಾಗಿ, ಫತ್ವಾ!

ಭಾನುವಾರ, ಆಗಸ್ಟ್ 16, 2009

ಅಜ್ಜನಂಗಿ ತೊಟ್ಟ ಮೊಮ್ಮಗು..

ತೋಡು. ಹೀಗಂದರೆ ಮಲೆನಾಡಿನ ಕಡೆಯವರಿಗೆ ಹಂಡೆ ನೆನಪಾಗುತ್ತದೆ.ಹಂಡೆಯಿಂದ ಬಿಸಿ ಬಿಸಿ ನೀರೆತ್ತಿ ಬಾನಿಗೋ,ಬಕೇಟಿಗೋ ಬೆರೆಸುವುದು ನೆನಪಾಗುತ್ತದೆ. ನೀರ್ ತೋಡ್ಕ್ಯಂಡು ಸ್ನಾನಾ ಮಾಡಾ ಅಪೀ, ಬಿಸೀ ಇದ್ದು ನೀರು ಅಂತ ಅಮ್ಮ ಒಳಗೆಲ್ಲೋ ಅಡಿಗೆಮನೆಯಿಂದ ಕೂಗುವುದು ಕಿವಿಯೊಳಗೆ ಕೇಳಿಸಿದಂತಾಗುತ್ತದೆ. ಅದರೆ ಇಲ್ಲಿ ಹೇಳುತ್ತಿರುವ ತೋಡು,ದಕ್ಷಿಣ ಕನ್ನಡದ್ದು. ಪಕ್ಕಾ ತುಳುಭಾಷೆಯಿಂದ ಎತ್ತಿಕೊಂಡಿದ್ದು.

ತೋಡು ಎಂದರೆ ಹಳ್ಳ. ಪುಟ್ಟ ನೀರ ಹರಿವು. ಝರಿ. ಝರಿ ಎನ್ನುವುದಕ್ಕಿಂತ, ನೀರದಾರಿ ಎನ್ನಬಹುದೇನೋ. ಮಳೆಗಾಲದಲ್ಲಿ ಮಾತ್ರ ಎಲ್ಲೆಲ್ಲೆಂದಲೋ ಬರುವ ಜಲದ ಬಲಗಳಿಗೆ, ಗಮ್ಯದ ಸರಿದಾರಿ ತೋರೋ ಮೊದಲ ಕ್ರಾಸು. ದೂರ ನೀರಯಾನದ ಮೊದಲ ಕೊಂಡಿ. ಬೆಟ್ಟದೆಲೆಗೂ ಸಾಗರದ ಹರವು ತೋರಿಸುವ ಪುಣ್ಯಪಥ. ಮಳೆ ಗಾಳಿಗೆ ಮುರಿದು ಬಿದ್ದ ಹೂವ ಗೊಂಚಲನ್ನೂ ಸಮಾಧಾನ ಮಾಡಿ ಎತ್ತಿಕೊಂಡು ಸಾಗುವ ಜಲರಥ.

ಬೇಸಿಗೆಯಿಡೀ ಈ ನೀರ ದಾರಿಗಳು, ತಮ್ಮ ಇರವಿನ ಅರಿವು ಯಾರಿಗೂ ಅಗದಂತೆ ಜಡವಾಗಿ ಬಿದ್ದುಕೊಂಡಿರುತ್ತವೆ. ಹಾಡಿಯ ಬೈತಲೆ ತೆಗೆದು ಕೆಳಗೆ ಗದ್ದೆ ಸಾಗಿರುವ ಸಣ್ಣ ದಾರಿ, ಮಳೆಗಾಲದಲ್ಲಿ ಪುಟ್ಟ ಜಲಪಾತದಂತೆ ಕಾಣುತ್ತದೆ ಎಂದು ಯಾರೆಣಿಸಿಯಾರು? ತೆಂಗಿನ ತೋಟದೊಳಗಿನ, ಇಲಿ ತೂತು ಮಾಡಿರುವ ಬಾಡಿ ಬಿದ್ದಿರುವ ಎಳನೀರು ತುಂಬಿಕೊಂಡ ತೋಡು, ಮನೆ ಕೊಟ್ಟಿಗೆ ಪಕ್ಕದಲ್ಲಿ ಸಗಣಿನಾತ ಬೀರುತ್ತ ನಿಂತ ತೋಡು, ರಣರಣ ಬಿಸಿಲಲ್ಲಿ ಮರದ ಕೆಳಗೆ ಸಾಗಿ ಹೋಗಿ, ದೂರದಲ್ಲೆಲ್ಲೋ ಕರಗಿ ಹೋದಂತೆ ಕಾಣುವ ತೋಡು, ಕಾಲುದಾರಿಯ ಪಕ್ಕಕ್ಕೇ ಇದ್ದು, ಉದ್ದಕ್ಕೆ ಮಲಗಿರುವ ಹಾವೊಂದಕ್ಕೆ ತನ್ನೊಳಗೆ ಅಶ್ರಯ ಕೊಟ್ಟು, ಭುಸ್ ಅಂತ ಹೆದರಿಸುವ ತೋಡು-ಹೀಗೆ ಥರ ಥರ.

ಕಳೆದ ಮಳೆಋತುವಿನ ಪಳೆಯುಳಿಕೆಗಳನ್ನು ತಮ್ಮ ಒಡಲಲ್ಲಿ ತುಂಬಿಕೊಂಡು ಸುಮ್ಮಗೆ ಸತ್ತಂತಿರುವ ತೋಡುಗಳಿಗೆ, ಜೀವಸಂಚಾರವಾಗುವುದು ಮೊದಲೆರಡು ಮಳೆ ಬಂದ ಮೇಲೆ. ಬೆಂದನೆಲ ತಂಪುಗೊಂಡು , ಗುಡ್ಡ ಹಾಡಿಗಳಿಂದ, ಗದ್ದೆ ಬಯಲುಗಳಿಂದ ನೀರು ಹಳ್ಳಕಿಳಿಯಲು ಎರಡು ದೊಡ್ಡ ಮಳೆಯಾದರೂ ಬೇಕು. ಹದವಾಗಿ ಮಳೆ ಶುರುವಾಗುತ್ತಿದ್ದ ಹಾಗೆ, ಹಳ್ಳವೂ ಹದಗೊಳ್ಳುತ್ತದೆ. ಎರಡು ಭಾರೀ ಮಳೆ ಬಿದ್ದ ಬಳಿಕ ತೋಡಿನ ಹರಿವು ಸರಾಗ. ಬಿದಿರ ಮುಳ್ಳುಗಳು,ಬಾಟಲಿ ಚೂರುಗಳು ಇತ್ಯಾದಿ ನೀರಿನ ಹರಿವೊಳಗೆ ಕಳೆದು ಹೋದಮೇಲೆ ಹಳ್ಳಕ್ಕಿಳಿಯುವ ಧೈರ್ಯ.

ಶರಧಾರೆ ಜೋರಾದರೆ ಅಜ್ಜನಂಗಿ ತೊಟ್ಟಂತಹ ಮೊಮ್ಮಕ್ಕಳ ಸಂಭ್ರಮ ಹಳ್ಳಕ್ಕೆ. ತಮ್ಮ ಮಿತಿ ದಾಟಿ, ಅಗಲಗಲವಾಗಿ ಉಕ್ಕೇರಿ ಸಿಕ್ಕ ಅವಕಾಶಗಳನ್ನೂ ದಾಟಿ ಹರಿವ ಹುರುಪು.ಪಕ್ಕದ ಗದ್ದೆ ಬದುಗಳನ್ನು ಗುದ್ದಿ, ಕಾಲ್ದಾರಿಯನ್ನು ಸೀಳಿ,ಹೊಸ ದಿಕ್ಕಿಗೆ ಹೊರಳಿ, ತಗ್ಗುದಿಣ್ಣೆಗಳನ್ನು ಸಮಮಾಡಿ ಅದೆಲ್ಲಿಗೋ ಅವಸರವರಸವಾಗಿ ಹೊರಟಂತೆ ಕಾಣುವ ಹಳ್ಳಗಳ ಸೊಬಗು,ಅಹಾ.

ದಕ್ಷಿಣ ಕನ್ನಡದ ಹಲವೆಡೆ ಮಳೆಗಾಲ ಆರಂಭವಾಗಿ, ಇಂತಹ ಜೋರು ನೆರೆಯುಕ್ಕುವಂತಹ ಮಳೆ ಬರಲು ಶುರುವಾದರೆ ತೋಡಿನ ಬಳಿಯಲ್ಲಿ ಕೈಯಲ್ಲೊಂದು ಮಕ್ಕೇರಿ ಹಿಡಿದು ನಿಂತ ಪೋರರು, ಕೆಲಸವಿಲ್ಲದ ಮಧ್ಯವಯಸ್ಕರು ಕಂಡೇ ಕಾಣುತ್ತಾರೆ. ಮಕ್ಕೇರಿ ಎಂದರೆ, ಉದ್ದ ಬಿದಿರ ಕೋಲ ತುದಿಗೆ ಬಲೆಯಚೀಲ. ಧೋ ಎಂದು ಸುರಿಯುವ ಮಳೆಯೊಳಗೆ ಧ್ಯಾನಸ್ಥರಂತೆ ನಿಂತಿರುವ ಈ ಮಂದಿ ಸಟಕ್ಕನೆ ಮಕ್ಕೇರಿಯನ್ನ ಹಳ್ಳಕ್ಕೆ ತೂರಿಸಿ ಮೇಲೆತ್ತಿದರು ಅಂದರೆ ತೆಂಗಿನಕಾಯಿಯೊಂದು ಅದರೊಳಗೆ ಬಂಧಿಯಾಯಿತು ಎಂತಲೇ ಅರ್ಥ.ಮಳೆಗಾಲದ ಗಾಳಿಜೋರಿಗೆ ತೋಡಂಚಿನ ಮರಗಳಿಂದುದುರಿದ ಕಾಯಿಗಳು ದಿಕ್ಕುದೆಸೆಯಿಲ್ಲದೇ ತೇಲಿ ಬರುತ್ತಿದ್ದರೆ, ಇವರುಗಳಿಗೆ ಹಬ್ಬ.
ಒಳ್ಳೆಯ ಮಳೆ ಬಂದರೆ ಮಕ್ಕೇರಿ ಪಡೆ ದಿನವಿಡೀ ಕಾದು ನೂರು ತೆಂಗಿನಕಾಯಿಗಳವರೆಗೆ ಹಿಡಿದ ದಾಖಲೆಗಳೂ ಇವೆ. ಮೊಣಕಾಲು ದಾಟಿ ಬರುವ ನೀರಲ್ಲಿ ತೊಪ್ಪೆಯಾಗಿ ನಿಂತು, ಕೈಲೊಂದು ವಿಚಿತ್ರ ಹತಾರಿನೊಡನೆ ನಿಂತ ಇವರುಗಳನ್ನು ನೋಡಿದಾಗ, ಹಳ್ಳದೊಳಗಿಂದಲೇ ಅವಿರ್ಭವಿಸಿದ ಜಲಮಾನವರಂತೆ ಕಾಣುತ್ತಿರುತ್ತಾರೆ.

ಕೇವಲ ತೆಂಗಿನಕಾಯೊಂದೇ ಹರಿದುಬರುವುದಿಲ್ಲ ಈ ಮಳೆಯೊಳಗೆ. ಇನ್ನೂ ಎಂಥೆಂಥ ಅಚ್ಚರಿಗಳು ಕೂಡ. ಬೇಸಿಗೆಯಲ್ಲಿ ಗುಡ್ಡದ ಮೇಲಿನ ಬಯಲಲ್ಲಿ ಕ್ರಿಕೆಟ್ ಅಡುವಾಗ, ತಾನೇ ಸಿಕ್ಸರ್ ಹೊಡೆದು ಕಳೆದು ಹಾಕಿದ್ದ ಕೆಂಪು ಬಣ್ಣದ ಟೆನಿಸ್ ಚೆಂಡು, ಈಗೋ, ನನ್ನ ತೆಗೆದುಕೋ ಎಂಬಂತೆ ಕಾಲ ಬಳಿಯೇ ಸುಳಿದು ಬರುತ್ತದೆ. ಶೆಟ್ಟರ ತೋಟದ ಪೇರಲೆ ಹಣ್ಣು, ಬುಡಕಿತ್ತುಕೊಂಡೇ ಬಂದ ಅನಾನಸ್ಸು ಗಿಡ, ಹೀಗೆ.

ಮಳೆ ನಿಂತ ರಾತ್ರಿಗಳ ಜೀರುಂಡೆ ಸದ್ದಿನ ಕತ್ತಲಲ್ಲಿ ಕೆಲಬಾರಿ ಮನೆಗಳಿಂದ ದೂರದ ಗದ್ದೆಗಳಂಚಿನ ತೋಡಲ್ಲಿ ಕಥೆಗಳಲ್ಲಿ ಕೇಳಿದ ಮಾಯಾಜಗತ್ತಿನ ಪ್ರವೇಶ ದ್ವಾರದಂತಹ ಕೆಂಪುಕೆಂಪು ಬೆಳಕಸಾಲು ಕಾಣುತ್ತದೆ.ಹೊಸದಾಗಿ ಇವುಗಳನ್ನು ನೋಡುವವರು ತಮ್ಮೆಲ್ಲ ವೈಜ್ಞಾನಿಕ ತರ್ಕಗಳನ್ನು ಸಾರಾಸಗಟಾಗಿ ತಳ್ಳಿಹಾಕಿ, ಕೊಳ್ಳಿ ದೆವ್ವಗಳ ಇರವನ್ನು ಒಪ್ಪಿಕೊಂಡುಬಿಡುತ್ತಾರೆ. ಇಲ್ಲವಾದರೆ, ರಾತ್ರಿ ಹತ್ತರ ನಂತರದ ಗಾಢಾಂಧಕಾರದಲ್ಲಿ ವಿಶಾಲ ಬಯಲಿನ ಮಧ್ಯದ ಮರಗಳ ಮರೆಗಳಾಚೆ ಫಳಫಳ ಮಿನುಗುತ್ತ ಸಾಗುವ ತೇಜಪುಂಜಗಳಿಗೆ ಜಗತ್ತಿನ ಯಾವ ಸಿದ್ಧಾಂತ ಉತ್ತರ ಹೇಳೀತು?

ವಾಸ್ತವವಾಗಿ ಇವು ಏಡಿ ಹಿಡಿವ ತಂಡದ ಕರಾಮತ್ತು. ಸೂಟೆಸಾಲಿನ ಮಂದಿ, ಕಣ್ಣಿಗೆ ಕಾಣದ ಸಮಸ್ತ ಜೀವಜಾಲಗಳು ವಿಚಿತ್ರ ಸದ್ದು ಹೊರಡಿಸುತ್ತ ಬಿದ್ದುಕೊಂಡಿರುವ ರಾತ್ರಿಗಳಲ್ಲಿ ಹಳ್ಳಗಳಲ್ಲಿ ಓಡಾಡುವ ಏಡಿಗಳನ್ನು ಹಿಡಿಯಲು ಹೊರಡುತ್ತಾರೆ. ಕೈಲಿ ಕತ್ತಿ ಹಿಡಿದವರೊಂದಿಷ್ಟಾದರೆ, ಅವರಿಗೆ ಒಣತೆಂಗಿನ ಮಡಲು ಸುತ್ತಿದ ಸೂಟೆಗಳ ಬೆಳಕು ತೋರಲು ಮತ್ತಷ್ಟು ಜನ. ಸಳ ಸಳ ಸದ್ದು ಮಾಡುತ್ತ ಸಾಗುವ ನೀರಿಳಿದ ತೋಡಿನಲ್ಲಿ ಚಕಚಕನೋಡುವ ಏಡಿಗಳನ್ನು ಕತ್ತಿಯಲ್ಲಿ ಕುಕ್ಕಿ, ಕೊಂಬುಮುರಿದು ಬುಟ್ಟಿ ತುಂಬುತ್ತ ಸಾಗುತ್ತಾರೆ.ಮಾರನೇ ದಿನದ ವರ್ಷಧಾರೆಯ ಜೊತೆಗಿನ ಬಿಸಿಬಿಸಿ ಮನೆಯೂಟಕ್ಕೆ, ಏಡಿ ಕಜ್ಜಾಯ.

ಮಳೆಗಾಲದ ಬಣ್ಣದವೇಷ ಮುಗಿಯುತ್ತಿದ್ದ ಹಾಗೆ, ಹಳ್ಳ ಶುಭ್ರ. ಕೆಂಪು ನೀರೆಲ್ಲ ಹಣಿದು ತೋಡಿನ ತಳ ಕಾಣುವ ಸ್ವಚ್ಛ ನೀರಿನ ಹರಿವು ಅರಂಭ. ಬಿಸಿಲಕಿರಣಗಳ ಹೊಳಪಿಗೆ ಹಳ್ಳ ಕೂಡ ಮೈಯೊಡ್ಡಿ ಬೆಚ್ಚಗಾಗುತ್ತದೆ. ಅದೆಲ್ಲಿಂದ ಹುಟ್ಟಿ ಬರುತ್ತವೋ, ಮೀನುಗಳ ಸಾಲು ಸಾಲು ನೀರೊಳಗೆ ಯಾತ್ರೆ ಹೊರಟಿರುತ್ತವೆ. ಹುಡುಗು ಜಾತಿ, ಒಂದಿಷ್ಟು ಸಣ್ಣ ಸಣ್ಣ ಮೀನುಗಳನ್ನು ಅದು ಹೇಗಾದರೂ ಹಿಡಿದು ಮನೆಬಾವಿಗಳಿಗೆ ಬಿಡುವುದೂ ಉಂಟು,ಅಪ್ಪ ಅಮ್ಮಂದಿರ ಬೈಗುಳಗಳಿಗೂ ಬೆಲೆ ಕೊಡದೆ. ಕೆಲ ಬಾರಿ ಮೀನ ಜೊತೆ ಬಂಪರ್ ಬಹುಮಾನವಾಗಿ ಅಮೆ ಕೂಡ ಸಿಗುತ್ತದೆ ಇಲ್ಲಿ. ಅದೂ ಕೂಡ ಸೀದಾ ಬಾವಿಗೇ.

ಇಂತಹ ತೋಡುಗಳ ಪಕ್ಕದಲ್ಲಿ ನಾಲ್ಕೆಂಟು ಮಳೆಯಾಗುತ್ತಿದ್ದ ಹಾಗೆ ಯಾವು ಯಾವುದೋ ತೆರನಾದ ನೆಲಹೂ ಗಿಡಗಳ ಹಿಗ್ಗು. ಕೆಂಪು, ಹಳದಿ , ಬಿಳಿಯ ಸಾಸಿವೆ ಕಾಳಿನಾಕೃತಿಯಿಂದ ತೊಡಗಿ ಅಂಗೈ ಅಗಲದವರೆಗಿನ ಸೊಬಗುಗಳ ವರ್ಣಜಾತ್ರೆ. ಹಳ್ಳದಂಡೆಯಲ್ಲೇ ಇಡೀ ಚಳಿಗಾಲ ಬೇಸಿಗೆಗಳಲ್ಲಿ ಹುದುಗಿದ್ದ ಗಡ್ಡೆಗಳು ಜೀವತಾಳಿ,ಮೊಳಕೆ ಬಂದು ಹೂಬಿಟ್ಟು ತೋಡಂಚು ಹೂದೋಟವಾಗಿ ಬಿಡುತ್ತವೆ. ಯಾವ ದೇವರ ಮುಡಿಗೂ ಕೀಳಲ್ಪಡದ ಪುಣ್ಯ ಇವಕ್ಕೆ. ಮಳೆ ಕಡಿಮೆಯಾಗುತ್ತಿದ್ದ ಹಾಗೆ ಭೂದೇವಿಗೇ ಅರ್ಪಣೆಗೊಳ್ಳುವ ಈ ಕುಸುಮಗಳು ಮತ್ತೆ ಕಾಣಿಸಿಕೊಳ್ಳುವುದು ಮುಂದಿನ ಮಳೆಮಾಸದಲ್ಲೇ.

ಮಳೆ ಕಡಿಮೆಯಾಗಿ ಸೆಪ್ಟೆಂಬರ್ ಮುಗಿಯುತ್ತಿದ್ದ ಹಾಗೆ ಗದ್ದೆಗಳಿಗೆ ನೀರುಣಿಸುವ ಕೆಲಸವೂ ಈ ಹಳ್ಳಗಳದು. ಪುಟ್ಟ ಕಲ್ಲು- ಕಸಗಳನ್ನು ಅಡ್ಡಕಟ್ಟಿ ಗದ್ದೆಗೆ ಹರಿವು ತಿರುಗಿಸಿದರೆ, ಬಲಿಯುತ್ತಿರುವ ಭತ್ತದ ತೆನೆಗಳ ಬುಡಕ್ಕೆ ಸಾಗಿಹೋಗಿ ಅವುಗಳನ್ನು ತಂಪು ಮಾಡುತ್ತದೆ ತೋಡಿನ ನೀರು. ತನ್ನೊಳಗಿನ ಕೊನೆಯ ಹನಿಯನ್ನೂ ಕೂಡ ಗದ್ದೆಗೆ ಬಸಿದ ಮೇಲೆ ತೋಡು ಅಂತರ್ಧಾನ. ಅಮೇಲೆ, ಇದ್ದರೂ ಇಲ್ಲದ ಹಾಗಿನ ಕಷ್ಟ. ಮರಳಿ ಮಳೆಗಾಲಕ್ಕೆ ಕಾಯುತ್ತ ತಟುಕು ಹನಿಗಳು ಮತ್ತೆ ಮೈಯ ಮುಟ್ಟುವವರೆಗೆ ಸುತ್ತಲಿನ ಹಸಿರಿಗೆ ಉತ್ತರವಾಗಿ ಮಲಗಿರುತ್ತವೆ, ಈ ಚಿರಂಜೀವಿ ಹಳ್ಳಗಳು.

(ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟಿತ )

ಸೋಮವಾರ, ಆಗಸ್ಟ್ 10, 2009

ಅಮೃತಕ್ಷಣಗಳು..

ನಮಸ್ತೇ.

ನಮ್ಮ ಕರೆಗೆ ಓಗೊಟ್ಟು , ಬಂದು ಪುಸ್ತಕ ಬಿಡುಗಡೆ ಸಮಾರಂಭವನ್ನು ಯಶಸ್ವಿಗೊಳಿಸಿದ್ದಕ್ಕೆ ನಮ್ಮ ಮತ್ತು ಪ್ರಣತಿಯ ಪರವಾಗಿ, ನಿಮಗೆಲ್ಲ, ವಂದೇ. ಇಲ್ಲಿ ಒಂದಿಷ್ಟು ಚಿತ್ರಗಳಿವೆ. ನೋಡಿ.

ಹಾ, ಬರಲಾಗದೇ ಇದ್ದ ಎಷ್ಟೋ ಜನ ಮೆಸೇಜು, ಕಾಲ್ಸು ಮತ್ತು ಈ ಮೈಲ್ ಮುಖಾಂತರ ಶುಭ ಹಾರೈಸಿದ್ದಾರೆ ಅವರಿಗೂ ನಮ್ಮ ನಮನಗಳು.


ಹೀಗೇ ನಮ್ಮ ಬೆನ್ನು ತಟ್ಟುತ್ತಿರಿ.

ಸೋಮವಾರ, ಆಗಸ್ಟ್ 03, 2009

ಸ೦ತಸದ ಘಳಿಗೆ - ಕರೆಯೋಲೆ


ಯಾವತ್ತಾರೂ ಹೀಗಾಗತ್ತೆ ಅಂದ್ಕಂಡಿರ್ಲಿಲ್ಲ, ಹಾಂಗಾಗೇ ಬರೀಬೇಕು ಅಂತ ಗೊತಾಗ್ತಿಲ್ಲ. ಹಾಳೆಯಲ್ಲಿ ಬರಿಯೋದಾಗಿದ್ರೆ ಹಳೇ ಸಿನಿಮಾಗಳಲ್ಲಿ ನೋಡಿದ ಹಾಗೆ ಸುಮಾರು ೪೦-೫೦ ಬಿಳೀ ಕಾಗದದ ಉಂಡೆಗಳು ಇಲ್ಲಿ ನನ್ನ ಸುತ್ತ ಬಿದ್ದಿರ್ತಿದ್ವು , ಗ್ಯಾರೆಂಟಿ. ಪುಣ್ಯ,ಬ್ಲಾಗರಿನ ಬಿಳಿಯ ಅವಕಾಶ- ಅದಕ್ಕೆಲ್ಲ ಅವಕಾಶ ಕೊಡಲಿಲ್ಲ.

ನನ್ನ ಕವವ ಸಂಕಲನ, ಹೂವು ಹೆಕ್ಕುವ ಸಮಯ ಅಗಸ್ಟ್ ೯ರ ಶ್ರಾವಣ ಭಾನುವಾರ ಬಿಡುಗಡೆಯಾಗ್ತಿದೆ. ಜೋಗಿ ಸರ್ ಮುನ್ನುಡಿ ಬರೆದ ಪುಸ್ತಕವನ್ನು ನಾನು ಬೆರಗುಗಣ್ಣುಗಳಿಂದ ಆರಾಧಿಸುವ ಹಿರಿಯ ಕವಿ ಎಚ್.ಎಸ್.ವೆಂಕಟೇಶಮೂರ್ತಿಯವರು ಲೋಕಾರ್ಪಣೆ ಮಾಡುತ್ತಿದ್ದಾರೆ.

ಜೊತೆಗೆ ಅಂದೇ, ಗೆಳೆಯ ಸುಶ್ರುತನ ಹೊಳೆಬಾಗಿಲು ಲಲಿತ ಪ್ರಬಂಧ ಸಂಕಲನ ಬಿಡುಗಡೆಯಾಗ್ತಿದೆ. ಅದನ್ನ ಬಿಡುಗಡೆ ಮಾಡೋರು ನಾಗತಿಹಳ್ಳಿ ಚಂದ್ರಶೇಖರ್ ಸರ್.

ನಮ್ಮದೇ ಸಂಸ್ಥೆ ಪ್ರಣತಿ ಇಬ್ಬರ ಪುಸ್ತಕಗಳನ್ನೂ ಪ್ರಕಟಿಸಿದೆ. ಈ ವರ್ಷದ ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರಿಗೆ ಪ್ರೋತ್ಸಾಹ ನೀಡೋ ಪುಸ್ತಕ ಪ್ರಕಟಣೆ ಯೋಜನೆಯಲ್ಲಿ ನಮ್ಮ ಪುಸ್ತಕಗಳು ಆಯ್ಕೆಯಾದ್ದವು.

ನಾನು, ಸುಶ್ ಮತ್ತು ಪ್ರಣತಿಯ ಗೆಳೆಯರೆಲ್ಲ ಬನಶಂಕರಿಯ ಸುಚಿತ್ರ ಫಿಲ್ಮ್ ಸೊಸೈಟಿ ಯಲ್ಲಿ ಬರುವ ಭಾನುವಾರ, 9ನೇ ತಾರೀಖು ಬೆಳಗ್ಗೆ 10.30ಕ್ಕೆ ನಿಮಗಾಗಿ ಕಾಯುತ್ತಿರುತ್ತೇವೆ.

ಬಂದು ನಮ್ಮನ್ನು ಖುಷಿಗೊಳಿಸುತ್ತೀರಿ ನೀವು. ಗೊತ್ತು ನಮಗೆ:)

ಮಂಗಳವಾರ, ಜುಲೈ 28, 2009

ಜಂಗಮ ಬಿಂಬಗಳು -5

ಕಾಫಿ ಹುಡುಗ ತಪ್ಪಿ ಕಪ್ ಕೆಳಗೆ ಬೀಳಿಸಿದ. ಯಾರೂ ನೋಡಿಲ್ಲವೆಂದುಕೊಂಡು ಅದೇ ಲೋಟಕ್ಕೆ ಕಾಫಿ ಬಗ್ಗಿಸಿದ. ಯಾಕಯ್ಯ ಹೀಗೆ ಮಾಡುತ್ತೀ,ತಪ್ಪಲ್ಲವ ಅಂದೆ. ಏನಾಗತ್ತೆ ಸರ್, ಜಸ್ಟ್ ಕೆಳಗೆ ಬಿತ್ತು.. , ನೀವೇ ಮಾಡ್ಕಂಡ್ರೆ ತಪ್ಪಿಲ್ಲ, ನಾವಾದ್ರೆ.. ಮಾತು ತುಂಡರಿಸಿ, ಬೇರೆ ಕಪ್ ತೆಗಿ ಅಂದೆ. ಬೇರೆ ಕಾಫಿ ಕೊಟ್ಟ. ರಾತ್ರಿ ಮನೆಯಲ್ಲಿ ಕುಕ್ಕರಿಂದ ಅನ್ನ ಎತ್ತಿ ಕೆಳಗಿಡಬೇಕಾದಾಗ, ಇಕ್ಕಳ ಜಾರಿ ಅನ್ನದ ಪಾತ್ರೆ ಕವುಚಿ ಬಿತ್ತು. ಪಾತ್ರೆ ಎತ್ತಿಟ್ಟು, ನೆಲಕ್ಕೆ ತಾಕದೇ ಉಳಿದಿದ್ದ ಅನ್ನ ಮತ್ತೆ ಪಾತ್ರೆ ಹಾಕಿದೆ. ಊಟ ಮಾಡಿದೆ. ಹುಡುಗ ನೆನಪಾದ.

***

ಎದುರಿನ ಬೈಕಿನ ಸೈಡ್ ಸ್ಟ್ಯಾಂಡು ಹೊರ ಚಾಚಿದ್ದನ್ನೇ ಗಮನಿಸುತ್ತ ಅದನ್ನು ಅವನಿಗೆ ಹೇಳಬೇಕೆಂದುಕೊಂಡ.ಆದರೆ ತನ್ನೆದರು ಸಡನ್ನಾಗಿ ನುಗ್ಗಿ ಬರುತ್ತಿದ್ದ ಆಟೋ ಗಮನಿಸಲೇ ಇಲ್ಲ.

***
ಒಂದಿಷ್ಟು ಹುಡುಗರು ಕ್ರಿಕೆಟ್ ಆಡುತ್ತಿದ್ದರು.೪-೫ರ ವಯಸ್ಸಿನವರು. ಪಾಪುವೊಂದು ಹೇಗೆ ಬೌಲಿಂಗು ಮಾಡಿದರೂ ಒಬ್ಬ ಪೋರ ಔಟೇ ಆಗುತ್ತಿರಲಿಲ್ಲ. ಈ ಪಾಪಚ್ಚಿ, ಮಧ್ಯರಸ್ತೆಯಲ್ಲೇ ಶರಟಿನ ಬಟನ್ನನ್ನು ಪುಟ್ಟ ಬೆರಳುಗಳಿಂದ ಬಿಚ್ಚಿ, ಬರಿ ಮೈಲಿ ನಿಂತು, ಆಕಾಶ ನೋಡುತ್ತ, ದೇವಲೇ ಇವುನ್ನ ಔಟ್ ಮಾದೂ ಅಂತ ಕೂಗಿತು. ನಂಗೇ ನಾನೇ ದೇವರಾಗಿರಬಾರದಿತ್ತೇ ಅಂತ ಮೊದಲ ಸಲ ಅನ್ನಿಸಿತು.

***

ಶನಿವಾರ, ಜುಲೈ 25, 2009

ಮಳೆ ಅಡ್ರೆಸ್ಸು!

ತಿಂಗಳ ಹಿಂದೆ ಶಿವಮೊಗ್ಗ ಜಿಲ್ಲೆಗೆ ಸವಾರಿ. ಆಫೀಸು ಕೆಲಸ. ಒಂದಿಷ್ಟು ಶೂಟಿಂಗಿತ್ತು. ಸಾವಯವ ಕೃಷಿ ಬಗ್ಗೆ. ತೀರ್ಥಹಳ್ಳಿ ಹತ್ತಿರದ ಒಂದು ಹಳ್ಳಿ, ಚಕ್ಕೋಡಬೈಲು ಅಂತ. ಅಲ್ಲಿ ಆ ದಿನ ಶೂಟಿಂಗ್ ಮಾಡಿ, ಮಾರನೇ ದಿನ ಹಾಸನಕ್ಕೆ ಬರಬೇಕಿತ್ತು. ಇದ್ದ ಕಡಿಮೆ ಸಮಯದಲ್ಲೇ ಆದಷ್ಟೂ ಹೆಚ್ಚಿನ ಕೆಲ್ಸ ಆಗಬೇಕಿತ್ತು.. ಹೀಗಾಗಿ ಸ್ವಲ್ಪವೂ ಸಮಯ ವ್ಯರ್ಥ ಮಾಡದೇ ಇಂಟರ್ವೂ,ವಿಶುವಲ್ಸು ಅಂತ, ಕ್ಯಾಮರಾಮನ್ ಗೆ ಪುರುಸೊತ್ತೇ ಕೊಡದೇ ಸತಾಯಿಸುತ್ತಿದ್ವಿ.

