ಮಂಗಳವಾರ, ಅಕ್ಟೋಬರ್ 31, 2006

ನ ಮ ನ!
ಗೆಳತಿಯೊಬ್ಬಳು ಕಳಿಸಿದ ಸಂದೇಶದಲ್ಲಿ ಈ ಸುಂದರ ಚಿತ್ರ ಇತ್ತು. .
ಚಿತ್ರದಲ್ಲಿರೋ ಸೂರ್ಯ ಹುಟ್ಟುತ್ತಿದ್ದಾನೋ, ಮುಳುಗುತ್ತಿದಾನೋ ಗೊತ್ತಿಲ್ಲ!, ಆದರೆ ಎಲೆ ಮಾತ್ರ ತನ್ನ ಜೀವನದ ಸಂಧ್ಯೆಯಲ್ಲಿದೆ. ಮಲೆನಾಡ ಎಲೆಯೊ, ಮರಳುಗಾಡ ಎಲೆಯೋ, ಯಾವ ಬೆಟ್ಟದ ತುದಿಯ ಮರದ್ದೋ, ಗೊತ್ತಿಲ್ಲ!ಎಷ್ಟು ವಸಂತವಾಗಿದೆಯೋ, ಅದರ ಬಳಿ ಯಾರೂ ಕೇಳಿಲ್ಲ. ಇನ್ನೆಷ್ಟು ದಿನ ಬಾಳೋ, ಅದಕೆ ಚಿಂತೆಯಿದ್ದಂತಿಲ್ಲ.
ಬಹುಸಮಯದಿಂದ ಬಿಸಿಲು, ಮಳೆ, ಗಾಳಿಗಳನ್ನ ತಡೆದುಕೊಂದಿರಬೇಕು. ಜೀವನದಲ್ಲಿ ಬಹು ಕಷ್ಟ ಅನುಭವಿಸಿರಬೇಕು, ಮೈಯೆಲ್ಲ ಹಣ್ಣಾಗಿದೆ, ಜರಡಿಯಾಗಿದೆ. ಆದರೂ, ತನ್ನ ಧೀ ಶಕ್ತಿಯಿಂದ ಇನ್ನೂ ಉಳಿದಿದೆ, ಚಿಗುರುಗಳಿಗೆ ಪಾಠ ಹೇಳುತ್ತಾ!!
ಮತ್ತು,
ನೋವು ಇದ್ದರೂ ಹೇಗೆ ಗೋಡೆಯಾಗಿ, ನೆರಳಾಗಿ ಧೃತಿಗೆಡದೆ ನಿಲ್ಲಬೇಕೆಂಬುದಕ್ಕೆ ಉಪಮೆಯಾಗಿ!

ಸೋಮವಾರ, ಅಕ್ಟೋಬರ್ 30, 2006

ವಾಸ್ತವ

( ಹಿಂದೆ ಬರೆದ ಹೃದಯ ಗೀತ ಕವನವನ್ನ ಓದಿಕೊಂಡು ಇದನ್ನ ಓದಿ)

ಕೇಳೋ ಸಖ ನನ್ನ ಮಾತ,
ನಿಂತೆ ನೋಡು ಇಲ್ಲಿಯೇ,
ಒಮ್ಮೆ ನನ್ನ ನೋಡಿ ನಕ್ಕು
ಮಾತ ಕೇಳಬಾರದೆ?

ತಪ್ಪು ನಿನ್ನದಲ್ಲ ಗೆಳೆಯ
ಮನದ ಮಾತು ಸತ್ಯವು
ನಾನು ನಿನಗೆ ಬಾಳ ಬೆಳಕೆ?!
ಧನ್ಯೆ ನಾನು ನಿತ್ಯವು.

ನನಗು ಕೂಡ ನಿನ್ನ ಹಾಗೆ
ಆಸೆಯುಂಟು ಸಾಸಿರ
ನೀನು ನನ್ನ ಜೊತೆಯಲಿರಲು
ಬಾಳ ಬಂಧ ಸುಂದರ

ಗೆಳೆಯ ನನ್ನ ಕ್ಷಮಿಸಿ ಬಿಡೊ,
ನಿನಗೆ ನಾನು ದೊರಕೆನು.
ನನ್ನ ಪರಿಧಿ ಬಹಳ ಕಿರಿದು
ಹೆತ್ತವರ ನಾ ಮೀರೆನು

ಹೊರಟೆ ನಾನು, ತಿರುಗಿ ಬರೆನು
ಖುಷಿಯಲಿರು ಎಂದಿಗೂ
ನನ್ನ ಹೃದಯ ನಿನ್ನಲಿರಲಿ
ನಿನ್ನ ಬಡಿತ ನನ್ನದು.

ಶುಕ್ರವಾರ, ಅಕ್ಟೋಬರ್ 27, 2006

ಆನೆಗಳ ಲೋಕದಲ್ಲಿ...

