ಬುಧವಾರ, ಜೂನ್ 25, 2008

ಕಡಲು ಜಗದ ದೊಡ್ಡ ಪ್ರೇಮಿ....

ಕಡಲು ಜಗದ ದೊಡ್ಡ ಪ್ರೇಮಿ ನಿತ್ಯ ಮಿಲನ ಅದಕೆ,
ನದಿಗಳುಂಟು ಲಕ್ಷ ಲಕ್ಷ , ತೀರದದರ ಬಯಕೆ

ಕೆಲ ನದಿಗಳು ಉಗ್ರ,ಘೋರ ವೇಗಾವೇಗ ಅವಕೆ
ಮಣಿಸುವುದು ಕಡಲ ತೆಕ್ಕೆ, ಸೆಳೆದು ತನ್ನೊಳಕೆ.

ಇನ್ನು ಕೆಲವು ಮಂದ-ಶಾಂತ, ಒಯ್ಯಾರ, ಒನಪು
ಕಡಲಿಗಿಲ್ಲ ಭೇದಭಾವ, ಅದೇ ಮುದ್ದು- ಬಿಸುಪು.

ದೂರದಾರಿ ಸಾಗಿ ಬಂದ ನದಿಗಲೆಗಳ ಸ್ವಾಗತ,
ಮೆಲ್ಲನೊಳಗೆ ಎಳೆಯುವವು,ಮೃದುಚುಂಬನವೀಯುತ.

ದಿನವು ಕೂಡ ಸಮುದ್ರ ಹೊಸದು, ಹೊಸ ಹರಿವಿನ ಸೇರಿಕೆ
ಮತ್ತೆ ಮತ್ತೆ ಒತ್ತಿಬಹುದು, ಪ್ರೇಮ ಜಲದ ಕಾಣಿಕೆ.

ಕಡಲು ಬರಿಯ ಪ್ರೇಮಿಯಲ್ಲ, ಶಕ್ತಿವಂತ ಚೇತನ
ಗಮ್ಯವಿರದೆ ಸಾಗೋ ಬಾಳ ಧನ್ಯ ಮಾಡೋ ಮೋಹನ

ಅಂತ್ಯವೆಂದು ತಿಳಿದು ಬರುವ ನೀರ್ಝರಿಗಳು ಸಾಸಿರ
ಕಡಲಿನೊಡಲ ಸೇರಿ ಹಿಗ್ಗಿ, ವಿಶಾಲ ಹರವ ಸಾಗರ!

ಗುರುವಾರ, ಜೂನ್ 19, 2008

ಮಹಡಿ ಮೇಲಿಂದ..

ಕಿಟಕಿಯಾಚೆಗೆ ಮೇಲೆ ಕಟ್ಟಿಹುದು ಮಳೆಮೋಡ,
ನೀರ ಗರ್ಭವ ಹೊತ್ತು ತೂಗುತಿದೆ ಮುಗಿಲು
ಬಣ್ಣ ಗಾಜಿನ ಹೊರಗೆ, ಆಗಸಕು ಬಣ್ಣವಿದೆ
ಸಂಜೆಗಿರಣಗಳೆಲ್ಲ ಬಾನೊಳಗೆ ಸೆರೆಯು.

ಕೆಳಗೆ ರಸ್ತೆಯ ಮೇಲೆ, ಚಕ್ರವೇಗವು ಜೋರು
ಮನೆಗೆ ಸೇರುವ ತವಕ ಸಹಜ ತಾನೆ,
ಹಲವು ಬಣ್ಣದ ಬಾನು, ದಟ್ಟ ಕಪ್ಪಾಗುತಿದೆ
ಭುವಿಯೆಡೆಗೆ ಹೊರಟಿಹುದು, ಮಳೆಯ ಮೇನೆ.

ಇನ್ನು ಹಲವರಿಗಿಲ್ಲಿ, ನೆನೆದು ನಡೆಯುವ ಬಯಕೆ
ಮುಂಗಾರ ತೇರೊಳಗೆ ಕೊಳೆಯ ಕಳೆವಾಸೆ.
ಚಿತ್ರಚಿತ್ತಾರದಾ ಮಿಂಚುಗಳು ಮೂಡುತಿರೆ
ಆಗಸಕು ಆಗುತಿದೆ, ಪ್ರಸವದಭಿಲಾಷೆ!