ಮಳೆಗಾಲದ ಆರಂಭದ ಸಮಯ. ಸಿಕ್ಕಾಪಟ್ಟೆ ಮೋಡಗಳು ಗುಂಪುಗೂಡಿ ನಮ್ಮ ಶೂಟಿಂಗ್ ನೋಡೋಕೆ ಬಂದವು. ನಂಗೆ ಒಳಗೊಳಗೇ ಹೆದರಿಕೆ ಶುರು. ಎರಡು ಕೊಡೆಗಳಿದ್ದರೂ, ಲಕ್ಷಾಂತರ ಬೆಲೆ ಬಾಳುವ ಕ್ಯಾಮರಾ ಬೇರೆ. ವಿಶಾಲ ಗದ್ದೆ ಬಯಲಿನ ಮಧ್ಯ ನಿಂತಿದೀವಿ ಬೇರೆ. ಮಳೆ ಏನಾದರೂ ಹುಚ್ಚುಕೊಡವಲು ಶುರು ಆದ್ರೆ, ಮಿನಿಮಮ್ ಅಂದ್ರೂ ಒಂದು ಕಿಲೋಮೀಟರು ಹೋದ ಮೇಲೇನೇ ಮನೆ ಸಿಗೋದು.

ಹೀಂಗೇ ಶೂಟಿಂಗು ಮುಂದುವರೀತಿತ್ತು. ಗದ್ದೆ ಕೋಣ ಗೊಬ್ಬರ-ಕ್ಲೋಸಪ್ಪು ಮಿಡ್ಡು ಲಾಂಗು ಇತ್ಯಾದಿ. ಹೀಂಗೇ ಒಂದ್ ಸಲ ಎಲ್ಲ ಸುಮ್ಮಗಾದ್ರು. ಏನಂತೀರಿ, ಜೋರು ಮಳೆ ಸದ್ದು ಕೇಳ್ತಿದೆ! ಆ ಗದ್ದೆ ಕೋವಿನ ಕೆಳಗೆ- ಭರ್ರೋ ಅಂತ ಮಳೆ ಸದ್ದು.ನಂಗೆ ಕೈ ಕಾಲೆಲ್ಲ ತಣ್ಣಗಾಗೋಕೆ ಶುರು.

ನನ್ನ ತಳಮಳ ಅರ್ಥ ಆಯ್ತು ಅನ್ನಿಸತ್ತೆ, ಅಲ್ಲೇ ಇದ್ದ ರೈತ ನಾಗರಾಜ ಮೇಲೆ ಆಕಾಶ ನೋಡುತ್ತ ತಣ್ಣಗೆ ಹೇಳಿದ.

"ನೀವೆಂತ ಹೆದ್ರ್ ಕ ಬೇಡಿ. ಈ ಮಳೆ, ಹಾಂಗೇ ಬ್ಯಾಣ ಹತ್ತಿ, ಶೀನಾಚಾರ್ರ ಮನೆ ಮೇಲಾಗಿ ಅವ್ರ ಕಣ ದಾಟಿ, ರಾಮ್ ಜೋಯ್ಸರ ತೋಟದ್ ಆಚಿಗಿಂದ ,ದೇವಸ್ತಾನದ್ ಬದಿಂಗಿಂದಾಗಿ ಗುಡ್ದಕ್ ಹೋಗತ್ತಂಗೆ ಕಾಣತ್ತಪ" .

ಶೀನಾಚಾರ್ ಮನಿಯಲ್ದ, ನಮ್ ವೆಂಕಪ್ಪನ್ ಮನಿ-ಮತ್ತೊಬ್ಬರ್ಯಾರೋ ತಿದ್ದಿದರು. ನಾನು ಬಿಟ್ಟ ಬಾಯಿ ಬಿಟ್ಟ ಹಾಗೇ.

ಮಳೆ ನಮ್ಮ ದಿಕ್ಕಿಗೆ ಬರಲೇ ಇಲ್ಲ .
ತೀರಾ ಬೆಂಗಳೂರಿನ ಬಸ್ಸಿನ ದಾರಿ ಹೇಳಿದ ಹಾಗೆ! ಅರೆ!.

ಮಂಗಳವಾರ, ಜುಲೈ 21, 2009

ನವಿಲಗರಿಗೆ ಪ್ರಶ್ನೆಗಳು

ಯಾವುದೋ ಮರದಡಿ ಉದುರಿದ ನೀನು,ಕೃಷ್ಣ ಮುಕುಟವಾಸಿ
ಆತನ ಪಯಣದಿ ನೀನೂ ಸಖನೇ,ಭೂಮಂಡಲ ಸಂಚರಿಸಿ

ಬಾಲಕೃಷ್ಣನ ನವನೀತದ ಕೈ,ನಿನ್ನನೂ ಸವರಿರಬೇಕಲ್ಲ
ಮುರಾರಿ ಸಂಗಡ ಕುಣಿದಿರಬೇಕು ನೀನೂ ಗೋಕುಲ ತುಂಬೆಲ್ಲ

ಚೆಲ್ವ ಮೋಹನನ ವೇಣುವಿನೋದಕೆ ನೀನೂ ತೊನೆದೂಗಿರಬೇಕು
ಗೋಪಿಕೆಯರನವ ಸರಸಕೆ ಎಳೆವೊಡೆ ನಿನದೂ ಪಾಲಿದ್ದಿರಬೇಕು

ಅನುಭವಿಸಿಹೆಯೇ ಮುರುಲೀಧರ ಸಖಿ ರಾಧೆವಿದಾಯದ ಕಣ್ಣೀರು
ಚಿಮ್ಮಿರಬೇಕು ಕಂಸರಕ್ತಹನಿ,ಮತ್ತೆ ಹೂಮಳೆ ತುಂತುರು ಪನ್ನೀರು

ಮೆತ್ತಿದೆ ನಿನಗೂ ದ್ವಾರಕೆ ಧೂಳು,ಹಸ್ತಿನೆ ಚಿನ್ನದ ರೇಕು
ಸಮರಾಂಗಣದಲಿ ಪಾಂಚಜನ್ಯದಾ ಘೋಷವ ಕೇಳಿರಬೇಕು

ಭಗವದ್ ಗೀತೆಗೆ ಗಾಂಡೀವಿಯ ಜೊತೆ ನೀನೂ ಸಹಪಾಠಿ
ವಿಶ್ವರೂಪನಾ ನೆತ್ತಿಯ ಮೇಲಿಂ,ಕಂಡಿತೆ ಕುರುಕ್ಷೇತ್ರ ಕೋಟಿ?

ಕರ್ಣ ಕುತಂತ್ರವ ಶ್ರೀಹರಿ ಹೆಣೆದುದು ನಿನಗಂತೂ ಗೊತ್ತು
ಕೃಷ್ಣ ಪ್ರತಿಜ್ಞೆಯ ಮುರಿದ ಭೀಷ್ಮ ಶರ,ಸ್ವಲ್ಪದಿ ನಿನ್ನನೆ ತಾಕಿತ್ತು!

ಹೇಗದು ನೋಡಿದೆ ಯುದ್ಧವಿನಾಶವ,ರುಧಿರ ರಾಡಿ ಬಯಲ
ಮುಳುಗಿದ ದ್ವಾರಕೆ, ಯಾದವ ಕಲಹವ ಮತ್ತೆ ಕಲಿಯ ಕಾಲ?

ಆಲದ ಮರದಡಿ ಮಲಗಿರೆ ಶ್ಯಾಮನು ಬಂತೆ ಜರನ ಬಾಣ ಪಾಶ
ನಕ್ಕನೆ ನೀಲನು ಆ ನೋವಿನಲೂ,ಕಂಡೆಯ ಕೊನೆಯ ಮಂದಹಾಸ?


ಭಾನುವಾರ, ಜುಲೈ 19, 2009

ಖುಷಿಗೊಂದು ಪದ್ಯ-೨

ರತ್ನಗಂಧಿಯ ಹಳದಿ
ನೆನೆದಿದೆ ಅಂಗಳದ ಅಂಚಲ್ಲಿ
ತುಂಬೆ ಗಿಡ ತುಂಬೆಲ್ಲ
ತೊನೆವ ಕೆಂಪು

ಹನಿಗೀತ ಹಾಡುತಿವೆ
ಕೆಸುವಿನೆಲೆಗಳ ಮೇಳ
ಗದ್ದೆಬದುವಿನ ಮೇಲೆ
ಕೊಕ್ಕರೆಯ ಹುಡುಕು

ನೀರದಾರಿಯ ಕೆಳಗೆ
ಫಳ್ಳ ಹೊಳೆಯುವ ಕಲ್ಲು
ಬೆಟ್ಟ ತಪ್ಪಲ ಬಳಿ
ಒದ್ದೆ ನವಿಲುಗರಿ

ಕರಗುಮಣ್ಣಿನ ಮೇಲೆ
ಬಿರಿದ ಮೊಳಕೆ
ಧರೆಯಂಚ ಗಿಡದೊಳಗೆ
ನೀಲಿಹೂವು

ದೂರಗದ್ದೆಯಲಿ
ನಟ್ಟಿತಂಡದ ಗೌಜು
ಅವರ ಹಾಡಿನ ಹುರುಪು
ನನ್ನೊಳಗೆ ಕೂಡ.



ಖುಷಿಗೊಂದು ಪದ್ಯ-೧

ಮಂಗಳವಾರ, ಜುಲೈ 14, 2009

ಗಮಕ ಸುಧಾ ಧಾರೆ

ನಾನು ಎರಡನೇ ಕ್ಲಾಸಿನಲ್ಲಿದ್ದ ಕಾಲದಿಂದಲೂ ಅಪ್ಪ ನನಗೆ ಮಹಾಭಾರತದ ಕಥೆಗಳನ್ನು ಹೇಳುತ್ತಿದ್ದ. ಕಥೆ ಎಫೆಕ್ಟಿವ್ ಆಗಿರಲಿ ಎಂಬ ಕಾರಣಕ್ಕೋ, ಅಥವಾ ಕೇಳೋಕೆ ಚೆನ್ನಾಗಿರುತ್ತದೆ ಎನ್ನುವ ಕಾರಣಕ್ಕೋ, ಕುಮಾರವ್ಯಾಸ ಭಾರತದ ಆಯ್ದ ಷಟ್ಪದಿಗಳನ್ನು ಈ ಕಥೆಗಳ ಮಧ್ಯೆ ಸೇರಿಸುತ್ತಿದ್ದ. ಯುದ್ಧ ಸನ್ನಿವೇಶಗಳ ವಿವರಣೆಯ ಮಧ್ಯೆ ಬರುವ ಎಂಥೆಥದೋ ವಿಚಿತ್ರ ಉಪಮೆಗಳು, ನನ್ನನ್ನು ಮಾಯಾಲೋಕಕ್ಕೆಳೆಯುತ್ತಿದ್ದವು. ಅವಾಗಿನ್ನೂ ನಾನು ಟೀವಿ ಮಹಾಭಾರತ ನೋಡೋದಿಕ್ಕೆ ಅರಂಭಿಸಿರಲಿಲ್ಲ.

ಆಮೇಲಾಮೇಲೆ ಟೀವಿಯ ಮಹಾಭಾರತದೆದುರು ಈ ಷಟ್ಪದಿ ಸಪ್ಪೆ ಅನ್ನಿಸತೊಡಗಿತು. ಅಪ್ಪ ಅದೆಷ್ಟು ಸರಳವಾಗಿ ವಿವರಿಸುತ್ತಿದ್ದರೂ, ಕೆಲ ಶಬ್ದಗಳು ಅರ್ಥವಾಗುತ್ತಿರಲಿಲ್ಲ. ಅದಕ್ಕೂ ಹೆಚ್ಚಾಗಿ, ನೋಡುವುದು ಕೇಳುವುದಕ್ಕಿಂತ ಸುಲಭವಾಗಿ ಅರ್ಥವಾಗುತ್ತಿತ್ತು. ಆದರೂ, ಅಪ್ಪ ರಾಗಬದ್ಧವಾಗಿ ಹೇಳುತ್ತಿದ್ದ ಷಟ್ಪದಿಗಳೇ ಇವತ್ತಿಗೂ ಮನದೊಳಗೆ ಉಳಿದಿದೆ. ಆಮೇಲೆ ಇದೇ ಕುಮಾರವ್ಯಾಸ ಭಾರತದ ಹಲಭಾಗಗಳನ್ನು ಅವನೇ ತರಗತಿಯಲ್ಲಿ ಪಾಠ ಮಾಡಿದ್ದರೂ ಬಾಲ್ಯದ ನೆನಪೇ ಗಟ್ಟಿ.

ಆಮೇಲೆ ಹೈಸ್ಕೂಲಿಗೆ ಬಂದ ಮೇಲೆ ನಮ್ಮ ಕನ್ನಡ ಮಾಸ್ಟ್ರು ಲಕ್ಷ್ಮೀಶ ಶಾಸ್ತ್ರಿಗಳು, ಅದೆಷ್ಟ್ ಚನಾಗಿ ಷಟ್ಪದಿ ಹಾಡ್ತಿದ್ರು ಅಂದ್ರೆ, ಗಮಕ ಎನ್ನುವ ಈ ಕಲೆಯ ಬಗ್ಗೆ ಕ್ಲಾಸಿನ ಎಲ್ಲ ಮಕ್ಕಳು ಮರುಳಾಗಿಬಿಟ್ಟಿದ್ದರು. ವಿದುರನ ಮನೆಗೆ ಬಂದ ಕೃಷ್ಣನ ಮೈಗೆ ಹೇಗೆ ಧೂಳು ಮೆತ್ತಿಕೊಂಡಿತ್ತು ಅನ್ನುವುದನ್ನು ಅವರು ಸುಶ್ರಾವ್ಯವಾಗಿ ಹಾಡುತ್ತಿದ್ದರೆ, ನಾವೆಲ್ಲ ಮಾತಿಲ್ಲದೇ ಕುಳಿತುಬಿಡುತ್ತಿದ್ದೆವು.

ಬೇಸಿಗೆಯ ರಜೆಯಲ್ಲಿ ಅಮ್ಮ ಅದಾವಾಗ ಊಟಕ್ಕೆ ಕರೆಯುತ್ತಾಳೆ ಅಂತ ಕಾಯುತ್ತ ಕುಳಿತಿದ್ದಾಗ, ಮಂಗಳೂರು ಅಕಾಶವಾಣಿಯಲ್ಲಿ ಮಧ್ಯಾಹ್ನ ಒಂದು ಗಂಟೆಗೆ, ಒಂದೂಹತ್ತರ ದೆಹಲಿ ನ್ಯೂಸಿನ ಮೊದಲು, ಹತ್ತು ನಿಮಿಷ ಗಮಕ ವಾಚನ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಬಿರು ಬಿರು ಬಿಸಿಲಿನಲ್ಲಿ ಈ ತಂಪು ಗಮಕ ತುಣುಕಗಳು, ಅಹಾ ಅನ್ನಿಸುತ್ತಿದ್ದವು.

ಈ ಗಮಕದ ನೆನಪುಗಳನ್ನೆಲ್ಲ ಮತ್ತೆ ಹಸಿರು ಮಾಡಿಕೊಳ್ಳಲು, ನಾವು ಅಂದರೆ ಪ್ರಣತಿಯ ಗೆಳೆಯರು ನಾಡಿದ್ದು ಶನಿವಾರ ಒಂದು ಕಾರ್ಯಕ್ರಮ ಆಯೋಜಿಸಿದ್ದೇವೆ. ಕುವೆಂಪುರವರ ‘ರಾಮಾಯಣ ದರ್ಶನಂ’ನ ಅಯ್ದ ಭಾಗಗಳ ಗಮಕ ಮತ್ತು ವ್ಯಾಖ್ಯಾನ. ಆಹ್ವಾನ ಪತ್ರ ಇಲ್ಲೇ ಕೆಳಗಿದೆ. ಇಳಿಸಂಜೆಯ ಹನಿಗಳ ಜೊತೆ ನೀವೂ ನಮ್ಮೊಡನಿರಿ. ಬರುತ್ತೀರೆಂಬ ನಂಬಿಕೆಯೊಡನೆ, ಪ್ರಣತಿಯ ಗೆಳೆಯರು.

ಸೋಮವಾರ, ಜೂನ್ 15, 2009

ಕಾಲ

ಕೊನೆ ಮನೆಯ ಮುದುಕನಿಗೆ
ಕಾಲ ಕೇಳುವ ಕಷ್ಟ
ಕಾಲ ಕಾಲದ ಮೇಲೆ,
ಕಾಲ ಮರೆಯುವ ಲೀಲೆ

ನೀವಿಲ್ಲಿ ಹೇಳಿದರೂ
ಸಮಯ ಇಂತಿಷ್ಟೆಂದು
ಕೇಳುವೆನು ಮತ್ತಲ್ಲಿ,
ನಿಮ್ಮೆದುರೆ,ಅವರಲ್ಲಿ

ಕಾಲಬಲ ಇಲ್ಲದಿರೂ
ಕಾಲದೂಡುವ ಬಯಕೆ
ಹೊಸಸಮಯ ಕೇಳಿದೊಡೆ,
ಹಳೆಬಯಕೆ ನಾಯಿಕೊಡೆ

ಘಳಿಗೆಗಂಟೆಗಳಾಚೆ
ಬೇಕಿಹುದು ಬದುಕವಗೆ
ಸಾಯದು ಕಾಲಬೇರು
ಸಮಯಗಮ ಜೋರು.