ಕಳೆದ ವಾರಾಂತ್ಯ ಕೇರಳ ತಿರುಗಾಟ, ಈ ಬಾರಿಯ ನೆಪ, ಸ್ನೇಹಿತ ಅರುಣ್ ಹುಟ್ಟಿದ ಹಬ್ಬ! ನನಗೆ ಸಂತೋಷ ಏನು ಅಂದ್ರೆ, ಎಲ್ಲೇ ತಿರುಗೋಕೆ ಹೊರಟರೂ ನೆಪಗಳು ಧಂಡಿಯಾಗಿ ಸಿಗುತ್ತವೆ! ಈ ನೆಪಗಳು ಅಮ್ಮನ ಹತ್ರ ಮಾತ್ರ ನಡೆಯಲ್ಲ, ಅದೇ ಸಮಸ್ಯೆ! ದೀಪಾವಳಿ ಗೆ ಮನೆಗೆ ಹೋಗದೆ ಬೈಸಿಕೊಂಡದ್ದಂತೂ ಆಗಿದೆ, ಅವಳ ಹತ್ರ.
ಇಡೀ ಕೇರಳ ಪ್ರವಾಸದ ಬಗ್ಗೆ ಅಂತೂ ಬರಿಯೋಕೆ ದೇವರಾಣೆ ಸಾಧ್ಯ ಇಲ್ಲ! ನಂಗೆ ತುಂಬಾ ಇಷ್ಟ ಅನ್ನಿಸಿದ ಗುರುವಾಯೂರು ಆನೆಗಳ ಬಗ್ಗೆ ಒಂದಿಷ್ಟು...
ಗುರುವಾಯೂರು ದೇವಸ್ಥಾನದಿಂದ ೩ ಕಿಲೊಮೀಟ್ರು ದೂರದಲ್ಲಿ ಈ "ಆನಕೋಟ" ಅನ್ನೋ ಸ್ಥಳ (ಅನಕೊಂಡ ಅಲ್ಲ ಮತ್ತೆ!). ಇಲ್ಲಿ ೬೪ ಆನೆ ಸಾಕಿದಾರೆ, ದೇವಳದವರು. ಭಕ್ತಾದಿಗಳು ದೇವಾಸ್ಥಾನಕ್ಕೆ ಕೊಟ್ಟಿರೋ ಆನೆಗಳನ್ನ ಇಲ್ಲಿ ನೋಡ್ಕೊತಾರೆ. ನಮ್ಮೂರ ಕೆಲವು ಬಡಪಾಯಿ ದೇವಸ್ಥಾನಗಳಿಗೆ ವರ್ಷಕ್ಕೆ ೨ ಕ್ವಿಂಟಾಲು ಅಕ್ಕಿ ದೇಣಿಗೆ ಬಂದರೇ ಹೆಚ್ಚು! ಇಲ್ಲಿ ನೋಡಿದರೆ ಆನೆಗೆ ಆನೆನೇ ಕೊಡ್ತಾರಲ್ಲ ಅಂತ ಆಶ್ಚ್ರರ್ಯ! ವರ್ಷಕ್ಕೆ ೩ ಕೋಟಿ ರುಪಾಯಿ ಖರ್ಚು ಮಾಡ್ತಾರಂತೆ, "maintanence"ಗೆ!
ನಾವು ಇಲ್ಲಿಗೆ ಹೋದ ದಿನ ಆನೆಗಳ ಸ್ನಾನದ ಪಾಳಿ!ಒಂದಿಷ್ಟು ಆನೆಗಳಿಗೆ ಅಭ್ಯಂಜನ ಆಗ್ತಾ ಇತ್ತು.. ಹರುಕು ಮುರುಕು ಮಲಯಾಳಮ್ ನಲ್ಲಿ ಆನೆಗಳಿಗೆ ಎಷ್ಟು ದಿನಕ್ಕೊಂಮ್ಮೆ ಸ್ನಾನ ಮಾಡಿಸ್ತೀರಿ ಅಂತ ಒಬ್ಬ ಮಾವುತನನ್ನ ಕೇಳಿದರೆ, "every day, every day" ಅಂದನಪ್ಪ! ದಿನಾ ಅವುಗಳ ಮೈನೆಲ್ಲ ತಿಕ್ಕಿ ತಿಕ್ಕಿ ಸ್ನಾನ ಮಾಡ್ಸಿದ್ದೆ ಹೌದಾದ್ರೆ!, ತಿಂಗಳೊಳಗಾಗಿ ಎಲ್ಲರೂ ಕೆಲ್ಸ ಬಿಟ್ಟು ಹೋದಾರೇನೊ! ಆ ಮಾವುತ ತಮ್ಮ, "reputation" ಉಳ್ಸಿಕೊಳ್ಳೋಕೆ ಹಾಗೆ ಹೇಳಿರಬೇಕು ಅನ್ನೋದು ನನ್ನ ಊಹೆ!
ಆನೆಗಳು ಮಾತ್ರ ಎನ್ ಚಂದ ಸ್ನಾನ ಮಾಡಿಸಿಕೋತಿದ್ದವು ಅಂದ್ರೆ! ಆಹ್! ನನಗೆ ಸಣ್ಣ ಮಕ್ಕಳನ್ನ ಮಲಗಿಸಿಕೊಂಡು ಅಮ್ಮಂದಿರು ನೀರು ಹೊಯ್ಯೋದೇ ನೆನಪಾಯಿತು! ನಾವೆಲ್ಲ ಸುಮಾರು ಹೊತ್ತು ನಿಂತು ಅದನ್ನೇ ನೋಡ್ತಾ ಇದ್ವಿ. ಒಂದು ಆನೇನ ಅಡ್ಡ ಮಲಗಿಸ್ಕೊಂಡು ಅದರ ಮೇಲೊಬ್ಬ ಕೂತು ಗಸ ಬಸ ಗಸ ಬಸ ಅಂತ ತೆಂಗಿನ ನಾರಲ್ಲಿ ಮೈನ ತಿಕ್ತಾ ಇದ್ದ, ಮಗದೊಬ್ಬ ಬೆಣಚುಕಲ್ಲಲ್ಲಿ ತಿಕ್ಕೋನು! ಆ ಆನೆ ಆರಾಮಾಗಿ ಮಲಕ್ಕೊಂಡು ಸ್ನಾನ ಮಾಡಿಸ್ಕೋತಾ ಇತ್ತು! ಒಂದು ಬದಿನ ತಿಕ್ಕಿತಿಕ್ಕಿ ತೊಳದಾದ ಮೇಲೆ, ಒಬ್ಬ ಮಾವುತ ಏನೋ ಸಂಜ್ಞೆ ಮಾಡಿದನಪ್ಪಾ! ತಕೋ! ಆ ಆನೆ ಧಡಕ್ಕಂತ ಎದ್ದು, ಮತ್ತೊಂದು ಕಡೆ ಹೊರಳಿ ಮಲಗಿ ಬಿಡಬೇಕೆ! ಎಷ್ಟ್ ಚಂದ!
ಸರಿಯಾಗಿ ಸ್ನಾನ ಮಾಡಿಸ್ಕೊಂಡು ಮೇಲೆ ಬಂದಾದ ಮೇಲೆ, ಆನೆಗಳಿಗೆ ಮತ್ತೊಮ್ಮೆ ಶುಧ್ಧ ನೀರಿಂದ "ಶವರ್ ಬಾತು"! ಆದ್ರೆ ಈ ಸಲ ಮಾತ್ರ, ಅವೇ ನೀರು ಹಾಕ್ಕೋ ಬೇಕು! ಆಮೇಲೆ ಮೃಷ್ಟಾನ್ನ ಭೋಜನ - ಅನ್ನದ ಉಂಡೆ, ಎಲೆ ಸೊಪ್ಪು ಸದೆ ಇತ್ಯಾದಿ.. ಮತ್ತೆ, ತನ್ನ ಮರದ ಬುಡಕ್ಕೆ! ಎಂದಿನ ಬಂಧನದೊಳಗೆ!
ಅಲ್ಲಿಂದ ಹೊರಡೋವಾಗ ತುಡಿತ ತಡೆಯಲಾರದೆ ಎಲ್ಲ ಸೇರಿ ಒಂದು ಆನೆಗೆ ಸ್ವಲ್ಪ ಸ್ನಾನ ಮಾಡ್ಸೇ ಬಂದ್ವಿ!, ಮಾವುತನಿಗೆ ೫೦ ರೂಪಾಯಿ ಕೊಟ್ಟು!