ಸೈಕಲಿನ ಹುಡುಗ, ಕಡಲೆ ಮಾರುವ ಮುದುಕ
ಹೂ ಹುಡುಗಿ- ಎಲ್ಲರೂ ನಿಂತಿಹರು ಮರದ ಕೆಳಗೆ
ಒದ್ದೆಯಾದೇವೆಂಬ ಚಿಂತೆಯಿದ್ದಂತಿಲ್ಲ
ಮಳೆಯ ಪ್ರತಿಫಲನವಿದೆ, ಕಣ್ಣಪಾಪೆಗಳೊಳಗೆ.

ನಾನು ಹೊರಟಿದ್ದೇನೆ, ಅಲ್ಲಿ- ರಸ್ತೆಯ ಕಡೆಗೆ
ತೋಯ್ದು ಬಿಡಲೆನ್ನನು, ಮಳೆಯು ಕುಂಭದ್ರೋಣ.
ಒಳಗಿರುವರೆಲ್ಲ ಅಲ್ಲೆ ಇರಿ, ಬರಿದೆ ಕನಸುತ್ತ,
ಇಷ್ಟವಿದ್ದರೆ ಬನ್ನಿ- ಜೊತೆಗೆ ನೆನೆಯೋಣ!

ಸೋಮವಾರ, ಜೂನ್ 16, 2008

ಬಸ್ಸು ಕಥೆಗಳು.

ಅವಳನ್ನು ಅರ್ಜೆಂಟಾಗಿ ಮುಂಬೈಗೆ ಕಳುಹಿಸಬೇಕಿತ್ತು ಅವಳಪ್ಪನಿಗೆ. ಮಂಗಳೂರಿಂದ ವಿಮಾನ ಹೊರಡುತ್ತಿರಲ್ಲಿಲ್ಲ. ಕೆಟ್ಟ ಹವೆ. ರೈಲಲ್ಲಿ ಸೀಟಿಲ್ಲ. ಬೊಂಬಾಯಿ ಬಸ್ಸೊಂದರಲ್ಲಿ ಕಾಡಿ, ಬೇಡೀ ಕ್ಯಾಬಿನ್ ಸೀಟು ಹೊಂದಿಸಿಯಾಯಿತು. ಬಸ್ಸು ಒಂದು ರಾತ್ರಿ, ಅರ್ಧ ಹಗಲು ಕಳೆದು ಮುಂಬೈ ಮುಟ್ಟುವ ಹೊತ್ತಿಗೆ, ಬಸ್ಸಿನ ಡ್ರೈವರು ಮತ್ತು ಅವಳಲ್ಲಿ ಪ್ರೀತಿ ಹುಟ್ಟಿತ್ತು. ಅವನೀಗ, ಅವಳಪ್ಪ ಕೊಟ್ಟ ವರದಕ್ಷಿಣೆಯಿಂದ ನಾಲ್ಕಾರು ಬಸ್ಸುಗಳ ಮಾಲಿಕ. ಮಹಲು ಮನೆಯ ಒಡೆಯ.

**********

ಅಮ್ಮ , ಮಗ ಬಸ್ಸಲ್ಲಿ ದೂರದೂರಿಗೆ ಹೊರಟಿದ್ದರು. ಮಧ್ಯರಾತ್ರಿ ದಾರಿ ಬದಿ ಬಸ್ಸು ನಿಂತಿತು. ಕತ್ತಲ ಮರೆಗೆ ಗಂಡಸರು ತೆರಳಿದರು. ಹೆಂಗಸರು ಮತ್ತೂ ಕತ್ತಲನ್ನು ಹುಡುಕಿ ಸ್ವಲ್ಪ ಒಳ ಹೋದರು. ಮಗ ಬಂದ, ಬಸ್ಸು ಹೊರಡಲಾದರೂ ಅಮ್ಮ ಬರಲಿಲ್ಲ. ಕರೆದರೂ ಇಲ್ಲ. ಬ್ಯಾಟರಿ ಬೆಳಕಲ್ಲಿ ಹೊರಟರೆ, ಗದ್ದೆ ಪಕ್ಕದ ತೆರೆದ ಬಾವಿಯೊಳಗೆ ಅಮ್ಮ ತೇಲುತ್ತಿದ್ದಳು. ಕತ್ತಲೆ, ಕಾಲ ಬುಡ ಕಾಣುತ್ತಿರಲಿಲ್ಲ.