ಮಂಗಳವಾರ, ಮೇ 26, 2009

ಮಳೆಗೆಜ್ಜೆ ಹುಡುಗಿ..

ಮಳೆಗೆಜ್ಜೆ ಹುಡುಗಿ ನಿನ್ನ ಕಣ್ಣಿನಂಚಿಗಿತ್ತ ಮುತ್ತು
ಕಾಲನುರುಳ ಹೇಗೋ ತಪ್ಪಿ, ಕಾವ್ಯವಾಗಿ ಉಳಿದಿದೆ
ಬಿಸಿಲಮಚ್ಚಿನಲ್ಲಿ ನಿಂತು, ಇರುಳತಾರೆ ತೋರಿಸುತ್ತ
ಹಾಗೇ ಹೊಂಚಿ ಕೊಟ್ಟ ಮುತ್ತು, ಚುಕ್ಕಿಯಾಗೇ ಹೊಳೆದಿದೆ

ಅಂದು ಏನೋ ತಪ್ಪಿನಿಂದ,ನಿನ್ನ ಮುನಿಸು ಮೇರೆ ಮೀರಿ
ಕೈಯ ಹಿಡಿದು ಕ್ಷಮೆಯ ಕೋರಿ, ಕರೆದೆ ಮನೆಯ ನೆತ್ತಿಗೆ
ಸಿಟ್ಟದಿನ್ನು ಮೊಗದಲಿರಲು, ಮೆಟ್ಟಿಲೇರಿ ನನಗು ಮೊದಲು
ನೋಡುತಿದ್ದೆ ಕ್ಷಿತಿಜದಾಚೆ ನಾನು ಬರುವ ಹೊತ್ತಿಗೆ

ನಲ್ಲೆ ಮುಖವು ಕಳೆಗುಂದಿದೆ,ಚಂದ್ರ ಬೇರೆ ಬಾನೊಳಿಲ್ಲ
ಕತ್ತಲಿಹುದು ಎಲ್ಲ ಕಡೆಗು,ನನ್ನ ದಿಗಿಲು ಹೆಚ್ಚಲು
ಮೆಲ್ಲ ಬಂದು ನಿನ್ನ ಬಳಿಗೆ,ಭುಜದ ಮೇಲೆ ಕತ್ತನಿರಿಸಿ
ಸೊಂಟ ಬಳಸಿ ನಿಂತುಕೊಂಡೆ,ದಿವ್ಯಮೌನ ಸುತ್ತಲೂ.

ಬಾನ ತುಂಬ ಕೋಟಿಚುಕ್ಕಿ,ಮೆಲ್ಲ ನಿನ್ನ ಕೈಯನೆತ್ತಿ
ಕಾಣದ ರಂಗೋಲಿ ಬಿಡಿಸಿ,ಮತ್ತೂ ಸನಿಹಕೆಳೆದೆನು
ಕಣ್ಣಹನಿಯು ಕೈಗೆ ತಾಕೆ,ಬೊಗಸೆ ತುಂಬ ಮೊಗವ ತುಂಬಿ
ಪುಟ್ಟಮುತ್ತ ನಯನಕೊತ್ತಿ ಅಲ್ಲೇ ಕರಗಿ ಹೋದೆನು

ಹೀಗಿದೊಂದು ಮಧುರ ಸ್ಪರ್ಶ ಸಮಯದೊಳಗೆ ಕಳೆದರೂ
ಮತ್ತೆ ತಿರುಗಿ ಬರುವುದುಂಟು ವರ್ತಮಾನದೊಳಗಡೆ
ಅಂಥದಿವಸ ಏಕೋ ನನ್ನ ಬಿಸಿಲುಮಚ್ಚು ಕರೆದರೆ

ದೂರತಾರೆ ಮಿನುಗು ಕಂಡು ಎದೆಯ ತಾನ ನಿಲುಗಡೆ.

ಮಂಗಳವಾರ, ಮಾರ್ಚ್ 31, 2009

ಹೀಂಗೇ ಸುಮ್ನೆ, ರಿಲಾಕ್ಸ್ ಆಗೋಣ ಅಂತ:)

ಯೇ ಮಹೇಶಾ, ನಾ ಹೇಳ್ಕೊಡ್ತೀನಿ ನೋಡೋ ಹೆಂಗೆ ಅಂತ" ಎಂದು ಯಾವನೋ ಹುಡುಗ ಕೀರಲು ದನಿಯಲ್ಲಿ ಕಿರುಚುವಾಗ ಎಚ್ಚರಾಯಿತು. ದಿನ ಬೆಳಗೂ ಈಗೀಗ ಇದೇ ಆಗಿದೆ. ನಾನೇನೋ ಸ್ವಲ್ಪ ಹೊತ್ತು ಮಲಗೋಣ ಅಂತ ವಿಚಾರ ಮಾಡಿಕೊಂಡು, ಹೊದ್ದು ಮಲಗಿದ್ದರೆ, ಫ್ಯಾನಿನ ಜೋರು ತಿರುಗುವಿಕೆಯನ್ನೂ ಭೇದಿಸಿಕೊಂಡು ಕೆಳಗೆ ಆಟವಾಡುವ ಹುಡುಗರ ದನಿ ಬಂದು ನನ್ನ ಕಿವಿ ಸೀಳುತ್ತದೆ, ಬೆಳಗ್ಗೆ ಎಂಟು ಗಂಟೆಗೇ. ಬೇಸಿಗೆ ರಜೆ ಈಗಾಗಲೇ ಶುರು ಅವರಿಗೆ. ಹಾಗಾಗಿ ಹಬ್ಬ!

ಈಗೊಂದು ತಿಂಗಳಿಂದ ಖಾಲಿ ಹೊಡೆಯುತ್ತಿದ್ದ ರಸ್ತೆ, ಈಗ ಮತ್ತೆ ತುಂಬಿಕೊಂಡು ಬಿಟ್ಟಿದೆ. ನಮ್ಮ ರೋಡಲ್ಲಿ ಸುಮಾರು ಒಂದೇ ವಾರಿಗೆಯ, ಅಂದರೆ ಆರರಿಂದ ಎಂಟೊಂಬತ್ತನೇ ಕ್ಲಾಸಿಗೆ ಹೋಗುವ ಮಕ್ಕಳ ಪುಟ್ಟ ದಂಡೇ ಇದೆ. ಪ್ರಾಯಶ: ಎಲ್ಲರಿಗೂ ಪರೀಕ್ಷೆಗಳು ಮುಗಿದಿರಬೇಕು ಅನ್ನಿಸುತ್ತದೆ, ಹಾಗಾಗಿ ನಮ್ಮ ರಸ್ತೆಯ ಮೇಲಿಂದ ಹೋಗುವ ವಾಹನಗಳೂ ದಾರಿ ಬದಲಿಸಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಆಚೆ ಮನೆಯ ಅಂಕಲ್ಲು ತಮ್ಮ ಸ್ವಿಫ್ಟನ್ನ ಮಕ್ಕಳಿಗೆ ಅನುಕೂಲವಾಗಲಿ ಎಂದೋ, ಅಥವ ಗಾಜು ಒಡೆಯದಿರಲಿ ಎಂದೋ, ಪಕ್ಕದ ರಸ್ತೆಯ ಮರದ ಕೆಳಗೆ ನಿಲ್ಲಿಸಿ ಬರುವುದನ್ನು ರೂಢಿಸಿಕೊಂಡಿದ್ದಾರೆ.

ಬೆಳಗ್ಗಿನಿಂದ ಸಂಜೆಯವರೆಗೆ, ಪುರುಸೊತ್ತೇ ಇಲ್ಲದ ಹಾಗೆ, ಒಂದಾದ ಮೇಲೊಂದರಂತೆ ಆಟಗಳೇ ಆಟಗಳು! ಮಧ್ಯಾಹ್ನ ಊಟಕ್ಕೆ ಅವರವರ ಅಮ್ಮಂದಿರು ಕರೆದು, ಆದರೂ ಬರದಿದ್ದಾಗ, ಖುದ್ದು ಸೌಟಿನ ಸಮೇತ ಅವರುಗಳು ರೋಡಿಗೇ ಇಳಿದು ಎಳೆದುಕೊಂಡು ಹೋದಾಗಿನ ಅರ್ಧ ಗಂಟೆ ಮಾತ್ರ ರಸ್ತೆ ಖಾಲಿ ಇರುತ್ತದೆ. ಮತ್ತೆ ಯಥಾ ಪ್ರಕಾರ- ಬಿಸಿಲು,ಮಳೇ ಏನೂ ಲೆಕ್ಕಿಸಿದೇ ಆಟವೋ ಆಟ.

ಬೆಳಗ್ಗೆ ಎಂಟು ಗಂಟೆಗೆ ಮಾಮೂಲಾಗಿ ಕ್ರಿಕೆಟ್ ನಿಂದ ಆಟಗಳ ಸರಣಿ ಆರಂಭವಾಗುತ್ತದೆ. ಏಳೋ, ಒಂಬತ್ತೋ ಹುಡುಗರಿದ್ದಾಗ, ಒಬ್ಬನಿಗೆ ಜೋಕರಾಗುವ ಭಾಗ್ಯ. ಅಂದರೆ ಎರಡೂ ಟೀಮಿಗೆ ಆಡುತ್ತಾನೆ ಅವನು! ಮೊದಮೊದಲು ಜೋಕರಾಗುವುದು ಅಂದರೆ ಬೇಜಾರಾಗುತ್ತಿತ್ತು ಹುಡುಗರಿಗೆ. ಆದರೆ ಈಗ ಜೋಕರು ತಾನಾಗುತ್ತೇನೆ ಅಂತಲೇ ಗಲಾಟೆ ಆರಂಭ. ಏಕೆಂದರೆ ಎರಡೂ ಟೀಮುಗಳಲ್ಲಿ ಬ್ಯಾಟಿಂಗು, ಬೌಲಿಂಗು ಎಲ್ಲ ಸಿಗುತ್ತದೆ, ಯಾರಿಗುಂಟು ಯಾರಿಗಿಲ್ಲ. ಅದಕ್ಕೇ ಈಗ ಜೋಕರಾದವನಿಗೆ ಒಂದು ಟೀಮಲ್ಲಿ ಬೌಲಿಂಗು-ಇನ್ನೊಂದರಲ್ಲಿ ಬ್ಯಾಟಿಂಗು ಅಂತ ಮಾಡಿಕೊಂಡಿದ್ದಾರೆ- ಎಷ್ಟು ದಿನಕ್ಕೆ ಈ ನಿಯಮವೋ, ಗೊತ್ತಿಲ್ಲ.

ಹುಡುಗರು ಕ್ರಿಕೆಟ್ ಆಡುತ್ತಿದ್ದಾರೆ ಅಂದುಕೊಂಡು ಒಳ ಹೋದರೆ, ಹೊರಬರುವಷ್ಟರಲ್ಲಿ ತಟಕ್ಕನೆ ಹೊರಗಿನ ಮಾಹೋಲು ಬದಲಾಗಿ ಬಿಟ್ಟಿರುತ್ತದೆ. ಹತ್ತು ಗಂಟೆಯ ಏರು ಬಿಸಿಲಿಗೆ, ಬ್ಯಾಟು ಬಾಲುಗಳೆಲ್ಲ ಕೇರ್ಲೆಸ್ಸಾಗಿ ಅಲ್ಲೇ ರಸ್ತೇ ಮೇಲೆ ಅನಾಥವಾಗಿ ಬಿದ್ದಿರುತ್ತವೆ. ಏನಾಗುತ್ತಿದೆ ಅಂತ ನೋಡಿದರೆ, ಕಣ್ಣಾಮುಚ್ಚಾಲೆ! ನಾನು ಎರಡನೇ ಮಹಡಿಯಲ್ಲಿರುವುದರಿಂದ, ಯಾರ್ಯಾರು ಎಲ್ಲೆಲ್ಲಿ ಅಡಗಿ ಕೂತಿದ್ದಾರೆ ಅನ್ನುವುದೂ ನಿಚ್ಚಳವಾಗಿ ಕಾಣುತ್ತಿರುತ್ತದೆ.

ಎದುರಿನ ಮನೆಯ ಸಿಡುಕಿ ಮೂತಿ ಅಜ್ಜಿ ದಿನಾ ನೀರು ಹಾಕಿ, ಪೊದೆಯಂತಾಗಿರುವ ದಾಸವಾಳ ಗಿಡದ ಮರೆ, ಖಾಲಿ ಸೈಟಲ್ಲಿ ಪೇರಿಸಿಟ್ಟ ಕಟ್ಟಿಗೆ ರಾಶಿ- ಹೀಗೆ ಈ ಕೀರ್ತನ್ನು, ಮಹೇಶ, ಅನಿತ ಎಲ್ಲರೂ ತಮ್ಮದೇ ಆದ ಸ್ಪೆಷಲ್ಲು ಜಾಗಗಳನ್ನ ಹೊಂದಿದ್ದು, ಅಲ್ಲಲ್ಲಿ ಅವರವರೇ ಅಡಗಿಕೊಂಡಿರುತ್ತಾರೆ. ಅಪ್ಪಿತಪ್ಪಿ ಯಾರಾದರೂ ಇನ್ನೊಬ್ಬರ ಜಾಗಕ್ಕೆ ಹೋಗಿಬಿಟ್ಟರೆ, ಅಲ್ಲೇ ತಿಕ್ಕಾಟ ಆರಂಭವಾಗಿ, ಮೌನವಾಗೇ ಹೊಡೆದಾಡಿಕೊಳ್ಳುತ್ತಾರೆ. ಅದರಲ್ಲೂ ಗುಂಪು ರಾಜಕೀಯ ಬೇರೆ- ತಮ್ಮ ಆಪ್ತರು ಅಡಗಿಕೊಂಡಿದ್ದು ಕಂಡಿದ್ದರೂ, ತಮಗಾಗದವರನ್ನೇ ಹುಡುಕಿ ಔಟ್ ಮಾಡುವ ಕುತಂತ್ರ.

ಕಣ್ಣಾ ಮುಚ್ಚಾಲೆ ಬೇಜಾರು ಬರುವಷ್ಟು ಹೊತ್ತಿಗೆ, ನಾಲ್ಕೆಂಟು ಶಟಲ್ ರ‌್ಯಾಕೆಟ್ಟುಗಳು ಹೊರಬಂದು, ಇಡೀ ರಸ್ತೆಯ ತುಂಬ ಟಕಾಟಕ್ ಸದ್ದಿನ ಅನುರಣನ. ನಮ್ಮ ಕೋರ್ಟ್ಗೆ ನಿಮ್ಮ ಶಟ್ಲು ಬೀಳುವ ಹಾಗಿಲ್ಲ, ನೀನ್ಯಾಕೆ ನನ್ನ ಕೋರ್ಟೊಳಗೆ ಬಂದೆ-ಜಗಳವೋ ಜಗಳ. ಅಷ್ಟು ಹೊತ್ತಿಗೆ ಯಾರಿಗಾದರೂ ಸಂಬಂಧಿಸಿದ ಅಮ್ಮನೊಬ್ಬಳು ಹೊರಬಂದು, ತಮ್ಮ ಮಗನದೋ ಮಗಳದೋ ಹೆಸರಿಡಿದು ಕರೆದು, ಕಣ್ಣು ಬಿಟ್ಟಳು ಅಂದರೆ, ಎಲ್ಲರೂ ಗಪ್ ಚುಪ್.