ಗುರುವಾರ, ಅಕ್ಟೋಬರ್ 19, 2006

ಭಾವ-೭

ರೈಲ್ವೇ ಕ್ರಾಸಿಂಗಿನಲ್ಲಿ ಅಮ್ಮನ ಕಂಕುಳಲ್ಲಿ ಕೂತಿದ್ದ ಆ ಬೊಚ್ಚು ಬಾಯಿಯ ಮಗು, ದೊಡ್ಡದಾಗಿ ತೆರದ ಕಣ್ಣುಗಳ ಜೊತೆಗೆ ತನ್ನೆರಡೂ ಕೈಗಳನ್ನ ವಿಸ್ತರಿಸಿ ರೈಲಿನ ಅಗಾಧತೆಯನ್ನ ಅಮ್ಮನಿಗೇ ತಿಳಿಸಲು ಹವಣಿಸುತ್ತಿತ್ತು! ಬದುಕು ಸುಂದರವಾಗಿದೆ, ಅಲ್ಲವೆ?!

ಬುಧವಾರ, ಅಕ್ಟೋಬರ್ 18, 2006

ದೀಪಾವಳಿಗೊಂದು ಪುಟ್ಟ ಕವನ...

ಕಾರ್ತಿಕನು ಬರುತಿಹನು,
ಮಾಸಗಳ ಮನೆಯೊಳಗೆ
ಬೆಳಕ ಬುಟ್ಟಿಯ ಹೊತ್ತು , ನೋಡಿರಲ್ಲಿ

ಕತ್ತಲನು ಓಡಿಸುವ,
ದೀವಿಗೆಯೂ ಜೊತೆಯಿಹುದು
ಜ್ನಾನ ದೀಪವನೆಲ್ಲ ಹಚ್ಚ ಬನ್ನಿ

ದಾರಿ ಬಿಡಿ ಆತನಿಗೆ,
ಮನದ ಕದವನು ತೆರೆದು
ಹರುಷದಾ ಮೊಗದಲ್ಲಿ ಒಳಗೆ ಕರೆತನ್ನಿ..

ಮಂಗಳವಾರ, ಅಕ್ಟೋಬರ್ 17, 2006

ಪಶ್ಚಿಮ ವಾಹಿನಿಯ ಚಿತ್ರಗಳು...

ಮೊನ್ನೆ ಮೊನ್ನೆ ಶ್ರೀರಂಗ ಪಟ್ಟಣ ದ ಕಡೆ ಹೋಗಿದ್ದೆ, ಧಾರ್ಮಿಕ ಕಾರ್ಯಕ್ರಮವಿತ್ತು.. ( ಅದೊಂದು ನೆಪ ಅಷ್ಟೆ!) ತಿರುಗೋದು ಅಂದರೆ ಇಷ್ಟ ನನಗೆ, ಮೊದಲೇ ಹೇಳಿದಂತೆ.. ಮಿತ್ರ ವ್ಯಾಸ ಬಾ ಅಂದಾಗ ಹೋಗದೆ ಇರಲಾಗಲಿಲ್ಲ.
ಪಶ್ಚಿಮ ವಾಹಿನಿ , ಶ್ರೀರಂಗ ಪಟ್ಟಣದ ಸಮೀಪವಿರುವ ಪುಟ್ಟ ಹಳ್ಳಿ.ಬೆಂಗಳೂರು- ಮೈಸೂರು ಹೆದ್ದಾರಿಗೆ ತಾಗಿಕೊಂಡೇ ಇದೆ... ಶಂಕರ ನಾಗ್ ಪ್ರಾಯಶ: ಈ ಊರು ನೋಡಿದ್ದಿದ್ದರೆ, ಮಾಲ್ಗುಡಿ ಡೇಸ್ ಇಲ್ಲೇ ಚಿತ್ರಿತವಾಗುತ್ತಿತ್ತೇನೋ! ಒಂದು ಸುಂದರ ಪುಟ್ಟ ಊರು ಇದು. ನಾನು ಯಾವುದೇ ಸ್ಥಳಕ್ಕೆ ಹೋದರೂ, ವಾಪಾಸು ಬರುವಾಗ ನನ್ನ ಜೊತೆ ಒಂದಿಷ್ಟು ನೆನಪಿನ ಚಿತ್ರಗಳನ್ನ ತಂದಿರುತ್ತೇನೆ. ಈ ಬಾರಿಯ ನೆನಪಿನ ಭಿತ್ತಿಯೊಳಗೆ ಚಿತ್ರಿಸಿಕೊಂಡ ಕೆಲವು ಚಿತ್ರಗಳು..
ದಿಕ್ಕು ತಪ್ಪಿ ತಣ್ಣಗೆ ಹರಿಯುವ ಕಾವೇರಿ ನದಿ,{ ಇಲ್ಲಿ ಕಾವೇರಿ ನದಿ ಪಶ್ಚಿಮಕ್ಕೆ ಹರಿಯುತ್ತದೆ.} ನದಿಯ ದಂಡೆಯ ಮೇಲಿನ ಹಳೆಯ ಛತ್ರಗಳು.. ಅನತಿ ದೂರದಲ್ಲೆ ಇರುವ ಶ್ರೀರಂಗಪಟ್ಟಣದ ರೈಲ್ವೇ ಸ್ಟೇಷನ್ನು, ಬ್ರಿಟೀಷರ ಕಾಲದ ಹಳೆಯ ಸೇತುವೆ,..
ನದೀ ಮಧ್ಯದ ಮಂಟಪ, ಕಾವೇರಿ ನದಿಯೊಳಗೆ ನಿಂತು ತನ್ನ ಅಗಲಿದ ಹಿರಿಯರಿಗೆ ತರ್ಪಣ ನೀಡುತ್ತಿರುವ ಯುವಕ, ಬೆಳಗಿನ ಕೊರೆಯುವ ಚಳಿಗೆ , ನೀರೊಳಗೆ ಮುಳುಗಲು ಅಂಜುತ್ತಿರುವ ಮಹಿಳೆ.. ಸೇತುವೆಯ ಮೇಲೆ ಕೊರಳ ಘಂಟೆಯನ್ನ ಅಲುಗಿಸುತ್ತ, ನಿಧಾನಕ್ಕೆ ಸಾಗುತ್ತಿದ್ದ ಎತ್ತುಗಳು...
ಅರಳೀ ಕಟ್ಟೆಯ ನೆರಳಲ್ಲಿ ಮೊಸರನ್ನ ತಿನ್ನುತ್ತಿದ್ದ ಹುಡುಗ.. ರಂಗನ ತಿಟ್ಟಿಗೆ ಹೋಗೊ ದಾರಿಯಲ್ಲಿ ಕಬ್ಬು ತಿನ್ನಲು ಕೊಟ್ಟ ಅನಾಮಧೇಯ ಕೃಷಿಕ, ಗೋಪುರವೊಂದರ ಕಿಂಡಿಯೊಳಗಿಂದ ತಲೆ ಹೊರಹಾಕಿ ನೋಡುತಿದ್ದ ಹೆಂಗಸು.. ಟಿಪ್ಪುವಿನ ಕೋಟೆಯ ಪಾಳು ಗೋಡೆಯ ಮೇಲೆ ನಿಂತು ಆಗಸ ದಿಟ್ಟಿಸುತ್ತಿದ್ದ ಅಸ್ಟಷ್ಟ ಮುಖ..
ಇವು ಈ ಬಾರಿಯ ಕೆಲವು ಚಿತ್ರಗಳು, ಎಂದಿಗೂ ಮರೆಯದ್ದು.