**********

ರಾತ್ರೆ ಎರಡು ಗಂಟೆ, ಯಾರೋ ದೇಹಭಾದೆ ಅತಿಯಾದವರು ಬಸ್ಸು ನಿಲ್ಲಿಸು ಅಂದರು, ಡ್ರೈವರ್ ಬಳಿ. ಆತನಿಗೂ ಬ್ರೇಕ್ ಬೇಕಿತ್ತು. ನಿಲ್ಲಿಸಿದ. ಇನ್ನೊಂದಿಷ್ಟು ಜನ ಕೆಳಗಿಳಿದರು. ಎಲ್ಲರೂ ಬಂದರೂ ಡ್ರೈವರು ಇಲ್ಲ. ಹುಡುಕುತ್ತಿದ್ದಂತೆ ಕತ್ತಲ ಮರೆಯಿಂದ ಹೊರಬಂದ ಆತ. ಮೈತುಂಬ ಸಗಣಿ, ಮಣ್ಣು. ಆತನಿಗೆ ಹುಚ್ಚು ಹಿಡಿದಿತ್ತು. ಡ್ರೈವಿಂಗು ಗೊತ್ತಿರುವ ಬೇರೆ ಯಾರೋ, ಬಸ್ಸನ್ನ ಮೆಜೆಸ್ಟಿಕ್ ಗೆ ಓಡಿಸಿಕೊಂಡು ಬಂದರು, ಹುಚ್ಚು ಹಿಡಿದ ಡ್ರೈವರ್ ಸಮೇತ.

**********

ಇವಿಷ್ಟೂ ನಡೆದ ಘಟನೆಗಳು.

ಮಂಗಳವಾರ, ಜೂನ್ 10, 2008

ಜಂಗಮ ಬಿಂಬಗಳು -೪.

ನಾನು ಮತ್ತು ನನ್ನ ಸ್ನೇಹಿತ ಟಾಕೀಸಲ್ಲಿ ಸಿನಿಮಾ ನೋಡುತ್ತ ಕುಳಿತಿದ್ದೆವು. ಪಕ್ಕದಲ್ಲಿ ಒಬ್ಬ ತೀರಾ ಸಾಧಾರಣ ಹುಡುಗ, ಮತ್ತು ಅತ್ಯದ್ಭುತ ಚೆಲುವಿನ ಹುಡುಗಿ- ಹರಟುತ್ತ ಕುಳಿತಿದ್ದರು. ಅಯ್ಯೋ ಅವನ ನಸೀಬೇ ಏನ್ ಒಳ್ಳೆ ಹುಡ್ಗಿ ಸಿಕ್ಕಿದಾಳಪ್ಪ, ಕೆಲ ಹುಡುಗರ ಪುಣ್ಯವೇ ಹೀಗೆ- ಅವರು ನೋಡೋಕೆ ಕೆಟ್ಟದಾಗಿದ್ದರೂ ಒಳ್ಳೇ ಹುಡುಗೀರು ಸಿಕ್ಕಿ ಬಿಡ್ತಾರೆ, ಅಂತೆಲ್ಲ ಹಲುಬಿದ್ದಾಯ್ತು. ಇಂಟರ್ವಲ್ ಬಂತು. ಆ ಹುಡುಗ ಎದ್ದು, ತನ್ನ ಪಕ್ಕದಲ್ಲಿದ ಆಕೆಯನ್ನು ಮೆಲ್ಲನೆಬ್ಬಿಸಿಕೊಂಡು, ತನ್ನ ತೋಳನ್ನೇ ಅವಳಿಗಾಸರೆಯಾಗಿಸಿ ನಡೆಸಿಕೊಂಡು ಹೊರಟ. ಅವಳಿಗೆ ಪೋಲಿಯೋ ಆಗಿತ್ತು.