ಅಷ್ಟೊತ್ತಿಗೆ ಮಧ್ಯಾಹ್ನ ಊಟದ ಸಮಯ. ಈ ಹುಡುಗರು ಊಟ ಮಾಡಿಕೊಂಡು ಬರುವಷ್ಟರಲ್ಲಿ ಒಂದಿಬ್ಬರು ಹುಡುಗಿಯರು ಬಂದು, ರೋಡಲ್ಲೇ ಮನೆಗಳನ್ನು ಹಾಕಿಕೊಂಡು, ಕುಂಟಾಬಿಲ್ಲೆ ಆಡುತ್ತಿರುತ್ತಾರೆ, ಅವರ ಪಾಡಿಗೆ. ಹುಡುಗ ಪಾಳಯ ಬಂದಿದ್ದೇ, ಹೋಗ್ರೇಲೇ, ಹೆಣ್ ಮಕ್ಳಾಟ ಇದು, ಬೇರೆ ಕಡೆ ಹೋಗಿ ಆಡ್ಕಳಿ, ಈ ಜಾಗ ನಮಗೆ ಬೇಕು ಅಂತ ಕಿರಿಕ್ ಶುರು ಹಚ್ಚಿದ್ದೇ, ಹೋಗ್ರೋಲೋ, ಧಮ್ ಇದ್ರೆ ನಮ್ ಹಾಂಗೆ ಆಡಿ ತೋರ್ಸಿ, ಅಂತೆಲ್ಲ ಕಿಚಾಯಿಸಿ, ಅವರೂ ಕುಂಟಾಕಿ ಆಡಲೆಲ್ಲ ಹೋಗಿ, ಆಗದೇ ಒದ್ದಾಡಿ- ಹುಡುಗೀರೆಲ್ಲ ನಕ್ಕು , ಹುಡುಗರ ಗುಂಪಿನ ಯಾರಿಗಾದರೂ ಜೋರು ಸಿಟ್ಟು ಬಂದು, ಹೊಡೆದು, ಈ ಪುಟ್ಟ ಹುಡುಗಿ ಬಾಯಿಗೆ ಕೈ ಇಟ್ಟುಕೊಂಡು ಅತ್ತು- ಎಲ್ಲ ಸೇರಿ ಸಮಾಧಾನ ಮಾಡಿ.. ಅಬ್ಬಬ್ಬ.

ಮೂರು ಗಂಟೆ ಹೊತ್ತಿಗೆ ಲಗೋರಿ ಶುರು! ಈ ಪುಟಾಣಿ ಏಜೆಂಟ್ ಪಾಳಯ ಅತ್ಯಂತ ಉತ್ಸಾಹದಿಂದ ಆಡುವ ಆಟ ಇದು. ಅಲ್ಲೆಲ್ಲೋ ಕಟ್ಟುತ್ತಿರುವ ಮನೆ ಹತ್ತಿರದಿಂದ, ಹನ್ನೊಂದು ನುಣುಪಾದ ಟೈಲ್ಸ್ ತುಂಡುಗಳನ್ನ ತಂದಿಟ್ಟುಕೊಂಡಿದ್ದಾರೆ. ಮಧ್ಯ ರಸ್ತೆಯಲ್ಲಿ ಚಾಕ್ಪೀಸ್‌ನಿಂದ ವೃತ್ತ ಬರೆದು, ಟೀಮು ಮಾಡಿಕೊಂಡು ಲಗೋರಿ ಶುರು ಹಚ್ಚಿಕೊಂಡರು ಅಂದರೆ, ಇನ್ನು ಮೂರು ತಾಸಿಗೆ ತೊಂದರೆ ಇಲ್ಲ. ಮೊದಲೇ ನಮ್ಮ ರಸ್ತೆ ಕಿಷ್ಕಿಂದೆ, ಅದರಲ್ಲಿ ಈ ಲಗೋರಿ ಶುರುವಾದರೆ, ಕೆಲಬಾರಿ ರಸ್ತೆ ಮೇಲೆ ಸುಮ್ಮನೇ ನಡೆದುಕೊಂಡು ಹೋಗುತ್ತಿರುವ ಬಡಪಾಯಿಗಳೂ ಚೆಂಡಿನೇಟು ತಿಂದುಬಿಡುತ್ತಾರೆ. ಪೆಟ್ಟು ತಿಂದಾತ ಕಣ್ಣು ಕೆಂಪು ಮಾಡಿಕೊಂಡು ಅವರನ್ನ ನೋಡಿದರೆ, ಅತ್ಯಂತ ದೈನ್ಯ ಮುಖ ಹೊತ್ತು, ಸಾರೀ ಅಂಕಲ್ ಅನ್ನುವ ಹುಡುಗನನ್ನು ಕಂಡಾಗ- ಹೊಡೆಸಿಕೊಂಡವನೇ ಅಯ್ಯೋ ಪಾಪ ಅಂದುಕೊಂಡು ಹೋಗಿಬಿಡುತ್ತಾನೆ. ಆತ ರಸ್ತೆ ತಿರುವು ದಾಟಿದ್ದಾನೋ ಇಲ್ಲವೋ- ಇಲ್ಲಿ ಜೋರು ನಗೆಯ ಊಟೆ!

ಇದು ನಮ್ಮ ರಸ್ತೆಯ ಮಕ್ಕಳ ನಿತ್ಯದ ದಿನಚರಿ. ಹಾಗೆಂದು ಈ ದಿನಚರಿಗೆ ಅಡಚಣೆಗಳು ನಿತ್ಯವೂ ಬರುತ್ತದೆ. ಕೀರ್ತನ್ ಅಣ್ಣನ ಹೊಸ ಮೊಬೈಲಿನ ಗೇಮು, ಅರ್ಚನಾಗೆ ಅವಳಪ್ಪ ತೆಗಿಸಿಕೊಟ್ಟಿರೋ ಹೊಸ ಸೈಕಲ್ಲು, ಕೆಲ ಬಾರಿ ರೊಟೀನ್ ಆಚರಣೆಗಳನ್ನ ತಪ್ಪಿಸುತ್ತವೆ. ಆದರೂ- ಸ್ವಲ್ಪೊತ್ತು ಬಿಟ್ಟು ಮತ್ತೆ ಎಲ್ಲರೂ ಅದೇ ರಸ್ತೆಗೆ ವಾಪಸ್ಸು! ಹೊಸ ಸೈಕಲ್ಲು ಕೊಡಿಸಿದರಾದರೂ ಮಗಳು ಬಿಸಿಲಿಗೆ ಅಲೆಯುವುದು ತಪ್ಪುತ್ತದೆ ಅಂದುಕೊಂಡಿದ್ದ ಅರ್ಚನಾಳ ಅಪ್ಪನ ಮುಖ ನೋಡಬೇಕು ನೀವು ಆವಾಗ!

ಇವತ್ತು ಎದ್ದಾಗ, ಏನಪ್ಪಾ ಇದು ಈತರ ಕಿರುಚಾಟ ಅಂತ ನೋಡಿದರೆ, ಯಾವನೋ ಮಹಾನುಭಾವ ಬುಗರಿಗಳನ್ನು ತಂದುಬಿಟ್ಟಿದ್ದ! ಪೆಕರು ಪೆಕರಾಗಿ ಬುಗರಿಗೆ ಹಗ್ಗ ಸುತ್ತುತ್ತಿದ್ದ ಮಹೇಶಂಗೆ, ಇನ್ನೊಬ್ಬ ಪೋರ, ಯೇ ಮಹೇಶಾ, ನಾ ಹೇಳ್ಕೊಡ್ತೀನಿ ನೋಡೋ ಹೆಂಗೆ ಅಂತ ಬುಗರಿ ತಿರುಗಿಸೋ ಬೇಸಿಕ್ಸು ಹೇಳಿ ಕೊಡುತ್ತಿದ್ದ. ಅಲ್ಲೇ ಪಕ್ಕದಲ್ಲಿ ಕೀರ್ತನ್ನು, ಗಾಳಿಪಟ ಮಾಡುತ್ತ ಕೂತಿದ್ದ.

ಮತ್ತೊಂದಿಷ್ಟು ಹೊಸ ಆಟಗಳು ಸೇರಿಕೊಂಡವಲ್ಲಪ್ಪ ಅಂದಕೊಂಡು, ನಾನೂ ಖುಷಿಯಿಂದ ಒಳಬಂದೆ.



ದಟ್ಸ್ ಕನ್ನಡಕ್ಕಾಗಿ ಬರೆದ ಲೇಖನ.

ಶುಕ್ರವಾರ, ಮಾರ್ಚ್ 13, 2009

ಅವಳ ನಗು

ಬಯಲ ಗಾಳಿಗೆ ಎಲೆಯು
ಸುಮ್ಮನಲುಗಿದ ಹಾಗೆ
ಮಲೆಯ ಕಣಿವೆಯ ಝರಿಯು
ಚಿಮ್ಮಿ ಸಾಗುವ ಸೊಬಗೆ
ಎಂಥ ನಗು ಅವಳದು!

ಗಿರಿಯ ಮೇಲಿನ ಮಂಜು
ಮೆಲ್ಲ ಕರಗುವ ತೆರನ,
ನದಿಯ ನೀರನು ತಡೆವ
ಕಲ್ಲು ಹಾಡುವ ತ ರ ನ
ಅಂಥ ನಗು ಅವಳದು!

ತೀರಗುಂಟದ ಅಲೆಯು
ಪಾದಕೆ ಮಾಡುವ ಮುದ್ದು
ಮಳೆನೀರು ಬೀಳುತಿಹ
ಪದ್ಮಪತ್ರದ ಸದ್ದು
ಇಂಥ ನಗು ಅವಳದು!

ಬುಧವಾರ, ಮಾರ್ಚ್ 04, 2009

ಅಂದೇ ಕೊನೆ ಮತ್ತೆ ಶ್ಯಾಮ..

ಅಂದೇ ಕೊನೆ ಮತ್ತೆ ಶ್ಯಾಮ ಕೊಳನನೂದಲಿಲ್ಲ
ಗೋಕುಲ ದಾಟಿದ ಹೆಜ್ಜೆಯು, ಮರಳಿ ಬರಲೆ ಇಲ್ಲ

ರಾಧೆಯ ಗೆಜ್ಜೆಯ ದನಿ ಮರೆತಿತ್ತು,ನಗಾರಿ ಧ್ವನಿಗಳಲಿ
ಗೋಗಂಟೆಗಳ ಸ್ವರ ಅಡಗಿತ್ತು, ಖುರಪುಟ ಸದ್ದಿನಲಿ.

ರಾಜಕುವರರಾ ಸಖ್ಯದ ಮಧ್ಯೆ, ಮಕರಂದ ಮರೆತು ಹೋದ
ಮಹಲಿನ ಸೊಬಗಲಿ ನೆನಪಾಗುವುದೇ, ಗೋಕುಲದಾ ಮೋದ

ಕಳ್ಳ ಗೋಪನನು ಕರೆಯದು ಈಗ ಬಿಂದಿಗೆ ನವನೀತ
ಖಡ್ಗಗಳನುರಣನ ಸುತ್ತ, ಮುರಾರಿಗೆ ಯುದ್ಧವೆ ಉಪವೀತ

ಅರ್ಜುನ ರಥದಲಿ ಸಾರಥಿಯಾತನು, ಹಿಡಿದಿಹ ಚಾವಟಿಗೆ
ಕಣ್ಣೆದುರೆಂತು ಬಂದೀತವಗೆ, ಯಮುನೆಯ ಪಾವಟಿಗೆ ?

ಪಿಳ್ಳಂಗೋವಿಯ ಜಾಗವ ಪಡೆದಿದೆ ಶಂಖ ಪಾಂಚಜನ್ಯ
ಗೋಗಳ ಮಂದೆಯ ಬದಲಿಗೆ ಎದುರಿದೆ, ಚಿತ್ತ ಮರೆತ ಸೈನ್ಯ.

ಭಾನುವಾರ, ಮಾರ್ಚ್ 01, 2009

ಗೋರಿ ತೇರೆ ಆಂಖೇ ಕಹೇ..

ನಮ್ಮ ಮನೆಗೆ ಡಿಶ್ ಆಂಟೇನಾ ಬಂದ ಹೊಸತು. ಎಂಟೀವಿ ಆಗಿನ್ನೂ ಪೇ ಚಾನಲ್ ಆಗಿರಲಿಲ್ಲ. ಕಾಲೇಜಿಗೆ ಹೋಗುತ್ತಿದ್ದ ದಿನಗಳು.. ಸೊಗಸಾದ ಇಂಡಿ ಪಾಪ್ ಹಾಡುಗಳ ಝಮಾನಾ ಆರಂಭವಾಗಿತ್ತು. ಅಂದು ಕೇಳಿದ ಕೆಲ ಹಾಡುಗಳು, ಇಂದಿಗೂ ಕಾಡುತ್ತವೆ. ಅಂಥ ಕೆಲ ಹಾಡುಗಳು, ಇಲ್ಲಿವೆ...

ಗೋರಿ ತೇರೆ ಆಂಖೇ ಕಹೇ - ಲಕ್ಕಿ ಅಲಿ



ಭೂಲ್ ಜಾ - ಶಾನ್


ಓ ಸನಮ್- ಲಕ್ಕಿ ಅಲಿ.



ತನ್ಹಾ ದಿಲ್- ಶಾನ್



ಮೈನೇ ಪಾಯಲ್ ಹೀ- ಫಾಲ್ಗುಣಿ ಪಾಠಕ್




ಡೂಬಾ ಡೂಬಾ - ಮೋಹಿತ್ ಚೌಹಾನ್




ಪ್ಯಾರ್ ಕೇ ಗೀತ್ ಸುನಾ ಜಾರೇ- ಶುಭಾ ಮುದ್ಗಲ್




ಮತ್ತು ಖಂಡಿತಾ ಮರೆಯಲಾಗದ,
ಮೇರೀ ಚೂನರ್ ಉಡ್ ಉಡ್ ಜಾಯೇ- ಫಾಲ್ಗುಣಿ ಪಾಠಕ್.



ನೆನಪಿಸಿಕೊಳ್ಳಬಹುದಾದ ಇನ್ನೂ ಹಲವೆಂದರೆ, ಪಿಯಾ ಬಸಂತೀ ರೇ, ಯಾರೋ ದೋಸ್ತೀ, ದೇಖಾ ಹೇ ಐಸೇ ಭೀ, ಇತ್ಯಾದಿ ಇತ್ಯಾದಿ.

ಸುಮ್ಮನೇ, ಯಾಕೋ ಇವೆಲ್ಲ ನೆನಪಾಯಿತು.

ಗುರುವಾರ, ಫೆಬ್ರವರಿ 26, 2009

ರಾಧಾಸ್ವಗತ

ಕೊಳಲ ಮಾಂತ್ರಿಕನವನು ನವಿಲುಗಣ್ಣಿನ ಚೆಲುವ
ಎಲ್ಲಿಹನು ಯಾಕಿನ್ನು ಬಂದಿಲ್ಲವಲ್ಲ,
ನನ್ನ ಕಾಡುವುದವಗೆ ಸಂತಸದ ಕೆಲಸವು
ಉದ್ಧಾರವಾಗನಿವ ತುಂಟ ಗೊಲ್ಲ

ಅಲ್ಲೆಲ್ಲೋ ದೂರದಲಿ ಮುರುಳಿಗಾನದ ತಾನ
ಬರುತಿಹನೆ ಇತ್ತಕಡೆ ಗಿರಿಧಾರಿಯು?
ಮರಹೂವ ಹಾಸಿಗೆಯು,ಸ್ವಾಗತಕೆ ಸಿದ್ಧವಿದೆ
ಕಾತರದಿ ಕಾಯುತಿದೆ ವನದಾರಿಯು

ಘಳಿಗೆಗಳು ಕಳೆದರೂ, ಶ್ಯಾಮನಾ ಸುಳಿವಿಲ್ಲ
ನನಗೇತಕೋ ಇಂದು ಭ್ರಮೆಯಾಗಿದೆ
ಬಿದಿರ ಮೆಳೆಗಳ ಮಧ್ಯೆ ಗಾಳಿ ಸುಳಿದರು ಕೂಡ
ಮೋಹನನು ಕರೆದಂತೆ ಕೇಳಿಸುತಿದೆ

ಯಾವ ಗೋಪಿಕೆಯ ಜೊತೆ ಲಲ್ಲೆ ಹೊಡೆಯುತಲಿಹನೋ
ನನ್ನ ನೆನಪೇ ಇಲ್ಲ, ಕಳ್ಳನವನು
ಮತ್ತೆ ಮೆಲ್ಲನೆ ಬಂದು ನನ್ನ ಬಳಸುತ ನಿಂದು
ಏನೇನೋ ಕಥೆ ಹೇಳಿ ಮರುಳು ಮಾಡುವನು

ಗೋಪಾದಗಳ ಜೊತೆಗೆ ಗೋಪಾಲಾನ ಹೆಜ್ಜೆ
ಹುಡುಕುವುದದೆಂತು ಈ ನೀಲಮೊಗದವನ
ಯಾವ ಗಿರಿ ಕಂದರವೋ, ಹಸಿರ ಹಾಸಿನ ಬಯಲೋ,
ಇದ್ದಲ್ಲಿ ಇರಲಾರ, ಮಿಗದ ಚಲನ!

ಅಗೋ,ಅಲ್ಲಿ ಬಯಲೊಳಗೆ ನಿಂತಿಹನು ಚೆಲ್ವ ಸಖ
ಪುಟ್ಟ ಕರುವಿನ ಕುಣಿತ ಅವನ ಮುಂದೆ
ಸಂಜೆಗೆಂಪಾಗುತಿರೆ, ಬಾನುರಂಗೇರುತಿದೆ
ವನಮಾಲಿಯಾ ಹಿಂದೆ, ದನದ ಮಂದೆ

ಬುಧವಾರ, ಫೆಬ್ರವರಿ 04, 2009

ಚಾರಣ ಚರಣಗಳು..