ಸೋಮವಾರ, ಅಕ್ಟೋಬರ್ 16, 2006

ಭಾವ -೬

ಇಲ್ಲೊಂದು ಪುಟ್ಟ ಮಗು, ಹಂಚಿನ ಸಂದಿಯಿಂದ ತೂರಿ ಬರುತ್ತಿರುವ ಬಿಸಿಲಕೋಲನ್ನ ಹಿಡಿಯಲು ಯತ್ನಿಸುತ್ತಾ , ಕಿಲ ಕಿಲನೆ ನಗುತ್ತಿದೆ. ಬದುಕು ಸುಂದರ ವಾಗಿದೆ, ಅಲ್ಲವೆ?!

ತಂಗಿ ಶ್ರೀಕಲಾ ಮುಂದುವರೆಸಿದ್ದು:
ನಿನ್ನೆ ಆ ನಿನ್ನ ಪುಟ್ಟ ಮಗುವಿಗೆ ಸಿಗದೆ ತಪ್ಪಿಸಿಕೊಂಡ ಆ ಬಿಸಿಲಕೋಲು, ಇಂದಿಲ್ಲಿ ಬಂಗಾರದ ಬಣ್ಣಕ್ಕೆ ತಿರುಗುತ್ತಿರುವ ಭತ್ತದ ತೆನೆಗೆ, ಮತ್ತಷ್ಟು ರಂಗು ನೀಡುತ್ತಿದೆ.

ಹಾರಯಿಕೆ.

ಕಪ್ಪೆ ಚಿಪ್ಪಾಗು ಹುಡುಗಿ ನೀ..
ಅಡಗು ಅದರೊಳಗೆ..
ತಡೆಯುವುದಿಲ್ಲ ನಾನು.
ನಿನ್ನಿಷ್ಟ, ನಿನ್ನದೇ ಬದುಕು!
ನನ್ನದೊಂದು ಪುಟ್ಟ
ವಿನಂತಿಯಿದೆ
ಅಷ್ಟೆ..
ಚಿಪ್ಪಾಗಲು ಹೊರಡುವ ಮುನ್ನ,
ಜೊತೆಯಲಿ ಸೇರಿಸಿಕೋ
ಸ್ವಾತಿಯ ಮಳೆ ಹನಿಯೊಂದ...
ಸಮಯ ಕಳೆದು,
ಚಿಪ್ಪು
ಬಿರಿವಾಗ
ಮುತ್ತಿರಬಹುದು
ಅಲ್ಲಿ!

ಸೋಮವಾರ, ಅಕ್ಟೋಬರ್ 09, 2006

ಪುರಾಣದೊಳಗೊಂದು ಇಣುಕು-೧.