ದಿನಕ್ಕೆಷ್ಟು ಸಂಬಳ ನಿನಗೆ?" ಸುಮ್ಮನೆ ಕೇಳಿದೆ ಆತನ ಬಳಿ, ಹೋಗುವ ದಾರಿ ಸಾಗಲು ಏನಾದರೂ ಮಾತನಾಡಬೇಕಿತ್ತು.
"125 ರೂಪಾಯಿ" ಥಟ್ಟಂತ ಉತ್ತರ ಕೊಟ್ಟ. ಕಾಡು ದಾರಿ. ತರಗಲೆ ಸರಪರ ಸದ್ದು, ಬಿಟ್ಟರೆ ಹಿಂದೆಲ್ಲೋ ಬರುತ್ತಿರುವ ಸಂಗಡಿಗರ ದನಿ.
"ಸಾಕಾಗತ್ತನೋ ಸಂಬಳ" ಸುಮ್ಮನೆ ಕೇಳಿದೆ- ಅವನ ಕೈಲಿದ್ದ ಕಳ್ಳಭಟ್ಟಿಯ ಬಾಟಲು ನೋಡುತ್ತ. ಹುಂ, ಸಾಕಾಗುತ್ತದೆ, ಆದರೆ 100 ರೂಪಾಯಿ ಕುಡೀಯೋಕೆ ಬೇಕು".
"ಅರೇ, ನೂರು ರೂಪಾಯಿ ಕುಡಿಯೋಕೆ ಬೇಕು ಅಂತೀಯಲ್ಲೋ, ಮತ್ತೆ ಸಾಕಾಗೋದು ಹೇಗೆ ಮಾರಾಯ?"

ಅವನು ಸ್ವಲ್ಪ ಹೊತ್ತು ಮಾತಾಡದೇ ಹಾಗೇ ಮುಂದುವರಿಯುತ್ತಿದ್ದ. ನಾನು ಅವನ ಯಮವೇಗಕ್ಕೆ ನನ್ನನ್ನು ಹೊಂದಿಸಿಕೊಳ್ಳಲು ಪ್ರಯತ್ನ ಮಾಡುತ್ತ ಜೋರಾಗಿ ಹೆಜ್ಜೆ ಹಾಕಿದೆ.

ನಮಗೊಂದಿಷ್ಟು ಜನಕ್ಕೆ ಚಾರಣದ ಹುಚ್ಚು. ತಿಂಗಳಿಗೆ ಎರಡು ತಿಂಗಳಿಗೆ ಒಂದು ಬಾರಿಯಾದರೂ ಬೆಟ್ಟ-ಗುಡ್ಡ, ನದಿಕೊಳ್ಳ ಅಂತ ಓಡಾಡದಿದ್ದರೆ, ಉಂಡ ಅನ್ನ ಕರಗುವುದಿಲ್ಲ, ಸರಿ ನಿದ್ರೆ ಬರುವುದಿಲ್ಲ. ಹೀಗಾಗಿ, ಎಲ್ಲ ಮಾತಾಡಿಕೊಂಡು, ಎಂದಿನಂತೆ ಯಾವುದೋ ದೂರದೂರಿಗೆ, ಯಾವುದೋ ಬೆಟ್ಟ ಹತ್ತಲು ಹೋಗಿದ್ದೆವು. ಬೆಟ್ಟದ ಕೆಳಗಿನೂರಿನ ಇಬ್ಬರು ಯುವಕರು ನಮ್ಮ ಜೊತೆಗೆ ಬಂದಿದ್ದರು, ಗೈಡುಗಳಾಗಿ. ಐದಾರು ತಾಸು ನೆತ್ತಿಸುಡುವ ಬಿಸಿಲು ಮತ್ತು ಸುಸ್ತು. ಅವರಿಬ್ಬರು ಉತ್ಸಾಹ ತುಂಬದಿದ್ದರೆ, ನಾವ್ಯಾರು ಮೇಲೆ ಹತ್ತಲು ಸಾಧ್ಯವೇ ಇರಲಿಲ್ಲ.

ನನ್ನ ಜೊತೆಗೆ ಮಾತಾಡುತ್ತಿದ್ದವನ ಹೆಸರನ್ನು ರಾಜೀವ ಅಂತಿಟ್ಟುಕೊಳ್ಳಿ. ಮೂವತ್ತು ವರ್ಷವಿರಬಹುದು. ಚುರುಕು ನಡಿಗೆ, ತೇಜಸ್ವಿ ಕಾದಂಬರಿಯಿಂದ ಸಟಕ್ಕನೆ ಹೊರಗೆದ್ದು ಬಂದ ಹಾಗಿನವನು. ರಾತ್ರಿ ಕುಡಿಯದಿದ್ದರೆ ಆಗದು ಅಂತ, ಬೆಟ್ಟದ ಮತ್ತೊಂದು ತುದಿ ಇಳಿದು, 2-2 ತಾಸು ನಡೆದು ಕಳ್ಳಭಟ್ಟಿ ತಂದುಕೊಂಡವನು.

ರಾತ್ರಿಯಿಡೀ ಬೆಟ್ಟದ ಶಿಖರದಲ್ಲಿ ಕಳೆದು ಮಾರನೇ ದಿನ ಬೆಳಗ್ಗೆ ಅವರೋಹಣದಲ್ಲಿ ತೊಡಗಿದ್ದಾಗ ಈ ರಾಜೀವನ ಬಳಿ ಮಾತಿಗೆ ತೊಡಗಿದ್ದೆ. ಮೈ ಕೈ ನೋವು ನಮಗೆಲ್ಲ. ಈ ಯುವಕರಿಬ್ಬರು ಮಾತ್ರ ಗಟ್ಟಿಯಾಳುಗಳು. ಲವಲವಿಕೆಯಿಂದ ಕುಣಿಯುತ್ತ, ಆರಾಮಾಗಿ ಬರುತ್ತಿದ್ದರು ನಮ್ಮ ಜೊತೆ, ಕಳ್ಳಭಟ್ಟಿ ಕಾರಣವಿದ್ದರೂ ಇರಬಹುದು, ಬೇರೆ ವಿಚಾರ.

ರಾಜೀವನ ಬಳಿ ಮತ್ತೆ ಕೇಳಿದೆ, ನೂರು ರೂಪಾಯಿಯ ಖರ್ಚು ಕುಡೀಯೋಕೆ ಆದರೆ, ಹೊಟ್ಟೆ-ಬಟ್ಟೆಗೇನೋ ಅಂತ. ಅಯ್ಯ, ಅದೇನು ದೊಡ್ಡ ವಿಚಾರ ಅನ್ನುವ ಹಾಗೆ ಒಮ್ಮೆ ಹಿಂತಿರುಗಿ ನೋಡಿದವನೇ ತಾನು ಮತ್ತು ತನ್ನಂತವರು ಹೇಗೆ ಬದುಕುತ್ತಿದ್ದೇವೆ ಅನ್ನುವುದನ್ನು ವಿಸ್ತಾರವಾಗಿ ಹೇಳಿದ.

ಅದೇನೋ ಮರದ ಎಣ್ಣೆಯಂತೆ, ಕಿಲೋಗೆ 500 ರೂಪಾಯಿ, ವಾರದಲ್ಲಿ ಒಂದು ದಿನ ನಾಲಾರು ಜನ ಸೇರಿ ಕಾಡಲೆದು, ಎಣ್ಣೆಮರ ಹುಡುಕಿ, 3-4 ಕೇಜಿ ಎಣ್ಣೆ ಸಂಪಾದಿಸುತ್ತಾರಂತೆ,(ಕೊನೆಗೂ ಆ ಮರದ ಹೆಸರು ಹೇಳಲಿಲ್ಲ ಆಸಾಮಿ) ಇನ್ನು ಉಳಿದದಿನ ಧೂಪ, ಸೀಗೇಕಾಯಿ, ದಾಲ್ಚಿನ್ನಿ, ಜೇನು, ರಾಮಪತ್ರೆ- ಹೀಗೆ ಒಂದಲ್ಲ ಎರಡಲ್ಲ- ಕೇಜಿ 10ರಿಂದ ಹಿಡಿದು 300ರವರೆಗೆನ ಉತ್ಪನ್ನಗಳು ಕಾಡಲ್ಲೇ ಲಭ್ಯ. ಇವುಗಳನ್ನೆಲ್ಲ ಕಷ್ಟ ಪಟ್ಟು ಒಟ್ಟು ಮಾಡಿ ಮಾರಿದರೆ, ಆರಾಮಾಗಿ ಜೀವನ ಸಾಗಿಸಲು ಸಾಧ್ಯವಾದಷ್ಟು ದುಡ್ಡು ಗ್ಯಾರೆಂಟಿ. ಇವ್ಯಾವುದೂ ಇಲ್ಲದೇ ಹೋದರೆ, ದಿನಗೂಲಿ ಕೆಲಸ-125ರೂಪಾಯಿಗಳು.

ಹೇಗೆ ದುಡ್ಡು ಮಾಡಬೇಕೆಂಬುದನ್ನು ಚೆನ್ನಾಗಿ ಅರಿತಿರುವ ಆತನಿಗೆ, ಇಷ್ಟೆಲ್ಲ ಆದರೂ ಕಾಲದೇಶಗಳ ಬಗೆಗಿನ ಪರಿವೆಯೇ ಇರಲಿಲ್ಲ ಎಂಬುದು ನಮಗೆ ನಮ್ಮ ಪ್ರಯಾಣದ ಆರಂಭದಲ್ಲೇ ಗೊತ್ತಾಗಿತ್ತು. ಕಿಲೋಮೀಟರು ಎಂಬ ಮಾಪನದ ಅರಿವೇ ರಾಜೀವನಿಗೆ ಇರಲಿಲ್ಲ. ಹತ್ತಿರದ ದೊಡ್ಡ ಊರಿಗೆ 8 ರೂಪಾಯಿಯ ದೂರ, ಮತ್ತೂ ದೊಡ್ಡ ಪಟ್ಟಣಕ್ಕೆ 50 ರೂಪಾಯಿ ದೂರ!

ಜಗತ್ತಿನ ಇತರ ಯಾವುದೇ ಆಗುಹೋಗುಗಳ ಬಗೆಗಿನ ಚಿಂತೆ ರಾಜೀವನಿಗಾಗಲೀ, ಮತ್ತೊಬ್ಬನಿಗಾಗಲೀ ಅಗತ್ಯವೇ ಇರಲಿಲ್ಲ. ರಾಜೀವನ ಅಂದಾಜಲ್ಲಿ ಪ್ರಧಾನಮಂತ್ರಿ ಇನ್ನುಕೂಡ ವಾಜಪೇಯಿಯೇ. ನಾನು ಅವನನ್ನು ತಿದ್ದ ಹೊರಟರೂ, ಇರ್ಲಿ ಬಿಡಿ- ಯಾರಾದರೇನು ಅನ್ನುವ ಧಾಟಿಯ ಉತ್ತರ ಬಂತು.ಸುಮ್ಮನಾದೆ.

ಆ ಪುಟ್ಟ ಊರಿನಲ್ಲಿ ಬದುಕುವ ಅವರುಗಳಿಗೆ, ವಾರದಕೊನೆಯಲ್ಲಿ ಬೆಂಗಳೂರಿನಂತಹ ನಗರಗಳಿಂದ ಬರುವ ಬೆಟ್ಟ ಹತ್ತುವವರು, ಮನರಂಜನೆ ಮತ್ತು ಆದಾಯದ ಇನ್ನೊಂದು ಮೂಲವೂ ಹೌದು. ನಮಗೆ ಅವರ ಊರೆದುರಿನ ಬೆಟ್ಟ ಒಂದು ಚಾರಣಯೋಗ್ಯ ಸ್ಥಳ. ಅವರಿಗೋ, ಅದೊಂದಕ್ಕೆ ಬಿಟ್ಟು ಮತ್ತೆ ಉಳಿದೆಲ್ಲಕ್ಕೂ ಯೋಗ್ಯ. ಬ್ಯಾಗು ಹೊತ್ತು ಏದುಸಿರು ಬಿಡುತ್ತ ಸಾಗುವ ನಾವುಗಳು ಅವರ ಕಣ್ಣಿಗೆ ಪೆಕರಗಳು. ಏನೇ ಆದರೂ, ನಮ್ಮ ಜೊತೆ ನಗುನಗುತ್ತ, ಅದೂ ಇದೂ ಹರಟುತ್ತ, ನಾವು ಹೇಳುವ ನಗರದ ಕಥೆಗಳನ್ನು ಬೆರಗಿನಿಂದ ಕೇಳುತ್ತ ನಿಷ್ಕಲ್ಮಶ ನಗು ನಗುವ ಅವರುಗಳನ್ನ ನೋಡಿ ಹೊಟ್ಟೆಕಿಚ್ಚಾಯಿತು ನನಗೆ.

ಇತ್ತೀಚಿಗೆ ಪ್ರಾಮಾಣಿಕವಾಗಿ ನಗುವುದೂ ಮರೆತು ಹೋಗಿದೆಯಲ್ಲ!

ಭಾನುವಾರ, ಜನವರಿ 18, 2009

ಯಾವ ಮೋಹನ ಮುರಲಿ ಕರೆಯಿತೋ...

ನಿನ್ನೆ ರಾತ್ರಿ ಪಾಳಿ,ನಮ್ಮ ಎಡಿಟರ್ ರೆಡ್ದಿ ಬೆಳಗಿನ ನ್ಯೂಸ್ ನ ಎಡಿಟಿಂಗ್ ಮಾಡ್ತಾ ಕೂತಿದ್ದರು. ರಾಜು ಅನಂತಸ್ವಾಮಿ ತೀರಿಕೊಂಡು ಸುಮಾರು ಹನ್ನೆರಡು ತಾಸು ಕಳೆದಿತ್ತು.. ಇಂದು ಬೆಳಗಿನ ವಾರ್ತೆಗೆ ಅವರ ಹಾಡುಗಳನ್ನು- ನಮ್ಮ ಸ್ಟುಡಿಯೋಗೆ ಬಂದು ಹಾಡಿದ್ದ ಹೆಂಡದ ಹಾಡು, ರಾಜು ಅನಂತ ಸ್ವಾಮಿಯವರ ವಿಶುವಲ್ ಗಳನ್ನ ಹಾಕಿ ಶ್ರದ್ಧೆಯಿಂದ ಎಡಿಟಿಂಗ್ ಸಾಗುತ್ತಿತ್ತು. ಆ ಸುದ್ದಿಯ ಕೊನೆಯಲ್ಲಿ, ಸ್ಟೋರಿ ಮುಗಿಸಲು - ಅವರೇ ಅಮೆರಿಕ ಅಮೆರಿಕ ಸಿನಿಮಕ್ಕೆ ಭಾವದುಂಬಿ ಹಾಡಿದ "ಯಾವ ಮೋಹನ ಮುರುಲಿ ಕರೆಯಿತೋ" ಆಡಿಯೋ ಸೇರಿಸಿದಾಗ ನನಗಂತೂ ಕಣ್ಣು ತುಂಬಿ ಬಂದು- ಎದ್ದು ಬಂದುಬಿಟ್ಟೆ.

ಗೆಳೆಯನೊಬ್ಬ ಮಧ್ಯಾಹ್ನ ವಿಲ್ ಸ್ಮಿತ್ ನ ಸೆವೆನ್ ಪೌಂಡ್ ನೋಡುತ್ತ ಕೂತಿದ್ದಾಗ ರಾಜು ಅನಂತಸ್ವಾಮಿ ತೀರಿಕೊಂಡ ಸುದ್ದಿ ತಲುಪಿಸಿದ. ಕ್ಷಣ ಹೊತ್ತು ಮನಸ್ಸು ಪರದೆಯ ಮೇಲೆ ಓಡುತ್ತಿದ್ದ ಚಿತ್ರಗಳನ್ನಷ್ಟೇ ನೋಡುತ್ತಿತ್ತು. ಈ ಸಿನಿಮಾದಲ್ಲಿ ಆದಂತೆ ಯಾರಾದರೂ ರಾಜುಗೆ ಕಿಡ್ನಿ ದಾನ ಮಾಡಬಾರದಿತ್ತೇ ಅಂತ ಕ್ಷಣ ಅನ್ನಿಸಿದ್ದು ಸುಳ್ಳಲ್ಲ.

ಒಂದೂವರೆ ವರ್ಷದ ಹಿಂದೆ, ವಿದ್ಯಾರಣ್ಯ ಯುವಕ ಸಂಘದ ಗಣೇಶೋತ್ಸವದಲ್ಲಿ ತೀರಾ ಹೈರಾಣಾಗಿ ಹೋಗಿದ್ದ ರಾಜು, ನಿಂತುಕೊಳ್ಳಲೂ ಆಗದೆ, ಕೂರಲೂ ಆಗದೇ ಒದ್ದಾಡುತ್ತಿದ್ದರು. ಆವತ್ತು ಸುಶ್ರುತನಿಗೆ ಹೇಳಿದ್ದೆ, ಪ್ರಾಯಶ: ಇದು ರಾಜು ಕಡೆ ಕಾರ್ಯಕ್ರಮ ದೋಸ್ತಾ. ಇನ್ನು ಈ ಮನುಷ್ಯ ಹಾಡುವುದು ಡೌಟು.. ಆದರೆ ಆಮೇಲೆ ಸುಮಾರಿಗೆ ರಿಕವರ್ ಆಗಿದ್ದ ರಾಜು ಮತ್ತೆ ಚಿಗಿತುಕೊಂಡು ಹಳೇ ಉಮೇದಿನಿಂದಲೇ ಹಾಡಲು ತೊಡಗಿದ್ದರು. ಆದರೆ ಮೊದಲಿನ ಶಕ್ತಿ ಇಲ್ಲದ್ದು ಗೊತ್ತಾಗುತ್ತಿತ್ತು...

ನಾನು ಬಹುವಾಗಿ ಮೆಚ್ಚಿದ ಭಾವಗೀತೆಗಳ ಗಾಯಕ ರಾಜು ಅನಂತಸ್ವಾಮಿ. ನಾನು ಹೆಚ್ಚು "ಲೈವ್" ಕೇಳಿದ್ದು ಕೂಡ ರಾಜು ಅನಂತಸ್ವಾಮಿಯವರನ್ನೇ. ಬೆಂಗಳೂರಿಗೆ ಬಂದ ಮೇಲೆ ಏನಿಲ್ಲವೆಂದರೂ ಇಪ್ಪತ್ತಕ್ಕೂ ಹೆಚ್ಚು ಬಾರಿ ಇವರ ಕಾರ್ಯಕ್ರಮಗಳಿಗೆ ಹಾಜರಿ ಹಾಕಿದ್ದೆ. ರತ್ನನ ಪದಗಳು, ತಂದೆ ಸ್ವರ ಸಂಯೋಜಿಸಿದ ಎದೆ ತುಂಬಿ ಹಾಡುವೆನು.. ಬೇಂದ್ರೆಯವರ ಆವು ಈವಿನ.. ಇದನ್ನೆಲ್ಲ ಹೇಗೆ ಹಾಡುತ್ತಿದ್ದರು ರಾಜು! ವಿಚಿತ್ರ ಹಾಡುವ ಶೈಲಿ- ಥಟ್ ಅಂತ್ ಹಾಡು ನಿಲ್ಲಿಸಿಯೇ ಬಿಟ್ಟು ಅದನ್ನ ಮತ್ತೆ ಶುರು ಮಾಡಿ ನಗುವುದು.. ಇದನ್ನೆಲ್ಲ ಕೇವಲ ರಾಜು ಮಾತ್ರವೇ ಮಾಡಬಲ್ಲಂತದ್ದು.

ಹನುಮಂತ ನಗರ ಬಿಂಬದ ಅನಂತ ನಮನ ಕಾರ್ಯಕ್ರಮದಲ್ಲಿ ಸತತ ಒಂದು ವರ್ಷ ಪ್ರತಿ ತಿಂಗಳ ಒಂದು ಭಾನುವಾರ, ಹೊಸ ಗಾಯಕನೊಬ್ಬನ ಪರಿಚಯದ ವೇದಿಕೆಯಲ್ಲಿ, ರಾಜು ಪಕ್ಕ ಕೂತು ಹಾರ್ಮೋನಿಯಂ ಬಾರಿಸುತ್ತಿದ್ದರು. ಸಿಕ್ಕಾಪಟ್ಟೆ ಮೂಡು ಬಂದ ದಿನ ಕೋಳಿಕೇ ರಂಗನೋ, ನನ್ ಪುಟ್ನಂಜೀ ನೋ ಹಾಡುತ್ತಿದ್ದರು. ಯಾರಾದರೂ ಸಿಕ್ಕಾಪಟ್ಟೆ ಇಂತಾದ್ದೇ ಹಾಡು ಹಾಡಿ ಅಂತ ಕೋರಿದರೆ, ಖಂಡಿತವಾಗಲೂ ಆ ಹಾಡು ಹಾಡುವುದಿಲ್ಲ ಅಂತಲೇ ಲೆಕ್ಕ.

ಬಿಂಬದ ಕಾರ್ಯಕ್ರಮದಲ್ಲೇ ಒಂದು ದಿನ ಎ.ಎಸ್.ಮೂರ್ತಿ ಹೇಳಿದ್ದರು, "ದಿನಾ ಅಭಿಷೇಕ ಮಾಡಿಸುವಷ್ಟು ಬಾದಾಮಿ ಹಾಲು ಕೊಡಿಸ್ತೀನಿ ಮಾರಾಯ, ಪಾನಕ ಸೇವೆ ಬಿಡು"ಅಂತ. ಸುಮ್ನೆ ನಕ್ಕಿದ್ದರು ರಾಜು.

ನನಗೊಂದು ಆಸೆಯಿತ್ತು. ನಾನು ಬರೆದ ಕವನವೊಂದನ್ನು ರಾಜು ಅನಂತಸ್ವಾಮಿಯವರಿಗೆ ಕೊಟ್ಟು ಅವರ ರಾಗ ಸಂಯೋಜನೆ-ಧ್ವನಿಯಲ್ಲಿ ಆ ಹಾಡು ಕೇಳಬೇಕು.. ಆಸೆ... ಹಾಗೇ ಹೂತು ಹೋಯಿತು....ಬೃಂದಾವನ ಸೇರಿದ ಮಣ್ಣ ಕಣ್ಣಿನ ಜೊತೆಗೆ.

ಗುರುವಾರ, ಜನವರಿ 08, 2009

ಮೆಜೆಸ್ಟಿಕ್ ಮೋಸಗಳು...

ನಾನು ಬೆಂಗಳೂರಿಗೆ ಬಂದ ಆರಂಭದಲ್ಲಿ, ಮೆಜೆಸ್ಟಿಕ್ ನ ಸಮೀಪವೇ ಇರುವ ಗಾಂಧೀನಗರದಲ್ಲಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ನಿತ್ಯ ಮೆಜೆಸ್ಟಿಕ್ ಗೆ ಬೇಡವೆಂದರೂ ಹೋಗಲೇಬೇಕಿತ್ತು ಆ ಕಾಲದಲ್ಲಿ. ಬೆಳಗ್ಗೆ ಅಂತಿಲ್ಲ, ಸಂಜೆ ಅಂತಿಲ್ಲ, ಯಾವಾಗ ನೋಡಿದರೂ ಗಿಜಿಗಿಜಿ ಗುಡುತ್ತಲೇ ಇರುವ ಮೆಜೆಸ್ಟಿಕ್ ಗೆ ಕಾಲಿಡಲೇ ಮೊದಮೊದಲು ಹೆದರಿಕೆಯಾಗುತ್ತಿತ್ತು. ಬೆಂಗಳೂರಿಗೆ ಬಂದ ಕೂಡಲೇ ಮೆಜೆಸ್ಟಿಕ್ ಬಗ್ಗೆ ಒಂದಿಷ್ಟು ಜನ ಹೆದರಿಕೆ ಹುಟ್ಟಿಸಿಬಿಟ್ಟಿದ್ದರು- ಅದೊಂದು ಪಾಪಕೂಪವೇನೋ ಅನ್ನುವ ಹಾಗೆ. ದಿನವೂ ಮೆಜೆಸ್ಟಿಕ್ ಗೇ ಬಂದಿಳಿದು, ಗಾಂಧೀನಗರದವರೆಗೆ ಭುಜಕ್ಕೆ ಭುಜ ತಾಗುವ ಜಂಗುಳಿಯಲ್ಲೇ ನಡೆದು ಹೋಗುವ ಪರಿಸ್ಥಿತಿ ನನ್ನದು ಆಗ. ಮೊದಲೊಂದಿಷ್ಟು ಕಿರಿರಿಯಾದರೂ ನಂತರ ಒಗ್ಗಿಕೊಂಡೆ. ಅಲ್ಲಿನ ಕೆಲಸ ಆರು ತಿಂಗಳಿಗೇ ಬಿಟ್ಟಿದ್ದರಿಂದ ಮತ್ತೆ ಆ ಕಡೆ ತಲೆ ಹಾಕುವ ಕೆಲಸ ಬರಲಿಲ್ಲ ನನಗೆ.


ಇವತ್ತೂ ಊರಿಗೆ ಹೋಗಲು ಟಿಕೆಟ್ ಬುಕ್ ಮಾಡಿಲ್ಲದಿದ್ದರೆ ಮೆಜೆಸ್ಟಿಕ್ ನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣವೇ ಗತಿ. ಇಲ್ಲದೇ ಹೋದರೆ ಆ ಕಡೆ ಹೋಗುವುದು ಕಡಿಮೆ. ಇತ್ತೀಚಿಗೆ ಏನೋ ಕಾರಣಕ್ಕಾಗಿ ಒಂದೆರಡು ತಾಸು ಮೆಜೆಸ್ಟಿಕ್ ಅಲೆಯುವ ಪರಿಸ್ಥಿತಿ ಬಂತು. ಮತ್ತು, ಹಳೆಯ ಅನುಭವಗಳೆಲ್ಲ ಮತ್ತೆ ಒಂದು ರೌಂಡ್ ರಿಪೀಟಾಯಿತು. ಮೆಜೆಸ್ಟಿಕ್ ಇನ್ನೂ ಹಾಗೇ ಇದೆ, ಮತ್ತು ಇನ್ನು ಮುಂದೂ ಹಾಗೇ ಇರುತ್ತದೆ ಎನ್ನುವುದನ್ನು ನೆನಪಿಸಲೆಂಬಂತೆ. ನನಗಾದ ಅನುಭವಗಳೆಲ್ಲ ನಿಮ್ಮಲ್ಲಿ ಹೆಚ್ಚಿನವರಿಗೆ ಆಗಿಯೇ ಇರುತ್ತದೆ. .

೧. ಸಂಜೆ ಹೊತ್ತು, ಮೆಜೆಸ್ಟಿಕ್ಕಿನಲ್ಲಿ ನೀವು ಸ್ವಲ್ಪ ಠಾಕುಠೀಕಾಗಿ ಡ್ರೆಸ್ ಮಾಡಿಕೊಂಡು ನಿಮ್ಮ ಪಾಡಿಗೆ ನೀವು ಹೋಗುತ್ತಿದ್ದರೆ, ಸಟಕ್ಕನೆ ಒಬ್ಬಾತ ಬಂದು ನಿಮ್ಮನ್ನ ಸ್ವಲ್ಪಬದಿಗೆ ಕರೆಯುತ್ತಾನೆ- ಕತ್ತಲಿನ ಕಡೆಗೆ. ಮೆಲ್ಲನೆ ಅತ್ತ ಇತ್ತ ನೋಡುತ್ತಾ, ಯಾರೂ ತನ್ನನ್ನು ನೋಡುತ್ತಿಲ್ಲ ಅನ್ನುವುದನ್ನು ಖಚಿತ ಪಡಿಸಿಕೊಂಡು ಒಂದು ವೆಲ್ವೆಟ್ ಬಟ್ಟೆಯಲ್ಲಿ ಸುತ್ತಿದ ಮಿರಿಮಿರಿ ಮಿಂಚುವ ಹೊಚ್ಚ ಹೊಸ ಕಪ್ಪುಕನ್ನಡಕ ತೆಗೆಯುತ್ತಾನೆ. ನೀವೂ ಕುತೂಹಲದಿಂದ ನೋಡಲಾರಂಭಿಸಿದರೆ- "ಸರ್, ನಾನು ಕನ್ನಡಕದ ಶೋರೂಮಲ್ಲಿ ಕೆಲಸ ಮಾಡ್ತಿದೀನಿ, ಈ ಕನ್ನಡಕ ಕದ್ದುಕೊಂಡು ಬಂದಿದೀನಿ, ಇದು ಪಕ್ಕಾ ಶೋರೂಮ್ ಪೀಸ್, ೨ ಸಾವಿರ ರೂಪಾಯಿ ಆಗತ್ತೆ, ನಿಮಗೆ ೫೦೦ಕ್ಕೆ ಕೊಡ್ತೀನಿ.. ನಂಗೇನೋ ಮನಿ ಅರ್ಜೆನ್ಸಿ ಇದೆ, ಅದಕ್ಕೆ ಹೀಗೆ ಮಾಡ್ಬೇಕಾಗಿದೆ" ಅನ್ನುತ್ತಾನೆ. ಜೊತೆಗೆ ವಿಶ್ವಾಸಾರ್ಹತೆಯ ಪ್ರತೀಕವಾಗಿ ಶೋರೂಮೊಂದರ ವಿಸಿಟಿಂಗ್ ಕಾರ್ಡನ್ನೂ ನಿಮಗೆ ತೋರಿಸುತ್ತಾನೆ. ನೀವು ನಿಮ್ಮ ಅದೃಷ್ಟಕ್ಕೆ ಖುಷಿ ಪಡುತ್ತ ಕನ್ನಡಕ ಕೊಂಡಿರೋ, ಅಷ್ಟೇ- ಮುಗಿಯಿತು. ಕಮ್ಮಿ ಎಂದರೂ ೪೦೦ ರೂಪಾಯಿ ಕಳೆದುಕೊಂಡಿರಿ ಅಂತ ಅರ್ಥ. ಇದೇ ತರ ಕಂಪನಿ ವಾಚುಗಳನ್ನು ಮಾರುವವರು ಕೂಡ ಸಿಗುತ್ತಾರೆ. "Rado ವಾಚು ಸರ್.. "ಮತ್ತೆ ಅದೇ ಹಳೇ ಕಥೆ..

೨. ನೀವು ನ್ಯಾಷನಲ್ ಮಾರ್ಕೆಟ್ ಕಡೆಗೋ ಮತ್ತೆಲ್ಲಿಗೋ ಅರ್ಜೆಂಟಾಗಿ ಹೋಗುತ್ತಿದ್ದೀರಿ... ಮಳೆ ಬೇರೆ ಬರುವ ಹಾಗಿದೆ. ಪಕ್ಕದಲ್ಲೊಬ್ಬ ಒಂದಿಷ್ಟು ಕಣ್ಣಿಗೆ ಕುಕ್ಕುವ ಬಣ್ಣದ ಜರ್ಕಿನ್ ಗಳನ್ನು ರಾಶಿ ಹಾಕಿಕೊಂಡು ೫೦ ಕ್ ಒಂದು ಅಂತ ಕಿರುಚತ್ತ ನಿಂತಿದ್ದಾನೆ. ಹೋಗಿ ನೋಡಿದರೆ ಆಕರ್ಷಕ ಬಣ್ಣಗಳ- ನೋಡಲೂ ಪರವಾಗಿಲ್ಲ ಅನ್ನಬಹುದಾದ ಜರ್ಕಿನ್ ಗಳು. ನಿಮ್ಮ ಬಳಿ ಮಳೆ ತಡೆದುಕೊಳ್ಳಲು ಏನೂ ಇಲ್ಲ ಬೇರೆ. ಆತ ನಿಮಗೆ ೪೦ಕ್ಕೇ ಕೊಡಲೂ ಸಿದ್ಧನಿದ್ದಾನೆ. ನಿಮಗೀಗ ಅದನ್ನು ಕೊಳ್ಳದೇ ಬೇರೆ ವಿಧಿಯೇ ಇಲ್ಲ. ಮನೆಗೆ ಹೋಗುವ ದಾರಿಯಲ್ಲಿ ಮಳೆ ಬಂದಿದ್ದೇ ಹೌದಾದರೆ, ನೀವು ಹಾಕಿಕೊಂಡಿದ್ದ ಶರ್ಟನ್ನು ಎಸೆಯಲು ಅಡ್ಡಿಯಿಲ್ಲ.

೩. ಹತ್ರುಪಾಯ್ ಸಾಕ್ಸ್ ಹತ್ರುಪಾಯ್ ಸಾಕ್ಸ್ ಅಂತ ಕೂಗುವವರು ಅಡಿಗಡಿಗೆ ಸಿಕ್ಕಾರು ನಿಮಗಿಲ್ಲಿ. ಅರೇ, ನೋಡೋಣ- ಟ್ರೈ ಮಾಡಿದರೆ ಹೇಗೆ ಅಂತ ಕೊಂಡೊಯ್ದರೆ, ಮೊದಲ ಒಗೆತಕ್ಕೇ ಸಾಕ್ಸು ಒಂದೋ ಮೊರದಗಲ, ಇಲ್ಲವೋ ಬೆರಳಗಲ.