ಭಾರತೀಯ ಸಂಸ್ಕೃತಿ, ಸನಾತನವಾದುದು. ಇಲ್ಲಿನ ಧರ್ಮ ಒಬ್ಬ ವ್ಯಕ್ತಿಯ-ಒಂದು ವ್ಯವಸ್ಥೆಯ ಕಟ್ಟುಪಾಡಿಗೊಳಪಟ್ಟು ನಿರ್ಮಾಣವಾದುದಲ್ಲ. ಬದಲಿಗೆ, ಸಮಯದ - ಸಮಾಜದ ಜೊತೆಗೇ ಬೆಳೆದು, ಪಕ್ವಗೊಂಡ ಜೀವನ ಪದ್ದತಿ. ವೇದೋಪನಿಷತ್ತುಗಳು, ಹಲವು ಪುರಾಣಗಳು ಜನರ ನಿತ್ಯದ ಬದುಕಿನ ಜೊತೆ ಬೆರೆತು, ಮನೆಯ ಹಿರಿಯನಂತೆ ಕೈ ಹಿಡಿದು ನಡೆಸುತ್ತಾ ಬಂದಿದ್ದವು, ಬಹು ಕಾಲದವರೆಗೆ.

ಕಾಲಕ್ರಮೇಣ ಜೀವನ ಶೈಲಿ ಬದಲಾಯಿತು,ನಡೆ ನುಡಿಗಳಲ್ಲಿ ಹೊಸತನ ಬಂತು. ಮನೆಯ ಹಿರಿಯರು ಮರೆಯಾದರು. ಕಿರಿಯರು ಸಾಗುವ ದಾರಿ ತಪ್ಪಿತು. ಪುರಾಣ ಗ್ರಂಥಗಳು ಕೇವಲ ರಂಜನೆಯ ಮಾಧ್ಯಮಗಳಾಗಿ ಉಳಿದು ಹೋದವು. ಸಾಹಿತ್ಯಾಸಕ್ತರು, ವಿಮರ್ಶಕರು ಮಹಾಕಾವ್ಯಗಳನ್ನ ಆಧ್ಯಾತ್ಮ- ನೀತಿ ಧರ್ಮಗಳ ನೆಲೆಯಲ್ಲಿಯೆ ವಿಶ್ಲೇಷಿಸುತ್ತಾ, ಅವುಗಳ ಪ್ರಸ್ತುತ ಉಪಯುಕ್ತತೆಯ ಕುರಿತು ಬೆಳಕು ಹರಿಸುವುದನ್ನ ಕಡಿಮೆ ಮಾಡಿದರು.

ಒಮ್ಮೆ ನಮ್ಮ ಮಹಾ ಗ್ರಂಥಗಳಾದ ರಾಮಾಯಣ ಮಹಾಭಾರತಗಳನ್ನ ಇಂದಿನ ಸಾಮಾಜಿಕ ನೆಲೆಗಟ್ಟಿನ ಹಿನ್ನೆಲೆಯನ್ನ ಗಮನದಲ್ಲಿಟ್ಟುಕೊಂಡು ಓದಿ ನೋಡಿ, ಇಂದಿನ ಹಲವು ಸಮಸ್ಯೆಗಳಿಗೆ ಅತಿ ಸರಳ ಪರಿಹಾರೋಪಾಯಗಳು ಅಲ್ಲಿವೆ. ಇಂದಿನ ಕಣ್ಣುಗಳಿಂದ ಪುರಾಣಗಳೊಳಗೆ ಇಣುಕೋಣ, ಒಂದು ಹೊಸ ವಿಸ್ತಾರ ನಮ್ಮೆದುರು ಕಾಣುತ್ತದೆ.

ಈ ಜಗತ್ತನ್ನೊಮ್ಮೆ ನೋಡಿ, ಹೇಗೆ ಭಯೊತ್ಪಾದನೆಯ ಮಾರಣಾಂತಿಕ ಸುಳಿಯೊಳಗೆ ಮುಳುಗುತ್ತಿದೆ! ಎಷ್ಟೇ ವೈಜ್ನಾನಿಕ ಪ್ರಗತಿ, ವ್ಯಾಪಾರ ವಾಣಿಜ್ಯೋದ್ಯಮಗಳ ಬೆಳವಣಿಗೆ, ಕಂಪ್ಯೂಟರುಗಳ - ಸುಖ ಸಾಧನಗಳ ಅಭಿವೃದ್ಧಿ, ಏನೇ ಇರಲಿ, ಎಲ್ಲವೂ "ಬೇಲಿಯೇ ಇಲ್ಲದ ಹೊಲ" ದಂತಾಗಿದೆ! ಮತಾಂಧ ರಾಜಕೀಯತೆ, ದೇಶ ದೇಶಗಳನ್ನೆ ಕಬಳಿಸುವ ವಾಣಿಜ್ಯ ಜಾಲಗಳು ಎಲ್ಲೆಡೆ ಹಬ್ಬುತ್ತಿವೆ.

ರಾಮಾಯಣದ ಕಾಲದಲ್ಲಿ ರಾವಣನಿದ್ದ, ಈ ಆಧುನಿಕ ಜಗತ್ತಿನ ರಾವಣ ಒಸಮಾ ಬಿನ್ ಲಾಡೆನ್ ನೆ ಅಲ್ಲವೆ?! ರಾವಣನು ಯಾವ ವಿಧಿ ವಿಧಾನಗಳಂತೆ ಅಭಿಷಿಕ್ತನಾದ ದೊರೆಯೊ, ಜನ ಪ್ರೀತಿ ಗಳಿಸಿದ ನಾಯಕನೋ ಅಥವಾ ಯಾವುದೊಂದು ಪ್ರಜಾಹಿತಕ್ಕೆ ಬದ್ಧನಾದ ಹೊಣೆಗಾರ ಆಡಳಿತಗಾರನೋ ಆಗಿರಲಿಲ್ಲ! ಇಂದಿನ ಪುಂಡ, ದರೋಡೆಕೋರರ, ಭಯೋತ್ಪಾದಕರ ಜಾಲಗಳ ನಾಯಕರ ಲಕ್ಷಣಗಳೆಲ್ಲ ಅವನಲ್ಲಿ ಇದ್ದವು. ತನ್ನೆಲ್ಲ ಪ್ರತಿಸ್ಪರ್ಧಿಗಳನ್ನ ಮಟ್ಟ ಹಾಕಿ - ಕೊಂದು ನಿರ್ನಾಮ ಮಾಡಿ ತನ್ನ ಜೀವನ ಕ್ರಮಗಳನ್ನ ಜಗತ್ತಿನ ಮೇಲೆ ಹೇರಿ, ಸಾರ್ವಭೌಮನಾಗಿ ಮೆರೆಯುವ 'ಜಿಹಾದಿ' ಮಾದರಿಯ ಯುದ್ಧ ಅವನದಾಗಿತ್ತು.

ಇಂದು 'ಮಾಫಿಯಾ' ಎನ್ನುತ್ತೇವೆ, 'ತಾಲಿಬಾನ್' ಅನ್ನುತ್ತೇವೆ, 'ಎಲ್.ಟಿ.ಟಿ,ಇ ' ಎನ್ನುತ್ತೇವೆ, ಅಂದು ಈ ಯಾವ ಹೆಸರುಗಳು ಇಲ್ಲದೆಯೆ ಇವೆಲ್ಲ ಗುರಿ, ಲಕ್ಷಣಗಳನ್ನು ಹೊಂದಿದ್ದ ಬೃಹತ್ ಸೇನೆ, ಒಂದು ಸಕ್ರಿಯ ಸಫಲ ಜಾಲ ಅವನಲ್ಲಿತ್ತು. ಅದಕ್ಕೆಂದೇ ತರಬೇತಿ ಹೊಂದಿದ ಸಾವಿರಾರು ಸಂಖ್ಯೆಯ ಯುವಕ- ಯುವತಿಯರು ಅವನ ಬಳಿಯಿದ್ದರು.

ರಾವಣ ತನ್ನ ರಾಜ್ಯ ವಿಸ್ತಾರಕ್ಕಾಗಿ ದೇಶ ದೇಶ ತಿರುಗಿ, ಅಕ್ರಮ-ಘೋರ ಯುಧ್ಧ ಮಾಡಿ ಅಸಂಖ್ಯ ನಿರುಪದ್ರವಿಗಳನ್ನ ಋಷಿ ಮುನಿಗಳನ್ನ ಕೊಂದ. ಅವರ ಮೂಳೆಗಳ ರಾಶಿಯ ಮೇಲೆ ತನ್ನ ವಿಜಯ ಪತಾಕೆಯನ್ನ ಹಾರಿಸ ಹೊರಟ! ನಿರುಪದ್ರವಿ ಋಷಿ ಮುನಿಗಳು ಅವನಿಗೆ ಏನು ಅಪಕಾರ ಮಾಡಿದ್ದರು?, ಇಂದಿನ 'ಜಿಹಾದಿ' ಗಳಿಗೆ ಅಮೆರಿಕದ "WTC " ನಲ್ಲಿದ್ದ ಅಮಾಯಕ ಪ್ರಜೆಗಳು ಏನು ಮಾಡಿದ್ದರು?! , ನಿತ್ಯ ಮಾರಣ ಹೋಮಕ್ಕೆ ಬಲಿಯಾಗುತ್ತಿರುವ ಕಾಶ್ಮೀರದ ಬಡಪಾಯಿ ಹಳ್ಳಿಗರ ತಪ್ಪೇನಿದೆ! ಇಲ್ಲಿ ಧರ್ಮಾಂಧತೆಯ ಉಗ್ರವಾದವೇ ಪ್ರಚೋದಕವಾದಂತೆ, ರಾವಣನಿಗೆ, ಅವನ ಪಡೆಗಳಿಗೆ , ಸನಾತನ ಸಂಸ್ಕೃತಿಯ ದ್ವೇಷ ಮತ್ತು ಅದು ತಮ್ಮ ಭೋಗ ಜೀವನದ ಪ್ರಚಾರಕ್ಕೆ ಅಡಚಣೆ , ಅದು ಇರಬಾರದು ಎಂಬ ದೀಕ್ಷೆಯೇ ಕಾರಣವಾಗಿತ್ತು!