೪. ಇಂದು ರಾತ್ರಿಯೇ ನಿಮಗೆ ತಿರುಪತಿಗೋ, ಹೈದರಾಬಾದ್ ಗೋ , ಮಂತ್ರಾಲಯಕ್ಕೋ ಹೋಗಬೇಕಿದೆ. ಟಿಕೆಟ್ ಬುಕ್ ಆಗಿಲ್ಲ. ಮೆಜೆಸ್ಟಿಕ್ಕಿಗೆ ಹೋದರೆ ಸೀಟು ಸಿಗತ್ತೆ ಅಂತ ಯಾರೋ ಹೇಳುತ್ತಾರೆ. ಸರಕಾರೀ ಕೆ.ಎಸ್.ಆರ್.ಟಿ.ಸಿ ಬಗ್ಗೆ ನಿಮಗೆ ಒಳ್ಳೇ ಅಭಿಪ್ರಾಯವಿಲ್ಲ. ಖಾಸಗಿ ಟೂರಿಸ್ಟ್ ಬಸ್ಸುಗಳು ಸಿಗುವಲ್ಲಿಗೆ ಹೋಗುತ್ತೀರಿ. ನೀವು ಅಲ್ಲಿಗೆ ಹೋಗುತ್ತಿದ್ದ ಹಾಗೆ, "ಎಲ್ಲಿಗೆ ಸಾರ್, ಎಲ್ಲಿಗೆ ಮೇಡಮ್, ಎಷ್ಟ್ ಸೀಟ್ ಬೇಕು.. ಅಂತೆಲ್ಲ ಉಪಚಾರ ಮಾಡಿ ತಮ್ಮ ಕಿಷ್ಕಿಂದೆ ಆಫೀಸೊಳಗೆ ಕರೆದು, ತಮ್ಮ ಬಸ್ಸಿನ ಚಿತ್ರ ತೋರಿಸಿ, ಅವುಗಳ ಸುಖಾಸನಗಳ ಬಗ್ಗೆ ವಿವರಿಸಿ, ನಿಮಗೆ ಇದಕ್ಕೂ ಐಷಾರಾಮಿ ವ್ಯವಸ್ಥೆ ಮತ್ತೆಲ್ಲೂ ಸಿಗಲಾರದೆಂಬ ಅಶಾಭಾವನೆ ಮೂಡಿಸಿ, ಇನ್ನೇನು ಬಸ್ ಬರತ್ತೆ, ಹತ್ತಿಕೊಳ್ಳಿ ಅಂತ ರಸ್ತೆಗೆ ತಂದು ಬಿಡುತ್ತಾರೆ. ನೀವು ಟಿಕೆಟಿನ ಹಣ ಕೊಂಚ ದುಬಾರಿ ಅನ್ನಿಸಿದರೂ ಪಾವತಿಸಿ , ಬೆಳತನಕ ಹಾಯಾಗಿ ನಿದ್ರಿಸುವ ಕನಸು ಕಾಣುತ್ತ ಬಂದ ಬಸ್ಸು ಹತ್ತಿಕೊಂಡರೆ, ಅದೊಂದು ಸಾಮಾನ್ಯ - ಸೆಮಿ ಲಕ್ಷುರಿ ಬಸ್ಸು. ಕೇಳಿದರೆ, ಲಾಸ್ಟ್ ಮೊಮೆಂಟ್ ಗೆ ಆ ಬಸ್ಸು ಹಾಳಾಯ್ತು, ಸೋ ಈ ಬಸ್ ಬಂದಿದೆ ಅಂತೆಲ್ಲ ಕತೆ ಹೇಳಿ- ಬೆಳಗಾಗುವುದರೊಳಗೆ ತಿಗಣೆ ಕಡಿತ ಉಚಿತ ಮತ್ತು ಬೆನ್ನುನೋವು ಖಚಿತ.


ಎಲ್ಲರಿಗೂ ಇಂತಹ ಅನುಭವಗಳು ಆಗ್ಲೇಬೇಕು ಅಂತೇನೂ ಇಲ್ಲ.. ಎಲ್ಲ ನಿಮ್ಮ ನಿಮ್ಮ ಪುಣ್ಯಗಳ ಮೇಲೆ ಅವಲಂಬಿತ :)

ಬುಧವಾರ, ಜನವರಿ 07, 2009

ದಕ್ಷಿಣ ಬೆಂಗಳೂರಿನ ಆಹಾರ ಕೇಂದ್ರಗಳು

ಬೆಂಗಳೂರಿನ ಪ್ರಸಿದ್ಧ ಹೋಟೇಲುಗಳ ಹೆಸರು ಕೇಳಿದ ತಕ್ಷಣ ಎಲ್ಲರಿಗೂ ಎಂ.ಟಿ.ಆರ್, ವಿದ್ಯಾರ್ಥಿ ಭವನ, ಇತ್ಯಾದಿ ಹಳೆಯ ಹೆಸರುಗಳೇ ನೆನಪಿಗೆ ಬರುತ್ತವೆ. ಆದರೆ ಅದೆಷ್ಟೋ ಪ್ರಚಾರವಿಲ್ಲದ ಹೋಟೇಲುಗಳ ತಿಂಡಿಗಳು ಪ್ರಸಿದ್ಧ ಹೋಟೆಲುಗಳ ದೋಸೆಗಳನ್ನು- ಇಡ್ಲಿ ಗಳನ್ನು ನಿವಾಳಿಸಿ ಎಸೀಬೇಕು ಹಾಂಗಿರುತ್ತದೆ. ಆದರೇನು ಮಾಡೋಣ, ಅವುಗಳನ್ನು ಗುರುತಿಸಿಯೇ ಇಲ್ಲವೇ..

ನಾನು ಕಳೆದ ಮೂರು ವರುಷಗಳಿಂದ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಇರೋದ್ರಿಂದ, ಇಲ್ಲಿನ ಹಲವು ಹೋಟೇಲುಗಳ ಮೇಲೆ ನಂಗೆ ಋಣ ಇದೆ! ಪಾಪ, ಹೊತ್ತು ಹೊತ್ತಿಗೆ ನನ್ನಂತಹವರಿಗೆ ಬೇಕು ಬೇಕಾದ್ದನ್ನ ಮಾಡಿ ಹಾಕುತ್ತಿವೆ, ಈ ಹೋಟೇಲುಗಳು.


ಹಾಗಾಗಿ ಇಲ್ಲಿನ ವಿಶೇಷಗಳ ಕುರಿತ ಮಾಹಿತಿಯನ್ನ ನಿಮ್ಗೆ ಕೊಡೋಣ ಅನ್ನಿಸಿತು.


ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಎಸ್.ಎಲ್.ವಿ:


ಬನಶಂಕರಿ ಬಿ.ಡಿ.ಎ ಕಾಂಪ್ಲೆಕ್ಸ್ ನಿಂದ ಸ್ವಲ್ಪ ಮುಂದೆ ಬಂದ್ರೆ, ಈ ಪುಟ್ಟ ಹೋಟೇಲ್ ಸಿಗತ್ತೆ. ಇಲ್ಲಿನ ಸ್ಪೆಷಲ್ಲ್- ಇಡ್ಲಿ,ವಡೆ ಮತ್ತು ಚಟ್ನಿ. ಬೆಳಗ್ಗಿಂದ ಸಂಜೆ ತನಕಾ ಎಷ್ಟು ಹೊತ್ತಿಗೆ ಬಂದ್ರೂ, ಇಡ್ಲಿ ವಡೆ ಲಭ್ಯ. ಇಲ್ಲಿನ ಮಸಾಲೆ ವಡೇ ಕೂಡ ಚೆನ್ನಾಗಿದೆ. ಈ ಹೋಟೆಲು ಸದಾ ಜನರಿಂದ ತುಂಬಿ ತುಳುಕುತ್ತಿದ್ದಂತೆ ಅನ್ನಿಸಿದರೂ, ಕ್ವಿಕ್ ಸರ್ವೀಸು ಇರೋ ಕಾರಣ, ತೊಂದರೆಯಿಲ್ಲ. ಈ ಕಡೆ ಏನಾದ್ರೂ ಬಂದ್ರೆ, ಖಂಡಿತಾ ಟ್ರೈ ಮಾಡಿ- ಹೊಟ್ಟೆ ತುಂಬಿದ್ದರೂ ತೊಂದರೆಯಿಲ್ಲ.


ಗಾಂಧಿ ಬಜಾರ್ ಮಹಾಲಕ್ಷ್ಮೀ ಟಿಫಿನ್ ರೂಮ್


ಈ ಹೋಟೇಲು ನಮ್ಮ ಪ್ರಣತಿ ತಂಡದ ಒಂಥರಾ ಅಫೀಷಿಯಲ್ ಮೀಟಿಂಗ್ ಪ್ಲೇಸು. ಗಾಂಧೀ ಬಜಾರು ಸರ್ಕಲ್ನಲ್ಲಿ ಎಡಕ್ಕೆ ಒಂದು ೧೦೦ ಮೀಟರ್ ದೂರ ಹೋದ್ರೆ ಈ ಹೋಟೆಲ್ ಸಿಗತ್ತೆ. ಇಲ್ಲಿನ ಖಾಲಿ ದೋಸೆ ಮತ್ತು ಚಟ್ನಿಯ ರುಚಿ, ಅದ್ಭುತ. ಜೊತೆಗೆ ಕಾಫಿ ಕೂಡ. ಆರಾಮಾಗಿ ಕೂತು ತಿನ್ನಬಹುದಾದ ವ್ಯವಸ್ಥೆ, ಇಲ್ಲಿನ ಪ್ಲಸ್ ಪಾಯಿಂಟು.


ಪುಳಿಯೋಗರೆ ಪಾಯಿಂಟ್- ಡಿ.ವಿ.ಜಿ ರೋಡ್ ಬಸವನಗುಡಿ

ಕಹಳೆಬಂಡೆ ಪಾರ್ಕ್ ಪಕ್ಕದಲ್ಲೇ ಇರುವ ಈ ಹೋಟೆಲ್ ಗೆ, ಡಿ.ವಿ.ಜಿ ರೋಡ್ ನಲ್ಲಿ ಸ್ವಲ್ಪ ದೂರ ಬಂದು ಎಡಗಡೆ ರೋಡಲ್ಲಿ ಬರಬೇಕು. ಹೆಸರೇ ಹೇಳುವ ಹಾಗೆ ಈ ಹೋಟೆಲ್, ಪುಳಿಯೋಗರೆ-ಮೊಸರಿಗೆ ಫೇಮಸ್ಸು. ಜೊತೆಗೆ ಇಲ್ಲಿನ ಸ್ವೀಟ್ ಪೊಂಗಲ್ ಕೂಡ ಸೂಪರ್ರು. ಚಿತ್ರಾನ್ನ, ಬಿಸಿಬೇಳೆ ಬಾತ್ ಕೂಡ ಚೆನ್ನಾಗಿರತ್ತೆ.


ದಾವಣಗೆರೆ ಬೆಣ್ಣೆ ದೋಸೆ-ಎನ್.ಆರ್.ಕಾಲೊನಿ

ನರಸಿಂಹ ರಾಜ ಕಾಲೋನಿಯ, ನೆಟ್ಟಕಲ್ಲಪ್ಪ ಬಸ್ ಸ್ಟ್ಯಾಂಡ್ ನ ಸಮೀಪವೇ ಇರುವ ಒಂದು ಪುಟ್ಟ ದರ್ಶಿನಿ ಶ್ರೀ ಗುರು ಕೊಟ್ಟೂರೇಶ್ವರ ದಾವಣಗೆರೆ ಬೆಣ್ಣೇ ದೋಸೆ ಹೋಟೇಲು. ಇಲ್ಲಿನ ಬೆಣ್ಣೆ ದೋಸೆ, ಬೆಣ್ಣೇ ಖಾಲಿ , ಓಪನ್ ದೋಸೆ, ಪಡ್ಡು ಎಲ್ಲವೂ ಸಖತ್! ತಿಂದು ಕೈತೊಳೆದ ಮೇಲೂ ಅದರ ಘಮ ಹಾಂಗೇ ಇರತ್ತೆ! ಸಂಜೆ ಹೊತ್ತು ಇಲ್ಲಿಗೆ ಬಂದರೆ ಮಂಡಕ್ಕಿ ಒಗ್ಗರಣೆ ಮತ್ತು ಹಲಸಿಂದಿ ವಡೆ ತಿಂದು ನೋಡಿ, ಆಮೇಲೆ ಹೇಳಿ. ಫುಟ್ ಪಾತ್ ನಲ್ಲೇ ನಿಂತುಕೊಂಡು ತಿನ್ನಬೇಕಾಗಿರೋದೊಂದೇ ಮೈನಸ್ ಪಾಯಿಂಟ್- ಅದೇನ್ ಸಮಸ್ಯೆ ಆಗಲ್ಲ ಬಿಡಿ.


ಯುಡಿ ಅಥವಾ ಉಪಹಾರ ದರ್ಶಿನಿ- ನೆಟ್ಕಲ್ಲಪ್ಪ ಸರ್ಕಲ್

ದಾ.ಬೇ.ದೋ ಹೋಟೇಲ್ ಎದುರಿಗೆ ನಿಲ್ಲೋಕೂ ಜಾಗ ಇಲ್ಲದಷ್ಟು ರಶ್ ಇದೆ ಅಂತಿಟ್ಟುಕೊಳ್ಳಿ. ಹಾಂಗೇ ಒಂದು ಸ್ವಲ್ಪ ಮುಂದೆ ಬಂದು ಡಿ.ವಿ.ಜಿ. ರೋಡ್ ಕಡೇ ಹೊರಳಿದರೆ ಅಲ್ಲಿ ಇನ್ನೊಂದು ರುಚ್ ರುಚಿಯಾದ್ ತಿಂಡಿ ಸಿಗೋ ಉಪಹಾರ ದರ್ಶಿನಿ ಇದೆ. ಇಲ್ಲಿನ ರವಾ ದೋಸೆ ಫೇಮಸ್ಸು.



ಹಳ್ಳಿ ತಿಂಡಿ, ಆಶ್ರಮ ಸರ್ಕಲ್

ಹೆಸರೇ ಹೇಳುವ ಹಾಗೆ ಹಳ್ಳಿ ತಿಂಡಿ- ಪತ್ರೊಡೆ, ಅಕ್ಕಿರೊಟ್ಟಿ, ಹಲಸಿನ ಹಣ್ಣಿನ ಕಡುಬು(ಸೀಸನಲ್ ಮತ್ತೆ!), ಸುಕ್ಕಿನುಂಡೆ, ಹಾಲ್ಬಾಯಿ, ಒಂದಾ ಎರಡಾ... ಇಲ್ಲಿನ ಬನ್ಸ್ ನ ರುಚಿ ಇಡೀ ಬೆಂಗಳೂರಲ್ಲಿ ಎಲ್ಲೂ ಸಿಗದು. ದೊಡ್ಡ ಗಣಪತಿ ದೇವಸ್ಥಾನದ ಸಮೀಪವೇ ಇದೆ ಈ ಹೋಟೆಲು.


ಎಸ್.ಎಲ್.ವಿ. ಆಶ್ರಮ

ಆಶ್ರಮ ಸರ್ಕಲ್ಲಿನಲಿರುವ ಈ ಹೋಟೇಲಿನ ಇಡ್ಲಿವಡೆ ಸಾಂಬಾರು ಸಖತ್! ಕಾಪೀನೂ ಅಷ್ಟೆ.

ಕೂಲ್ ಕಾರ್ನರ್- ಜೈನ್ ಕಾಲೇಜ್ ಹತ್ರ.

ಇಲ್ಲಿನ ಅಕ್ಕಿರೊಟ್ಟಿ ಸೂಪರ್ ಟೇಸ್ಟ್. ಜ್ಯೂಸ್ ಗಳೂ ಚೆನ್ನಾಗಿರುತ್ತವೆ. .


ಇವುಗಳನ್ನು ಬಿಟ್ಟರೆ ಚಾಮರಾಜಪೇಟೆಯ ಬ್ರಾಹ್ಮಿನ್ಸ್ ಕೆಫೆ, ಎನ್.ಆರ್ ಕಾಲನಿಯ ಐಯರ್ಸ್ ಮೆಸ್ಸು, ಮನೆಊಟ, ವಿ.ವಿ ಪುರಂ ನ ಫುಡ್ ಸ್ಟ್ರೀಟು... ಆಹಾರಪ್ರಿಯರಿಗೆ ಇನ್ನೊಂದಿಷ್ಟು ಉತ್ತಮ ಜಾಗಗಳು.

ಎಲ್ಲರಿಗೂ ಶುಭವಾಗಲಿ:)




ನಾರ್ತ್ ಬೆಂಗಳೂರಿನ ಬೆಸ್ಟ್ ಹೋಟೇಲುಗಳು