ಅಂದು ರಾವಣನ ಕೈಯಲ್ಲಿ ಹತರಾದ ಋಷಿಗಳ ಮೂಳೆರಾಶಿಯನ್ನು ಇತರ ಮುನಿಗಳು ರಾಮನಿಗೆ ತೋರಿಸಿ ಮರುಗುತ್ತಾರೆ.ಒಂದು ಕಟ್ಟಡವುರುಳಿ ಆರೆಂಟು ಸಾವಿರ ಜನ ಸತ್ತದ್ದಕ್ಕೆ, ಕಾಶ್ಮ್ಮೀರ, ವಾರಣಾಸಿ ಮುಂತಾದ ಧಾರ್ಮಿಕ ಸ್ಥಳಗಳಲ್ಲಿನ ಮಾರಣ ಹೋಮಕ್ಕೆ ಜಿಹಾದಿಗಳ ವಿನ: ಜಗತ್ತೇ ಕಣ್ಣೀರು ಸುರಿಸುತ್ತದೆ. ಅಂದು ಅಳುವವರು ಯಾರೂ ಇರಲಿಲ್ಲ, ಒಬ್ಬ ರಾಮ ಅತ್ತ, ಅದು ರಾಕ್ಷಸ ನಿರ್ಮೂಲನೆಗೆ ನಾಂದಿಯಾಯಿತು!

ನಮ್ಮೊಳಗೂ ರಾಮನಿಲ್ಲವೆ?.

ಶನಿವಾರ, ಅಕ್ಟೋಬರ್ 07, 2006

ಭಾವ-೫

ಷೋಕೇಸಿನೊಳಗಿದ್ದ ಮುದ್ದು ಗೊಂಬೆಗಳನ್ನ ಆಸೆಗಣ್ಣುಗಳಿಂದ ನೋಡುತ್ತಿದ್ದ ಹುಡುಗಿಯನ್ನ ಕಂಡ ಅಂಗಡಿಯಾತನಿಗೆ ಏನನ್ನಿಸಿತೋ, ಒಂದು ಪುಟ್ಟ ಬೊಂಬೆಯನ್ನ ಆಕೆಯ ಕೈಲಿಟ್ಟು, ಕೆನ್ನೆ ತಟ್ಟಿ ಕಳುಹಿಸಿದ. ಬದುಕು ಸುಂದರವಾಗಿದೆ, ಅಲ್ಲವೆ?

ಕೊಳಲ ಹುಡುಗ

ಮೋಟುಗಾಲಿನ ಹುಡುಗ,
ಕೊಳಲ ಮಾರುತಲಿದ್ದ,
ಆಲದಾ ಮರದ, ನೆರಳ ಕೆಳಗೆ

ನೀಳದಾರಿಯ ತಿರುವು,
ಉರಿಬಿಸಿಲ ಮಧ್ಯಾಹ್ನ
ಕಾಲಡಿಯ ನೆಲ, ಸುಡುತಿಹುದು

ಮರದಡಿಯ ನೆರಳೊಳಗೆ
ತಂಪಿನಾ ಅನುಭವವು,
ಬಣ್ಣ ಬಣ್ಣದ ಕೊಳಲು, ಸುತ್ತಲೆಲ್ಲ

ಊದತೊಡಗಿದ ಹುಡುಗ
ಕೊಳಲೊಂದ ತೆಗೆದು,
ಪಸರಿಸಿತು ಸುತ್ತೆಲ್ಲ ಮಧುರ ಸ್ವನವು

ಕೊಳಲ ದನಿ ಕೇಳಿತ್ತು
ಇಳಿಸಂಜೆಯಾವರೆಗೂ,
ಎತ್ತ ಹೋದನೋ ಹುಡುಗ,ತಿಳಿಯಲಿಲ್ಲ.

ಮುರುಳಿಯಾ ದನಿಯೊಳಗೆ
ಸಂತಸವು ತುಂಬಿತ್ತು
ಆತನ ಭಾವವ ಅರಿತವರಾರು!

ಹೀಗೇ ಸುಮ್ನೆ!

ಬಾನಂಗಳದಿ ಎಲ್ಲೋ ಮದುವೆಯಿರಬೇಕು, ಅತ್ತರು ಚಿಮುಕಿಸಿದಂತೆ ಹನಿಯುತ್ತಿದೆ ತುಂತುರು ಮಳೆ!

ರಾತ್ರಿ ಕನಸೊಳಗೆ ಮುತ್ತಿನ ಸರ ಕಡಿದು ಬಿತ್ತು, ಆ ಬೆಳಗು ಅವಳು ನನ್ನ ಪ್ರೀತಿಯ ತಿರಸ್ಕರಿಸಿದಳು!